ಈ ಸಲ ಯುಗಾದಿಯನ್ನು ನಾನು ಆಚರಿಸಿದ್ದು ಕರ್ನಾಟಕದಲ್ಲಲ್ಲ, ಮಣಿಪುರದಲ್ಲಿ. ಮಣಿಪುರಿಗಳ ಯುಗಾದಿ, ಕನ್ನಡಿಗ, -ತೆಲುಗರ ಯುಗಾದಿ ಒಂದೇ ದಿವಸ ಬೀಳುತ್ತವೆ. ಯಾಕೆಂದರೆ ನಮ್ಮ ಹಾಗೆ ಅವರ ವರ್ಷಮಾನವೂ ಚಾಂದ್ರಮಾನ ಪದ್ಧತಿಯ ಅನುಸಾರ.
ಮಂಗೋಲಿಯನ್ ಜನಾಂಗೀಯ ಲಕ್ಷಣಗಳ ಮಣಿಪುರಿಗಳು ಪ್ರಧಾನತಃ ಮೇಥೇಯ್ ಬುಡಕಟ್ಟಿನವರು; ಅವರಾಡುವ ಭಾಷೆ ಚೀಣೀ- ಬರ್ಮೀಯ ಭಾಷೆಗಳನ್ನು ಹೋಲುತ್ತದೆ. ದಕ್ಷಿಣ ಭಾರತದ ನಾವು ದ್ರಾವಿಡ ಮೂಲದವರು; ನಮ್ಮ ಭಾಷೆಗಳು ದ್ರಾವಿಡ ಭಾಷೆಗಳು. ಸಾಂಸ್ಕೃತಿಕವಾಗಿ ಮಣಿಪುರದ ಮುಖ್ಯ ಬುಡಕಟ್ಟಿನ ಮೇಥೇಯ್‌ಗಳು, ಇತರ ಭಾರತೀಯರಿಗಿಂತ ಪೂರ್ವ ಏಷ್ಯಾದವರ ಥರ. ಆದರೆ ದ್ರಾವಿಡರಾದ ನಾವು ಪೂರ್ವ ಏಷ್ಯಾದವರು ಇಬ್ಬರಿಗೂ ಸಮಾನವಾದುದು ಚಾಂದ್ರಮಾನ ಕಾಲಗಣನಾಕ್ರಮ.
ಮಣಿಪುರದ ರಕ್ತಸಿಕ್ತ ಸಮಕಾಲೀನ ಇತಿಹಾಸ ನಮ್ಮೆಲ್ಲರಿಗೂ ತುಸು ಗೊತ್ತಿದೆ. ಆದರೆ ನೆತ್ತರಿನಾಟ ಮಣಿಪುರದ ಮಣ್ಣಿಗೆ ಹೊಸತಲ್ಲ. ಶತಶತಮಾನಗಳಿಂದ ಮಲೆವಾಸಿಗಳಾದ ನಾಗಾಗಳು ನೆಲನಿವಾಸಿಗಳಾದ ಮೇಥೇಯ್‌ಗಳು ಸದಾ ಪರಸ್ಪರ ಹೋರಾಡುತ್ತಾ ಇದ್ದರು. ಈ ಹಿಂಸ್ರ ಪ್ರವೃತ್ತಿ ಇಂದಿನ ಮಣಿಪುರದ ಸಂಕೀರ್ತನವೆಂಬ ಡೊಳ್ಳಿನ ರೀತಿಯ ಕುಣಿತದಲ್ಲಿ ಶಕ್ತಿಯುತ ಲಯಬದ್ಧತೆಯಾಗಿ ಕಲಾರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಆದರೆ ಮಣಿಪುರದ ಇನ್ನಿತರ ಆಡುಕಲೆಗಳಲ್ಲಿ ಪ್ರಶಾಂತತೆಯೇ ಹೂರಣ.
ಸೃಷ್ಟಿ ಪುರಾಣದ ಕತೆಯನ್ನು ಕುಣಿತದಲ್ಲಿ ಹೇಳುವ ಲಾಯ್ ಹರೋಬಾದಲ್ಲಿ, ಮಣಿಪುರಿ ಗೀತ ರೂಪಕಗಳಲ್ಲಿ, ವೈಷ್ಣವ ಕಥಾವಸ್ತುಗಳನ್ನಭಿನಯಿಸುವ ಮಣಿಪುರಿ ನರ್ತನದಲ್ಲಿ ಕಲಾಕಾರ ಯಾವುದೋ ಹಗಲುಗನಸಿನಲ್ಲಿ ತೇಲುವ ತೆಳುಮೋಡದಂತೆ ಚಲಿಸುತ್ತಾನೆ.
ತನ್ನ ಗತಾನುಗತಿಕ ಸಂಸ್ಕೃತಿಯನ್ನು ಬದುಕುತ್ತಿದ್ದ ಮಣಿಪುರಿಗಳ ಇತಿಹಾಸದಲ್ಲಿ ಬಹುಕಾಲ ಪಲ್ಲಟಗಳಾಗಲೇ ಇಲ್ಲ.
ಮೂರು ಸಾವಿರ ವರ್ಷಗಳ ಇತಿಹಾಸದ ಈ ನೆಲದಲ್ಲಿ ಹದಿನೆಂಟನೇ ಶತಮಾನದಲ್ಲಿ ಗರೀಬನಿವಾಸನೆಂಬ ಅರಸ ಗೌಡೀಯ ವೈಷ್ಣವ ಮತವನ್ನು ರಾಜಾಶ್ರಿತ ಧರ್ಮವನ್ನಾಗಿ ಘೋಷಿಸಿದ. ಆದರೆ ಬಹುಮಟ್ಟಿಗೆ ಮಣಿಪುರಿ ಜನತೆ ಮತಾಂತರ ಹೊಂದಲಿಲ್ಲ. ಹಾಗೆ ಹೊಂದಿದವರು ತಮ್ಮ ಸನಾತನ ಧರ್ಮದ ಚೌಕಟ್ಟಿನಲ್ಲಿ ಹೊಸಧರ್ಮವನ್ನು ಅಳವಡಿಸಿಕೊಂಡರು, ಅಷ್ಟೆ. ಈ ಅಳವಡಿಕೆ ಮಣಿಪುರದ ಕಲೆಗಳಲ್ಲಿ ಬಿಂಬಿತವಾಗಿದೆ. ಅವರ ಸಂಸ್ಕೃತಿಯಲ್ಲಿ ಕೂಡಾ. ಕೆಲವು ಮಣಿಪುರಿ ವೈಷ್ಣವರ ಮನೆಗಳಲ್ಲಿ ಒಂದುಕಡೆ ಶ್ರೀ ಕೃಷ್ಣನ ಮೂರ್ತಿ, ಇನ್ನೊಂದು ಮೂಲೆಯಲ್ಲಿ ಮೇಥೀಯ್ ದೇವತೆ ಸನಾಮಿಯ ಪೂಜಾಗೃಹ ಇದೆ.
ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ- ಉದಾಹರಣೆಗೆ ನಾಗಾ, ಕಾಸಿ, ಮಿಜೋರಾಂ ಪ್ರದೇಶಗಳಲ್ಲಿ ಬಹುಸಂಖ್ಯಾತರು ಕ್ರಿಸ್ತಾನುಯಾ ಯಿಗಳಾಗಿ ಮತ ಬದಲಾಯಿಸಿದರು. ಆದರೆ ಮಣಿಪುರದಲ್ಲಿ ಆದ ಕ್ರೈಸ್ತ ಮತಾಂತರ ಬಹಳ ಕಡಿಮೆ. ಇಸ್ಲಾಂ ಧರ್ಮ ಈ ನೆಲದಲ್ಲಿ ನೆಲೆಯೂರಲಿಲ್ಲ. ಗತಕಾಲದಲ್ಲಿ ಬೌದ್ಧ ಧರ್ಮ ಮ್ಯಾನ್ಮಾರಿಗೆ ಹೋದದ್ದು ಮಣಿಪುರದ ಮೂಲಕ. ಆದರೆ ಮಣಿಪುರಿಗಳು ಬೌದ್ಧಧರ್ಮಕ್ಕೂ ಒಲಿಯಲಿಲ್ಲ. ವೈಷ್ಣವ ಧರ್ಮವನ್ನು ಅರಸನೊಬ್ಬ ತಮ್ಮ ಮೇಲೆ ಹೇರಿದಾಗ ಅವರು ಅದನ್ನೊಪ್ಪಿಕೊಂಡದ್ದು ಮೇಲ್ಮಟ್ಟದಲ್ಲಿ ಮಾತ್ರ.
ಮಣಿಪುರದ ನನ್ನ ಆತ್ಮೀಯ ಸ್ನೇಹಿತರೂ ರಂಗತಜ್ಞರೂ ಮಾನವ ಸ್ವಾತಂತ್ರ್ಯ ಆಂದೋಲನಕಾರರೂ ಆದ ಲೋಕೇಂದ್ರ ಆರಂಬಮ್ ಪ್ರಕಾರ ಮಣಿಪುರದ ಜನತೆ ಮೂರು ಬಾರಿ ಹಲ್ಲೆಗೊಳಗಾದರು. ಮೊದಲನೆಯದು ಹಿಂದೂಗಳ ಹಲ್ಲೆ. ಎರಡನೆಯದು ಬ್ರಿಟಿಷ್ ಹಲ್ಲೆ. ಮೂರನೆಯದು ಭಾರತ ಸರ್ಕಾರದ ಹಲ್ಲೆ.ಇವುಗಳ ಉಗ್ರ ಪರಿಣಾಮ ಅರವತ್ತರ ದಶಕದಲ್ಲಿ ಭಯೋತ್ಪಾದಕ ಹೋರಾಟದ ಸ್ವರೂಪ ತಳೆಯಿತು. ಅದನ್ನು ನಿಯಂತ್ರಿಸಲು ಭಾರತ ಸರ್ಕಾರ ರಕ್ಷಣಾ ಪಡೆಯವರನ್ನು ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ರವಾನಿಸಿತು. ಬಂಡುಕೋರ ಗುಂಪುಗಳು ತುಂಡು ತುಂಡಾಗಿ ಪರಸ್ಪರ ಕಾದತೊಡಗಿದವು. ಜೊತೆಗೆ ಭಾರತೀಯ ರಕ್ಷಣಾಪಡೆಗಳು ಉಗ್ರಕ್ರಮಕ್ಕೆ ತೊಡಗಿದವು. ಅಲ್ಲಿಂದ ಶುರುವಾಯಿತು ಹಲ್ಲೆ, ಪ್ರತಿಹಲ್ಲೆಗಳ ಕಠೋರ ಇತಿಹಾಸ.
ಕೊಲೆ, ಮಾನ ಭಂಗಗಳ ಕರಾಳ ಅಧ್ಯಾಯ. ಮಣಿಪುರದ ಯುವಪೀಳಿಗೆಯವರು ರೊಚ್ಚಿಗೆದ್ದು ಭಾರತೀಯ ರಕ್ಷಣಾ ಪಡೆಯ ವಾಪಸಾತಿಯ ಬೇಡಿಕೆಯನ್ನು ಮುಂದಿಟ್ಟರು. ಇರೋಮ್ ಶರ್ಮಿಳಾ ಅವರು ಈ ಸಂದರ್ಭದಲ್ಲೇ ಆಮರಣಾಂತ ಉಪವಾಸ ಶುರು ಮಾಡಿದ್ದು. ಅವರ ಪ್ರತಿಭಟನೆ ಇನ್ನೂ ಮುಂದುವರಿದಿದೆ. ಯುವಪೀಳಿಗೆಯವರು ಭಾರತವನ್ನು ದುರದೃಷ್ಟವಶಾತ್ ಎದುರಾಳಿ ಯನ್ನಾಗಿ ನೋಡುತ್ತಿದ್ದಾರೆ. ವಿಮೋಚನೆಗೆ ಹಾತೊರೆಯುತ್ತಿದ್ದಾರೆ- ಬದುಕಿನಲ್ಲಿ, ಕಾವ್ಯದಲ್ಲಿ, ಕಲೆಗಳಲ್ಲಿ. ಆದರೆ ಮಣಿಪುರಿಗಳಲ್ಲಿ ಮತಭೇದವಿಲ್ಲದೆ ಇಲ್ಲ.
ಈ ಬಾರಿ ನಾನು ಭಾಗವಹಿಸಿದ ಕವಿಮೇಳವೊಂದರಲ್ಲಿ ಯುವ ಮಣಿಪುರಿ ಕವಿಯೊಬ್ಬ ಮ್ಯಾನ್ಮಾರ್‌ಗೆ ಪ್ರೇಮಪತ್ರವೊಂದನ್ನು ಕವಿತೆ ರೂಪದಲ್ಲಿ ಬರೆದು, ‘ಭಾರತದಿಂದ ತನ್ನನ್ನು ಬಿಡಿಸು, ನಿನ್ನವನಾಗಿಸಿಕೊ’ ಎಂದು ಪ್ರಾರ್ಥಿಸಿದ್ದ. ಆದರೆ ಮಧ್ಯವಯಸ್ಕರು ಇನ್ನೂ ಭಾರತದ ಸಂವಿಧಾನದ ಚೌಕಟ್ಟಲ್ಲಿ ಸುಧಾರಣೆ ಬಯಸುತ್ತಿದ್ದಾರೆ. ನನ್ನ ಇನ್ನೊಬ್ಬ ಮಿತ್ರ ಕ್ಯೋಗೆನ್ ಹೇಳುತ್ತಾರೆ: ಯುವಕರ ಸಿಟ್ಟಿಗೆ ಕಾರಣಗಳಿವೆ. ಆದರೆ ಆ ಸಿಟ್ಟು ಪರಿಹಾರ ನೀಡಲಾರದು. ಮಣಿಪುರಕ್ಕೆ ಬೇಕಾದ್ದು ಅತಿ ಉಗ್ರ ಬದಲಾವಣೆಯಲ್ಲ. ಅದಕ್ಕೆ ಒಂದು ಸಾಂತ್ವನದ ಅಗತ್ಯವಿದೆ.
ಆದರೆ ಯುವಪೀಳಿಗೆಯವರು ಭಾರತದ ಸಂಸ್ಕೃತಿಯಿಂದ ದೂರ ಸಿಡಿಯತೊಡಗಿದ್ದಾರೆ. ಬಂಗಾಳಿ ಪ್ರಭಾವ ಹದಿನೆಂಟನೆ ಶತಮಾನದಲ್ಲಿ ಶುರುವಾದಾಗ ಬರಹದ ಅಭಿವ್ಯಕ್ತಿಗೆ ಬಂಗಾಳಿ ವರ್ಣಮಾಲೆಯ ಮೊರೆ ಹೋಗಲಾಯಿತು. ಈಗಿನ ಯುವ ಜನತೆ ಬಂಗಾಳಿ ವರ್ಣಮಾಲೆಯನ್ನು ಬಿಟ್ಟು ತಮ್ಮ ಮೆಥೇಯ್ ಬರವಣಿಗೆಯ ವ್ಯವಸ್ಥೆಗೆ ಉತ್ಸಾಹದಿಂದ ಹಿಂತಿರುಗಿದ್ದಾರೆ. ಕಲಾಕಾರರು, ಕವಿಗಳು, ರಂಗಕರ್ಮಿಗಳು ತಮ್ಮ ಹಿಂದುಯೇತರ ಅಸ್ಮಿತೆಯನ್ನು ಸೃಜನಶೀಲವಾಗಿ ಅರಸತೊಡಗಿದ್ದಾರೆ. ಹಿಂಸೆ ಮತ್ತು ತಲ್ಲಣಗಳ ಹುಟ್ಟುಗುರುತುಗಳನ್ನು ಧರಿಸಿಕೊಂಡ ಮಣಿಪುರದ ಸಾಮೂಹಿಕ ಸೃಜನಶೀಲ ಪ್ರತಿಭೆ ಅಸಾಧಾರಣ ತೆರನಾಗಿ ಮೈದಾಳುತ್ತಿದೆ.
ಭರತಖಂಡದ ಪ್ರದೇಶಗಳಲ್ಲಿ ಅತ್ಯಂತ ವಿಶಿಷ್ಟವಾದ ಮಣಿಪುರದ ಇಂದಿನ ಹೆಸರು ಅಪ್ಪಟ ಭಾರತೀಯವಾಗಿ ಕೇಳುತ್ತದೆ. ಆದರೆ ಆ ಪ್ರದೇಶದ ಮೂಲ ಹೆಸರು ಕಾಂಗ್ಲಾಪಾಕ್ ಅಥವಾ ಮೇಥೇಯಿಪಾಕ್ ಎಂದು. ಮಹಾಭಾರತದ ಚಿತ್ರಾಂಗದಾಳ ಕತೆಯ ಭಿತ್ತಿ ಮಣಿಪುರವಾಗಿದೆ. ತನ್ನ ದೇಶಾಟನೆಯ ಪರ್ವದಲ್ಲಿ ಮಣಿಪುರಕ್ಕೆ ಬಂದ ಅರ್ಜುನ ಮಣಿಪುರದ ಗಂಡುವೇಷಧಾರಿ ಚಿತ್ರಾಂಗದೆಯಲ್ಲಿ ಅನುರಕ್ತನಾಗಿ ಮೈಸಲಿಗೆ ಬೆಳೆಸಿ ಅವಳನ್ನು ಪುತ್ರವತಿಯನ್ನಾಗಿಸಿ ಅವಳಿಂದ ಅಗಲಿ ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ.
ಚಿತ್ರಾಂಗದೆಗೆ ಹುಟ್ಟಿದ ಮಗ ಬಬ್ರುವಾಹನ ವೀರಪುರುಷನಾಗಿ ಬೆಳೆದು ಮುಂದೊಮ್ಮೆ ತನ್ನ ತಂದೆ ಅರ್ಜುನನಿಗೆ ಯುದ್ಧರಂಗದಲ್ಲಿ ಎದುರಾಗಿ ತನ್ನ ತಂದೆಯನ್ನು ಸೋಲಿಸಿ, ಕೊಂದ ನಂತರ ತಂದೆಯನ್ನೇ ಕೊಂದೆನೆಂಬ ಅರಿವಾಗಿ ಪಶ್ಚಾತ್ತಾಪದಿಂದ ಆತ್ಮಹತ್ಯೆಗೆಳೆಸಿದಾಗ ತನ್ನ ಸಾಕುತಾಯಿ ಉಲೂಪಿ ನೀಡಿದ ರತ್ನದಬಲದಿಂದ ಅರ್ಜುನನ್ನು ಪುನರುಜ್ಜೀವಗೊಳಿಸಿ ಅವನೊಡನೆ ಹಸ್ತಿನಾಪುರಕ್ಕೆ ತೆರಳುತ್ತಾನೆ.
ಮಹಾಭಾರತದ ಈ ಉಪಾಖ್ಯಾನ ವನ್ನು ರವೀಂದ್ರನಾಥ ಟ್ಯಾಗೋರ್ ತಮ್ಮ ‘ಚಿತ್ರಾ’ ನಾಟಕದಲ್ಲಿ ಅವಿಸ್ಮರಣೀಯ ಶೃಂಗಾರ ಕಥಾನಕವನ್ನಾಗಿ ಬಿಡಿಸಿದ್ದಾರೆ. ಇದೊಂದು ಸುಂದರ ನೃತ್ಯರೂಪಕವಾಗಿ ವಿಶ್ವಪ್ರಸಿದ್ಧ. ಇದೇ ಕತೆಯನ್ನು ಕುವೆಂಪು ಅವರು ತಮ್ಮ ‘ಚಿತ್ರಾಂಗದಾ’ ಎಂಬ ಕಥನಕವನದಲ್ಲಿ ಇನ್ನೊಂದು ಬಗೆಯಲ್ಲಿ ಹೇಳಿದ್ದಾರೆ. ಬಬ್ರುವಾಹನನ ಕಾಳಗದ ಕತೆ ಯಕ್ಷಗಾನ ರೂಪಕಗಳ ಮೂಲಕ, ತೆಲುಗು ಮತ್ತು ಕನ್ನಡ ಸಿನಿಮಾಗಳ ರೂಪದಲ್ಲಿ ಜನಪ್ರಿಯ. ಈ ಕತೆಯಲ್ಲಿರುವ ಪ್ರತಿಲೈಂಗಿಕತೆಯ ಆಯಾಮವನ್ನು ಟ್ಯಾಗೋರ್ ಅವರ ಕಥಾನಕವನ್ನಾಧರಿಸಿ ಋತುಪರ್ಣೊಘೋಷ್ ನಿರ್ಮಿಸಿದ ‘ಚಿತ್ರಾಂಗದಾ’ ಸಿನಿಮಾದಲ್ಲಿ ಅನ್ವೇಷಿಸಲಾಗಿದೆ.
ನನಗೆ ಗೊತ್ತಿದ್ದ ಹಾಗೆ ಈ ಕತೆಯ ರಾಜಕೀಯ ಮಗ್ಗುಲಿಗೆ ಈ ಮಹನೀಯರಾರೂ ಒತ್ತು ನೀಡಿಲ್ಲ. ಮುಂದೊಮ್ಮೆ ಯಾರದೋ ಕಲೆಯ ಮೂಸೆಯಲ್ಲಿ ಅರ್ಜುನ, ಚಿತ್ರಾಂಗದೆ, ಬಬ್ರುವಾಹನರ ಕತೆ ಸ್ತ್ರೀಪ್ರಧಾನ ಸಂಸ್ಕೃತಿಯನ್ನು ಗಂಡುಸಂಸ್ಕೃತಿ ಹೇಗೆ ಶೋಷಿಸುತ್ತದೆ ಎಂಬುದರ ಕುರಿತ ಕತೆಯಾಗಿ ಮೂಡಬಹುದು. ಇಂದಿನ ಮಣಿಪುರದ ಸಮಾಜ- ಸಂಸ್ಕೃತಿಗಳಲ್ಲಿ, ಕಲೆಗಳಲ್ಲಿ ಮಣಿಪುರಿ ಪ್ರತಿಭೆ ಅರ್ಜುನನ ವಿರುದ್ಧ ಸೆಟೆದು ನಿಂತ ಬಬ್ರುವಾಹನನನ್ನು ಹೋಲುತ್ತಿದೆ. ಈ ಕತೆ ಮಹಾಭಾರತದ ಕತೆಯಂತೆ ಸುಖಾಂತ್ಯವಾಗಿ ಸಮರಸದಲ್ಲಿ ಕೊನೆಗೊಳ್ಳುತ್ತದೋ ಇಲ್ಲವೋ ಕಾದು ನೋಡೋಣ.
ಮಣಿಪುರದ ಅತ್ಯಂತ ಶಕ್ತವಾದ ರಂಗಭೂಮಿ ಸಮಕಾಲೀನ ಮಣಿಪುರದ ದಂದುಗಗಳನ್ನು ವಿವಿಧ ಬಗೆಗಳಲ್ಲಿ ಬಿಡಿಸಿಡುತ್ತಿದೆ. ಮಣಿಪುರದ ರಂಗನಿರ್ದೇಶಕ ರತನ್ ಥಿಯಾಮ್ ಅವರು ತಮ್ಮ ಮಹಾಭಾರತ ಆಧಾರಿತ ರಂಗ ನಿರ್ಮಿತಿಗಳಲ್ಲಿ, ಅಶೋಕನ ಕತೆಯಾಧಾರಿತ ‘ಉತ್ತರ ಪ್ರಿಯದರ್ಶಿಕಾ’ ನಾಟಕದಲ್ಲಿ ಹಿಂಸ್ರ ವಾತಾವರಣದಲ್ಲಿ ಅಸ್ತಿತ್ವದ, ಉಳಿವಿನ ಸವಾಲುಗಳನ್ನು ಅನ್ವೇಷಿಸಿದ್ದಾರೆ.
ಮಣಿಪುರದ ವರ್ಣರಂಜಿತವಾದ, ರಸವತ್ತಾದ ಸಾಂಸ್ಕೃತಿಕ ಅಂಶಕ್ಕಿಂತ ಅಲಂಕೃತವಾದ ಅವರ ಶೈಲಿಯು ಸಮನ್ವೀಕರಣ ದೃಷ್ಟಿಯಿಂದ ಪ್ರೇರಿತವಾಗಿರುವುದರಿಂದ ಭಾರತದಾದ್ಯಂತ, ವಿಶ್ವದಾದ್ಯಂತ ಜನಪ್ರಿಯವಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗೋತ್ಸವಗಳಲ್ಲಿ ಸರ್ವಜನಾಕರ್ಷಕವಾಗಿ ರಂಜಿಸುತ್ತವೆ.
ಆದರೆ ಮಣಿಪುರದ ಇನ್ನೊಬ್ಬ ಖ್ಯಾತ ನಿರ್ದೇಶಕ ಕನ್ಹೈಲಾಲ್ ಅವರು ತಮ್ಮ ರಂಗಕೃತಿಗಳಲ್ಲಿ ಇಂದಿನ ಮಣಿಪುರದ ಸನ್ನಿವೇಶದ ಸಂಘರ್ಷಾತ್ಮತೆಗೆ ಒತ್ತು ನೀಡುತ್ತಾರೆ. ಎಪ್ಪತ್ತರ ದಶಕದಲ್ಲಿ ಕರ್ನಾಟಕವನ್ನೂ ಒಳಗೊಂಡು ಭಾರತದ ಹಲವೆಡೆಗಳಲ್ಲಿ ಪ್ರಸ್ತುತಗೊಳಿಸಲ್ಪಟ್ಟ ಅವರ ‘ಪೆಬೆತ್’ ನಾಟಕ ತಾಯಿಹಕ್ಕಿಯೊಂದು ಪರಕೀಯ ಹಲ್ಲೆಗೊಳಗಾದ ತನ್ನ ಮುದ್ದುಮರಿ
ಗಳನ್ನು ಹೇಗೆ ಸಂರಕ್ಷಿಸುತ್ತದೆಂಬುದನ್ನು ಮನೋಜ್ಞವಾಗಿ ಚಿತ್ರಿಸಿತು. ಇಲ್ಲಿ ಹಲ್ಲೆಕೋರನನ್ನು ಬಂಗಾಳಿ ವೈಷ್ಣವನಾಗಿ ಕಲ್ಪಿಸಿಕೊಳ್ಳಲಾಗಿದೆ.
ಮುಂದೆ ಮಹಾಶ್ವೇತಾ ದೇವಿಯವರ ‘ದೋಪ್ತಿ’ ಕತೆಯಾಧಾರಿತ ಅವರ ಬಹುಚರ್ಚಿತ ನಾಟಕ ಹೊರಗಿನ ಸೇನಾಪಡೆಯವರು ತನ್ನ ಜನಾಂಗದವರ ಮೇಲೆ ಹೇರುವ ಹಿಂಸೆಯನ್ನು ಹೋರಾಟಗಾರ್ತಿಯೊಬ್ಬಳ ಮೇಲೆ ಮಿಲಿಟರಿ ಧೂರ್ತರು ಮಾಡುವ ಸಾಮೂಹಿಕ ಮಾನಭಂಗವನ್ನಾಗಿ ಚಿತ್ರಿಸಲಾಯಿತು. ಈ ನಾಟಕದ ಕೊನೆಯ ದೃಶ್ಯದಲ್ಲಿ ಬರ್ಬರ ಗ್ಯಾಂಗ್‌ರೇಪ್‌ಗೆ ಶಿಕಾರಿಯಾದ ಹೆಂಗಸೊಬ್ಬಳು ಕೊನೆಗೆ ತನ್ನ ಕೊನೆಯ ಅರಿವೆಗಳನ್ನು ಕಳಚಿಹಾಕಿ ತನ್ನ ಪೂರ್ಣನಗ್ನತೆಯಿಂದ ಸೇನಾಪತಿಯನ್ನು ಎದುರಿಸಿ ಅವನ ಹುಂಬ ಗಂಡುತನವನ್ನು ಬುಡಸಮೇತ ಅಲುಗಿಸುತ್ತಾಳೆ.
ಈ ನಾಟಕ ಮಣಿಪುರದಲ್ಲಿ ಹಲವು ಟೀಕೆಗಳಿಗೆ ಗುರಿಯಾಯಿತು. ಹಿಂಸೆಯ ವಾತಾವರಣದಲ್ಲಿ ಕನ್ಹೈ, ಮಣಿಪುರಿ ಮಹಿಳೆಯ ನಗ್ನತೆಯನ್ನು ವಿಜೃಂಭಿಸಿ ಮಣಿಪುರದ ಮರ್ಯಾದೆಗೆ ಧಕ್ಕೆಯುಂಟು ಮಾಡಿದ್ದಾರೆಂದು ಅನುಮಾನಿಸಲಾಯಿತು. ಆದರೆ ಕೆಲ ವರ್ಷಗಳ ಬಳಿಕ ದಿನೇ ದಿನೇ ಹೆಚ್ಚುತ್ತಿದ್ದ ಮಾನಭಂಗದ ಕೃತ್ಯಗಳನ್ನು ವಿರೋಧಿಸಲು ಮಣಿಪುರದ ಹೆಂಗಸರು ಅಸ್ಸಾಂ ರೈಫಲ್ಸ್‌ನ ಮುಖ್ಯ ಕಚೇರಿಯ ಮುಂದೆ ನಿರ್ವಾಣವಾಗಿ ನಿಂತು ಪ್ರತಿಭಟಿಸಿದಾಗ ‘ದೋಪ್ತಿ’ ನಾಟಕದ ಕೊನೆಯ ದೃಶ್ಯ ವಾಸ್ತವತೆಯ ರಂಗದಲ್ಲಿ ಪುನರ್ ನಿರ್ಮಾಣವಾಯಿತು. ಮೊನ್ನೆ ಇದೇ ನಾಟಕದ ರಂಗಪ್ರಸ್ತುತಿ ನಡೆದಾಗ ಹಿಂದೆ ಈ ನಾಟಕವನ್ನು ಕಠೋರವಾಗಿ ಟೀಕಿಸಿದ್ದ ಮಣಿಪುರದ ಪ್ರೇಕ್ಷಕಗಣ ಸಜಲನಯನರಾಗಿ ಎದ್ದು ನಿಂತು ಕರತಾಡನ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಮಣಿಪುರದ ಇನ್ನೊಬ್ಬ ಪ್ರತಿಭಾವಂತ ನಿರ್ದೇಶಕ ಲೋಕೇಂದ್ರ ಆರಂಬಮ್ ಮಣಿಪುರದ ಹಿಂಸಾ ವಾತಾವರಣವನ್ನು ಇನ್ನೊಂದು ಬಗೆಯಲ್ಲಿ ತಮ್ಮ ‘ಮ್ಯಾಕ್‌ಬೆತ್ ’ ರೂಪಾಂತರದಲ್ಲಿ ಚಿತ್ರಿಸುತ್ತಾರೆ. ಮಣಿಪುರದಲ್ಲಿ ಮಾನಭಂಗಗಳನ್ನೆಸಗಿದವರು ಹೊರಗಿನ ಮಿಲಿಟರಿಯವರು ಮಾತ್ರವಲ್ಲ. ಸ್ವತಃ ಮಣಿಪುರಿಗಳೂ ಇಂಥಾ ಕರಾಳ ಕೃತ್ಯಗಳನ್ನೆಸಗುವ ವಿಪರ್ಯಾಸವನ್ನು ಅವರು ಚಿತ್ರಿಸಿದರು.
ಮಣಿಪುರ ಸರ್ಕಾರದ ಮಂತ್ರಿಕುವರನೊಬ್ಬ ಆದಿವಾಸಿ ಹೆಣ್ಣುಮಗಳನ್ನು ಮಾನಭಂಗಗೊಳಿಸಿ ತನ್ನ ರಾಜಕೀಯಪ್ರಭಾವದಿಂದ ಕಾನೂನು ಸಜೆಯನ್ನು ತಪ್ಪಿಸಿಕೊಂಡನಂತೆ. ಮಣಿಪುರದ ಮೇಥೇಯ್ ಜನಾಂಗದ ಏಳು ಮಂದಿ ಪ್ರಾಚೀನ ದೇವತೆಗಳು ಅವನನ್ನು ಶಿಕ್ಷಿಸುವರೆಂಬ ನಂಬುಗೆ ಈ ನಾಟಕಕ್ಕೆ ಪ್ರೇರಣೆಯಾಯಿತು. ಈ ‘ಮ್ಯಾಕ್‌ಬೆತ್’ ಅವತರಣಿಕೆ ಷೇಕ್ಸ್‌ಪಿಯರನ ನಾಟಕದ ಕತೆಯನ್ನು ಹಿಂದುಮುಂದಾಗಿಸುತ್ತದೆ. ಅಪರಾಧಿಯಾದ ಮ್ಯಾಕ್‌ಬೆತ್‌ನ ಸಜೆಯಿಂದ ಶುರುವಾಗಿ ಅವನ ಅಪರಾಧವಾದ ಕೊಲೆಯಿಂದ ಕೊನೆಯಾಗುತ್ತದೆ. ಇಲ್ಲಿ ಮ್ಯಾಕ್‌ಬೆತ್‌ನ ಮೂವರು ಮಾಟಗಾತಿಯರಿಗೆ ಬದಲಾಗಿ ಏಳುಮಂದಿ ದೇವತೆಗಳಿದ್ದಾರೆ.
ಮಣಿಪುರದ ಜಟಿಲ ರಾಜನೈತಿಕ ವಾತಾವರಣ ಪ್ರತ್ಯೇಕತಾವಾದಿಗಳ ಅಥವಾ ಸಮನ್ವಯವಾದಿಗಳ ದೃಷ್ಟಿಕೋನಗಳಷ್ಟು ಸರಳವಲ್ಲವೆಂಬ ಸತ್ಯವನ್ನು ಆ ಸಮುದಾಯದ ಪ್ರಧಾನ ಅಭಿವ್ಯಕ್ತಿಗಳಲ್ಲೊಂದಾಗಿರುವ ರಂಗಭೂಮಿ ಸಾಬೀತುಗೊಳಿಸುತ್ತದೆ. ಮೂವರು ಪ್ರತಿಭಾವಂತ ರಂಗನಿರ್ದೇಶಕರು ಸಮಕಾಲೀನ ದಂದುಗಗಳ ಅಗ್ನಿಕೊಂಡ ಹಾಯುವುದಕ್ಕೆ ತಮ್ಮ ಪ್ರೇರಣೆಗಳನ್ನು ಇಂದಿನ ಸವಾಲುಗಳ ನಡುವೆಯೂ ತಮ್ಮ ಪಾರಂಪರಿಕ ಮೌಲ್ಯಗಳಲ್ಲೇ ಹುಡುಕುತ್ತಿದ್ದಾರೆ.
ಕನ್ಹೈಲಾಲ್ ಅವರ ಕರೆಯೋಲೆಯ ಮೇರೆಗೆ ಅವರ ನಾಕು ದಿವಸಗಳ ರಂಗಪ್ರಯೋಗ ವಿವರಣೆಯನ್ನು ವೀಕ್ಷಿಸಲು ಇಂಫಾಲ್‌ಗೆ ಹಲವು ಮಂದಿ ಭಾರತದ ಮತ್ತು ಹೊರಗಿನ ರಂಗಕರ್ಮಿಗಳ ಜೊತೆಗೆ ಹೋಗಿದ್ದ ನಾನು ನಮ್ಮ ಮತ್ತು ಮಣಿಪುರಿಗಳ ಯುಗಾದಿಯ ದಿವಸ ಅಲ್ಲಿದ್ದಾಗ ಈ ಯುಗಾದಿ ನಮಗೆ ಹಾಗೂ ಮಣಿಪುರಿಗಳಿಗೆ ಹಿಂಸೆ ಮತ್ತು ಶೋಷಣೆಗಳನ್ನು ದಾಟಿದ ಹೊಸಯುಗದ ಮುನ್ನುಡಿಯಾಗಲೆಂದು ಮಣಿಪುರದ ಎಲ್ಲ ಬುಡಕಟ್ಟು ದೇವತೆಗಳಲ್ಲಿ ಮೊರೆಯಿಟ್ಟೆ.
ಆಗವರು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು: ‘ಇಡೀ ಪೃಥ್ವಿಯ ಯುಗಾದಿ ಬರುವವರೆಗೂ ಪ್ರತ್ಯೇಕ ಜನಾಂಗಗಳ ಯುಗಾದಿಗಳು ಕೇವಲ ಆಚರಣೆಗಳು.’
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.