ಇರಬಹುದು. ನಮ್ಮದು ಬರಪೀಡಿತ ಬಯಲು ಪ್ರದೇಶವೇ. ಆದರೆ ಪ್ರತಿಭೆಯ ಬೆಟ್ಟಗಳು ಸಾಲು ಸಾಲು. ನಮ್ಮ ನಾಗಮಂಗಲ ತಾಲ್ಲೂಕು ಬೆಟ್ಟಗಳನ್ನೇ ಸೃಷ್ಟಿಸಿದೆ. ಜಾನಪದ ಕ್ಷೇತ್ರದಲ್ಲಿ ಎಚ್. ಎಲ್. ನಾಗೇಗೌಡ, ಜೀಶಂಪ, ತೊಗಲುಗೊಂಬೆ ಖ್ಯಾತಿಯ ನೆಲ್ಲಿಗೆರೆ ತಿಮ್ಮಪ್ಪಾಚಾರ್ಯ, ಸೋಬಾನೆ ಚಿಕ್ಕಮ್ಮ, ಖ್ಯಾತ ಶಿಲ್ಪಿಗಳಾದ ನಾಗಮಂಗಲದ ನೀಲಕಂಠಾಚಾರ್, ಶ್ರೀನಿವಾಸಾಚಾರ್ ; ಪರಮಾಣು ವಿಜ್ಞಾನಿ ಬಿಂಡಿಗನವಿಲೆ ರಾಜಾರಾಮಣ್ಣ ; ಖ್ಯಾತ ಕವಿ ಬಿ.ಸಿ. ರಾಮಚಂದ್ರ ಶರ್ಮ, ಚಲನಚಿತ್ರ ಕ್ಷೇತ್ರದ ಬಿ.ಎಸ್. ರಂಗಾ, ಸಂಪನ್ನ ರಾಜಕಾರಣಕ್ಕೆ ಹೆಸರಾದ ಟಿ. ಮರಿಯಪ್ಪ ಮತ್ತು ಪುಣ್ಯಕೋಟಿ ಎಂದು ಕರೆಸಿಕೊಳ್ಳುವ ಎಚ್.ಟಿ. ಕೃಷ್ಣಪ್ಪ; ಖ್ಯಾತ ಗಾಂಧಿವಾದಿ ಹೊ. ಶ್ರೀನಿವಾಸಯ್ಯ, ಸಮಚಿತ್ತದ ಪತ್ರಕರ್ತರಾದ ಪಿ. ರಾಮಯ್ಯ ಇವರೆಲ್ಲ ನಾಗಮಂಗಲಕ್ಕೆ ಮಾತ್ರ ಸೀಮಿತವಾಗದ ನಾಡಿನ ಮಾದರಿಗಳು. ಈ ಬೆಟ್ಟಸಾಲಿನಲ್ಲಿ ನೆನೆಯಬೇಕಾದವರು ಬಿ.ಎಂ. ಶ್ರೀಕಂಠಯ್ಯ. ನೂರು ವರ್ಷಗಳ ಹಿಂದೆಯೇ ‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದು ಖಚಿತವಾಗಿ ಸಾರಿ ಹೇಳಿದವರು.
ನಮ್ಮೂರಿನ ಪಕ್ಕದ ಬೆಳ್ಳೂರಿನಲ್ಲಿ ಜನವರಿ ೩, ೧೮೮೪ ರಲ್ಲಿ ಹುಟ್ಟಿದ ಬಿಎಂಶ್ರೀ ಕನ್ನಡ, ಇಂಗ್ಲಿಷ್, ತಮಿಳು ಮತ್ತು ಸಂಸ್ಕೃತ ಬಲ್ಲವರಾಗಿದ್ದರು. ಆಗ ಪುಸ್ತಕಗಳಂತೆಯೇ ಭಾಷಣಗಳೂ, ವಿಶೇಷ ಉಪನ್ಯಾಸಗಳೂ ಚಿರಸ್ಥಾಯಿಯಾಗಿ ಉಳಿದುಬಿಡುತ್ತಿದ್ದವು. 1911ರಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಬಿಎಂಶ್ರೀ ಮಾಡಿದ ‘ಕನ್ನಡದ ಮಾತು ತಲೆ ಎತ್ತುವ ಬಗೆ’ ಎಂಬ ಉಪನ್ಯಾಸ ಆ ಸಾಲಿಗೆ ಸೇರುವಂಥದ್ದು. ಇಂಗ್ಲಿಷ್ ಅಧ್ಯಾಪಕರಾಗಿ ಕನ್ನಡದ ಚಿಂತೆ ಮಾಡುತ್ತಿದ್ದ ಬಿಎಂಶ್ರೀ, ಇಂಗ್ಲಿಷ್ ಸಾಹಿತ್ಯದ ಉಕ್ತಿವೈವಿಧ್ಯ ಮತ್ತು ಅರ್ಥಸಂಪತ್ತು ಕನ್ನಡದಲ್ಲೂ ರೂಪ ತಾಳಬೇಕು ಎಂದು ಆಶಿಸಿದವರು.
ಈ ರೂಪಾಂತರದಲ್ಲಿ ಅದು ಕಗ್ಗಂಟಾಗಬಾರದು. ಜನಸಾಮಾನ್ಯರಿಗೆ ತಿಳಿಯುವ ಸರಳ ಸಂವಹನ ಉಳಿಸಿಕೊಳ್ಳಬೇಕು. ಆ ಭಾವಾನುವಾದದಲ್ಲಿ ಕನ್ನಡತನ ಮೆರೆಯಬೇಕು. ಹೊಸಕವಿತೆಗಳಿಗೆ ಮೇಲ್ಪಂಕ್ತಿಯಾಗಬೇಕು. ಬಿಎಂಶ್ರೀ ಅವರ ಈ ಎಲ್ಲ ಹಂಬಲಿಕೆಯ ಫಲಶ್ರುತಿಯೇ ‘ಇಂಗ್ಲಿಷ್ ಗೀತಗಳು’.
ರಾಜಕೀಯ ಕ್ಷೇತ್ರದಂತೆಯೇ ಸಾಹಿತ್ಯ ಜಗತ್ತು ಒಂದು ಹೊಸ ಸೂರ್ಯೋದಯಕ್ಕೆ ಕಾತರಿಸುತ್ತಿದ್ದ ಕಾಲ ಅದು. ಮುನ್ನುಗ್ಗುವ ಪ್ರವೃತ್ತಿ ಇಲ್ಲದ, ಸಂಕೋಚ ಸ್ವಭಾವದವರಾದ ಬಿಎಂಶ್ರೀ ‘ಇಂಗ್ಲಿಷ್ ಗೀತಗಳು’ ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಒಮ್ಮೆಲೆ ಭಾವಾನುವಾದ ಮಾಡಿ ಕ್ರಾಂತಿಕಹಳೆ ಊದಿದವರಲ್ಲ. ಅದು ಹಂತಹಂತವಾಗಿ ಆದದ್ದು. ೧೯೧೯ರ ‘ವಿದ್ಯಾದಾಯಿನಿ’ಯಲ್ಲಿ, 1921ರ ಗ್ರಂಥಮಾಲೆಯಲ್ಲಿ, 1924ರ ‘ಕರ್ಣಾಟಕ ಜನಜೀವನ’ದಲ್ಲಿ ಬಿಡಿಬಿಡಿಯಾಗಿ ಕವಿತೆಗಳು ಪ್ರಕಟಗೊಳ್ಳುತ್ತಾ ಹೋದವು.
ನಮಗೆ ಪದವಿಯಲ್ಲಿ ಪಠ್ಯವಾಗಿದ್ದ ಇಂಗ್ಲಿಷ್ ಗೀತಗಳ ಪರಿಷ್ಕೃತ ಮುದ್ರಣ ಆವೃತ್ತಿಗೆ ತೀನಂಶ್ರೀ ಅವರ ಮುನ್ನುಡಿ ಇತ್ತು. ಅರವತ್ಮೂರು ಕವಿತೆಗಳ ಈ ಪುಟಾಣಿ ಪುಸ್ತಕಕ್ಕೆ ಮೂವತ್ತೈದು ಪುಟಗಳ ಸುದೀರ್ಘ ಮುನ್ನುಡಿ ! ಬಿಎಂಶ್ರೀ ಅವರ ಶಿಷ್ಯರಾದ ತೀನಂಶ್ರೀ ಇಷ್ಟು ವಿವರವಾದ ಪ್ರಸ್ತಾವನೆ ಬರೆಯಲು ಕಾರಣವಿದೆ. ಈ ಮುನ್ನುಡಿ ಕೃತಿಗೆ ಮಾತ್ರವಲ್ಲ. ಅಂದು ಹೊಸಮಾರ್ಗದಲ್ಲಿ ಪದ್ಯ ರಚಿಸಲಿದ್ದ ಅನೇಕರಿಗೆ ಪ್ರವೇಶದ್ವಾರದಂತಿದೆ. ಈ ಪ್ರವೇಶದ್ವಾರದಲ್ಲಿ ಹಾದು ಹೋಗಿ ದೈತ್ಯರಾಗಿ ಬೆಳೆದು ನಿಂತ ಕುವೆಂಪು 1931ರ ‘ವಿಶ್ವಕರ್ಣಾಟಕ’ ಯುಗಾದಿ ಸಂಚಿಕೆಯಲ್ಲಿ ‘ಶ್ರೀಯವರನ್ನು ನವಯುಗದ ಪ್ರವರ್ತಕರೆಂದರೆ ತಪ್ಪಾಗದು. ಅವರ ಪ್ರಭಾವವು ಗುಪ್ತಗಾಮಿನಿಯಾದ ವಾಹಿನಿಯಂತೆ ಅನೇಕ ವೃಕ್ಷಗಳಿಗೆ ನೀರೆರೆದಿದೆ’ ಎನ್ನುತ್ತಾರೆ.
ನಾನು ಓದಿದ, ಸಂಗ್ರಹಿಸಿರುವ ಸುದೀರ್ಘ ಮತ್ತು ಅತ್ಯಮೂಲ್ಯವಾದ ಮುನ್ನುಡಿ ತೀನಂಶ್ರಿ ಅವರದು. ಕನ್ನಡ ಸಾಹಿತ್ಯದ ದಿಕ್ಕುದೆಸೆಗಳು ಇಂಗ್ಲಿಷ್ ಪ್ರಭಾವದಿಂದ ಹೇಗೆ ಬದಲಾದವು ಎಂದು ತಿಳಿಯಬಯಸುವವರು, ಬಿಎಂಶ್ರೀ ಅವರ ಇಂಗ್ಲಿಷ್ ಗೀತಗಳನ್ನು ಓದಿದರಷ್ಟೇ ಸಾಲದು ; ಅವುಗಳನ್ನು ತೀನಂಶ್ರೀ ಅವರ ಮುನ್ನುಡಿಯ ಜತೆಗೇ ಓದಬೇಕು. ಆ ಕಾಲದ ಚಾರಿತ್ರಿಕ ಹಿನ್ನೆಲೆಯಲ್ಲಿ ಇದನ್ನೆಲ್ಲ ಒಟ್ಟಾರೆ ಗ್ರಹಿಸಬಹುದು. ಪ್ರಬುದ್ಧವಾದ, ಜನರಿಗೆ ಅರ್ಥವಾಗುವಂಥ ಕಾವ್ಯರಚನೆಗಳೇ ಇಲ್ಲದಿದ್ದ ಭೂಮಿಕೆಯಲ್ಲಿ ‘ಇಂಗ್ಲಿಷ್ ಗೀತಗಳು’ ಸಾವಕಾಶವಾಗಿ ಚಿಗುರೊಡೆದವು.
‘ಭಾಷಾಂತರಕಾರರು ಕೊಲೆಗಾರರು’ ಎಂಬ ಪಶ್ಚಿಮದ ಗಾದೆಯ ಎಚ್ಚರ ಬಿಎಂಶ್ರೀ ಅವರಿಗಿತ್ತು. ಒಂದು ಕಡೆ ಮೂಲದ ಆಶಯ ಕೆಡಬಾರದು. ಮತ್ತೊಂದು ಕಡೆ ಅನುವಾದ, ಕನ್ನಡದ ಜಾಯಮಾನಕ್ಕೆ ಸರಾಗವಾಗಿ ಒಗ್ಗಿಕೊಳ್ಳಬೇಕು. ಇಂಥ ಸಮನ್ವಯದ ಹಾದಿ ಗೊಡ್ಡು ಪಾಂಡಿತ್ಯದಿಂದಾಗುವುದಿಲ್ಲ. ಅನೇಕ ಜಾಗತಿಕ ವಿದ್ಯಮಾನಗಳ ನೇರ ಅನುಭವ ಕನ್ನಡಿಗರಿಗೆ ಇರಲಿಕ್ಕಿಲ್ಲ. ಅಂಥ ಅನುಭವದ್ರವ್ಯ ಉಳ್ಳ ಕವಿತೆಗಳನ್ನು ಮುಟ್ಟಿಸುವುದು ಹೇಗೆ ? ಇಷ್ಟು ವರ್ಷ ಹೇಳಿದ್ದೇ ಹೇಳುವ ಕಿಸುಬಾಯಿ ದಾಸರ ಹಾಡು ಕೇಳಿದ್ದಾಯಿತು. ಅದೇ ಹಳಸಿದ ಅಷ್ಟಾದಶ ವರ್ಣನೆಗಳು ; ಅಸಹಜ ಕಲ್ಪನೆಗಳು.
ಬಿಎಂಶ್ರೀ ಸಂಪ್ರದಾಯಕ್ಕೆ ಶರಣಾಗದೆ ಯುದ್ಧ, ದೇಶಭಕ್ತಿ, ಮರಣ, ಪ್ರಕೃತಿ ಸೌಂದರ್ಯ ಮುಂತಾದ ವಸ್ತುಗಳುಳ್ಳ, ಹೊಸ ನೋಟಗಳುಳ್ಳ ಭಾವಗೀತೆಗಳನ್ನು ಕನ್ನಡಕ್ಕೆ ತಂದರು. ಆ ವೇಳೆಗೆ ಪಾಶ್ಚಾತ್ಯ ಜಗತ್ತು ಮೊದಲ ವಿಶ್ವಯುದ್ಧದ ಕಹಿ ಉಂಡಿತ್ತು. ಅಲ್ಲಿನ ಕವಿಗಳಲ್ಲೂ ದಟ್ಟ ವಿಷಾದ ಆವರಿಸಿತ್ತು. ಇಂಥ ಅನುಭವಗಳನ್ನು ಕಾವ್ಯದ ಮೂಲಕ ಇಲ್ಲಿನವರಿಗೆ ತಲುಪಿಸುವುದು ಹೇಗೆ ಎಂಬುದು ಆಗ ಶ್ರೀಯವರಿಗಿದ್ದ ಸವಾಲು. ಎಸ್.ಜಿ. ನರಸಿಂಹಾಚಾರ್ಯ ಅವರು ಕೆಲವು ಇಂಗ್ಲಿಷ್ ಕವಿತೆಗಳನ್ನು ಅನುವಾದಿಸಿದ್ದರು. ಅವರು ನಡುಗನ್ನಡದಲ್ಲಿ ಪ್ರಚಲಿತವಾಗಿದ್ದ ಚೌಪದಿ, ಷಟ್ಪದಿ, ಸಾಂಗತ್ಯಗಳನ್ನೇ ಬಳಸಿದ್ದರು. ಇದಕ್ಕೆ ವರ್ಡ್ಸ್‌ವರ್ತ್‌ನ ‘To The Cuckoo’ ಕವಿತೆ ಸೂಕ್ತ ಉದಾಹರಣೆ. Thrice welcome, darling of the spring’ ಎಂಬುದನ್ನು ‘ಬಾರೊ ಬಸಂತದ ಕಂದ ಬಾ ಬಾ ಬಾರೊ’ ಎಂದು ಅನುವಾದಿಸಿದ್ದರು.
ಪಂಜೆ ಮಂಗೇಶರಾಯರು ‘Twinkle twinkle little star’ಮುಂತಾದವುಗಳನ್ನು ಅನುವಾದಿಸಿದ್ದರು. ಈ ಗುಂಪಿನಲ್ಲಿ ಹ. ನಾರಾಯಣರಾಯರೂ ಇದ್ದಾರೆ. ‘ಪ್ರಾಸಮುಂಡನಕ್ಕೆ ನನ್ನ ಕಿವಿ ಒಗ್ಗಲಿಲ್ಲ’ ಎಂದು ನಾರಾಯಣರಾಯರು ತಮ್ಮ ಕವಿತಾವರ್ಧನದಲ್ಲಿ ಹೇಳಿದ್ದಾರೆ. ಈ ಎಲ್ಲರಿಗೂ ಸಾಂಪ್ರದಾಯಿಕವಾದ ಆದಿಪ್ರಾಸ ಬಿಡುವುದೆಂದರೆ ತಪ್ಪು ಮಾಡುತ್ತಿದ್ದೇವೆಂಬ ಕಳವಳ. ಆದರೆ ಬಿಎಂಶ್ರೀ ದಿಟ್ಟವಾಗಿ ಹೊಸ ಹೆಜ್ಜೆ ಇಟ್ಟರು. ಇಂಗ್ಲಿಷ್ ಗೀತಗಳಲ್ಲಿ ವಸ್ತುವೂ ಹೊಸತು. ಭಾಷೆಯೂ ಹೊಸತು. ಲಯವೂ ಹೊಸತು.
ಬಿಎಂಶ್ರೀ ಅವರ ಆಯ್ಕೆಯ ಎಚ್ಚರ ಮತ್ತು ಅನುವಾದದ ಸೂಕ್ಷ್ಮತೆಗಳಿಗಾಗಿ ಕೆಲವನ್ನು ಗಮನಿಸೋಣ. ಶೇಕ್ಸ್‌ಪಿಯರ್‌ನ Under the Greenwood tree ಕವಿತೆಯನ್ನು ಅವರು ಸರಳವಾಗಿ ‘ಅಡವಿಮರದಡಿಯಲ್ಲಿ’ ಎನ್ನುತ್ತಾರೆ. ವರ್ಡ್ಸ್‌ವರ್ತ್‌ನ The Pet Lamb ಮುದ್ದಿನ ಕುರಿಮರಿ ಆಗುತ್ತದೆ. ಶೆಲ್ಲಿಯ Skylark ಬಾನಾಡಿಯಾಗುತ್ತದೆ.
ಥಾಮಸ್‌ನ Rule Britania ಆಳೌ ಬ್ರಿಟಾನಿಯಾ ಆಗುತ್ತದೆ. ಬರ್ನ್ಸ್‌ನ ಪ್ರೇಮಕವಿತೆ O my love is like a red, red rose ಎಂಬುದನ್ನು ತುಂಡರಿಸಿ ನನ್ನ ಪ್ರೇಮದ ಹುಡುಗಿ ಎನ್ನುತ್ತಾರೆ. ಬೈರನ್‌ನ Could Love for ever ಎಂಬುದನ್ನು ಕಾವ್ಯಾತ್ಮ ಹೆಚ್ಚಿಸಲು ವಸಂತಕಾಲದೊಲುಮೆ ಎನ್ನುತ್ತಾರೆ. ಅತ್ಯುತ್ತಮ ಉದಾಹರಣೆಗಳೆಂದರೆ ‘ದುಃಖಸೇತು’ ಮತ್ತು ‘ಪ್ರಾರ್ಥನೆ’ ಪದ್ಯಗಳು. ಇವು ಅನುಕ್ರಮವಾಗಿ ಹುಡ್‌ನ Bridge of Sighs ಮತ್ತು ನ್ಯೂಮನ್‌ನ Lead Kindly Light ಕವಿತೆಗಳು. ಶೀರ್ಷಿಕೆಗಳಲ್ಲಿ ಮಾತ್ರವಲ್ಲ, ಹೂರಣದಲ್ಲೂ ಸೂಕ್ಷ್ಮಗಳನ್ನು ಗಮನಿಸಬಹುದು. ವರ್ಡ್ಸ್‌ವರ್ತ್ ಕವಿಯ Written in March ಕವಿತೆಯ The Cattle are grazing, Their heads never raising. There are forty feeding like one! ಎಂಬುದನ್ನು ‘ಕೊರಳೆತ್ತಿ, ಮೈಮರೆತು ಹರಡಿದೆಳಹಸುರಾದ ಗರುಕೆಯನು ಮೇಯದೆಯೆ ಮಂದೆ ಇಹುದು’ ಎಂದು ಅನುವಾದಿಸುತ್ತಾರೆ.
ಬಿಎಂಶ್ರೀ, ವರ್ಡ್ಸ್‌ವರ್ತ್ ಕವಿಯ ಅಭಿಮಾನಿ. ರೊಮ್ಯಾಂಟಿಕ್ ಯುಗಕ್ಕೆ ಸೇರುವ ಕವಿತೆಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡಿರುವುದಕ್ಕೆ ಇದೂ ಒಂದು ಕಾರಣವಿರಬಹುದು. ರೊಮ್ಯಾಂಟಿಸಿಸಂನ ಪ್ರತಿಪಾದನೆಗಾಗಿ ಅವರು ಉತ್ಸಾಹದಲ್ಲಿ ಮೂಲದಿಂದ ದೂರ ಸರಿಯುವುದೂ ಉಂಟು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳೆರಡೂ ಭಿನ್ನಗುಂಪಿಗೆ ಸೇರಿದವುಗಳು. ಕನ್ನಡದ್ದು ಲಲಿತ, ಇಂಗ್ಲಿಷ್‌ನದು ಪೆಡಸುದಾರಿ. ಸಹಜವಾಗಿಯೇ ಅವುಗಳ ನಡಿಗೆ, ಲಾಸ್ಯ ಬೇರೆ ಬೇರೆ. ಪ್ರಾಸ, ಗಣದಲ್ಲಿ ವ್ಯತ್ಯಾಸವಾದರೆ ‘ಕಣ್ಗೆ ಕಾಲ್ಗೆ ಕೇಡು’ ಎಂಬ ಹುಸಿ ಬೆದರಿಕೆಗಳು ಇದ್ದ ಕಾಲದಲ್ಲಿ ಎರಡು ಸಂಪೂರ್ಣ ಭಿನ್ನವಾದ ಭಾಷೆಗಳ ನಡುವೆ ಸೃಜನಶೀಲ ಅನುಸಂಧಾನ ಮಾಡಿದ್ದು ಬಿಎಂಶ್ರೀ ಅವರ ಸಾಹಸ. ಇದರಿಂದ ಕಾವ್ಯಕ್ಕೆ ಹೊಸ ಹೆದ್ದಾರಿಯೊಂದು ತೆರೆದುಕೊಂಡಿತು.
ಇದಲ್ಲದೆ ಬಿಎಂಶ್ರೀ ಸ್ವತಂತ್ರ ಕವಿತೆಗಳನ್ನೂ ರಚಿಸಿದರು. ಭಾಗಶಃ ಕನ್ನಡ ಸಾಹಿತ್ಯ ಚರಿತ್ರೆಯನ್ನೂ ಬರೆದರು. ‘ಅಶ್ವತ್ಥಾಮನ್’, ‘ಗದಾಯುದ್ಧ ನಾಟಕಂ’ ಮತ್ತು ‘ಪಾರಸೀಕರು’ ಎಂಬ ರಚನೆಗಳ ಮೂಲಕ ನಾಟಕಕಾರರೂ ಆದರು. ಇವುಗಳಲ್ಲಿ ಗದಾಯುದ್ಧ ಕೃತಿಯು ರನ್ನನ ಸಾಹಸ ಭೀಮ ವಿಜಯವನ್ನು ಆಧರಿಸಿದ್ದರೆ, ಉಳಿದೆರಡು ಪಾಶ್ಚಾತ್ಯ ಮೂಲದ ನಾಟಕಗಳು. ಆದರೆ ಅವರಿಗೆ ಅಪಾರ ಹೆಸರು ತಂದುಕೊಟ್ಟದ್ದು ಇಂಗ್ಲಿಷ್ ಗೀತಗಳು ಕೃತಿ. ಇಂಗ್ಲಿಷ್ ಓದಿ, ಇಂಗ್ಲಿಷ್ ಬೋಧಿಸುತ್ತಿದ್ದ ಬಿಎಂಶ್ರೀ ಹೀಗೆ ಕನ್ನಡದ ಭಾವ ಗೀತೆಗಳ ಪ್ರಪಂಚಕ್ಕೆ ಹೊಸ ನಾಟಿ ಹಾಕಿದರು. ಹೊಸ ಪೈರು ಬೆಳೆದರು.
ಚಿರಕಾಲ ಉಳಿಯುವ ಕೆಲಸ ಮಾಡುವವರನ್ನು ಮತ್ತು ಅಂಥ ಕೆಲಸಕ್ಕೆ ಪೂರಕವಾಗಿ ನಿಲ್ಲುವವರನ್ನು ಎಚ್ಚರವಂತ ಸಮಾಜವು ನೆನಪು ಮಾಡಿಕೊಳ್ಳುತ್ತಿರಬೇಕು. ಹೀಗೆ ನೆನೆಯುವುದರಿಂದ ಮಾತ್ರ ಅವರನ್ನು ಗೌರವಿಸಿದಂತಾಗುತ್ತದೆ. ಸಮಾಜವೂ ಸುಧಾರಿಸುತ್ತದೆ. ಈಗಲೀಗ ಆಧುನಿಕರ ನೆನಪಿನಕೋಶವು ಜಾಣಮರೆವಿನ ರೋಗಕ್ಕೆ ತುತ್ತಾಗುತ್ತಿರುವುದರಿಂದ ಬೇಕಾದ್ದು ಮತ್ತು ಬೇಕಾದವರು ಮರೆತುಹೋಗುವ ಅಪಾಯವಿದೆ.
ಕವಿ ಮತ್ತು ಕಾವ್ಯ ಎಂದೂ ಬತ್ತಬಾರದ ಅಂತರ್ಜಲ. ಕಾರಣ ಇವೆರಡರೊಳಗೆ ಭಾಷೆ, ಸಂಸ್ಕೃತಿ, ಇತಿಹಾಸ, ವಿಪ್ಲವ ಮತ್ತು ನವವಸಂತಗಳು ಅಡಗಿ ಕುಳಿತಿವೆ. ಕಾವ್ಯದ ತುಣುಕೊಂದು ತನ್ನ ಕಾಲದ ಸರ್ವತ್ರವನ್ನೇ ಬಿಂಬಿಸುತ್ತದೆ. ಎಲ್ಲರ ಮಾತನ್ನು ಕವಿ ಆಡಬಯಸುತ್ತಿರುತ್ತಾನೆ. ಉತ್ತಮ ಕವಿತೆಯೊಂದು ಅಸಂಖ್ಯರ ಒಡಲಾಳದ ದನಿ ಆಗಿರುತ್ತದೆ. ಬಿಎಂಶ್ರೀ ಅಂಥ ಒಬ್ಬ ಕವಿ; ‘ಇಂಗ್ಲಿಷ್ ಗೀತಗಳು’ ಅಂಥ ಒಂದು ಕಾವ್ಯ.
ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ಬಿಎಂಶ್ರೀಯವರಷ್ಟೇ ಸಂಕೋಚ ಉಳ್ಳ ಮತ್ತು ಅಪಾರ ಪ್ರತಿಭೆಯುಳ್ಳ, ಹಿರಿಯ ಸಂಶೋಧಕ ಬಿ.ಎಸ್. ಸಣ್ಣಯ್ಯನವರಿಗೆ ಬಿಎಂಶ್ರೀ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣವಾಗಿದೆ. ಬಾಲ್ಯದ ಘಟನೆಯೊಂದು ನೆನಪಾಗುತ್ತಿದೆ. ನಾನಾಗ ಪ್ರೌಢಶಾಲೆಯ ವಿದ್ಯಾರ್ಥಿ. ಖ್ಯಾತ ಅಂಕಣಕಾರ ಬಿ. ಚಂದ್ರೇಗೌಡರೂ ನಾನೂ ಬೆಳ್ಳೂರಿನಲ್ಲಿ ನಡೆದ ಬಿಎಂಶ್ರೀ ಸ್ಮಾರಕ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ಇಬ್ಬರಿಗೂ ಬಹುಮಾನ ಬಂದಿತ್ತು.
ಆಗ ಬೆಳ್ಳೂರಿನಲ್ಲಿ ಬಿಎಂಶ್ರೀ ಹೆಸರಿನಲ್ಲಿ ಏನಾದರೊಂದು ಕಾರ್ಯಕ್ರಮಗಳು ನಡೆಯುತ್ತಿದ್ದವು. ಈಗ ಅಲ್ಲಿ ಯಾರಿಗೂ ಬಿಎಂಶ್ರೀ ಅವರ ನೆನಪೇ ಇದ್ದಂತಿಲ್ಲ. ಬೆಳ್ಳೂರಿನಲ್ಲಿ ಸ್ಥಳೀಯ ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಿರುವ ಬಿಎಂಶ್ರೀ ಭವನದ ಕಾಯಕಲ್ಪವನ್ನೂ, ಕೆಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನೂ ಪ್ರತಿಷ್ಠಾನದಿಂದ ಜನತೆ ನಿರೀಕ್ಷಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.