ADVERTISEMENT

ಅಮೃತೋತ್ಸವದಲ್ಲಿ ಆತ್ಮಾವಲೋಕನವಿರಲಿ

ನಾಗತಿಹಳ್ಳಿ ಚಂದ್ರಶೇಖರ
Published 21 ಫೆಬ್ರುವರಿ 2015, 19:30 IST
Last Updated 21 ಫೆಬ್ರುವರಿ 2015, 19:30 IST
ಅಮೃತೋತ್ಸವದಲ್ಲಿ ಆತ್ಮಾವಲೋಕನವಿರಲಿ
ಅಮೃತೋತ್ಸವದಲ್ಲಿ ಆತ್ಮಾವಲೋಕನವಿರಲಿ   

ಅತ್ತ ನಾನು ಓದಿದ ಮೈಸೂರು ವಿಶ್ವವಿದ್ಯಾನಿಲಯವು, ಇತ್ತ ಬೆಂಗಳೂರಿನ ಕೇಂದ್ರ ಗ್ರಂಥಾಲಯದ ಪಾರಂಪರಿಕ ಕಟ್ಟಡವು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮದಲ್ಲಿ ಮುಳುಗಿರುವಾಗ ನಡುವಿನ ಮಂಡ್ಯವು ಅಮೃತೋತ್ಸವದ ಸವಿ ಉಣ್ಣುತ್ತಿದೆ. ಮೈಸೂರಿನಿಂದ ಮಂಡ್ಯ ಜಿಲ್ಲೆಯು ಸ್ವತಂತ್ರಪೂರ್ವದಲ್ಲೇ ಬೇರ್ಪಟ್ಟಿತು. ಜಿಲ್ಲೆಗಳು ಬೇರ್ಪಡುವುದು ತೀರಾ ಸಹಜವಾದೊಂದು ಆಂತರಿಕ ವ್ಯವಸ್ಥೆ. ಬೇರ್ಪಟ್ಟ ಪ್ರಾಂತ್ಯವು ತನ್ನದೇ ಆದ ಜನಪದ ನೆನಪು, ಆಧುನಿಕ ಕನಸು, ಆಡುನುಡಿ, ಕೃಷಿ, ಕೌಶಲ, ಹಣಕಾಸು ಇತ್ಯಾದಿಗಳಿಂದ ಅನನ್ಯತೆ ಪಡೆದುಕೊಳ್ಳುತ್ತಾ ಒಂದು ಟ್ಯಾಗ್‌ಲೈನನ್ನೋ, ಠಸ್ಸೆಯನ್ನೋ ಗುದ್ದಿಸಿಕೊಳ್ಳುತ್ತದೆ. ಮಂಡ್ಯಕ್ಕೂ ಇದು ಒದಗಿಬಂತು. ಇದಕ್ಕೆ ಉದಾಹರಣೆ ಅನೇಕ ಅರ್ಥಗಳನ್ನು ಧ್ವನಿಸುವ ‘ಇಂಡಿಯಾದೊಳಗೊಂದು ಮಂಡ್ಯ’ ಎಂಬ ಮಾತು. ನೀರಿನ ಅರೆಗೊಡ ಹೊತ್ತ ಐವರು ಅಕ್ಕಂದಿರಾದ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣಗಳೂ, ಖಾಲಿ ಕೊಡ ಹೊತ್ತ ಇಬ್ಬರು ತಂಗಿಯರಾದ ಕೃಷ್ಣರಾಜಪೇಟೆ ಮತ್ತು ನಾಗಮಂಗಲಗಳೂ ಒಟ್ಟಾರೆ ಸಪ್ತಸೋದರಿಯರು ಜೊತೆಯಾಗಿ ೧೯೩೯ರಲ್ಲಿ ಮಂಡ್ಯ ಜಿಲ್ಲೆಯಾದರು. ಎಲ್ಲ ತಾಲ್ಲೂಕುಗಳಲ್ಲಿಯೂ ಅಷ್ಟಿಷ್ಟು ಪ್ರಗತಿ ಆಗಿದೆ. ಆದರೆ ಎಷ್ಟು ಆಗಬಹುದಿತ್ತೋ ಅಷ್ಟು ಆಗಿಲ್ಲ. ನಮ್ಮ ಜನನಾಯಕರು ಇನ್ನಷ್ಟು ಮುತುವರ್ಜಿಯಿಂದ ಕೆಲಸ ಮಾಡಿದ್ದರೆ ಜಿಲ್ಲೆಯ ಶ್ರೀಸಾಮಾನ್ಯ ಈಗಿರುವುದಕ್ಕಿಂತ ನೆಮ್ಮದಿಯಿಂದಿರುತ್ತಿದ್ದ.

ಈ ಅರೆಕೊರೆಗಳ ನಡುವೆಯೂ ಜಿಲ್ಲೆಯ ಜನತೆಗೆ ಅಮೃತೋತ್ಸವದ ಸಂತಸ. ಸೆಮಿನಾರು, ಕೃತಿ ಬಿಡುಗಡೆ, ಹಾಡು, ನೃತ್ಯ ಮುಂತಾದ ನಾನಾ ರಂಜನೆಗಳ ಈ ಹೊತ್ತಿನಲ್ಲಿ ಚಿಂತನೆಯ ಮಾತುಗಳು ಅಷ್ಟಾಗಿ ರುಚಿಸಲಾರವು. ಹಾಗೆಂದು ಹೇಳಬೇಕಾದ್ದನ್ನು ಮರೆಮಾಚಿದರೆ ಆತ್ಮವಂಚನೆಯಾಗುತ್ತದೆ. ಇದು ಯಾರತ್ತಲೋ ಬೆರಳು ತೋರುವ ಕೆಲಸವಲ್ಲ. ರಾಜಕಾರಣಿ, ಅಧಿಕಾರಿ ಮತ್ತು ಜನತೆ ಮೂವರೂ ಹೊಣೆಯರಿತು ನಡೆದುಕೊಳ್ಳಬೇಕಾದ್ದು. ಇದು ಮಂಡ್ಯ ಜಿಲ್ಲೆಯನ್ನು ಸಾಂಕೇತಿಕವಾಗಿರಿಸಿಕೊಂಡು ಎಲ್ಲ ಜಿಲ್ಲೆಗಳಿಗೂ ಅನ್ವಯಿಸಿ ಹೇಳಬಹುದಾದ್ದು. ಎಲ್ಲರೂ ಕೇಳಿಕೊಳ್ಳಬೇಕಾದ ಏಕೈಕ ಪ್ರಶ್ನೆ ಏನೆಂದರೆ ಸರ್ಕಾರ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡುವ ಹಣ ಹಳ್ಳಿಗಳನ್ನು ತಲುಪುವುದಿಲ್ಲ ಏಕೆ ? ರಾಜಕಾರಣಿಗಳ ಶಿಫಾರಸ್ಸಿನ ನೆಪ ಬಳಸಿ ನುಂಗುವ ಭ್ರಷ್ಟ ಅಧಿಕಾರಿಗಳು ; ನಮ್ಮ ಮಾತಿಗೆ ಕೇರೇ ಮಾಡ್ತಿಲ್ಲ ಎಂದು ಸೆಟಗೊಳ್ಳುತ್ತಾ ತಮ್ಮ ಭಟ್ಟಂಗಿಗಳನ್ನು ಛೂ ಬಿಟ್ಟು ಸರಕಾರಿ ಕಚೇರಿಗಳಲ್ಲಿ ಕಮೀಶನ್ ಏಜೆನ್ಸಿ ನಡೆಸುವ ರಾಜಕಾರಣಿಗಳು, ತನ್ನ ಸ್ವಂತ ಕೆಲಸವನ್ನು ಹೇಗಾದರೂ ಮಾಡಿಸಿಕೊಂಡರಾಯಿತು, ಸಾರ್ವಜನಿಕ ಕೆಲಸ ಹಾಳುಬಿದ್ದುಹೋಗಲಿ ಎಂದು ಚಿಂತಿಸುವ ಜನತೆ ಈ ಮೂವರೂ ಮೇಲಿನ ಪ್ರಶ್ನೆಗೆ ಉತ್ತರವೇನೆಂದು ಬಲ್ಲರು ಮತ್ತು ಈ ಮೂವರೂ ಆ ಪಾಪದಲ್ಲಿ ಸಮಾನ ಪಾಲುದಾರರು. ಯಾವನಾದರೂ ಆದರ್ಶಮಯ ಕ್ರಿಯಾಶೀಲ ವ್ಯಕ್ತಿ, ಪಕ್ಷಾತೀತವಾಗಿ ಹಳ್ಳಿಗಳಲ್ಲಿ ಕೆಲಸ ಮಾಡಲು ಹೊರಟರೆ ಇರಗೊಡದಂಥ ಸ್ಥಿತಿ ಇದೆ. ರೈತರು ರಸಗೊಬ್ಬರ ಕೊಳ್ಳುವ ಸ್ಥಿತಿಯಲ್ಲಿಲ್ಲ. ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ಬಾಕಿ ಉಳಿಸಿಕೊಂಡಿವೆ. ಸಣ್ಣ ರೈತರು, ದಲಿತರು, ಕೃಷಿಕಾರ್ಮಿಕರು ನೆಲೆ ತಪ್ಪಿದ್ದಾರೆ. ಹೆಣ್ಣು ಮಕ್ಕಳು ಗಾರ್ಮೆಂಟ್ ಕೂಲಿಗಳಾಗಿದ್ದಾರೆ. ಸಮುದ್ರ ಸೇರುವ ವ್ಯರ್ಥ ನೀರನ್ನುಳಿಸಿ ಬರಪೀಡಿತ ಜಾಗಗಳನ್ನು ಹಸಿರಾಗಿಸುವ ಯಾವುದೇ ಯೋಜನೆ ಇಲ್ಲ. ಜಿಲ್ಲೆ ರಚನೆಯಾದ 50ನೇ ವರ್ಷಕ್ಕೆ ಸುವರ್ಣ ಮಹೋತ್ಸವ, ಈಗ 75ನೇ ವರ್ಷಕ್ಕೆ ಅಮೃತ ಮಹೋತ್ಸವ, 2040ಕ್ಕೆ ಶತಮಾನೋತ್ಸವ ಆಚರಿಸಲಿದ್ದೇವೆ. ಆದರೆ ದರ್ಶನ ಮತ್ತು ಇಚ್ಛಾಶಕ್ತಿಯುಳ್ಳ ನಾಯಕತ್ವ ಲಭಿಸದೆ ಇಲ್ಲಿ ಮಹತ್ತರವಾದ ಬದಲಾವಣೆ ಅಸಾಧ್ಯ. ಜಿಲ್ಲೆಯ ಅಂದಾಜು ಜನಸಂಖ್ಯೆ 19ಲಕ್ಷ. ಅದರಲ್ಲಿ 15 ಲಕ್ಷ ಹಳ್ಳಿಗಳಲ್ಲೇ ವಾಸ ಮಾಡುತ್ತಿದ್ದಾರೆ. ಕೆರೆಗಳ ಹೂಳೆತ್ತದೆ, ನೀರು ಸಂಗ್ರಹವಾಗದೆ ಅಂತರ್ಜಲ ಬತ್ತಿಹೋಗಿದೆ. ಈ ಬೇಸಿಗೆಯಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿನ ಹಾಹಾಕಾರ ಮುಗಿಲು ಮುಟ್ಟಲಿದೆ. ವಿದ್ಯುತ್ ಮತ್ತು ನೀರನ್ನು ಕೊಟ್ಟು ಕ್ರಿಯಾಶೀಲರನ್ನಾಗಿ ಮಾಡದೆ ಅಕ್ಕಿ ಕೊಟ್ಟು ಆಲಸಿಗಳನ್ನಾಗಿ ಮಾಡುತ್ತಿರುವುದು ಸರ್ಕಾರದ ಅಪಾಯಕಾರಿ ಅಗ್ಗದ ಗಿಮಿಕ್ ಆಗಿದೆ.

ಸ್ಫೂರ್ತಿಗಾಗಿ, ಅಭಿಮಾನ ತಾಳುವುದಕ್ಕಾಗಿ ಈ ಅಮೃತೋತ್ಸವದ ನೆಪದಲ್ಲಿ ಚರಿತ್ರೆಯತ್ತ ನೋಡಿದರೆ ಎದೆ ಉಬ್ಬುತ್ತದೆ. ಪುರಾಣಗಳನ್ನು ಉತ್ಪ್ರೇಕ್ಷೆ ಎಂದುಕೊಂಡರೂ ಚರಿತ್ರೆಯ ಗುರುತುಗಳು ಸತ್ಯ ಹೇಳುತ್ತವೆ. ನಿಜವಾದ ಅರ್ಥದಲ್ಲಿ ರಾಜರೂ ಋಷಿಯೂ ಆಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅಂಥ ಒಂದು ಹೆಗ್ಗುರುತು. ನಾಡಿಗೆ ಬೇಕಾದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಗತಿಯ ದಾಪುಹೆಜ್ಜೆಗಳು ನಾಲ್ವಡಿಯವರ ಆಳ್ವಿಕೆಯಲ್ಲಿ ಅಳಿಸಲಾರದಂತಿವೆ. ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅವರಂಥ ದಿವಾನರ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ನಾಡನ್ನು ಕಟ್ಟಿದರು. ಈ ನಾಡು ಎಲ್ಲರಿಗೂ ಸೇರಿದ್ದು, ಎಲ್ಲರೂ ಇಲ್ಲಿ ಸೌಹಾರ್ದಯುತವಾಗಿ ಬಾಳಬೇಕು ಎನ್ನುತ್ತಿದ್ದರು. ದೇವದಾಸಿ ಪದ್ಧತಿ ನಿರ್ಮೂಲನ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಲಂಬಾಣಿ, ಸೋಲಿಗ, ಜೇನುಕುರುಬ ಮುಂತಾದ ಬುಡಕಟ್ಟು ಜನರಿಗೆ ಶಾಲೆ, ಅಸ್ಪೃಶ್ಯರಿಗೆ ಅರಮನೆ ಪ್ರವೇಶ, ವಯಸ್ಕರಿಗೆ ಸಾಕ್ಷರತಾ ಕೇಂದ್ರ, ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ, ರೇಷ್ಮೆ ಉದ್ಯಮದ ಶಾಲೆಗಳು, ಏಷ್ಯದಲ್ಲೇ ಮೊದಲ ಜಲವಿದ್ಯುತ್ ಯೋಜನೆಗಳು, ಸಕ್ಕರೆ ಕಾರ್ಖಾನೆ, ಪೇಪರ್ ಮಿಲ್, ರೈಲು ಮಾರ್ಗಗಳು, ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ದೊರೆಯ ಸಾಧನೆಗಳು ಅಸಂಖ್ಯ. ಇದೆಲ್ಲಕಿಂತ ಮುಖ್ಯವಾಗಿ ಕೇವಲ ಇಪ್ಪತ್ತು ವರ್ಷದಲ್ಲಿ (೧೯೧೧–-೧೯೩೧), ಎರಡು ಕೋಟಿ ನಲವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಕೃಷ್ಣರಾಜಸಾಗರ ಜಲಾಶಯ. ಅರಮನೆಯ ಆಭರಣಗಳನ್ನು ಮಾರಿ ಹಣ ತಂದು ಜಲಾಶಯ ಕಟ್ಟಿದ ಭೂಪ. ತೀರ್ಥಹಳ್ಳಿ ಬಳಿಯ ಹಳೆಯ ಮನೆಯೊಂದರಲ್ಲಿ ನಾನು ಚಿತ್ರೀಕರಣಕ್ಕೆ ಹೋಗಿದ್ದಾಗ ಆ ಮನೆಯ ಯಜಮಾನರು ಮೈಸೂರು ಅರಮನೆಗೆ ಡ್ಯಾಂ ಕಟ್ಟಲು ಸಾಲಕೊಟ್ಟ ಹಳೆಯ ದಾಖಲೆಗಳನ್ನು ತೋರಿಸಿದ್ದು ಈಗಲೂ ನೆನಪಿನಲ್ಲಿದೆ. ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಾದ ಈ ಯೋಜನೆಯ ಪ್ರಮುಖ ಫಲಾನುಭವಿ ಮಂಡ್ಯ ಜಿಲ್ಲೆಯ ರೈತ. ನಾಲ್ವಡಿಯವರನ್ನು ಸಾಮ್ರಾಟ್ ಅಶೋಕ ಚಕ್ರವರ್ತಿಗೆ ಹೋಲಿಸಿರುವುದರಲ್ಲಿ ಉತ್ಪ್ರೇಕ್ಷೆ ಇಲ್ಲ.

ಅಮೃತತ್ವದ ಸಂಕೇತವಾದ ಇಂಥ ಕೆಲವರನ್ನು ನೆನೆಯುವುದು ಈ ತಲೆಮಾರಿನ ಜವಾಬ್ದಾರಿಯಾಗಿದೆ. ಸಾಂಕೇತಿಕವಾದ ಕೆಲವು ಹೆಸರುಗಳನ್ನಷ್ಟೇ ನಾನಿಲ್ಲಿ ಹೇಳಬಯಸುತ್ತೇನೆ. ಆ ಕಾಲಕ್ಕೆ ವಿಧವಾ ವಿವಾಹ ಮಾಡಿಕೊಂಡ ಕ್ರಾಂತಿಕಾರಿ ಎಚ್.ಕೆ. ವೀರಣ್ಣಗೌಡರು, ಸ್ವತಂತ್ರ ಚಳವಳಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಿ. ಎಸ್.ಮಲ್ಲಯ್ಯ, ದೇಶಹಳ್ಳಿ ಜಿ. ನಾರಾಯಣ, ಜಿ. ಮಾದೇಗೌಡ, ಕೆ. ವಿ. ಶಂಕರೇಗೌಡ, ಎಸ್. ಎಂ. ಕೃಷ್ಣ, ಎಚ್.ಡಿ ಚೌಡಯ್ಯ ಜಿಲ್ಲೆಗೆ ಸೀಮಿತವಾಗದೆ ಎಲ್ಲೆಡೆ ಶಿಕ್ಷಣ ದಾಸೋಹ ನಡೆಸಿದ ಆದಿಚುಂಚನಗಿರಿ ಮಠ ಮತ್ತು ಜನಮುಖಿ ಚಳವಳಿಗಳಲ್ಲಿ ಪಾಲ್ಗೊಂಡ ಅನೇಕರು. ಇದು ಸಮಾಜೋಶಿಕ್ಷಣಕ್ಕೆ ಸಂಬಂಧಿಸಿದ್ದಾದರೆ ಜನಪದ, ಸೃಜನಶೀಲ ಬರವಣಿಗೆ, ಸಂಶೋಧನೆಯ ಕ್ಷೇತ್ರಗಳ ಪಟ್ಟಿ ಬಹಳ ವಿಸ್ತಾರವಾದುದು. ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ಅನಂತರ ಎಲ್ಲೆಲ್ಲೋ ಚೆದುರಿ ಹೋಗಿರಬಹುದಾದ, ಇಡೀ ನಾಡಿಗೆ ಸಂಬಂಧಪಡುವ ಲೇಖಕರಿವರು. ಶೇಕ್ಸ್‌ಪಿಯರ್‌ನನ್ನು ಅನುವಾದಿಸಿದ ದೇಶಹಳ್ಳಿ ಎಂ. ಎಲ್. ಶ್ರೀಕಂಠೇಗೌಡ, ಶಾಸನ ಮತ್ತು ಹಳೆನಾಣ್ಯಗಳ ಸಂಗ್ರಹಕಾರ, ‘ಕರ್ನಾಟಕ ಕವಿ ಚರಿತೆ’ ಸಂಪುಟಗಳ ಕರ್ತೃ ಆರ್. ನರಸಿಂಹಾಚಾರ್, ‘ಗೋವಿನ ಹಾಡು’ ಬರೆದ ಅನಾಮಿಕ ಕವಿ- ಈ ಮೂವರನ್ನು ಮದ್ದೂರು ತಾಲ್ಲೂಕಿನಿಂದಲೂ; ಚಂಪು, ಗದ್ಯ, ಪದ್ಯ, ನಾಟಕ, ನಿಘಂಟು ಇತ್ಯಾದಿ ರಚಿಸಿದ ಎಸ್. ಜಿ. ನರಸಿಂಹಾಚಾರ್, ಇಂದಿನ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಶ್ರೀರಂಗಪಟ್ಟಣ ತಾಲ್ಲೂಕಿನಿಂದಲೂ; ಷಡಕ್ಷರದೇವ, ಪಂಡಿತ್ ಮ.ಮಲ್ಲಪ್ಪ, ಕೆ.ನ. ಶಿವತೀರ್ಥನ್ ಅವರನ್ನು ಮಳವಳ್ಳಿ ತಾಲ್ಲೂಕಿನಿಂದಲೂ, ನಾಟಕಕಾರ ಕೆ. ವಿ. ಶಂಕರಗೌಡ, ಕತೆಗಾರ ಡಾ. ಬೆಸಗರಹಳ್ಳಿ ರಾಮಣ್ಣ ಅವರನ್ನು ಮಂಡ್ಯ ತಾಲ್ಲೂಕಿನಿಂದಲೂ, ಗೋಕುಲ ನಿರ್ಗಮನದ ಕವಿ ಪು.ತಿ.ನ ಮತ್ತು ಜಾನಪದ ತಜ್ಞ ಕ್ಯಾತನಹಳ್ಳಿ ರಾಮಣ್ಣ ಅವರನ್ನು ಪಾಂಡವಪುರ ತಾಲ್ಲೂಕಿನಿಂದಲೂ; ‘ಮೈಸೂರು ಮಲ್ಲಿಗೆ’ಯ ಕವಿ ಕೆ.ಎಸ್. ನರಸಿಂಹಸ್ವಾಮಿ, ವೈಚಾರಿಕ ಬರಹಗಾರ ಎ. ಎನ್. ಮೂರ್ತಿರಾವ್, ಕವಿ ಬಿ. ಸಿ. ರಾಮಚಂದ್ರ ಶರ್ಮ ಅವರನ್ನು ಕೃಷ್ಣರಾಜ ಪೇಟೆ ತಾಲ್ಲೂಕಿನಿಂದಲೂ; ಕನ್ನಡಕ್ಕೆ ಬಂಗಾಳಿ ಸಾಹಿತ್ಯ ಕೃತಿಗಳನ್ನು ಅನುವಾದಿಸಿದ ಬಿ. ವೆಂಕಟಾರ್ಯ, ‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದ ಬಿಎಂಶ್ರೀ, ‘ಜಾನಪದ ಲೋಕ’ದ ಪಿತಾಮಹಎಚ್.ಎಲ್. ನಾಗೇಗೌಡ ಇವರನ್ನು ನಾಗಮಂಗಲ ತಾಲ್ಲೂಕಿನಿಂದಲೂ ಪ್ರಾತಿನಿಧಿಕವಾಗಿ ಹೆಸರಿಸಬಹುದು. ಹೆಳವನಕಟ್ಟೆ ಗಿರಿಯಮ್ಮನಿಂದ ಹೊಸಕಾಲದ ವಾಣಿ, ತ್ರಿವೇಣಿಯವರೆಗೆ ಹಲವು ಲೇಖಕಿಯರು ಮಂಡ್ಯ ಜಿಲ್ಲೆಯವರು.

ಜಿಲ್ಲೆಯೊಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುವುದು ಸಂತಸದಾಯಕವೇ. ಉಸ್ತುವಾರಿ ಸಚಿವ ಅಂಬರೀಷ್ ಅವರ ಮಾರ್ಗದರ್ಶನದಲ್ಲಿ ಎಲ್ಲ ಜೋರು ನಡೆದಿದೆ. ಜಿಲ್ಲಾಧಿಕಾರಿ ಅಜಯ್ ನಾಗಭೂಷಣರ ನೇತೃತ್ವದಲ್ಲಿ ಅಧಿಕಾರಿವರ್ಗ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಪ್ರೋಟೋಕಾಲ್ ಕಾರಣವಿರಬಹುದು; ಹನ್ನೆರಡು ಪುಟಗಳ ಆಹ್ವಾನ ಪತ್ರಿಕೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ರಾಜಕಾರಣಿಗಳ ಹೆಸರಿದೆ. ಇದು ಜನ ಸಾಮಾನ್ಯರು ಹತ್ತಿರ ಸುಳಿಯಲು ಅಂಜಿಕೆ ಪಡುವಂತಿದೆ. ಒಂದು ಕಾರ್ಯಕ್ರಮವನ್ನು ಆಯೋಜಿಸುವುದರ ಹಿಂದೆ ಅದರದೇ ಆದ ಕಷ್ಟಗಳಿವೆ ಎಂದು ಬಲ್ಲೆ. ಆದರೂ ಈ ಅಮೃತ ಮಹೋತ್ಸವವನ್ನು ಆಚರಿಸಲು ಹಲವು ಮಾರ್ಗಗಳಿದ್ದುವು. ಮಂಡ್ಯ ಜಿಲ್ಲೆಯಲ್ಲಿ ೩೧ ಹೋಬಳಿಗಳೂ, ೧೩೬೯ ಹಳ್ಳಿಗಳೂ ಇವೆ. ಕನಿಷ್ಟ ಪ್ರತಿ ತಾಲ್ಲೂಕಿನಲ್ಲೂ ಜನ ಸಂಪರ್ಕ ಸಭೆ ಏರ್ಪಡಿಸಿ ಸಾಮಾನ್ಯರು ತಮ್ಮ ಕಷ್ಟಗಳನ್ನು ನಿವೇದಿಸಿಕೊಳ್ಳಲು ಅವಕಾಶ ನೀಡಬೇಕಿತ್ತು. ಆ ಸಭೆಯಲ್ಲಿ ಜನನಾಯಕರು, ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿರಬೇಕಿತ್ತು. ವೈಯಕ್ತಿಕ ಮತ್ತು ಸಾಮಾಜಿಕ ಕುಂದುಕೊರತೆಗಳನ್ನು ಕ್ರೋಢೀಕರಿಸಿ ಅಂತಿಮವಾಗಿ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಅವುಗಳಿಗೆ ಪರಿಹಾರವೇನು ಎಂದು ಗಂಭೀರವಾಗಿ ಚರ್ಚಿಸಬೇಕಿತ್ತು. ಅದನ್ನು ಪ್ರಕಟಿಸಿ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕಿತ್ತು. ಎಲ್ಲರನ್ನೂ ಒಳಗೊಂಡ ಈ ಪ್ರಕ್ರಿಯೆ ಒಂದೆರಡು ತಿಂಗಳ ಅವಧಿಯಲ್ಲಿ ವಿಸ್ತೃತವಾಗಿ ನಡೆಯಬಹುದಿತ್ತು. ಆಗ ಅಮೃತೋತ್ಸವ ಸಾರ್ಥಕವಾಗು ತ್ತಿತ್ತೇನೋ. ಉಪಚಾರಕ್ಕೆ ಉತ್ಸವ ನಡೆಸಿದರೆ ಭಾವನಾತ್ಮಕ ಸಂತೋಷದಾಚೆಗೆ ಏನೂ ಶೇಷ ಉಳಿಯಲಾರದು. ಅಮೃತೋತ್ಸವ ಎಂದರೆ ಆತ್ಮಾವಲೋಕನಕ್ಕೆ ಅತೀತವಾಗಿರಬೇಕೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.