ಇಂಡೊನೇಷ್ಯಾದ ಹಳೆಯ ರಾಜಧಾನಿ ಬಾಂಡುಂಗ್. ಅಲ್ಲಿ ಮುಂದಿನ ವರ್ಷ ನಡೆಯಲಿರುವ ಏಷ್ಯಾ-– ಆಫ್ರಿಕಾ- ಶಾಂತಿ ಸಮಾವೇಶದ ೬೦ನೇ ವರ್ಷದ ಆಚರಣೆಗೆ ಈಗಾಗಲೇ ಸಿದ್ಧತೆ ಶುರುವಾಗಿಬಿಟ್ಟಿದೆ. ೧೯೫೫ರಲ್ಲಿ ನಡೆದ ಆ ಸಮಾವೇಶದಲ್ಲಿ ನೆಹರೂ ಅವರನ್ನೂ ಒಳಗೊಂಡು ಇಂಡೊನೇಷ್ಯಾ, ಭಾರತ, ಪಾಕಿಸ್ತಾನ, ಮ್ಯಾನ್ಮಾರ್ ಮತ್ತು ಶ್ರೀಲಂಕಾ ದೇಶಗಳ ನಾಯಕರು, ಬಿಳಿಯರ ದಬ್ಬಾಳಿಕೆಯಿಂದ ಜಗತ್ತನ್ನು ಬಿಡುಗಡೆಗೊಳಿಸಲು ಇಚ್ಛಿಸಿದ್ದರು. ಅಂದಿನ ಇಂಡೊನೇಷ್ಯಾದ ಅಧ್ಯಕ್ಷ ಸುಕರ್ಣೊ ‘ಏಷ್ಯಾ ಮತ್ತು ಆಫ್ರಿಕಾದ ನವಯುಗ ಆರಂಭವಾಗಿದೆ’ ಎಂದು ಆಗ ಘೋಷಿಸಿದ್ದರು.
ಈ ಸಂದರ್ಭದಲ್ಲಿ ಬಾಂಡುಂಗ್‌ನ ವಿಶ್ವವಿದ್ಯಾಲಯದ ೫೦ನೇ ಹುಟ್ಟುಹಬ್ಬ, ಮತ್ತದರ ಮಿತ್ರಸಂಸ್ಥೆಯಾದ ಜಪಾನಿನ ‘ಒಸಾಕಾ ಇನ್ ದ ವರ್ಲ್ಡ್’ ಕಳೆದ ವಾರದ ಕೊನೆಗೆ ಹಮ್ಮಿಕೊಂಡಿದ್ದ ವಿಶ್ವ ಸಾಂಸ್ಕೃತಿಕ ಮೈತ್ರಿ ಸಮಾವೇಶದಲ್ಲಿ ಭಾಗವಹಿಸಲು ನಾನು ಬಾಂಡುಂಗ್‌ನಲ್ಲಿ ಬಂದಿಳಿದಾಗ ಕೇರಳದ ಕಣ್ಣಾನೂರಿನಲ್ಲೋ ತ್ರಿಶೂರಿನಲ್ಲೋ ಬಂದಿಳಿದ ಹಾಗೆ ತೋರತೊಡಗಿತು.
ಆ ಸಮಾವೇಶದ ಬಗ್ಗೆಯಾಗಲಿ, ಆ ನಗರದ ಬಗ್ಗೆಯಾಗಲಿ ನಾನಿಲ್ಲಿ ಬರೆಯ ಹೊರಟಿಲ್ಲ. ಇಂತಹ ಸಮಾವೇಶಗಳ ಸದುದ್ದೇಶದ ಬಗ್ಗೆ ನನಗೆ ಅತಿಯಾದ ಅಗೌರವವೇನೂ ಇಲ್ಲ. ಅವೆಲ್ಲಕ್ಕಿಂತಲೂ ಮುಖ್ಯವೆನಿಸಿರುವ ಫೈಜಲ್ ಎಂಬ ಟೂರಿಸ್ಟ್ ಗೈಡ್‌ನ ಬಗ್ಗೆ ಬರೆಯುತ್ತಿದ್ದೇನೆ.
ಫೈಜಲ್ ನನ್ನ ಬದುಕಿನಲ್ಲಿ ಅವತರಿಸಿದ್ದು ಇದೇ ಅಕ್ಟೋಬರ್ ೩೦ರ ಪೂರ್ವಾಹ್ನ ೧೧.೪೯ಕ್ಕೆ. ಬಾಂಡುಂಗ್‌ನ ಪಕ್ಕದ ಅಗ್ನಿಪರ್ವತದ ಅವಶೇಷವನ್ನು ದರ್ಶಿಸಲು ನಾನು ಹೋದ ಸಂದರ್ಭದಲ್ಲಿ. ಒಂದಕ್ಷರ ಇಂಗ್ಲೀಷೂ ಬರದ ಊಜೂ ಎಂಬ ಚಾಲಕ, ಒಂದಕ್ಷರ ಇಂಡೊನೇಷ್ಯಾ ಭಾಷೆಯೂ ಬಾರದ ನನ್ನನ್ನು ಐರಾವತದಂಥ ತನ್ನ ಟ್ಯಾಕ್ಸಿಯಲ್ಲಿ ಅಲ್ಲಿಗೆ ಕರೆದೊಯ್ದಿದ್ದ. ಎಲ್ಲ ಮಹತ್ತರ ಘಟನೆಗಳ ಮುಂಚಿತವಾಗಿ ಆಗುವ ಹಾಗೆ ನಮಗೆ ಅಂದಾದ ಅಡಚಣೆಯೆಂದರೆ ಬಾಂಡುಂಗ್‌ನ ಸರ್ವನಿಯಂತ್ರಣಮುಕ್ತ ಟ್ರಾಫಿಕ್ಕು.
ನಿಯತಿಯನ್ನು ಬದಲಿಸುವ ಶಕ್ತಿ ಬಾಂಡುಂಗ್‌ನ ಟ್ರಾಫಿಕ್ಕನ್ನೂ ಒಳಗೊಂಡು ಯಾವುದಕ್ಕೂ ಇಲ್ಲವಾಗಿ ನಾನು ಫೈಜಲ್‌ನನ್ನು ಸಂಧಿಸಲು ಸಕಾಲದಲ್ಲಿ ಗಿರಿ ಮೇಲಿನ ದಾವಾನಲ ಮುಖದ ಮುಂದೆ ನಿಂತಿದ್ದೆ. ಅದನ್ನು ಕಾಣುವ ಸೌಭಾಗ್ಯ ನನ್ನದೊಬ್ಬನದೇ ಆಗಬಹುದೆಂದು ಭ್ರಮಿಸಿದ್ದೆ. ಆದರೆ ಅಲ್ಲಿ ನನಗಿಂತ ಮೊದಲೇ ನೂರಾರು ಜನ ಪ್ರವಾಸಿ ಮಹೋದಯರು ನೆರೆದಿದ್ದರು. ಸುಪ್ತವಾಗಿದ್ದರೂ ಇನ್ನೂ ಹೊಗೆ ಯಾಡುತ್ತಿರುವ, ರಂಜಕದ ವಾಸನೆಯಿಂದ ವಾತಾವರಣವನ್ನು ತುಂಬುತ್ತಿದ್ದ ಈ ಪರ್ವತ ಪ್ರಳಯಕಾಲ ರುದ್ರನ ಬೃಹತ್ ವಿಭೂತಿ ಬಟ್ಟಲ ಹಾಗೆ ಕಾಣುತ್ತಿರುವ ಆ ಕೌತುಕವನ್ನು ನೋಡಿ ಆನಂದಿಸುವ ಬದಲು, ನೆರೆದಿದ್ದ ಆ ಮಂದಿ ಪಕೋಡಾ ತಿನ್ನುವ, ಪರಸ್ಪರರ ವದನಾರವಿಂದಗಳ ಭಾವಚಿತ್ರೋತ್ಸವಕ್ಕೆ ಆ ಬೃಹತ್ ನೋಟವನ್ನು ಕೇವಲ ರಂಗಸಜ್ಜಿಕೆ ಮಾಡಿಕೊಳ್ಳುವ ಯತ್ನದಲ್ಲಿದ್ದರು. ದಾವಾನಲದ ಮುಖವಾದರೋ ತನ್ನ ನಿಜಾನಂದದಲ್ಲಿ ಮುಳುಗಿದ್ದು ತನ್ನ ಎರಡುಮೂರು ರಂಜಕದ ಸಿಗರೇಟುಗಳನ್ನು ಸೇದತೊಡಗಿತ್ತು.
ಲವಂಗ ಮತ್ತು ಸ್ಯಾಕರೀನ್ ಸಹಿತವಾದ ಸಂಪೋರ್ಣ (sampoerna) ಎಂಬ ಇಂಡೊನೇಷ್ಯನ್ ಸಿಗರೇಟನ್ನೆಳೆಯುತ್ತಾ ಕಡುಬಿಸಿಲಿನಲ್ಲಿ ನಿಂತು, ಒಂದಾದರೂ ವಿದೇಶಿ ಪ್ರವಾಸಿ ಮಿಕ ಸಿಗುತ್ತದೋ ಇಲ್ಲವೋ ಎಂಬುದರ ಬಗ್ಗೆ ಧ್ಯಾನಲೀನನಾಗಿದ್ದ ಫೈಜಲ್ ಎಂಬ ನಮ್ಮ ಕಥಾನಾಯಕನಿಗೆ ನನ್ನನ್ನು ಸಂಧಿಸುವ ನಿರೀಕ್ಷೆಯಿರಲಿಲ್ಲ. ದಾವಾನಲದ ಮುಖದೊಂದಿಗೆ ಆಳ ಯೋಚನೆ ಮಾಡುತ್ತಿದ್ದ ನನಗೆ ಅವನನ್ನು ದರ್ಶಿಸುವೆನೆಂಬ ಅಂದಾಜೂ ಇರಲಿಲ್ಲ. ಅಚಾನಕ್ಕಾಗಿ ನಮ್ಮಿಬ್ಬರ ಕಣ್ಣುಗಳು ಸಂಧಿಸಿದವು.
ತನ್ನ ಇಂಡೊನೇಷ್ಯನ್ ಚೂರುಪಾರು ಇಂಗ್ಲಿಷಿನಲ್ಲಿ ಅವನೇ ಮಾತಿಗಿಳಿದ. ನಾನಾವ ದೇಶದವನೆಂದು ವಿಚಾರಿಸಿದ. ‘ಇಂಡಿಯಾ’ ಎಂದರೆ ಅವನಿಗೆ ನೆನಪಾದದ್ದು ಗಾಂಧಿ, ಟ್ಯಾಗೋರ್, ಚಾಚಾ ನೆಹರೂ, ಸಿ.ವಿ.ರಾಮನ್, ಗೊಮ್ಮಟೇಶ್ವರ, ಹಿಮಾಲಯ, ದೇವತೆಗಳ ಗಣ, ಭಗವಾನ್ ಬುದ್ಧ ಯಾರೂ ಅಲ್ಲ; ‘ಓ ಶಾರುಖ್ ಖಾನ್’ ಎಂದುಚ್ಚರಿಸಿದ. ಪ್ರವಾಸಿಗಳ ಮಾರ್ಗದರ್ಶಿಯಾಗಿರುವ ತನಗೆ ಎರಡು ದಶಕದ ಗಾಢ ಅನುಭವ ಇದ್ದು, ನಾನೊಪ್ಪಿದರೆ ನನ್ನ ಮಾರ್ಗದರ್ಶಿ ಆಗಲು ಇಚ್ಛಿಸುವುದಾಗಿ ಹೇಳಿದ. ಹಣ ಎಷ್ಟು? ಎಂದು ಕೇಳಲಾಗಿ ‘ಒಂದು ಗಂಟೆಗೆ ಇಪ್ಪತ್ತು ಸಾವಿರ ರುಪೈಯ- (ಇಂಡೊನೇಷ್ಯಾದ ಹಣ)’ ಎಂದು ಉತ್ತರಿಸಿದ. ನನಗವನ ಬಗ್ಗೆ ಅನುಮಾನ. ಅದವನಿಗೆ ಗೊತ್ತಾಯಿತು. ಬನ್ನಿ, ನಮ್ಮ ಟೂರಿಸ್ಟ್ ಅಫೀಸಿನಲ್ಲಿ ವಿಚಾರಿಸಿ ಎಂದು ಸದರಿ ಕೇರಿಗೆ ಕರೆದೊಯ್ದ. ಅಲ್ಲೊಬ್ಬ ಕಡುಗೆಂಪಿನ ಇಂಡೊನೇಷ್ಯನ್ ಸುಂದರಿ ಕೂತಿದ್ದಳು. ಅಮೆರಿಕನ್ ಇಂಗ್ಲಿಷಿನಲ್ಲಿ ಸ್ವಾಗತಿಸಿದಳು. ಅವನು ಸೂಚಿಸಿದ ಮೊತ್ತವನ್ನು ದೃಢೀಕರಿಸಿದಳು. ಕಚೇರಿಯ ಅವಳ ಸಹಾಯಕ ಬಂದು ಕಾಂಪ್ಲಿಮೆಂಟರಿ ಅನ್ನುತ್ತಾ ಮುಗುಳುನಗೆಯಿಂದ ನನಗೊಂದು ಹಾಲಿಲ್ಲದ ಚಹಾ ನೀಡಿದ. ಪೂರ್ತಿ ನೋಡಲು ಎಷ್ಟು ಹೊತ್ತು ಬೇಕೆಂದು ಕೇಳಿದೆ. ಗಂಟೆಯೊಂದರಲ್ಲಿ ಮುಗಿಸಬಹುದೆಂದ. ನಂಬಿದೆ. ಹಣ ನೀಡಿ ರಸೀತಿ ಪಡೆದುಕೊಂಡೆ.
ನಾವಿದ್ದ ಜಾಗದಿಂದ ನಾನೂರು ಅಡಿ ಕೆಳಗಿಳಿದರೆ ಇನ್ನೊಂದು ಅದ್ಭುತ ನಮಗಾಗಿ ಕಾದಿದೆಯೆಂದ. ಅದು ಆ ಪ್ರದೇಶದ ಎರಡನೇ ದಾವಾನಲ ಮುಖ.
ಸರಿ, ಹೊರಟೆವು. ಹೊರಡುವ ಮೊದಲು ಮರದ ಬಟ್ಟಲು ತಯಾರಿಸುವ ಕುಶಲಕರ್ಮಿಯ ಬಳಿ ಕರೆದೊಯ್ದು ನನ್ನನ್ನು ಪರಿಚಯಿಸಿದ. ನನಗೆ ಮಾರಾಟ ಮಾಡಿಸಿ ತನ್ನ ಕಮಿಷನ್ ಹೊಡೆಯುವ ಹುನ್ನಾರವೆಂದು ಸ್ವಲ್ಪ ಟ್ಯೂಬ್ಲೈಟಾದ ನನಗೂ ಗೋಚರವಾಯಿತು. ಉಪಾಯವಾಗಿ ಬಿಡಿಸಿಕೊಂಡೆ. ನಮ್ಮ ಅವರೋಹಣ ಶುರುವಾಯಿತು. ಕೆಳಗಿನ ದಾವಾನಲ ಮುಖದ ಬದಿಯ ರಸ್ತೆಯಲ್ಲಿ ಕಾಯುವಂತೆ ಹೇಳಿ ನಮ್ಮ ಡ್ರೈವರನನ್ನು ಕೆಳಗೆ ಕಳಿಸಿದೆವು.
ಆ ಪರ್ವತದ ಕಡಿದಾದ, ಜಾರುವ ಓತಪ್ರೋತ ಸೋಪಾನಗಳನ್ನು ಚಂಗನೆ ನೆಗೆಯುತ್ತಾ ಇಳಿಯಬಲ್ಲವನಾಗಿದ್ದ ತೆಳುಮೈನ ಫೈಜಲ್. ಮೊದಲು ಹಾಗಿದ್ದ ನಾನಾದರೋ ಈಗ ಡಬಲ್ಡೆಕರ್ ಗಣಪತಿ ಆಗಿಬಿಟ್ಟಿದ್ದೇನೆ. ಆನೆಯೊಂದು ಜಿಂಕೆಯ ಜೊತೆ ಕಡಿದಾದ ಇಳಿಜಾರನ್ನಿಳಿಯುವ ಹಾಗಿತ್ತು ನಮ್ಮ ಸಂಗಾತ. ಅಷ್ಟು ಹೊತ್ತಿಗೆ ಅವನ ಗೆಣೆಯರಿಬ್ಬರು ಪ್ರತ್ಯಕ್ಷವಾದರು. ಐದೇ ಐದು ನಿಮಿಷಗಳ ಅಲ್ಪಾವಧಿಯಲ್ಲಿ ನನ್ನ ಮಂಡಿಗಳು ಅಗ್ನಿಪರ್ವತ ಸ್ಫೋಟದಿಂದ ವಿಚಲಿತವಾದ ಸಮೀಪದ ವೃಕ್ಷಗಳಂತೆ ತತ್ತರಿಸುವುದನ್ನೇ ಕಾಯುತ್ತಿದ್ದ ಆ ಈರ್ವರು ಮಹನೀಯರು ಅನಿರೀಕ್ಷಿತ ಆಪದ್ಬಾಂಧವರಂತೆ ಒದಗಿಬಂದು ನನ್ನ ಎರಡೂ ಕೈಗಳನ್ನು ಹಿಡಿದು ಮೆಟ್ಟಿಲು ಮೆಟ್ಟಿಲಾಗಿ ಇಳಿಸತೊಡಗಿದರು. ಅವರ ಮಾನವೀಯ ನೆರವಿಗೆ ನಾನು ಕೃತಾರ್ಥನಾದೆ. ನನ್ನ ಕಾಲುಗಳು ಮಾತ್ರವಲ್ಲ, ತೊಡೆಗಳೂ ಪದ ಹೇಳತೊಡಗಿದವು. ಇಳಿಯುವುದು ಹೆಚ್ಚುಹೆಚ್ಚು ಕಠಿಣವಾಗತೊಡಗಿತು. ಪ್ರಾಣವಾಯುವು ಎತ್ತೆತ್ತಲೋ ತಿರುಗತೊಡಗಿತು. ನನಗೆ ಸುಸ್ತಾದಾಗಲೆಲ್ಲಾ ಕೂರಿಸಿ ವಿಶ್ರಾಂತಿ ಮಾಡಿಸುತ್ತಿದ್ದರು. ಇನ್ನೇನು ಮುಗಿದೇ ಬಿಟ್ಟಿತು ಎಂದು ಒಂದೂವರೆ ಗಂಟೆ ಸುಳ್ಳು ಹೇಳುತ್ತಾ ಬಂದಿದ್ದರು. ಹಾದಿಯಲ್ಲಿದ್ದ ತಗಡಂಗಡಿಗಳಿಂದ ಕೋಕೋಕೋಲಾ ಕುಡಿಯಿರೆಂದು ಬಲವಂತ ಮಾಡುತ್ತಿದ್ದರು. ನಾನು ಒಲ್ಲೆನೆಂದರೂ ಪದೇಪದೇ ಪೀಡಿಸುತ್ತಿದ್ದರು. ನಾನು ಪ್ರತಿ ಸಲ ಉಪಾಯವಾಗಿ ತಪ್ಪಿಸಿಕೊಳ್ಳುತ್ತಿದ್ದೆ. ಇನ್ನೇನು ಆ ಚಂಡಬಿಸಿಲಿನಲ್ಲಿ ನನ್ನ ಕಾಲೊಂದೆಸೆ ಕೈಯೊಂದೆಸೆಯಾದೀತು ಎನಿಸತೊಡಗುವ ಹೊತ್ತಿಗೆ ಸಮತಲಕ್ಕೆ ಬಂದು ತಲುಪಿದೆವು. ಕೆಳಗಿನ ಕೊಳ್ಳದಲ್ಲಿ ರುದ್ರೋಪಮವಾದ ಇನ್ನೊಂದು ದಾವಾನಲ ಮುಖ ಹಠಾತ್ತನೆ ಬಂದಡರಿದ ಮಬ್ಬಿನ ತೆರೆ ಹಿಂದೆ ಕಾಣತೊಡಗಿತ್ತು. ನನ್ನ ದಣಿವಿನ ಕಾರಣ ನಾನಲ್ಲೊಂದು ಮರದ ಬೆಂಚಿನ ಮೇಲೆ ಕುಸಿದು ಕೂತುಬಿಟ್ಟೆ. ಆ ಜಾಗಕ್ಕೆ ನಾನು ಇನ್ನೂ ಮುನ್ನೂರಡಿ ಕೆಳಗಿಳಿಯ ಬೇಕಾಗಿರುವುದರಿಂದ ಇನ್ನೂ ಇಳಿಯುವ ತಾಕತ್ತು ನನಗಿದೆಯಾ ಎಂದು ವಿಚಾರಿಸಿದರು. ನಾವಿದ್ದ ಜಾಗದಿಂದ ಅನತಿ ದೂರದಲ್ಲಿರುವ ರಸ್ತೆಯಲ್ಲಿ ನನ್ನ ಡ್ರೈವರ್ ಊಜೋ ಕಾದಿರುತ್ತಾನೆ ಎಂದರು. ಮುನ್ನೂರಡಿ ಕೆಳಗೆ ಅಘೋರಿ ಬಾಬಾಗಳ ನೆಲೆಯಂತೆ ಕಾಣುತ್ತಿದ್ದ ದಾವಾನಲ ಮುಖಕ್ಕೆ ದೂರದಿಂದಲೇ ಕೈಮುಗಿದು ಕಾರಿನ ಬಳಿ ನನ್ನನ್ನು ಕರೆದೊಯ್ಯುವಂತೆ ವಿನಂತಿಸಿದೆ. ಕೋಕೋಕೋಲಾ ಕುಡಿಯಿರಿ, ಜ್ಯೂಸ್ ಕುಡಿಯಿರಿ ಎಂದು ಮತ್ತೆ ಜಬರ್ದಸ್ತಿ ಮಾಡತೊಡಗಿದರು. ಮತ್ತೆ ನಿರಾಕರಿಸಿದೆ. ಮತ್ತೆ ಮತ್ತೆ ಇನ್ನೇನು ಜಾರಿ ಮುಗ್ಗರಿಸಿ ಮುಖ ಮೂತಿ ಒಡೆದುಕೊಳ್ಳಲಿದ್ದ ನನ್ನ ಸ್ಥೂಲ ಕಾಯವನ್ನು ಬೀಳದಂತೆ ನಿಗಾ ಮಾಡಿ ಸುರಕ್ಷಿತವಾಗಿ ಈ ತನಕ ಕರೆತಂದಿದ್ದ ಕೈ, ತೋಳುಗಳುಳ್ಳ ಆ ಮೂವರು ಸುಳ್ಳರೆಂದೂ ಸುಲಿಗೆಗಾರರೆಂದೂ ನಂಬುವುದು ಕಷ್ಟವಾಗಿತ್ತು.
‘ನಿನ್ನ ಗೆಣೆಕಾರರು ನನಗೆ ತುಂಬಾ ಸಹಾಯ ಮಾಡಿದರು. ಅವರಿಗೇನಾರಾ ಹಣ ಕೊಡಬೇಕಲ್ಲ’ ಅಂತ ನಾನೆಂದಾಗ ‘ಅದೇನೂ ಇಲ್ಲ ಬಿಡಿ. ನೀವು ನಮ್ಮ ಅಂಕಲ್ಹಾಗೆ. ನಿಮಗೆ ಸಹಾಯ ಮಾಡಲಿಕ್ಕೆ ಬಂದರಷ್ಟೆ’ ಎಂದ ಫೈಜಲ್. ನನ್ನ ಕಾರು ಕಾಣುತ್ತಿರುವ ಜಾಗ ಒಂದೇ ಒಂದು ಕಿಲೊ ಮೀಟರ್ ದೂರದಲ್ಲಿದೆಯೆಂದೂ, ಅಲ್ಲಿತನಕ ನಡೆಯುವುದು ನನಗೆ ಅಸಾಧ್ಯವೆಂದೂ ೫೦,೦೦೦ ರುಪೈಯಾ ನೀಡಿದರೆ ಮೋಟಾರು ಬೈಕಿನಲ್ಲಿ ಅಲ್ಲೀತನಕ ನನ್ನನ್ನು ಅವನ ಮಿತ್ರರು ಕರೆದೊಯ್ಯುತ್ತಾರೆಂದೂ ಹೇಳಿದ. ಮತ್ತೆ ಅವನ ಬಗ್ಗೆ ಅನುಮಾನ ಮೂಡಿತು. ಇನ್ನು ನೆಲ ಸಪಾಟಾಗಿರುವುದರಿಂದ ನಡೆಯಬಲ್ಲೆನೆಂದು ಹೇಳಿದೆ. ಕಾರು ಸಮೀಪಿಸಿತು. ಊಜೋ ಸಿಗರೇಟೆಳೆಯುತ್ತಾ ಕಾಯುತ್ತಿದ್ದ. ಗಂಟೆಗೆ ೨೦,೦೦೦ ರುಪೈಯಾದ ಅನುಸಾರ ಎರಡೂವರೆ ಗಂಟೆಗೆ ಲೆಕ್ಕ ಹಾಕಿ ಫೈಜಲನಿಗೆ ಹಣ ಕೊಟ್ಟೆ.
ತನ್ನಿಬ್ಬರು ಗೆಳೆಯರಿಗೆ ಹಣ ಕೊಡುವ ಜರೂರಿ ಇಲ್ಲವಾದರೂ ಅವರು ಮಾರುವ, ಅಂಗಮರ್ಧನಕ್ಕೆ ಅತ್ಯುತ್ಕೃಷ್ಟವಾದ ಲಾವಾಶಿಲೆಯನ್ನು ಕೊಂಡುಕೊಂಡು ನೆರವು ನೀಡಬೇಕೆಂದು ಅಂಗಲಾಚತೊಡಗಿದ. ನನಗೂ ಸರಿಯೆನಿಸಿ ಬೆಲೆ ಎಷ್ಟೆಂದು ಕೇಳಿದೆ. ಒಬ್ಬ ಗೆಳೆಯ ಶಾರುಖ್ಖಾನ್ ದೇಶದವನಾದ ನನಗಾಗಿ ಅತ್ಯಂತ ರಿಯಾಯಿತಿ ಬೆಲೆಯಲ್ಲಿ ನೀಡಲಿರುವುದರಿಂದ ಕೇವಲ ನೂರೈವತ್ತು ಡಾಲರ್ ಎಂದ. ನನಗೆ ಸಂಖ್ಯೆಗಳಿಗಿಂತಾ ಸೊನ್ನೆಗಳೇ ಹೆಚ್ಚಾಗಿರುವ ಇಂಡೊನೇಷ್ಯನ್ ನಗದಿಗೆ ಆ ಮೊತ್ತವನ್ನು ಪರಿವರ್ತಿಸಿದಾಗ ಅದು ಮೂರು ಸಾವಿರ ರುಪೈಯಾಗಳೆಂದು (ಅಂದರೆ ನಮ್ಮ ಹದಿಮೂರು ಸಾವಿರ ರೂಪಾಯಿಗಳು) ಲೆಕ್ಕ ಸಿಕ್ಕಿತು. ಅವನ ನೆರವಿಗೆ ಪ್ರತಿಫಲವಾಗಿ ನನ್ನಲ್ಲಿದ್ದ ಹತ್ತು ಡಾಲರ್‌ಗಳನ್ನು ಅವನಿಗಿತ್ತು, ನಿನ್ನ ಕಲ್ಲನ್ನು ಯಾವನಾದರೂ ಅಮೆರಿಕಾದ ಸಿರಿವಂತನಿಗೆ ಐದು ಸಾವಿರ ಡಾಲರಿಗೆ ಮಾರಿಕೊಂಡು ಉದ್ಧಾರವಾಗು ಎಂದು ಹರಸಿ ಕಾರಿನ ಕಡೆ ಹೊರಟೆ. ನನ್ನ ಹತ್ತು ಡಾಲರಿನ ನಿಧಿ ದೊರಕಿದ ಆನಂದದಿಂದ ಅವರು ಸಜಲನಯನರಾಗಿ ನನ್ನನ್ನು ಬೀಳ್ಕೊಟ್ಟರು.
ಟ್ಯಾಕ್ಸಿಯಲ್ಲಿ ಕೂತೊಡನೆ, ಇಂಗ್ಲಿಷ್ ಬಾರದ ಊಜೋ ಇಂಗ್ಲಿಷ್ ಬರುವ ತನ್ನ ಮಗನಿಗೆ ಫೋನು ಮಾಡಿ ನನಗೆ ಮಾತಾಡುವಂತೆ ಹೇಳಿದ. ಆ ಹುಡುಗ ಹೇಳಿದ ಪ್ರಕಾರ ಅವರು ನನ್ನನ್ನು ಕರೆತಂದ ಹಾದಿ ಪ್ರವಾಸಿಗರದಲ್ಲ, ಪರ್ವತಾರೋಹಿಗಳದು. ಅಲ್ಲದೆ ಎರಡನೇ ದಾವಾನಲ ಮುಖ ನೋಡುವುದಕ್ಕೆ ಪರ್ವತಾರೋಹಣದ ಸರ್ಕಸ್ಸಿನ ಅಗತ್ಯವೂ ಇರಲಿಲ್ಲ. ಕಾರು ಈಗ ನಿಲ್ಲಿಸಿದ್ದ ಜಾಗದಿಂದ 100 ಅಡಿ ಕೆಳಗಿಳಿದಿದ್ದರೆ ಆ ದಾವಾನಲ ಮುಖದ ಬಳಿ ಹೋಗಿ ಸುಡುನೀರಲ್ಲಿ ಕಾಲದ್ದಿ, ಹಬೆಯಲ್ಲಿ ಮೊಟ್ಟೆ ಬೇಯಿಸಿಕೊಳ್ಳ ಬಹುದಾಗಿತ್ತು. ಇದೆಲ್ಲವನ್ನೂ ಭಾಷೆ ಗೊತ್ತಿರದ ಕಾರಣ ತನ್ನ ತಂದೆ ನನಗೆ ವಿವರಿಸಲಾಗಲಿಲ್ಲ ಎಂದು ಹೇಳಿದ. ಒಟ್ಟಿನಲ್ಲಿ ನಾನು ಚಳ್ಳೆಹಣ್ಣು ತಿಂದಿದ್ದೆ. ಹಣದ ಕತೆ ಹಾಳಾಗಲಿ, ನನ್ನ ಕಾಲುಗಳು ಇನ್ನೊಂದು ವಾರ ಮೆಟ್ಟಿಲೇರಿ ಇಳಿಯಲಾಗದಷ್ಟು ಅಜ್ಜಿ ಬಜ್ಜಿಯಾಗಿವೆ.
ಫೈಜಲ್ ಮತ್ತವನ ಗೆಳೆಯರು ಎಂಥಾ ನಯವಂಚಕರೆಂದು ಸಿಟ್ಟು ಬಂತು. ಆದರೆ ಅದು ಬಹಳ ಹೊತ್ತು ಇರಲಿಲ್ಲ. ಭ್ರಷ್ಟನಾಗಿದ್ದವನು ಅವನೊಬ್ಬನೇ ಅಲ್ಲ. ಅವನ ಸೂಕ್ಷ್ಮ ಸುಲಿಗೆಯ ಕಾರ್ಯಕ್ರಮದಲ್ಲಿ ಅಲ್ಲಿನ ಇಡೀ ಪ್ರವಾಸೋದ್ಯಮ ಇಲಾಖೆಯೂ ಪಾಲುದಾರನಾಗಿತ್ತು.
ಮುಂಬರಲಿರುವ ಮನುಕುಲದ ನವ ವಸಂತದಲ್ಲಿ ಎಲ್ಲ ಶೋಷಣೆಯೂ ನಿಲ್ಲುತ್ತದೆಂಬುದು ಮಾರ್ಕ್ಸ್‌ನ ಆಂಬೋಣ. ಆ ವಸಂತ ಬರಲೇ ಇಲ್ಲ. ಇಪ್ಪತ್ತನೇ ಶತಮಾನದ ಕೊನೆಯ ಇತಿಹಾಸ ನಮಗೆ ನೀಡಿದ್ದು ಬಹುರಾಷ್ಟ್ರೀಯ ಕಂಪೆನಿಗಳ ದಬ್ಬಾಳಿಕೆಯ ಕ್ರೂರ ವಸಂತವನ್ನು. ಈಗ ಶೋಷಣೆಯೂ ವಿಕೇಂದ್ರೀಕೃತವಾಗಿದೆ. ಈ ವ್ಯವಸ್ಥೆ ಬಡ ರಾಷ್ಟ್ರದ ಕನಿಷ್ಠ ವ್ಯಕ್ತಿಯ ಬದುಕನ್ನು ಇನ್ನೂ ಜಟಿಲಗೊಳಿಸಿದೆ. ತನಗಿಂತ ಬಲ್ಲಿದರನ್ನು ಸುಲಿಯದಿದ್ದರೆ ಜೀವನ ಯಾನವೂ ಸಾಗುವುದಿಲ್ಲ.
ಫೈಜಲ್ ತನ್ನ ಯುಗಧರ್ಮವನ್ನು ಕರ್ಮ ಯೋಗಿಯಂತೆ ಪಾಲಿಸಿದ್ದ. ಅವನಲ್ಲಿ ಹುದುಗಿರುವ ಮಾನವೀಯತೆ ಪೂರ್ತಿ ಪ್ರಕಟವಾಗಬೇಕಾದರೆ ಆ ಯುಗಧರ್ಮ ಬದಲಾಗಬೇಕು. ಬದಲಿಸುವವರಾರು?
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.