ಹೈದರಾಬಾದ್ ವಿ.ವಿ. ಮತ್ತು ಜೆ.ಎನ್.ಯು ಪ್ರಕರಣಗಳನ್ನು ವಾಜಪೇಯಿ ಹೇಗೆ ನಿಭಾಯಿಸಿರುತ್ತಿದ್ದರು?
ಜೆ.ಎನ್.ಯು- ಕನ್ಹಯ್ಯ- ದಿಲ್ಲಿ ಪೊಲೀಸ್ ಬೆಳವಣಿಗೆ ನನ್ನನ್ನು 35 ವರ್ಷಗಳ ಹಿಂದಕ್ಕೆ, ಅಂದರೆ ಆತಂಕಮಯವಾಗಿದ್ದ 1981ರ ಕಾಲಕ್ಕೆ ಕರೆದೊಯ್ಯುತ್ತದೆ. ಏಕಕಾಲಕ್ಕೆ ಐದು ದಂಗೆಗಳು ಬಿರುಸುಗೊಂಡಿದ್ದ ದೇಶದ ಈಶಾನ್ಯ ಭಾಗದ ವರದಿಗಾರನಾಗಿ ನಾನಾಗ ಕಾರ್ಯ ನಿರ್ವಹಿಸುತ್ತಿದ್ದೆ. ದಂಗೆಕೋರರು ಎಷ್ಟೇ ಸಂಖ್ಯೆಯಲ್ಲಿರಲಿ ಅವರನ್ನು ಕೇವಲ ‘ದೇಶ ವಿರೋಧಿ ಶಕ್ತಿಗಳು’ ಅಥವಾ ‘ಭೂಗತರು’ ಎಂದೇ ಅಧಿಕೃತ ಪತ್ರಿಕಾಗೋಷ್ಠಿಗಳಲ್ಲಿ ಕರೆಯಲಾಗುತ್ತಿತ್ತು, ಸೆರೆಹಿಡಿಯಲಾಗುತ್ತಿತ್ತು ಮತ್ತು ಆಗಾಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಹತ್ಯೆ ಮಾಡಲಾಗುತ್ತಿತ್ತು. ಹೀಗೆ ಮಾಡುವುದು ದೇಶದ್ರೋಹದ ಪ್ರಕರಣ ದಾಖಲು ಮಾಡುವುದಕ್ಕಿಂತ ಸರಳವಾಗಿತ್ತು. ಮುಗ್ಧರ ಪ್ರಾಣಗಳಿಗೆ ಅಪಾಯವಿಲ್ಲವೆಂದಾದಾಗ, ಕೆಲವೊಮ್ಮೆ ಭಾರಿ ಹೆಡ್ಡತನದ ಸನ್ನಿವೇಶ ನಿರ್ಮಾಣಗೊಂಡು ವಿನೋದಮಯವಾಗಿದ್ದೂ ಇದೆ.
ಸಂಘರ್ಷದ ಸಂದರ್ಭಗಳಲ್ಲಿ ಸೇನೆ, ಪೊಲೀಸರು, ಬೇಹುಗಾರರು ಮತ್ತು ವರದಿಗಾರರ ಸಂಬಂಧ ಅಸಾಮಾನ್ಯವಾಗಿರುತ್ತದೆ. ಒಮ್ಮೊಮ್ಮೆ ಮೈತ್ರಿಯಿಂದ, ಕೆಲವೊಮ್ಮೆ ಹಗೆತನದಿಂದ ಕೂಡಿದ್ದರೂ ವಿಷಯ ಹಂಚಿಕೊಳ್ಳುತ್ತಾ ಜೊತೆಗಿರುವ ಅನಿವಾರ್‍ಯ ಬಂಧ ಅವರ ನಡುವೆ ಇರುತ್ತದೆ. ಮಿಜೊರಾಂ ಮತ್ತು ಗ್ಯಾಂಗ್‌ಟಕ್‌ನಲ್ಲಿದ್ದ ಅಜಿತ್ ಧೋವಲ್‌ರ ಹೊರತಾಗಿ, ಆ ಭಾಗದ ಅತ್ಯುತ್ತಮ ಬೇಹುಗಾರರಲ್ಲಿ ಒಬ್ಬರಾಗಿದ್ದವರು ಮತ್ತು ನನ್ನ ಗೆಳೆಯರಾಗಿದ್ದವರೆಂದರೆ ಹರಿಯಾಣ ಕೇಡರ್‌ನ ಐಪಿಎಸ್ ಅಧಿಕಾರಿ ಕೋಶಿ ಕೋಶಿ ಅವರು. (ಹೌದು, ಅವರ ಹೆಸರೇ ಹಾಗೆ. ಅವರೀಗ ನಿವೃತ್ತರಾಗಿ ಫರೀದಾಬಾದ್‌ನಲ್ಲಿದ್ದಾರೆ). ಆಗ ಅವರು ಗುವಾಹಟಿಯಲ್ಲಿ ಐ.ಬಿ.ಯ (ಗುಪ್ತಚರ ಇಲಾಖೆ) ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದರು. ನಾವು ಆಗಾಗ ಮಾಹಿತಿ ಹಂಚಿಕೊಳ್ಳುತ್ತಿದ್ದೆವು.
ಪತ್ರಕರ್ತರು ಮತ್ತು ಗುಪ್ತಚರ ಇಲಾಖೆಯವರು ತಾವು ಕಲೆಹಾಕಿದ ಮಾಹಿತಿಗಳ ಸತ್ಯಾಸತ್ಯತೆಯ ಬಗ್ಗೆ ಪರಸ್ಪರ ವಿಚಾರಿಸಿಕೊಳ್ಳುತ್ತಾರೆ ಮತ್ತು ಕೆಡುಕಿಲ್ಲದ ಗಾಸಿಪ್‌ಗಳನ್ನು ಹಂಚಿಕೊಳ್ಳುತ್ತಾರೆ ಎಂಬುದು ಸಂಘರ್ಷಗಳನ್ನು ವರದಿ ಮಾಡಿದವರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಬಂದ್ ಇದ್ದ ದಿನ, ಒಂದೆರಡು ಮೈಲು ದೂರ ಚೇನಿಕುತಿಯಲ್ಲಿದ್ದ ಕೋಶಿ ಅವರ ಕಚೇರಿಗೆ ನಡೆದು ಹೋಗುತ್ತಿದ್ದೆ ಇಲ್ಲವೇ ಕೆಲವು ಸಂಜೆ ಅವರೊಡನೆ ನಾನು ಕೆ.ಪಿ.ಎಸ್. ಗಿಲ್ ಅವರ ಮನೆಯಲ್ಲಿ ‘ಬುದ್ಧ ಸಂತ’ನಿಗೆ (ಗಟ್ಟಿಗರ ಗುಂಡು ‘ಓಲ್ಡ್ ಮಾಂಕ್ ರಮ್’ ಅನ್ನು ನಾವು ಕರೆಯುತ್ತಿದ್ದುದೇ ಹಾಗೆ) ಗೌರವ ಸಲ್ಲಿಸಲು ಹೋಗುತ್ತಿದ್ದೆ. ಕೆಲವೊಮ್ಮೆ, ಹಾನಿರಹಿತ ವಿನೋದಕ್ಕಾಗಿ ನಾವು ತುಂಟರಾಗುತ್ತಿದ್ದೆವು.
ಒಂದು ಮಧ್ಯಾಹ್ನ, ಭಾವೋದ್ವೇಗದಲ್ಲಿದ್ದ ಕೋಶಿ ನನಗೆ ಕರೆ ಮಾಡಿ ತಕ್ಷಣ ಅವರ ಕಚೇರಿಗೆ ಬರಹೇಳಿದರು. ದೊಡ್ದ ಸುದ್ದಿ ಇದೆ ಎಂದ ಅವರು, ಕರ್ನಲ್ ಒಬ್ಬರು (ಸೇನೆಯಲ್ಲಿ ಅವರ ತತ್ಸಮಾನ ಹುದ್ದೆ) ತಮ್ಮ ಜೊತೆ ಇದ್ದಾರೆಂದೂ, ಪ್ರಮುಖ ವ್ಯಕ್ತಿಯೊಬ್ಬನನ್ನು ಸೆರೆಹಿಡಿದಿದ್ದು, ರಾಷ್ಟ್ರ ವಿರೋಧಿ ಶಕ್ತಿಯಾದ ಆತನ ಸ್ಥಾನಮಾನದ ಬಗ್ಗೆ, ಯಾರ ಗುಂಪಿಗೆ ಸೇರಿದವ ಎನ್ನುವ ಬಗ್ಗೆ ನನ್ನಿಂದ ಮಾಹಿತಿ ಬೇಕಾಗಿದೆಯೆಂದೂ ಹೇಳಿದರು. ಕೆಲವೇ ಕ್ಷಣಗಳಲ್ಲಿ ನಾನಲ್ಲಿಗೆ ಹೋದೆ. ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದ ಅವರು, ನನ್ನ ಬಳಿ ಪ್ರಶ್ನೆ ಕೇಳುವಂತೆ ಕರ್ನಲ್‌ಗೆ ಹೇಳಿದರು. ತನ್ನನ್ನು ಲೆಫ್ಟಿನೆಂಟ್ ಕರ್ನಲ್ ಎಂದು ಕರೆದುಕೊಳ್ಳುವ ನಾಗಾ ಒಬ್ಬನನ್ನು ತಮ್ಮ ಹುಡುಗರು ಸೆರೆ ಹಿಡಿದಿದ್ದಾಗಿ ಕನರ್ಲ್ ತಿಳಿಸಿದರು.
ಆದರೆ ತಮ್ಮ ಪಟ್ಟಿಯಲ್ಲಿ ಇಲ್ಲದ ಮತ್ತು ಕೇಳರಿಯದ ಗುಂಪಿಗೆ ಸೇರಿದ ಆತನನ್ನು ಗುರುತಿಸಲು ತಮಗೆ ಸಾಧ್ಯವಾಗುತ್ತಿಲ್ಲ ಮತ್ತು ಆತ ತಾನು ‘ಸಾಲ್ವೇಶನ್ ಆರ್ಮಿ’ಗೆ (ಮೋಕ್ಷ ಪ್ರಾಪ್ತಿ ಸೇನೆ) ಸೇರಿದವನೆಂದು ಹೇಳುತ್ತಿದ್ದಾನೆ ಎಂದರು. ಸಂಪ್ರದಾಯಸ್ಥ ಸಿರಿಯನ್ ಕ್ರಿಶ್ಚಿಯನ್ ಆಗಿದ್ದ ಕೋಶಿ ಆವರೆಗೆ ತಡೆಹಿಡಿದಿದ್ದ ನಗುವನ್ನು ಬೀರಿ, ಹಾಗಿದ್ದರೆ ಸಾಲ್ವೇಶನ್ ಆರ್ಮಿ ಎಷ್ಟೊಂದು ನಿರುಪದ್ರವಿಯಾಗಿತ್ತು ಎಂಬುದನ್ನು ಕರ್ನಲ್ ಅವರಿಗೆ ವಿವರಿಸಿದರು. ಅಲ್ಲದೆ, ದೇವರ ಕೆಲಸದಲ್ಲಿರುವ ಈ ಸೈನಿಕನನ್ನು ಕೂಡಲೇ ಕ್ಷಮಿಸಿ ಬಿಟ್ಟುಬಿಡುವುದೇ ಒಳಿತು ಎಂದು ಹೇಳಿದರು. ಇದಾದ ಒಂದೇ ಗಂಟೆಯಲ್ಲಿ ಅದನ್ನು ಕಾರ್ಯರೂಪಕ್ಕೆ ತರಲಾಯಿತು ಮತ್ತು ಇದು ಜೀವಮಾನಪರ್ಯಂತ ನಾವು ಹಂಚಿಕೊಳ್ಳುವ ಕತೆಯಾಯಿತು.
ಅಂತಹ ಸಮಸ್ಯಾತ್ಮಕ ಪ್ರದೇಶವಾಗಿದ್ದರೂ, ಒಳ್ಳೆಯ ಕಾಲ ಅದಾಗಿದ್ದರಿಂದ ಆ ವಿಷಯವು ಶೀಘ್ರವಾದ, ದಯಾಪರವಾದ ಮತ್ತು ತರ್ಕಬದ್ಧವಾದ ಅಂತ್ಯ ಕಂಡಿತು. ಕನ್ಹಯ್ಯ ಕುಮಾರ್ ಬಂಧನದ ವಿಷಯವೂ ಇದೇ ಬಗೆಯ ಒಂದು ಪ್ರಹಸನವಾಗಿದ್ದರೂ, ನ್ಯಾಯಾಲಯ ಈ ಬಗ್ಗೆ ತನ್ನ ನಿರ್ಣಯ ಪ್ರಕಟಿಸಿ ಆತನನ್ನು ಮುಕ್ತಗೊಳಿಸುವವರೆಗೂ ನಾವು ಕಾಯಲೇಬೇಕಾಗಿದೆ. ಹಫೀಜ್ ಸಯೀದ್ ಹೆಸರಿನಲ್ಲಿ ಮಾಡಿದ ನಕಲಿ ಟ್ವೀಟ್‌ನಿಂದ ದೇಶದ ಪ್ರಮುಖರು ಮತ್ತು ದಿಲ್ಲಿ ಪೊಲೀಸರು ಮೂರ್ಖರಾದರು. ಅದಕ್ಕಿಂತಲೂ ಹೆಚ್ಚಿನದಾಗಿ ನಕಲಿ ವಿಡಿಯೊವೊಂದರಿಂದ, ನಾಡಿನ ಮುಂಚೂಣಿಯ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾಯಿತ ಅಧ್ಯಕ್ಷನ ಮೇಲೆ ದೇಶದ್ರೋಹದ (ಅಂದರೆ ದೇಶದ ವಿರುದ್ಧ ಯುದ್ಧ ಸಾರಿದ) ಆಪಾದನೆ ಹೊರಿಸಿದರು. ಈಗ ಅವನ ವಿಚಾರದಲ್ಲಿ ಏನು ಮಾಡಬೇಕೆಂದು ಅವರಿಗೆ ತೋಚುತ್ತಿಲ್ಲ. ಪೊಲೀಸ್ ಮುಖ್ಯಸ್ಥರೂ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಸಾಮಾಜಿಕ ಮತ್ತು ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟಾದ ಮೇಲೆ, ಕ್ಷಮೆ ಕೋರಿದ ಬಡಪಾಯಿಯನ್ನು ಬಿಟ್ಟು ಕಳುಹಿಸಿದ ಗುವಾಹಟಿಯ ಸೇನಾ ಕರ್ನಲ್‌ರಂತೆ ನಡೆದುಕೊಳ್ಳುವುದು ಸುಲಭವಲ್ಲ. ಆಗಿನ ದಿನಗಳು ಹೆಚ್ಚು ಅನುಗ್ರಹದಾಯಕ ಆಗಿದ್ದವು.
ಭಂಡತನದಿಂದ ವರ್ತಿಸುವುದೇ ಈಗಿನ ಸಂಸ್ಕೃತಿಯಾಗಿದೆ. ಅಂತೆಯೇ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಒತ್ತಡ ಹೆಚ್ಚಾದಾಗ, ಮೊದಲು ಆತ ದಲಿತನೇ ಅಲ್ಲವೆಂದು ಕತೆ ಕಟ್ಟಲಾಯಿತು. ತದನಂತರ, ಚರ್ಚೆಯನ್ನು ಜಾತಿಯಿಂದ ಜೆ.ಎನ್.ಯುವಿನಲ್ಲಿ ರಾಷ್ಟ್ರೀಯವಾದದ ವಿಷಯಕ್ಕೆ ತಂದು ನಿಲ್ಲಿಸಲಾಯಿತು. ಎಡಪಂಥೀಯ ವಿಚಾರಧಾರೆಯ ಈ ಆಲಯವು, ಕಳೆದ ಕೆಲವು ವರ್ಷಗಳಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳೆದಂತೆ ಎಡಪಂಥೀಯ ಮತ್ತು ಬಲಪಂಥೀಯ ವಿದ್ಯಾರ್ಥಿ ಸಂಘಗಳ ಸಂಘರ್ಷದ ತಾಣವಾಗಿದೆ. ಕ್ಯಾಂಪಸ್‌ನ ರಸ್ತೆಗಳಲ್ಲಿ ಯಾವಾಗ ನಡೆದಾಡಿದರೂ, ಇಲ್ಲಿನ ತಾತ್ವಿಕ ಸಂಘರ್ಷದ ಪ್ರಖರ ರಾಜಕೀಯವನ್ನು ಗೋಡೆಗಳ ಮೇಲೆ ಕಾಣಬಹುದು. ಸುಂದರವಾಗಿ ಚಿತ್ರಿಸಿರುವ ನನ್ನ ಮೆಚ್ಚಿನ ಬೃಹತ್ ಗೋಡೆಬರಹವೊಂದರಲ್ಲಿ ಮಾರ್ಕ್ಸ್, ಲೆನಿನ್‌ರ ಮಧ್ಯೆ ಭಗತ್‌ಸಿಂಗ್ ಇದ್ದಾರೆ. ಆದರೆ ಅದು ಅಲ್ಲಿಯೇ ಉಳಿದಿದೆಯಲ್ಲದೆ ಅದರಿಂದಾಗಿ ಯಾವುದೇ ಹಿಂಸಾತ್ಮಕ ಘಟನೆಯೂ ನಡೆದಿಲ್ಲ. ಅಲ್ಲಿ ನಡೆಯುವ ಬೌದ್ಧಿಕ ಮತ್ತು ತಾತ್ವಿಕ ಸಂಘರ್ಷಗಳ ಹೊರತಾಗಿಯೂ ಈ ಕ್ಯಾಂಪಸ್‌ನಿಂದ ಉತ್ತಮ ಪ್ರತಿಭೆಗಳು ಹೊರಬರುತ್ತಿವೆ. ಎಡಪಂಥದ ಬಗ್ಗೆ ಕಾಂಗ್ರೆಸ್ ಸಹಾನುಭೂತಿ ಹೊಂದಿದ್ದರಿಂದ ಅಸಮಾಧಾನಗೊಂಡಿದ್ದ ಎಬಿವಿಪಿಯು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ತನ್ನ ತಾಳ್ಮೆ ಕಳೆದುಕೊಂಡಿದೆ.
ಈಗ ಎಬಿವಿಪಿಯು ಪ್ರಭುತ್ವದ ಬಲ ಬಳಸಿಕೊಳ್ಳುವ ಮೂಲಕ, ಹೆಚ್ಚು ‘ಎಡಪಂಥೀಯ’ ಒಲವಿನ ಕ್ಯಾಂಪಸ್ ಮೇಲೆ ಹಿಡಿತ ಸಾಧಿಸಲು ಬಯಸಿದೆ. ಇದು ಹಿಂದಿ ಹೃದಯಭಾಗದಲ್ಲಿ ಚಾಲ್ತಿಯಲ್ಲಿರುವ ‘ನನ್ನ ಪ್ರಿಯಕರನೇ ಊರಿನ ಪ್ರಮುಖನಾಗಿರುವಾಗ ನಾನಾರಿಗೆ ಹೆದರಲಿ’ ಎಂಬ ಗಾದೆ ಮಾತಿನಂತಿದೆ. ದೌರ್ಭಾಗ್ಯವೆಂದರೆ, ಸರ್ಕಾರ ಹೈದರಾಬಾದ್ ಮತ್ತು ಜೆಎನ್‌ಯುಗಳಲ್ಲಿ ಪಕ್ಷಪಾತಿ ‘ಕೊತ್ವಾಲ’ನ ಪಾತ್ರ ನಿರ್ವಹಿಸಲು ನಿರ್ಧರಿಸಿತು. ಇದರ ಪರಿಣಾಮವಾಗಿ, ಒಬ್ಬ ದಲಿತನ ಹೆಣ ಬಿದ್ದಿದೆ ಮತ್ತು ಬಡ ಕುಟುಂಬದ ಇನ್ನೊಬ್ಬನನ್ನು ಜೈಲಿಗಟ್ಟಲಾಗಿದೆ. ಈಗ ಏನು ಮಾಡಬೇಕೆಂದು ಅವರಿಗೆ ತಿಳಿಯುತ್ತಿಲ್ಲ.
ಅವರು ತಪ್ಪಾಯ್ತು ನಾವು ಎಡವಿದೆವು ಎಂದು ಹೇಳಿ, ಬಲಿಪಶುವೊಂದನ್ನು ಹೆಸರಿಸಿದರೆ, (ಬೇರೆಯವರ ಕತೆ ಏನೇ ಆಗಲಿ) ಕನ್ಹಯ್ಯರನ್ನು ಬಿಟ್ಟುಬಿಟ್ಟರೆ, ಹೈದರಾಬಾದ್ ನಂತರ ಎರಡನೇ ಸೋಲನ್ನು ಒಪ್ಪಿಕೊಂಡಂತಾಗುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿದರೆ, ಅದು ವಿರೋಧಿಗಳಿಗೆ ಖ್ಯಾತಿ ತಂದುಕೊಡುವ ಪ್ರಕರಣವಾಗುತ್ತದೆ ಮತ್ತು ಇಂದಲ್ಲ ನಾಳೆ ನ್ಯಾಯಾಲಯ ಆತನನ್ನು ಬಿಡುಗಡೆ ಮಾಡಿ, ದೇಶದ್ರೋಹದ ಆಪಾದನೆಯಿಂದ ಮುಕ್ತಗೊಳಿಸುತ್ತದೆ. ಏನೇ ಮಾಡಿದರೂ ಕನ್ಹಯ್ಯ ರಾಜಕೀಯ ಸ್ಟಾರ್ ಆಗುವುದು ನಿಶ್ಚಿತ.
ಬಿಜೆಪಿಗೆ ಇರುವ ಆಯ್ಕೆ ಸರಳವಾಗಿದೆ. ಸಾರ್ವಜನಿಕವಾಗಿ ತಪ್ಪನ್ನು ಒಪ್ಪಿಕೊಂಡು ಹಾನಿಯಿಂದ ಆದಷ್ಟೂ ತಪ್ಪಿಸಿಕೊಳ್ಳುವುದು. ಇಲ್ಲವೇ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲದ ಪ್ರಕರಣದಲ್ಲಿ ತನ್ನ ತಪ್ಪು ಸಾಬೀತಾಗುವವರೆಗೂ ಹೋರಾಡುವುದು. ಒ.ಪಿ.ಶರ್ಮಾ ಅವರು ವಿದ್ಯಾರ್ಥಿಗಳಿಗೆ ಥಳಿಸುವುದು, ನಿವೃತ್ತಿಯ ಅಂಚಿನಲ್ಲಿರುವ ಪೊಲೀಸರು ಅವರನ್ನು ರಕ್ಷಿಸಲು ಮುಂದಾಗದಿರುವುದನ್ನು ನೋಡಿದರೆ, ಇಲ್ಲಿ ಸಂಪ್ರದಾಯಸ್ಥ ಹಿರಿಯರು ಪುಂಡ ಮಕ್ಕಳ ಮೇಲೆ ಯುದ್ಧ ಸಾರಿದಂತೆಯೇ ತೋರುತ್ತದೆ. ಹಿರಿಯರು ಮತ್ತು ಯುವಕರ ಸಮರ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನಿಮಗೆ ಕಲಿಸಲು ಇಡೀ ಮನುಕುಲದ ಇತಿಹಾಸವೇ ನಿಮ್ಮ ಮುಂದಿದೆ.
ಸಂಕಷ್ಟದಲ್ಲಿ ಸಿಲುಕಿದವರಿಗೆ, ಅದರಲ್ಲೂ ವಿಶೇಷವಾಗಿ ಬಿಜೆಪಿ ಸರ್ಕಾರಕ್ಕೆ ಒಂದು ಒಳ್ಳೆಯ ಸಲಹೆಯೆಂದರೆ, ಅದು ತನ್ನ ಕಾರ್ಯಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸೂತ್ರವನ್ನು ಅನುಸರಿಸಬೇಕು. ಇಂತಹ ಸಂದರ್ಭವನ್ನು ವಾಜಪೇಯಿ ಅವರಾಗಿದ್ದರೆ ಹೇಗೆ ನಿಭಾಯಿಸುತ್ತಿದ್ದರು ಎಂದು ಚಿಂತಿಸಬೇಕು. ಆಗ ದೊರೆಯುವ ಆಯ್ಕೆಗಳು ಈಗಿನ ಎನ್‌ಡಿಎ ಸರ್ಕಾರದಲ್ಲಿನ ಅವರ ದಾಯಾದಿಗಳು ಅನುಸರಿಸಿಕೊಂಡು ಬರುತ್ತಿರುವುದಕ್ಕಿಂತ ಬಹಳ ಭಿನ್ನವಾಗಿರುತ್ತವೆ. 1997ರ ಆರಂಭದಲ್ಲಿ, ಆಗಷ್ಟೇ ಬಿಜೆಪಿ- ಅಕಾಲಿ ದಳದ ಮೈತ್ರಿಕೂಟ (ಈಗಿನ ಬಿಜೆಪಿ-ಪಿಡಿಪಿ ಮೈತ್ರಿಯಂತೆಯೇ ಅದು ಕೂಡ ಅಸಂಭವನೀಯವಾಗಿ ಕಾಣುತ್ತಿತ್ತು) ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದಿತ್ತು. ಆಗ ಸ್ವರ್ಣ ಮಂದಿರವೂ ಸೇರಿದಂತೆ ಭಿಂದ್ರನ್‌ವಾಲೆ ಪರ ಘರ್ಷಣೆ ಭುಗಿಲೆದ್ದಿತು. ಪಂಜಾಬ್ ಭಯೋತ್ಪಾದನೆಯನ್ನು ಹತ್ತಿರದಿಂದ ವರದಿ ಮಾಡಿದ ನನಗೆ ತೀವ್ರ ಬೇಸರವಾಗಿತ್ತು ಮತ್ತು ನಾನಾಗ ಕೆಲಸ ನಿರ್ವಹಿಸುತ್ತಿದ್ದ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಈ ಬೆಳವಣಿಗೆಗಳ ಬಗ್ಗೆ ಖಾರವಾಗಿ ಬರೆಯಲಾರಂಭಿಸಿತು. ಅಷ್ಟೇ ಅಲ್ಲದೆ, ಮೈತ್ರಿಯ ಬಗ್ಗೆ ಪುನರವಲೋಕಿಸುವಂತೆ ಬಿಜೆಪಿಯನ್ನು ಆಗ್ರಹಿಸಿತು (ಕೇಂದ್ರದಲ್ಲಿ ಬಿಜೆಪಿ ಆಗಿನ್ನೂ ವಿರೋಧ ಪಕ್ಷವಾಗಿತ್ತು).
ಒಂದು ಮಧ್ಯಾಹ್ನ ವಾಜಪೇಯಿ ರೈಸಿನಾ ರಸ್ತೆಯ ತಮ್ಮ ಮನೆಗೆ ನನ್ನನ್ನು ಕರೆಸಿಕೊಂಡರು. ಅಡ್ವಾಣಿ ಮತ್ತು ಮದನ್‌ಲಾಲ್ ಖುರಾನ ಅಲ್ಲಿದ್ದರು. ಚಹಾ ಮತ್ತು ಅನಾನಸ್ ಪೇಸ್ಟ್ರಿಯ ಜೊತೆಗೆ ವಾಜಪೇಯಿ ನನಗೊಂದು ಭಾಷಣವನ್ನೇ ಮಾಡಿದರು: ‘ಪಂಜಾಬ್‌ನಲ್ಲಿ ಹಿಂದೂಗಳು ಮತ್ತು ಸಿಖ್ಖರ ವಾಗ್ವಾದ ತಾರಕಕ್ಕೇರಿತ್ತು. ಸಿಖ್ ಉಗ್ರರು ಬಿಜೆಪಿ ನಾಯಕರ ಹತ್ಯೆ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ಮತ್ತು ಅಕಾಲಿಗಳು ಕೈಜೋಡಿಸಿದರೆ ಪಂಜಾಬ್‌ಗೆ ಮತ್ತು ದೇಶಕ್ಕೆ ಒಳ್ಳೆಯದೋ ಅಲ್ಲವೋ? ನಾವು ಈ ಎಡರುತೊಡರುಗಳನ್ನೆಲ್ಲ ಅಲಕ್ಷಿಸಬೇಕು, ಏಕೆಂದರೆ ಅವುಗಳಲ್ಲಿ ಸತ್ವಯುತವಾದದ್ದೇನೂ ಇಲ್ಲ. ಥೋಡೆ ಪರಿಪಕ್ವ್ ಬನಿಯೆ ಸಂಪಾದಕ್‌ಜೀ’ (ಸ್ವಲ್ಪ ಪರಿಪಕ್ವಗೊಳ್ಳಿ ಸಂಪಾದಕ ಮಹಾಶಯರೇ) ಎಂದರು. ‘ಪಂಜಾಬ್ ಘಟನೆಗಳು ನಿಯಂತ್ರಣ ಕಳೆದುಕೊಂಡರೆ ಏನಾಗುತ್ತದೆ? ಅದಕ್ಕೆ ಅಕಾಲಿ ದಳವನ್ನೇ ಹೊಣೆ ಮಾಡಬೇಕಲ್ಲವೇ’ ಎಂದು ನಾನಾಗ ಕೇಳಿದೆ. ‘ಅದನ್ನೆಲ್ಲ ಖುರಾನ ನೋಡಿಕೊಳ್ಳುತ್ತಾರೆ, ಅವರೇ ಈ ಜಟಿಲ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಅವರು ಹೇಳಿದರು.
ಹೈದರಾಬಾದ್ ಹಾಗೂ ಜೆ.ಎನ್.ಯು ಘಟನೆಗಳನ್ನು ವಾಜಪೇಯಿ ಹೇಗೆ ನಿಭಾಯಿಸುತ್ತಿದ್ದರು ಎಂಬುದನ್ನು ಯೋಚಿಸಿ ನೋಡಿ. ತಮ್ಮ ಸಂಪುಟದ ಇಬ್ಬರು ಸಚಿವರು ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪರವಾಗಿ ಒತ್ತಡ ಹೇರುತ್ತಿದ್ದಾರೆಂದು ಗೊತ್ತಾಗಿದ್ದರೆ ಅವರು ಅದನ್ನು ವಿರೋಧಿಸುತ್ತಿದ್ದರು. ಇಷ್ಟಾಗಿಯೂ ವೇಮುಲ ತನ್ನ ಜೀವಹರಣ ಮಾಡಿಕೊಂಡಿದ್ದರೆ, ಆತನ ಬಗ್ಗೆ ಸಹಾನುಭೂತಿಯಿಂದ, ದುಃಖತಪ್ತರಾಗಿ ಮಾತನಾಡುತ್ತಿದ್ದವರಲ್ಲಿ ಅವರು ಮೊದಲಿಗರಾಗಿರುತ್ತಿದ್ದರು. ಜೆಎನ್‌ಯು ವಿಚಾರದಲ್ಲಿ ಅವರು ‘ಚೋಕರೇ ಹೈ, ಬೋಲ್ನೆ ದೀಜಿಯೆ, ಫಿರ್ ಐಎಎಸ್ ಮೆ ಜಾಯೇಂಗೆ’ (ಹುಡುಗರಲ್ಲವೇ ಮಾತಾಡಲಿ ಬಿಡಿ, ಬಳಿಕ ಅವರು ಬೆಳೆಯುತ್ತಾರೆ ಮತ್ತು ಐಎಎಸ್ ಸೇರಿಕೊಳ್ಳುತ್ತಾರೆ) ಎಂದು ಹೇಳಿರುತ್ತಿದ್ದರು.
ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳನ್ನು ವಾಜಪೇಯಿ ಹೇಗೆ ನಿರ್ವಹಿಸಿದರು ಎಂಬುದನ್ನು ನೆನಪಿಸಿಕೊಳ್ಳಿ. ‘ಸರ್ಕಾರ ಸಂವಿಧಾನದ ವ್ಯಾಪ್ತಿಯಲ್ಲಿ ಮಾತ್ರ ಚರ್ಚೆಗೆ ಬರುತ್ತೇನೆ ಎಂದು ಹಟ ಹಿಡಿದರೆ ಮಾತುಕತೆ ಹೇಗೆ ಸಾಧ್ಯ’ ಎಂದು ಪ್ರತ್ಯೇಕತಾವಾದಿಗಳು ಕೇಳಿದಾಗ, ‘ಸಂವಿಧಾನದ ಮಾತೇಕೆ, ನಾನು ಮಾನವೀಯತೆಯ ವ್ಯಾಪ್ತಿಯಲ್ಲಿ ಮಾತನಾಡುತ್ತೇನೆ ಬನ್ನಿ’ ಎಂದು ಅವರು ಹೇಳಿದ್ದರು. ಅದು ಸಂಘರ್ಷಗಳ ಪರಿಹಾರಕ್ಕೆ ಕೈಹಾಕುವ ಮಾರ್ಗ. ಆದರೆ ನಂತರ ನಾವು ನೋಡಿದ್ದು ಸಂಘರ್ಷಗಳನ್ನು ಹುಟ್ಟುಹಾಕುವ ಮಾರ್ಗ. ಅದರಿಂದೇನೂ ಪ್ರಯೋಜನವಾಗುತ್ತಿಲ್ಲ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.