ADVERTISEMENT

ನಮ್ಮ ನೆಲದ ನೂರಾರು ತಾಯಂದಿರು

ನಾಗತಿಹಳ್ಳಿ ಚಂದ್ರಶೇಖರ
Published 17 ಜನವರಿ 2015, 19:30 IST
Last Updated 17 ಜನವರಿ 2015, 19:30 IST
ಡಾ.ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್)
ಡಾ.ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್)   

ಮೊನ್ನೆ ಅರುನಿಮಾ ಸಿನ್ಹಾ ಎಂಬ ದಿಟ್ಟ ಆಟಗಾರ್ತಿಯ ಬಗ್ಗೆ ಓದುತ್ತಿದ್ದೆ. ಈಕೆಯನ್ನು ದುಷ್ಟರು ನಾಲ್ಕು ವರ್ಷಗಳ ಹಿಂದೆ ಚಲಿಸುತ್ತಿದ್ದ ರೈಲಿನಿಂದ ತಳ್ಳಿದಾಗ ಕಾಲೊಂದು ಕತ್ತರಿಸಿಹೋಯಿತು. ಅರಿವಳಿಕೆ ಕೂಡಾ ಇಲ್ಲದ ಸಣ್ಣ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮುಂದೆ ಕೃತಕ ಕಾಲು ಜೋಡಿಸಿಕೊಂಡು ಎವರೆಸ್ಟ್ ಏರಿದ ಸಾಹಸಿ. ದಾರುಣತೆಯನ್ನು ದಾಟಿ ಸಾಧನೆಯ ಶಿಖರವನ್ನೇರಿದವರ ಬಗ್ಗೆಯೇ ಯೋಚಿಸುತ್ತಿದ್ದಾಗ ಮಿತ್ರರಾದ ಶಂಕರೇಗೌಡರು ಒಂದು ದೈತ್ಯ ಇಂಗ್ಲಿಷ್ ಪುಸ್ತಕ ಹಿಡಿದು ಬಂದರು. ಅದರ ಹೆಸರು ‘೧೦೪ women will inspire’. ಮೈಸೂರು ವಿಶ್ವವಿದ್ಯಾನಿಲಯದ ಮನಶಾಸ್ತ್ರ ವಿಭಾಗಕ್ಕೆ ಪಿಎಚ್‌.ಡಿ ಪದವಿಗಾಗಿ ಸಲ್ಲಿಸಿದ್ದ ಮಹಾಪ್ರಬಂಧ.

ಡಾ.ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್) ಇದರ ಲೇಖಕಿ. ಶೀರ್ಷಿಕೆಯಲ್ಲಿದ್ದ ‘inspire’ ಎಂಬ ಪದ, 560 ಪುಟಗಳನ್ನು ಓದಲು ಪ್ರೇರೇಪಿಸಿತು. ಆತ್ಮಹತ್ಯೆ ಹೊರತಾಗಿ ಬೇರೇನೂ ಉಳಿದಿಲ್ಲ ಎಂದು ಖಿನ್ನರಾಗುವವರು, ವಿಶೇಷವಾಗಿ ಬಡತನದ ಬಂಗಬವಣೆಗಳಲ್ಲಿ ಬೇಯುವ ಹೆಣ್ಣುಮಕ್ಕಳು ಇಂಥ ಪುಸ್ತಕಗಳನ್ನು ಓದಬೇಕು. ಇವು ಕಾಲ್ಪನಿಕ ಬರಹಗಳಲ್ಲ. ಬೇರೆ ಬೇರೆ ವೃತ್ತಿಯ, ಬೇರೆ ಬೇರೆ ವಯೋಮಾನದ, ಬೇರೆ ಬೇರೆ ಸಮುದಾಯಕ್ಕೆ ಸೇರಿದ, ಬೇರೆ ಬೇರೆ ಪ್ರಾದೇಶಿಕ ಹಿನ್ನೆಲೆಯಿಂದ ಬಂದ ನಮ್ಮ ನೆಲದ ನೂರನಾಲ್ಕು ತಾಯಂದಿರ ಆತ್ಮಕಥನ. ಈ ಸಾಧನೆಗಳ ಕಥನ, ಒಬ್ಬೊಬ್ಬ ಮಹಿಳೆಯೂ ಆರಿಸಿಕೊಂಡ ಹಾದಿ, ಕ್ರಮಿಸಿದ ಬಗೆ, ಮುಟ್ಟಿದ ಗುರಿಗಳನ್ನು ಕುತೂಹಲಕರವೂ ಸ್ವಾರಸ್ಯಕರವೂ ಸಾಹಸಮಯವೂ ಕೆಲವೆಡೆ ಯಾತನಾಮಯವೂ ಆಗಿ ನಿವೇದಿಸುತ್ತದೆ.

ಆಧುನಿಕ ಜಗತ್ತು ಸ್ವಕೇಂದ್ರಿತವೂ ಪುರುಷಕೇಂದ್ರಿತವೂ ಅವೈಚಾರಿಕವೂ ಆಗುತ್ತಿರುವ ಈ ದಿನಗಳಲ್ಲಿ ಮೊದಲ ಬಲಿಪಶು ಹೆಣ್ಣು. ನಂತರ ಮಕ್ಕಳು. ಅನಂತರ ವೃದ್ಧರು. ಇದು ಭಾರತಕ್ಕೆ ಸೀಮಿತವಾದದ್ದಲ್ಲ. ಈಗ ಜಾಗತಿಕವಾಗಿ ಹೆಣ್ಣು ಒಂದು ಕಡೆ ಪ್ರಧಾನಿಯಾಗುತ್ತಾ, ಇನ್ನೊಂದೆಡೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ಧಾರವಾಡದ ಕತೆಗಾರ ಎಸ್.ಬಿ. ಜೋಗುರ ಆಫ್ರಿಕಾದ ಕ್ರೂರ ಪದ್ಧತಿ ಫಿಮೇಲ್ ಜೆನಿಟಲ್ ಮ್ಯುಟಿಲೇಶನ್ ಕುರಿತು ಬರೆದಿದ್ದ ಸಣ್ಣ ಕತೆಯೊಂದು ನೆನಪಾಗುತ್ತಿದೆ. ಪುರುಷನು ಮಹಿಳೆಯ ಮೇಲೆ ಎಸಗಬಹುದಾದ ಅತಿದೊಡ್ಡ ಕ್ರೌರ್ಯ ಇದು. ಇಲ್ಲಿ ನೂರನಾಲ್ಕು ವ್ಯಕ್ತಿತ್ವಗಳನ್ನು ಮುಂದಿಟ್ಟು ನೊಂದವರಿಗೆ ಸ್ಫೂರ್ತಿ ಹುಟ್ಟಿಸಲು ಬದುಕುವ ಆಸೆ ಹುಟ್ಟಿಸಲು, ಗೀತಾ ಪ್ರಯತ್ನಿಸಿದ್ದಾರೆ.

ಇಲ್ಲಿನ ನೂರನಾಲ್ಕು ಮಹಿಳೆಯರು ಮೂವತ್ತಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ. ಇಷ್ಟೊಂದು ಕ್ಷೇತ್ರಗಳಲ್ಲಿ ಕೈಚಾಚಿರುವುದು ಗಮನಾರ್ಹ. ಸಮಾಜಸೇವೆ, ಸಾಹಿತ್ಯ, ವಿಜ್ಞಾನ, ವಕೀಲಿ ವೃತ್ತಿ, ಶಿಕ್ಷಣ, ಜನಪದ ವೈದ್ಯ, ಕೃಷಿ, ಉದ್ಯಮ, ಪರಿಸರ, ಸಂಗೀತ, ವೈದ್ಯಕೀಯ, ಕೌಶಲ್ಯ, ರಾಜಕಾರಣ, ಸಿನಿಮಾ, ಪತ್ರಿಕೋದ್ಯಮ, ರಂಗಭೂಮಿ, ಚಿತ್ರಕಲೆ, ಶಿಲ್ಪಕಲೆ, ನೃತ್ಯ, ಕ್ರೀಡೆ, ಪ್ರಸಾಧನ, ವಿಮಾನಕ್ಷೇತ್ರ, ಆಡಳಿತ, ಪಾಕಶಾಸ್ತ್ರ, ಧಾರ್ಮಿಕ ಕ್ಷೇತ್ರ, ಮಾಧ್ಯಮ, ಬೆರಳಚ್ಚು ಮತ್ತು ಕೈಬರಹ ತಜ್ಞೆಯರು, ಯೋಗ ಮುಂತಾದ ವಿಭಾಗಗಳಿದ್ದು ಅದರಲ್ಲೂ ಉಪವಿಭಾಗಗಳಿವೆ. ಗೀತಾ ಪ್ರತಿಯೊಬ್ಬರನ್ನೂ ಕಂಡು ಮಾತನಾಡಿಸಿ ಅವರ ಸಾಧನೆಗಳನ್ನು ಸಂಗ್ರಹಿಸಿ ದಾಖಲಿಸಿದ್ದಾರೆ. ಆದರೆ ಇದು ಪತ್ರಿಕಾ ವರದಿಯಂತೆ ನೀರಸವಾಗಿಲ್ಲ. ನಮ್ಮ ತಾಯಂದಿರು ಎಷ್ಟೊಂದು ಕ್ಷೇತ್ರಗಳಲ್ಲಿ-ಕೆಲವರು ನಕ್ಷತ್ರಗಳಂತೆ ಬೆಳಗುತ್ತಿದ್ದರೆ, ಇನ್ನು ಕೆಲವರು ಎಲೆಯ ಮರೆಯಲ್ಲಿದ್ದುಕೊಂಡು -ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದಾರೆ ಎಂಬುದು ಆಶ್ಚರ್ಯಕರ.

ಗೀತಾ ಈ ಎರಡೂ ಪ್ರತಿಭೆಗಳನ್ನು ಸಮಾನವಾಗಿ ಗುರುತಿಸಿದ್ದಾರೆ. ನಗರದ ಶ್ರೀಮಂತ ಮಹಿಳೆಯರನ್ನು ಹುಡುಕಿ ಹೋದಂತೆಯೇ ಹಳ್ಳಿಗಾಡಿನ ಅಜ್ಞಾತರನ್ನೂ ನಗರಗಳ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಬಡಮಹಿಳೆಯರನ್ನೂ ಮಾತನಾಡಿಸಿದ್ದಾರೆ. ಆದ್ದರಿಂದಲೇ ಇಲ್ಲಿ ಗೊತ್ತಿರುವ, ಗೊತ್ತಿಲ್ಲದ ಹೆಸರುಗಳ ಸಮನ್ವಯವಿದೆ. ಖ್ಯಾತ ವೈದ್ಯೆಯರಾದ ಸುಲೋಚನಾ ಗುಣಶೀಲ, ಪದ್ಮಿನಿ ಪ್ರಸಾದ್, ಕಾಮಿನೀರಾವ್, ವಿಜಯಲಕ್ಷ್ಮಿ ಬಾಳೆಕುಂದ್ರಿಯರ ಸಾಧನೆಯ ಜೊತೆಗೇ ಹಾವಿನ ವಿಷ ತೆಗೆದು ಜನರ ಜೀವ ಕಾಪಾಡುವ ರೆಹಾನಾ ಬೇಗಂ, ಜನಪದ ವೈದ್ಯೆ ಮಾಸ್ತಮ್ಮನ ಸೇವೆಯ ಚಿತ್ರಗಳಿವೆ. ಹೆಣ್ಣುಮಕ್ಕಳ ಉಚಿತ ಶಿಕ್ಷಣಕ್ಕಾಗಿ ಬದುಕನ್ನು ಮೀಸಲಿಟ್ಟ ಪುಟ್ಟವೀರಮ್ಮ, ಸುಶೀಲಮ್ಮನವರಂಥ ಹಿರಿಯ ಸಾಧಕಿಯರ ಜೊತೆಗೇ ಏಡ್ಸ್ ರೋಗಿಗಳ, ಸೆಕ್ಸ್ ವರ್ಕರ್‍್ಸಗಳ ಬಗ್ಗೆ ಅಪಾರ ಕಾಳಜಿಯಿಂದ ಕೆಲಸ ಮಾಡುತ್ತಿರುವ ಲೀಲಾ ಸಂಪಿಗೆ ಮತ್ತು ರೈತ ಮಹಿಳೆಯರ ಪರ ಹೋರಾಟದಲ್ಲಿ ತೊಡಗಿರುವ ಸುನಂದಾ ಜಯರಾಂ ಅವರ ಸಾಧನೆಗಳಿವೆ.

ಕೃಷಿ, ಸಾವಯವ ಗೊಬ್ಬರ, ಗ್ರಾಮೀಣ ಮಹಿಳಾ ಸಂಘಟನೆಯಲ್ಲಿ ತೊಡಗಿಕೊಂಡ ಇಂದಿರಮ್ಮ, ಹೇಮಾ ಅನಂತರಾಜ್, ರಾಧಾ ಕಾಳೆ ಮುಂತಾದವರ ಸಾಧನೆಗಳ ಪಟ್ಟಿ ಇದೆ. ಶಾಸ್ತ್ರೀಯ ಸಂಗೀತ ಕ್ಷೇತ್ರದ ಸಾಧಕಿಯರನ್ನು ಗುರುತಿಸುವಾಗ ಗಂಗೂಬಾಯಿ ಹಾನಗಲ್, ಶಾಮಲಾ ಜಿ.ಭಾವೆ, ಕಸ್ತೂರಿ ಶಂಕರ್, ನಾಗಮಣಿ ಶ್ರೀನಾಥ್‌ರವರನ್ನು ಕುರಿತು ಹೇಳುತ್ತಲೇ ಬುಡ್ಗ ಜಂಗಮ ಬುಡಕಟ್ಟಿನ ಬುರ್ರಕಥಾ ಈರಮ್ಮನನ್ನು ಲೇಖಕಿ ಮರೆಯುವುದಿಲ್ಲ. ಒಡಲ ದುಃಖ ಮರೆಯಲು ಗಿಡ ನೆಡುತ್ತಾ, ನೆಟ್ಟ ಗಿಡಗಳು ಮರಗಳಾದಾಗ ಅವುಗಳನ್ನೇ ಮಕ್ಕಳೆಂದು ಭಾವಿಸುತ್ತಾ ಬದುಕಿರುವ ಸಾಲು ಮರದ ತಿಮ್ಮಕ್ಕನಿಗೆ ಇಲ್ಲಿ ಅಗ್ರಸ್ಥಾನವಿದೆ. ಹುರಳಿಚಿಕ್ಕನಹಳ್ಳಿಯಿಂದ ಬೆಂಗಳೂರಿಗೆ ಬಂದ ಮೊದಲ ರಿಕ್ಷಾ ಚಾಲಕಿ ಛಾಯಾ ಅವರ ಸಾಧನೆ ಇದೆ. ಅಪರಾಧೀ ಜಗತ್ತಿಗೆ ಮುಖಾಮುಖಿಯಾಗುವ ಮೊದಲ ಜೈಲ್‌ ಸೂಪರಿನ್‌ಟೆಂಡೆಂಟ್ ಆರ್. ಲತಾ ಅವರ ಹೋರಾಟದ ಬದುಕಿದೆ.

ಜನರಾಡಿಕೊಳ್ಳುವ, ಮೂಗುಮುರಿಯುವ ಕಂಡಕ್ಟರ್- ಕಮ್-ಡ್ರೈವರ್ ವೃತ್ತಿಯನ್ನು ದಿಟ್ಟವಾಗಿ ಸ್ವೀಕರಿಸಿದ ಮೊದಲ ಬಸ್ ಚಾಲಕಿ ಕೆ. ನಿಂಗಮ್ಮನ ವಿವರಗಳಿವೆ. ಉದ್ಯಮಶೀಲತೆ ಎಂದಾಗ ಸುಧಾಮೂರ್ತಿ, ಕಿರಣ್ ಮಜುಂದಾರ್ ಶಾ, ಮಾಲಿನಿ ಸುಬ್ರಹ್ಮಣ್ಯಂ ನೆನಪಾಗುವುದು ಸಹಜ. ಇವರದ್ದೆಲ್ಲಾ ವಿಶಿಷ್ಟವಾದ ದೈತ್ಯಸಾಧನೆ. ಇದನ್ನು ದಾಖಲಿಸುತ್ತಲೇ ಮೋಟಾರ್ ಸೈಕಲ್ಲು ಮತ್ತು ಪಾತ್ರೆಗಳ ಡೆಂಟ್ ತೆಗೆಯುವ ಕುಶಲಿ ಫರೀದಾ ಬಾನು, ಬೈಕ್ ರಿಪೇರಿ ಮಾಡುವ ರೋಸ್‌ಮೇರಿ ನಂದನ್-ಇವರುಗಳನ್ನೂ ಗೀತಾ ಮರೆಯುವುದಿಲ್ಲ. ನಾನಾ ಕಾರಣಕ್ಕೆ ಗಂಡಸರ ಸ್ವತ್ತು ಮತ್ತು ಸೀಮಿತ ಎಂಬ ಅರ್ಥಗಳನ್ನು ದಾಟಿ ಕಠಿಣ ಕೌಶಲ್ಯಗಳನ್ನು ಕೈಗೆತ್ತಿಕೊಂಡು ಮುಂದೆ ಬಂದ ಈ ತಾಯಂದಿರ ಸಾಧನೆ ದೊಡ್ಡದು.

ಈ ಪಟ್ಟಿಯಲ್ಲಿ ಚಂಡೆ ಬಾರಿಸುವ ಸರೋಜಿನಿ ಶೆಟ್ಟಿ ಅವರೂ, ಶಿಲ್ಪ ಸೃಷ್ಟಿಸುವ ಪ್ರಮೋದಿನಿ ದೇಶಪಾಂಡೆಯವರೂ ಇದ್ದಾರೆ. ಅಪರೂಪದ ಕ್ಷೇತ್ರವಾದ ಕೈಬರಹ ಮತ್ತು ಬೆರಳಚ್ಚು ಪತ್ತೆ ಮಾಡುವ ಕಾಯಕದ ಸಿ.ವಿ. ಜಯದೇವಿಯವರ ಸಾಧನೆಗಳ ಕುರುಹು ಇಲ್ಲಿ ಲಭ್ಯ. ಗೀತಾ ಅವರ ಶೋಧನೆಯಿಂದ ಮೊದಲ ಮಹಿಳಾ ಪೈಲಟ್ ವಿಜಯಲಕ್ಷ್ಮಿ ಕೂಡಾ ತಪ್ಪಿಸಿಕೊಂಡಿಲ್ಲ. ಪುರುಷಾಹಂಕಾರಕ್ಕೆ ಪೆಟ್ಟುಕೊಟ್ಟು ಮೇಲುಗೈ ಸಾಧಿಸಿದ ಕ್ಷೇತ್ರವೆಂದರೆ ಕ್ರೀಡೆ. ಇಲ್ಲಿ ಅಸಂಖ್ಯ ಏಕಲವ್ಯೆಯರಿದ್ದಾರೆ. ಹತ್ತು ತಿಂಗಳ ಕೂಸಿನ ತಾಯಿಯಾಗಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಪಡೆದ ರೀತ್ ಅಬ್ರಹಾಂ ಅವರಿಂದ ಹಿಡಿದು ನಿಶಾ ಮಿಲ್ಲೆಟ್, ಅಶ್ವಿನಿ ನಾಚಪ್ಪ, ಮಾಲತಿ ಹೊಳ್ಳ, ಶಾಂತಾ ರಂಗಸ್ವಾಮಿ, ನಿಧಿ ರುದ್ರದೇವ್, ಅನ್ನಪೂರ್ಣ ಕರುವಿನಕೊಪ್ಪ ಮುಂತಾದವರ ಸಾಧನೆಗಳಿವೆ.

ಸಾಧಕರ ಶ್ರೇಣಿಯಲ್ಲಿ ಅಸಂಖ್ಯ ಲೇಖಕಿಯರು, ಪತ್ರಕರ್ತೆಯರು, ಚಲನಚಿತ್ರ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದೆಯರು, ರಾಜಕಾರಣಿಗಳು ಇದ್ದಾರೆ. ಗೀತಾ ಅವರ ಪಟ್ಟಿಯಲ್ಲಿ ಪ್ರಮಿಳಾ ನೇಸರ್ಗಿ, ಸರೋಜಿನಿ ಮಹಿಷಿ, ಸಾರಾ ಅಬೂಬಕ್ಕರ್, ನೇಮಿಚಂದ್ರ, ಟಿ.ಸಿ. ಪೂರ್ಣಿಮಾ, ಗೌರಿ ಲಂಕೇಶ್, ಅರುಂಧತಿ ನಾಗ್, ಬಾನು ಮುಷ್ತಾಕ್, ಇಳಾ ವಿಜಯಮ್ಮ, ಲೀಲಾವತಿ ಆರ್. ಪ್ರಸಾದ್, ಬಿ.ಟಿ. ಲಲಿತಾನಾಯಕ್ ಮುಂತಾದ ಅನೇಕರಿದ್ದಾರೆ. ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು, ತಮ್ಮ ಧ್ವನಿ ಎತ್ತಲು ಇವರಿಗೆಲ್ಲ ಒಂದಿಲ್ಲೊಂದು ವೇದಿಕೆ ದಕ್ಕಿದೆ. ಅಂಥ ವೇದಿಕೆ ಇಲ್ಲದವರನ್ನೂ ಹುಡುಕಿ ಅವರ ಕೆಲಸಗಳನ್ನು ಗುರ್ತಿಸಿರುವುದು ಈ ಕೃತಿಯ ಮುಖ್ಯಾಂಶ. ಇಲ್ಲಿ ದಾಖಲಾಗಿರುವ ಜಿ.ಎನ್. ಸಂಗೀತಾ ಎಂಬ ವಿಕಲಾಂಗ ಚೇತನೆಯ ಸಾಧನೆಗಳು ಇದಕ್ಕೆ ಉದಾಹರಣೆ. ಅಂಧರಾದ ಸಂಗೀತಾ, ಲಂಡನ್ನಿನ ಕ್ವೀನ್ ಎಲಿಜಬೆತ್‌ರನ್ನು ಭೇಟಿಯಾಗುವ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ಸಾಧನೆಗಳ ಆಯ್ಕೆಯಲ್ಲಿ ಎರಡು ಸ್ತರಗಳಿವೆ. ಒಂದು ಕ್ಷೇತ್ರವನ್ನು ಆರಿಸಿಕೊಂಡು ಎಡಬಲ ನೋಡದೆ ದೈತನಾಗಿ ಬೆಳೆದುಬಿಡುವುದು. ಕಡುಬಡವನೊಬ್ಬ ಕೋಟ್ಯಧಿಪತಿಯಾಗುವುದು. ಎರಡನೆಯ ಸ್ತರವೆಂದರೆ ತಾನೂ ಬೆಳೆಯುತ್ತ ಸಮಾಜವನ್ನೂ ಬೆಳೆಸುವುದು. ಸೇವೆಯ ಉಪಕರಣ ಬಳಸಿ ಸಾಧನೆಗೈವುದು. ಕೇವಲ ಶ್ರೀಮಂತನಾಗುವುದು, ವೈಯಕ್ತಿಕ ಸಾಧನೆ. ಆದರೆ ಎಲ್ಲರೂ ಕಾಣಬಲ್ಲ, ಎಲ್ಲರನ್ನೂ ಮುಟ್ಟಬಲ್ಲ ಸಾಧಕರು ಇಂದಿನ ಸಮಾಜದ ಅವಶ್ಯಕತೆ.

ಹಳ್ಳಿಯ ಬಡತನದಿಂದ ಮೇಲೆ ಹೋಗಿ, ಮೂಟೆಗಟ್ಟಳೆ ಹಣ ಸಂಪಾದಿಸಿ, ಬೇರುಗಳನ್ನೇ ಮರೆತು ಯಾವುದೋ ಊರು, ದೇಶಗಳಲ್ಲಿ ಬದುಕುವ ಅಸಂಖ್ಯರಿದ್ದಾರೆ. ಅದೂ ಒಂದು ಬಗೆಯ ಸಾಧನೆಯೇ. ಭಾರತದಂಥ ವಿಪರ್ಯಾಸ, ವಿರೋಧಾಭಾಸ ಮತ್ತು ವೈವಿಧ್ಯತೆಗಳನ್ನು ತುಂಬಿಕೊಂಡ ದೇಶಕ್ಕೆ ತ್ಯಾಗ, ಔದಾರ್ಯ, ಅಂತಃಕರಣ ಮತ್ತು ಸಮಾನತೆಗಳನ್ನು ನೆಚ್ಚಿಕೊಂಡ ಸಾಧಕರು ಬೇಕಾಗಿದ್ದಾರೆ. ಅಂಥ ಸಾಧಕಿಯರು ಈ ಕೃತಿಯಲ್ಲಿ ಹೇರಳವಾಗಿದ್ದಾರೆ.

ಇಲ್ಲಿನ ಮಿತಿಗಳನ್ನು ಹೇಳುವುದು ಅಗತ್ಯ. ಎಷ್ಟು ಅದ್ಭುತ ಜರಡಿ ಹಿಡಿದರೂ ಕೆಲವು ಜೊಳ್ಳುಗಳು ಜಾರುವುದಿಲ್ಲ. ಕೆಲವು ಗಟ್ಟಿಕಾಳೇ ಜಾರಿಬಿಡುತ್ತವೆ. ನೂರು ಉತ್ತಮ ಕತೆಗಾರರು, ನೂರು ಉತ್ತಮ ಕವಿಗಳು, ನೂರು ಉತ್ತಮ ಮನುಷ್ಯರು ಎಂಬ ಇಂಚುಪಟ್ಟಿ ಹಿಡಿದು ಹೊರಟಾಗೆಲ್ಲಾ ಇಂಥ ಅಪಾಯಗಳು ಸಂಭವಿಸಿವೆ. ‘ಉತ್ತಮರಾದ ಕೆಲವರು’ ಎನ್ನುವುದು ಕ್ಷೇಮ. ಯಾವುದೇ ಕ್ಷೇತ್ರದ ಸಾಧಕ ಸಾಧಕಿಯರನ್ನು ಪಟ್ಟಿ ಮಾಡುವಾಗ ಒಂದು ಸಂಖ್ಯೆಯ ಮಿತಿಯನ್ನಿಟ್ಟುಕೊಳ್ಳುವುದು ಅಗತ್ಯವಾದರೂ, ಆ ಸಂಖ್ಯೆ ಹಲವು ಜಿಜ್ಞಾಸೆಗಳನ್ನು ಎತ್ತುತ್ತದೆ. ಸಾಧಕಿಯರು ಇಷ್ಟೇನಾ ಇರುವುದು ? ಎಂಬ ಪ್ರಶ್ನೆ ಏಳುವಂತೆಯೇ ಈ ಕ್ಷೇತ್ರದಲ್ಲಿ ಇನ್ನೂ ಇದ್ದಾರಲ್ಲ ಎಂಬ ಅನುಮಾನವೂ ಉಂಟಾಗುತ್ತದೆ. ಈ ಪಟ್ಟಿಗೆ ಇನ್ನೂ ಸೇರುವವರಿದ್ದರು ಎಂದು ಅನಿಸುವಂತೆಯೇ ಇವರು ಈ ಪಟ್ಟಿಗೆ ಸೇರಲು ಅನರ್ಹರು ಎಂದೂ ಅನಿಸಬಹುದು. ಹಾಗೆಂದು ಒಂದು ಸಂಖ್ಯೆಗೆ ಮಿತಿಗೊಳಿಸಿಕೊಳ್ಳದಿದ್ದರೆ ಅಧ್ಯಯನವು ನಿರಾವರಣಗೊಳ್ಳುವ ಅಪಾಯವಿರುತ್ತದೆ.

ನೂರು ಎಂದರೆ ಪೂರ್ಣ, ನೂರನಾಲ್ಕು ಎಂದರೆ ಅದು ಮುಂದುವರಿಯುವ ಸಂಕೇತ ಎಂದು ಲೇಖಕಿ ಭಾವಿಸಿರಲಿಕ್ಕೆ ಸಾಕು. ಕೃತಿ ಇನ್ನಷ್ಟು ಅಡಕವಾಗಿ, ಸಂಕ್ಷೇಪವಾಗಿದ್ದು ಸಾಧಕಿಯರ ಸಂಖ್ಯೆಯನ್ನು ಕಡಿತಗೊಳಿಸಬಹುದಿತ್ತು. ಚೂರುಪಾರು ಉತ್ಪ್ರೇಕ್ಷೆಗಳನ್ನು ಕತ್ತರಿಯಾಡಿಸಬಹುದಿತ್ತು. ಕನ್ನಡಾನುವಾದ ತರುವಾಗ ಈ ಅಂಶಗಳನ್ನು ಗಮನಿಸಬಹುದು. ಅಚ್ಚರಿ ಏನೆಂದರೆ ಇಲ್ಲಿ ಯಾರೂ ಪುರುಷರ ದಬ್ಬಾಳಿಕೆಯ ವಿರುದ್ಧ ಸೊಲ್ಲೆತ್ತಿಲ್ಲ. ಎಲ್ಲರೂ ಗಂಡನ, ಮಕ್ಕಳ, ಮೇಲಧಿಕಾರಿಯ ಸಹಕಾರವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಎಲ್ಲರ ವಿಷಯದಲ್ಲೂ ಹೀಗಿರಲಾರದು. ಕೆಲವರಾದರೂ ಪುರುಷರ ಕ್ರೌರ್ಯ, ದಬ್ಬಾಳಿಕೆ ಅನುಭವಿಸಿರಲು ಸಾಧ್ಯ. ಆದರೆ ಅನೇಕರ ಹೃದಯವಂತಿಕೆ ಎಂದರೆ ದೂರು ಹೇಳದೆ ಸಾಧಿಸಿ ತೋರುವ ಛಲ ಮತ್ತು ತಾಯ್ತನ. ಲೇಖಕಿ ಗೀತಾ, ತಾಯಿಯನ್ನೇ ಕೇಂದ್ರಪ್ರಜ್ಞೆಯಾಗಿಸಿ ತಾಯಿಗಾಗಿ ಎಂಬ ಕಾವ್ಯಸಂಗ್ರಹವನ್ನು ಪ್ರಕಟಿಸಿದ್ದವರು. ಆದ್ದರಿಂದಲೇ ಇರಬೇಕು, ಇಲ್ಲಿನ ಸಾಧಕಿಯರಲ್ಲೂ, ಅವರ ಸಾಧನೆಗಳನ್ನು ದಾಖಲಿಸಿರುವ ಲೇಖಕಿಯಲ್ಲೂ ತಾಯ್ತನವೇ ಮೇಲುಗೈ ಪಡೆದಂತಿದೆ. ಮಿತಾವಕಾಶ ಉಳ್ಳ ಆದರೆ ಮಹತ್ವಾಕಾಂಕ್ಷೆ ಉಳ್ಳ ಹೆಣ್ಣುಮಕ್ಕಳಿಗೆ ಈ ಕೃತಿ ಸ್ಫೂರ್ತಿದಾಯಕವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.