ಅದನ್ನು ಬರಿಯ ಆಕಸ್ಮಿಕ ಎನ್ನಲಾಗದು. ನಮಗೆಲ್ಲಾ ಒಳ್ಳೆಯ ಗುರುಗಳು ದೊರಕಿದ್ದರು. ಯಾರಿಗಾದರೂ ಬೆರಗು ಮತ್ತು ಅಸೂಯೆ ಮೂಡಿಸುವಂಥ ಗುರುಗಳು. ಒಬ್ಬರಿಗಿಂತ ಒಬ್ಬರು ಭಿನ್ನವಾಗಿದ್ದುದು ಮಾತ್ರವಲ್ಲ; ಆಳವಾದ ಓದು ಮತ್ತು ಪ್ರತಿಭೆಯಿಂದ ಮುಪ್ಪುರಿಗೊಂಡಿದ್ದರು. ಸೃಜನಶೀಲ ಅಹಂಕಾರದಲ್ಲಿ ತುಸು ಬೀಗುತ್ತಾ, ಪ್ರಾಚೀನ ಸಾಹಿತ್ಯವನ್ನು ಉಪೇಕ್ಷೆಯಿಂದ ನೋಡುತ್ತಿದ್ದ ನನ್ನಂಥವರಿಗೆ ಹಳಗನ್ನಡ, ಛಂದಸ್ಸು ಮತ್ತು ಪ್ರಾಚೀನ ಕಾವ್ಯವನ್ನು ಆಕರ್ಷಕವಾಗಿ ಹೇಳಿಕೊಡುತ್ತಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅದು ಸುವರ್ಣ ಕಾಲ. ಬೆಂಗಳೂರಿನಿಂದ ದೂರವಾದ್ದರಿಂದ ಅಧ್ಯಾಪಕರು ವಿಧಾನಸೌಧ, ಸಚಿವಾಲಯ ಮತ್ತು ಮಂತ್ರಿಗಳ ಮನೆ ಸುತ್ತ ಗಸ್ತು ಹೊಡೆದು ಅಕಾಡೆಮಿ, ಪ್ರಾಧಿಕಾರ, ಎಂಎಲ್‌ಸಿಗಿರಿ ಇತ್ಯಾದಿಗಳ ಬೇಟೆಯಲ್ಲಿ ಕಾಲಹರಣ ಮಾಡದೆ ಸಕಾಲದಲ್ಲಿ ಸಿಲೆಬಸ್ಸು ಮುಗಿಸುತ್ತಿದ್ದರು. ತರಗತಿ ಕೋಣೆ, ಗ್ರಂಥಾಲಯ ಮತ್ತು ತಮ್ಮ ಕೊಠಡಿಗಳಲ್ಲಿ ದಿನವಿಡೀ ಚರ್ಚೆಗೆ ಸಿಗುತ್ತಿದ್ದರು. ಈಗಲೂ ನನ್ನ ಮನೋರಂಗದಲ್ಲಿ ಅವರ ಪ್ರವಚನ ಕಲಾಭಿವ್ಯಕ್ತಿಗಳು ಸುಸ್ಪಷ್ಟವಾಗಿ ಮುದ್ರೆಯೊತ್ತಿವೆ. ಈ ಮಾತುಗಳನ್ನು ಗುರುಪೂರ್ಣಿಮೆಯ ಔಪಚಾರಿಕ ಆಚರಣೆಯ ಭಾವೋನ್ಮಾದದಲ್ಲಿ ಆಡುತ್ತಿಲ್ಲ. ಅವರು ಕಟ್ಟಿಕೊಟ್ಟ ಬುತ್ತಿಯನ್ನೇ ನಾವೆಲ್ಲ ಇನ್ನೂ ಉಣ್ಣುತ್ತಿದ್ದೇವೆ. ನಮ್ಮ ಗಂಗೋತ್ರಿ ಗುರುಗಳೆಲ್ಲ ಕತ್ತಲೆ ಕಳೆದು ಅರಿವನ್ನು ವಿಸ್ತರಿಸಿದ ಸಾಲುದೀಪಗಳಂತೆ ಕಾಣುತ್ತಾರೆ. ಈಗ ನೆನಪಾಗುತ್ತಿರುವುದು ಡಾ. ಹೊನ್ನಾಳಿ ತಿಪ್ಪೇರುದ್ರಸ್ವಾಮಿ ಎಂಬ ಒಂದು ಹಣತೆ.
ಎಂಬತ್ನಾಲ್ಕರಲ್ಲಿ ಹಾಮಾನಾ ಅವರು ಗುಲಬರ್ಗಾ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗಿ ಹೋದಾಗ ತಿಪ್ಪೇರುದ್ರಸ್ವಾಮಿಯವರು ಕನ್ನಡ ಅಧ್ಯಯನ ಸಂಸ್ಥೆಗೆ ನಿರ್ದೇಶಕರಾಗಿ ಬಂದರು. ಹಾಮಾನಾ ನಿರ್ಗಮನದ ಬೇಸರವನ್ನು ತಿಪ್ಪೇರುದ್ರಸ್ವಾಮಿಯವರ ಆಗಮನವು ನೀಗಿತು. ಪ್ರಥಮ ರ್‍ಯಾಂಕ್ ಸರಮಾಲೆಯ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಲೇಖಕರಾಗಿ ಆಗಲೇ ಪರಿಚಿತರಾಗಿದ್ದ ಅವರು ಶರಣರ ಅನುಭಾವ ಸಾಹಿತ್ಯ ಎಂಬ ಪ್ರೌಢಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಗಳಿಸಿದ್ದರು. ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿಯನ್ನೂ ಪಡೆದಿದ್ದರು. ಅವರ ಪ್ರಸಿದ್ಧ ಕಾದಂಬರಿಗಳಾದ ಪರಿಪೂರ್ಣದೆಡೆಗೆ, ಕದಳಿಯ ಕರ್ಪೂರ ; ನಾಟಕಗಳಾದ ‘ನಿಜಗುಣ ಶಿವಯೋಗಿ’, ‘ಮೋಳಿಗೆಯ ಮಾರಯ್ಯ’ ಪ್ರಕಟವಾಗಿದ್ದವು.
The Virashaiva Saints: A Study; Soul unto the Sublime; The light that never was ಎಂಬ ಶೀರ್ಷಿಕೆಯಡಿಯಲ್ಲಿ ಅವರ ಕೃತಿಗಳು ಇಂಗ್ಲಿಷ್‌ಗೂ ಅನುವಾದಗೊಂಡಿದ್ದವು. ಲೇಖಕರಾಗಿ ಅವರು ಎಷ್ಟು ದೊಡ್ಡವರೋ ಅಧ್ಯಾಪಕರಾಗಿಯೂ ಅಷ್ಟೇ ದೊಡ್ಡವರು. ಹಾಸನದ ಸರ್ಕಾರಿ ಕಾಲೇಜು, ಮೈಸೂರಿನ ಮಹಾರಾಣಿ ಕಾಲೇಜು, ಬಿ.ಆರ್.ಪ್ರಾಜೆಕ್ಟ್‌ನ ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪನ ಮುಗಿಸಿ ನಮ್ಮ ಕೇಂದ್ರಕ್ಕೆ ಬರಲಿದ್ದರು. ನಾವೆಲ್ಲಾ ಕುತೂಹಲದಿಂದ ಎದುರು ನೋಡುತ್ತಿದ್ದೆವು. ಕುವೆಂಪು, ಡಿ.ಎಲ್.ಎನ್. ಮತ್ತು ಎಸ್.ವಿ. ಪರಮೇಶ್ವರ ಭಟ್ಟರ ಶಿಷ್ಯರಾಗಿದ್ದ ತಿಪ್ಪೇರುದ್ರಸ್ವಾಮಿಯವರಿಗೆ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯವಿತ್ತು. ಮೈಸೂರು ಅವರ ಪಾಲಿನ ತಪೋರಂಗವಾಗಿತ್ತು.
ಸಾಹಿತಿಯೊಬ್ಬ ಅಧ್ಯಾಪಕನಾಗುವುದು ಕಬ್ಬು ತಿನ್ನಲು ಕೂಲಿ ಕೊಟ್ಟಂತೆ ಎಂಬ ತೀನಂಶ್ರೀ ಮಾತನ್ನು ಒಪ್ಪಿ ಅಳವಡಿಸಿಕೊಂಡು ಅಧ್ಯಾಪಕ ವೃತ್ತಿಯಲ್ಲಿ ಅಪಾರ ಆನಂದವನ್ನು ಕಂಡುಕೊಂಡಿದ್ದರು. ಅವರೊಳಗೆ ಕವಿ, ವಿಮರ್ಶಕ, ಕಾದಂಬರಿಕಾರ, ನಾಟಕಕಾರ, ಅಧ್ಯಾಪಕ, ಆಡಳಿತಗಾರ, ಭಾಷಣಕಾರ ಎಲ್ಲರೂ ಒಟ್ಟಿಗೇ ಇದ್ದರು. ವಸ್ತುವೈವಿಧ್ಯವುಳ್ಳ ಇಪ್ಪತ್ತೇಳು ವಿಮರ್ಶಾಕೃತಿಗಳು, ಹನ್ನೊಂದು ಕಾದಂಬರಿಗಳು, ನಾಲ್ಕು ನಾಟಕಗಳು, ಎರಡು ಕಾವ್ಯಸಂಗ್ರಹಗಳು, ಆರು ಜೀವನ ಚರಿತ್ರೆಗಳು, ನಾಲ್ಕು ಶಿಶು ಸಾಹಿತ್ಯಕೃತಿಗಳು, ಐದು ಗ್ರಂಥ ಸಂಪಾದನೆ, ಹದಿನಾರು ಸಂಪಾದಿತ ಕೃತಿಗಳು, ಐದು ಉದ್ಗ್ರಂಥಗಳು, ಒಂದು ಬಾನುಲಿ ಭಾಷಣ ಸಂಗ್ರಹ... ಈ ಕಾಲದ ನಾವು ಯಾವುದಕ್ಕೂ ಸಮಯವೇ ಸಾಲುವುದಿಲ್ಲ ಎಂದು ಪರದಾಡುತ್ತೇವೆ. ಆಗಿನ ನಮ್ಮ ಗುರುಗಳು ಗುಣಮಟ್ಟ ಕಾಪಾಡಿಕೊಂಡೂ ಶತಕ ಬಾರಿಸುತ್ತಿದ್ದುದು ಹೇಗೆ? ಒಂದು ಕೃತಿ ಬರೆಯಲು ತಿಣುಕಾಡಬೇಕಾದ ದಿನಗಳಿವು. ಆ ಕಾಲದಲ್ಲಿ ಬಿಡುವು ಹೆಚ್ಚಿಗೆ ಇತ್ತು ಎನ್ನುವುದು ತಪ್ಪು. ಧ್ಯಾನ, ಏಕಾಗ್ರತೆ, ಸಮಯದ ಸದ್ಬಳಕೆ, ಜತೆಗಿದ್ದ ಒಂದು ಬಗೆಯ ತಪೋಗುಣ ಎಲ್ಲ ಕೂಡಿಕೊಂಡು ಹೊರಹೊಮ್ಮುತ್ತಿದ್ದುವೇನೋ.
ಮನುಷ್ಯರು ಮರೆತು ಹೋದರೂ ಅವರ ದರ್ಶನವನ್ನು ಜಗತ್ತು ಮರೆಯಬಾರದು. ಅಸಂಖ್ಯ ಕೃತಿಗಳ ನಡುವೆ ತಿಪ್ಪೇರುದ್ರಸ್ವಾಮಿಯವರ ದರ್ಶನದೀಪ್ತಿಯೊಂದಿದೆ. ಅದು ವಚನದೊಳಗಿನ ವೈಚಾರಿಕತೆ. ಬಸವ ಮತ್ತು ಗಾಂಧಿಯರ ತೌಲನಿಕ ಅಧ್ಯಯನ. ಎಲ್ಲ ಕಾಲಗಳಲ್ಲೂ, ಎಲ್ಲ ಧರ್ಮಗಳಲ್ಲೂ ಕರ್ಮಠ ಮನಸ್ಸು ವ್ಯವಸ್ಥೆಯನ್ನು ಪ್ರಭುತ್ವದ ಮೂಲಕ ಹಿಡಿತದಲ್ಲಿಟ್ಟುಕೊಂಡು, ಕೇವಲ ಹುಟ್ಟಿನ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಾ, ಅಸಮಾನತೆಯನ್ನು ಆಚರಿಸಿಕೊಂಡು, ಪರಮಾತ್ಮನ ಹೆಸರು ಹೇಳಿಕೊಂಡು ಪರಮಾನ್ನ ಉಣ್ಣುತ್ತಾ ಬದುಕುತ್ತದೆ.
ಬಸವಣ್ಣ, ಅಂಬೇಡ್ಕರ್, ಗಾಂಧಿ ಅಸಮಾನತೆಯ ಆಯುಧ ಬಳಸಿ, ಶ್ರಮಜೀವನಕ್ಕೆ ನಮಸ್ಕರಿಸುತ್ತಾ, ಮೌಢ್ಯವನ್ನು ಖಂಡಿಸುತ್ತಾ ಹೋಗುತ್ತಾರೆ. ತಿಪ್ಪೇರುದ್ರಸ್ವಾಮಿಯವರ ಬಸವೇಶ್ವರ- ಗಾಂಧೀಜಿ ಕೃತಿ ಇದೇ ಆಶಯವನ್ನು ಹೊಂದಿದೆ. ಉದ್ದಕ್ಕೂ ತೌಲನಿಕ ಅಧ್ಯಯನ ಸೋದಾಹರಣವಾಗಿ ಸಾಗಿದೆ. ಗಾಂಧೀಜಿ ಮುಂದಿನ ಜನ್ಮದಲ್ಲಿ ನಾನು ಹುಟ್ಟುವುದಾದರೆ ಅಸ್ಪೃಶ್ಯನಾಗಿ ಹುಟ್ಟಬಯಸುತ್ತೇನೆ ಎಂದರೆ, ಬಸವಣ್ಣ ಈ ಜನ್ಮದಲ್ಲಿಯೇ ತಾನು ಅಸ್ಪೃಶ್ಯರಲ್ಲಿ ಹುಟ್ಟಿದವನೆಂದು ಘೋಷಿಸಿಕೊಳ್ಳುತ್ತಾರೆ. ಅಪ್ಪನು ಮಾದಾರ ಚೆನ್ನಯ್ಯ, ಬೊಪ್ಪನು ಡೋಹರ ಕಕ್ಕಯ್ಯ ಎಂದರೆ ಆತನಿಗೆ ತೃಪ್ತಿ ಇಲ್ಲ. ಚೆನ್ನಯ್ಯನ ಮನೆಯ ದಾಸಿಯ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು ಇವರಿಬ್ಬರೂ ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು, ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲ ಸಂಗಮ ದೇವ ಸಾಕ್ಷಿಯಾಗಿ ಎಂದು ಅಸ್ಪೃಶ್ಯರೊಡನೆ ಬಸವಣ್ಣ ಏಕೀಭವಿಸಿಕೊಳ್ಳುತ್ತಾರೆ. ಸತ್ಯದ ಸಾಕ್ಷಾತ್ಕಾರ ಮತ್ತು ನ್ಯಾಯದ ಬೇಡಿಕೆಗೆ ಗಾಂಧೀಜಿ ಸತ್ಯಾಗ್ರಹವನ್ನು ಅವಲಂಬಿಸಿದರೆ, ಬಸವಣ್ಣ ಸಮಚಿತ್ತ, ಶಿವಚಿತ್ತ, ಶರಣಾರ್ಥಿ ಎಂಬ ಮೂರು ಮಾತುಗಳ ಮೂಲಕ ಸತ್ಯಾಗ್ರಹಿಯಂತೆ ಕಾಣುತ್ತಾರೆ.
ಬಿಜ್ಜಳ ಇದ್ದರೂ, ಸೋಮೇಶ್ವರ ಬಂದರೂ, ವಿಕ್ರಮ ಎದ್ದರೂ, ಚಾಲುಕ್ಯರಿದ್ದರೂ, ಕಳಚೂರ್ಯರು ಬಂದರೂ ಅಷ್ಟೆ. ರಾಜರು ಯಾರೇ ಇದ್ದರೂ ಅವರನ್ನು ಆಟ ಆಡಿಸುತ್ತಾ ಸಾಮಾಜಿಕ ಸೂತ್ರಗಳನ್ನು ಹಿಡಿದವರು ಧರ್ಮದ ಕೇಂದ್ರಗಳಲ್ಲಿದ್ದ ಪುರೋಹಿತರೇ. ಆದ್ದರಿಂದಲೇ ಬ್ರಿಟಿಷರು ಹೋದ ಮೇಲೂ ನಮ್ಮ ಬಗೆಬಗೆಯ ದಾಸ್ಯಗಳು ಹಾಗೇ ಉಳಿದವು. ಧರ್ಮಾಂಧರು ಮತ್ತು ಸನಾತನಿಗಳಿಂದ ಬಸವಣ್ಣ ಮತ್ತು ಗಾಂಧೀಜಿ ತಮ್ಮ ಕೊನೆಯ ದಿನಗಳಲ್ಲಿ ಏಕಪ್ರಕಾರವಾದ ಮನೋವೇದನೆಯನ್ನು ಅನುಭವಿಸಿದರು.
ಬಸವಣ್ಣ ಹನ್ನೆರಡನೇ ಶತಮಾನದಲ್ಲಿ ಗಾಂಧೀಜಿಯಂತೆ ಯೋಚಿಸಿದರೆ, ಗಾಂಧಿ ಹತ್ತೊಂಬತ್ತನೇ ಶತಮಾನದಲ್ಲಿ ಬಸವಣ್ಣನಾಗುತ್ತಾರೆ. ಗಾಂಧೀಜಿಯನ್ನೂ, ಬಸವಣ್ಣನನ್ನೂ ಅವರ ತತ್ತ್ವಗಳ ಸಮೇತ ಸಮಾಧಿ ಮಾಡುವ ಹುನ್ನಾರ ಆಗಲೂ ನಡೆಯಿತು. ಈಗಲೂ ನಡೆಯುತ್ತಿದೆ. ನ್ಯಾಯ ನಿಷ್ಠುರಿಗಳೆಲ್ಲ ಲೋಕವಿರೋಧಿಗಳಾಗಬೇಕಾಗುತ್ತದೆ. ನಮ್ರರಂತೆ ಕಾಣುವ ಗಾಂಧಿ, ವಿನಯದ ಮೂರ್ತಿಯಂತಿರುವ ಬಸವಣ್ಣ ಅದೆಷ್ಟು ಕಠಿಣ! ‘ಊರು ಮುನಿದು ನಮ್ಮನೆಂತು ಮಾಡುವರು? ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ?’ ಎನ್ನುತ್ತಾರೆ ಬಸವಣ್ಣ. ಗಾಂಧೀಜಿ ಬಸವಣ್ಣನಂತೆ ಕವಿಯಲ್ಲ. ಆದರೆ ತನ್ನ ಬರವಣಿಗೆಯಲ್ಲಿ ಪ್ರತಿಬಿಂಬಿಸಿದ ಮೌಲ್ಯಗಳು, ಆತ್ಮಚರಿತ್ರಾಬರಹಗಳು ಸಾರ್ವಕಾಲಿಕ ಸಾಹಿತ್ಯಿಕ ಮಾದರಿಗಳು. ಗಾಂಧೀಜಿಯ ಬದುಕೇ ಒಂದು ಮಹಾಕಾವ್ಯ. ಜಗತ್ತಿನಲ್ಲಿ My life is my message ಎಂದ ಒಬ್ಬರೇ ವ್ಯಕ್ತಿ ಗಾಂಧೀಜಿ.
ಸಂದರ್ಶನವೊಂದರಲ್ಲಿ ತಿಪ್ಪೇರುದ್ರಸ್ವಾಮಿ ಹೇಳಿದ್ದಾರೆ: ಈ ಶತಮಾನದಲ್ಲಿಯೂ ಉತ್ತಮವಾಗಿ ಬದುಕಲು ನಮಗಿರುವ ಒಂದೇ ದಾರಿ ಗಾಂಧಿಮಾರ್ಗ. ಈ ಮಾರ್ಗ ಯಾವಾಗಲೂ ಅಪ್ರಸ್ತುತವಾಗುವುದಿಲ್ಲ. ಪರಿಸರಕ್ಕೆ ತಕ್ಕಂತೆ ಗಾಂಧಿಮಾರ್ಗವನ್ನು ಮಾರ್ಪಡಿಸಿಕೊಳ್ಳಬೇಕು. ಗಾಂಧಿಮಾರ್ಗವನ್ನು ಕಡೆಗಣಿಸಿದ್ದರಿಂದಲೇ ಇಂದು ಸಮಾಜದಲ್ಲಿ ವಿಪರ್ಯಾಸದ ಪರಿಸ್ಥಿತಿ ಕಾಣಿಸಿಕೊಂಡಿದೆ. ಗಾಂಧಿಧರ್ಮ ನಮ್ಮ ಯುಗಧರ್ಮ ಎಂಬುದನ್ನು ಸರ್ವರೂ ಮನಗಾಣಬೇಕು. ತಿಪ್ಪೇರುದ್ರಸ್ವಾಮಿಯವರು ಅಧ್ಯಾಪನದ ಜತೆಗೇ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿಭವನದ ನಿರ್ದೇಶಕರಾಗಿದ್ದರು. ಆಗ ಗ್ರಾಮವೊಂದನ್ನು ದತ್ತು ತೆಗೆದುಕೊಂಡು ಗಾಂಧಿ ತತ್ತ್ವಗಳನ್ನು ಅನುಷ್ಠಾನಗೊಳಿಸಿದ್ದರು. ಅವರ ಎರಡು ಬಹುಮುಖ್ಯ ಕೃತಿಗಳು, ಬಸವೇಶ್ವರ-, ಗಾಂಧೀಜಿ ಮತ್ತು ವೀರಶೈವ: ವೈಚಾರಿಕ ವಿವೇಚನೆ.
ಅವರು ನಮ್ಮ ತರಗತಿಗೆ ಬಂದ ಮೊದಲ ದಿನ ಇನ್ನೂ ನೆನಪಿನಲ್ಲಿದೆ. ಹಳಗನ್ನಡದಂತೆಯೇ ಹಳೆಯ ಇಂಗ್ಲಿಷ್‌ನಲ್ಲಿ ಅವರಿಗೆ ಸ್ಪಷ್ಟ ಹಿಡಿತ. ನಮ್ಮ ತರಗತಿಗೆ ಆ ವರ್ಷ ಬೋಧಿಸಿದ್ದು ಜಾನ್ ಮಿಲ್ಟನ್‌ನ ಪ್ಯಾರಡೈಸ್ ಲಾಸ್ಟ್. ಇದು ಮೊದಲು ಪ್ರಕಟವಾದದ್ದು ೧೬೬೭ರಲ್ಲಿ. ಈ ಮಹಾಕಾವ್ಯ ವರ್ಣನೆ, ಉತ್ಪ್ರೇಕ್ಷೆಗಳಿಂದ ತುಂಬಿಹೋಗಿದೆ. ತಿಪ್ಪೇರುದ್ರಸ್ವಾಮಿಯವರು ಸೇಟನ್‌ನ ವರ್ಣನೆಗೆ ನಿಂತರೆ ನಾವೆಲ್ಲ ಹೊಸ ಲೋಕವನ್ನು ಪ್ರವೇಶಿಸುತ್ತಿದ್ದೆವು. ಬೈಬಲ್‌ನ ಕಥೆಯನ್ನಾಧರಿಸಿದ್ದ, ಹನ್ನೆರಡು ಭಾಗಗಳಲ್ಲಿ ಹರಡಿದ್ದ ಪ್ಯಾರಡೈಸ್ ಲಾಸ್ಟ್ ಕೃತಿಯ ಕೆಲವು ಭಾಗಗಳನ್ನು ನಮಗೆ ಪಠ್ಯವಾಗಿರಿಸಲಾಗಿತ್ತು.
ಅಪರಿಚಿತ ಇಂಗ್ಲಿಷ್ ಪದಗಳನ್ನು ಅವರು ಅಸ್ಖಲಿತವಾಗಿ ನಿರರ್ಗಳವಾಗಿ ಬ್ಲ್ಯಾಂಕ್ ವರ್ಸ್‌ನಲ್ಲಿ ಚೆಂದಗೆಡದಂತೆ ಓದತೊಡಗಿದರೆ ಅದೊಂದು ಅಪೂರ್ವ ಅನುಭವ ಎನಿಸುತ್ತಿತ್ತು. ತರಗತಿಗೊಂದು ಗಾಂಭೀರ್ಯ ಆವರಿಸುತ್ತಿತ್ತು. ರಾತ್ರಿಪಾಳಿಯಲ್ಲಿ ಕೆಲಸ ಮಾಡಿ ಬಂದಿರುತ್ತಿದ್ದ ನಾನು ಮುಖಕ್ಕೆ ತಣ್ಣೀರು ಚಿಮುಕಿಸಿಕೊಂಡು ತಲೆಕೊಡವಿ ರೆಡಿಯಾಗಿ ಕುಳಿತು ಸೇಟನ್‌ನ ನರಕ ಲೋಕವನ್ನು ಕುತೂಹಲದಿಂದ ಪ್ರವೇಶಿಸುತ್ತಿದ್ದೆ. ಸೇಟನ್‌ನ ದೈತ್ಯವರ್ಣನೆ ನಮ್ಮ ಟಿಪಿಕಲ್ ಮಹಾಕಾವ್ಯಗಳ ವರ್ಣನೆಯಂತೆಯೇ. ದಂಗೆ ಎದ್ದ ದೇವತೆಗಳೊಂದಿಗೆ ಸ್ವರ್ಗಚ್ಯುತಿಗೊಳಗಾಗುವ ಸೇಟನ್‌ನ ಚಿತ್ರ ಇದು :
Thus Satan, talking to his nearest mate,
With head uplift above the wave, and eyes
That sparkling blazed; his other parts besides
Prone on the flood, extended long and large,
Lay floating many a rood, in bulk as huge
As whom the fables name of monstrous size...
ಇಂಥ ಕಾವ್ಯವನ್ನು ಓದಲೊಂದು ಲಯ, ಗತ್ತು, ನಿಲುಗಡೆಗಳು ಬೇಕು. ಕೆಲವರು ಮಹಾಕಾವ್ಯಗಳನ್ನು ನಿರ್ಜೀವವಾಗಿ ಲೆಕ್ಕ ಓದಿದಂತೆ ಓದಿ ಲಯಗೆಡಿಸುತ್ತಾರೆ. ತಿಪ್ಪೇರುದ್ರಸ್ವಾಮಿಯವರು ನಾಟಕೀಯತೆಯನ್ನು ಮರೆಯದೆ, ಭವ್ಯತೆಯನ್ನು ಬಿಟ್ಟುಕೊಡದೆ ಸ್ವಾರಸ್ಯಕರವಾಗಿ ಚಿತ್ರಿಸುತ್ತಿದ್ದರು. ತಿನ್ನಬಾರದ ಮರದ ಹಣ್ಣು ತಿನ್ನುವ ಆಡಮ್ ಮತ್ತು ಈವ್, ಅವರ ಬಳಿಗೆ ಬಂದು ಭೂಮಿಗೆ ದಾಳಿ ಇಡಲಿರುವ ಸೇಟನ್ ಕುರಿತು ಎಚ್ಚರಿಸುವ ರಫೆಲ್, ಸ್ವರ್ಗದಿಂದ ಒದ್ದೋಡಿಸಲ್ಪಟ್ಟ ಸೇಟನ್ ನರಕದ ದೊರೆಯಾಗಿ ಅಬ್ಬರಿಸುವುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಸ್ವರ್ಗದಲ್ಲಿ ಆಳಾಗಿರುವುದಕ್ಕಿಂತ ನರಕದಲ್ಲಿ ಅರಸನಾಗಿರುವುದೇ ಉತ್ತಮ ಎನ್ನುತ್ತಾನೆ ಸೇಟನ್. Satan Speech ಎಂದೇ ಇದು ಲೋಕ ವಿಖ್ಯಾತ :
To reign is worth ambition, though in Hell:
Better to reign in hell than serve in Heaven...
...ಅದನ್ನು ಬರಿಯ ಆಕಸ್ಮಿಕ ಎನ್ನಲಾಗದು. ನಮಗೆಲ್ಲಾ ಒಳ್ಳೆಯ ಗುರುಗಳು ದೊರಕಿದ್ದರು. ಗುರುಪೂರ್ಣಿಮೆಯ ನೆಪದಲ್ಲಿ ಹಲವು ಗುರುಗಳ ಜತೆಗೆ ತಿಪ್ಪೇರುದ್ರಸ್ವಾಮಿಯವರನ್ನು ನೆನೆಯಲು ಸಂತೋಷವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.