ADVERTISEMENT

‘ಚಿಂತಾಮಣಿ’ಗೆ ಗುಡ್ ಬೈ

ಎಚ್.ಎಸ್.ಶಿವಪ್ರಕಾಶ್
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST
‘ಚಿಂತಾಮಣಿ’ಗೆ ಗುಡ್ ಬೈ
‘ಚಿಂತಾಮಣಿ’ಗೆ ಗುಡ್ ಬೈ   

ಇಡೀ ಏಷ್ಯಾದಲ್ಲೇ ಅತ್ಯಂತ ಮನೋಹರ ತಾಣಗಳಲ್ಲಿ ಒಂದಾದ ಬಾಲಿ ದ್ವೀಪ ಹಲವು ಕಾರಣಗಳಿಗಾಗಿ ಕುತೂಹಲಜನಕ­ವಾಗಿದೆ. ಪ್ರಧಾನವಾಗಿ ಇಸ್ಲಾಮೀಯ ದೇಶ­ವಾದ ಇಂಡೊನೇಷ್ಯಾದಲ್ಲಿ ಇನ್ನೂ ಹಿಂದೂ ಧರ್ಮ ಪ್ರಧಾನವಾದ ಪ್ರದೇಶವಿದು. ತನ್ನ ಆರ್ಥಿಕ ಬಡತನದ ಒತ್ತಡದಿಂದ ಸರ್ವಭಕ್ಷಕ­ವಾದ ಮಾರುಕಟ್ಟೆ ಸಂಸ್ಕೃತಿಯ ಹೆಬ್ಬಾವು ಈ ವಸುಧಾ ವಲಯವಿಶೇಷವನ್ನು ಈಗಾಗಲೇ ಕತ್ತುಮಟ ನುಂಗಿಬಿಟ್ಟಿದೆ.

ಬಾಲಿ ದ್ವೀಪಗಳ ರಾಜಧಾನಿ ಡೆನ್‌ಪಸರ್‌ನ ಟ್ಯಾಕ್ಸಿಚಾಲಕ ಸುಚಿತ್ತ ಮಾಡೆ ತನ್ನ ಮಹಾನ್ ಸಂಸ್ಕೃತಿಗಾಗುತ್ತಿರುವ ಅವನತಿಯ ಅವತಾರದಂತಿದ್ದಾನೆ. ನಾನು ಡೆನ್‌ಪಸರ್‌ ಫೆಬ್ರಿಸ್ ಹೋಟೆಲಿ­­ನಲ್ಲಿ ಬಂದಿಳಿದ ಕೆಲವೇ ಗಳಿಗೆಗಳಲ್ಲಿ ನನ್ನನ್ನು ಊರು ಸುತ್ತಿಸುವ ಸಲುವಾಗಿ ಆತ ನನ್ನ ಮುಂದೆ ಪ್ರತ್ಯಕ್ಷವಾದ. ಗುಂಡುಗುಂಡಾಗಿರುವ ಈ ಹಸನ್ಮುಖಿ ಬಾಲಿ, ಫಿಲಿಪೈನ್ಸ್‌ಗಳಿಗೆ ವಿಶಿಷ್ಟ­ವಾದ ಹೂವಿನ ಡಿಸೈನಿನ ಅಂಗಿಯನ್ನೂ ಅಮೆರಿ­ಕನ್ ಜೀನ್ಸ್‌ಪ್ಯಾಂಟನ್ನೂ ಧರಿಸಿದ್ದ. ಹೆಸರೇನೆಂದು ಕೇಳಿದೆ. ‘ಶಾರುಕ್‌ ಖಾನ್ ಅಂತ ಕರೀರಿ’ ಅಂದ. ಅವನೂ, ಅವನ ಹೆಂಡತಿಯೂ ಶಾರುಖ್ ಖಾನ್‌ನ ಭಕ್ತರಂತೆ. 

ಶಾರುಕ್‌ ಖಾನ್‌ಗೆ ಸಿನಿಮಾ­ದಲ್ಲಿ ಕಷ್ಟಬಂದರೆ ಅವಳು ದಿನವಿಡೀ ರಾತ್ರಿಯಿಡೀ ‘ಓ ..’ಅಂತ ಅಳತೊಡಗುತ್ತಾ­ಳಂತೆ. ಆದರೆ ಸುಚಿತ್ತನೆಂಬ ನಿಜ ಹೆಸರಿನ  ಅವನಿಗೋ ಹಗಲಿಡೀ ಕರೀನಾ ಕಪೂರಳ ಚಿಂತೆ; ಇರುಳಿಡೀ ಅವಳದೇ ಕನಸು. ಬಾಲಿಯ ಗಂಡಸರಂತೆ ಬೆಳಗಿನ ಪೂಜೆಯ ನಂತರ ಕಿವಿಮೇಲೆ ಕೆಂಪು ಕಣಿಗಲೆ ಹೂವನ್ನು ಸಿಕ್ಕಿಸಿ­ಕೊಂಡಿದ್ದ ಆತ ‘ನೀವು ಇಂಡಿಯನ್ನರು ನಮಗೆ ಬಹಳ ಮೆಚ್ಚು, ಯಾಕೆಂದರೆ ನೀವೂ ನಮ್ಮಂತೆ ಹಿಂದೂಗಳು’ ಅಂದ. ಆದರೆ ಅವನ ಭಾರತ ಶಾರುಕ್‌ ಖಾನ್,- ಕರೀನಾಮಯ.

ಬಾಲಿವುಡ್ಡನ್ನು ಭಾರತದ ಆತ್ಮವೆಂದು ನಂಬಿದ ಆತ ಆ ದಿವಸ ನನ್ನನ್ನೂ ನನ್ನ ಸಹೋ­ದ್ಯೋಗಿ ಊರ್ಮಿ ಮಾಲಾಳನ್ನೂ ಬಾಲಿಯ  ಆಮೆದ್ವೀಪಕ್ಕೆ ತನ್ನ ಹೊಸ ಗಾಡಿಯಲ್ಲಿ ಕೊಂಡೊ ಯ್ಯುವಾಗ ಹೇಳಿದ: ‘ಪಪ್ಪಾ ಅಮಿತಾಭ್ ಬಚ್ಚನ್ (ಅವನು ನನಗಿಟ್ಟ ಅಡ್ಡಹೆಸರು), ನೀವು ಇಂಡಿಯನ್ನರು ನಮ್ಮ ಥರ ಹಿಂದೂಗಳು. ನಾನು ನಿಮ್ಮಿಂದ ಬೇರೆಯವರಿಂದ ತೆಗೆದುಕೊಳ್ಳುವುದ­ಕ್ಕಿಂತಾ ಕಡಿಮೆ ದುಡ್ಡು ತಗೊಳ್ಳುತ್ತೇನೆ. ಆದರೆ ನಿಮ್ಮ ಹೋಟೆಲಿನವರಿಗೆ ಹೇಳಬೇಡಿ.

ಅವರ ಮೂಲಕ ನೀವು ನನ್ನನ್ನು ಕರೆಸಿದರೆ ನನ್ನ ಹಣದಲ್ಲಿ ನಲವತ್ತು ಪರ್ಸೆಂಟನ್ನು ಆ ಹೋಟಲಿನ ಚೀನಿ  ಮಾಲೀಕ ತಿಂದು ಹಾಕುತ್ತಾನೆ.­ ನಿಮಗೆ ಇಪ್ಪತ್ತು ಪರ್ಸೆಂಟು ರಿಯಾಯಿತಿ ಕೊಡು­ತ್ತೇನೆ. ನನಗೂ ಇಪ್ಪತ್ತು ಪರ್ಸೆಂಟ್ ಫಾಯಿದಾ.’ ಅವನ ಹಿಂದೂ ­ಪ್ರೇಮದ ಲೆಕ್ಕಾಚಾರವನ್ನು ಒಪ್ಪಿ­ದೆವು. ದಾರಿಯಲ್ಲಿ ಕಂಡ ಭವ್ಯ ದೇವತೆಗಳ ಪರಿ­ಚಯ ಕೇಳಿದೆವು. ಅವನಿಗೆ ಗೊತ್ತಿರಲಿಲ್ಲ.  ಅವನು ‘ಕಭಿ ಖುಷಿ ಕಭಿ ಗಮ್’ ಸಿನಿಮಾದ ಬಗ್ಗೆ ಮಾತಾ­ಡ­ತೊಡಗಿದ. ಊಟದ ವೇಳೆಗೆ ಡೆನ್‌ಪಸರ್‌ನ ಅತ್ಯುತ್ಕೃಷ್ಟ ರೆಸ್ಟೊರೆಂಟಿನಲ್ಲಿ ಸೀಫುಡ್‌­ಗಾಗಿ ಕರೆದೊಯ್ಯವ ಉತ್ಸಾಹ ತೋರಿದ. ನಾವು ‘ಸಂಜೆ ನೋಡೋಣ’ ಅಂತ ಜಾರಿಕೊಂಡೆವು.

ಸಂಜೆಗೆ  ಉಲಿಯಾತುವಿನ ಪ್ರಸಿದ್ಧ ದೇವಸ್ಥಾನ­ದಲ್ಲಿ ಕಚನೃತ್ಯದ ಪ್ರದರ್ಶನಕ್ಕೆ ಕರೆದೊಯ್ದ. ಅಲ್ಲಿನ ಹಾದಿ ತೀರಾ ರಮಣೀಯ. ಇಕ್ಕೆಲದಲ್ಲೂ ಹಸಿರು ಕಣಿವೆಗಳು. ಹಾದಿಬದಿಗೆ  ಪ್ರವಾಸಿಗರು ತಂಗಲಿಕ್ಕೆ ಬಾಡಿಗೆ ಮನೆಗಳು. ಅವುಗಳಲ್ಲಿ ಕೆಲ­ವನ್ನು ಅಮೆರಿಕನ್ನರು ಜಪಾನೀಯರು ಖರೀದಿ ಮಾಡಿಬಿಟ್ಟಿದ್ದಾರಂತೆ. ಉಲಿಯಾತ್ತುನ ಆ ಗುಡ್ಡದ ಮೇಲೆ ಮಂದಿರ. ಇನ್ನೊಂದು ಪಕ್ಕದಲ್ಲಿ ಕಚ ನೃತ್ಯಕ್ಕಾಗಿ ಮಾಡಿಸಿದ್ದ ಬಯಲು ರಂಗ ಮಂದಿರ. ಮೊದಲಗುಡ್ಡ ಏರು­ವು­ದರಲ್ಲಿ ಬಳಲಿದ್ದ ನಾನು ದೇವಸ್ಥಾನದ ಗುಡ್ಡ ಏರುವ ಸಾಹಸ ಮಾಡಲಿಲ್ಲ.

ನನ್ನ ಸಹೋದ್ಯೋಗಿ ಹೋಗಿ ಬಂದಳು. ನಾನು ‘ಅದು ಯಾವ ದೇವರ ದೇವಸ್ಥಾನ’ವೆಂದು ಕೇಳಿದೆ. ಸುಚಿತ್ತನಿಗೆ ಗೊತ್ತಿಲ್ಲ. ‘ನಿಮ್ಮ ಮನೇಲಿ ಯಾವ ದೇವರಿಗೆ ಪೂಜೆ?’ ಅಂತ ಕೇಳಿದೆ. ‘ಹಿಂದೂ ಗಾಡ್’-- ಅವನ ಉತ್ತರ. ಕಚ ನೃತ್ಯಪ್ರದರ್ಶನದ ಟಿಕೆಟ್ಟಿಗೆ ಪ್ರವಾಸಿಗರ ದೊಡ್ಡ ಕ್ಯೂ ಇತ್ತು. ಸುಚಿತ್ತ ಒಳನುಗ್ಗಿ ಟಿಕೆಟ್ಟು ಪಡೆದು ನಮ್ಮನ್ನು  ವೃತ್ತಾಕಾರ ಶಿಲಾರಂಗ­ಮಂದಿ­ರಕ್ಕೆ ಕರೆದೊಯ್ದ. ಸುತ್ತಲ ಚಕ್ರಾಕಾರ ಮೆಟ್ಟಿಲು­ಮೆಟ್ಟಿಲು ಸೀಟುಗಳ ಮುಂಭಾಗದಲ್ಲಿ ಕೂರಿಸಿದ. ನಾನು ಕಚನೃತ್ಯದ ಹೆಸರನ್ನೇ ಕೇಳಿರಲಿಲ್ಲ. ಅಲ್ಲಿ ಹಂಚಲಾದ ಕರಪತ್ರಗಳಿಂದ ರಾಮಾಯಣ­ಕೇಂದ್ರಿತ ನೃತ್ಯನಾಟಕವದೆಂದು ತಿಳಿದುಬಂತು.

ಜಗತ್ತಿನ ನಾನಾ ಭಾಗಗಳ ಪ್ರವಾಸಿಗರು ಚಕ್ರಾ­ಕಾರ ಸೀಟುಗಳನ್ನು ಸ್ವಲ್ಪ ಹೊತ್ತಿನಲ್ಲಿ ಭರ್ತಿ­ಮಾಡಿ­­ಬಿಟ್ಟರು. ನೃತ್ಯತಂಡದ ಒಬ್ಬ ಪ್ರದರ್ಶನ­ವನ್ನು ಇಂಗ್ಲಿಷ್‌ನಲ್ಲಿ ಪರಿಚಯಿಸಿದ ನಂತರ ಆ ಬಯಲು ರಂಗಭೂಮಿ ಸುಮಾರು ಒಂದೂವರೆ ಗಂಟೆಗಳ ಕಾಲ ಅಪೂರ್ವ ಕಲಾಪ್ರಕಾರವೊಂದರ ಅತ್ಯದ್ಭುತ  ಭಿತ್ತಿಯಾಯಿತು. ಐವತ್ತಕ್ಕಿಂತಲೂ ಹೆಚ್ಚು ನಟರ ಸಂಖ್ಯೆ. ಮುಖ್ಯ­ಪಾತ್ರಗಳು ರಾಮ, ಸೀತೆ, ಲಕ್ಷ್ಮಣ, ರಾವಣ, ಹನುಮಂತ ಇತ್ಯಾದಿಯಾಗಿ ಕೆಲವರು. ಮಿಕ್ಕೆಲ್ಲ ನಟರೂ ಕೋರಸ್‌ನ ಹಾಗೆ.

ಈ ಪ್ರದರ್ಶನದ ವಿಶೇಷ: ಅಭಿನಯರಂಗವು ಏಕಕಾಲಕ್ಕೆ ಪವಿತ್ರ ಪೂಜಾಸ್ಥಾನವೂ ಲೋಕಾಭಿ­ರಾಮ ಮನರಂಜನೆಯ ತಾಣವೂ ಆಗಿರುತ್ತದೆ.­ರಂಗ ಮಧ್ಯದಲ್ಲಿರುವ ದಪ್ಪಕಂಬಕ್ಕೆ ಪೂಜಾರಿ­ಯೊಬ್ಬ  ಪೂಜೆ ಸಲ್ಲಿಸಿದ ನಂತರ  ಕೆಂಪುಚಡ್ಡಿ-­ಧಾರೀ ಕಥಕರು ಕೋತಿಗಳ ಹಾಗೆ ಚಲನವಲನ ಮಾಡತ್ತಾ ‘ಚ್ಚಚ್ಚಚ್ಚಚ್ಚಚ್ಚ’ ಎಂದು ಜಪಿಸುತ್ತಾ ರಂಗಪ್ರವೇಶಿಸುತ್ತಾರೆ. ಈ ಬೀಜಾಕ್ಷರವನ್ನು ವಿವಿಧ ಲಯಗಳಲ್ಲಿ ಉಚ್ಚರಿಸತ್ತಾ ತಮ್ಮ ಶರೀರ­ಗಳನ್ನು ನೀರಲೆಗಳ ಹಾಗೆ ಎಡೆಬಿಡದ ಚಲನ ಶೀಲವಿನ್ಯಾಸಗಳಲ್ಲಿ ಅಳವಡಿಸಿಕೊಳ್ಳುತ್ತಾ ಶಬ್ದ, ಚಲನೆ,  ದೃಶ್ಯಗಳ ಸಂಯೋಜನೆಯನ್ನು ಕಟ್ಟುತ್ತಾ ಹೋಗುತ್ತಾರೆ. 

ರಾಮಾಯಣದ ಮುಖ್ಯ ಘಟನೆ­ಗಳನ್ನು ಅಭಿನಯಿಸುವ ಕಲಾವಿದರು ಬಂದಾಗ ‘ಬಾಲಿ ರಾಮಾಯಣ’ದ ಕೆಲವು ಪಂಕ್ತಿಗಳನ್ನು ವಾದ್ಯಗಳಿಲ್ಲದೆ ರಾಗವಾಗಿ ಹಾಡಲಾಗುತ್ತದೆ.  ಸೀತಾ ಸ್ವಯಂವರದಿಂದ ಶುರುವಾಗಿ ರಾವಣ­ವಧೆ ಮತ್ತು ರಾಮ-ಸೀತಾ ಸಮಾಗಮದಿಂದ ಕೊನೆ­ಗೊಳ್ಳುತ್ತದೆ. ಈ ನಡುವೆ ಶೈಲೀಕೃತ ದಿರಿಸಿನ ನಟರು ವಿವಿಧ ಪಾತ್ರಗಳನ್ನು  ಶೋಕ, ರೌದ್ರ ಇತ್ಯಾದಿ ಭಾವಗಳ ಮೂಲಕ ಅಭಿನಯಿಸುತ್ತಾರೆ. ತೀರಾ  ಮುಖ್ಯ ಪಾತ್ರವೆಂದರೆ ಹನುಮಂತನದು. ಕೂಲಿಂಗ್ ಗ್ಲಾಸ್ ಧರಿಸಿ, ಹ್ಯಾಟ್ ಹಾಕಿ­ಕೊಂಡು, ಶೋಕಿಯಾಗಿ ಸಿಗರೇಟು ಸೇದುತ್ತಾ ರಂಗಕ್ಕೆ ಬರುತ್ತಾನೆ.

ಆಗಾಗ ರಂಗದ ಹೊರ­ಬಂದು ಪ್ರೇಕ್ಷಕರ ನಡುವೆ ಕೂತು ಕಪಿಚೇಷ್ಟೆ ಮಾಡಿ ನಗಿಸುತ್ತಾನೆ. ಹರುಕು ಇಂಗ್ಲಿಷಿನಲ್ಲೂ ಮಾತಾಡುವ ಈತ ಭಾರತದ ಗಂಭೀರ ಹನು ಮಂತನಿಗಿಂತ ತೀರಾ ಭಿನ್ನ. ಯಾವ ಲೈಟಿಂಗು-ಪೈಟಿಂಗು, ಮೈಕು-ಪೈಕುಗಳಿಲ್ಲದೆ ಎಂತಹಾ ದೃಶ್ಯ­ವೈಭವವನ್ನು ಕಟ್ಟಬಹುದೆಂಬುದಕ್ಕೆ ಉದಾಹ­ರಣೆ ‘ಲಂಕಾದಹನ’ದ ದೃಶ್ಯ. ರಂಗದ ಮೇಲೆ ಒಣ­ಹುಲ್ಲನ್ನು ಚೆಲ್ಲಿ ಕೊಳ್ಳಿಯಿಂದ ಬೆಂಕಿ ಹೊತ್ತಿ­ಸು­ತ್ತಾರೆ. ಆಮೇಲೆ ತಮ್ಮ ಕಾಲಿನಿಂದ ತುಳಿದು ಉರಿ ಆರಿಸುತ್ತಾರೆ. ರಾಮ-, ಸೀತೆ-, ಹನುಮಂತರ ಒಡ್ಡೋಲಗದಲ್ಲಿ ನಾಟಕ ಮುಗಿದ ಮೇಲೆ ಪ್ರೇಕ್ಷ­ಕರು ಅವರೊಂದಿಗೆ ಫೋಟೊ ತೆಗೆಸಿ­ಕೊಳ್ಳಲು ಅವಕಾಶವಿರುತ್ತದೆ.

ರಂಗಮಧ್ಯದ ಕಲ್ಲಿನ ದೀಪ­ಕಂಬದ ಬೆಳಕಿನಲ್ಲಿ ನಟರ ಧ್ವನಿ ಕಟ್ಟಿಕೊಡುವ ಆ ಕಲಾನಿರ್ಮಿತಿ ಅನನ್ಯವಾದುದು. ಆಧುನಿಕ ರಂಗಭೂಮಿ ಪರಿಣತರಿಗೆ ಅಧ್ಯಯನಯೋಗ್ಯ. ಅದರೆ ಮಾಂತ್ರಿಕತೆಯಲ್ಲಿ ನಾವಿನ್ನೂ ಮುಳುಗಿ-­ರುವಾಗಲೇ ಸುಚಿತ್ತ ತನ್ನ ಮೆಚ್ಚಿನ ಸೀಫುಡ್ ಜಾಗಕ್ಕೆ  ನಮ್ಮನ್ನು ಕರೆದೊಯ್ಯುತ್ತಾನೆ. ಕಡಲ­ತೀರದ ಮಳಲಿನ ಮೇಲಿನ ಆ ರೆಸ್ಟೊರೆಂಟಿನಲ್ಲಿ ಹಲವು ವೇದಿಕೆಗಳಲ್ಲಿ ಬಾಲಿನೀಸ್ ನೃತ್ಯ ಪ್ರಕಾ­ರ­ಗಳು ನಡೆಯುತ್ತಿರುವಾಗ, ದೇಶ­ವಿದೇಶಗಳ ಗಿರಾಕಿ­ಗಳು ಕಡಲಲೆಗಳ ಲಯಗಳನ್ನು ಕೇಳಿಸಿ ಕೊಳ್ಳುತ್ತಾ ಊಟ ಮಾಡುತ್ತಿರುತ್ತಾರೆ.  ಬಾಲಿಯ ತೆಂಗಿನ ಸಾರಾಯಿ ಅಲ್ಲಿನ ವಿಶೇಷ.

ಅಂದು ನಮ್ಮ ಮಾಣಿ ಯಾರೆಂದು ಸ್ವಲ್ಪ ವಿಚಾರಿಸಿಕೊಂಡೆ.  ಬ್ರಾಹ್ಮಣನಾದ ಅವನ ತಂದೆ ಪೂಜಾಪರಿಣತನಂತೆ. ಬಾಲಿಯ ಜಾತಿ-ಧರ್ಮ ವ್ಯವಸ್ಥೆಯ ಬಗ್ಗೆ ಅವನಿಂದ ಸ್ವಲ್ಪ ತಿಳಿವಳಿಕೆ ಸಿಕ್ಕಿತು. ಹಂದಿ, ಮೀನು, ಕೋಳಿ, ಕುರಿ ಮಾಂಸವನ್ನು ಬ್ರಾಹ್ಮ­ಣರಾದಿಯಾಗಿ ಎಲ್ಲ ಹಿಂದೂಗಳೂ ತಿನ್ನು­­ತ್ತಾ­ರಂತೆ. ಹೆಚ್ಚೂಕಡಿಮೆ ಮದುವೆಗಳು ಚತುರ್ವರ್ಣದೊಳಗು.  ಅಂತರ್ವರ್ಣೀಯ ಮದುವೆ­­ಯಾದವರು ಜೊರೂ ಎಂಬ ಇನ್ನೊಂದು ಜಾತಿಯಾಗುತ್ತಾರೆ.

ನಮ್ಮ ಸರಳ ಊಟದ ಬಿಲ್ಲಿನ ಮೊತ್ತ ಭರ್ಜರಿ. ಬಹುಶಃ ಸುಚಿತ್ತನಿಗೆ ಕಮಿಷನ್ ದೊರ­ಕು­ವುದರಿಂದ ಅವನು ಬಲವಂತ ಮಾಡುತ್ತಿದ್ದ. ತರುಣಿಯರಿಬ್ಬರು ಆಕರ್ಷಕ ಬಾಲಿ ಪೋಷಾಕು ಧರಿಸಿ ನರ್ತಿಸುತ್ತಿರಲು ಅಮೆರಿಕನ್ ಗಿರಾಕಿಗಳು ಅವರ ಅಂಗೋಪಾಂಗಗಳನ್ನು ಕ್ಯಾಮೆರಾದಲ್ಲಿ ಅಸಭ್ಯವಾಗಿ ಹಿಡಿಯುತ್ತಿದ್ದ ದೃಶ್ಯ ನನಗೆ ಹೇಸಿಗೆ ಯನ್ನುಂಟು ಮಾಡುತ್ತಿತ್ತು. ಮರುದಿನ ಬೆಳಿಗ್ಗೆ ನಮ್ಮ ಟೀಮಿಗೆ ನನ್ನ ಐರ್ಲೆಂಡಿನ ಮಿತ್ರ ಡೆಕ್ಲನ್ ಮತ್ತವನ ಮಗಳು ಈಫಾ ಸೇರಿಕೊಂಡರು.

ಡೆಕ್ಲನ್ ಬಾಲಿಯ ಇನ್ನೊಂದು ಮಗ್ಗುಲನ್ನು ಕಂಡು ವಿಚಲಿತನಾಗಿದ್ದ. ಹಿಂದಿನ ರಾತ್ರಿ  ಹೋಟೆಲಿನ ಹೊರಗೆ ಸಿಗರೇಟು ಸೇದುತ್ತಾ  ನಿಂತಿದ್ದಾಗ ಅದೆಷ್ಟೋ ಟ್ಯಾಕ್ಸಿ­ಚಾಲ­ಕರು  ಗಾಡಿ ನಿಲ್ಲಿಸಿ ‘ವಾಂಟ್ ಗರ್ಲ್ಸ್ ಫಾರ್ ಬ್ಯಾಂಗ್ಬ್ಯಾಂಗ್?’ ಅಂತ ಕೇಳಿದರಂತೆ. ಬೈಕುಗಳ­ಮೇಲೆ ಅರೆವಸ್ತ್ರಧಾರಿಣಿಯರಾದ ಹುಡುಗಿ ಯರು  ತಮ್ಮ ಕುಂಡೆಗಳನ್ನು ತಟ್ಟಿಕೊಳ್ಳುತ್ತಾ ‘ವಾಂಟ್ ಬ್ಯಾಂಗ್ಬ್ಯಾಂಗ್? ಕಮ್, ಸಿಟ್ ಆನ್ ಮೈ ಬ್ಯಾಕ್’ ಅನ್ನುತ್ತಿದ್ದರಂತೆ. ಬಡತನದಿಂದ ವಿಹ್ವಲವಾಗಿರುವವರ ಕೊನೆಯಾಸರೆ ತೊಗಲ ಮಾರಾಟ. ಬಾಲಿಯಲ್ಲಿ ಇದು ಹೆಂಗಸರಿಗೆ ಸೀಮಿತವಲ್ಲ. ನನ್ನ ಸಹೋದ್ಯೋಗಿನಿ ಕಡಲಕರೆಗೆ ಮುಂಜಾನೆ ವಾಕಿಂಗ್ ಹೋಗಿದ್ದಾಗ ತಲೆಹಿಡುಕ-ಹಿಡುಕಿಯರು ಅಡ್ಡಗಟ್ಟಿ ಕೇಳುತ್ತಿದ್ದರಂತೆ: ‘ವಾಂಟ್ ಅ ಮ್ಯಾನ್?’

ಕಿವಿಮೇಲೆ ಕಣಿಗಲೆ ಹೂವಿನ, ಬಾಟಿಕ್‌ಷರ್ಟ್‌­ಧಾರಿ ಸುಚಿತ್ತ ಮತ್ತೆ ಪ್ರತ್ಯಕ್ಷ. ಆ ದಿನ ಬಾಲಿಯ ಇನ್ನೊಂದು ಪ್ರೇಕ್ಷಣೀಯ ಸ್ಥಳವಾದ ಉಬುಡ್ ಕಡೆ ಹೊರಟೆವು. ಹಾದಿಯಲ್ಲಿ ಬಾರೂಂಗ್ ನೃತ್ಯಕ್ಕೆ ಮೀಸಲಾದ ಒಂದು ರಂಗಶಾಲೆ. ಆ ಬೆಳಗಿನ ಪ್ರದರ್ಶನ ನೋಡಲು ಹೋದೆವು. ಬಾರೂಂಗ್ ಪೂರ್ವ ಏಷ್ಯಾದ ಶೈಲೀಕೃತ ಸಂಗೀತ-ನರ್ತನ-ಆಹಾರ್ಯಗಳನ್ನು ಹೊಂದಿದ್ದರೂ ಜನ­ಪ್ರಿಯ ರಂಗಭೂಮಿಯ ಹಾಸ್ಯ ಮತ್ತು ಕದನ­ಕಲೆ­ಗಳನ್ನು ಅಳವಡಿಸಿಕೊಂಡ ಪ್ರಕಾರ. ನಾವು ನೋಡಿದ ಪ್ರಸಂಗ ಮಹಾಭಾರತ­ ಸಂಬಂಧಿತ.

ಕಥಾನಾಯಕ ಸಹದೇವ. ಒಬ್ಬ ರಾಕ್ಷಸನ ವಶಕ್ಕೆ ಸಿಕ್ಕ ಸಹದೇವ ಕುಂತಿಯರು ಶಿವನ ಕೃಪೆಯಿಂದ, ಸಾದಾ ಜನರ ಬೆಂಬಲದಿಂದ ಹೇಗೆ ಬಂಧ ಮುಕ್ತ­ರಾಗುತ್ತಾರೆನ್ನುವುದು ಕಥಾವಸ್ತು.  ಇಲ್ಲಿ ಮಹಾ­ಭಾರತದ ಪಾಂಡವ-– ಕೌರವರ, ದ್ರೌಪದಿಯ ಪ್ರಸ್ತಾಪವಿಲ್ಲ. ಕಚನೃತ್ಯದಂತೆ ಇದೂ ಕೂಡ ಹೇಗೆ ಪೂರ್ವಏಷ್ಯಾದವರು ರಾಮಾಯಣ-, ಮಹಾ­ಭಾರತ­­ಗಳನ್ನು ಸ್ಥಳೀಯ ಅಗತ್ಯಕ್ಕನುಸಾರ ಬದ­ಲಾ­ಯಿಸಿಕೊಳ್ಳುತ್ತಾರೆಂಬುದಕ್ಕೆ ಉದಾಹರಣೆ. ಅಲ್ಲಿಂದ ಮುಂದೆ ಸುಚಿತ್ತ ನಮ್ಮನ್ನು ಉಬುಡ್ ಗುಹಾಂತರ್ಗತ ದೇಗುಲಕ್ಕೆ ಕರೆದು ಕೊಂಡು­ಹೋದ. ಗುಡ್ಡವೊಂದರಲ್ಲಿ ಕೊರೆದ ಆ ಗವಿ ದೇಗುಲದೊಳಗೆ ಮೂರುಗೂಡುಗಳಲ್ಲಿ ಗಣೇಶ, ಶಿವ ಮತ್ತು ಬುದ್ಧನ ಮೂರ್ತಿಗಳಿವೆ. ಬೌದ್ಧ ಮತ್ತು ಹಿಂದೂ ಧರ್ಮಗಳ ಸಹಬಾಳು­ವೆಯ ಸಂಕೇತದಂತಿದೆ ಈ ದೇಗುಲ.

ನಮ್ಮ ಬಾಲಿಯಾತ್ರೆಯ ಚರಮಬಿಂದು ಕಿಂತಾ­ಮಣಿ­ (ಸಂಸ್ಕೃತ: ಚಿಂತಾಮಣಿ). ಗಂಧರ್ವ­ಲೋಕ­ದಂತೆ ರಾರಾಜಿಸುವ ಈ ಕಣಿವೆಯಲ್ಲಿ ಶಿಖರಗಳ ಮೇಲೆ ಮೋಡಗಳು ಮೈಸೋಕಿಸಿಕೊಂಡು ತೇಲು­ತ್ತಿರುತ್ತವೆ. ದೂರದ ತೆಳುನೀಲಿಯಲ್ಲಿ ಥಳ­ಥಳಿ­ಸುವ ಹಸಿರು ವನರಾಜಿಯ ಮಡಿಲ ಸುಪ್ತ ಜ್ವಾಲಾ­ಮುಖಿಯೊಂದೀಗ  ನೀಲಿನೀರಿನ ವಿಶಾಲ­ಕೊಳವಾಗಿ ಪ್ರಶಾಂತವಾಗಿದೆ.-- ಶಿವನ ಕರುಣಾ­ವ­ತಾರ­ದಲ್ಲಿ ಅವನ ರೌದ್ರಭಾವ ಅಡಗಿ­ಕೊಂಡಂತೆ. ಆ ಸಂಜೆ ನಾವು ಕಡಲಕರೆಯ ಕಡೆ ವಾಕಿಂಗು ಹೋಗುತ್ತಿದ್ದಾಗ ತಲೆ ಹಿಡುಕರ ದಂಡು ಮುತ್ತಿಗೆ ಹಾಕಿತು. ಹಾದರದ ಕಚೇರಿಯಂತಿರುವ ಒಬ್ಬ ಮಸಾಜ್‌ಸೆಂಟರ್ ಹುಡುಗಿ ನಮ್ಮ ಬೆನ್ನು ಬಿದ್ದಳು.

ಮೊದಲು ಮಸಾಜಿಗೆ ಕರೆದು ಆ ಮೇಲೆ ‘ಬ್ಯಾಂಗ್ಬ್ಯಾಂಗ್’ ಸುದ್ದಿ ತೆಗೆದಳು. ಉಪಾಯ­ವಾಗಿ  ‘ನಾವೇನಾದರೂ ಪರಸ್ತ್ರೀಯನ್ನು ಮುಟ್ಟಿ­ದರೆ ನಮ್ಮ ಕ್ರೂರ ಹೆಂಡತಿಯರು ನಮ್ಮನ್ನೂ ಆ ಹೆಂಗಸರನ್ನೂ ಕೊಂದೇಬಿಡುತ್ತಾರೆ’ ಎಂದು ಹೆದರಿಸಿ ಅವಳನ್ನು ನಾನು ಮತ್ತು ಡೆಕ್ಲನ್‌ ಓಡಿಸಿದೆವು. ಸುಚಿತ್ತನನ್ನು ಡೆಕ್ಲನ್ ಕೇಳಿದ: ‘ನಿಮ್ಮ ದೇಶ­ದಲ್ಲಿ ಅಪಘಾತವಾದರೆ ಹೇಗೆ? ನಿನ್ನ ಕಾರಿಗೆ ಇನ್ನೊಂದು ಕಾರಿನವನು ಬಂದು ಹೆಟ್ಟಿದರೆ ಏನು ಮಾಡುತ್ತೀಯ?’ ಸುಚಿತ್ತ ಹೇಳಿದ: ‘ಪೊಲೀಸು ಠಾಣೆಗೆ ಹೋಗುತ್ತೇವೆ. ನನ್ನದು ತಪ್ಪಿದ್ದರೆ ನಾನೇ ಒಪ್ಪಿಕೊಂಡು ಅವನಿಗಾದ ನಷ್ಟ ಕಟ್ಟಿ ಕೊಡುತ್ತೇನೆ ಅವನದು ತಪ್ಪಿದ್ದರೆ ವಸೂಲಿ ಮಾಡಿ­ಕೊಳ್ಳು­ತ್ತೇನೆ’. ‘ಪೊಲೀಸರಿಗೆ ಲಂಚ ಕೊಟ್ಟು ಬಿಡುಗಡೆ ಪಡೆಯಲು ಸಾಧ್ಯವಿಲ್ಲವೇ’ ಎಂದು ಕೇಳಿದಾಗ ಸುಚಿತ್ತನೆಂದ: ‘ಸಾಧ್ಯ. ಆದರೆ ನಾನು ಕರ್ಮ­ಸಿದ್ಧಾಂತವನ್ನು ನಂಬುವುದರಿಂದ ಯಾರಿಗೂ ಮೋಸ ಮಾಡುವುದಿಲ್ಲ’.

ದುಂಡುಮುಖದ ತುಂಬಾ ಮುಗುಳ್ನಗುವ ಸುಚಿತ್ತನ ಮನೋಹರ ಬಾಟಿಕ್‌ಷರ್ಟಿನಷ್ಟೇ ಅವನ ಮನಸ್ಸು ಸದರವೆನಿಸಿತು. ಅವನ ಮುಖ-­ದಲ್ಲಿ ಕಿಂತಾಮಣಿಯ ಮುಗ್ಧ ಸೌಂದರ್ಯ ಕಂಡಿ­ತಾದರೂ ನನ್ನ ಫ್ಯಾಂಟಸಿಯಲ್ಲಿ ಆ ಚೆಲುವಿನ ಕಣಿವೆಯನ್ನು ಬಹುದೇಶೀಯ ಕಂಪೆನಿಯವರು ಖರೀದಿಸಿ ಸ್ಥಳೀಕರನ್ನು ಸೂಳೆಗಾರಿಕೆ, ಭಿಕ್ಷಾವೃತ್ತಿಗೆ ತಳ್ಳುವ ದುಃಸ್ವಪ್ನ ಕವಿಯತೊಡಗಿತು. ನಮ್ಮ ಹೋಟೆಲಿನ ಸ್ವಾಗತವಿಭಾಗದ ಸುಂದರಿ ಶ್ರೀ ಎಂಬ ಹುಡುಗಿ ಮರುದಿನ ನಮ್ಮನ್ನು ಮುಗು­ಳ್ನ­ಗುತ್ತಾ ಬೀಳ್ಕೊಡುವಾಗ ನಾನೆಂದೆ: ‘ಮತ್ತೆ ಬರ­ಬೇಕು. ಇಲ್ಲಿನ ಚೆಲುವನ್ನು ನೋಡಲು ಎರಡು ದಿನ ಸಾಲದು. ಇಲ್ಲಿ ನಿನ್ನ ಪ್ರಕಾರ ನೋಡಲೇ­ಬೇಕಾದ ಜಾಗಗಳ ಪಟ್ಟಿ ಕೊಡು.

ಉದಾಹರಣೆಗೆ ನೀನು ನಾನಾಗಿದ್ದರೆ ಎಲ್ಲೆಲ್ಲಿ ಹೋಗಿಬರುತ್ತಿದ್ದೆ?’ ಅವಳ ಉತ್ತರ ಸುಚಿತ್ತನ ಕರೀನಾಮೋಹ­ವನ್ನು ನೆನಪಿಸಿತು. ಅವಳೆಂದಳು: ‘ನಾನು ನೀವು ಹೋಗುವ ಕಡೆ ಹೋಗುವುದಿಲ್ಲ. ನನ್ನ ಕನಸು ದೊಡ್ಡ ಷಾಪಿಂಗ್‌ಮಾಲ್. ಅಲ್ಲಿ ನನ್ನ ಗಂಡ, ಮಕ್ಕಳಿಗೆ ಬೇಕಾದ ಎಲ್ಲವನ್ನೂ ಕೊಳ್ಳಬೇಕು’. ಇಂಥಾ ಆಶೆಗಳು ಇಡೀ ದೇಶವನ್ನೇ ಮಾರು­ಕಟ್ಟೆಯಾಗಿಸಿ ಸ್ತ್ರೀಪುರುಷರೆಲ್ಲರನ್ನೂ ಸೂಳೆಯರ­ನ್ನಾಗಿ ಮಾಡುತ್ತಿದೆಯಲ್ಲ, ಅದನ್ನು ಶ್ರೀಗೆ ಮತ್ತು ಸುಚಿತ್ತನಿಗೆ ಹೇಗೆ ಅರ್ಥಮಾಡಿಸುವುದು?
ಚಿಂತಾಮಣಿಯ ನೀಲಿಸರೋವರಕ್ಕೆ ಗುಡ್‌ಬೈ!
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.