ಯ ಪ್ರೊ.ಅನಂತಮೂರ್ತಿ ಅವರೇ, ತಮಗೆ ಕೆಲವು ಮಾಸಗಳ ಹಿಂದೆ ದೂರ ದೇಶದಿಂದ ನಾನು ಫೋನು ಮಾಡಿದ್ದೆ. ಆಗ ನೀವು ಹೇಳಿದ್ದಿರಿ; ‘ಬಾರಯ್ಯ, ನಿನ್ನನ್ನು ನೋಡಿ ತುಂಬಾ ದಿವಸ ಆಯಿತು. ನನಗೆ ಈಚೆಗೆ ಆರೋಗ್ಯ ತೀರಾ ಅಷ್ಟಕ್ಕಷ್ಟೆ. ಆದಷ್ಟು ಬೇಗ ಬಾ. ನನಗೂ ನಿನಗೂ ಮನಸ್ತಾಪ ಆಗಿದೆ. ಅದನ್ನು ಬೇಗ ಸರಿಪಡಿಸಿಕೋಬೇಕು’.
ನಿಮ್ಮಿಂದ ಕೆಲವು ಬಾರಿ ಉಪಕೃತನಾಗಿದ್ದು, ನಿಮ್ಮ ಬಗ್ಗೆ ಸದಾ ಕೃತಜ್ಞತಾಭಾವದಲ್ಲಿ ನಾನಿದ್ದೆ. ಎಷ್ಟೋ ಬಾರಿ ನಿಮ್ಮೊಂದಿಗೆ ಗಂಟೆಗಟ್ಟಲೆ ಒಟ್ಟಿಗಿದ್ದು ಅವಿಸ್ಮರಣೀಯವಾದ ಮಾತುಕತೆ ನಡೆಸಿದ್ದೆ. ಸೂಕ್ಷ್ಮವಾದದ್ದನ್ನು ಹಠಾತ್ತನೆ ಗ್ರಹಿಸುವ ನಿಮ್ಮ ಬುದ್ಧಿಕೌಶಲ, ಜಟಿಲವಾದದ್ದನ್ನು ಮೋಹಕವಾಗಿ ಅಭಿವ್ಯಕ್ತಪಡಿಸುವ ಮಾತಿನ ಮೋಡಿ, ಜೀವಜಗತ್ತಿನ ಬಗ್ಗೆ ನಿಮಗಿದ್ದ ನಿರಂತರ ಕುತೂಹಲ ಇವುಗಳಿಂದ ಪ್ರಭಾವಿತನಾಗಿದ್ದೆ. ದೇಶದಾದ್ಯಂತ ನಿಮ್ಮ ಭಾಷಣಗಳನ್ನು ಹಲವು ಸಂದರ್ಭಗಳಲ್ಲಿ ಕೇಳಿದಾಗಲೆಲ್ಲ ತಲೆದೂಗಿದ್ದೆ. ಈ ಥರದ ನೇರ ಸಂಪರ್ಕ ಸಿಗದೆ ಹೋಗಿದ್ದರೂ ನಿಮ್ಮ ಶ್ರೇಷ್ಠ ಬರಹಗಳಾದ ಕೆಲವು ಕತೆಗಳು, ವಿಮರ್ಶಾ ಲೇಖನಗಳ ಆಧಾರದ ಮೇಲೆ ನೀವು ಕನ್ನಡದ ವಿಲಕ್ಷಣ ಬರಹಗಾರರಲ್ಲಿ ಒಬ್ಬರೆಂದು ಸದಾ ಗೌರವಿಸುತ್ತಿದ್ದೆ.
ಈ ಎಲ್ಲ ಕಾರಣಗಳಿಂದ ನಿಮ್ಮ ಜೊತೆಗಿನ ಮನಸ್ತಾಪವನ್ನು ಸರಿಪಡಿಸಿಕೊಳ್ಳುವುದು ನನಗೂ ಮುಖ್ಯವಾಗಿತ್ತು. ನನ್ನ ಜೀವಿತಕಾಲದ ಅತ್ಯಂತ ಪ್ರತಿಭಾವಂತರೊಬ್ಬರ ಜೊತೆ ಮನಸ್ತಾಪ ಮುಂದುವರಿಸುವ ಇಚ್ಛೆ ನನಗೂ ಇರಲಿಲ್ಲ. ಆದರೆ ಬಯಕೆ ಕೈಗೂಡಲೇ ಇಲ್ಲ. ನಾನು ಬೆಂಗಳೂರಿಗೆ ಬಂದಾಗ ನೀವು ಪ್ರವಾಸ ಹೋಗಿದ್ದಿರಿ, ನೀವು ಅಲ್ಲಿದ್ದಾಗ ನಾನು ಇನ್ನೆಲ್ಲಿಯೋ ಇದ್ದೆ. ಬಹುಶಃ ನನ್ನ ಮೆಚ್ಚಿನ ಕತೆಗಾರ ಸಿಂಗರ್ ಒಂದು ಕಡೆ ಹೇಳುವ ಹಾಗೆ, ಇಬ್ಬರು ಜೀವಿಗಳು ಎಷ್ಟು ನಿಕಟವಾಗಬಹುದು ಎಂಬುದರ ಬಗ್ಗೆ ಭಗವಂತ ಅಗೋಚರ ಮಿತಿಗಳನ್ನು ನಿರ್ಮಿಸಿರುತ್ತಾನೆ.
ಈಗ ನನಗುಳಿದಿರುವ ಮಾರ್ಗವೆಂದರೆ ಆ ಮನಸ್ತಾಪವನ್ನು ಈ ಪತ್ರದ ಮುಖೇನ ಬಗೆಹರಿಸಿಕೊಳ್ಳುವುದು. ಈ ಪತ್ರ ನಿಮ್ಮನ್ನು ತಲುಪುತ್ತದೆಂಬ ಸಂಪೂರ್ಣ ನಂಬಿಕೆ ನನಗಿಲ್ಲ. ಆದರೆ ಒಂದು ಸಣ್ಣ ಸಾಧ್ಯತೆ ಇದೆ. ಜೀವವೊಂದು ದೇಹದಿಂದ ಬಿಡುಗಡೆ ಹೊಂದಿದ ನಂತರ ಹಲವು ದಿನಗಳವರೆಗೆ ತಾನು ಬದುಕಿದ್ದ ಜಾಗದ ಸುತ್ತಾಮುತ್ತ ಅಡ್ಡಾಡಿಕೊಂಡು, ಏನನ್ನೂ ಮಾಡಲಾಗದೆ ಎಲ್ಲವನ್ನೂ ನೋಡುತ್ತಿರುತ್ತದೆ ಎಂಬುದು ಮರಣೋತ್ತರ ಅನುಭವಗಳ ಬಗ್ಗೆ ಸಂಶೋಧನೆ ನಡೆಸಿರುವ ವಿದ್ವಾಂಸರ ಅನಿಸಿಕೆ. ಒಂದು ಪಕ್ಷ ಇದು ನಿಜವಾಗಿದ್ದರೆ ನನ್ನ ಮಾತುಗಳು ನಿಮಗೆ ಕೇಳಿಸುತ್ತಿರಬೇಕು.
ಮನಸ್ತಾಪವನ್ನು ಬಗೆಹರಿಸಿಕೊಳ್ಳುವುದರ ಜೊತೆಗೆ ನಿಮಗೆ ಕೊನೆಯ ಸಲಾಮು ಹೇಳುವ ಸಮಯವೂ ಬಂದೊದಗಿದೆ. ಇದು ದುಃಖಕರ. ನಿಮ್ಮ ಆರೋಗ್ಯದ ತೊಂದರೆಗಳ ಬಗ್ಗೆ ಸದಾ ಮಾಹಿತಿ ಪಡೆದುಕೊಳ್ಳುತ್ತಿದ್ದ ನನಗೆ, ಇಷ್ಟು ಬೇಗ ನೀವು ಕಾಲವಾಗುತ್ತೀರಿ ಎಂಬುದನ್ನು ಊಹಿಸಲು ಸಾಧ್ಯವಾಗಿರಲಿಲ್ಲ. ನಿಮ್ಮ ಸಂಕಲ್ಪ ಬಲದ ಸಹಾಯದಿಂದ ನೀವಿನ್ನೂ ಬಹುಕಾಲ ಜೀವಿಸುವಿರೆಂಬ ಭರವಸೆ ನನಗಿತ್ತು. ನಿಮ್ಮ ಜೊತೆ ಮೊಖ್ತಾ ಎಲ್ಲವನ್ನೂ ಬಗೆಹರಿಸಿಕೊಳ್ಳಬಹುದೆಂಬ ನಂಬಿಕೆಯೂ ಇತ್ತು. ಆದರೆ ಕರುಣಿಯಲ್ಲದ ಕಾಲರಾಯ ಆ ಭರವಸೆಯನ್ನು ಸುಳ್ಳು ಮಾಡಿದ್ದಾನೆ, ಜೊಳ್ಳು ಮಾಡಿದ್ದಾನೆ. ನಿಮಗೆ ಸಾರ್ವಜನಿಕವಾಗಿ ನಾನು ಬರೆಯುತ್ತಿರುವ ಈ ವಿಲಕ್ಷಣ ಪತ್ರದಲ್ಲಿ ನಿಮ್ಮನ್ನು ನಾನೇಕೆ ಗೌರವಿಸುತ್ತೇನೆ, ಹೀಗೆ ನಿಮ್ಮನ್ನು ಗೌರವಿಸಲು ಪ್ರೇರೇಪಿಸುವ ನಿಮ್ಮ ಅನನ್ಯ ಗುಣಗಳು ಯಾವುವು ಎಂಬುದರ ಬಗ್ಗೆ ಬರೆಯೋಣ ಎನ್ನಿಸುತ್ತಿದೆ.
ನೀವು ಕಣ್ಮರೆ ಆದಾಗಿನಿಂದ ನಾಡಿನ ಹಲವು ಗಣ್ಯರು, ಕಲಾವಿದರು, ರಾಜಕೀಯ ನೇತಾರರು ನಿಮ್ಮನ್ನು ಕೊಂಡಾಡಿ ಕಂಬನಿ ಮಿಡಿದಿದ್ದಾರೆ. ಅವರಲ್ಲಿ ಬಹುತೇಕರು ನಿಮ್ಮ ಹಾಗೂ ನಿಮ್ಮ ಕೃತಿಗಳ ಬಗ್ಗೆ ಆಳವಾದ ತಿಳಿವಳಿಕೆ ಉಳ್ಳವರಲ್ಲ. ನಿಮ್ಮ ಕೃತಿಗಳನ್ನು ಆಳವಾಗಿ ಅರಿತವರು ನೀವಿಲ್ಲದ ಸಂದರ್ಭದಲ್ಲಿ ಅವುಗಳ ಮರುಮೌಲ್ಯೀಕರಣವನ್ನು ವಿಶದವಾಗಿ ಮಾಡಲಿದ್ದಾರೆ. ಅದಕ್ಕಾಗಿ ನಿಮ್ಮ ಹಲವು ಓದುಗರಂತೆ ನಾನೂ ಕಾಯುತ್ತೇನೆ.
ನಿಮ್ಮ ಎಲ್ಲ ನಿಲುವುಗಳನ್ನೂ, ತೀರ್ಮಾನಗಳನ್ನೂ ಒಪ್ಪದೆಯೂ ನನ್ನಂಥವನು ನಿಮ್ಮನ್ನು ಆದರಿಸುವುದಕ್ಕೆ ಕಾರಣವೇನು?
ನಿಮ್ಮನ್ನು ನನಗೆ ಮೊದಲ ಸಲ ಪರಿಚಯ ಮಾಡಿದವರು ನನ್ನ ಮೇಷ್ಟ್ರಾಗಿದ್ದ ಲಂಕೇಶರು. ಆಗ ತುರ್ತು ಪರಿಸ್ಥಿತಿ. ನೀವಾಗಲೇ ಆ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದ್ದಿರಿ. ಆ ಬಗ್ಗೆ ಮಾತನಾಡಲು ಲಂಕೇಶರ ಬಳಿ ಬಂದಿದ್ದಿರಿ. ಆಗ ಲಂಕೇಶರು ನಿಮಗೆ ನನ್ನನ್ನು ಪರಿಚಯಿಸಿ, ಈತ ಇಂಥವರ ಮಗ, ಆದರೆ ಈತನಿಗೆ ಅವರ ಬಗ್ಗೆ ತುಂಬಾ ಸಿಟ್ಟು ಎಂದು ಹೇಳಿದರು. ಆಗ ನೀವು ಒಂದು ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದಿರಿ: ‘ಅಲ್ಲ ಲಂಕೇಶ್, ಈ ತಲೆಮಾರಿನ ಹುಡುಗರು ಹಿಂದಿನವರ ಬಗ್ಗೆ ಯಾಕೆ ಸಿನಿಕರಾಗಿರ್ತಾರೆ?’ ಲಂಕೇಶರು ಮುಗುಳ್ನಕ್ಕರು. ನನಗೆ ನಿಮ್ಮ ಮೇಲೆ ಸಿಟ್ಟು ಬಂತು. ‘ಸಂಸ್ಕಾರ’ದಂಥ ಕೃತಿಯನ್ನು ರಚಿಸಿ --ಪಳೆಯುಳಿಕೆಗಾರರನ್ನು ಎದುರು ಹಾಕಿಕೊಂಡಿದ್ದ ನಿಮ್ಮಂಥವರಿಂದ ಈ ಮಾತನ್ನು ನಾನು ನಿರೀಕ್ಷಿಸಿರಲಿಲ್ಲ. ಆ ಸಂಪ್ರದಾಯ ವಿರೋಧಿ ಅನಂತಮೂರ್ತಿ ಎಲ್ಲಿ? ಹೀಗೆ ಹಳೆಯದರ ಬಗ್ಗೆ ಸಹಾನುಭೂತಿಯಿರುವ ಈ ಅನಂತಮೂರ್ತಿ ಎಲ್ಲಿ? ಇವರಿಬ್ಬರಿಗೂ ಎತ್ತಣಿಂದೆತ್ತಣ ಸಂಬಂಧ?
ಈಗ ಹೊರಳಿನೋಡಿದರೆ ಈ ಸಂಬಂಧವೇ ನಿಮ್ಮ ಸರೀಕರ ನಡುವೆ ನಿಮ್ಮ ಅನನ್ಯತೆ ಎನಿಸುತ್ತದೆ. ನಿಮ್ಮ ಕೃತಿಗಳೆಲ್ಲದರಲ್ಲೂ ವ್ಯಕ್ತವಾಗುವ ಗುಣವೆಂದರೆ ಹಳೆಯದು ಮತ್ತು ಹೊಸದರ ಬಗ್ಗೆ ನಿಮಗಿದ್ದ ವಿಮರ್ಶಾತ್ಮಕ ನಿಲುವು. ಈ ನಿಲುವು ಎಂದೂ ಸಾರಾಸಗಟಾದ ತಿರಸ್ಕಾರವಾಗಿರಲಿಲ್ಲ ಎಂಬುದು ಮುಖ್ಯ. ಲಂಕೇಶರಿಗಾಗಲೀ ತೇಜಸ್ವಿಯವರಿಗಾಗಲೀ ಗತ ಎಂಬುದು ಒಂದು ಕಾರಾಗೃಹ. ಅಡಿಗರಂಥವರಿಗೆ ಗತ ಹೊಸ ಸಾಧ್ಯತೆಗಳ ಗಣಿ. ನಿಮಗೆ ಹಾಗಲ್ಲ. ಗತದ ಕುಸಿತವನ್ನು ನಿರ್ಮಮವಾಗಿ ವಿವರಿಸುವ ನೀವು ಆಧುನಿಕ ವಿಕಾರಗಳ ಬಗ್ಗೆಯೂ ತೆರೆದ ಕಣ್ಣವರಾಗಿದ್ದಿರಿ. ಪ್ರಾಣೇಶಾಚಾರ್ಯ ಮುಂತಾದ ನಿಮ್ಮ ಹೀರೊಗಳು ಗತಕ್ಕೆ ವಿದಾಯ ಹೇಳಿ ಅನಿರ್ದಿಷ್ಟವಾದ ಪ್ರಸ್ತುತವನ್ನು ಹೊಕ್ಕರೆ, ಬಿಸಿಲುಕುದುರೆಯ ಕಥಾನಾಯಕ ಎಲ್ಲೋ ಒಂದು ಕಡೆ ಹಿಂತಿರುಗುತ್ತಿರುತ್ತಾನೆ. ಹೀಗೆ ಹಿಂದುಮುಂದುಗಳ ಸಮಾನ ಸೆಳೆತದ ನಡುವೆ ನಿಮ್ಮ ಚಿಂತನೆ ಮತ್ತು ಪ್ರತಿಭೆಗಳು ಒಂದು ವಿಮರ್ಶಾತ್ಮಕ ವರ್ತಮಾನವನ್ನು ಕಲ್ಪಿಸಿಕೊಟ್ಟವು. ಇದರ ಜೊತೆಗೇ ತಳಕು ಹಾಕಿಕೊಂಡಿತ್ತು ನಿಮ್ಮ ಪ್ರಜಾಸತ್ತಾತ್ಮಕ ಬದ್ಧತೆ. ನಾವು ಪ್ರಜಾಪ್ರಭುತ್ವವನ್ನು ಗೌರವಿಸಿದರೆ ಎಲ್ಲ ದನಿಗಳನ್ನೂ ಕೇಳಿಸಿಕೊಳ್ಳಬೇಕು. ಹೊಸ ಕಾಲದ ದನಿಗಳಷ್ಟೇ ಹಳೆಯ ಕಾಲದ ದನಿಗಳೂ ಮುಖ್ಯ. ‘ಸಂತಃ ಪರೀಕ್ಷಾನಂತರಂ ಭಜಂತೆ’ ಅಂತ ಕಾಳಿದಾಸ ಹೇಳಿದನಲ್ಲ, ಹಾಗೆ.
ಪರ- ವಿರೋಧಗಳೆರಡಕ್ಕೂ ಕಿವಿಗೊಡುವ ನಿಮ್ಮ ಪ್ರಜಾಸತ್ತಾತ್ಮಕ ಬದ್ಧತೆಗೂ, ನಿರಂತರ ಭಿನ್ನಮತದಲ್ಲಿ ವಿಹರಿಸುವ ಲಂಕೇಶರ ಪ್ರಜಾಸತ್ತಾತ್ಮಕ ಬದ್ಧತೆಗೂ ಇದ್ದ ಅಂತರ್ ವಿರೋಧ ನಮ್ಮ ಕಾಲದ ಒಂದು ಸಾಂಸ್ಕೃತಿಕ ವಿಶೇಷ. ಉದಾಹರಣೆಗೆ ಲಂಕೇಶರು ವ್ಯವಸ್ಥೆಯ ಜೊತೆ ಎಂದೂ ರಾಜಿ ಮಾಡಿಕೊಳ್ಳದೆ ಅದರ ಹೊರಗೇ ಉಳಿದರು. ನಿಮ್ಮಂತೆ ಕುಲಪತಿ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಇತ್ಯಾದಿ ಆಗಲೇ ಇಲ್ಲ. ಆದ್ದರಿಂದ ಅಪ್ಪಟ ಭಿನ್ನಮತೀಯರಾಗಿ ತಮ್ಮ ವಾಣಿಗೆ ಎಲ್ಲರಿಗಿಂತ ಭಿನ್ನವಾದ ನಿಶಿತತೆಯನ್ನು ತಂದುಕೊಂಡರು. ನೀವು ಲಂಕೇಶರ ಹಾಗಿರಬೇಕಾಗಿತ್ತು ಅಂತ ನಾನು ಹೇಳುತ್ತಿಲ್ಲ. ನಿಮ್ಮ ಪ್ರಜಾಸತ್ತೆಯ ಮಾದರಿ ಬೇರೆಯ ಥರದ್ದೆಂದೂ, ಅದಕ್ಕೆ ತನ್ನದೇ ಆದ ತರ್ಕವಿದೆಯೆಂದೂ ಹೇಳುತ್ತಿದ್ದೇನೆ. ಹೊಸ ಚಿಂತನೆಯ ನೀವು ಆಡಳಿತಾತ್ಮಕ ಸ್ಥಾನಗಳಿಗೆ ಬಂದಾಗ ಅತ್ಯುತ್ತಮವಾದ ಪ್ರಜಾಸತ್ತಾತ್ಮಕ ಬದಲಾವಣೆಗಳನ್ನು ತಂದಿರಿ. ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿದ್ದಾಗ ಗೊಡ್ಡು ನಿಯಮಗಳನ್ನು ದೂಳೀಪಟ ಮಾಡಿ ಪಿಎಚ್.ಡಿ ಇಲ್ಲದ ಪ್ರತಿಭಾವಂತರಾದ ವಿನಯಚಂದ್ರನ್, ನರೇಂದ್ರ ಪ್ರಸಾದ್ ಮುಂತಾದವರಿಗೆ ಕೆಲಸ ಕೊಟ್ಟಿರಿ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಈವರೆಗೆ ಸಂವಿಧಾನಾತ್ಮಕ ಮಾನ್ಯತೆ ಸಿಗದ ಬುಡಕಟ್ಟು ಭಾಷೆಗಳ ಸಾಹಿತ್ಯಿಕ ಕೊಡುಗೆಯನ್ನು ಗೌರವಿಸುವ ಪರಿಪಾಠವನ್ನು ಶುರು ಮಾಡಿದಿರಿ. ವ್ಯವಸ್ಥೆಯು ಸದ್ವಿಚಾರವುಳ್ಳ ವ್ಯಕ್ತಿಯ ಕೈಗೆ ಸಿಕ್ಕಾಗ ಎಂಥ ಇತ್ಯಾತ್ಮಕ ಸುಧಾರಣೆಗಳನ್ನು ತರಬಹುದೆಂದು ಸಾಬೀತು ಪಡಿಸಿದಿರಿ.
ಹಲವು ಸಲ ನಿಮ್ಮ ಸರ್ವಗ್ರಹಿತ್ವವು ಪ್ರಜಾಸತ್ತಾತ್ಮಕ ಎಲ್ಲೆಗಳನ್ನು ಮೀರಿ ವಿಪರೀತವಾದದ್ದಕ್ಕೂ ಉದಾಹರಣೆಗಳಿವೆ. ಹೀಗಾದಾಗ ನನ್ನನ್ನೂ ಸೇರಿದಂತೆ ಹಲವರನ್ನು ಬೆಚ್ಚಿಸಿದಿರಿ. ಜಾತಿ ವಿರೋಧದ ಮುಂಚೂಣಿಯಲ್ಲಿದ್ದ ನೀವು, ಎಂಬತ್ತರ ದಶಕದಲ್ಲಿ ಅಚಾನಕ್ಕಾಗಿ ಜಾತಿ ವ್ಯವಸ್ಥೆ ಸೃಜನಶೀಲವಾದುದೆಂದು ಘೋಷಿಸಿಬಿಟ್ಟಿರಿ. ಇದೊಂದು ‘ಕಂತ್ರಿ ನಿಲುವು’ ಎಂದು ತತ್‌ಕ್ಷಣದ ಪ್ರತಿಕ್ರಿಯೆ ನೀಡಿದ ಡಿ.ಆರ್.ನಾಗರಾಜ್ ಅವರೇ ಮುಂದೆ ಇದನ್ನು ಆ ದಶಕದ ಅತ್ಯಂತ ಸೃಜನಾತ್ಮಕ ಚಿಂತನೆಗಳಲ್ಲೊಂದು ಎಂದು ಹೊಗಳತೊಡಗಿದರು. ಇನ್ನೊಂದು ಸಲ ಬೆತ್ತಲೆ ಪೂಜೆಯನ್ನು ವಿಚಾರವಾದಿಗಳು ವಿರೋಧಿಸುತ್ತಿದ್ದಾಗ ನೀವು ಬೆತ್ತಲೆ ಪೂಜೆಯನ್ನು ಸಮರ್ಥಿಸಿ ಹೇಳಿಕೆ ಕೊಟ್ಟಿರಿ. ಆ ಹೇಳಿಕೆಗೆ ಕಿ.ರಂ. ನಾಗರಾಜ ಅವರ ಜೊತೆ ನಾನೂ ಸಹಿ ಹಾಕಿ ಚಂಪಾ ಅವರಿಂದ ಚೆನ್ನಾಗಿ ಉಗಿಸಿಕೊಂಡೆ. ಈಚೆಗೆ ಮೋದಿ ಸರ್ಕಾರ ಬಂದರೆ ದೇಶತ್ಯಾಗ ಮಾಡುವುದಾಗಿ ಘೋಷಿಸಿ ಕಟು ಟೀಕೆಗೊಳಗಾದಿರಿ. ನೀವು ಕಾಲವಾದ ಕೂಡಲೇ ಪಟಾಕಿ ಹಾರಿಸಿ ಸಂಭ್ರಮಿಸಿದವರ ಅಸಭ್ಯತೆಯೇನೋ ಖಂಡನೀಯ. ಆದರೆ ತಮಗೆ ಬೇಕಾದ ನಾಯಕನನ್ನು ಜನ ಆರಿಸುವ ಬಗ್ಗೆ ನೀವು ತೋರಿದ ಅಸಹನೆ ಪ್ರಜಾಪ್ರಭುತ್ವ ಸಮ್ಮತವಲ್ಲ. ಪ್ರಜಾಪ್ರಭುತ್ವ ಸಹನೆಯ ಸಂಸ್ಕೃತಿ. ಇಂದು ಆರಿಸಿ ಬಂದವರನ್ನು ನಾಳೆ ತೆಗೆದು ಹಾಕುವ ಸ್ವಾತಂತ್ರ್ಯವೂ ಜನರಿಗಿರುವುದನ್ನು ನೆನಪಿಟ್ಟುಕೊಂಡರೆ ಆ ತೆರನಾದ ಅಸಹನೆಗೆ ಕಾರಣವಿಲ್ಲ.
ಆದರೆ ಈ ಎಲ್ಲ ಅತಿರೇಕಗಳು ನಿಮ್ಮ ಪ್ರಜಾಸತ್ತಾತ್ಮಕ ನಿಲುವಿಗೆ ಒಂದು ಮಾನವೀಯ ಆರ್ದ್ರತೆಯನ್ನು ನೀಡಿದವೆಂದು ನನಗೀಗ ತೋರುತ್ತಿದೆ. ಯಾಕೆಂದರೆ ಪ್ರಜಾಪ್ರಭುತ್ವದ ಆದರ್ಶ ಫ್ಯಾಸಿಸ್ಟರ, ಯುಟೋಪಿಯನ್ನರ ಆದರ್ಶದಂತೆ ಪರಿಶುದ್ಧವಾದುದಲ್ಲ. ಅದು ಮಾನವೀಯ ಸಾಧ್ಯಾಸಾಧ್ಯತೆಗಳ, ಶಕ್ತಿ ದೌರ್ಬಲ್ಯಗಳ ನಡುವೆಯೇ ಪ್ರತೀತವಾಗುವ ತಥ್ಯ. ಈ ತಥ್ಯವೇ ನಿಮ್ಮ ವಿರೋಧಾಭಾಸಗಳಲ್ಲಿ, ವೈಪರೀತ್ಯಗಳಲ್ಲಿ ವ್ಯಕ್ತವಾದದ್ದು.
ಪರ- ವಿರೋಧಗಳ ನಡುವಿನ ಅನಿರ್ದಿಷ್ಟ ಅವಕಾಶದಲ್ಲಿ ಉಸಿರಾಡಿದ ನಿಮ್ಮ ಬರಹಗಳು, ವಿಚಾರ -ಆಚಾರಗಳು ನಮ್ಮ ಕಾಲದ ಕನ್ನಡ ಜಗತ್ತಿನಲ್ಲಿ ನಡೆದ ದೊಡ್ಡ ಪ್ರಜಾಸತ್ತೆಯ ಪ್ರಯೋಗ. ಅದರ ಗೆಲುವು–-ಸೋಲುಗಳಿಂದ ನಾವೆಲ್ಲರೂ ಕಲಿಯುವುದಿದೆ. ಅಪರಿಪೂರ್ಣವಾದ ಪ್ರಜಾಸತ್ತೆಯ ಮೌಲ್ಯಗಳ ನೆರವಿನಿಂದ ಮಾತ್ರ ಇಂದು ನಾವು ಪರಿಪೂರ್ಣತೆಯ ಕಡೆ ಧಾವಿಸಲು ಸಾಧ್ಯ. ಆದರೆ ಆ ಗುರಿಯನ್ನು ಎಂದೂ ತಲುಪಲಾರೆವು. ವಿಲಿಯಂ ಬ್ಲೇಕ್ ಅಂದ ಹಾಗೆ ಜೆರುಸಲೇಮ್‌ನ ಪರಿಪೂರ್ಣ ಸ್ಥಿತಿಯನ್ನು ಮೃಣ್ಮಯಿ ಶರೀರದಲ್ಲಿ ಎಂದೂ ಪಡೆಯಲಾರೆವೇನೋ.
ವಿರೋಧಗಳ ನಡುವೆಯೂ ಸ್ನೇಹವನ್ನು ಉಳಿಸಿಕೊಳ್ಳುತ್ತಿದ್ದ ನಿಮ್ಮ ಸ್ವಭಾವ ಅನುಕರಣೀಯ. ಒಮ್ಮೆ ನನಗೆ ಹೇಳಿದ್ದಿರಿ: ‘ಈ ಇಂಟರ್ವ್ಯೂನಲ್ಲಿ ನಾನು ನಿನ್ನ ತುಂಬಾ ವಿರೋಧಿಸಿದೆನಯ್ಯ. ನಿನ್ನ ಮೇಲೆ ತುಂಬಾ ಸಿಟ್ಟು ಬಂದಿತ್ತು. ನೀನು ತೀರಾ ಲಘುವಾಗಿ ನನ್ನ ಬಗ್ಗೆ ಮಾತಾಡುತ್ತಿರೋದು ಗೊತ್ತಾಯಿತು. ನನ್ನ ಇಚ್ಛೆಗೆ ವಿರುದ್ಧವಾಗಿ ನೀನು ಈ ಹುದ್ದೆಗೆ ಆಯ್ಕೆಯಾಗಿದ್ದೀಯ’. ನಾನು ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದಕ ಹುದ್ದೆ ಪಡೆದಾಗ ನೀವು ಹೀಗೆಂದಿರಿ. ಮುಂದೆ ಆ ಸಿಟ್ಟನ್ನು ಮುಂದುವರಿಸಲಿಲ್ಲ. ನನಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಕೊಟ್ಟಿರೆಂದರೆ, ಅಲ್ಲಿನ ಪತ್ರಿಕೆಯಲ್ಲಿ ನಿಮ್ಮ ವಿರುದ್ಧ ಇದ್ದ ಬರಹವೊಂದನ್ನು ಪ್ರಕಟಿಸಿದಾಗ, ನಿಮ್ಮ ಕಟ್ಟಾ ವಿರೋಧಿಗಳಾದ ಭೈರಪ್ಪನವರ ಸಂದರ್ಶನವನ್ನು ಪ್ರಕಟಿಸಿದಾಗ ನೀವು ನನ್ನನ್ನು ತೀರಾ ಬೈಯಲಿಲ್ಲ.
ಕಳೆದ ಎರಡು-ಮೂರು ವರ್ಷಗಳಿಂದ ನೀವು ನನ್ನ ಮೇಲೆ ತೀರಾ ಸಿಟ್ಟಾಗಿದ್ದಿರಿ. ನಾನು ನೀಡಿದ ಸಮಜಾಯಿಷಿ ನಿಮ್ಮನ್ನು ಶಾಂತಗೊಳಿಸದ ಕಾರಣ ನಾನೂ ದೂರವಾಗಿದ್ದೆ. ನೀವು ಹೇಳಿದ ಹಾಗೆ ನಿಮ್ಮ ಕೊನೆಯ ದಿನಗಳಲ್ಲಿ ನಿಮ್ಮನ್ನು ಭೆಟ್ಟಿಯಾಗುವ ಅವಕಾಶ ದೊರಕಿದ್ದರೆ ನಮ್ಮ ಮನಸ್ತಾಪವನ್ನು ಇತ್ಯರ್ಥ ಮಾಡಿಕೊಳ್ಳಬಹುದಿತ್ತು. ಹಾಗಾಗಲಿಲ್ಲ. ನನಗೆ ಮೇಷ್ಟ್ರಾಗದೆಯೂ ಹಲವು ಪಾಠಗಳನ್ನು ನಿಮ್ಮ ಸಾಹಿತ್ಯದ ಮೂಲಕ ಕಲಿಸಿದ ನಿಮಗೆ ಕೃತಜ್ಞತೆಯ ಕಣ್ಣೀರು.
ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.