ಗೆಳೆಯ ಹನೂರು ಕೃಷ್ಣಮೂರ್ತಿ ಮೌನವಾಗಿ ಸಾಧಿಸಿದ್ದು ಬಹಳ, ಆದರೆ ಹೆಸರು ಮಾಡಿದ್ದು ಕಡಿಮೆ. ಹಲವು ದಶಕಗಳಿಂದ ಮೊದಲು ಸರ್ಕಾರಿ ಕಾಲೇಜುಗಳಲ್ಲಿ ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡುವೆ ಚೆನ್ನೈನ ಏಷ್ಯನ್ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪನ ಮತ್ತು ಸಂಶೋಧನೆಗಳನ್ನು ಮಾಡುತ್ತಾ ಜನಪದ ಕೃತಿಗಳ ಸಂಪಾದನೆ, ಸಂಗ್ರಹ, ವಿಮರ್ಶೆ, ಚಿಂತನೆಗಳನ್ನು ಕುರಿತ ಹಲವು ಗ್ರಂಥಗಳನ್ನಲ್ಲದೆ ಹಲವು ಕಥಾಸಂಗ್ರಹ, ಕಾದಂಬರಿಗಳನ್ನೂ ರಚಿಸಿದ್ದಾನೆ. ಆತನ ಸೃಜನಶೀಲ ಬರಹಗಳು ಕನ್ನಡದ ಮಾರ್ಗೀಯ ಮತ್ತು ಜನಪದ ಕಥನ ಪರಂಪರೆಗಳ ಸಾರವನ್ನು ಒಳಗೊಂಡು ಮೈಸೂರು, ಕೊಳ್ಳೇಗಾಲ ಪ್ರದೇಶದ ವಿಶಿಷ್ಟ ಆಡುಭಾಷೆಯ ಸೊಗಡಿನಿಂದ ಮನಸೆಳೆಯುತ್ತವೆ.
ನವೋದಯ, ನವ್ಯ, ಬಂಡಾಯ ಇತ್ಯಾದಿ ಎಲ್ಲ ಪಂಥಗಳಿಂದ ದೂರ ಉಳಿದು, ಪ್ರಚಲಿತ ರಾಜಕೀಯ ಸಿದ್ಧಾಂತಗಳ ಬಗ್ಗೆ ತಲೆ ಬಿಸಿ ಮಾಡಿಕೊಳ್ಳದೆ ದೈನಂದಿನ ಬದುಕಿನ ವಿವರಗಳಿಗೆ ನೇರವಾಗಿ ಮುಖಮಾಡುತ್ತಾ ಬಂದಿವೆ. ಕೆಲವು ಪ್ರಶಸ್ತಿ-ಗೌರವಗಳು ಆತನಿಗೆ ಸಂದಿರುವುದು ನಿಜವಾದರೂ ಆತ ಯಾವುದೇ ಗುಂಪಿನ ಹಿಂಬಾಲಕನಾಗಲೀ ಮುಂಬಾಲಕನಾಗಲಿ ಆಗದೆ, ಸಾಮಯಿಕ ಪೋಸುಗಳ ರಾಜಕಾರಣದ ಹೊರಗೇ ಉಳಿದು ಸೃಜನಶೀಲತೆಗೆ ಅಗತ್ಯವಾದ ಏಕಾಂತ, ಮೌನ ಮತ್ತು ನಿಷ್ಪಕ್ಷಪಾತದೃಷ್ಟಿಗಳನ್ನು ಕಾಪಾಡಿಕೊಂಡು ಬಂದಿದ್ದಾನೆ.
ಸಾಮಾನ್ಯವಾಗಿ ಕೂಗುಮಾರಿ ಸಾಹಿತಿಗಳನ್ನು ಥಟ್ಟನೆ ಅಟ್ಟಕ್ಕೇರಿಸುವ ಮುಕ್ಕೋಟಿ ಕನ್ನಡಿಗರು ಹನೂರನಂಥ ಬರಹಗಾರರನ್ನು ಅಟ್ಟಕ್ಕೇರಿಸುವುದಿರಲಿ ಗುರುತಿಸಿರುವುದರಲ್ಲೂ ಹೆಚ್ಚು ಪ್ರಯತ್ನಿಸಿಲ್ಲ. ತನ್ನ ಹಲವು ದಶಕಗಳ ಮೌನ ಮತ್ತು ತಪಸ್ಸಿನ ಫಲವೆಂಬಂತೆ ಹನೂರು ಈಗೊಂದು ಉತ್ಕೃಷ್ಟ ಕಾದಂಬರಿಯನ್ನು ಬರೆದಿದ್ದಾನೆ. ಅದರ ಹೆಸರು ಅಜ್ಞಾತನೊಬ್ಬನ ಆತ್ಮ ಚರಿತ್ರೆ.
`ಯಾವುದಕ್ಕೂ ಪೂರ್ಣತೆಯ ಪುಣ್ಯವಿಲ್ಲ' ಎಂಬುದು ಗೋಪಾಲಕೃಷ್ಣ ಅಡಿಗರ ಒಂದು ವಾಕ್ಯ.
ಇದು ಎಲ್ಲ ಸೃಜನಶೀಲ ಬರವಣಿಗೆಗಳಿಗೂ ಅನ್ವಯವಾಗುವ ಮಾತು. ಮೇರುಕೃತಿಗಳಾದ ರಾಮಾಯಣ, ಮಹಾಭಾರತಗಳಾಗಲಿ, ಒಡಿಸ್ಸಿ, ಇಲಿಯಡ್, ಶಿಲಪ್ಪದಿಗಾರಂಗಳಾಗಲಿ ಪೂರ್ಣವಾಗಿದ್ದರೆ ಅವನ್ನು ಮುಂದಿನವರು ಮರುಬರವಣಿಗೆಗೆ ಎತ್ತಿಕೊಳ್ಳುತ್ತಿರಲಿಲ್ಲ. ಆದರೆ ಪ್ರಸಿದ್ಧಿಯ ಪುಣ್ಯ, ಪ್ರಶಸ್ತಿಯ ಫಲ ಬಹುತೇಕ ನಮ್ಮಲ್ಲಿ ಸಿಗುವುದು ಪ್ರಚಲಿತ ಸಿದ್ಧಾಂತ ಅಥವಾ ನಿಲುವುಗಳ ವಕ್ತಾರರಿಗೇ ಹೆಚ್ಚಾಗಿ. ಅವುಗಳ ಸೋಕುಗಳನ್ನು ನೇರವಾಗಿ ಇರಿಸಿಕೊಳ್ಳದ ಕೆಲವು ಶ್ರೇಷ್ಠ ಕೃತಿಗಳು ಎಲೆ ಮರೆಯ ಕಾಯಿಯ ಹಾಗೇ ಉಳಿದುಬಿಡುತ್ತವೆ. ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಗೆಳೆಯ ಕೇಶವ ಮಳಗಿ `ಅಂಗನ ಧರೆಯಲ್ಲಿ' ಎಂಬ ಉತ್ಕೃಷ್ಟ ಕಾದಂಬರಿಯನ್ನು ಬರೆದಿದ್ದರು.
ಅದನ್ನು ಯಾವ ಪ್ರಸಿದ್ಧ ವಿಮರ್ಶಕರೂ ಕಣ್ಣೆತ್ತಿಯೂ ನೋಡಲಿಲ್ಲ. ಬೆರಳೆಣಿಕೆಯ ನನ್ನಂಥ ಕೆಲವರನ್ನು ಬಿಟ್ಟರೆ ಓದುಗರೂ ಆ ಬಗ್ಗೆ ರೋಮಾಂಚಿತರಾಗಲಿಲ್ಲ. ವೀರಶೈವ ಸಮಾಜದ ಪಾರಂಪರಿಕ ಹಿರಿಮೆ-ಗರಿಮೆಗಳನ್ನೂ ಸಮಕಾಲೀನ ಅವನತಿಯನ್ನೂ ಅತ್ಯಂತ ಮಾರ್ಮಿಕವಾಗಿ, ಮಾನವೀಯವಾಗಿ ಚಿತ್ರಿಸುವ ಆ ಕಾದಂಬರಿ ಅತ್ಯುನ್ನತ ಪ್ರಶಸ್ತಿ ಗಳಿಸಬೇಕಾಗಿತ್ತು. ಹಾಗಾಗಲಿಲ್ಲವಲ್ಲ ಎನ್ನುವ ಕೊರಗಿಗಿಂತಾ ಹೆಚ್ಚಾಗಿ ನನಗರ್ಥವಾಗದ್ದು ಏನೆಂದರೆ ಸಮಕಾಲೀನ ಸಮಾಜದ ಬಗ್ಗೆ ಮೌಲಿಕವಾದ ಒಳನೋಟಗಳನ್ನು ನೀಡುವ ಆ ಕಾದಂಬರಿಯ ಬಗ್ಗೆ ಓದುಗ ಮತ್ತು ವಿಮರ್ಶಾಲೋಕ ತಳೆದ ಮೌನದ ರಾಜಕಾರಣವಾದರೂ ಏನು?
ನಾನು ವರ್ಷವೆರಡರ ಹಿಂದೆ ಮೈಸೂರಿನಲ್ಲಿ ಒಂದೆರಡು ವಾರ ಚಿಕಿತ್ಸೆಗಾಗಿ ತಂಗಿದ್ದ ಕಾಲದಲ್ಲಿ ಹನೂರು ತನ್ನ ಹೊಸ ಕಾದಂಬರಿಯ ಹಸ್ತಪ್ರತಿಯನ್ನು ಅಭಿಪ್ರಾಯ ಕೇಳಿ ನನ್ನ ಕೈಗಿರಿಸಿದ. ಒಮ್ಮೆ ಓದತೊಡಗಿದೊಡನೆಯೇ ಒಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಅಪರೂಪದ ಅನುಭವ ನನಗಾಯಿತು. ನನ್ನೆಲ್ಲಾ ಪೂರ್ವಗ್ರಹಗಳನ್ನೂ ಕೆಡವಿ ಆ ಕೃತಿ ನನ್ನನ್ನು ತನ್ನ ವಿಸ್ಮಯಗಳ ಲೋಕದೊಳಗೆ ಬರಸೆಳೆದುಕೊಂಡಿತು.
ನನಗೆ ಅತ್ಯಂತ ಆತ್ಮೀಯನಾದ ಹನೂರು ಅವನ ವಿದ್ವತ್ತು, ಬರವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ನನ್ನನ್ನೂ ಬೆರಗುಗೊಳಿಸುವ ಹಾಗೆ ಬರೆದಿರುವನಲ್ಲಾ ಎಂದು ಹೆಮ್ಮೆಯಾಯಿತು. ಹಿಂದೆ ಮಳಗಿಯವರ ಕೃತಿಯ ಹಸ್ತಪ್ರತಿ ಓದಿದಾಗ ಇದೇ ತೆರನ ಅನುಭವವಾಗಿದ್ದು ನೆನಪಾಗಿ ಈ ಅನರ್ಘ್ಯ ಕೃತಿಯೂ ಎಲ್ಲಿ ನೆನೆಗುದಿಗೆ ಬೀಳುವುದೋ ಎಂಬ ದಿಗಿಲೂ ಉಂಟಾಯಿತು.
ನಾನು ನೀಡಿದ ಒಂದೆರಡು ಸಲಹೆಗಳನ್ನು ಅಳವಡಿಸಿಕೊಂಡು ಹನೂರು ಈ ಕಾದಂಬರಿಯನ್ನು ಹೊರತಂದಿದ್ದಾನೆ. ಮಳಗಿ ಅವರ ಕೃತಿಯ ಹಾಗೆ ಜನ ಇದನ್ನೂ ಉದಾಸೀನ ಮಾಡುವರೆಂಬ ನನ್ನ ಆತಂಕವೂ ದೂರವಾಗಿದೆ. ಯಾಕೆಂದರೆ ಜ್ಞಾನಪೀಠ ಪ್ರಶಸ್ತಿವಿಜೇತರಾದ ಗಿರೀಶ ಕಾರ್ನಾಡರು ಹನೂರರ ಕಾದಂಬರಿಗೆ ಅಪರೂಪದ ಬೆನ್ನುಡಿ ಬರೆದು ಅದು ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಈ ಕಾದಂಬರಿಯ ಬಿಡುಗಡೆ ಸಂದರ್ಭದಲ್ಲಿ ಇನ್ನೊಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತರೂ ನನ್ನ ಆತ್ಮೀಯರೂ ಆದ ಚಂದ್ರಶೇಖರ ಕಂಬಾರರೂ ಹನೂರರ ಕಾದಂಬರಿಯ ಬಗ್ಗೆ ಮನದುಂಬಿ ಮಾತನಾಡಿದ್ದಾರೆ. ಇಂಥ ಪುಣ್ಯ ಮಳಗಿಯವರ ಕೃತಿಗೂ ಮುಂದೊಮ್ಮೆ ಸಿಗಲಿ ಎಂದು ನನ್ನ ಹಂಬಲ.
`ಅಜ್ಞಾತನೊಬ್ಬನ ಆತ್ಮಚರಿತ್ರೆ' ಎಲ್ಲ ದೃಷ್ಟಿಗಳಿಂದಲೂ ಒಂದು ಅನರ್ಘ್ಯ ಕೃತಿ. ಎಲ್ಲಕ್ಕಿಂತಾ ಮೋಹಕವಾದದ್ದು ಅದರ ಸುಲಲಿತ ಕಥನ ಶೈಲಿ. ಒಮ್ಮೆ ಕೈಗೆತ್ತಿಕೊಂಡರೆ ಸಾಕು, ಮಾಸ್ತಿ ಅಥವಾ ಭೈರಪ್ಪನವರ ಉತ್ಕೃಷ್ಟ ಕೃತಿಗಳ ಹಾಗೆ ಓದಿ ಮುಗಿಸುವವರೆಗೂ ಕೆಳಗಿಡಲು ಮನಸ್ಸು ಬರುವುದಿಲ್ಲ. ಕಥನದ ಲಾಲಿತ್ಯ ವಿಚಾರ ಮತ್ತು ಸ್ವಯಮಾರೋಪಿತ ಸಿದ್ಧಾಂತಗಳಿಂದ ಶಿಥಿಲವಾಗುತ್ತಿರುವ ಕನ್ನಡ ಕಥಾ ಸಾಹಿತ್ಯದ ಸಂದರ್ಭದಲ್ಲಿ ಇದೂ ದೊಡ್ಡ ಸಾಧನೆಯೇ. ಆದರೆ ಇಲ್ಲಿನ ಭಾಷೆ ಸುಲಭಗ್ರಾಹ್ಯವಾದರೂ ಸರಳವಲ್ಲ.
ಹಲವು ಓದು ಮತ್ತು ಕೇಳುಕನ್ನಡಗಳ ಕಸುವನ್ನು ಹೀರಿಕೊಂಡಿರುವ ವಿಸ್ಮಯಕಾರಿಯಾಗಿ ಮೇಳೈಸುವ ಹನೂರನ ಭಾಷಾಶೈಲಿ ಕಂಬಾರರ `ಸೂರ್ಯಶಿಖರ'ದ ಇದೇ ತೆರನ ಭಾಷಾ ಶೈಲಿಯ ಶ್ರಿಮಂತಿಕೆ ಮತ್ತು ಸಮೃದ್ಧಿಗಳನ್ನು ನೆನಪಿಸುತ್ತದೆ. ಕೇಶವ ಮಳಗಿಯವರ ಕಥಾಶೈಲಿಯ ಆರ್ದ್ರತೆಯನ್ನೂ ಒಳಗೊಂಡಿದೆ. ಈ ಕಾದಂಬರಿಯನ್ನು ಓದುವುದಕ್ಕೇ ಯಾವ ವಿಶೇಷ ತಯಾರಿಯೂ ಬೇಕಿಲ್ಲ ಅನ್ನುವ ಹಾಗಿದೆ.
ಆದರೆ ಕತೆ ಹೇಳುವವನು ಹಲವು ರೀತಿಯ ತಯಾರಿಗಳನ್ನು ಪಡೆದುಕೊಂಡಿದ್ದಾನೆಂಬುದೂ ಗೊತ್ತಾಗುತ್ತದೆ. ತಯಾರಿ ಬೇಕಾಗಿರುವುದು ಬರಹಗಾರನಿಗೆ, ಓದುಗನಿಗಲ್ಲ. ಓದುಗನ ತಯಾರಿಯನ್ನು ಬಯಸುವ ಕೃತಿಗಳು ಸಾಧಾರಣೀಕರಣದಿಂದ ವಂಚಿತವಾಗಿ ಕೇವಲ ಪಾಂಥಿಕವಾಗುತ್ತವೆ.
ವಿದ್ವಾಂಸರ, ಬರಹಗಾರರ, ಇತಿಹಾಸಕಾರರ ಮತ್ತು ಬುದ್ಧಿಜೀವಿಗಳ ನಡುವೆ ಬಹುಚರ್ಚಿತವಾಗಿರುವ ಹೈದರ್-ಟಿಪ್ಪೂ ಯುಗದ ಕಥಾಹಂದರವನ್ನು ಹೊಂದಿರುವ ಈ ಕೃತಿ ಆ ಚರ್ಚೆಗಳ ವಿಷಯಗಳಿಂದ ದೂರ ಸರಿದು ಅವುಗಳಲ್ಲಿ ಯಾವುವೂ ಎತ್ತದ ಮಾನವೀಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹೈದರ್-ಟಿಪ್ಪೂ ವ್ಯಕ್ತಿತ್ವಗಳ ಬಗ್ಗೆ ಇಲ್ಲಿಯವರೆಗೆ ಬಂದಿರುವ ಎಲ್ಲ ಸೃಜನಶೀಲ ಮತ್ತು ಸೃಜನೇತರ ಬರಹಗಳಿಗಿಂತಲೂ ಭಿನ್ನವಾದ ದಾರಿಯನ್ನು ಈ ಕೃತಿ ತುಳಿದಿದೆ. ಇಲ್ಲಿನ ಅನಾಮಿಕ ಕಥಾನಾಯಕ ಇತಿಹಾಸ ಪ್ರಸಿದ್ಧವ್ಯಕ್ತಿಗಳ ಹಾಗೆ ಪೂರ್ಣ ಉದಾತ್ತನೂ ಅಲ್ಲ ಅಥವಾ ಪೂರ್ಣ ಖಳನಾಯಕನೂ ಅಲ್ಲ.
ಅವನಿಗೆ ಪರಂಪರೆಯ ಬಲವೂ ಇಲ್ಲ; ಜಾತಿ-ಕುಲ-ಗೋತ್ರಗಳ ಗುರುತೂ ಇಲ್ಲ. ಹೊಟ್ಟೆಪಾಡಿಗಾಗಿ ಕಟುಕ ವೃತ್ತಿಯನ್ನು ಹಿಡಿದಿರುವ ಕುರೂಪಿಯೊಬ್ಬನ ಮಗನಾದ ಅವನಿಗೆ ತನ್ನ ಹಡೆದ ತಾಯಿಯ ನೆನಪೂ ಇಲ್ಲ. ಏನೋ ಆಗಬೇಕೆಂದು ಇನ್ನೇನೋ ಆಗಿ ಗುರಿಗೆಟ್ಟ ಸಮಾಜದ ಪ್ರವಾಹದಲ್ಲಿ ಎಲ್ಲೆಲ್ಲಿಗೋ ತೇಲಿಕೊಂಡು ಹೋಗುತ್ತಿರುತ್ತಾನೆ. ತನ್ನ ಬಯಕೆಗೆ ವಿರುದ್ಧವಾಗಿ ಸಿಪಾಯಿ ವೃತ್ತಿಯನ್ನು ಒಲ್ಲದ ಮನಸ್ಸಿನಿಂದ ಹಿಡಿದು ಅರಮನೆಯವರಾದ ಟಿಪ್ಪೂ ಮತ್ತು ದಿವಾನ್ ಪೂರ್ಣಯ್ಯನವರಿಗೆ ಹತ್ತಿರದವನಾಗಿಯೂ ಅಜ್ಞಾತನಾಗಿ ಉಳಿಯುತ್ತಾನೆ.
ಆ ಅಜ್ಞಾತನ ಕತೆ ಅಜ್ಞಾತನ ಕತೆಯಾಗಿಯೂ ಉಳಿಯುವುದಿಲ್ಲ. ಚರಿತ್ರಾರ್ಹವಾದ ಹೈದರ್-ಟಿಪ್ಪೂರ ವಸಾಹತುಶಾಹಿ ವಿರೋಧಿ ಸಮರದ ಕಥನವೂ ಆಗುವುದಿಲ್ಲ. ಎ್ಲ್ಲಲ ಸಮರಗಳೂ ಹಿಂಸೆಯ ಹಲವು ರೂಪಗಳು. ಸಮರಹಿಂಸೆಯ ಪರಿಣಾಮವಾಗಿ ರಕ್ತಸಿಕ್ತವಾಗುವ ಪೃಥ್ವಿಯ, ಮತ್ತೂ ಆ ಪೃಥ್ವಿಯ ಮೇಲೆ ಉದರಂಭರಣಕ್ಕಾಗಿ ಹಲವು ಕಾಯಕಗಳನ್ನು ಮಾಡುವ ನಗರ, ಪಟ್ಟಣ, ಗ್ರಾಮ, ಅರಣ್ಯಗಳ ಜನತೆಯ ಬದುಕು ಹಿಂಸೆಯಿಂದ ಹೇಗೆ ಏರುಪೇರಾಗುತ್ತದೆಂಬುದು ಈ ಕಾದಂಬರಿಯ ಹುರುಳು. ಉದಾಹರಣೆಗೆ ಟಿಪ್ಪುಗೆ ಹುಲಿಗಳೆಂದರೆ ಆಟದ ವಸ್ತುಗಳು.
ಆತನ ಮನವೊಲಿಸಲು ಕಥಾನಾಯಕ ಹುಲಿಬೇಟೆಗಾಗಿ ಕಾಡು ಸೇರುತ್ತಾನೆ. ಆದರೆ ಕಾಡಿನ ಜನಕ್ಕೆ ಹುಲಿಯೊಂದು ಪವಿತ್ರಪ್ರಾಣಿ. ಒಬ್ಬ ರಾಜನ ಆಟಕದ ಬಯಕೆ, ಒಬ್ಬ ಸಿಪಾಯಿಯ ಬೇಟೆಯ ತವಕ ಕಾಡುಜನರ ಮನೋಲೊಕದ ಮೇಲಿನ ಹಲ್ಲೆಯಾಗುತ್ತದೆ. ಹೀಗೆ ವ್ಯಕ್ತಿಗಳ, ಗುಂಪುಗಳ ಸ್ವಾರ್ಥದ ಈಡೇರಿಕೆಗಾಗಿ ಬಹುಜನರ ಬದುಕು ಜೀವಂತ ನರಕವಾಗುತ್ತದೆಂಬುದನ್ನು ಇಡೀ ಕಾದಂಬರಿ ಮನಂಬುಗುವಂತೆ ಬಿಡಿಸಿಡುತ್ತದೆ.
ಸಾಮಾನ್ಯರ ಪ್ರತಿನಿಧಿಯಾದ ಅಜ್ಞಾತ ಮತ್ತು ಅಸಮಾನ ಶಕ್ತಿಗಳಾದ ಹೈದರ್-ಟಿಪ್ಪೂ ಮತ್ತು ಕುಂಪಣಿಯವರು ಎಲ್ಲರೂ ತಮ್ಮ ಕ್ರೂರ ಬಯಕೆಗಳ ಪೂರೈಕೆಗಾಗಿ ನೆಲವನ್ನೂ ಕೊನೆಗೆ ತಮ್ಮ ಬಾಳುಗಳನ್ನೂ ನರಕಸಮ ಮಾಡಿಕೊಳ್ಳುವುದು ಇಲ್ಲಿನ ಮುಖ್ಯ ವಸ್ತು. ಇಷ್ಟಾದರೂ ಹನೂರು ಇಂಥಾ ದಾರುಣವಾದ, ಅಮಾನವೀಯವಾದ ಸನ್ನಿವೇಶವನ್ನು ಹಿಡಿಯುವುದು ಒಬ್ಬ ಸರ್ವಗ್ರಾಹಿಯಾದ ಕತೆಗಾರನಾಗಿಯೇ ಹೊರತು ಒಳಿತು-ಕೆಡುಕುಗಳ ನಡುವೆ ಈಗಾಗಲೇ ಸ್ಪಷ್ಟ ಗೆರೆ ಹಾಕಿಕೊಂಡಿರುವ ಪಾಂಥಿಕ ದೃಷ್ಟಿಯಿಂದ ಅಲ್ಲ.
ಕುಂಪಣಿಯ ಸೈನಿಕರು ಪಂಜರದ ಹುಲಿಗಳಿಗೆ ಔತಣವಾಗುವುದನ್ನು ಕಂಡು ಆನಂದ ಪಡುವ ಟಿಪ್ಪೂ ಕುಂಪಣಿಯವರಿಗೆ ತನ್ನ ಮಕ್ಕಳನ್ನೇ ಒತ್ತೆಯಿಡುವ ಸಂದರ್ಭದಲ್ಲಿ ಸಾಧಾರಣ ಅಪ್ಪಂದಿರ ಹಾಗೆ ಗಳಗಳ ಅಳತೊಡಗುತ್ತಾನೆ. ಒಬ್ಬರಾದ ಮೇಲೆ ಒಬ್ಬರಾಗಿ ಲೂಟಿ ಹೊಡೆದ ಹೆಂಗಸರ ಜೊತೆ ಬಲವಂತವಾಗಿ ಕೂಡಿಕೆ ಮಾಡಿಕೊಂಡು ತನ್ನ ಮೈತೀಟೆ ತೀರಿದ ಬಳಿಕ ಮುಲಾಜಿಲ್ಲದೆ ಅವರನ್ನು ಕೊಂದುಹಾಕುವ ಕಥಾನಾಯಕ ಕೊನೆಗೆ ತಾನೇ ನಂಜಿನ ಗಾಯದಿಂದ ನಿತ್ರಾಣನಾಗಿ ಅಯ್ಯೋ ಎನಿಸುವಂಥ ಪಾತ್ರವಾಗುತ್ತಾನೆ.
ಟಿಪ್ಪೂಗೆ ಆಪ್ತನಾಗಿದ್ದು ಆತನ ಅವಸಾನದ ನಂತರ ಬ್ರಿಟಿಷರ ವಕ್ತಾರನಾಗಿ ಅವರ ಪರವಾಗಿ ಫರ್ಮಾನು ಹೊರಡಿಸುವ ಪೂರ್ಣಯ್ಯನ ಗುಣದೋಷಗಳ ತನಿಖೆಯೂ ಇಲ್ಲಿ ಅಮುಖ್ಯ. ಯಾರೂ ಪೂರ್ತಿ ಒಳ್ಳೆಯವರೂ ಅಲ್ಲ, ಕೆಟ್ಟವರೂ ಅಲ್ಲ. ಕೇವಲ ಸಂದರ್ಭವಶರು.
` ರಾಮನ ಕಥೆಯೂ ಸೀತೆಯ ವ್ಯಥೆಯೂ ತುಂಬಿದೆ ರಾಮಾಯಣ, ಬಡವರು ಸತ್ತರೆ ಅಳುವರೆ ಇಲ್ಲ ಅಯ್ಯೋ ನಾರಾಯಣ' ಎಂದು ನಿಟ್ಟುಸುರಿದ ಬೇಂದ್ರೆ ಅವರು ಜನಸಾಮಾನ್ಯರ ವಕ್ತಾರರಾದರು. ಆದರೆ ಸೀತೆಯ ಶೋಕವೂ ಅವರ ಮನಸ್ಸನ್ನು ವಿಶೇಷವಾಗಿ ಕರಗಿಸಿತು. ಆದ್ದರಿಂದಲೇ ಹೀಗೆಂದರು: `ಅಶೋಕವನದಲಿ ಅಶೋಕಮರದಡಿ ಸಶೋಕ ಸೀತೆಯ ಕಂಡಿಹೆನು'. ಹನೂರನ ಕಾದಂಬರಿಯಲ್ಲಿ ಕಾಣುವ ಹೆಂಗಸರ ಚಿತ್ರಣ ತುಂಬಾ ವಿಶೇಷ.
` ಉಗಣಾಭ್ಯಸಗಂಹತೀಭ್ಯಶ್ಚ ವೋ ನಮಃ' ಎಂಬ ಕೃಷ್ಣಯಜುರ್ವೇದದ `ರುದ್ರಪ್ರಶ್ನದ ಚತುರ್ಥೋನುವಾಕ್ಯ'ದ ಮಂತ್ರವೂ ಲಲಿತಾಸಹಸ್ರನಾಮ, ದುರ್ಗಾಸಪ್ತಶತಿಯಂಥ ಶಾಕ್ತ ಮೂಲಗಳೂ ವೈದಿಕ ಮತ್ತು ಪುರಾಣಯುಗದಲ್ಲಿ ಸ್ತ್ರೀಯರೂ ಶಸ್ತ್ರಪಾಣಿಗಳಾಗಿ ಸಮರೋದ್ಯುಕ್ತರಾಗಿದ್ದರೆಂದು ಸೂಚಿಸುತ್ತವೆ. ಆದರೆ ಗಂಡಾಳಿಕೆ ಶುರುವಾದಾಗಲಾಯ್ತು ಹೆಂಗಸರು ಪೌರುಷದ ಆಡಂಬರಗಳಾದ ಯುದ್ಧಗಳ ಶಿಕಾರಿಗಳಾಗಿ ಮಾತ್ರ ಉಳಿದರು.
ಸತಿ ಪದ್ಧತಿ ಒಂದು ಕ್ರೂರ ಸಾಮಾಜಿಕ ರಿವಾಜೆಂಬುದು ಎಷ್ಟು ಸತ್ಯವೋ ಮಾನಭಂಗದ ಸಾಧ್ಯತೆಯಿಂದ ತಲ್ಲಣಗೊಂಡ ಪರಾಜಿತ ರಾಜ್ಯದ ಹೆಣ್ಣುಮಕ್ಕಳಿಗೆ ಬೇರೆ ಆಯ್ಕೆಗಳಿರಲಿಲ್ಲವೆಂಬುದೂ ಅಷ್ಟೇ ಸತ್ಯ. ಬರ್ಬರ ಗಂಡು ಮೌಲ್ಯಗಳ ಜಗತ್ತೇ ಒಂದು ಸ್ತ್ರೀವಿರೋಧಿ ರಚನೆಯೆಂಬುದನ್ನು ಹನೂರನ ಕಾದಂಬರಿ ಎದೆನಡುಗಿಸುವ ರೀತಿಯಲ್ಲಿ ಚಿತ್ರಿಸುತ್ತದೆ. ಆದರೆ ಇಲ್ಲಿನ ಹೆಣ್ಣುಮಕ್ಕಳು ದೈವತ್ವಕ್ಕೇರುವ ಪುರಾಣಕೀರ್ತಿತ ಪತಿವ್ರತೆಯರೂ ಅಲ್ಲ. ಅಥವ ದನಿ ಕಳೆದುಕೊಂಡ ಅಮಾಯಕ ಬಲಿಳೂ ಅಲ್ಲ.
ಕಠೋರ ಸಂದರ್ಭಗಳಲ್ಲೂ ತಮ್ಮ ಸ್ವಾತಂತ್ರ್ಯವನ್ನು ಸಾಬೀತುಪಡಿಸುವ ಸಬಲೆಯರು ಅವರು. ಇಲ್ಲಿನ ಕಥಾನಾಯಕಿ ಅಂಥವಳು. ನೆಲೆಯಿಲ್ಲದ ದಾಸಯ್ಯನ ಮಗಳಾಗಿ ಹುಟ್ಟಿದ ಆಕೆಯನ್ನು ಅಪ್ಪನೇ ಕಾಸಿನಾಸೆಗೆ ಬಿದ್ದು ಗಿಡಗನಂಥ ಕಥಾನಾಯಕನ ಪಾಲುಮಾಡುತ್ತಾನೆ. ಆದರೆ ಅವಳು ಬಸುರಿಯಾಗಿರುವಾಗ ತನ್ನ ನಿಷ್ಕರುಣಿ ಮಿಂಡಗಾರನ ಕ್ರೂರಬುದ್ಧಿಗೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಾಳೆ.
ಬಸವಿಯೆನಿಸಿಕೊಂಡು ಊರೂರು ಅಲೆದರೂ ಇತರ ಗಂಡಸರನ್ನು ಕೂಡಲೊಲ್ಲದೆ ತನ್ನ ಸ್ವಾತಂತ್ರ್ಯವನ್ನು ಕಾದುಕೊಳ್ಳುತ್ತಾಳೆ. ಇಡೀ ಕಾದಂಬರಿಯ ವೀರೋದಾತ್ತ ಪಾತ್ರವೆಂದರೆ ಈ ಅನಾಮಧೇಯ ಹೆಂಗಸೇ ಹೊರತು ಇತಿಹಾಸಪುರುಷರಾದ ಟಿಪ್ಪುವಾಗಲಿ ಪೂರ್ಣಯ್ಯನಾಗಲಿ ಅಲ್ಲ. ಅಥವಾ ಅಜ್ಞಾತನಾದ ಕಥಾನಾಯಕನೂ ಅಲ್ಲ.
ಆ ಧೀರಗುಂಡಿಗೆಯ ಹೆಂಗಸಿನಂತೆ ಈ ಕಾದಂಬರಿಯ ಹಿಂಸೆಯ ಬಲಿಗಳಾದರೂ ಅದರ ಪಾಲುದಾರರಾಗದೆ ಅತೀವ ವಿಷಾದಕ್ಕೂ ಒಳಗಾಗದೆ ಮಾನವಸಹಜ ಪ್ರೀತಿ ಮತ್ತು ಕಾಳಜಿಗಳನ್ನು ಜೀವಂತವಾಗಿರಿಸಿಕೊಂಡಿರುವ ಇತರ ಪಾತ್ರಗಳೆಂದರೆ ನೆಲೆಗೆಟ್ಟವರ ದಂಡಿಗೆ ಅನಿವಾರ್ಯವಾಗಿ ಸೇರಿಹೋಗಿರುವ ಆಟದವರು, ದಾಸಯ್ಯ-ಜಂಗಮರು, ಮಂಟೇಸ್ವಾಮಿ-ಮಾದಯ್ಯನ ಗುಡ್ಡರುಗಳು ಮತ್ತು ಕಾಡಿನ ಅಮಾಯಕರು.
ಹನೂರನ ಕಾದಂಬರಿಯ ಕಥನಕ್ರಮವೂ ಕುತೂಹಲಕಾರಿ. ಕತೆ, ಉಪಕತೆಗಳು ಜಾನಪದದಲ್ಲಿರುವಂತೆ ಒಂದರೊಳಗೊಂದು ಹೆಣೆದುಕೊಂಡು, ಹಿಂದು-ಮುಂದುಗಳನ್ನು ಬದಲಾಯಿಸುತ್ತಾ ಪಾತ್ರ ಮತ್ತು ಕತೆಗಾರನ ಒಳಹೊರಗೆ ಸುಳಿಯುತ್ತಾ ಮುಂಬರಿದರೂ ಎಲ್ಲೂ ಜಟಿಲವಾಗದೆ ಓದುಗರ ಆಸಕ್ತಿಯನ್ನು ಪಟ್ಟಾಗಿ ಹಿಡಿದಿಡುತ್ತದೆ.
ಕನ್ನಡ ಪರಂಪರೆಯ ಅಗ್ಗಳದ ಸಾಹಿತ್ಯಕೃತಿಗಳು ಕೇವಲ ಕಲಾಕೃತಿಗಳಾಗುಳಿಯದೆ ಒಂದು ಅಂತರ್ಗತ ದರ್ಶನವನ್ನೂ ಅಭಿವ್ಯಕ್ತಿಸುತ್ತವೆ. ನಿಸ್ಸಂದೇಹವಾಗಿ ಆ ಯಾದಿಗೆ ಸೇರಬಲ್ಲ ಹನೂರನ ಕಾದಂಬರಿಯೂ ಅಷ್ಟೆ. ನಮ್ಮ ಮಾರ್ಗೀಯ ಕೃತಿಗಳಲ್ಲಿ ಧಾರ್ಮಿಕಪರವಾದ ದೃಷ್ಟಿ ಪ್ರಧಾನವಾಗಿದೆ. ಅಥವಾ ವೀರರಸಪ್ರಧಾನವಾಗಿವೆ.
ಭಕ್ತಿಸಾಹಿತ್ಯದಲ್ಲಿ ಆಧ್ಯಾತ್ಮಿಕ ದೃಷ್ಟಿ ಮೇಲುಗೈ. ಕೆಲವು ಜನಪದ ಕಾವ್ಯಗಳು ತಮ್ಮ ಪಂಥದ ಸಂತರನ್ನು ಎತ್ತಿಹಿಡಿಯಲು ರಚನೆಯಾದಂಥವು. `ಸಿರುಮನ ಚರಿತೆ', ` ನಿಂಬರಾಜ ಚರಿತೆ'ಗಳಂಥ ಚಾರಿತ್ರಿಕ ಕಾವ್ಯಗಳು ಯುದ್ಧದ ವಿವರಗಳನ್ನು ಹಸಿಹಸಿಯಾಗಿ ಬಣ್ಣಿಸುತ್ತವೆ. ಆಧುನಿಕ ಸಾಹಿತ್ಯ ಜನಸಾಮಾನ್ಯನ ಹೊರೆಯನ್ನು ತನ್ನ ತಲೆಯ ಮೇಲೆ ಹೇರಿಕೊಂಡಿದ್ದರೂ ಕೆಲವು ಮೇರುಕೃತಿಗಳನ್ನು ಹೊರತುಪಡಿಸಿದರೆ ಬಹುತೇಕ ಬರಹಗಾರರ ಜಾತಿ-ಮತ-ವರ್ಗಾನುಸಾರಿಯಾಗಿ ಸಾಧಾರಣೀಕರಣವನ್ನು ಸಾಧಿಸಲಾಗದೆ ಪಾಂಥಿಕವಾಗಿಬಿಟ್ಟಿವೆ.
ಪೂರ್ವಭಾವಿಯಾಗಿ ಕಡತಂದ ಒಕ್ಕಣ್ಣಿನ ದೃಷ್ಟಿಯಿಂದ ಎಲ್ಲವನ್ನೂ ನೋಡಲುಹೋಗಿ ಏನನ್ನೂ ನೋಡದಂತಾಗಿವೆ. ಆದರೆ ಹನೂರನ ಕಾದಂಬರಿ ಹೆಸರಿರದ ಅನಾಥರ ಪೂರ್ವಗ್ರಹರಹಿತ ಸಮದೃಷ್ಟಿಯೆಂದೆಲ್ಲವನ್ನೂ ಮನೋಜ್ಞವಾಗಿ ಹಿಡಿದಿಡುತ್ತಿದೆ. ಪ್ರಚಲಿತ ಇತಿಹಾಸರಚನೆಯ ಮತ್ತು ಸಾಹಿತ್ಯದ ಚೌಕಟ್ಟುಗಳ ಹೊರಗೆ ನಿಂತು ಇಂದಿನ ಕನ್ನಡ ಬರವಣಿಗೆಗೆ ಅತ್ಯಂತ ಮೌಲಿಕ ಸೇರ್ಪಡೆಯಾಗಿರುವುದಲ್ಲದೆ ನವೋದಯ, ನವ್ಯ, ಬಂಡಾಯ, ನವ್ಯೋತ್ತರಗಳ ಹಾವಳಿಯಲ್ಲಿ ಹೊಸಮಾದರಿಗಳ ಹರಿಕಾರನೂ ಆಗಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.