ADVERTISEMENT

ತಿರುಳ ಬಿಟ್ಟು ಸಿಪ್ಪೆ ಮೆಲ್ಲುವ ಸಿರಿ

ವಸು ಮಳಲಿ
Published 9 ಜೂನ್ 2014, 19:30 IST
Last Updated 9 ಜೂನ್ 2014, 19:30 IST

‘ತಗ್ಗಿದವರ ಎಚ್ಚುಸಬೇಕು ಎಚ್ಚಿದವರ ತಗ್ಗುಸಬೇಕು’ ಇದು ಜನಪದರ ಸಾಲು. ಮುಂದುವರಿದು ಕೊಳ್ಳೇಗಾಲ, ಚಾಮರಾಜನಗರ, ಮೈಸೂರು ಸೀಮೆಯ ಜನಮಾನಸದಲ್ಲಿ ಮನೆಮಾಡಿರುವ ಆರಾಧ್ಯ ದೈವ ಮಂಟೇಸ್ವಾಮಿಯ ಕಾವ್ಯದ ಸಾಲು. ಪದ, ಸಾಲು ಎಂದು ಕರೆಯುವ ಈ ಹಾಡುಗಳು ಯಾವ ಕಾವ್ಯಕ್ಕೂ ಕಡಿಮೆಯಿಲ್ಲ. ಕಾವ್ಯ ಎಂದರೆ ಶಿಷ್ಟರಿಗೆ ಪ್ರಿಯವಾಗದಿರ­ಬಹುದು, ಆದರೆ ಹಾಗೆ ಅರ್ಥವಾದರೆ ಸಾಕು.

‘ಜನಪದ ಸಾಹಿತ್ಯ’. ಇದನ್ನು ಯಾರಾದರೂ ಚರಿತ್ರೆ ಅಂತ ನಂಬುತ್ತಾರ? ಓದು ಬರಹ ಗೊತ್ತಿ­ಲ್ಲದ ಜನ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ. ಅದೆಲ್ಲಾ ಜನರ ಬಾಯಿಂದ ಬಾಯಿಗೆ ಹರಡಿದ ಕಥೆಗಳು. ಹೀಗೆ ಮೂಗು ಮುರಿಯುವ ವಿದ್ವಾಂ­ಸರ ಮಾತುಗಳು ಹೊಸದೇನೂ ಅಲ್ಲ.

ಆದರೆ ಅಚ್ಚರಿ ಎನಿಸಿದ್ದು ಕರ್ನಾಟಕದಲ್ಲಿ ಜನಪದ ಸಾಹಿತ್ಯ ಕುರಿತು ಸಂಶೋಧನೆ ಆರಂಭವಾಗಿ ಅರ್ಧ ಶತಮಾನವೇ ಕಳೆದರೂ ನಮ್ಮ ಜನರ ಜೀವದನಿಗೆ ಕಿವಿಮುಚ್ಚಿದ ಶಿಷ್ಟಲೋಕ; ತನ್ನ ಭ್ರಮಾಲೋಕವನ್ನೇ ಶ್ರೇಷ್ಠವೆಂದು ಬೀಗುತ್ತದೆ. ಬರಹ ಬಾರದ ಸಮಾಜ ಕಂಡುಂಡ ಬದುಕಿನ ತುಣುಕುಗಳು ಮಾತ್ರವೇ ಓದು ಸಮಾಜದ ಆಸ್ತಿ ಎಂದು ಅವರಿಗಿನ್ನೂ ಅರಿವಾಗಿಲ್ಲ.

ಸಮುದಾಯಗಳ ಬದುಕು ಜನರ ನೆನಪು­ಗಳಲ್ಲಿ ಅಡಗಿದೆಯೇ ಹೊರತು ಬರಹದ ದಾಖಲೆಗಳಲ್ಲಿ ಅಲ್ಲ. ಅವರಾಡುವ ಭಾಷೆ, ಕಲೆ, ಕಸುಬು, ಆಚರಣೆಗಳು ಎಲ್ಲವೂ ಬದುಕಿನ ಭಾಗವಾಗಿರುತ್ತವೆ. ಅವರು ತೇಯ್ದ ಬದುಕು, ಮಾಡಿದ ಸಾಹಸ, ಅರಿತ ಅರಿವು ಕಥೆಯಾಗಿ, ಹಾಡಾಗಿ, ಲಾವಣಿಯಾಗಿ, ಪದವಾಗಿ ಹೇಳುತ್ತಾ ಸಾಗುತ್ತಾರೆ.

ಹೀಗೆ ಉಳಿದುಬಂದ ನೆನಪುಗಳು ಬರಹ ರೂಪಕ್ಕೆ ಇಳಿಯದಿದ್ದರೂ ಪೀಳಿಗೆಯಿಂದ ಪೀಳಿಗೆಗೆ ಉಳಿದು ಬಂದಿರುತ್ತವೆ. ಮೌಖಿಕವಾಗಿ ಉಳಿದ ಸಾಹಿತ್ಯವನ್ನು ವಿದ್ವತ್ ವರ್ಗ ಕಡೆಗಣಿಸುತ್ತದೆ. ಅದೇ ಬರಹ ರೂಪ­ದಲ್ಲಿ­ದ್ದರೆ ಅಪಾರ ಮನ್ನಣೆಗೆ ಒಳಗಾಗುತ್ತದೆ. ಜನಪದ ಸಾಹಿತ್ಯ ಆಧುನಿಕ ಅರ್ಥದ ಚರಿ­ತ್ರೆಯ ಪಠ್ಯಗಳಲ್ಲ, ಹಾಗಂದ ಮಾತ್ರಕ್ಕೆ ಅವು ಕಟ್ಟು ಕಥೆಗಳಲ್ಲ.

ನಮಗೆ ಅರ್ಥವಾಗದ ಭಾಷೆ­ಯನ್ನು ನಾವು ಕಟ್ಟುಕಥೆಗಳೆಂದು ಕರೆದು  ಜ್ಞಾನ ಸಂಪತ್ತನ್ನೇ ತುಚ್ಛವಾಗಿ ಕಂಡಿದ್ದೇವೆ. ಅವು ನಮ­ಗಾಗಿ ಬರೆದಿಟ್ಟ ಚರಿತ್ರೆ ಪಾಠಗಳಲ್ಲ, ಆದರೆ ಯಾವುದನ್ನು ನಾವು ಜ್ಞಾನ ಶಿಸ್ತು ಎಂದು ಭಾವಿಸಿದ್ದೇವೆಯೋ ಅದಕ್ಕೆ ತಕ್ಕಂತೆ ಅಳವಡಿಸಿ­ಕೊಳ್ಳ­ಬೇಕಾಗಿದೆ.

ಜನಪದರು  ತಾವು ಹಾಡುವ ಹಾಡುಗಳು ಓದುಗರ ಮನ್ನಣೆಗೆ ಒಳಗಾಗ­ಬೇಕೆಂದು ಬಯಸಿದವರಲ್ಲ. ಹಾಗೆ ಸಂಗ್ರಹಿಸ­ಬೇಕೆಂದು ಹೋದಾಗಲೂ ಅತಿ ಸಂಕೋಚದಿಂದ ಮುದುಡಿ ಹೋಗುತ್ತಾರೆ. ಕಾಡಿನಲ್ಲಿ ಸ್ವಚ್ಛಂದ­ವಾಗಿ ಹರಿದುಹೋಗುವ ನದಿಗೆ ಅಣೆಕಟ್ಟೆ ಹಾಕಿದಂತೆ, ಹರಿದು ಸಾಗುವ ಜನಪದರ ಬದುಕನ್ನು ಆಧುನಿಕತೆಯ ಅಣೆಕಟ್ಟೆಗಳಿಂದ ಬಂಧಿಸಿ ಆ ನೀರನ್ನು ನಮಗೆ ಬೇಕಾದ ದಿಕ್ಕಿಗೆ ತಿರುಗಿಸಿಕೊಳ್ಳುತ್ತಿದ್ದೇವೆ ಅಷ್ಟೆ.

ಕಾಲ ಒಂದಿತ್ತು. ರಾಜ ಮಹಾರಾಜರ ಬದುಕು­ಗಳೇ ಚರಿತ್ರೆ ಎನಿಸಿತ್ತು. ವಿಜಯನಗರ ಸಾಮ್ರಾಜ್ಯ ಮೆರೆದು ಬೀಗಿದ ಕಾಲ. ಆದರೆ ಹಂಪಿಯ ಜನಸಾಮಾನ್ಯರು ಆ ವೈಭವದ ಸಾಮ್ರಾಜ್ಯವನ್ನಾಗಲೀ, ಅವರು ಹೋರಾಡಿದ ಯುದ್ಧಗಳನ್ನಾಗಲೀ  ಹಾಡಿಹೊಗಳುವುದಿಲ್ಲ (ಹಂಪಿ ಜಾನಪದ; ಪುರುಷೋತ್ತಮ ಬಿಳಿ­ಮಲೆ). ಅವರ ನೆನಪುಗಳಲ್ಲಿ ರಾಯರ ನೆನಪು­ಗಳು ಉಳಿದು ಬಂದಿಲ್ಲ.

ಆ ಕಾಲಕ್ಕೂ ಹಿಂದಿನ ಕುಮಾರರಾಮ ಗಾಢವಾಗಿ ಅವರ ನಂಬಿಕೆ­ಗಳಲ್ಲಿ ಉಳಿದಿದ್ದಾನೆ. ಬೆಂಗಳೂರು ಕೆಂಪೇ­ಗೌಡ, ಮದಕರಿ ನಾಯಕ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಇವರನ್ನು ಕುರಿತು ಲಾವಣಿಗಳನ್ನು ಕಟ್ಟಿ ಹಾಡುತ್ತಾ ಬಂದಿದ್ದಾರೆ. ಆಳುವ ವರ್ಗವೇ ಆದರೂ ಜನರಿಗೆ ಹತ್ತಿರವಾಗಿ ಬದುಕಿದವರನ್ನು  ತಮ್ಮವರಾಗಿಸಿಕೊಳ್ಳುತ್ತಾರೆ.

ಆಳುವ ವರ್ಗದ ಅಹಂಗೆ ಅವರು ಮಣೆ ಹಾಕುವುದಿಲ್ಲ. ಅದೇ ಅಧಿಕಾರದ ಮಾತುಗಳು ಕಲ್ಲಿನ ಮೇಲೆ ಶಾಸನ­ಗಳಾಗಿ ವಿರಾಜಿಸುತ್ತವೆ. ಆ ಶಾಸನಗಳನ್ನು ಜೋಡಿಸಿ­ಕೊಂಡು ನಮ್ಮ ನಾಡಿನ ಚರಿತ್ರೆ ಎಂದು ನಾವು ಬರೆದುಕೊಳ್ಳುತ್ತೇವೆ. ಆಫ್ರಿಕಾ ದೇಶಗಳಲ್ಲೂ ಜನರು ಇಂದು ತಮ್ಮ ನಾಡಿನ ಚರಿತ್ರೆಯನ್ನು ಕಟ್ಟಿಕೊಳ್ಳಲು ಹೊರಟಿ­ದ್ದಾರೆ. ಅವರಾದರೂ ಮೌಖಿಕ ಪರಂಪರೆ­ಗಳನ್ನು ಆಧರಿಸಿಯೇ ಚರಿತ್ರೆ ಸಾಹಿತ್ಯ ಇತ್ಯಾದಿ­ಯನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಅವರದೇ ಆದ ಸಂಶೋಧನಾ ವಿಧಾನವನ್ನು ಕಂಡುಕೊಂಡಿ­ದ್ದಾರೆ. ಪರಂಪರೆಯಲ್ಲಿ ಬಂದ ಕಥೆಗಳ ಒಳಾರ್ಥ­­ವನ್ನು ಗ್ರಹಿಸಬಲ್ಲರು. ಅವರ ಹಲವು ಭಾಷೆಗಳಿಗೆ ಲಿಪಿಯಿಲ್ಲದ ಕಾರಣಕ್ಕೆ ಅವು ಮೌಖಿಕ­ವಾಗಿಯೇ ಉಳಿದಿವೆ ಮತ್ತು ಆ ಭಾಷೆಗಳಾಗಲೀ ಅವರ ನಂಬಿಕೆಗಳಾಗಲೀ ಇನ್ನೂ ಅಷ್ಟಾಗಿ ಕಲುಷಿತಗೊಂಡಿಲ್ಲ.

ಆದ್ದರಿಂದ ಆಫ್ರಿಕಾದ ಜನಪದವನ್ನು ಕುರಿತು ಬರೆಯುವ ಜೇನ್ ವಾನ್‌ಸೀನ್‌  ಯಾರಾದರೂ ಮೌಖಿಕ ಪರಂಪರೆಯ ಸತ್ಯಾಸತ್ಯೆಯನ್ನು ಅನುಮಾನಿಸಿ­ದರೆ ಖಾರವಾಗಿಯೇ ಉತ್ತರಿಸುತ್ತಾರೆ. ‘ನಂಬಿಕೆ ಬೇಕಾಗಿರುವುದು ವ್ಯಕ್ತಿಯ ಬಗೆಗೆ ಹೊರತು ಆಕರದ ಬಗೆಗಲ್ಲ’. ಜನಪದರು ಕಥೆಯನ್ನೋ ಹಾಡನ್ನೋ ಕಟ್ಟಿ ಹಾಡುವಾಗ ಅವರು ಯಾರನ್ನೂ ನಂಬಿಸಬೇಕಾಗಿರುವುದಿಲ್ಲ. ಅವು ಅವರ ನಂಬಿಕೆಗಳು ಮಾತ್ರವಾಗಿರುತ್ತವೆ. ಯಾರೂ ಮೆಚ್ಚಿ ಅವರಿಗೆ ಪ್ರಶಸ್ತಿಯನ್ನು ಕೊಡ­ಬೇಕಾಗಿರುವುದಿಲ್ಲ.

ಅದಕ್ಕಿಂತ ಹೆಚ್ಚಾಗಿ ತಾವು ರಚಿಸಿದ ಕಾವ್ಯವೆಂದು ಎಲ್ಲೂ ಬೀಗುವುದಿಲ್ಲ. ಅದರ ಹೆಗ್ಗಳಿಕೆಯನ್ನು ಅವರ ಸಮುದಾಯಕ್ಕೆ ನಾವಿಂದು ಸಲ್ಲಿಸಬೇಕಾಗಿದೆ. ಜನಪದ ಸಾಹಿತ್ಯವನ್ನು ಅನುಮಾನಿಸುವುದು ಆ ಸಮುದಾಯದ ಅಸ್ತಿತ್ವವನ್ನೇ ಅನುಮಾನಿಸಿ­ದಂತಾಗುತ್ತದೆ. ಕರ್ನಾಟಕದ ಮಂಟೇಸ್ವಾಮಿ ಪರಂಪರೆ ವಿದ್ವತ್ ವಲಯದ ಗಮನ ಸೆಳೆದು ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಮಂಟೇದ, ಅಲ್ಲಮ, ಸಿದ್ಧಯ್ಯ, ಖಂಡಾಯದ ಒಡೆಯ, ಪರಂಜ್ಯೋತಿ ಎಂದಿತ್ಯಾದಿಯಾಗಿ ಕರೆಸಿಕೊಳ್ಳುವ ಮಂಟೇಸ್ವಾಮಿ ತಮ್ಮ ಆಧ್ಯಾತ್ಮಿಕ ನಾಯಕನನ್ನು ದೈವೀಕರಿಸಿಕೊಂಡಿದ್ದಾರೆ. ಇಂದು ಅದೊಂದು ಪರಂಪರೆ, ಕಾವ್ಯ ಮಾತ್ರವಲ್ಲ ಆಚರಣೆ. ಈ ಕಾವ್ಯದಲ್ಲಿ ‘ನೀಲಿ’ ಪದವನ್ನು ಅಧ್ಯಾತ್ಮದ ಸೂಚಕವಾಗಿ ಬಳಸಿ ಏನನ್ನು ಹೇಳಲು ಹೊರಟಿ­ದ್ದಾರೆ?

ಎಲ್ಲೂ ಕೇಳರಿಯದ ಕಬ್ಬಿಣದ ಭಿಕ್ಷ, ಮಲೆ ಮಾದೇಶ್ವರನಿಗೆ ನೀಡುವ ಕೋರಣ್ಯ ಭಿಕ್ಷ, ಸೋಲಿಗರ ಹಾಡಿಗೆ ಸೀಗೆಕಾಯಿ ಕೇಳಲು ಹೋಗುವ ರಂಗನಾಥ ಸ್ವಾಮಿ ಇವೆಲ್ಲಾ ಹದಿನೇಳನೇ ಶತಮಾನದ ಆರ್ಥಿಕ ಸಾಮಾಜಿಕ ಚರಿತ್ರೆಯನ್ನು ಹೇಳುತ್ತವೆ. ಎಳ್ಳಿನ ಭಿಕ್ಷ, ಹಾಗೆಂದರೇನೆಂದು ತಿಳಿಯಲು ಮಹದೇಶ್ವರ ಕಾವ್ಯದ ಮೊರೆಹೋಗಬೇಕಾಗುತ್ತದೆ.

ಸಮುದಾಯಗಳು ತಮ್ಮ  ಪ್ರತಿಭಟನೆಯನ್ನು ಹಾಡಿನ ರೂಪದಲ್ಲಿ, ಕಥೆಯ ರೂಪದಲ್ಲಿ  ಹೊರ­ಹಾಕಿರುತ್ತವೆ. ವೀರಶೈವ ಚಳವಳಿಯ ನಂತರ ಲಿಂಗಧಾರಣೆ ಅರ್ಥವನ್ನು ಕಳೆದು­ಕೊಂಡಿತ್ತು ಎನ್ನುವುದನ್ನು ಸಾಹಿತ್ಯಾತ್ಮಕವಾಗಿ ಬಹು ಸೊಗಸಾಗಿ  ಮಂಟೇಸ್ವಾಮಿ ಕಾವ್ಯದಲ್ಲಿ ಕಾಣಬಹುದು.

ಕೊತ್ತಿಗಾದರು ಲಿಂಗವಂತೆ
ಕೋಳಿಗಾದರು ಲಿಂಗವಂತೆ
ಎತ್ತಿಗಾದರೂ ಲಿಂಗವಂತೆ
ಎಮ್ಮೆಗಾದರೂ ಲಿಂಗವಂತೆ
ಜಲಬಾವಿಗೆ ಲಿಂಗವಂತೆ
ಸೇದುವ ಹಗ್ಗಕ್ಕೆ ಲಿಂಗವಂತೆ
ಸೇದುವಾತನಿಗೆ ಲಿಂಗವಂತೆ


ಇಂತಹ ದಿಟ್ಟ ವಿಮರ್ಶೆ ಮಾಡುವಾಗ ಆ ಜನಪದ ಕವಿಗಳ ವೈಚಾರಿಕತೆಯನ್ನು ಗಮನಿ­ಸಲೇ ಬೇಕಾಗುತ್ತದೆ. ಕಳೆದು ಹೋದ ವಚನ­ಕಾರರ ವೈಚಾರಿಕತೆಯನ್ನು ಪ್ರಶ್ನೆ ಮಾಡುವ ಈ ಸಾಲುಗಳು ಮಹತ್ವದ್ದಾಗುತ್ತವೆ. ಹೌದು ನಮಗಿಂದು ಬೇಕಾಗಿರುವುದು ಸಮು­ದಾ­ಯದ ಚರಿತ್ರೆ. ಅದು ಆಯಾ ಸಮುದಾ­ಯದ ನೆನಪಿನಲ್ಲಿ ಉಳಿದಿವೆ.

ಆದ್ದರಿಂದ  ಶಾಸನಗಳ ಸಾಲನ್ನು ಸೇರದ ಸಮುದಾಯಗಳು ತಮ್ಮ ಚರಿತ್ರೆಯನ್ನು ತಮ್ಮ ಬಳಿಯೇ ಉಳಿಸಿ­ಕೊಂಡಿವೆ. ಉದಾಹರಣೆಗೆ ಸೋಲಿಗರ ಬದುಕಿನ ವಿಚಾರಗಳು ಅವರು ಹಾಡುವ ಗೋರುಖಾನ, ಬಿಳಿಗಿರಿ ರಂಗನ ಪದ ಇಲ್ಲವೇ ಮಲೆಮಾದಪ್ಪನ ಸಾಲುಗಳಲ್ಲಿ ಸೇರಿವೆ. ಇದೇ ಪ್ರದೇಶದಲ್ಲಿ ವಾಸಿಸಿದ ಸೋಲಿಗರು, ಇರುಳಿಗರು, ಎರವರು ರಾಜ್ಯಗಳ ಮೇರೆಯನ್ನು ಮೀರಿದವರು. ಇವರೆಲ್ಲ­ರಿಗೂ ಅವರದೇ ಆದ ಚರಿತ್ರೆಗಳಿವೆ ಎಂಬುದನ್ನು ಮರೆತೇ ಬಿಟ್ಟಿದ್ದೇವೆ.

ಒಂದು ಕಡೆ ಜನಪದ ಸಾಹಿತ್ಯವನ್ನು ಆರಾಧಿ­ಸುವ ಜನಪದ ವಿದ್ವಾಂಸರು ಕಾಣಬಂದರೆ, ಅದೊಂದು ಬಡವರ, ಹಳ್ಳಿಗರ ಕ್ಷುಲ್ಲಕ ವಿಚಾರ­ವೆಂಬಂತೆ ಅಸಡ್ಡೆ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಜನಪದ ಸಾಹಿತ್ಯದಲ್ಲಿ ಮೂಲ­ಭೂತ­ವಾಗಿ ಅರಿಯ ಬೇಕಾಗಿರುವುದು ಅವರ ಆಶಯಗಳನ್ನು. ಅದಲ್ಲದೆ ಪದದ ಅರ್ಥವನ್ನು ಮಾತ್ರ ಬಗೆದು ತಪ್ಪಾಗಿ ಗ್ರಹಿಸುವುದರಿಂದ ಅದು ನೀರಸವಾಗಿ ಕಾಣುತ್ತದೆ.

ಜಗತ್ತಿನಾದ್ಯಂತ ಜನಪದ ಸಾಹಿತ್ಯದಲ್ಲಿ ಹುಟ್ಟಿನ ಸುತ್ತಲ ಕಥೆಗಳು ಕೇಳಿಬರುತ್ತವೆ. ಹಾವು, ಗೂಳಿ, ಆನೆ, ಹೋರಿ, ಕುದುರೆ, ಕೋಣ ಇಂತಹ ಯಾವುದಾದರೊಂದು ಪ್ರಾಣಿಯ ಆಶೀರ್ವಾದದಿಂದ ಮಹಾ ವ್ಯಕ್ತಿಗಳು ಹುಟ್ಟು­ತ್ತಾರೆ. ಇವನ್ನು ಕಥೆಗಳಾಗಿ ಮಾತ್ರ ಕೈ ಬಿಡ­ಲಾಗು­ತ್ತದೆ. ಸಾಮಾನ್ಯವಾಗಿ ಇವೆಲ್ಲಾ ಫಲ­ವತ್ತತೆಯ ಸಂಕೇತಗಳೆಂದು ಸಾರ್ವತ್ರಿಕವಾದ ಅರ್ಥವನ್ನು ಕೊಟ್ಟುಕೊಳ್ಳಲಾಗುತ್ತದೆ.

ಇನ್ನೂ ಒಂದು ಹೆಜ್ಜೆ ಮುಂದುವರೆದು ಜನಪದ ಆಶಯವನ್ನು ಅರಿತುಕೊಳ್ಳಬೇಕಾಗುತ್ತದೆ. ಹುಟ್ಟಿಗೆ ಕಾರಣವಾದ ವ್ಯಕ್ತಿಯ ಹೆಸರನ್ನು ಮುಚ್ಚಿಟ್ಟು ಅದನ್ನು ಸಾಂಕೇತಿಕ ಭಾಷೆಯಲ್ಲಿ ಹೇಳಲು ಕಾರಣವೇನು? ಭಾರತದ ಜಾತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ, ಸಂಬಂಧಗಳ ಸುತ್ತಾ ಹೆಣೆದುಕೊಳ್ಳುವ ಮೌಲ್ಯಗಳ ಪ್ರಶ್ನೆಯಿಂದಾಗಿ  ಹುಟ್ಟನ್ನು ಬಯಲು ಮಾಡಲು ಸಾಧ್ಯವಾಗಿರು­ವು­ದಿಲ್ಲ.

ಹುಟ್ಟಿನ ಕಾರಣ ಅಸಹಜವಾಗಿದ್ದರೆ ಅಲ್ಲಿ ಸಂಕೇತಗಳನ್ನು ಬಳಸಿ ತಮ್ಮ ನೋವು ನಲಿವನ್ನು ಹೇಳಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಳಸಮುದಾಯದ ಹೆಣ್ಣು ಮಕ್ಕಳು ಭೂ­ಮಾಲೀ­ಕರ ಹೊಲಗಳಲ್ಲಿ ದುಡಿಯುವ ಹೆಣ್ಣು­ಗಳಾಗಿರುತ್ತಾರೆ. ನಿರಂತರ ಶೋಷಣೆಗೆ ತೆರೆದು­ಕೊಂಡ ವರ್ಗವಾಗಿರುತ್ತದೆ. 

ಉಳ್ಳವರು ತಮ್ಮ ಸಾಮಾಜಿಕ ಹಕ್ಕೇನೋ ಎನ್ನುವಂತೆ ನಡೆದು­ಕೊಂಡರೆ ಅದಕ್ಕೆ ಪ್ರತಿರೋಧವನ್ನು ಒಡ್ಡಲೂ ಸಾಧ್ಯವಾಗುವುದಿಲ್ಲ. ಮೇಲ್ವರ್ಗದ ಸಮಾಜದ ಹೆಣ್ಣು ಮಕ್ಕಳು ಹಲವು ಕಾರಣಗಳಿಗೆ ತಳಸಮು­ದಾಯದ ಪುರುಷರಿಗೆ ಆಕರ್ಷಿತರಾಗುತ್ತಾರೆ. ಜಾತಿ ಸಮಾಜದ ನಿರ್ಬಂಧಗಳು ನಿರಂತರವಾಗಿ ಅದನ್ನು ಮೀರುತ್ತಲೂ, ಮುರಿಯುತ್ತಲೂ ಇರು­ತ್ತವೆ.

ಸಮಾಜ ವರ್ಣಸಂಕರವನ್ನು ತಹಬಂದಿ­ಯಲ್ಲಿರಿಸಿಕೊಳ್ಳಲು ಗುರುತರವಾದ ಶಿಕ್ಷೆಗೊಳ­ಪಡಿಸುವ ಯತ್ನಗಳು ಅಲ್ಲಲ್ಲಿ ನಡೆದೇ ಇರುತ್ತವೆ. ಅದೇ ಸಂದರ್ಭದಲ್ಲಿ ಕಟ್ಟುಕಟ್ಟಲೆಗಳನ್ನು ಮೀರಿದ ಹುಟ್ಟಿಗೊಂದು ದೈವಿಕತೆಯನ್ನು ಆರೋಪಿಸಿ ತಮ್ಮ ಹೆಣ್ಣುಮಕ್ಕಳನ್ನು ಕಾಪಾಡಿ­ಕೊಳ್ಳುವ ಪ್ರಯತ್ನವೂ ನಡೆದೇ ಇರುತ್ತದೆ. ಅಂತಹ ಎಡೆಗಳಲ್ಲಿ ಫಲವತ್ತತೆಯ ಸಂಕೇತಗಳ ಪರಿಭಾಷೆ ಅವರ ನೆರವಿಗೆ ಬರುತ್ತದೆ.

ಆ ಸಂಕೇತಗಳಲ್ಲಿ ಪ್ರಾಣಿಯನ್ನು ಸೂಚಿಸುವಾಗ ಅವು ಶಕ್ತಿಯ, ಇಲ್ಲವೆ ಆಳುವ ವರ್ಗದ ಸಂಕೇತಗಳನ್ನು ಸೂಚಿಸುವುದಿದೆ. ಉದಾಹರ­ಣೆಗೆ ಬಿಳಿಯ ಕುದುರೆ, ಆನೆ ಇತ್ಯಾದಿ. ಬಹುಶಃ ಹೇಳಿಕೊಳ್ಳಲಾಗದ, ಹುಟ್ಟಿಗೆ ಕಾರಣವಾದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿಡುತ್ತಲೇ ಸೂಚ್ಯವಾಗಿ ಬಹಿರಂಗಪಡಿಸುವ ಪ್ರಯತ್ನವೂ ನಡೆದಿರುತ್ತದೆ.

ಇಂತಹ ಕಥೆಗಳು ಪ್ರಮುಖ ವ್ಯಕ್ತಿಗಳ ಹುಟ್ಟಿ­ನಲ್ಲೂ ಕಾಣಬರುತ್ತವೆ. ಗೌತಮ ಬುದ್ಧ ತಾಯಿ ಮಾಯಾದೇವಿಯ ಸೊಂಟದಿಂದ ಹುಟ್ಟಿ­ಬಂದರೆ, ಕಾಡುಗೊಲ್ಲರ ಜುಂಜಪ್ಪನ ಕಾವ್ಯದಲ್ಲಿ ಜುಂಜಪ್ಪ ತಾಯಿಯ ಬೆನ್ನನ್ನು ಸೀಳಿಕೊಂಡು ಹುಟ್ಟಿಬರುತ್ತಾನೆ. ತಾವು ಆರಾಧಿಸುವ ನಾಯ­ಕರು ಸಾಮಾನ್ಯರಂತೆ ಹುಟ್ಟಲಿಲ್ಲ ಎಂದು ಹೇಳು­ವುದು ಅವರ ಆಶಯವಾಗಿರುತ್ತದೆ.

ಮಲೆ­ಮಾದ­ಪ್ಪನ ಕಾವ್ಯದಲ್ಲಿ ಸಂಕವ್ವೆ ಮಾದಪ್ಪನ ಆಶೀರ್ವಾದದಿಂದ ಮಕ್ಕಳನ್ನು ಹೆರುತ್ತಾಳೆ. ಆ ಪವಾಡವನ್ನು ಜನ ಬಯಸುತ್ತಾರೆ. ಅಲ್ಲಿ ತಾರ್ಕಿಕವಾದ ಅರ್ಥವನ್ನು ಹುಡುಕಿ ಜನಪದರ ಭಾವನೆಗಳಿಗೆ ಬರೆಹಾಕಲಾಗದು. ಹುಟ್ಟು ಮತ್ತು ವರ್ಣಸಂಕರದ ಸುತ್ತ ಹೆಣೆದು­ಕೊಂಡ ಆಚರಣೆ ಮಾರಿ ಮತ್ತು ಕೋಣನ ಬಲಿದಾನ.

ನಾಡಿನಾದ್ಯಂತ ಆಚರಣೆ­ಯಲ್ಲಿರುವ ಈ ಕಥೆ ವಿಸ್ತಾರವಾದ ಜನಸ್ತೋ­ಮದ ರೂಢಿ ಪರಂಪರೆಯಲ್ಲಿ ಸೇರಿಹೋಗಿದೆ. ಭಾರತದ ಸಾಂಸ್ಕೃತಿಕ ರಾಜಕಾರಣದ ಒಳಹರಿವು ಸುಲಭವಾಗಿ ಅಳಿಸಲಾಗದು ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ಈ ಯಾವುದನ್ನೂ ಗಮನಿಸದ ಭಾರತದ ಸಾಂಸ್ಕೃತಿಕ ಚರಿತ್ರೆ ತಿರುಳನ್ನು ಬಿಟ್ಟು ಸಿಪ್ಪೆಯನ್ನು ಉಣಬಡಿಸಿ­ದಂತಾಗುತ್ತದೆ. 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.