ADVERTISEMENT

ಸಂಘರ್ಷ ಮೊದಲೊ? ಸಹಬಾಳುವೆ ಮೊದಲೊ?

ಎಚ್.ಎಸ್.ಶಿವಪ್ರಕಾಶ್
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST
ಸಂಘರ್ಷ ಮೊದಲೊ? ಸಹಬಾಳುವೆ ಮೊದಲೊ?
ಸಂಘರ್ಷ ಮೊದಲೊ? ಸಹಬಾಳುವೆ ಮೊದಲೊ?   

ಕಳೆದ ಕೆಲವು ಶತಮಾನಗಳ ವಿದ್ಯಮಾನಗಳು ನಮ್ಮ ಮನದಾಳದಲ್ಲಿ ಸಂಘರ್ಷಾತ್ಮಕತೆಯ ಬೀಜಗಳನ್ನು ನೆಟ್ಟುಬಿಟ್ಟಿವೆ. ನಿರಂತರ ಸಂಘರ್ಷದ ಹಿಡಿಗಟ್ಟು-ನುಡಿಗಟ್ಟು-ನಡೆಗಟ್ಟುಗಳು ನಮ್ಮೆ­ಲ್ಲರ ಕನಸು ಮನಸುಗಳನ್ನು ಆವರಿಸಿಬಿಟ್ಟಿವೆ. ನಾವು ಕೊಲ್ಲದಿದ್ದರೆ ನಾವೇ ಕೊಲೆಯಾಗಿ­ಬಿಡುವೆ-­ವೆಂಬ ತತ್ವ ನಮ್ಮ ಆಚಾರ-ವಿಚಾರಗಳ ಚಾಲಕ­ಶಕ್ತಿಗಳು. ಕೂಡುಬಾಳಿನ ಸೋಗಿನ ಪ್ರಜಾಪ್ರಭುತ್ವ­ಗಳೂ ಆಧುನಿಕ ಜಗತ್ತಿನಲ್ಲಿ ಎದುರಾಳಿ ಕುರಿತ ಹೆದರಿಕೆಯ ಅಲುಗುತಳಹದಿಯ ಮೇಲೆ ನಿಂತಿವೆ. ಆಧುನಿಕ ಸಂಸ್ಕೃತಿ, ಸಮಾಜರಚನೆ, ವ್ಯಕ್ತಿಗತ ಬದು­ಕಿನ ವ್ಯವಹಾರಗಳೆಲ್ಲಾ ‘ಹೋರಾಟವೆ ಹಾದಿ’ ಎಂಬ ಅಪ್ರಜ್ಞಾಪೂರ್ವಕ ವಿಶ್ವಾಸದ ಕೈಗೊಂಬೆ­ಗಳಾಗಿವೆ.

ಆಧುನಿಕವೆನ್ನುವ ಜಗತ್ತಿನ ನಿರ್ಣಾಯಕ ಸಿದ್ಧಾಂತ­ಗಳನ್ನೇ ಗಮನಿಸಿದರೆ ಸಾಕು. ಡಾರ್ವಿನ್ನನ ವಿಕಾಸವಾದದ ರೀತ್ಯಾ ಜೀವದ ಅಸ್ತಿತ್ವದ ಮೂಲ­ಕಾರಣ ಸಂಘರ್ಷ. ಪ್ರಾಣಿಜಾತಿಗಳ ನಡುವಿನ ಸಂಘ­ರ್ಷದಲ್ಲಿ ಗೆಲುವೇ ಉಳಿವಿನ ಮರ್ಮ. ಸೋತ­­ವಕ್ಕೆ ಸಾವೇ ಕೊನೆ. ಈ ಸಿದ್ಧಾಂತ ರಚನೆ­ಯಾದ ಹೊತ್ತುಗೊತ್ತಿನಲ್ಲಿ ರೂಹುತಾಳಿದ ಪ್ರಧಾನ ಲೋಕದೃಷ್ಟಿಗಳು ಉದಾರವಾದ ಮತ್ತು ಸಮಾಜವಾದ. ಇವೆರಡೂ ಸಂಘರ್ಷವಾದದ ಜೊತೆಗೆ ತಳಕುಹಾಕಿಕೊಂಡಿವೆ. ಮನುಷ್ಯನಿಗೆ ಪ್ರತಿ­ಹಂತದಲ್ಲೂ ನಿಸರ್ಗ ಸವಾಲೊಡ್ಡುತ್ತದೆ. ಆದರೆ ವಿಜ್ಞಾನ, ತಂತ್ರಜ್ಞಾನಗಳು ಒಂದಲ್ಲಾ ಒಂದುದಿನ ನಿಸರ್ಗವನ್ನು ಪರಾಜಿತಗೊಳಿಸಿ, ಎಲ್ಲ ರಹಸ್ಯ­ಗಳನ್ನೂ ಬಗೆದುನೋಡಿ, ಎಲ್ಲ ಕೊರೆಗಳನ್ನೂ ಸರಿ­ಪಡಿಸಿ ಪ್ರಕೃತಿಯನ್ನು ಮನುಷ್ಯನ ಅಧೀನ­ವಾಗಿಸ­ಬಲ್ಲವು. ವಿಜ್ಞಾನದ ವಿಜಯ, ಪ್ರಕೃತಿಯ ಪರಾ­ಜಯ, ಆದರ್ಶ ಮತ್ತು ಸುಖೀಜೀವನದ ಮುನ್ನುಡಿ. ಪರಜನಾಂಗಗಳ, ಪರಧರ್ಮೀಯರ ದಮನ ವಸಾಹತು-ಸಾಮ್ರಾಜ್ಯವಾದಗಳ ಮೂಲ­­­ಮಂತ್ರ. ವರ್ಗಹೋರಾಟ ಮಾರ್ಕ್ಸ್ ವಾದದ ಬೀಜಾಕ್ಷರ. ಅನ್ಯರ ಅಳಿವು ಫ್ಯಾಸಿಸ್ಟ್‌­ವಾದದ ಮೂಲತಂತ್ರ. ಇತರ ಜಡ-ಜಂಗಮಗಳ ನಿಯಂತ್ರಣ ಮಾನವಕೇಂದ್ರಿತ ವೈಜ್ಞಾನಿಕತೆಯ ಜೀವನಾಡಿ.

ಪ್ರಕೃತಿಯನ್ನು ಗೆಲ್ಲುವ ಮಾನವಪ್ರಯತ್ನಗಳು ತೀವ್ರವಾದ ಯುಗದಲ್ಲಿಯೇ ಮಾನವರು ಮಾನ­ವ­ರನ್ನು ಗೆಲ್ಲುವ ಪ್ರಯತ್ನಗಳೂ ಚುರುಕಾಗ­ತೊಡಗಿ ದಮನಕಾರಿಯಾದ ಬಂಡವಾಳ ಮತ್ತು ವಸಾಹತು ಏರ್ಪಾಟುಗಳು ಸ್ಥಾಪಿತವಾದವು. ಕರಿ ಮತ್ತು ಹಳದಿತೊಗಲಿನ ಪಶುಮಾನವರನ್ನು ಹತ್ತಿಕ್ಕಿ ಹತೋಟಿಗೆ ತರುವುದು ಬಿಳಿಯರ ಪರ­ಧರ್ಮ­ವೆಂಬ ನಂಬುಗೆ ಕತ್ತಿ, ಸಿಡಿಮದ್ದು, ಬಂದೂಕು, ಫಿರಂಗಿಗಳ ಬಲದಿಂದ ಆಫ್ರಿಕಾ, ಏಷಿಯಾ ಮತ್ತು ಅಮೆರಿಕಗಳಲ್ಲಿ ನಿರ್ದಯೆಯ ನೆತ್ತರಿನ ಮಹಾಪೂರವನ್ನುಂಟು ಮಾಡಿ ನರ­ಹತ್ಯಾ­ಕಾಂಡಗಳ ಮಹಾನ್ ಧಾರಾವಾಹಿಯನ್ನು ಪ್ರಚೋದಿಸಿತು. ಶತಶತಮಾನಗಳ ಕರ್ತಾರ­ಶಕ್ತಿಯ ಕುರುಹುಗಳಾಗಿದ್ದ ಜೀವಂತ ಜನಾಂಗ­ಗಳು, ಭಾಷೆ-ಸಂಸ್ಕೃತಿ-ವಿಜ್ಞಾನಗಳು, ಕಲಾ­ನಿರ್ಮಿ­ತಿ­­ಗಳು, ಇಮಾರತಿಗಳು ಬಹುತೇಕ ಅಳಿದು­ಹೋದವು. ಅಳಿಯದೆ ಉಳಿದುಕೊಂಡವು ಗೆದ್ದವರ ಆಳಾಗಿ ದುಡಿಯತೊಡಗಿದವು. ಈ ವಿನಾಶ­ಕಾರಿ ಪ್ರವೃತ್ತಿಗಳ ಪ್ರೇರಣೆಯೂ ಪರಿಣಾ­ಮವೂ ಆಗಿದೆ ಇಂದು ಗೆದ್ದವರ ಹತಾರಾದ ಲಾಭಕೋರ ಮಾರುಕಟ್ಟೆಯ ಆರ್ಥಿಕ ವ್ಯವಸ್ಥೆ.

ಪರಪೀಡನಪರಾಯಣಮೂಲದ ಸೋಗ­ಲಾಡಿ ಮಾನವತಾವಾದದ ಇತಿಹಾಸದ ಕಡೆ ಹೊರಳಿ ನೋಡಿದಾಗ ಮಹಾಕವಿ ಶ್ರೀಶ್ರೀ ಅವರ ನುಡಿಗಳು ಆಧುನಿಕ ನಾಗರಿಕತೆಯ ಗೋರಿಬರಹ­ದಂತೆ ಕಾಣುತ್ತವೆ:

‘­ಯೇ ದೇಶ ಚರಿತ್ರ ಸೂಸಿನಾ ಏಮುನ್ನದಿ ಗರ್ವ­ಕಾರಣಂ?
ನರಜಾತಿ ಚರಿತ್ರಸಮಸ್ತಂ ಪರಪೀಡನ­ಪರಾಯಣತ್ವಂ’
ಮಾನವತಾವಾದೀ ಯುಗದಲ್ಲಿ  ನರರಕ್ತ­ದಾಹಿ­ಗಳಾದ ಜೀವಬಲಿಪ್ರಿಯರಾದ ದೇವತೆಗಳು ಪದಚ್ಯುತರಾಗಿ ಅವರಿಗಿಂತಲೂ ಹಿಂಸ್ರಬುದ್ಧಿಯ ಗಂಡುಮಾನವನೇ ಆ ಸ್ಥಾನವನ್ನಾಕ್ರಮಿಸಿದಂತೆ ತೋರುತ್ತದೆ.

ಪರಪೀಡನಪರಾಯಣತ್ವವು ಆಧುನಿಕ ಮಾನ­ವ­ತಾವಾದೀ ನಾಗರಿಕತೆಯ ಏಳಿಗೆಯ ಯುಗ­ದಲ್ಲಿ ಅತ್ಯಂತ ವ್ಯವಸ್ಥಿತವಾದ ಸಿದ್ಧಾಂತ ಮತ್ತು ಪ್ರಯೋಗವಾಗಿ ಆವಿರ್ಭವಿಸಿತೆನ್ನುವುದು ದಿಟ ವಾ­ದರೂ ಅದರ ಬೀಜಗಳು ಆಧುನಿಕಪೂರ್ವ ಇತಿ­ಹಾಸದಲ್ಲೇ ಇದ್ದವು. ಪರಸತಿ, ಪರಧನಗಳನ್ನು ಲೂಟಿ ಮಾಡದ ವೀರಗಾಥೆಗಳು ಯಾವಾಗಲೂ ಇರಲಿಲ್ಲ.

ಪರಪೀಡನೆಯ ಪ್ರವೃತ್ತಿಯ ಇನ್ನೊಂದು ಮೋರೆ ಸ್ವಕೀಯಪೀಡನೆ. ಪರಪೀಡಕರು ಕೊನೆಗೆ ತಮಗೆ ತಾವೇ ಹಗೆಯಾಗುವುದರ ಗುರುತು ಇರುವುದು ಕೇವಲ ಭಸ್ಮಾಸುರನ ನೀತಿಕತೆ­ಯೊಂದ­ರಲ್ಲೇ ಅಲ್ಲ. ಮನುಕುಲದ ಸಾಮು­ದಾ­ಯಿಕ ತಿಳಿವಳಿಕೆಯ ಖಜಾನೆಗಳಾದ ಅದೆಷ್ಟೋ ಜನಪದ, ದಂತಕತೆಗಳಲ್ಲಿದೆ. ತೋಡ ಜನಾಂಗದ ಕತೆಯೊಂದರಲ್ಲಿ ಯುವಕನೊಬ್ಬ ತನ್ನ ಕುಲ­ನಿಯ­ಮಗಳ ರೀತ್ಯಾ ಮದುವೆಯ ದಿನ ಮದುವಣ­ಗಿತ್ತಿಗೆ ಒಬ್ಬ ಗಂಡನ್ನು ಹೊಡೆದುಹಾಕಿ ಅವನ ತಲೆ­ಬುರುಡೆಯನ್ನು ವಧೂದಕ್ಷಿಣೆಯಾಗಿ ನೀಡ­ಬೇಕು. ಆದರಂದು ಅವನಿಗೆ ಗಂಡಾಳುಗಳಾರೂ ಸಿಗುವುದಿಲ್ಲ. ಹತಾಶನಾದ ಆತ ಕೊನೆಗೊಬ್ಬ ಹುಡುಗಿಯನ್ನು ಹೊಡೆದುಹಾಕಿ ಅವಳ ಬುರುಡೆ­ಯನ್ನೇ ಕೊಂಡೊಯ್ಯುತ್ತಾನೆ. ಆದರೆ ತನ್ನ ಕೈಯಲ್ಲಿ ರಾರಾಜಿಸುತ್ತಿರುವ ತಲೆಬುರುಡೆ ತಾನು ವರಿಸಬೇಕಾಗಿದ್ದ ಹುಡುಗಿಯದೇ ಎಂದು ಕೊನೆ­ಗವನಿಗೆ ತಿಳಿಯುತ್ತದೆ.

ಈ ಒಟ್ಟುಕತೆಯ ನೀತಿಯನುಸಾರ ತಮ್ಮ ಪರ­ಮ­ಧರ್ಮದ ಶ್ರೇಷ್ಠತೆಯ ಅಮಲಿನಲ್ಲಿ ಪರ­ಧರ್ಮೀಯರನ್ನು ಯಾವುದೇ ರೀತಿಯ ಹಿಂಸೆ­ಯಿಂದ ದಮನ ಮಾಡಲು ಸಿದ್ಧವಿರುವ ತಾಲಿ­ಬಾನ್ ಮತಾಂಧವಾದಿಗಳು ತಮ್ಮ ಧರ್ಮ­ದವರ ಮಕ್ಕಳನ್ನೇ ಕೊಂದು ಪರಧರ್ಮ­ಪೀಡನೆ ಸ್ವಧರ್ಮ­ಪೀಡನೆಯೂ ಆಗಬಲ್ಲುದೆಂದು ಸಾಬೀತು ಮಾಡಿ­ದ್ದಾರೆ. ಈ ಪ್ರಯತ್ನದಲ್ಲಿ ತಮ್ಮನ್ನು ತಾವೂ ಬಲಿ­ಕೊಟ್ಟುಕೊಂಡಿದ್ದಾರೆ.
ಬಸವಣ್ಣನವರೆಂದಂತೆ  ‘ಕೊಂದವನುಳಿದನೆ ಕೂಡಲಸಂಗಮದೇವ?’

ಸ್ವಪೀಡನೆಯ ಪ್ರಧಾನರೂಪಗಳಲ್ಲಿ ಧಾರ್ಮಿಕ ಸ್ವಹಿಂಸಾಪರತೆಯೂ ಇದೆ. ಹೊರಗಿನ ಹಗೆ­ಯನ್ನು ತನ್ನೊಳಗೇ ಒಳಾಂತರಿಸಿಕೊಳ್ಳುತ್ತಾರೆ ಅತಿ­ವೈರಾಗ್ಯಪರ ಧಾರ್ಮಿಕರು. ತಮ್ಮ ಸೃಜನ­ಶೀಲ­ತೆಯ ಬೀಜನಾದ ಕಾಮನನ್ನು ಕೊಂದೆನೆಂದು ಕೊಚ್ಚಿಕೊಳ್ಳುವರು ಕೆಲವರು. ತನ್ನೊಡಲನ್ನೊ ತಲೆಯನ್ನೋ ಅಂಗಾಂಗಗಳನ್ನೋ ಇಷ್ಟ­ದೇವ­ತೆಗೋ ದೊರೆಗೋ ಆದರ್ಶಕ್ಕೋ ಕೊಯ್ದು ಖಂಡ­ವಿದೆ ಕೋ ಎಂದರ್ಪಿಸುವರು ಕೆಲವರು. ಹೊರಗನ್ನು ಗೆಲ್ಲಲಾಗದೆ ತನ್ನ ಸೋಲನ್ನೊಪ್ಪ­ಲಾಗದೆ ತನ್ನ ತಾನೇ ಈಡಾಡಿಕೊಳ್ಳುವ ಆತ್ಮಹತ್ಯಾ­ಪ್ರವೀಣರೂ ಇಂಥವರೇ.

ಸಂಘರ್ಷದೃಷ್ಟಿ ಒಳಹೊರಗುಗಳೆರಡನ್ನೂ ಶಾಂತಿ­ಯಿಂದ ವಂಚಿತವಾದ ನಿರಂತರ ರಣ­ರಂಗ­ವನ್ನಾಗಿಸುತ್ತದೆ. ಹೊಡೆತ, ಬಡಿತ, ಇರಿತ, ಕೊಲೆ, ಸುಲಿಗೆಗಳ ಕೈಬಾಯಿಸನ್ನೆಗಳಲ್ಲಿ, ಕ್ರಿಯೆಗಳಲ್ಲಿ ಮಾತಾಡುತ್ತದೆ. ಎದ್ದೂ ಮಾಡದ ನಿದ್ದೆಯನ್ನೂ ಕೊಡದ ಅಸಹಾಯಕ ಆದರೂ ಆಕ್ರಮಣಕಾರಿ ವಿಕೃತಿ ಅದು. ಪೂರ್ವದ ಚಾಣಕ್ಯನ, ಪಶ್ಚಿಮದ ಮ್ಯೆಕಾವಿಲ್ಲಿಯ ಮತ್ಸ್ಯನೀತಿಯ ರಾಜಕೀಯ ಮಾದರಿಗಳೂ ಇಂಥವೇ.

ಜೀವಂಜೀವೇನ ಭಕ್ಷಯೇತ್; ಹೆಂಮೀನುಗಳು ಕಿರಿಮೀನುಗಳನ್ನು ತಿಂದೇ ಬದುಕಬೇಕು; ಕೊಲ್ಲ­ದಿದ್ದರೆ ಗೆಲ್ಲಲಾಗದು; ಸೋತವನಿಗೆ ಸ್ವರ್ಗ ಸಿಗದು; ಎದ್ದವನು ಎದ್ದ ಬಿದ್ದವನು ಬಿದ್ದ-. ಈ ಎಲ್ಲವೂ ಸಂಘ­ರ್ಷವಾದೀ ಧರ್ಮಸಿದ್ಧಾಂತಗಳ ನಾಣ್ನುಡಿ­ಗಳು...
ಹೊಡೆದಾಟವೇ ಉಸಿರಾಟವೆನ್ನುವ ದೃಷ್ಟಿಗೆ ಪ್ರತಿ­ಸ್ಪರ್ಧಿ ಪರಸ್ಪರ ಸಾಂಗತ್ಯದ, ಹೊಂದಾಣಿ­ಕೆಯ ಸಮನ್ವಯದೃಷ್ಟಿ. ಇದು ಪ್ರಧಾನವಾಗಿ ಅನು­­ಭಾವಿಗಳ, ಕಲಾಕಾರರ ಕಾಣ್ಕೆಯಾಗಿದೆ. ಕರುಣೆಯ ಬಾಷ್ಪಗಳಲ್ಲಿ ನೆನೆದ ಕಣ್ಣುಗಳಿಗೆ ಭೂಮಿ ಆಕಾಶಗಳು ಒಂದು ಜೀವನದುದರವಾಗಿ ತೋರುತ್ತವೆ. ‘ಚಿಕ್ಕ ಮರಿಗೆ ತನ್ನ ರೆಕ್ಕೀ ಬೀಸಣಿ­ಗೇಲಿ ಅಕ್ಕ ಜಳಕಕ್ಕ ಹಾಕ್ಯಾದ ನೋಡವ್ವ ಹಕ್ಕಿ ಜಾತ್ಯಾನ ಅಕ್ಕರಿತಿ’–- ಇದು ಪ್ರಾಣಿಜಗತ್ತಿನ ಪರಸ್ಪರ ಪ್ರೇಮದ ಕುರುಹಾಗಿ ಕಾಣುತ್ತದೆ.

‘ರುದ್ರವಿಲಾಸದ ಪರಿಯೇ ಬೇರೆ ಶಿವ­ಕರು­ಣೆಯು ಹಿರಿದು’ ಎಂದಿದ್ದಾರೆ ವರಕವಿ ಬೇಂದ್ರೆ. ‘ಹೂಹೂವಿನೊಳಗಡೆ ಕೈಲಾಸ ಮೂಡ್ಯಾವು’ ಅನ್ನುತ್ತಾರೆ ಕಂಬಾರರು. ಕುವೆಂಪು ಅವರಿಗೆ ಸೂರ್ಯೋದಯ ಚಂದ್ರೋದಯಗಳು ದೇವರ­ಕೃಪೆ­ಯಾಗಿ ಕಂಡಿವೆ. ಕೊಲ್ಲುವ ಶಕ್ತಿಗಿಂತಾ ಕಾಯುವ ಶಕ್ತಿ ಹಿರಿದೆನ್ನುತ್ತದೆ ಕನ್ನಡದ ಗಾದೆ ಮಾತು. ‘ಆನೆಯೂ ಸಿಂಹನೂ ಒಂದಾಗಿ ಮೇವುದ ಕಂಡು ಆನು ಬೆರಗಾದೆ’ನೆನ್ನುತ್ತಾನೆ ಅಲ್ಲಮ.

ಬ್ರಹ್ಮಾಂಡದ ಹೊಂದಿಕೆ-ಬಂದಿಕೆಗಳ ರಹಸ್ಯ­ವನ್ನು ಸೂಫೀದರ್ಶನದಲಿ ‘ಇಷ್ಕ್’ ಎಂದು ಕರೆಯ­ಲಾಗಿದೆ. ಗ್ರಹತಾರೆಗಳಲ್ಲಿ ಇಷ್ಕ್ ತತ್ವದ ಪರ­ಸ್ಪರಾಕರ್ಷಣೆಯಿಲ್ಲದೆ ಹೋಗಿದ್ದರೆ ಇಡೀ ಸೃಷ್ಟಿಯೇ ಛಿದ್ರಛಿದ್ರವಾಗುತ್ತಿತ್ತು, ಜಲಾಲು­ದ್ದೀನ್ ರೂಮಿಯ ಪ್ರಕಾರ.

ಹೊಂದಾಣಿಕೆಯ ಆತ್ಯಂತಿಕ ಮತ್ತು ಅತಿಸ್ಪಷ್ಟ­ವಾದ ಅಭಿವ್ಯಕ್ತಿ ಪಡಿಮೂಡಿದ್ದು ಮಹಾಯಾನ ಬೌದ್ಧದರ್ಶನದ ಸಾವಿರದ ಕೈಗಳ ಅವಲೋಕಿ­ತೇ­ಶ್ವರನ ಮೂರ್ತಿಯಲ್ಲಿ. ಆತ ಬ್ರಹ್ಮಾಂಡ­ಚಾಲ­ನೆಯ ಮಹಾಕರುಣೆಯ ತತ್ವದ ಸಾಕಾರ ರೂಪ. ಈ ತತ್ವ ಗಂಡುಬುದ್ಧಿಗಿಂತ ತಾಯಿಕರುಳಿಗೆ ಹತ್ತಿರ­ವಾದುದರಿಂದ ಚೀನಾ ಮತ್ತು ಜಪಾನಿನ ಮಹಾ­ಯಾನ ಕಲ್ಪನೆಯಲ್ಲಿ ಅವಲೋಕಿತೇಶ್ವರ ಬೋಧಿ­ಸತ್ವನನ್ನು ಸ್ತ್ರೀರೂಪದಲ್ಲಿ ಚಿತ್ರಿಸಲಾಗಿದೆ. ಜಪಾ­ನಿನ ಸನಾತನ ನಗರ ಕ್ಯೋತೋದಲ್ಲಿನ ತಿಳಿನೀರಿನ ದೇಗುಲದಲ್ಲಿ ಮೂರ್ತವಾಗಿರುವುದು. ಈ ದೈವತ್ವ­ವನ್ನು ಚೀನಿ ಭಾಷೆಯಲ್ಲಿ ಗ್ವಾನ್‌ಯಿನ್ ಎಂದೂ ಜಪಾನಿಯಲ್ಲಿ ಕನೋನ್ ಎಂದೂ ಕರೆ­ಯಲಾಗಿದೆ. ಭಾರತದ ಆರ್ಷೇಯ ಅರಿವಿನ ಕುರುಹಾಗಿರುವ ‘ಉದಾರಚರಿತಾನಾಂ ವಸು­ಧೈವ ಕುಟುಂಬಕಂ’ ಎಂಬ ವೈದಿಕಮೂಲ ಉಕ್ತಿಯೂ ಈ ತೆರನ ದೃಷ್ಟಿಯಿಂದಲೇ ಪ್ರೇರಿತ.

ಹೊಂದಾಣಿಕೆ–-ಒಂದಾಣಿಕೆಯ ಸಂಕೇತಗಳನ್ನು ಕೇವಲ ಧಾರ್ಮಿಕ–-ಪೌರಾಣಿಕ ಹಿಡಿಗಟ್ಟು-ಕುರುಹುಗಳಲ್ಲಿ ಕಾಣಬೇಕಾಗಿಲ್ಲ. ನಿತ್ಯ ಬದುಕಿನ ವಿವರಗಳಲ್ಲಿಯೇ ಕಾಣಸಿಗುತ್ತವೆ.

ಒಂದು ಕುಟುಂಬದಲ್ಲಿ, ಸಮುದಾಯದಲ್ಲಿ, ಸಂಸ್ಥೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಕೊಡುವುದ­ಕ್ಕಿಂತ ಹೆಚ್ಚಾಗಿ ಪಡೆದುಕೊಳ್ಳುವುದರಲ್ಲಿ ತೊಡಗಿ­ರು­ತ್ತಾರೆ. ಇದು ಶೋಷಣೆಯ, ಅದರ ವಿರುದ್ಧ ಸಂಘರ್ಷದ ನೆಲೆ. ಆದರೆ ಆ ವಿವರಗಳ ಹಿನ್ನೆಲೆಯಲ್ಲೊಂದು ಹೊಂದಾಣಿಕೆ ಇರುತ್ತದೆ. ಪರಸ್ಪರ ಭಕ್ಷಕರಾಗಿರುವ ಸಮುದ್ರಪ್ರಾಣಿಗಳು ಒಂದೇ ಸಮುದ್ರಸಂಸಾರದಲ್ಲಿ ಕೂಡುಬಾಳನ್ನೂ ನಡೆ­ಸುತ್ತಿರುತ್ತವೆ. ಪ್ರಶ್ನೆಯಿರುವುದು ಜೀವ­ವ್ಯವ­ಹಾರಗಳ ಆಧಾರ ಯಾವುದೆಂಬುದರ ಬಗ್ಗೆ.

ಮಾನವ ಸಮಾಜದಲ್ಲಿದ್ದಂತೆ ನಿಸರ್ಗದಲ್ಲೂ ಆಕರ್ಷಣೆ–-ವಿಕರ್ಷಣೆಗಳು, ಹೊಂದಾಣಿಕೆ–-ಹೋರಾ­ಟಗಳು ಒಟ್ಟಿಗೇ ಚಾಲತಿಯಲ್ಲಿವೆ. ಅಣು­ಪ್ರಪಂಚದಲ್ಲಿದ್ದಂತೆ ಅಂತರಿಕ್ಷದಲ್ಲೂ ಭೌತಿಕ ಕಣಗಳ, ಪ್ರವಾಹಗಳ, ವಸ್ತುಗಳ ಪರಸ್ಪರಾಕ­ರ್ಷಣೆ­–- ವಿಕರ್ಷಣೆಗಳಿವೆ. ನಮ್ಮ ಅನುಭವ ಸತ್ಯ­ದಲ್ಲೂ ಈ ಇಬ್ಬಗೆಯ ವಿವರಗಳನ್ನು ದಿನಾ ಕಾಣುತ್ತಿ­ದ್ದೇವೆ.

ಆದರೆ ಸೃಷ್ಟಿಯ ಮೊದಲ ಆಧಾರೀಭೂತ ಸತ್ಯ ಯಾವುದು? ಕೋಳಿ ಮೊದಲೊ?  ತತ್ತಿ ಮೊದಲೊ?  ಬಿಡಿಸಲಾಗದ ತಾರ್ಕಿಕ ಕಗ್ಗಂಟು.

ಹಾಗೆಯೇ ದೃಷ್ಟಿ-ಸೃಷ್ಟಿಗಳ ಸಂಬಂಧ. ಸೃಷ್ಟಿ ಮೊದಲೆಂಬ ಭೌತಿಕವಾದಿಗಳ, ದೃಷ್ಟಿ ಮೊದ­ಲೆಂಬ ಸತ್ವವಾದಿಗಳ ಮೂಲನಂಬುಗೆಗಳು ಇಂದು ಅಪವಾದಗಳಿಗೆ ಹೊರತಲ್ಲ. ಹೀಗಾಗಿ ತನ್ನನ್ನು ಬದಲಾಯಿಸಿಕೊಂಡವರು ಜಗತ್ತನ್ನು ಪ್ರಭಾ­ವಿಸಬಲ್ಲರೇ ಹೊರತು ಬದಲಾಯಿಸ­ಲಾ­ರರು. ಹೊರಗನ್ನು ತಿದ್ದಹೊರಟವರು ತಮ್ಮನ್ನೇ ತಿದ್ದಿಕೊಳ್ಳದೆ ಹೋದುದರಿಂದ ಯಾವುದನ್ನೂ ತಿದ್ದಲಾಗದೆಹೋದರು.
ಪ್ರತಿದಿವಸ, ಪ್ರತಿಕ್ಷಣ ನಮ್ಮ ಮುಂದೆ ಸಾಕಾರ­ವಾಗುತ್ತಿರುವ ಅನುಭವ ಸತ್ಯ ಒಳ-ಹೊರಗುಗಳ ಜಂಟಿನಿರ್ಮಿತಿ.

ದಿನೇ ದಿನೇ ದಶಗುಣವಾಗಿ ಹಬ್ಬುತ್ತಿರುವ ಅತ್ಯಾ­ಚಾರ, ಹಿಂಸಾಚಾರ, ಭ್ರಷ್ಟಾಚಾರ, ಅನಾ­ಚಾರ­ಗಳಿಂದ ಜಗತ್ತಿಗೆ ಬಿಡುಗಡೆ ನೀಡಬೇಕಿದೆ. ಇದಕ್ಕೆ ಅತ್ಯಗತ್ಯವಾಗಿರುವ ಕಾನೂನು, ಆಡಳಿ­ತಾ­ತ್ಮಕ ಕ್ರಮಗಳು ಈ ಹಿಂಸ್ರಘಟನೆಗಳನ್ನು ನಿಯಂತ್ರಿ­ಸುವಲ್ಲಿ ವಿಫಲವಾಗುತ್ತಿರುವುದರ ಕಾರಣ­ವೇನು? ಇಂಥಾ ಹಿಂಸಾಕೃತ್ಯಗಳ ಮತ್ತು ಅವನ್ನೆ­ದುರಿಸಲು ನಾವು  ಚಾಲನೆಗೊಳಿಸುವ ಕ್ರಮಗಳು ಇಂದು ಅಂತ­ರಂಗ ಬಹಿರಂಗಗಳಲ್ಲಿ ಪ್ರಜ್ಞಾ­ಪೂರ್ವಕ ನೆಲೆಗಳಲ್ಲಿ ಸರ್ವವ್ಯಾಪಕವಾಗಿರುವ ಸಂಘರ್ಷ­ವಾದೀ ಮೂಲಪ್ರೇರಣೆಗಳ ಚೌಕಟ್ಟಿ­ನಲ್ಲೇ ನಡೆಯುತ್ತಿದೆಯಲ್ಲ, ಅದೇ ಇರಬಹುದು.

ಕಳೆದ ಶತಮಾನಗಳ ಸಂಘರ್ಷವಾದೀ ಇತಿ­ಹಾಸದ ನಿತ್ಯ ಕೃತ್ಯಗಳಿಗೆ ವಿದಾಯ ಹೇಳಬೇಕಾ­ದರೆ ಭಾವನೆ-ಚಿಂತನೆ–-ಕ್ರಿಯೆಗಳನ್ನು ಒಟ್ಟಾ­ಗಿಸಿ, ಮನ­ದಾಳಗಳಲ್ಲಿ  ಸರ್ವಹಿತಕಾರಿ­ಯಾದ ಸಹ­ಬಾಳುವೆಯ ಮೂಲತತ್ವಗಳನ್ನು ನಾವು ವ್ಯಾಪಕ­ವಾಗಿ ನೆಡತೊಡಗಿದರೆ ಮಾತ್ರ ಹಿಂಸಾಮುಕ್ತ ಜಗತ್ತು ನಿರ್ಮಾಣವಾಗ­ಬಹು­ದೇನೊ. ಆಗ ನಮ್ಮ ಚಿಕಿತ್ಸಾತ್ಮಕ ಕ್ರಮಗಳ ಸ್ವರೂಪವೂ ಬದ­ಲಾಗಿ ಅವು ಹೆಚ್ಚಿನ ಸಾಫಲ್ಯ­ವನ್ನು ಪಡೆಯ­ಬಲ್ಲುವೇನೊ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT