ಈ ಅಂಕಣಕ್ಕೆ ನಾನು ‘ಉದಾರವಾದಿ ಆಯಾತೋಲ್ಲಾ ಅಥವಾಅರ್ಚ್‌ಬಿಷಪ್’ ಗಳು ಎಂದು ಹೆಸರಿಡುವುದೇ ಹೆಚ್ಚು ಸೂಕ್ತ ಇಲ್ಲವೇ ಸರಿಯಾದ ಉಪಮೆ ಆದೀತು ಎಂದು ಅನಿಸುತ್ತದೆ. ಇವರ ಧರ್ಮೋಪದೇಶಕ್ಕೆ ಶಂಕರಾಚಾರ್ಯರು ಯಾವುದೇ ಫತ್ವಾ ಅಥವಾ ಸುತ್ತೋಲೆ ಹೊರಡಿಸುವುದಿಲ್ಲ. ಈ ದಿನಗಳಲ್ಲಿ ಯಾವುದೇ ರೂಪಕ ಬಳಸುವ ಬಗ್ಗೆ ಬರಹಗಾರರು ಅತಿ ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ. ಒಂದು ವೇಳೆ ಮೇಲೆ ಉಲ್ಲೇಖಿಸಿದಂತೆ ನಾನು ಯಾವುದಾದರೂ ರೂಪಕ ಬಳಸಿದರೆ ನಂಬಿಕೆಗಳ ಸಂಪ್ರದಾಯವಾದಿಗಳು ಮತ್ತು ಉದಾರವಾದಿಗಳೂ ಸೇರಿದಂತೆ ಎರಡೂ ಕಡೆಯ ಬಣದವರು ನನ್ನ ವಿರುದ್ಧ ಟೀಕಾಸ್ತ್ರಗಳ ಮಳೆಯನ್ನೇ ಸುರಿಸಿ ನನ್ನ ಮೇಲೆ ಮುಗಿ ಬೀಳುತ್ತಾರೆ. ಹೀಗಾಗಿ ನನ್ನ ಹಿಂದೂ ಬಾಂಧವರ ಜತೆಗೆ ವೈಚಾರಿಕ ಸಂಘರ್ಷ ನಡೆಸಲು ನಾನು ಹೆಚ್ಚು ಇಷ್ಟಪಡುವೆ.
ನನ್ನ ಈ ವಾದವು, ಈ ಶ್ರೇಷ್ಠ ಧಾರ್ಮಿಕ ಚಿಂತನೆ ಮತ್ತು ನಂಬಿಕೆಗಳಿಗೆ ಸಂಬಂಧಿಸಿಲ್ಲ. ಈ ಧಾರ್ಮಿಕ ನಂಬಿಕೆಗಳು ಭಿನ್ನವಾಗಿದ್ದರೂ, ಅವೆಲ್ಲವೂ ದೇವರನ್ನು ಕುರಿತ ಪ್ರಾರ್ಥನೆಗೆ ಸಂಬಂಧಿಸಿವೆ. ಒಂದು ವೇಳೆ ನೀವು ಒಂದೇ ದೇವರಲ್ಲಿ ನಂಬಿಕೆ ಇರಿಸಿದವರು ಆಗಿರದಿದ್ದರೆ ಇವೆಲ್ಲವೂ ಇನ್ನೊಂದು ಅರ್ಥದಲ್ಲಿ ಸರ್ವ ದೇವ ಮಂದಿರಕ್ಕೆ ಸಂಬಂಧಿಸಿರುತ್ತವೆ.
ಮಾನವ ಕುಲದಲ್ಲಿ ಉದ್ಭವಿಸಿರುವ ಉದಾರವಾದದ ಹೊಸ ಧರ್ಮದ ಬಗ್ಗೆ ನಾನಿಲ್ಲಿ ಉಲ್ಲೇಖಿಸಲು ಹೊರಟಿರುವೆ. ಹಳೆಯ ಧರ್ಮಗಳಂತೆ ಇದಿನ್ನೂ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಬೇಕಾಗಿದೆ. ತನ್ನ ನಂಬಿಕೆಯ ಸ್ವಂತ ವಿಚಾರಧಾರೆಯಿಂದ ಯಾವುದೇ ಬಗೆಯ ಪಥ ಬದಲಾವಣೆಯನ್ನು ಇದು ಸಹಿಸಿಕೊಳ್ಳುವುದಿಲ್ಲ. ನಾನು ಇಲ್ಲಿ ಹಲವು ಉಪಮೆಗಳನ್ನು ಮಿಶ್ರಣ ಮಾಡುವೆ. ಇಲ್ಲಿ ಇರುವವರಲ್ಲಿ ಯಾರೊಬ್ಬರೂ ಶಿಯಾ– ಸುನ್ನಿ, ಕ್ಯಾಥೋಲಿಕ್– ಪ್ರೊಟೆಸ್ಟೆಂಟ್. ವೈಷ್ಣವರು– ಶೈವರು ಆಗಿರುವುದಿಲ್ಲ. ನೀವು ನನ್ನ ವಿಚಾರಧಾರೆಯವರಾಗಿದ್ದರೆ ನೀವು ಸಂಪೂರ್ಣವಾಗಿ ನನ್ನನ್ನು ಅನುಸರಿಸಲೇಬೇಕು. ಇಲ್ಲಿ ಯಾರೊಬ್ಬರಿಗೂ ಯಾವುದೇ ವಿನಾಯ್ತಿ ಇರುವುದಿಲ್ಲ. ವಿಧಿಸಲಾಗುವ ಪವಿತ್ರ ನಿಯಮಗಳಿಂದ ಯಾರೊಬ್ಬರೂ ದೂರ ಸರಿಯುವಂತಿಲ್ಲ. ಇಲ್ಲಿ ಕೆಲವು ಕನಿಷ್ಠ ನೀತಿ ಸಂಹಿತೆಗಳಿದ್ದು, ಅವುಗಳ ಪಾಲನೆಗೆ ನೀವು ಕಡ್ಡಾಯವಾಗಿ ಬದ್ಧರಾಗಿರಬೇಕಾಗುತ್ತದೆ.
ಮೊದಲನೆಯದಾಗಿ ನೀವು ನಿಮ್ಮ ಧಾರ್ಮಿಕತೆ ಮತ್ತು ದೇವರುಗಳನ್ನು ಬಿಟ್ಟುಕೊಡಬೇಕು. ಮುಕ್ತ ಮಾರುಕಟ್ಟೆಯ ಜಾಗತೀಕರಣ ಮತ್ತು ನಿಯಂತ್ರಣ ಮುಕ್ತ ಆಲೋಚನೆ ಒಳಗೊಂಡಂತೆ ಎಲ್ಲ ಚಿಂತನೆಗಳನ್ನು ಟೀಕಿಸಬೇಕು. ಸರ್ಕಾರವೇ ನಿಮ್ಮ ಆರಾಧ್ಯ ದೇವರು ಎಂದು ಪರಿಗಣಿಸಬೇಕು. ಎಲ್ಲ ಉದ್ಯಮಪತಿಗಳೂ ಕಳ್ಳರು ಎಂದೂ ಭಾವಿಸಬೇಕು.
ನೀರಾವರಿ ಉದ್ದೇಶಕ್ಕೆ ಕಟ್ಟಿರುವ ಅಣೆಕಟ್ಟುಗಳನ್ನು ವಿರೋಧಿಸಬೇಕು, ಈ ಹಿಂದೆ ಕಟ್ಟಿರುವ ಅಣೆಕಟ್ಟುಗಳೆಲ್ಲ ವಿನಾಶಕ್ಕೆ ಕಾರಣವಾಗಿವೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಎಲ್ಲ ಬಗೆಯ ವಿದ್ಯುತ್ ಉತ್ಪಾದನೆಯನ್ನೂ ಕೆಡುಕಿನ ಮೂಲ ಎಂದೇ ಪರಿಗಣಿಸಬೇಕು.
ಡೊನಾಲ್ಡ್ ಟ್ರಂಪ್, ಪುಟಿನ್ ಮತ್ತು ಷಿ ಜಿನ್‌ಪಿಂಗ್ ಅವರನ್ನು ಚುನಾಯಿಸಿದ್ದಕ್ಕೆ ಆಯಾ ದೇಶಗಳ ಜನರನ್ನು ನೀವು ಟೀಕಿಸಬಾರದು. ಪ್ರಾಣಿಗಳು ಶ್ರೇಷ್ಠವಾಗಿದ್ದು, ಮಾನವನೇ ಪ್ರಾಣಿಗಳಂತೆ ವರ್ತಿಸುತ್ತಿದ್ದಾನೆ. ಸರ್ಕಾರಗಳು ಶ್ರೇಷ್ಠವಾಗಿದ್ದರೂ, ಸ್ವಯಂ ಸೇವಾ ಸಂಸ್ಥೆಗಳು ಅದಕ್ಕಿಂತಲೂ ಉತ್ತಮವಾಗಿವೆ. ಖಾಸಗಿ ವಲಯದ ನಿಯಂತ್ರಣದಲ್ಲಿದ್ದರೆ ವಿಜ್ಞಾನವು ಅಪಾಯಕಾರಿಯಾಗಿರುತ್ತದೆ. ಕುಲಾಂತರಿ ಆಹಾರವು ಜಗತ್ತಿಗೆ ಎದುರಾಗಿರುವ ದೊಡ್ಡ ಬೆದರಿಕೆಯಾಗಿದೆ...
ಸಾವಯವ ಅಲ್ಲದ ಆಹಾರ ಸೇವನೆಯು ಆತ್ಮಹತ್ಯಾಕಾರಿಯಾಗಿದೆ. ಸಾವಯವ ಧಾನ್ಯಗಳಿಂದ ತಯಾರಿಸಿದ ರೊಟ್ಟಿಗಳನ್ನೇ ಸೇವಿಸಿ. ಈ ಧಾರ್ಮಿಕ ಕಾಯ್ದೆಯಿಂದ ವಿಮುಖವಾದರೆ ಅಥವಾ ಅದನ್ನು ಉಲ್ಲಂಘಿಸಿದರೆ ನೀವು ಉದಾರವಾದಿ ಧೋರಣೆಯವರಾಗಿರುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ,– ಉದಾರವಾದಿಗಳಾಗಿರಿ. ನಾನು ನಡೆಯುವ ಹಾದಿಯಲ್ಲಿಯೇ ಸಾಗಿರಿ.ನಾನು ಹೇಳಿದ್ದನ್ನು ಚಾಚೂತಪ್ಪದೇ ಮಾಡಿರಿ –ಇವೆಲ್ಲವೂ ‘ಉದಾರವಾದ’ವೆಂಬ ‘ಹೊಸ ಧರ್ಮ’ ವಿಧಿಸುವ ಕಟ್ಟಳೆಗಳಾಗಿವೆ.
ನ್ಯಾಯಮೂರ್ತಿ ಲೋಯಾ ಅವರ ಸಾವು ನಿಗೂಢವಾಗಿದ್ದು, ನ್ಯಾಯಯುತವಾದ ಹೊಸ ತನಿಖೆ ನಡೆಸಬೇಕು ಎನ್ನುವ ವಾದವನ್ನು ಬೆಂಬಲಿಸಿದರೆ ನೀವೊಬ್ಬರು ನಕಲಿ ವ್ಯಕ್ತಿ ಎನ್ನುವ ಹಣೆಪಟ್ಟಿ ಹಚ್ಚಿಕೊಳ್ಳಲು ಸಿದ್ಧರಾಗಿರಬೇಕು.
ಒಂದು ವೇಳೆ ನೀವು ಪ್ರಗತಿಪರ ಧೋರಣೆಯವರಾಗಿದ್ದರೆ, ಲೋಯಾ ಅವರ ಸಾವಿನ ಕುರಿತು ತನಿಖೆ ನಡೆಸುವುದರಿಂದ ವೃಥಾ ಸಮಯ ಅಪವ್ಯಯ ಆಗಲಿದೆ ಎಂದೇ ಹೇಳಬೇಕು. ಕೆಲ ಮಾಹಿತಿ ಕೊಂಡಿಗಳನ್ನು ಜೋಡಿಸಿ ಸಾವಿಗೆ ಹೊಣೆಗಾರರಾದವರನ್ನು ಶಿಕ್ಷಿಸಿ ಎಂದು ಪ್ರತಿಪಾದಿಸುವಿರಿ. ಈ ನಿಲುವಿನಿಂದ ದೂರ ಸರಿದರೆ, ನೀವು ಅಮಿತ್ ಶಾ ಅವರಿಂದ ಭಯ ಪಡುವಿರಿ ಎಂದೇ ಅರ್ಥವಾಗುತ್ತದೆ.
ನಮ್ಮ ಸುತ್ತಮುತ್ತಲೂ ನಡೆಯುವ ವಿದ್ಯಮಾನಗಳನ್ನು ನೀವು ಸರಳವಾಗಿ ಆದರೆ ಪಾರದರ್ಶಕವಾಗಿ ಪರಾಮರ್ಶಿಸಿದರೆ, ಉಳಿದದ್ದು ತನ್ನಷ್ಟಕ್ಕೆ ತಾನೇ ಹಿಂಬಾಲಿಸಿಕೊಂಡು ಬರುತ್ತದೆ. ಒಂದು ವೇಳೆ ನೀವು ಬುದ್ಧಿಜೀವಿಯಾಗಿದ್ದರೆ ಅಥವಾ ಸಾಮಾಜಿಕ ಮಾಧ್ಯಮಗಳು ಕರೆಯುವಂತೆ ‘ಪ್ರಭಾವ ಬೀರುವವರಾಗಿದ್ದರೆ’ ನೀವು ಮಾತನಾಡುವ ಪ್ರತಿಯೊಂದು ಶಬ್ದವೂ ನಿಮ್ಮ ವಿರುದ್ಧವೇ ಸಾಕ್ಷ್ಯ ನುಡಿಯುತ್ತದೆ. ಒಂದು ವೇಳೆ ನೀವು ಪತ್ರಿಕಾ ಸಂಪಾದಕರಾಗಿದ್ದರೆ, ನೀವು ಏನೇ ಮಾತನಾಡಿ, ಬರೆಯಿರಿ, ಪ್ರಕಟಿಸಿ– ಪವಿತ್ರರಲ್ಲಿಯೇ ಪವಿತ್ರರಾದ ಉದಾರವಾದಿ ಶಂಕರಾಚಾರ್ಯರು ನಿಮ್ಮ ಮೇಲೆ ಕಣ್ಣು ಇಟ್ಟಿರುತ್ತಾರೆ.
ಈ ಅಂಕಣ ಬರೆಯಲು ಯಾವ ವಿದ್ಯಮಾನ ಪ್ರೇರಣೆ ನೀಡಿದೆ ಎಂದು ಓದುಗರಾದ ನಿಮ್ಮಲ್ಲಿ ಕೆಲವರು ಅಂದಾಜಿಸಿರಬಹುದು. ಒಂದು ವೇಳೆ ಅದು ನಿಮಗೆ ಸ್ಪಷ್ಟವಾಗಿರದಿದ್ದರೆ, ನಾನಿಲ್ಲಿ ವಿವರಿಸುವೆ.
ನಮ್ಮ ಪ್ರಕಟಣೆಯಾಗಿರುವ ‘ದ ಪ್ರಿಂಟ್’ನಲ್ಲಿ ಈ ವಾರ, ಮುಂಬೈನ ರೂಪಾ ಸುಬ್ರಮಣ್ಯ ಅವರ ಲೇಖನವೊಂದನ್ನು ಪ್ರಕಟಿಸಿದ್ದೆವು. ಆರ್ಥಿಕ ತಜ್ಞೆಯಾಗಿರುವ ಇವರು, ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. ಸರಿ ಸುಮಾರು ಐದು ವರ್ಷಗಳ ಕಾಲ ಅವರು ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿಯಾಗಿದ್ದರು. ನಾನೂ ಸೇರಿದಂತೆ ಮೋದಿ ಅವರ ಕಟು ಟೀಕಾಕಾರರನ್ನು ಅವರು ಯಾವತ್ತೂ ಕ್ಷಮಿಸಿರಲಿಲ್ಲ.
ಮೋದಿ ಅವರಿಂದ ಈಗ ತಮಗೆ ಆಗಿರುವ ಭ್ರಮನಿರಸನದ ಕುರಿತು ಅವರು ನಮಗೆ ಲೇಖನವೊಂದನ್ನು ಬರೆದು ಕಳಿಸಿದ್ದರು. ಆರ್ಥಿಕ ಸುಧಾರಣೆ ಮತ್ತು ಬೆಳವಣಿಗೆ ಬಗ್ಗೆ ನೀಡಿದ್ದ ಭರವಸೆಗಳಿಗಾಗಿ ಅವರು ಮೋದಿ ಅವರನ್ನು ಬೆಂಬಲಿಸುತ್ತ ಬಂದಿದ್ದರು. ಅವರೀಗ ಬರೆದಿರುವ ಲೇಖನವು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ನಿರೀಕ್ಷೆಯಂತೆ ಈ ಲೇಖನಕ್ಕೆ ಬಿಜೆಪಿಯಿಂದ ಟೀಕಾಸ್ತ್ರಗಳ ಮಹಾ ಪ್ರವಾಹವೇ ಹರಿದು ಬಂದಿತ್ತು. ರೂಪಾ ಅವರ ತತ್ವಭ್ರಷ್ಟ ಧೋರಣೆಯನ್ನು ಕಟುವಾಗಿಟೀಕಿಸಲಾಗಿತ್ತು. ನಮ್ಮ ಕಾರ್ಯಸೂಚಿ ಕಾರ್ಯಗತಗೊಳಿಸಲು ನಾವು ಅವರ ಆಕ್ರೋಶವನ್ನು ಬಳಸಿಕೊಂಡಿದ್ದಕ್ಕೆ ಬಿಜೆಪಿ ಬೆಂಬಲಿಗರು ನಮ್ಮ ವಿರುದ್ಧ ಹರಿಹಾಯ್ದಿದ್ದರು. ತಾವು ಉದಾರ ಚಿಂತಕರು ಎಂದು ಸ್ವಯಂ ಪ್ರತಿಪಾದಿಸುವವರನ್ನೂ ಇದು ಸಿಟ್ಟಿಗೆಬ್ಬಿಸಿರುವುದು ಮಾತ್ರ ಅನಿರೀಕ್ಷಿತವಾಗಿತ್ತು.
‘ಒಂದು ವೇಳೆ ನಾವು ನಿಜವಾಗಿಯೂ ಉದಾರವಾದಿಗಳಾಗಿದ್ದರೆ ಹಿಂದೊಮ್ಮೆ ಬಲಪಂಥೀಯ ವಿಚಾರಧಾರೆಯ ಪ್ರತಿಪಾದಕಿಯ ಲೇಖನ ಪ್ರಕಟಣೆಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಸುದ್ದಿಮನೆಯು ಕೋರ್ಟ್ ಅಥವಾ ಪೊಲೀಸ್ ಸ್ಟೇಷನ್ ಅಲ್ಲ. ಲೇಖಕಿಯ ಈ ಹಿಂದಿನ ಅಚಾತುರ್ಯಗಳನ್ನು ಮನ್ನಿಸಲು ನಮಗೆ ಈಗಲೂ ಸಾಧ್ಯವಾಗಿಲ್ಲ. ನಮ್ಮ ಮನಸ್ಸನ್ನು ಗೆಲ್ಲಲು ಅವರಿಗೂ ಇನ್ನೂ ಆಗಿಲ್ಲ...’
ಇದೆಲ್ಲ ಓದುತ್ತಿದ್ದಂತೆ ನಿಮ್ಮ ಮನದಲ್ಲಿ ಗೊಂದಲ ಮೂಡಿರಬಹುದು. ಉದಾರವಾದದ ವ್ಯಾಖ್ಯಾನದಲ್ಲಿ, ಇತರರಿಗಾಗಿ ನಿಯಮಗಳನ್ನು ರೂಪಿಸದಿರುವುದು ಮತ್ತು ಅವುಗಳನ್ನು ಪಾಲನೆ ಮಾಡಲೇಬೇಕೆಂಬ ಕಡ್ಡಾಯ ಕಂಡು ಬರುವುದಿಲ್ಲ. ಅತ್ಯಂತ ಶುದ್ಧವಾದ ಉದಾರವಾದವು ಬಹುಶಃ ಅರಾಜಕತೆಯಾಗಿರಬಹುದು, ಸರ್ಕಾರವು ಕಾಲಾಂತರದಲ್ಲಿ ಬೇರೆಯೇ ಆದ ವಿಚಾರಧಾರೆಯನ್ನು ಕಂಡುಕೊಂಡಿರಬಹುದು ಎಂದು ಓದುಗರು ಚಿಂತಿಸಿರಬಹುದು.
ನಿಯಮಗಳನ್ನು ರೂಪಿಸಿ, ನೀತಿ ಸಂಹಿತೆ ಅಂತಿಮಗೊಳಿಸಿ, ನಿಮಗೆ ಸ್ವೀಕಾರಾರ್ಹವಾದ ವರ್ತನೆನಿಗದಿಪಡಿಸಿದರೆ ನೀವು ಪ್ರಗತಿಪರರು ಆಗುವುದಿಲ್ಲ. ಸದ್ಗುಣಗಳ ವಿಷಯದಲ್ಲಿ ನೀವು ನನಗಿಂತ ಹೆಚ್ಚು ಸರಿಯಾದ ಧೋರಣೆ ಹೊಂದಿರಬಹುದು ಮತ್ತು ಗೋವಿಗಿಂತ ಹೆಚ್ಚು ಪವಿತ್ರರಾಗಿರಲೂಬಹುದು. ಆದರೆ ಉದಾರ ಧೋರಣೆ ಹೊಂದಿರಲಿಕ್ಕಿಲ್ಲ.
ನಿಮ್ಮಲ್ಲೊಬ್ಬ ಆಯಾತೋಲ್ಲಾ, ಮಠಾಧೀಶ ಅಥವಾ ಶಂಕರಾಚಾರ್ಯ ಇರಬಹುದು. ಇವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವಆಯ್ಕೆ ನಿಮಗೆ ಬಿಟ್ಟದ್ದು. ಹೇಗೆ ವರ್ತಿಸಬೇಕು, ಏನನ್ನು ಹೇಳಬೇಕು, ಯಾರ ಲೇಖನವನ್ನು ಪ್ರಕಟಿಸಬೇಕು ಎಂದು ಇತರರಿಗೆ ಆದೇಶಿಸುವುದೂ ಸರಿಯಲ್ಲ. ಪತ್ರಿಕೋದ್ಯಮದಲ್ಲಿ ನಂಬಿಕೆ ಇರಿಸಿರುವ ನಮ್ಮಂಥವರಿಗೆ ನಿಮ್ಮ ಈ ಬಗೆಯ ಧೋರಣೆಗಳು ಎಳ್ಳಷ್ಟೂ ಇಷ್ಟವಾಗುವುದಿಲ್ಲ. ಪತ್ರಿಕೋದ್ಯಮವು ಸಿನಿಕತನ ಮತ್ತು ರಾಜಕೀಯ ನಾಸ್ತಿಕತೆ ಆಧರಿಸಿದೆ.
ಈ ಬಗೆಯ ಉದಾರವಾದ ಚಿಂತನೆಯ ವಿರುದ್ಧ ಮೂರು ವರ್ಷಗಳ ಹಿಂದೆ ಅಮೆರಿಕದ ವಿದ್ಯಾರ್ಥಿಯೊಬ್ಬ ಗೆಲುವು ಸಾಧಿಸಿದ್ದ. ಕಾಲೇಜ್‌ನ ಶಿಕ್ಷಕರು ವಿಧಿಸಿದ್ದ ಹಲವಾರು ಕಟ್ಟುಪಾಡುಗಳ ವಿರುದ್ಧ ಪ್ರಗತಿಪರ ಚಿಂತನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದ ಘಟನೆ ಅದಾಗಿತ್ತು.
ಮುಕ್ತವಾಗಿ ಮಾತನಾಡುವ ಹಕ್ಕು ನಮ್ಮ ಅನೇಕ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಧಾರಾಳವಾಗಿ ಕಂಡು ಬರುತ್ತದೆ. ಆದರೆ, ಮುಕ್ತವಾಗಿ ಮಾತನಾಡುವವರ ಚಿಂತನೆಗಳನ್ನು ಕೇಳುವ ಸಂಸ್ಕೃತಿ ಬದಲಾಗಬೇಕಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಾಫಿ ಮಳಿಗೆ, ಪಬ್, ವಿಚಾರಗೋಷ್ಠಿ, ಪತ್ರಿಕೆಗಳ ಅಂಕಣ ಬರಹ, ಟ್ವಿಟರ್, ಫೇಸ್‌ಬುಕ್ ಅಥವಾ ಟೀಷರ್ಟ್ ಮೇಲೆಯೂ ತಿರಸ್ಕಾರದ ಹೇಳಿಕೆಗಳನ್ನು ಪ್ರದರ್ಶಿಸಬಹುದು. ನರೇಂದ್ರ ಮೋದಿ ವಿರುದ್ಧ ಇಲ್ಲಿಯೂ ಹಾಗೆ ಮಾಡಬಹುದು. ಫಲಿತಾಂಶ ಒಂದೇ ಬಗೆಯದ್ದಾಗಿರುತ್ತದೆ.
ಅವರ ನೆಲೆ ಇನ್ನಷ್ಟು ಗಟ್ಟಿಯಾಗುತ್ತದೆ. ನಿಮ್ಮ ಕ್ರಿಯೆಗಳು ಅವರು ತಳೆದಿರುವ ನಿಲುವನ್ನು ಪದೇ ಪದೇ ದೃಢಪಡಿಸುತ್ತವೆ. ಚಿಂತನಾ ಸ್ವಾತಂತ್ರ್ಯ ನಿರ್ಬಂಧಿಸುವ ಹಕ್ಕನ್ನು ಬಲಿಪಶು ಮಾಡಲಾಗಿದೆ ಎನ್ನುವ ಮಿಥ್ಯೆಯನ್ನು ಅವರು ನಿಮ್ಮ ನೆರವಿನಿಂದಲೇ ಯಶಸ್ವಿಯಾಗಿ ಸೃಷ್ಟಿಸಿರುತ್ತಾರೆ.
ಧ್ರುವೀಕರಣಗೊಂಡಿರುವ ಚುನಾವಣಾ ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ವಿಭಿನ್ನ ಚಿಂತನೆಗಳಲ್ಲಿ ನಂಬಿಕೆ ಹೊಂದಿರುವವರ ಪರಿವರ್ತನೆಯಿಂದಅಧಿಕಾರದ ಚುಕ್ಕಾಣಿಯು ನಿರ್ದಿಷ್ಟ ಪಕ್ಷದ ಕೈಗೆ ಹೋಗುವುದಿಲ್ಲ. ಎರಡು ಚಿಂತನೆಗಳ ಪೈಕಿ ಮಧ್ಯದಲ್ಲಿ ಇರುವವರ ಬೆಂಬಲದಿಂದಲೇ ಪಕ್ಷವೊಂದು ಅಧಿಕಾರಕ್ಕೆ ಬರುತ್ತದೆ.
ಹೀಗೆ ಮತ ಚಲಾಯಿಸುವವರನ್ನು ನೀವು ಮಿದುಳೇ ಇಲ್ಲದವರು, ಸುಸಂಸ್ಕೃತರಲ್ಲದವರು, ಮುಕ್ತ ಚಿಂತನೆ ನಿರ್ಬಂಧಿಸುವ ಅರಸಿಕರು ಎಂದು ಜರೆಯಬಹುದು. ಇವರೆಲ್ಲ ಹೀಗೆ ತಮ್ಮನ್ನು ಟೀಕಿಸುವವರು ಮತ್ತು ಇನ್ನೊಂದು ಬದಿಯಲ್ಲಿ ಇರುವವರ ಮಧ್ಯೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಹೀಗಾಗಿ ನೀವು ಅವರನ್ನು ಕಳೆದುಕೊಳ್ಳುವಿರಿ.
ಈ ಎಲ್ಲ ಕಾರಣಗಳಿಗೆ, ಯಾರು ತಮ್ಮಷ್ಟಕ್ಕೆ ತಾವೇ ಉದಾರ ಚಿಂತಕರು ಎಂದು ಕರೆಯಿಸಿಕೊಳ್ಳುವವರೋ ಅವರು ಚಿಂತನಾ ಕ್ರಮ ಬದಲಿಸಿಕೊಳ್ಳಬೇಕಾಗಿದೆ. ತಮ್ಮ ಕಲಿಕೆಯ ವ್ಯಾಪ್ತಿ ಹಿಗ್ಗಿಸಿಕೊಂಡು ವಿಶಾಲ ಮನೋಭಾವ ತೋರಬೇಕೇ ಹೊರತು ಸ್ವತಃ ತಾವೇ ಗುಂಡಿ ತೋಡಿಕೊಳ್ಳಬಾರದು. ಗೋಡೆಗಳನ್ನು ನಿರ್ಮಿಸಿ ದ್ವೀಪಗಳು ನಾಶವಾಗುವಂತೆ ಮಾಡಬೇಕು. ಎರಿಕಾ ಕ್ರಿಸ್ತಾಕಿಸ್ ಹೇಳಿರುವಂತೆ, ಇನ್ನೊಬ್ಬರು ಹೇಳುವ ಮಾತುಗಳನ್ನು ಸಹನೆಯಿಂದ ಕೇಳುವ ಸಂಸ್ಕೃತಿಯನ್ನು ಬೆಳೆಸುವ, ರೂಢಿಸಿಕೊಳ್ಳುವ ಅಗತ್ಯ ಈಗ ಹೆಚ್ಚಿದೆ.
ಲೇಖಕ: ‘ದಿ ಪ್ರಿಂಟ್’ನ ಸಂಸ್ಥಾಪಕಮತ್ತು ಪ್ರಧಾನ ಸಂಪಾದಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.