ADVERTISEMENT

ಚರಿತ್ರೆ ಸೃಷ್ಟಿಸಿದ ಇತಿಹಾಸ ತಜ್ಞ

ವಸು ಮಳಲಿ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST
ಚರಿತ್ರೆ ಸೃಷ್ಟಿಸಿದ ಇತಿಹಾಸ ತಜ್ಞ
ಚರಿತ್ರೆ ಸೃಷ್ಟಿಸಿದ ಇತಿಹಾಸ ತಜ್ಞ   

ಭಾರತದಲ್ಲಿ ಸಮಾಜಶಾಸ್ತ್ರ, ರಾಜ್ಯ­ಶಾಸ್ತ್ರ ವಿಷಯಗಳಲ್ಲಿ  ವಿಶೇಷ ಆಸಕ್ತಿ ಇರುವ ವಿದ್ಯಾರ್ಥಿಗಳು ದೆಹಲಿಯ ಜವಾ­ಹರ­ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆ.ಎನ್‌.­ಯು.) ಓದಬೇಕೆಂಬ ಕನಸನ್ನು ಹೊತ್ತಿ­ರು­­ತ್ತಾರೆ. ಅದ­ರಲ್ಲೂ ದೇಶದ ಚರಿತ್ರೆಯಲ್ಲಿ ಪರಿ­ಣತಿ ಪಡೆಯಬಯಸುವ ವಿದ್ಯಾರ್ಥಿಗಳ ಗಮನ ಅಲ್ಲಿನ ‘ಸೆಂಟರ್ ಫಾರ್‌ ಹಿಸ್ಟರಿ’ ಕಡೆಗಿರುತ್ತದೆ. ಆ ವಿಭಾಗ­ವನ್ನು ಕಟ್ಟಿ ಬೆಳೆಸಿದವರು ಪ್ರೊ.ಬಿಪಿನ್ ಚಂದ್ರ.

ಇವರ ಜೊತೆಗೆ ಅಲ್ಲಿದ್ದ ಮುಂಚೂಣಿಯ ಚರಿತ್ರಕಾರರಾದ ರೊಮಿಲಾ ಥಾಪರ್, ಎಸ್.­ಗೋಪಾಲ್, ಸತೀಶ್ ಚಂದ್ರ ಅವರು ಆ ವಿಭಾ­ಗಕ್ಕೆ ಮಾತ್ರವಲ್ಲ ದೇಶದ ಚರಿತ್ರೆಯ ಬರವಣಿ­ಗೆಗೂ ಮಾರ್ಗವನ್ನು ಸೂಚಿಸಿದವರು. ಮೊನ್ನೆ ಅಂದರೆ ಆಗಸ್ಟ್ 30ರಂದು ಬಿಪಿನ್ ಚಂದ್ರ ಅವರ ಮರಣದ ವಾರ್ತೆಯನ್ನು ಕೇಳಿದಾಗ ಬಹುಶಃ ದೇಶದ ಯಾವುದೇ ಭಾಗದ ಚರಿತ್ರೆಯ ವಿದ್ಯಾರ್ಥಿ­ಗಳಾದರೂ ಕೃತಜ್ಞತೆಯಿಂದ ಅವ­ರನ್ನು ನೆನೆಯದೇ ಇರಲಾರರು.

ಏಕೆಂದರೆ ಅವರು ರಚಿ­ಸಿದ ‘ಹಿಸ್ಟರಿ ಆಫ್‌ ಮಾಡರ್ನ್‌ ಇಂಡಿಯಾ’  ಎನ್‌.ಸಿ.ಇ.­ಆರ್‌.ಟಿ. ಪಠ್ಯಕ್ರಮ­ವಾ­ಗುವ ಮೂಲಕ ವಿದ್ಯಾರ್ಥಿ­ಗಳಿಗೆ ಅದನ್ನು ಓದುವ ಅವಕಾಶ ದೊರಕಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವ ಅಭ್ಯರ್ಥಿ­ಗಳಿಗಂತೂ ‘ಹಿಸ್ಟರಿ ಆಫ್‌ ಮಾಡರ್ನ್‌ ಇಂಡಿಯಾ’ ಕೈಪಿಡಿಯೇ ಆಗಿದೆ. ಚರಿತ್ರೆಯ ಪಾಠ ಮಾಡಲು ನಿಲ್ಲುವವರಿಗೆ ಬಿಪಿನ್ ಅವರ ‘ಸ್ಟ್ರಗಲ್ ಫಾರ್ ಇಂಡಿಪೆಂಡನ್ಸ್’ ಪುಸ್ತಕದ ಓದು ಅನಿವಾರ್ಯವಾಗುತ್ತದೆ.

ಇವೆಲ್ಲ ನನ್ನ ಅನುಭವವೂ ಆಗಿರುವುದರಿಂದ ಜೆ.ಎನ್‌.ಯು.ನಲ್ಲಿ ರಿಫ್ರೆಷರ್ ಕೋರ್ಸ್‌ ನೆಪ­ದಲ್ಲಿ ಒಂದು ತಿಂಗಳು ಕಳೆಯುವ ಅವಕಾಶ ಸಿಕ್ಕಾಗ ತಪ್ಪಿಸಿ­ಕೊಳ್ಳಲು ಸಾಧ್ಯವಿರಲಿಲ್ಲ. ನಾನು ದೆಹಲಿ­ಯಲ್ಲಿ ಇದ್ದ ಹೊತ್ತಿನಲ್ಲಿ ಕಾರ್ಗಿಲ್ ಯುದ್ಧ ನಡೆ­ದಿತ್ತು. ಹಾಗಾಗಿ ದೆಹಲಿಯಲ್ಲಿ ಎಲ್ಲೆಂದರಲ್ಲಿ ಸೈನ್ಯದ ತುಕಡಿಗಳಿದ್ದವು. ಎನ್‌ಡಿಎ ಸರ್ಕಾರ ಅಧಿ­ಕಾರಕ್ಕೆ ಬಂದಿತ್ತು. ಎನ್‌.ಸಿ.ಇ.­ಆರ್‌.ಟಿ. ಪಠ್ಯಕ್ರ­ಮದ ಪುನರ್‌ರಚನೆಯನ್ನು ಕೈಗೆತ್ತಿಕೊಂಡಿತ್ತು. ಹಾಗಾಗಿ ಈ ಎರಡೂ ವಿಷಯಗಳ ಚರ್ಚೆ  ವಿಶ್ವ­ವಿದ್ಯಾಲಯದಲ್ಲಿ ನಡೆದೇ ಇತ್ತು.

ದೇಶದ ಮೂಲೆ­ಮೂಲೆಯಿಂದ ಈ ವಿಚಾರವಾಗಿ ಮಾತ­ನಾಡಬಲ್ಲ ಪ್ರಾಧ್ಯಾಪಕ­ರನ್ನು ಆಹ್ವಾನಿಸಿದ್ದರಿಂದ ಪಠ್ಯಪುಸ್ತಕದ ಕೇಸರೀಕ­ರಣವನ್ನು ವಿರೋಧಿಸಿ ಅಲ್ಲಿ ಚಳವಳಿಯೇ ರೂಪು­ಗೊಂಡಿತ್ತು. ಬಿಪಿನ್ ಅವ­ರನ್ನು ಅನುಸರಿಸಿ ಬಂದ ಶಿಷ್ಯರು ಹಾಗೂ ಮುಂದೆ ಬಂದ ಜೆ.ಎನ್‌.ಯು. ಪ್ರಾಧ್ಯಾಪಕ­ರಿಂದ ಒಂದು ಆಲೋಚನಾ ಕ್ರಮವೇ ಬೆಳೆದು­ಬಂತು.

ಭಾರತ–-ಪಾಕಿಸ್ತಾನ ಯುದ್ಧದ ತಿರುಚಿದ ವ್ಯಾಖ್ಯಾನವಾ­ಗಲೀ, ಪಠ್ಯಕ್ರ­ಮದ ತಿರುಚುವಿಕೆಯ ಹುತ್ತದೊ­ಳಗಿನ ಹಾವಾ­ಗಲೀ ಕೋಮುವಾದವಲ್ಲದೆ ಬೇರೇನು? ದೇಶ­ದಲ್ಲಿ ಬೆಳೆದು ಬಂದ ಕೋಮು­ವಾದವನ್ನು ಅಕಡೆ­ಮಿಕ್ ಆಗಿ ವಿರೋಧಿಸುತ್ತಾ ಬಂದವರು ಮಾರ್ಕ್‌್ಸ­­ವಾದಿ ಚಿಂತಕರು. ಅದರ ಬಗ್ಗೆ ವಿಸ್ತಾರ­ವಾಗಿ ಬರೆದವರು ಬಿಪಿನ್ ಚಂದ್ರ. ‘ಕಮ್ಯುನ­ಲಿ­ಸಂ ಇನ್ ಮಾಡರ್ನ್‌ ಇಂಡಿಯಾ’ ಪುಸ್ತಕ, ಈ ದೇಶಕ್ಕೆ ಕೋಮುವಾದ ಹೇಗೆ ವಸಾ­ಹತು ಕೊಡು­ಗೆಯಾಗಿ ಬಂದಿದೆ ಎಂಬುದನ್ನು ತಿಳಿಸು­ತ್ತದೆ.

1857ರ ಬ್ರಿಟಿಷ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಒಂದಾಗಿ ಹೋರಾಡಿದ ಹಿಂದೂ, ಮುಸಲ್ಮಾನರು, ಬ್ರಿಟಿಷರ ಒಡೆದು ಆಳುವ ನೀತಿಯ ತಂತ್ರಕ್ಕೆ ಬಲಿಯಾಗಿ ಪರಸ್ಪರ ದ್ವೇಷದ ಭಾವನೆಯನ್ನು ಬೆಳೆಸಿಕೊಂಡದ್ದು ದೇಶದ ದುರಂತವೇ ಸರಿ. 1875ರ ಹೊತ್ತಿಗೆ ಆರ್ಯ ಸಮಾಜ, ಅದೇ ಸುಮಾರಿಗೆ ಬಂದ ಅಲೀ­ಘಡ ಚಳವಳಿಗಳು ಪರಸ್ಪರ ವಿರೋಧದ ನೆಲೆ­ಯಲ್ಲಿ ಬೆಳೆಯ­ತೊಡಗಿದವು. ಮುಂದೆ ಹಿಂದೂ ಮಹಾ­ಸಭಾ ಮತ್ತು ಮುಸ್ಲಿಂಲೀಗ್ ಹುಟ್ಟಿಗೆ ಕಾರಣ­ವಾದವು.

ನಂತರ ದೇಶವು ಬ್ರಿಟಿಷರ ನಿರೀಕ್ಷೆ­ಯನ್ನೂ ಮೀರಿದ ತಾರ್ಕಿಕ ಅಂತ್ಯ­ವನ್ನು ಕಂಡು ವಿಭಜನೆಯಲ್ಲಿ ಕೊನೆ­ಗೊಂಡಿತು. ಹಾಗೆಂದು ನಮ್ಮ ಸಮಸ್ಯೆಗಳು ಅಲ್ಲಿಗೇ ಕೊನೆಗೊಳ್ಳಲಿಲ್ಲ.  ಅದರ ಮುಂದುವ­ರಿದ ಭಾಗವಾಗಿ ಕಾಶ್ಮೀರ ನಿರಂತರವಾಗಿ ರಕ್ತ­ಸಿಕ್ತವಾಗಿದೆ. ಆಗಾಗ್ಗೆ ಮೈ ಮೇಲಿನ ಕಜ್ಜಿಯನ್ನು ಕೆರೆದು ವ್ರಣ ಮಾಡಿ­ಕೊಳ್ಳುವ ನಾಯಿಯಂತಾ­ಗಿದೆ ದೇಶದ ಸ್ಥಿತಿ. ಕಾರ್ಗಿಲ್‌ ಯುದ್ಧವೂ ಹಾಗೇ ಕೆರೆದ ಒಂದು ಗಾಯವೇ ಆಗಿತ್ತು. ಹೀಗೆ ಒಂದ­ಕ್ಕೊಂದು ಹೆಣೆ­ದು­ಕೊಂಡ ವಿಚಾರವನ್ನು ಮತ್ತು ಘಟನಾವಳಿ­ಗಳನ್ನು ಒಂದು ಕ್ರಮಕ್ಕೆ ತಂದು  ಬಿಪಿನ್  ತಮ್ಮ ವಾದದ ಸರಣಿಯನ್ನು ಮಂಡಿ­ಸು­ತ್ತಾರೆ.

ಸರ್ಕಾರಗಳು ಬದಲಾದಂತೆ ತಾವು ನಂಬಿದ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ಬದಲಿಸುತ್ತವೆ. ಅದರಲ್ಲೂ ಚರಿತ್ರೆಯ ಪುಸ್ತಕ­ಗಳ ಮೇಲೆ ಅವುಗಳ ಕಣ್ಣು ನೆಟ್ಟಿರುತ್ತದೆ. ಬ್ರಿಟಿ­ಷರು ಭಾರತದ ಚರಿತ್ರೆಯನ್ನು ಬರೆಯುವಾಗ ಅದಕ್ಕೆ ವಸಾಹತುಶಾಹಿಯ ಉದ್ದೇಶಗಳಿದ್ದವು. ತಮ್ಮ ಅಗತ್ಯಕ್ಕೆ ತಕ್ಕಂತೆ ಅವರು ಭಾರತದ ಚರಿತ್ರೆಯನ್ನು ರಚಿಸಿದರು. ಪ್ರಾಚೀನ ಕಾಲವನ್ನು ಹಿಂದೂ ಕಾಲ­ವೆನ್ನುವಾಗ ಅಥವಾ ಮಧ್ಯಕಾಲ­ವನ್ನು ಮುಸ್ಲಿಂ ಕಾಲವೆಂದು ಪಟ್ಟ ಕಟ್ಟುವಾಗ ಉದ್ದೇಶಗಳಿದ್ದವು.

ಅವರ ಹುನ್ನಾರಗಳನ್ನು ಗಮ­ನಿ­ಸದೆ, ಅವರು ಹಾಕಿ­ಕೊಟ್ಟ ಜಾಡಿನಲ್ಲೇ ಹೋದ ಭಾರತದ ರಾಷ್ಟ್ರೀಯವಾದಿ ಇತಿಹಾಸಕಾರರು ಅದಕ್ಕೆ ಮತ್ತಷ್ಟು ಗೊಬ್ಬರ, ನೀರು ಹಾಕಿದರು. ಇಂತಹ ಹೊತ್ತಿನಲ್ಲಿ ಹೊಸ ದೃಷ್ಟಿಕೋನದಿಂದ ಹೊರಟ ಮಾರ್ಕ್‌್ಸವಾದಿ ಚರಿತ್ರಕಾರರು ಆರ್ಥಿಕ ಹಾಗೂ ಸಾಮಾಜಿಕ ಪ್ರಶ್ನೆಗಳನ್ನು ಮುಂದಾಗಿಸಿಕೊಂಡು ಸಂಶೋಧನೆಯಲ್ಲಿ ತೊಡ­ಗಿ­ದರು. ಪ್ರಾಚೀನ ಭಾರತದ ಅಧ್ಯಯನ­ದಲ್ಲಿ ವಿಶೇಷ ಕುತೂಹಲ­ವನ್ನು ಹೊಂದಿದ ಡಿ.ಡಿ.ಕೊಸಾಂಬಿ ಅವರು ಹೊಸ ಸಂಶೋಧನಾ ಮಾರ್ಗವನ್ನೇ ಕಂಡು­ಕೊಂಡರೆ, ರೊಮಿಲಾ ಥಾಪರ್ ಅವರು ಆ ಜಾಡನ್ನು ಮುಂದುವರಿಸಿ­ದರು. ಆಧುನಿಕ ಭಾರತದ ಬಗ್ಗೆ ಬರೆದ ಬ್ರಿಟಿ­ಷರು ಅದನ್ನು ಗವ­ರ್ನರ್ ಜನರಲ್‌ಗಳ ಸಾಧ­ನೆಯ ಕಾಲ­ವೆಂದು ಹೇಳ­ತೊಡಗಿದರು.

ನಮ್ಮ ರಾಷ್ಟ್ರೀಯ­ವಾದಿ ಚರಿತ್ರ­ಕಾರರು ಬಹುತೇಕ ಅದೇ ಜಾಡಿ­ನಲ್ಲೇ ಮುಂದುವರಿದರು. ಅದ­ಕ್ಕೊಂದು ವಿಭಿನ್ನ ದೃಷ್ಟಿ­­ಕೋನದ ಅಗತ್ಯವಿತ್ತು. ಆ ಲೆಕ್ಕಕ್ಕೆ ರಾಷ್ಟ್ರೀಯ­­ವಾದಿಯೇ ಆಗಿದ್ದೂ, ಆರ್ಥಿಕ ಹಿನ್ನೆಲೆಯಲ್ಲಿ ವಸಾಹತು ಶೋಷಣೆಯನ್ನು ಬಹಿ­ರಂಗಗೊಳಿಸಿದ ಸಾಹಸ ದಾದಾಭಾಯಿ ನವ­ರೋಜಿ ಅವರಿಗೆ ಸಲ್ಲಬೇಕು. ವಿಭಿನ್ನ ಜಾಡನ್ನು ತುಳಿದವರಲ್ಲಿ ರಜನಿ ಪಾಲ್ಮೆ ದತ್‌ ಮತ್ತು ಆರ್.ಸಿ. ದತ್‌ ಅವರು ಮುಖ್ಯ­ರಾಗುತ್ತಾರೆ ಮತ್ತು ಆರ್ಥಿಕ ಚರಿತ್ರೆಗೆ ಬುನಾದಿ ಹಾಕುತ್ತಾರೆ. ಎ. ಆರ್. ದೇಸಾಯಿ ಅವರಿಗೆ  ಭಾರತೀಯ ನೆಲೆಯಿಂದ ಸಮರ್ಥವಾಗಿ ಚರಿತ್ರೆ ಕಟ್ಟಲು ಸಾಧ್ಯ­ವಾಗಿತ್ತು.

ಇದರ ಮುಂದುವರಿಕೆಯಾಗಿ ಕಾಣು­ವುದು ಬಿಪಿನ್ ಚಂದ್ರ ಅವರ ‘ದಿ ರೈಸ್ ಅಂಡ್ ಗ್ರೋತ್ ಆಫ್ ಎಕನಾಮಿಕ್ ನ್ಯಾಷನ­ಲಿಸಂ ಇನ್ ಇಂಡಿಯಾ’ ಹಾಗೂ ಅದಕ್ಕೆ ಪೂರ್ವ­ದಲ್ಲಿ ಬಂದ ‘ನ್ಯಾಷನಲಿಸಂ ಅಂಡ್ ಕಲೋ­ನಿಯಲಿಸಂ ಇನ್ ಮಾಡರ್ನ್‌ ಇಂಡಿಯಾ’. ರಾಷ್ಟ್ರೀಯತೆಯನ್ನು ಚರ್ಚಿಸು­ವಾಗ ಅವರ ಮೇಲೆ ಇಟಲಿಯ ದಾರ್ಶನಿಕ ಆಂಟೋನಿಯೊ ಗ್ರಾಮ್ಷಿ ಚಿಂತನೆ ಗಾಢವಾದ ಪರಿಣಾಮವನ್ನು ಬೀರಿದ್ದರೆ ಅದು ಸಹಜವೆಂದೇ ಭಾವಿಸ­ಬೇಕಾಗುತ್ತದೆ.

ವಸಾಹತುಶಾಹಿಯೊಂದಿಗೆ ಭಾರತಕ್ಕೆ ಬಂದ ರಾಷ್ಟ್ರೀಯತೆಯ ಕಲ್ಪನೆ ತನ್ನ ಇನ್ನೂರು ವರ್ಷ­ಗಳ ಬೆಳವಣಿಗೆಯಲ್ಲಿ ಹಲವು ಘಟ್ಟಗಳನ್ನು ದಾಟಿ ಬರುತ್ತದೆ. ಬ್ರಿಟಿಷ್ ವಸಾಹತುಶಾಹಿ ಭಾರತಕ್ಕೆ ಬರುವಾಗ ಅದೊಂದು ಸಿದ್ಧಾಂತವಾಗಿ­ಯೇನೂ ಇಲ್ಲಿಗೆ ಬರಲಿಲ್ಲ, ಸ್ವಾರ್ಥವೇ ಅದರ ತಳಹದಿ­ಯಾ­ಗಿತ್ತು. ವ್ಯಾಪಾರದ ಹಂತದಿಂದ ಈ ದೇಶ­ವನ್ನು ವಸಾಹತುವಾಗಿ ಮಾರ್ಪಡಿಸುವಾಗ ಪ್ರತಿ ಹೆಜ್ಜೆಯಲ್ಲೂ ತನ್ನ ತಾಯ್ನಾಡಿನ ಹಿತ ಚಿಂತ­ನೆ­ಯನ್ನು ಕಾಯ್ದುಕೊಂಡಿತ್ತು.

ಈ ನಾಡಿನ ವ್ಯಾಪಾ­ರವನ್ನು ಬ್ರಿಟಿಷರು ತಮ್ಮ ಕೈಗೆ ತೆಗೆದು­ಕೊಂಡ ಬಗೆಯಾಗಲೀ, ಅವರು ಜಾರಿಗೆ ತಂದ ಭೂ­ಸುಧಾರಣಾ ಕಾಯ್ದೆಗಳಾಗಲೀ ಎಲ್ಲವೂ ಅವರ ಒಳಿತಿಗಾಗಿಯೇ ರೂಪಿತವಾಗಿತ್ತು. ಅದ­ರಲ್ಲೂ ಭೂ ಸುಧಾರಣೆ ಎಂಬ ಆಲೋಚನೆಯೇ ಹಾಸ್ಯ­ಭರಿತವಾಗಿದೆ. ಅವರು ಜಾರಿಗೆ ತಂದ ಜಮೀನುದಾರಿ ಪದ್ಧತಿಯಾಗಲೀ, ಜಾಗೀರು­ದಾರಿ ಪದ್ಧತಿಯಾಗಲೀ ಈ ನೆಲದ ಪಸೆಯನ್ನು ಎಷ್ಟು ಸೊಗಸಾಗಿ ಹೀರಬಹುದೆಂಬುದಕ್ಕೆ ಕಂಡು­ಕೊಂಡ ಸೂತ್ರಗಳೇ ಆಗಿದ್ದವು.

ಅವು ರೈತನ ಉದ್ಧಾರಕ್ಕಾಗಿ ಜಾರಿಗೆ ಬಂದ ಆಡಳಿತ ವ್ಯವಸ್ಥೆ­ಗಳಾಗಿರಲಿಲ್ಲ. ತಮ್ಮ ಮನಸ್ಸಿಗೆ ಬಂದಂತೆ ಇಲ್ಲಿನ ಕೃಷಿಯನ್ನು ಅವರು ನಿರ್ದೇಶಿಸಿದರು. ಬೆಳೆದ ಬೆಳೆಯನ್ನು ತಮ್ಮ ದೇಶಕ್ಕೆ ಕೊಂಡೊಯ್ದರು. ಈ ನೆಲ ಹಿಂದೆಂದೂ ಕಾಣದಂತಹ ಕ್ಷಾಮಕ್ಕೆ ತುತ್ತಾ­ಯಿತು. ಬ್ರಿಟಿಷರು ಕಾಲಿಟ್ಟ ನೆಲ ಹತ್ತು ಹದಿ­ನೈದು ವರ್ಷಗಳಲ್ಲಿ ಹೆಣದ ಬಣವೆಯಾಯಿತು. ಇಡೀ ಜಗತ್ತಿಗೇ ಬಟ್ಟೆಯನ್ನು ನೇಯ್ದು ಹೊದಿ­ಸಿದ ಜನರ ಮೈಮೇಲಿನ ಬಟ್ಟೆಯನ್ನೂ ಅವರು ಕೀಳಿ­ದರು. ಯೂರೋಪ್ ಕೈಗಾರಿಕಾ ಕ್ರಾಂತಿ­ಯೆಂದು ಸಂಭ್ರಮಿಸುವ ಹೊತ್ತಿಗೆ ನಮ್ಮ ನೂಲುವ ರಾಟೆ ಮುರಿದು ಬಿದ್ದಿತ್ತು.

ನಿರ್ಗತಿಕ ಸ್ಥಿತಿ ನಮ್ಮನ್ನು ಒಂದಾಗಿಸಿತು. ಬಂಗಾಳದವ­ರಾಗಲೀ, ತಮಿಳರಾ­ಗಲೀ ಎಲ್ಲರ ಮನೆಯೂ ಸೋರಿತ್ತು. ಈ ಕಡುಕಷ್ಟ ಅವರಿಗೆಲ್ಲ  ಒಂದಾಗಿ ಹೋರಾಡು­ವು­ದನ್ನು ಕಲಿಸಿತು. ಹೀಗೆ ಎಳೆಎಳೆ­ಯಾಗಿ ವಸಾಹತು­ಶಾಹಿ­ಯನ್ನು ಬಿಚ್ಚಿಟ್ಟ ಬಿಪಿನ್  ಒಬ್ಬ ಮಾರ್ಕ್‌್ಸವಾದಿ ಎನಿಸಿಕೊಂಡರೆ ಅದು ಗೌರವವೇ ಹೊರತು ಟೀಕೆಯಲ್ಲ. ವಸಾಹತುಶಾಹಿ ವಿರೋಧ, ರಾಷ್ಟ್ರೀಯತೆ­ಯನ್ನು ಹುಟ್ಟುಹಾಕಿತು. ಅದನ್ನು ನೋಡಿ­ಕೊಂಡು ಬ್ರಿಟಿಷರು ಬಾಯಲ್ಲಿ ಬೆಟ್ಟನ್ನು ಇರಿಸಿ­ಕೊಂಡಿರಲಿಲ್ಲ. ಚೆನ್ನಾಗಿಯೇ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗಿದರು.

ನಾವೆಲ್ಲರೂ ಒಂದು ಎಂದು ಭ್ರಮಿಸಿದಂತೆ, ಅರೆಬರೆ ಚರಿ­ತ್ರೆಯ ತಿಳಿವು ನಮ್ಮಲ್ಲಿ ಕೆಲವರು ಬೇರೆ ಎನ್ನುವು­ದನ್ನೂ ಕಲಿ­ಸಿತು. ಕಲ್ಪಿತ ರಾಷ್ಟ್ರೀಯತೆ ಕಲ್ಪಿತ ಧರ್ಮವನ್ನೂ ಹುಟ್ಟುಹಾಕಿತು. ವಸಾಹತು­ಶಾಹಿ, ರಾಷ್ಟ್ರೀಯತೆ, ಕೋಮುವಾದ ಇವೆಲ್ಲಾ ಒಂದಕ್ಕೊಂದು ಹೆಣೆ­ದು­­ಕೊಂಡು ಬೆಳೆದ ವಟ­ವೃಕ್ಷಗಳೇ ಆದವು. ಇದ­ನ್ನೆಲ್ಲ ಸಮತೂಕದಲ್ಲಿ ವಿವರಿಸಬೇಕಾದರೆ  ಚರಿತ್ರೆ­ಯನ್ನು ಬರೆಯುವ ಅದರದ್ದೇ ಆದ ಕ್ರಮವೂ ಬೇಕಾಗುತ್ತದೆ. ಅದನ್ನು ದಕ್ಕಿಸಿಕೊಂಡ ಹೆಗ್ಗಳಿಕೆ ಬಿಪಿನ್‌ರಿಗೆ ಸಲ್ಲುತ್ತದೆ. ಈ ದಿಕ್ಕಿನಲ್ಲಿ ಸಂಶೋಧನೆ­ಯನ್ನು ಮಾಡಬಲ್ಲ ಅವರ ಶಿಷ್ಯ ಪಡೆ ಬೆಳೆದು ಬಂದುದನ್ನೂ ಪರಿಗಣಿಸಬೇಕಾಗುತ್ತದೆ.

ಮಾರ್ಕ್‌್ಸವಾದಿ ಚಿಂತನಾ ಕ್ರಮ ಕೆಲವೊಮ್ಮೆ ತೊಡಕಾಗಿಯೂ ಕಂಡುಬಂದಿದೆ. ನೇರವಾಗಿ ಮಾರ್ಕ್‌್ಸನ ವಿಚಾರಧಾರೆಯನ್ನೇ ಅಳವಡಿಸಿ­ಕೊ­ಳ್ಳು­ವು­ದಾಗಲೀ ಅಥವಾ ಮಾರ್ಕ್‌್ಸನ ವಿಚಾರ­ದಿಂದ ಹೊರಗುಳಿದವರನ್ನು ಪರಿಗಣಿಸದೆ ಹೋಗು­­­­­ವು­ದಾಗಲೀ ಚರಿತ್ರೆಯನ್ನು ಅಪೂರ್ಣ­ವಾ­ಗಿ­ಸುತ್ತದೆ. ಸುಮಿತ್ ಸರ್ಕಾರರು ಆಧುನಿಕ ಭಾರತದ ಚರಿತ್ರೆಯನ್ನು ಬರೆದಾಗ ಅಥವಾ ನಂಬೂ­ದರಿಪಾಡ್ ಅವರ ಸ್ವಾತಂತ್ರ್ಯ ಹೋರಾ­ಟದ ಕೃತಿಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಪಾತ್ರ ಗೌಣವಾಗಿತ್ತು. ಅದರಲ್ಲೂ ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟಕ್ಕಿಂತ ಕಾರ್ಮಿಕ ಹೋರಾಟ ಮುಖ್ಯವಾಗಿ ಕಂಡುಬಂದಿತು.

ಮಾರ್ಕ್‌್ಸ­­­ವಾದಿಗಳು ಮಾಡಿದ ಹೋರಾಟ ಮಾತ್ರ ಶ್ರೇಷ್ಠ ಎಂದು  ಭಾವಿಸದ ಬಿಪಿನ್ ತಮ್ಮ ಅಧ್ಯಯನ ಕ್ರಮವನ್ನು ‘ಓಪನ್ ಎಂಡೆಡ್’ (ಮುಕ್ತತೆ) ಎಂದು ಕರೆದುಕೊಳ್ಳುತ್ತಾರೆ. ಹಾಗಾಗಿ ರಾಷ್ಟ್ರೀಯ ಹೋರಾಟದ ವಿಸ್ತಾರ­ವಾದ ಕ್ಯಾನ್ವಾಸ್‌ನ ಮೇಲೆ ಅವರವರಿಗೆ ಸಲ್ಲಬೇಕಾದ ಸ್ಥಾನ, ಬಣ್ಣಗಳನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಗಾಂಧೀಜಿಯ ಹೋರಾ­ಟಕ್ಕೆ ಹೆಚ್ಚಿನ ಮನ್ನಣೆಯನ್ನೇ ನೀಡಿದ್ದಾರೆ. ಗಾಂಧೀಜಿ ಅವರದು ಚರಿತ್ರಕಾರರ ಕುತೂಹಲಕ್ಕೆ ಸಿಕ್ಕ ವ್ಯಕ್ತಿತ್ವ. ಅವರು ನಡೆಸಿದ ಅಸಹಕಾರ ಆಂದೋಲನ, ಕರ ನಿರಾಕರಣೆ, ಭಾರತ ಬಿಟ್ಟು ತೊಲಗಿ ಇವು ರಾಷ್ಟ್ರೀಯ ಹೋರಾಟದ ಮೈಲಿ­ಗಲ್ಲುಗಳಾಗಿವೆ.

ಜೊತೆ ಜೊತೆಯಲ್ಲೇ ಬುಡಕಟ್ಟು ಹೋರಾಟಗಳನ್ನೂ, ರೈತ ಹೋರಾಟಗಳನ್ನೂ ಮತ್ತು ಸಮಾಜ ಸುಧಾ­ರಣಾ ಚಳವಳಿಗಳನ್ನೂ ಗುರುತಿಸಲು ಸಾಧ್ಯ­ವಾಗಿದ್ದು ಭಾರತ ರಾಷ್ಟ್ರೀಯ ಹೋರಾಟ­ವನ್ನು ‘ಎಪಿಕ್’ (ಮಹಾ­ಕಾವ್ಯ) ಎನ್ನಲು ಕಾರಣ­ವಾಯಿತು. ಇಂತಹ ‘ಮಹಾಕಾವ್ಯ’­ವನ್ನು ರಚಿಸು­ವಾಗ ಬರವಣಿಗೆ­ಗಳು ಮಾತ್ರವೇ ಆಧಾರ­ಗಳಾಗಿಲ್ಲ. ದೇಶದಾ­ದ್ಯಂತ ಜನರ ನೆನಪುಗಳನ್ನು, ಅನುಭವಗಳನ್ನು ದಾಖಲಿಸ­ಲಾಯಿತು. ಆದ್ದ­ರಿಂದಲೇ ಅವರು ಅದನ್ನು ಜನರ ಚರಿತ್ರೆಯೆಂದು ಕರೆದು­ಕೊಳ್ಳು­ತ್ತಾರೆ. ಹೀಗೆ ಸಂಗ್ರಹಿಸಿದ ಧ್ವನಿಸುರುಳಿಗಳನ್ನು ನವದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿ  ಸಂಗ್ರಹಿಸಿಡ­ಲಾಗಿದೆ.

ಬಿಪಿನ್ ಅವರ ಈ ವಿದ್ವತ್‌ಪೂರ್ಣ ಸಂಶೋ­ಧ­ನೆ­ಗಳನ್ನು ಟೀಕಿಸುವವರಿಗೂ ಕೊರತೆ ಇಲ್ಲ. ಕೋಮುವಾದವನ್ನು ಕುರಿತು  ಮಾತನಾಡುವ ಹೊತ್ತಿನಲ್ಲಿ, ದೇಶದ ಸನಾತನವಾದಿಗಳನ್ನು ಅವರು ಕಟುವಾಗಿ ವಿಮರ್ಶಿಸುತ್ತಾರೆ. ಹಿಂದೂ ಮೂಲ­ಭೂತವಾದ ಮತ್ತು ಮುಸ್ಲಿಂ ಮೂಲ–ಭೂತ­ವಾದಗಳೆರಡರ ಅಪಾಯವನ್ನು ಬಿಪಿನ್ ಗಮನಿಸಿದರೂ ಹಿಂದುತ್ವವಾದಿಗಳು ಅವರನ್ನು ಗುಮಾನಿಯಿಂದಲೇ ನೋಡುತ್ತಾರೆ.
ನೆಹರೂ ಬದುಕಿನ ಭಿನ್ನ ಹಂತಗಳನ್ನು ಗುರುತಿ­ಸುತ್ತಾ, ಅವರು ಮೂಲದಲ್ಲಿ ಮಾರ್ಕ್‌್ಸವಾದಿ­ಯಾಗಿದ್ದು ನಂತರ ಗಾಂಧೀಜಿಯ ಸಹವಾಸ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ತರು­ತ್ತದೆ ಎಂದಿದ್ದಾರೆ.

ಬಂಡವಾಳಶಾಹಿಗಳೊಂದಿಗಿನ ಅವರ ಒಡನಾಟವನ್ನು ಬಿಪಿನ್ ಕಟುವಾಗಿ ಟೀಕಿಸಿದರೂ, ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ಬರೆ­ಯುವಾಗ ನೆಹರೂ ಅವರಿಗೆ ಕೊಡುವ ಆದ್ಯತೆ ಆಧುನಿಕೋತ್ತರವಾದಿಗಳ ಟೀಕೆಗೆ ಗುರಿ­ಯಾಗಿದೆ. ಈ ಎಲ್ಲ ಟೀಕೆ ಟಿಪ್ಪಣಿಗಳ ಆಚೆಗೂ ಇಡೀ ಜಗತ್ತು ಕಂಡ ಅತಿ ದೊಡ್ಡ ಜನಾಂದೋ­ಲನವಾದ ಭಾರತದ ರಾಷ್ಟ್ರೀಯ ಹೋರಾಟ­ವನ್ನು ಸಮರ್ಥವಾಗಿ ಕಟ್ಟಿಕೊಡಲು ಸಾಧ್ಯ
ವಾ­ಗಿದ್ದು ಬಿಪಿನ್ ಅವರಿಗೇ. ಆಯಾ ಕ್ಷೇತ್ರದಲ್ಲಿ ವಿದ್ವತ್‌ ಉಳ್ಳವರು ಶಾಲಾ ಪಠ್ಯಗಳನ್ನು ಬರೆಯ­ಬೇಕೆಂದು ಅವರು ಒತ್ತಾಯಿಸುತ್ತಿದ್ದರು. ತಮ್ಮ ಕಿರಿಯ ಶಿಷ್ಯರಿಂದಲೂ ಬಿಪಿನ್ ಎಂದು ಮಾತ್ರ ಕರೆಸಿಕೊಳ್ಳಲು ಅವರು ಬಯಸುತ್ತಿದ್ದರು.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT