ಈ ಸಲ ಶಿಕ್ಷಕರ ದಿನಾಚರಣೆಯ ದಿವಸ ನನ್ನ ಐದಾರು ವಿದ್ಯಾರ್ಥಿ– ವಿದ್ಯಾರ್ಥಿನಿಯರ ಹೊರತು ಯಾರೂ ನನಗೆ ವಿಷ್ಮಾಡಲಿಲ್ಲ. ಪ್ರತಿ ವರ್ಷ ಆ ದಿನ ನನಗೆ ಅಭಿನಂದನೆಗಳ ಸುರಿಮಳೆ. ಆದರೆ ಈ ಸಲ ಹೀಗೇಕಾಯಿತು? ಹಾಗೆ ನೂರಾರು ಮಂದಿ ನನ್ನನ್ನು ನೆನಪಿಸಿಕೊಳ್ಳುತ್ತಿದ್ದಾಗ ಅದರ ಮಹತ್ವ ಗೊತ್ತಾಗಿರಲಿಲ್ಲ. ಈ ಸಲ ತುಸು ಆತ್ಮಪರೀಕ್ಷೆ ಮಾಡಿಕೊಂಡೆ. ಸರಿ, ನಾನಾದರೂ ಎಂದಾರ ನನ್ನ ಶಿಕ್ಷಕರನ್ನು ನೆನಪಿಸಿಕೊಂಡು ಅವರಿಗೆ ವಿಷ್ಮಾಡಿದ್ದೆನೇ? ಎಂದೂ ಮಾಡಿರಲಿಲ್ಲ. ಈ ಸಲ ನನಗೆ ತಕ್ಕ ಶಾಸ್ತಿಯಾಯಿತೇನೋ ಅನಿಸಿತು.
ನನ್ನ ಶಾಲಾ ದಿನದ ಮೇಷ್ಟ್ರುಗಳು,ಮೇಡಮ್‌ಗಳು ನೆನಪಾಗತೊಡಗಿದರು. ಅವರಲ್ಲಿ ಬಹುತೇಕರು ಈಗಾಗಲೇ ತಮ್ಮ ಇಹಲೋಕ ಯಾತ್ರೆ ಮುಗಿಸಿರಬೇಕು ಅಥವಾ ತೀರಾ ಮುದುಕರಾಗಿರಬೇಕು. ಅಪ್ಪಿತಪ್ಪಿ ಎಲ್ಲಾರ ಭೇಟಿಯಾದಾಗ ನನ್ನ ಹಳೆ ಮೇಷ್ಟ್ರು– ಮೇಡಮ್ಮುಗಳು ನನ್ನ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ದರು. ‘ಏನಪ್ಪಾ, ನೀನಿಷ್ಟು ಎತ್ತರಕ್ಕೆ ಬೆಳೀತೀಯಾ ಅಂತ ಗೊತ್ತಿರಲಿಲ್ಲ. ಮೊನ್ನೆ ಟಿ.ವಿ.ಯಲ್ಲಿ ನಿನ್ನ ನೋಡಿದೆ. ಆಗಾಗ ನಿನ್ನ ಬಗ್ಗೆ ಓದುತ್ತಾ ಇರ್ತೀನಿ. ಕೀಪ್ ಇಟ್ ಅಪ್’– ಹಸನ್ಮುಖಿಗಳಾಗಿ ಅಭಿನಂದಿಸುತ್ತಿದ್ದರು.
ನಾನು ಕಾನ್ವೆಂಟ್ ಸ್ಕೂಲಿನಲ್ಲಿ ಓದಬೇಕೆಂದು ಚಿಕ್ಕಂದಿನಲ್ಲಿ ಹಟ ಮಾಡಿದ್ದೆ. ಆದರೆ ಅಲ್ಲಿನ ಕ್ರಿಶ್ಚಿಯನ್ ಮೇಷ್ಟ್ರು– ಮೇಡಮ್‌ಗಳು ನನಗೆ ಕೋಳಿಮೊಟ್ಟೆ, ಮಾಂಸ ತಿನ್ನಿಸುತ್ತಾರೆಂಬ ಹುಸಿ ಭಯದಿಂದ ನನ್ನ ಪಿತೃವರ್ಯರು ನನ್ನನ್ನು ಬಲವಂತವಾಗಿ ಕನ್ನಡ ಶಾಲೆಗೆ, ಅದರಲ್ಲೂ ಸರ್ಕಾರಿ ಶಾಲೆಗೇ ಸೇರಿಸಿದರು. ಆಗ ನನಗೆ ತೀರಾ ಸಿಟ್ಟು ಬಂದಿತ್ತು. ನನ್ನ ಮನಸ್ಸಿನಲ್ಲಿ ನಮ್ಮಜ್ಜಿಯಿಂದ ಕಲಿತ ಪೋಲಿ ಮಾತುಗಳಲ್ಲಿ ಚೆನ್ನಾಗಿ ಅವರನ್ನು ಬೈದುಕೊಂಡು ಸಮಾಧಾನಪಟ್ಟೆ. ಈಗ ಹೊರಳಿ ನೋಡಿದಾಗ ನನ್ನ ತಂದೆ ಒಳ್ಳೆಯದನ್ನೇ ಮಾಡಿದರು ಅನಿಸುತ್ತದೆ. ಅತ್ಯಂತ ಸೃಜನಶೀಲರಾದ ಕೆಳವರ್ಗಗಳ ಮಕ್ಕಳ ಒಡನಾಟ ಸಿಕ್ಕಿತು. ಅವರಿಂದ ಬಹಳ ಕಲಿತೆ. ನಮ್ಮ ಮೇಷ್ಟ್ರು– ಮೇಡಮ್‌ಗಳೂ ಸ್ಥಿತಿವಂತರೇನೂ ಆಗಿರಲಿಲ್ಲ. ಆದ್ರಿಂದಲೋ ಏನೋ ತುಂಬಾ ಮಾನವೀಯರಾಗಿದ್ದರು– ಕೆಲವರಿಗೆ ಕಲಿಸುವ ಪ್ರತಿಭೆ ಇಲ್ಲದಿದ್ದಾಗ ಕೂಡಾ.
ನನ್ನ ಪ್ರಾಥಮಿಕ ಕಲಿಕೆ ನಡೆದದ್ದು ಬೆಂಗಳೂರಿನ ಚಿಕ್ಕ ಲಾಲ್‌ಬಾಗ್ ಬಳಿಯ ಪೂರ್ಣಯ್ಯನ ಛತ್ರ ಶಾಲೆಯಲ್ಲಿ. ಹೇಳಿಕೇಳಿ ಸರ್ಕಾರಿ ಶಾಲೆ. ತರಗತಿ ನಡೆಯುವುದಕ್ಕಿಂತಾ ನಡೆಯದಿದ್ದದ್ದೇ ಹೆಚ್ಚು. ನನಗೆ ಆ ಕಾಲದ ಒಬ್ಬ ಮೇಷ್ಟ್ರು ನೆನಪಾಗುತ್ತಾರೆ. ಕಚ್ಚೆಪಂಚೆ ಮತ್ತು ಕೋಟು ಧರಿಸಿಕೊಂಡು ಬರುತ್ತಿದ್ದರು. ಯಾವಾಗಲೂ ಬೇಜಾರಾಗಿ ಕಾಣುತ್ತಿದ್ದರು. ಅಪರೂಪಕ್ಕೊಂದು ಸಲ ಪಾಠ. ಉಳಿದಂತೆ ಲೆಟ್ ಆಫ್. ಒಂದು ದಿವಸ ಗಣಿತ ಮಾಡಲು ಹೇಳಿ ಕ್ಲಾಸಿನಲ್ಲೇ ನಿದ್ದೆ ಹೋದರು. ನಾವು ಗಲಾಟೆ ಮಾಡತೊಡಗಿದೆವು. ಅವರ ನಿದ್ದೆಗೆ ಭಂಗವಾಯಿತು. ಎದ್ದವರೇ ಎಲ್ಲರನ್ನೂ ಹೊಡೆಯತೊಡಗಿದರು. ನಾನು ಮನೆಗೆ ಬಂದವನೇ ನನ್ನ ತಾಯಿಗೆ ತಿಳಿಸಿದೆ. ಅವರು ತಂದೆಯವರಿಗೆ ಹೇಳಿದಾಗ ಕೆಂಡಾಮಂಡಲವಾದರು. ಮರುದಿನ ನಾನು ತರಗತಿಯಲ್ಲಿ ಕೂತಿದ್ದಾಗ ನನ್ನ ತಂದೆ ಅಲ್ಲಿಗೆ ಹೆಡ್ ಮಾಸ್ತರ ಜೊತೆ ಬಂದರು. ಅಪರೂಪಕ್ಕೆ ಪಾಠ ಮಾಡುತ್ತಿದ್ದ ಮೇಷ್ಟ್ರನ್ನು ತಡೆದು ನನ್ನನ್ನು ಯಾಕೆ ಹೊಡೆದದ್ದು ಅಂತ ದಬಾಯಿಸತೊಡಗಿದರು. ಮೇಷ್ಟ್ರು ಉಸಿರಾಡದೆ ತಲೆತಗ್ಗಿಸಿ ನಿಂತಿದ್ದರು. ಆ ಮೇಷ್ಟರನ್ನು ವರ್ಗ ಮಾಡಿಸಿ ನನ್ನ ತಂದೆಯವರು ನನ್ನನ್ನು ಮನೆ ಹತ್ತಿರದ ಇನ್ನೊಂದು ಶಾಲೆಗೆ ಸೇರಿಸಿಬಿಟ್ಟರು.
ಹೊಸ ಶಾಲೆ ‘ಕೋಳಿಮೊಟ್ಟೆ ಸ್ಕೂಲ್’ ಎಂದು ಆಸುಪಾಸಿನಲ್ಲಿ ವಿಖ್ಯಾತ. ಆ ಶಾಲೆಯ ಹೆಡ್ ಮೇಡಂ ವಿಧವೆ. ತಲೆ ಬೋಳಿಸಿಕೊಂಡಿದ್ದರು. ಆದ್ದರಿಂದ ಅವರ ತಲೆ ದೊಡ್ಡ ಕೋಳಿಮೊಟ್ಟೆಯ ಹಾಗೆ ಕಾಣುತ್ತಿತ್ತು. ಖಾಸಗಿ ಶಾಲೆ. ಪಾಠ ಪ್ರವಚನ ಶಿಸ್ತಿನಿಂದ ನಡೆಯುತ್ತಿತ್ತು. ಆದರೆ ಅಲ್ಲಿನ ಯಾವ ಶಿಕ್ಷಕರೂ ನೆನಪಾಗುತ್ತಿಲ್ಲ. ಅದರ ಪಕ್ಕದಲ್ಲಿ ಸಾಯಂಕಾಲವಷ್ಟೇ ತೆರೆಯುತ್ತಿದ್ದ ಪರಮೇಶ್ವರಪ್ಪ ಅನ್ನುವವರ ಬೋಂಡದಂಗಡಿ ಮಾತ್ರ ನೆನಪಾಗುತ್ತಿದೆ.
ನಾನು ಮುಂದೆ ಸೇರಿದ ಮಾಧ್ಯಮಿಕ ಶಾಲೆಯ ಹೆಸರು ಆರ್.ಕೆ.ಎಸ್. ಸ್ಕೂಲ್. ಅದು ಬಳೇಪೇಟೆಯಲ್ಲಿತ್ತು. ಆ ಸ್ಕೂಲಿಗೂ ಒಂದು ಅಡ್ಡ ಹೆಸರು. ಆ ಶಾಲೆಯ ಹೆಡ್ ಮಾಸ್ಟರ್ ಅವರ ಹೆಸರು ಸಂದರ ರಾವ್ ಎಂದು. ಅವರು ಎತ್ತರಕ್ಕೆ ಬೆಳ್ಳಗಿದ್ದರು. ಅಂಥಾ ವಯಸ್ಸಾಗಿರಲಿಲ್ಲ. ಆದರೂ ಅವರ ತಲೆ ಗೋಲ್‌ಗುಂಬಸ್‌ನ ಹಾಗಾಗಿ ಒಂದು ಕೂದಲೂ ಇರಲಿಲ್ಲ. ಅವರ ತಲೆ ಒಂದು ದೊಡ್ಡ ಬನ್ನಿನಂತೆ ಕಾಣುತ್ತಿತ್ತು. ತುಂಟ ವಿದ್ಯಾರ್ಥಿಗಳು ಅವರಿಗೆ ಸುಂದರ್ ಬನ್ ಎಂದು ಹೆಸರುಕೊಟ್ಟಿದ್ದರು. ಆ ಶಾಲೆಯನ್ನೂ ‘ಸುಂದರ್ ಬನ್ ಸ್ಕೂಲ್’ ಎಂಬುದಾಗಿ ಕರೆಯುತ್ತಿದ್ದರು. ಹೆಡ್ ಮಾಸ್ತರು ನಮಗೆ ಕ್ಲಾಸ್ ಮಾಡುತ್ತಿರಲಿಲ್ಲ. ಆಗಾಗ ಬಂದು, ಗಲಾಟೆ ಮಾಡುತ್ತಿದ್ದ ಹುಡುಗರನ್ನು ಹೊಡೆದು ಹೋಗುತ್ತಿದ್ದರು. ನನ್ನ ತಂದೆ ಅವರ ಮಿತ್ರರಾಗಿದ್ದರಿಂದ ನನ್ನನ್ನು ಮಾತ್ರ ಹೊಡೆಯುತ್ತಿರಲಿಲ್ಲ.
ಅಲ್ಲೊಬ್ಬರು ವೆಂಕಟರಾವ್ ಎಂಬ ಅತ್ಯದ್ಭುತ ಶಿಕ್ಷಕರಿದ್ದರು. ಕಚ್ಚೆಪಂಚೆ, ಕೋಟು, ಕರೀಟೋಪಿ ತೊಟ್ಟು ಹಣೆಯಲ್ಲಿ ಕಪ್ಪು ಸಾದಿನ ಬೊಟ್ಟು ಧರಿಸುತ್ತಿದ್ದರು. ಇಂಗ್ಲಿಷ್ ಗ್ರಾಮರ್ ಕಲಿಸುವುದರಲ್ಲಿ ನಿಷ್ಣಾತರು. ಆ ಕಾಲದಲ್ಲಿ ಇಂಗ್ಲಿಷ್ ಕಲಿಕೆಯ ಬೈಬಲ್ಲಿನಂತಿದ್ದು ಇಂದು ನಿರುಪಯುಕ್ತವಾಗಿರುವ ರೆನ್ ಅಂಡ್ ಮಾರ್ಟಿನ್ ಗ್ರಾಮರ್ ಪುಸ್ತಕ ಒಂದು ರಸವತ್ತಾದ ರಮ್ಯ ಕತೆ ಅನ್ನೋ ಥರ ಪಾಠ ಹೇಳುತ್ತಿದ್ದರು. ಆದರೆ ಅವರು ಕೊಟ್ಟ ಅಭ್ಯಾಸಗಳಲ್ಲಿ ನಾವು ತಪ್ಪು ಮಾಡಿದಾಗ ಬೆನ್ನನ್ನು ಬಗ್ಗಿಸಿ ರಪರಪ ಹೊಡೆಯುತ್ತಿದ್ದರು. ನನಗೂ ಒಂದೆರಡು ಸಲ ಹೊಡೆದಿದ್ದರು. ಅವರ ಪ್ರಭಾವದಿಂದ ಇಂದಿಗೂ ನನ್ನ ಇಂಗ್ಲಿಷ್ ವ್ಯಾಕರಣ ಅಷ್ಟೇನೂ ಅಂಕುಡೊಂಕಾಗಿಲ್ಲ.
ನನ್ನ ಏಳನೇ ತರಗತಿಗೆ ಚಿಕ್ಕ ಲಾಲ್‌ಬಾಗ್ ಬಳಿ ಎಸ್.ಐ.ಟಿ. ಸ್ಕೂಲಿಗೆ ಸೇರಿದೆ. ಅಲ್ಲಿನ ಸುಶೀಲಮ್ಮ ಅನ್ನುವ ಹೆಡ್‌ಮೇಡಂ ಬಹಳ ಒಳ್ಳೆಯವರು. ಅವರಿಗೆ ಸಿಟ್ಟು ಬಂದರೆ ಅದರ ಕತೆ ಬೇರೆ. ಬೈಯುವುದು ಹೊಡೆಯುವುದರಲ್ಲಿ ಅವರಿಗೆ ಸಾಟಿಯೇ ಇರಲಿಲ್ಲ. ಅವರಿಗೆ ಸಿಟ್ಟು ಬರುವುದು ಗೊತ್ತಾಗುತ್ತಿತ್ತು. ಆಗ ನಾನು ಎದ್ದು ನಿಂತು ನನ್ನ ಕಿರು ಬೆರಳನ್ನು ನೀಡಿ ಒಂದಕ್ಕೆ ಹೋಗಬೇಕೆಂದು ಅನುಮತಿ ಕೇಳುತ್ತಿದ್ದೆ. ಇನ್ನೂ ಸಿಟ್ಟಾಗುತ್ತಿದ್ದಾಗ ಎರಡಕ್ಕೆ ಹೋಗಲು ಅನುಮತಿ ಕೇಳುತ್ತಿದ್ದೆ. ಶಾಲೆಯಲ್ಲಿ ಅದಕ್ಕೆ ಅವಕಾಶ ಇರಲಿಲ್ಲ. ಅದರ ನೆಪದಲ್ಲಿ, ಹತ್ತಿರದಲ್ಲೇ ಇದ್ದ ಮನೆಗೆ ಹೋಗಿ ಕುರುಕಲು ತಿಂಡಿ ತಿಂದುಕೊಂಡು ಬರುತ್ತಿದ್ದೆ.
ನಂತರ ನಾನು ಸೇರಿದ್ದು ಮೈಸೂರು ಬ್ಯಾಂಕ್ ಸರ್ಕಲ್‌ನ ಸೆಂಟ್ರಲ್ ಸ್ಕೂಲಿಗೆ. ನ್ಯಾಷನಲ್ ಅಥವಾ ಬೆಂಗಳೂರು ಹೈಸ್ಕೂಲಿಗೆ ಸೇರಬೇಕೆಂದು ನನ್ನ ಹಟ. ಆದರೆ ಅವು ದೂರವೆಂಬ ನೆಪದಿಂದ ತಂದೆಯವರು ಅನುಮತಿ ಕೊಡಲಿಲ್ಲ. ಇಲ್ಲಿ ಕೆಲವರು ಅದ್ಭುತವಾದ ಮೇಷ್ಟ್ರುಗಳು ಸಿಕ್ಕರು. ಮೊದಲನೆಯವರು ಪಂಡಿತ್ ಕೆ.ಪಿ.ಶಿವಲಿಂಗ-ಯ್ಯನವರು. ನನ್ನ ತಂದೆಯ ಶಿಷ್ಯರಾಗಿದ್ದು ಚಿಕ್ಕಂದಿನಿಂದಲೇ ನಮ್ಮ ಮನೆಗೆ ಬರುತ್ತಿದ್ದರು. ಹಳೆಗನ್ನಡ ಕಾವ್ಯದ ಬಗ್ಗೆ ನನ್ನನ್ನು ಮೊದಲು ಕುತೂಹಲಿಯಾಗಿಸಿದವರು ಇವರೇ.
ಕೆಪಿಎಸ್ ಅವರ ಕನ್ನಡ ಕ್ಲಾಸಿನಿಂದ ನಾವ್ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಕುಮಾರವ್ಯಾಸ ಭಾರತದ ಅಭಿಮನ್ಯು ವಧೆಯ ಪಾಠ ನಮಗೆ ಹೇಳಿದ್ದು ಇನ್ನೂ ನೆನಪಿದೆ. ಗಮಕದ ಶೈಲಿಯಲ್ಲಿ ಷಟ್ಪದಿಗಳನ್ನು ಇಂಪಾಗಿ ಹಾಡುತ್ತಿದ್ದರು. ಅಭಿಮನ್ಯುವಿಗೆ ಅನ್ಯಾಯ ಮಾಡಿದನೆಂಬ ಸಿಟ್ಟಿನಿಂದ, ದ್ರೋಣನ ಹೆಸರು ಬಂದಾಗ ದೋಣ ಎಂದು ಓದಿ ನಮ್ಮೆಲ್ಲರನ್ನೂ ನಗಿಸಿದ್ದರು. ಅಷ್ಟು ರಸವತ್ತಾದ ‘ತೊರವೆ ರಾಮಾಯಣ’ದ ಭಾಗವನ್ನೂ ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಸ್ವತಃ ಕವಿಗಳಾಗಿದ್ದ ಅವರು ತರಗತಿಯಲ್ಲಿ ಒಮ್ಮೊಮ್ಮೆ ತಮ್ಮ ಸ್ವಂತ ರಚನೆಗಳನ್ನು ಓದುತ್ತಿದ್ದರು. ‘ಭಾವನಾಮಯ ರಾಗ ಬೇಕಣ್ಣ, ಭಾರತೀಯರು ನಾವು ಭಾವನಾಮಯ ರಾಗ ಬೇಕಣ್ಣ’ ಎಂದು ತನ್ಮಯವಾಗಿ ಹಾಡಿ ನಮ್ಮನ್ನು ಮೆಚ್ಚಿಸುತ್ತಿದ್ದರು.
ಅಷ್ಟೇ ಶ್ರೇಷ್ಠ ಕನ್ನಡ ಪಂಡಿತರು ಬಿ.ವೆಂಕಟಪ್ಪನವರು. ಅವರೂ ನನ್ನ ತಂದೆಯ ಅಭಿಮಾನಿಗಳು. ಹಳೆಗನ್ನಡ ಕಾವ್ಯವನ್ನು ಗ್ರಾಮ್ಯ ಭಾಷೆಯಲ್ಲಿ ವಿವರಿಸಿ ಮನದಟ್ಟಾಗಿಸುತ್ತಿದ್ದರು. ‘ಪ್ರಭುಲಿಂಗ ಲೀಲೆ’ಯ ಮಾಯಾನಿರಸನ ಭಾಗವನ್ನು ಅವರು ಪಾಠ ಹೇಳಿದ್ದು ನೆನಪಿದೆ. ಸಿಟ್ಟಿಗೆದ್ದು ಮಾಯೆಯನ್ನು ಮುಂಡೆ ಅಂಥ ಬೈಯುತ್ತಿದ್ದರು. ‘ಅಲ್ಲಮನ ಯೇಗ್ತೆ ಕ್ಯಪಾಸಿಟಿ ಆ ಮುಂಡೆಗೇನು ಗೊತ್ತು’ ಅಂತ ಕೇಳುತ್ತಿದ್ದರು. ಇಬ್ಬರು ವಿಜ್ಞಾನದ ಮೇಷ್ಟ್ರುಗಳು ನೆನಪಾಗುತ್ತಾರೆ. ಅತ್ಯಂತ ಸುಂದರವಾಗಿದ್ದ ಜಲಾಲುದ್ದೀನ್ ಖಾನ್ ಎಂಬುವವರು ಕೆಮಿಸ್ಟ್ರಿ ಕಲಿಸುತ್ತಿದ್ದರು. ಕೆಮಿಸ್ಟ್ರಿ ಶುರುವಾಗುವ ಮುಂಚೆ ಅದು ಆಲ್ಕೆಮಿಯಾಗಿದ್ದು ಮುಂದೆ ಕೆಮಿಸ್ಟ್ರಿಯಾದ ಕತೆಯನ್ನು ಆಕರ್ಷಕವಾಗಿ ಬಣ್ಣಿಸಿದ್ದರು. ಪೂರ್ತಿ ಇಂಗ್ಲಿಷಿನಲ್ಲಿ ಪಾಠ ಮಾಡುತ್ತಿದ್ದವರು ಇವರೊಬ್ಬರೇ. ಪರಮೇಶ್ವರನ್ ಎಂಬ ಇನ್ನೊಬ್ಬರು ಫಿಸಿಕ್ಸ್ ಮೇಷ್ಟ್ರು. ಅರ್ಥವಾಗುವವರೆಗೂ ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ಪ್ರತಿ ವಾಕ್ಯದ ಕೊನೆಗೆ ‘ಆರ್ ಯು ಫಾಲೋಯಿಂಗ್ ಮಿ?’ ಅಂತ ರಾಗವಾಗಿ ಕೇಳುತ್ತಿದ್ದರು. ವಿಜ್ಞಾನವನ್ನು ಅಷ್ಟೇ ಅದ್ಭುತವಾಗಿ ಕಲಿಸುತ್ತಿದ್ದ ಇನ್ನಿಬ್ಬರು ಮೇಷ್ಟ್ರುಗಳು ಬಿ.ನಂಜುಂಡಪ್ಪ ಮತ್ತು ಬಿ.ಸಿದ್ಧಲಿಂಗಯ್ಯ.
ಎಚ್.ಗಂಗಪ್ಪ ಎಂಬ ಇನ್ನೊಬ್ಬ ಫಿಸಿಕ್ಸ್ ಮೇಷ್ಟ್ರೂ ನನಗೆ ಪ್ರಿಯರಾದರು. ಅವರು ದೊಡ್ಡಬೆಲೆಯ ಬಡ ಕುಟುಂಬದಿಂದ ಬಂದು ಸಿದ್ಧಗಂಗಾ ಮಠದಲ್ಲಿ ಓದಿ ಮುಂದೆ ಬಂದಿದ್ದರು. ಮುಂದೆ ಅವರು ಮದುವೆಯಾಗಲಿಲ್ಲ. ಸಂಗೀತದ ಖಯಾಲಿಯಿಂದ ಕರ್ನಾಟಕ ಸಂಗೀತ ಕಲಿಯುತ್ತಿದ್ದರು. ಮುಂದೆ ನನ್ನ ಕಮ್ಯೂನಿಸ್‌್ಟ ದಿನಗಳಲ್ಲಿ ನನಗೆ ಹತ್ತಿರವಾದರು. ನಂತರ ನನಗೆ ರಷ್ಯನ್ ಭಾಷೆಯನ್ನು ಕಲಿಸಿದವರು. ಬಹಳ ದಿನಗಳಿಂದ ಅವರನ್ನು ಕಂಡಿಲ್ಲ. ನನ್ನ ಆ ದಿನದ ಮೇಷ್ಟ್ರುಗಳಲ್ಲಿ ಬಹುಕಾಲ ನನ್ನ ಸಂಪರ್ಕದಲ್ಲಿದ್ದರು.
ಸೆಂಟ್ರಲ್ ಹೈಸ್ಕೂಲಿಗೆ ಬರುವ ಅಧಿಕಾಂಶ ಹುಡುಗರು ಕಬ್ಬನ್‌ಪೇಟೆಯ ಗೂಂಡಾಗಳೆಂಬುದು ಜನರ ಅಂಬೋಣವಾಗಿತ್ತು. ನನಗೆ ಹಾಗೆ ಕಾಣಲಿಲ್ಲ. ಎಲ್ಲಾ ಸರಿಯಾಗೇ ಇತ್ತು. ಆದರೆ ಜಾತಿ ವೈಷಮ್ಯದ ಬಗೆಗಿನ ಕಟುಪಾಠಗಳನ್ನೂ ಇಲ್ಲಿ ಕಲಿಯಬೇಕಾಯಿತು. ಮುದ್ದುಕೃಷ್ಣ ಎಂಬ ವಿಜ್ಞಾನದ ಮೇಷ್ಟ್ರು ನಮ್ಮ ತರಗತಿಯ ಶೆಟ್ಟರ ಜಾತಿಯ ಹುಡುಗನಾಗಿದ್ದ ಪ್ರಸನ್ನ ಕುಮಾರ ಎಂಬುವನನ್ನು ಸದಾ ತಮಾಷೆ ಮಾಡುತ್ತಿದ್ದರು. ನಡುನಡುವೆ ‘ಏ ಶೆಟ್ಟಿ ಅರ್ಥಮೈಯಿಂದಾ?’ ಅಂತ ಕೇಳುತ್ತಿದ್ದರು. ಪ್ರಸನ್ನನಿಗೋ ಫಿಸಿಕ್ಸ್ ಅಂದರೆ ತಲೆನೋವು.
‘ಫಿಸಿಕ್ಸ್ ಅಂಟೆ ಶೆಟ್ಟವಾಳ್ಳು ಗುಂತಪನ್ನಾಲು ತಿನೇ ಅಟ್ಲ ಕಾದು’ ಎಂದು ಮೂದಲಿಸುತ್ತಿದ್ದುದು ನೋಡಿ ನನಗೆ ಅಸಹ್ಯವಾಗುತ್ತಿತ್ತು. ಇನ್ನೊಂದು ಅಸಹ್ಯಕಾರಿ ಘಟನೆಗೆ ಕಾರಣರಾದವರು ಲಕ್ಷ್ಮಣರಾವ್ ಎಂಬ ಇಂಗ್ಲಿಷ್ ಮೇಷ್ಟ್ರು. ಬೋಳುತಲೆಯ ಅವರು ಸರಿಯಾಗಿ ಹಲ್ಲುಜ್ಜುತ್ತಿರಲಿಲ್ಲ. ಅವರ ಹಲ್ಲಿನ ಮೇಲೆ ಸದಾ ಅರ್ಧ ಇಂಚು ಪಾಚಿ. ಹುಡುಗರು ‘ತಿಗಣೆ ಮೇಷ್ಟ್ರು’ ಅಂತ ಹೆಸರಿಟ್ಟಿದ್ದರು. ಒಂದು ಸಲ ಇಂಗ್ಲಿಷ್ ಪಾಠವೊಂದರ ತಾತ್ಪರ್ಯ ಬರೆಯುವ ಮನೆಗೆಲಸ ಕೊಟ್ಟಿದ್ದರು. ಅದರಲ್ಲಿ ನಾನು ಸಹಜವಾಗಿಯೇ ಹಲವು ತಪ್ಪುಗಳನ್ನು ಮಾಡಿದ್ದೆ. ಒಂದೊಂದು ವಾಕ್ಯವನ್ನೂ ಓದಿ ತಮಾಷೆ ಮಾಡಿದರು. ‘ಇಂಗ್ಲಿಷ್ ಒಂದಕ್ಷರ ಬರೋಲ್ಲ. ನಿಮಗೆಲ್ಲಾ ಇಂಗ್ಲಿಷ್ ಮೀಡಿಯಂ ಬೇಕಾ? ಯೋಗ್ಯತೆ ಬೇಕು ಕಣೋ...’ ಅಂತಾ ಜರಿಯತೊಡಗಿದರು. ನನಗೆ ತೀರಾ ಅವಮಾನವಾಯಿತು. ಬದುಕಿನಲ್ಲಿ ಏನಾಗದಿದ್ದರೂ ಒಳ್ಳೆ ಇಂಗ್ಲಿಷ್ ಕಲಿಯಬೇಕೆಂದು ಪ್ರತಿಜ್ಞೆ ಮಾಡಿದೆ. ಮನೆಯಲ್ಲಿ ಹಟ ಹಿಡಿದು ಹತ್ತನೇ ತರಗತಿಗೆ ಆ ಸ್ಕೂಲನ್ನು ಬಿಟ್ಟು ಬಸವನಗುಡಿಯ ಬೆಂಗಳೂರು ಹೈಸ್ಕೂಲು ಸೇರಿದೆ. ಆದರೆ ಈಗ ಲಕ್ಷ್ಮಣರಾಯರ ಬಗ್ಗೆ ಸಿಟ್ಟಿಲ್ಲ. ಅವರು ಹಾಗೆ ದಂಡಿಸದಿದ್ದರೆ ನಾನು ಇಂಗ್ಲಿಷ್ ಎಂ.ಎ. ಮಾಡುವ ಗೊಡವೆಗೆ ಬಹುಶಃ ಹೋಗುತ್ತಿರಲಿಲ್ಲ.
ಸೆಂಟ್ರಲ್ ಹೈಸ್ಕೂಲಿನ ಪೋಕರಿ ಹುಡುಗರ ನಡುವೆ ಮಿಂಚುತ್ತಿದ್ದ ನನಗೆ ಹೊಸ ಶಾಲೆಯ ಸಭ್ಯ ವಾತಾವರಣ ಉಸಿರುಗಟ್ಟಿಸುತ್ತಿತ್ತು. ಅದ್ಭುತವಾದ ಮೇಷ್ಟ್ರುಗಳಿದ್ದರು. ನಂಜುಂಡಶಾಸ್ತ್ರಿ ಎಂಬ ಇಂಗ್ಲಿಷ್ ಮೇಷ್ಟ್ರು ಚಿರಸ್ಮರಣೀಯರು. ಅವರು ಅಲೆಗ್ಸಾಂಡರ್ ಪೋಪ್‌ನ ಒಂದು ಸಣ್ಣ ಪದ್ಯವನ್ನು ಮೂರು ಕ್ಲಾಸುಗಳಲ್ಲಿ ಹೇಳಿಕೊಟ್ಟರು. ಪೋಪ್‌ನ ಬದುಕಿನ ಅತ್ಯಂತ ಸೂಕ್ಷ್ಮ ಘಟನೆಗಳನ್ನು ಮನದುಂಬುವಂತೆ ಬಣ್ಣಿಸಿದರು. ಅವರ ಪಾಠ ಕೇಳುವ ಪುಣ್ಯ ಬಹಳ ದಿನ ದೊರಕಲಿಲ್ಲ. ಕಾಯಿಲೆ ಬಿದ್ದು ಕೆಲವೇ ದಿನಗಳಲ್ಲಿ ದಿವಂಗತರಾದರು. ಅದ್ಭುತವಾದ ಕನ್ನಡ ಮೇಷ್ಟ್ರೂ ಇದ್ದರು. ಅವರ ಹೆಸರು ಬಿಂದುಮಾಧವಾಚಾರ್ಯ. ಲಕ್ಷ್ಮೀಶನ ವಾರ್ಧಕ ಷಟ್ಪದಿಯೊಂದನ್ನು ಗಟ್ಟಿಯಾಗಿ ಓದಲು ಇಡೀ ಕ್ಲಾಸಿಗೆ ಹೇಳಿದರು. ಯಾರಿಗೂ ಸಾಧ್ಯವಾಗಲಿಲ್ಲ. ನಾನು ಮಾತ್ರ ಸ್ಪಷ್ಟವಾಗಿ ಓದಿ ಹೇಳಿದೆ. ‘ನೀವೆಲ್ಲ ಅವನ ಕಾಲಡಿ ತೂರಿರೋ’ ಅಂತ ಬೇರೆ ಹುಡುಗರನ್ನು ಬೈದರು.
ಶೆಲ್ವಪಿಳ್ಳೆ ಅಯ್ಯಂಗಾರ್ ಎಂಬ ಅತ್ಯುತ್ತಮ ಗಣಿತದ ಮೇಷ್ಟ್ರು ಗಣಿತವನ್ನೂ ಮನರಂಜನಾತ್ಮಕವಾಗಿ ಕಲಿಸುತ್ತಿದ್ದರು. ಬಿ.ವಿ.ನಾಗರಾಜ ಎಂಬ ಕೆಮಿಸ್ಟ್ರಿ ಮೇಷ್ಟ್ರೂ ನನಗೆ ಮೆಚ್ಚಿನವರಾದರು. ನಮ್ಮ ಡ್ರಿಲ್ ಮೇಷ್ಟ್ರಾಗಿದ್ದ ಗೋಪಾಲರಾವ್ ತುಂಬಾ ಸ್ಟ್ರಿಕ್ಟ್. ಅವರು ಎಷ್ಟು ಹೇಳಿದರೂ ಸೋಂಬೇರಿಯಾದ ನಾನು ಇಸ್ತ್ರಿ ಮಾಡಿದ ಬಟ್ಟೆ ತೊಟ್ಟುಕೊಂಡು ಕ್ಲಾಸಿಗೆ ಹೋಗುತ್ತಿರಲಿಲ್ಲ. ನನ್ನ ಪ್ಯಾಂಟ್ ಯಾವಾಗಲೂ ತುಂಬಾ ಮೇಲಿರುತ್ತಿತ್ತು. ತಲೆ ಬೇರೆ ಬಾಚುತ್ತಿರಲಿಲ್ಲ. ಅವರು ನನ್ನನ್ನು ಬೇರೆ ಹುಡುಗರಿಗೆ ತೋರಿಸಿ ‘ನೋಡ್ರೋ ಈ ಸಾಬಿ ಫಜೀತೀನ’ ಅಂತ ಗೇಲಿ ಮಾಡುತ್ತಿದ್ದರು. ಶಿಕ್ಷಕರಾದ ಇವರೆಲ್ಲರೂ ಅಷ್ಟು ನಿಷ್ಠಾವಂತ ವಿದ್ಯಾರ್ಥಿಯಲ್ಲದ ನನಗೆ ನೆನಪಾಗುತ್ತಾರೆ. ಅವರು ನನಗೆ ಕಲಿಸದಿದ್ದರೆ ನಾನು ಇನ್ನೇನಾಗುತ್ತಿದ್ದೆನೋ ಗೊತ್ತಿಲ್ಲ. ನನಗೆ ಅಭಿನಂದನೆ ಸಲ್ಲಿಸುವುದನ್ನು ಮರೆತು, ನಾನು ನನ್ನ ಶಾಲಾ ದಿನಗಳ ಮೇಷ್ಟ್ರುಗಳನ್ನು ಸ್ಮರಿಸಲು ಕಾರಣರಾದ ನನ್ನ ವಿದ್ಯಾರ್ಥಿಗಳಿಗೆ ನಾನು ಆಭಾರಿ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.