ಮೊನ್ನೆ ಜರ್ಮನಿಯ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹೈಡಲ್‌ಬರ್ಗ್‌ನಲ್ಲಿ ದೆಹಲಿಯ ಐ.ಸಿ.ಸಿ.ಆರ್ ವತಿಯಿಂದ ಮೂರು ದಿವಸ ಪರ‌್ಯಂತ ಅಂತರರಾಷ್ಟ್ರೀಯ ವಿಚಾರಗೋಷ್ಠಿಯೊಂದನ್ನು ಏರ್ಪಡಿಸಲಾಗಿತ್ತು. ಭಾರತ, ಜರ್ಮನಿ ಮತ್ತು ಆಸುಪಾಸಿನ ಐರೋಪ್ಯ ದೇಶಗಳ ವಿದ್ವಾಂಸರು ವಿಜ್ಞಾನ ಮತ್ತು ದರ್ಶನಶಾಸ್ತ್ರಗಳಲ್ಲಿ ಭಾರತ ಮತ್ತು ಜರ್ಮನಿಯ ಕೊಡುಕೊಳೆಯ ಬಗ್ಗೆ ಚಿಂತನ-ಮಂಥನ ನಡೆಸಿದರು.
ಅಲ್ಲಿ ತಜ್ಞರುಗಳು ಚರ್ಚಿಸಿದ ವಿಷಯಗಳು ಆ ಕ್ಷೇತ್ರಗಳ ವಿಶೇಷಜ್ಞರಿಗೆ ಮಾತ್ರ ಮೀಸಲಾಗಿದ್ದವು. ಆದ್ದರಿಂದ ಅವುಗಳ ತಾತ್ಪರ‌್ಯ ನೀಡುವ ಗೋಜಿಗೆ ಹೋಗದೆ ಇಡೀ ಚರ್ಚೆಗಳಲ್ಲಿ ಮುನ್ನೆಲೆಗೆ ಮತ್ತೆ ಮತ್ತೆ ಬರುತ್ತಿದ್ದ ಸಂಸ್ಕೃತಿಗಳ ಅಸಮಾನ ಹಂಚಿಕೆಯ ಬಗ್ಗೆ ಬರೆಯತೊಡಗಿದ್ದೇನೆ.
ಇಂಥ ವಿಚಾರಗೋಷ್ಠಿಗಳಿಗೆ ಸಾಮಾನ್ಯವಾದ ಒಂದು ಅಂಶವೆಂದರೆ ಭಾರತೀಯ ಮತ್ತು ಐರೋಪ್ಯ ವಿದ್ವಾಂಸರ ನಡುವೆ ಸಮಾನ ಚರ್ಚೆ ಆಗುವುದು ಅಪರೂಪ. ಎರಡು ವಿಭಿನ್ನ ಸಂಸ್ಕೃತಿಗಳ ನಡುವೆ ಚರ್ಚೆಯನ್ನೇರ್ಪಡಿಸುವುದು ಇಂಥ ಪ್ರಯತ್ನಗಳ ಉದ್ದಿಶ್ಯ. ಆದರೆ ಹಾಗಾಗುವುದೇ ಇಲ್ಲ. ನಮ್ಮವರೂ ಐರೋಪ್ಯ ಮನಸ್ಸಿನಲ್ಲಿ ನಡೆಯುತ್ತಿರುವ ಒಂದು ಸ್ವಗತದಲ್ಲಿ ಭಾಗವಹಿಸುತ್ತಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ.
ಭಾರತದ ಬಗೆಗಿನ ಯೂರೋಪೀಯ ಗ್ರಹಿಕೆಗಳಿಗೊಂದು ಇತಿಹಾಸವಿದೆ. ಅದು ದೊಡ್ಡ ಪ್ರಮಾಣದಲ್ಲಿ ಶುರುವಾದದ್ದು ವಸಾಹತುಯುಗದಲ್ಲಿ. ಯೂರೋಪಿನ ಬೇರೆ ಬೇರೆ ದೇಶಗಳಲ್ಲಿ ರೂಪಿತವಾದ `ಇಂಡಾಲಜಿ' ಎಂಬ ಜ್ಞಾನಕ್ಷೇತ್ರದಲ್ಲಿ ಹಲವು ವೈವಿಧ್ಯಗಳಿವೆ, ನಿಜ. ಇತಾಲಿಯಾದ ಸಂಸ್ಕೃತಜ್ಞ ತೊರಿಲ್ಲಾ ಅವರ ಪ್ರಕಾರ ಜರ್ಮನಿಯ ಇಂಡಾಲಜಿಗಿಂತ ಇತಾಲಿಯದ ಇಂಡಾಲಜಿ ಎರಡು ಶತಮಾನ ಹಳೆಯದು.
ಜರ್ಮನಿಯ ಇಂಡಾಲಜಿಯಲ್ಲಿ ವೇದ, ವೇದಾಂತಕ್ಕೆ ನೀಡಿರುವ ಅತಿಯಾದ ಒತ್ತನ್ನು ಇತಾಲಿಯಾದವರು ನೀಡಿಲ್ಲ. ಆದ್ದರಿಂದಲೇ ಇತಾಲಿಯಾದ ಸಂಸ್ಕೃತಜ್ಞರು ಇಪ್ಪತ್ತನೇ ಶತಮಾನದಲ್ಲಿ ಹೆಚ್ಚು ಅಧ್ಯಯನ ಮತ್ತು ಅನುವಾದಕ್ಕೆ ತೊಡಗಿಸಿಕೊಂಡಿರುವುದು ವೈದಿಕೇತರ ಕ್ಷೇತ್ರಗಳಲ್ಲಿ. ಅದರಲ್ಲೂ ವಿಶೇಷವಾಗಿ ಕಾಶ್ಮೀರ ತಂತ್ರಗಳ ವಿಷಯದಲ್ಲಿ. ಹಾಗೆಯೇ ಇಂಗ್ಲೆಂಡಿನ ಮತ್ತು ಜರ್ಮನಿಯ ಇಂಡಾಲಜಿಗಳ ದೃಷ್ಟಿಕೋನಗಳಲ್ಲೂ ಫರಕುಗಳಿವೆ. ಇಂಗ್ಲೆಂಡಿನ ವಿದ್ವಾಂಸರು ಭಾರತಕ್ಕೆ ಬಂದು ಆಡಳಿತ ಮಾಡುವ ಹೆಗ್ಗಳಿಕೆಗೆ ಸಂದವರು. ಆದರೆ ಜರ್ಮನ್ ಇಂಡಾಲಜಿಸ್ಟರು ಕೂತಕಡೆಯೇ ತಮಗೆ ಬೇಕೆನಿಸಿದ ಹಾಗೆ ಭಾರತವನ್ನು ಪುನಾರಚನೆ ಮಾಡಿಕೊಂಡವರು.
ಇಷ್ಟಾದರೂ ಒಂದು ಸಾಮ್ಯ ಈ ಎಲ್ಲ ವ್ಯತ್ಯಾಸಗಳ ನಡುವೆ ಗೋಚರಿಸುತ್ತದೆ. ಬಂಡವಾಳಶಾಹಿ ಯುಗದಲ್ಲಿ ತಮ್ಮ ಪರಂಪರೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಐರೋಪ್ಯ ಮಾನಸ ತನ್ನ ನಾಗರಿಕತೆಯ ಶೈಶವವನ್ನು ಉಜ್ವಲವಾದ ಗತದ ನಾಗರಿಕತೆಗಳಲ್ಲಿ ಕಂಡುಕೊಳ್ಳಲು ಪ್ರಯತ್ನಿಸುತ್ತಿತ್ತು. ತಮ್ಮ ನಾಗರಿಕತೆಯ ಉಗಮ ಸ್ಥಾನವೆಂದು ಅವರು ತಿಳಿದ ಗ್ರೀಕ್ ನಾಗರಿಕತೆಯನ್ನು ಹೊರತುಪಡಿಸಿದರೆ ಅವರಿಗೆ ಕಂಡದ್ದು ಭಾರತೀಯ ಪರಂಪರೆ. ಬಾನ್ ವಿಶ್ವವಿದ್ಯಾಲಯದಲ್ಲಿ ಪ್ರಥಮವಾಗಿ ಇಂಡಾಲಜಿಯನ್ನು ಸ್ಥಾಪಿಸಿದ ಷ್ಲೆಗೆಲ್ ಬಾನ್ ಅನ್ನು ವಾರಣಾಸಿಯೆಂದೂ ರೇಇನ್ ನದಿಯನ್ನು ಗಂಗೆಯೆಂದೂ ತನ್ನನ್ನು ಬ್ರಾಹ್ಮಣನೆಂದೂ ಬಣ್ಣಿಸಿದ್ದ.
ಆದರೆ ಜರ್ಮನ್ ಇಂಡಾಲಜಿಸ್ಟರು ಮ್ಯೋಕ್ಸ್‌ಮುಲ್ಲರನನ್ನೂ ಒಳಗೊಂಡು ಭಾರತವೆಂಬ ದೇಶದಲ್ಲಿ ಕಾಲಿಡಲೇ ಇಲ್ಲ, ಭಾರತಕ್ಕೆ ಖುದ್ದಾಗಿ ಬಂದು ಇಲ್ಲಿನ ಭಾಷೆಗಳಿಗೆ ಸೇವೆ ಸಲ್ಲಿಸಿದ ಕಿಟ್ಟೆಲ್ ಮತ್ತು ಗುಂಡರ್ಟರು ಈ ತಲೆಪಟ್ಟಿಗೆ ಹೊರಗು. ಇಂಡಾಲಜಿಯವರ ಆಕರ ಭಾಷೆ ಸಂಸ್ಕೃತವಾಯಿತು. ವೈದಿಕ ಪರಂಪರೆ, ಸಂಸ್ಕೃತ ಭಾಷೆ ಇವಿಷ್ಟನ್ನೇ ಭಾರತವೆಂದು ಬಗೆದರು.
ಆದರ್ಶ ಬಾಲ್ಯದ ಹುಡುಕಾಟ ವರ್ತಮಾನದ ಬರ್ಬರತೆಗೆ ಬೆನ್ನು ಮಾಡಿದ ಐರೋಪ್ಯ ರೊಮ್ಯಾಂಟಿಕ್ ವಾದದ ಒಂದು ಅವಿಭಾಜ್ಯ ಅಂಗ. ಇದರ ಅಂತರ್ಗತವಾಗಿ ಬೆಳೆದ ಇಂಡಾಲಜಿಯಲ್ಲಿ ಅದೇ ತೆರನ ಕಾಳಜಿಗಳಿರುವುದೂ ಸಹಜ. ಅಲ್ಲದೆ ಜರ್ಮನಿಯ ಇಂಡಾಲಜಿಗೂ ನಾಜೀವಾದದ ಬೆಳವಣಿಗೆಗೂ ಇರುವ ಸಂಬಂಧವನ್ನು ಅಮೆರಿಕನ್ ಸಂಸ್ಕೃತಜ್ಞ ಷೆಲ್ಡನ್ ಪೋಲಕ್ ಚರ್ಚಿಸಿದ್ದಾರೆ.
ಆದರೆ ರೊಮ್ಯೋಂಟಿಸಿಸಂ ಮತ್ತು ಇಂಡಾಲಜಿ ಎರಡರ ತಾಯಿಯಾದ ವಸಾಹತು ಯುಗ ಕಳೆದುಹೋದ ಮೇಲೂ ಇಂಡಾಲಜಿಕಲ್ ವಿಚಾರಗಳಿಂದ ನಾವು ಮುಕ್ತರಾಗುತ್ತಿಲ್ಲ. ಇಂದು ಪ್ರಾಚ್ಯವಾದಿಗಳೆಂದು ಕರೆಯಲ್ಪಡುವ ಇಂಡಾಲಜಿಸ್ಟರೆಲ್ಲರೂ ಭಾರತದ ಗತ ಉಜ್ವಲವೆಂದೂ ಅದರ ವರ್ತಮಾನ ಪತಿತವೆಂದೂ ಗ್ರಹಿಸಿದ್ದರು. ಆದ್ದರಿಂದಲೇ ಭಾರತವನ್ನು ತಿದ್ದಿ ಪೊರೆಯುವ ಗುರುತರ ಹೊಣೆ ತಮ್ಮದೆಂದೂ ನಂಬಿದ್ದರು. ಈ ಗ್ರಹಿಕೆಗಳಿಗೆ ಇಂದು ಬೆಲೆಯಿಲ್ಲ.
ಹೀಗಾಗಿ ಯೂರೋಪಿನ ವಿಶ್ವವಿದ್ಯಾಲಯಗಳಲ್ಲಿ ಇಂಡಾಲಜಿ ವಿಭಾಗಗಳು ಸಂಕಷ್ಟಕ್ಕೆ ಸಿಕ್ಕಿವೆ. ಒಂದೊಂದಾಗಿ ಕುಗ್ಗುತ್ತಿವೆ, ಮುಚ್ಚಿಹೋಗುತ್ತಿವೆ. ಭಾರತದ ಬಗೆಗಿನ ಆಸ್ಥೆ ಇಂದು ಆಧುನಿಕ ಭಾರತೀಯ ಅಧ್ಯಯನ ಕೇಂದ್ರಗಳಾಗಿ ಅಥವಾ ದಕ್ಷಿಣ ಏಷಿಯಾ ಅಧ್ಯಯನ ಕೇಂದ್ರಗಳಾಗಿ ಮಾರ್ಪಡುತ್ತಿವೆ. ಜರ್ಮನಿಯಂಥ ಪ್ರಭುತ್ವಕ್ಕೆ ಇಂದು ಆಸಕ್ತಿಯಿರುವುದು ಭಾರತದ ಜೊತೆಗಿನ ಆರ್ಥಿಕ ಸಂಬಂಧದಲ್ಲಿಯೇ ಹೊರತು ಅದರ ಗತವೈಭವದಲ್ಲಲ್ಲ. ಯಾಕೆಂದರೆ ಗತವನ್ನು ವೈಭವಿಸಿದ ನಾಜೀವಾದ ಜರ್ಮನಿಯಲ್ಲಿ ನನೆಗುದಿಗೆ ಬಿದ್ದು ಭವಿಷ್ಯವನ್ನು ಕೀರ್ತಿಸುವ ಮಾರ್ಕೆಟ್ಟುವಾದ ಸರ್ವವ್ಯಾಪಿಯಾಗುತ್ತಿದೆ.
ಆದರೆ ನಮ್ಮನ್ನು ಕಾಡುವ ಪ್ರಶ್ನೆ ಇದು:
ಮಾರ್ಕೆಟ್ಟುಯುಗದಲ್ಲಿ ಯೂರೋಪು ಭಾರತಗಳ ಸಮಾನ ಹಂಚಿಕೆಯ ಸಾಧ್ಯತೆಗಳೆಷ್ಟು?
ಸಮಾನ ಹಂಚಿಕೆಯ ಪ್ರಶ್ನೆ ಮೂಲಭೂತವಾಗಿ ಆರ್ಥಿಕವಾದದ್ದು. ಅದನ್ನು ಚರ್ಚಿಸಲು ಯೋಗ್ಯವಾದ ತಿಳಿವಳಿಕೆ ನನಗಿಲ್ಲ. ಆದರೆ ಈ ಪ್ರಶ್ನೆಯ ಸಾಂಸ್ಕೃತಿಕ ಮಗ್ಗುಲಿನ ಬಗ್ಗೆ ಬಹಳ ದಿನಗಳಿಂದ ನನಗೆ ಕುತೂಹಲವಿದ್ದು ಆ ಬಗ್ಗೆ ಯೋಚಿಸುತ್ತಲೇ ಇರುತ್ತೇನೆ.
ನಿದರ್ಶನಕ್ಕಾಗಿ ಭಾರತದ ಯೋಗ, ಆಯುರ್ವೇದ ಮುಂತಾದ ಚಿಕಿತ್ಸಾ ಪದ್ಧತಿಗಳನ್ನು ಯೂರೋಪು ಸ್ವೀಕರಿಸುತ್ತಿರುವ ಬಗೆಯನ್ನು ಗಮನಿಸೋಣ.
ಯೋಗವಂತೂ ಯೂರೋಪಿನಲ್ಲಿ ಅಭೂತಪೂರ್ವ ಜನಪ್ರಿಯತೆ ಗಳಿಸುತ್ತಿದೆ. ಅದರ ಜನಪ್ರಿಯತೆ ಬಾಲಿವುಡ್ ಸಿನಿಮಾಕ್ಕೆ ಸರಿಸಾಟಿಯಾಗಿದೆ. ಒಬ್ಬಿಬ್ಬರು ಯೋಗ ಗುರುಗಳು ಜರ್ಮನಿಯಲ್ಲಿ ಹೆಚ್ಚೂ ಕಡಿಮೆ ಶಾರುಖ್ ಖಾನ್, ಕತ್ರಿನಾ ಕೈಫ್‌ರಷ್ಟೇ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಯೂರೋಪಿನಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚುಹೆಚ್ಚು ದುಬಾರಿಯಾಗಿರುವ ಸಂದರ್ಭದಲ್ಲಿ ಜನ ಪರ್ಯಾಯ ಚಿಕಿತ್ಸಾ ಪದ್ಧತಿಗಳ ಕಡೆ ನೋಡಹತ್ತಿದ್ದಾರೆ. ಆಯುರ್ವೇದವೂ ಈ ಕಾರಣಕ್ಕೆ ಜನಜನಿತವಾಗುತ್ತಿದೆ.
ಬರ್ಲಿನ್‌ನ ಚಾರಿಟೆ ಆಸ್ಪತ್ರೆಯಲ್ಲಿ ಮಂಡಿಯ ಸಂಧಿವಾತ ರೋಗನಿವಾರಣೆಯಲ್ಲಿ ಆಯುರ್ವೇದ ಚಿಕಿತ್ಸೆಯ ಯಶಸ್ಸನ್ನು ಕುರಿತ ಒಂದು ಅಧ್ಯಯನ ದೆಹಲಿಯ ಆಯುಷ್ ಸಂಸ್ಥೆಯ ಅನುದಾನದಲ್ಲಿ ನಡೆಯುತ್ತಿದ್ದು ಈ ಸಂಶೋಧನೆಯು ಮುಂದಿನ ವರ್ಷ ಕೊನೆಗೊಳ್ಳಲಿದೆ. ಜರ್ಮನಿಯ ಇತರ ಹಲವು ಆಸ್ಪತ್ರೆಗಳಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಅಲೋಪಥಿಗೆ ಪೂರಕವಾಗಿ ನೀಡಲಾಗುತ್ತಿದೆ.
ಆದರೆ ಯೋಗವನ್ನಾಗಲಿ ಆಯುರ್ವೇದವನ್ನಾಗಲಿ ಪೂರ್ಣರೂಪದ, ಕಾನೂನುಬದ್ಧವಾದ ಚಿಕಿತ್ಸಾ ಪದ್ಧತಿಗಳೆಂದು ಘೋಷಿಸಿಲ್ಲ. ಭಾರತದ ಅನೇಕ ಯೋಗತಜ್ಞರು ವಿಶೇಷವಾಗಿ ಲೊನಾವಲಾದ ಕುವಲಯಾನಂದ ಯೋಗ ಸಂಸ್ಥೆಯವರು ಯೋಗದ ವೈಜ್ಞಾನಿಕತೆಯನ್ನು ಸಾಬೀತು ಮಾಡಲು ಬಹಳ ಹೆಣಗಿದ್ದಾರೆ.
ಯೋಗದ ವಿಜ್ಞಾನವಾದಿಗಳ ಈ ಹೆಣಗಾಟಕ್ಕೆ ಪಶ್ಚಿಮದ ನಾಡುಗಳಲ್ಲಿ ಆಶಾದಾಯಕವಾದ ಪ್ರತಿಕ್ರಿಯೆ ದೊರಕಿಲ್ಲ. ಜರ್ಮನಿ ಮತ್ತಿತರ ಯೂರೋಪು ನಾಡುಗಳ ಔಷಧ ಕಂಪೆನಿಗಳ ಲಾಭಕ್ಕೆ ಯೋಗ ಮತ್ತು ಆಯುರ್ವೇದಗಳ ಜನಪ್ರಿಯತೆ ಧಕ್ಕೆಯಾಗುವುದೆಂಬ ಭಯ ಮುಖ್ಯ ಅಡಚಣೆ, ನಿಜ. ಆದರೆ ಇಂಡಾಲಜಿಯಲ್ಲಿ ಅಂತರ್ಗತವಾಗಿದ್ದ ಭಾರತೀಯ ಸಂಸ್ಕೃತಿ ಮತ್ತು ವಿಜ್ಞಾನಗಳ ಬಗೆಗಿನ ಮೂಲಭೂತ ಅನುಮಾನವೂ ಇಲ್ಲಿ ಕೆಲಸ ಮಾಡುತ್ತಿದೆ. ಅಂದರೆ ಯೋಗ, ಆಯುರ್ವೇದಗಳು ಯೂರೋಪಿನ ವೈಜ್ಞಾನಿಕತೆಯ ಕೊಂಡವನ್ನು ಹಾಯುವುದರಲ್ಲಿ ಯಶಸ್ವಿಯಾಗಿಲ್ಲ.
ಇದನ್ನು ನೋಡಿದಾಗ ಒಂದು ಪ್ರಶ್ನೆ ಕಾಡತೊಡಗುತ್ತದೆ. ಅಲೋಪಥಿ ಭಾರತಕ್ಕೆ ಬಂದಾಗ ನಾವು ಅದನ್ನು ನಮ್ಮ ಸಾಂಪ್ರದಾಯಿಕ ವಿಜ್ಞಾನಗಳಾದ ಆಯುರ್ವೇದ ಮತ್ತು ಯೋಗಗಳೊರೆಗಲ್ಲಿನಲ್ಲಿ ಪರೀಕ್ಷಿಸಿದ್ದೆವೆ ? ಸುತರಾಂ ಇಲ್ಲ. ಪಶ್ಚಿಮದಿಂದ ಬಂದದ್ದೆಲ್ಲಾ ಪವಿತ್ರವೆಂಬ ಗೃಹೀತದಿಂದ ಕುರುಡುಕುರುಡಾಗಿ ಒಪ್ಪಿಕೊಂಡುಬಿಟ್ಟೆವು. ಅಷ್ಟೇ ಅಲ್ಲ ನಮ್ಮ ವಿಜ್ಞಾನಗಳು ಅವರ ವೈಜ್ಞಾನಿಕತೆಯ ಅಪೇಕ್ಷೆಗಳನ್ನು ಪೂರೈಸಬಲ್ಲುವೆಂದು ಸಾಬೀತು ಮಾಡಲು ಹೆಣಗತೊಡಗಿದೆವು.
ಇದೇ ರೀತಿ ಅವರ ಶಿಕ್ಷಣ ಪದ್ಧತಿ, ವಿಜ್ಞಾನ, ಆಡಳಿತ ಕ್ರಮ ಎಲ್ಲವನ್ನೂ ಅವಿಮರ್ಶಾತ್ಮಕವಾಗಿ ಸ್ವೀಕರಿಸಿದ್ದಲ್ಲದೆ ನಮ್ಮ ಆಚಾರ-ವಿಚಾರಗಳ ಬಗ್ಗೆ ಮುಜುಗರಪಟ್ಟುಕೊಳ್ಳತೊಡಗಿದೆವು. ಇದರಿಂದ ನಮಗೆ ಬಂದೆರಗಿರುವ ಅಪಾಯಗಳನ್ನು ಎದುರುಗೊಳ್ಳಲು ನಿರಾಕರಿಸುತ್ತಿದ್ದೇವೆ.
ಅಸಮಾನ ಹಂಚಿಕೆಯ ವಸಾಹತು ಯುಗದ ದುಷ್ಪರಿಣಾಮಗಳನ್ನು ದಾಟುವುದು ನಮಗೆಷ್ಟು ಮುಖ್ಯವೋ ಪಶ್ಚಿಮದವರಿಗೂ ಅಷ್ಟೇ ಮುಖ್ಯ. ಯಾಕಂದರೆ ಆಲ್ಬೆರ್ತ್ ಮೆಮಿ ಹೇಳಿದ ಹಾಗೆ ವಸಾಹತು ಸಂಬಂಧ ಅತ್ಯಂತ ವಿಷಮವಾದುದು. ಅದರ ನಿರ್ಮಾತೃಗಳು ಮತ್ತು ಶಿಕಾರಿಗಳು ಇಬ್ಬರೂ ಒಂದು ವಿಷವರ್ತುಲದಲ್ಲಿ ಸಿಕ್ಕಿ ಪರಸ್ಪರ ವ್ಯಕ್ತಿತ್ವಗಳನ್ನು ಸಂಕೋಚಗೊಳಿಸಿಕೊಳ್ಳುತ್ತಾರೆ. ಮೆಮಿಯ ಪ್ರಕಾರ ಈ ವಿಷವರ್ತುಲದಿಂದ ಪಾರಾಗುವುದು ಸಾಧ್ಯವೇ ಇಲ್ಲ. ಅದರಿಂದ ಪಾರಾಗಲು ಪ್ರಯತ್ನಿಸಿದಾಗೆಲ್ಲ ಮತ್ತೆ ಅದರೊಳಗೇ ಸಿಕ್ಕಿಹಾಕಿಕೊಳ್ಳುತ್ತೇವೆ.
ಶಿಕ್ಷಣ ಕ್ಷೇತ್ರದ ಅನುಕರಣಶೀಲತೆ ಒಂದು ದೊಡ್ಡ ಉದಾಹರಣೆ. ಎರಡು ಶಿಕ್ಷಣ ಸಂಸ್ಕೃತಿಗಳು ಪರಸ್ಪರ ಸಂಬಂಧವಿರದೆ ಸಮಾನಾಂತರವಾಗಿ ಬೆಳೆಯುತ್ತಿವೆ. ಒಂದು ಕಡೆ ಇಂಗ್ಲಿಷ್ ಭಾಷೆ ಮತ್ತು ಸಂಸ್ಕೃತಿಗಳಿಂದ ಅಭಿನ್ನವಾಗಿರುವ ವಲಯ; ಇನ್ನೊಂದು ಕಡೆ ಬಹುಮಟ್ಟಿಗೆ ಇಲ್ಲದವರಿಗೆ ದೊರಕುವ ಮಾತೃಭಾಷಾ ಮಾಧ್ಯಮದ ಶಿಕ್ಷಣ ಪದ್ಧತಿ. ಶಾಲಾ ಮಟ್ಟದಲ್ಲಿ ಶುರುವಾದ ಈ ವೈಷಮ್ಯ ಕಾಲೇಜು ಮತ್ತು ಉನ್ನತ ಶಿಕ್ಷಣದವರೆಗೂ ಮುಂದುವರಿಯುತ್ತದೆ. ಇಂಗ್ಲಿಷ್ ಶಿಕ್ಷಣ ಪಡೆದವರು ಹೆಚ್ಚು ಆತ್ಮವಿಶ್ವಾಸಿಗಳೂ ಸ್ಪರ್ಧಾ ಮನೋಭಾವದವರೂ ಆಗಿದ್ದು ಬಹುಬೇಗ ಶಿಕ್ಷಣ ಮತ್ತು ಸಮಾಜದಲ್ಲಿ ಮುನ್ನಡೆ ಸಾಧಿಸುತ್ತಾರೆ.
ಮಾತೃಭಾಷಾ ವಿಶಾರದರು ಕೀಳರಿಮೆಯಿಂದ ಹಿಂದುಳಿದುಬಿಡುತ್ತಾರೆ. ಮುಂದುವರಿದವರನ್ನು ನೋಡಿ ಕೊರಗುತ್ತಿರುತ್ತಾರೆ. ಅವರ ಬಗೆಗಿನ ಹಗೆ ಮತ್ತು ಆಕರ್ಷಣೆಗಳನ್ನು ಏಕಕಾಲದಲ್ಲಿ ಅನುಭವಿಸುತ್ತಾರೆ. ಆಧುನಿಕ ಸರ್ಕಾರಗಳ ಸಾಮಾಜಿಕ ನ್ಯಾಯಪರ ನೀತಿಯಿಂದ ಈ ಒಡಕಿನ ಕೆಟ್ಟ ಪರಿಣಾಮಗಳು ಒಂದಿಷ್ಟು ತಹಬಂದಿಗೆ ಬಂದಿವೆಯಾದರೂ ನಿವಾರಣೆಯಾಗುತ್ತಿಲ್ಲ. ಎಲ್ಲ ವರ್ಗದವರಿಗೂ ಒಂದೇ ಬಗೆಯ ಶಿಕ್ಷಣ ಪದ್ಧತಿ ಸಾಧ್ಯವಾದಾಗ ಮಾತ್ರ ಒಂದು ಹೊರದಾರಿ ಸಿಕ್ಕೀತು.
ಇಂದಿನ ವಿಶ್ವವಿದ್ಯಾಲಯಗಳ ಅನುಕರಣಶೀಲ ಶೈಕ್ಷಣಿಕ ವಾತಾವರಣವನ್ನು ನೋಡಿದಾಗ ಆಸ್ಟ್ರೇಲಿಯಾದ ಆದಿವಾಸಿ ಸಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ಒಡ್ಗರೂ ನುನುಕ್ಕುಲ್‌ಳ ಬಾಲ್ಯದ ಒಂದು ಘಟನೆ ನೆನಪಿಗೆ ಬರುತ್ತದೆ. ಜನ್ಮತಃ ಲೊಡ್ಡೆಯಾಗಿದ್ದ ಆಕೆ ಶಾಲೆಯಲ್ಲಿ ಬಿಳಿಯ ವಿದ್ಯಾರ್ಥಿಗಳಿಗಿಂತಲೂ ಸುಂದರವಾಗಿ ಅಕ್ಷರ ಬರೆಯಬಲ್ಲವಳಾಗಿರುತ್ತಾಳೆ. ಆದರೆ ಅವಳು ಎಡಗೈನಲ್ಲಿ ಬರೆಯುವುದನ್ನು ಕಂಡು ಕೆರಳಿದ ಬಿಳೀ ಮೇಡಂ ಅವಳ ಬರೆಯುವ ಹವ್ಯಾಸವನ್ನು ತಿದ್ದುವ ಹುಮ್ಮಸ್ಸಿನಿಂದ ಅವಳ ಎಡಗೈಗೆ ಪ್ರತಿದಿನ ದೊಣ್ಣೆಸೇವೆ ಮಾಡಿ ಬಲಗೈನಲ್ಲಿ ಬರೆಯುವುದನ್ನು ಕಲಿಸುತ್ತಾಳೆ. ನುನುಕ್ಕುಲ್ ಕೂಡ ಬಲಗೈ ಬರವಣಿಗೆಗೆ ಒಗ್ಗಿಹೋಗುತ್ತಾಳೆ. ಆದರೆ ಅವಳ ಮುತ್ತುಪೋಣಿಸಿದಂತಿದ್ದ ಅಕ್ಷರಗಳು ವಿಕಾರವಾಗಿಬಿಡುತ್ತವೆ. ಇದು ಪಶ್ಚಿಮಮುಖಿಗಳಾದ ನಮ್ಮೆಲ್ಲರ ಕತೆ.
ಆಸ್ಟ್ರಿಯಾದ ಭಾರತತಜ್ಞನಾದ ಅರ್ನ್ಸ್ಟ್ ಫುಲಿಂಗರ್ ಎಂಬ ಮಿತ್ರ ನನ್ನನ್ನು ಒಮ್ಮೆ ಕೇಳಿದ: ನಿಮ್ಮ ಭಾರತೀಯ ವಿದ್ವಾಂಸರು ಯೂರೋಪಿಗೆ ಬಂದಾಗ ನಮ್ಮ ಸಿದ್ಧಾಂತಗಳನ್ನು ನಮಗೇ ಹೇಳಿ ನಮ್ಮನ್ನು ಮೆಚ್ಚಿಸುವ ಆತುರದಲ್ಲಿರುತ್ತಾರೆ. ನಮ್ಮ ವಿಚಾರಗಳು ನಮಗೆ ಗೊತ್ತಿವೆ. ಅವರಿಂದ ಅವನ್ನು ತಿಳಿದುಕೊಳ್ಳುವ ಅಗತ್ಯ ನಮಗಿಲ್ಲ. ನಮಗೆ ಗೊತ್ತಿಲ್ಲದ ಹೊಸ ವಿಷಯ ಅವರು ಏನಾದರೂ ಹೇಳುತ್ತಾರೆಂದು ನಾವು ವೃಥಾ ಕಾಯುತ್ತಿರುತ್ತೇವೆ.
ನಾವು ಹೀಗೆ ಹೇಳಿದಾಗ ವಿಕಾಸವಾದಿಗಳೆನ್ನಬಹುದು: ಇಂಥವು ವೈಫಲ್ಯದ ಕಥನಗಳು. ನಮ್ಮ ಗೆಲುವುಗಳನ್ನು ಪಟ್ಟಿ ಮಾಡೋಣ. ನಮ್ಮ ಬಾಲಿವುಡ್ ಸಿನಿಮಾ ಹಾಲಿವುಡ್ಡನ್ನೂ ಹಿಂದೆ ಹಾಕಿದೆ. ನಮ್ಮ ಡಾಕ್ಟರುಗಳು, ಎಂಜಿನಿಯರುಗಳು, ಕಂಪ್ಯೂಟರ್ ಸ್ಪೆಷಲಿಸ್ಟರುಗಳಿಗೆ ವಿಕಾಸಶೀಲ ರಾಷ್ಟ್ರಗಳಲ್ಲೂ ಇಂದು ಅಭೂತಪೂರ್ವವಾದ ಬೇಡಿಕೆಯಿದೆ.
ನಮ್ಮ ಸುಂದರಿಯರು ಮುಂದುವರಿದ ರಾಷ್ಟ್ರಗಳ ಸುಂದರಿಯರಿಗೆ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ. ಇಂಡಿಯನ್ ಇಂಗ್ಲಿಷ್ ಬರಹಗಾರರು ಇಂಗ್ಲಿಷ್ ದೇಶಗಳ ಇಂಗ್ಲಿಷ್ ಬರಹಗಾರರನ್ನೂ ಮೀರಿಸಿದ್ದಾರೆ. ನಮ್ಮ ಷಾಪಿಂಗ್ ಮಾಲುಗಳು ಪಶ್ಚಿಮದವರ ಕಣ್ಣು ಕುಕ್ಕಿಸುವ ಮಟ್ಟಿಗೆ ಎದ್ದು ನಿಂತು ರಾರಾಜಿಸುತ್ತಿವೆ. ನಮ್ಮ ಆರ್ಥಿಕ ಪ್ರಗತಿಗೆ ಐರೋಪ್ಯರೂ ಮಾರುಹೋಗುತ್ತಿದ್ದಾರೆ. ಇವೆಲ್ಲಾ ನಿಮಗೆ ಕಾಣಿಸುತ್ತಿಲ್ಲವೇನು? ನಾವೂ ಯೂರೋಪಿನವರಷ್ಟೇ ಮುಂದುವರಿದಿದ್ದೇವೆಂದು ಗೊತ್ತಾಗುತ್ತಿಲ್ಲವೇನು?
ನೈಜೀರಿಯಾದ ಬರಹಗಾರ ವೊಲೆ ಷೊಯಿಂಕಾಗೆ ನೊಬೆಲ್ ಪುರಸ್ಕಾರ ದೊರೆತ ಸಂದರ್ಭದಲ್ಲಿ ಇಡೀ ಆಫ್ರಿಕಾ ಬೀಗುತ್ತಿದ್ದ ಸಂದರ್ಭದಲ್ಲಿ ಇನ್ನೊಬ್ಬ ಪ್ರಸಿದ್ಧ ಬರಹಗಾರ ಚಿನುವಾ ಅಚಿಬೆ ಹೀಗೆಂದಿದ್ದ:
`ನಾವೂ ಬಿಳಿಯರ ನಿಯಮದ ಪ್ರಕಾರ ಆಟವಾಡಿ ಗೆಲ್ಲಬಲ್ಲೆವೆಂಬುದನ್ನು ಷೊಯಿಂಕಾ ಸಾಬೀತುಪಡಿಸಿದ್ದಾನೆ. ಆದರೆ ನಾವು ನಮ್ಮ ನಿಯಮಗಳ ಪ್ರಕಾರ ಆಟವನ್ನು ಇನ್ನೂ ಶುರು ಮಾಡಬೇಕಾಗಿದೆ'.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.