ADVERTISEMENT

ತೃತೀಯ ಲಿಂಗಿಗಳನ್ನು ಗೌರವಿಸೋಣ

ವಸು ಮಳಲಿ
Published 7 ಜುಲೈ 2014, 19:30 IST
Last Updated 7 ಜುಲೈ 2014, 19:30 IST

ವಿಚಾರ ಕಮ್ಮಟವೊಂದರಿಂದ ಹೊರ­ಬರು­ತ್ತಿದ್ದ ಗುಂಪು ತನ್ನದೇ ಲೋಕದಲ್ಲಿ ಮುಳುಗಿ ಹೋಗಿತ್ತು. ಪರಸ್ಪರ ‘ಏನೇ ಹುಡುಗ, ಏನೋ ಹುಡುಗಿ’ ಎಂದು ಗೇಲಿ ಮಾಡಿ­ಕೊಳ್ಳುತ್ತಾ ಬರುತ್ತಿರುವುದನ್ನು ನೋಡಿದರೆ  ಮತ್ತೊಮ್ಮೆ ಅವರ ಕಡೆ ಕಣ್ಣು ಹಾಯದೇ ಇರಲು ಸಾಧ್ಯವಿರಲಿಲ್ಲ. ಸ್ವಲ್ಪ ಹೆಚ್ಚೇ ಎನಿಸುವ ಲಾಸ್ಯ, ಬಾಗು–ಬಳುಕು ಅಲ್ಲಿ ತುಳುಕುತ್ತಿತ್ತು. ನೋಡಲು ಗಂಡಾದರೂ ಹೆಣ್ಣಿನ ಹಾವ–ಭಾವ, ಹೆಣ್ಣಾಗಿ ಕಂಡರೂ ಅಸಹಜವೆನಿಸುವ ಪುರುಷ ಧ್ವನಿ-. ಕ್ಷಮಿಸಿ, ಹೆಣ್ಣು ಹಾಗೂ ಗಂಡು ಎಂದರೆ ಹೀಗೇ ಇರುತ್ತಾರೆ ಎಂಬ ಸಾಮಾಜಿಕ ಮಾದರಿ­ಗಳು ನನಗೂ ಅಸಹಜವೆನ್ನುವಂತೆ ಮಾಡಿವೆ. ನಮ್ಮ ಸಮಸ್ಯೆಗಳ ಮೂಲವಿರುವುದೇ ಇಲ್ಲಿ.

ಅದು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರ. ಬೆಂಗಳೂರಿನಲ್ಲಿ ಮುಖ್ಯವಾಗಿ ‘ಸಂಗಮ’ ಮತ್ತು ‘ಅನೇಕ’ ಸ್ವಯಂ ಸೇವಾ ಸಂಸ್ಥೆಗಳು  ಲೈಂಗಿಕ ಅಲ್ಪಸಂಖ್ಯಾತರಿಗಾಗಿ ದುಡಿಯುತ್ತಿವೆ. ನಾನು ಕೆಲವು ವೈಚಾರಿಕ ವಿಷಯಗಳನ್ನು ‘ಅನೇಕ’ದಲ್ಲಿ ಅವರೊಡನೆ ಹಂಚಿಕೊಳ್ಳಬೇಕಾಗಿತ್ತು. ಕಮ್ಮಟದಿಂದ ಹೊರ­ನಡೆದಾಗ ನನಗೆ ಅರ್ಥವಾಗಿದ್ದು ನಾನು ಅವ­ರಿಂದ ಕಲಿಯಬೇಕಾದದ್ದು ಬಹಳವೇ ಇತ್ತು, ಬಹುಶಃ ನಾನು ಅವರಿಗೆ ಕಲಿಸಬೇಕಾದದ್ದು ಏನೂ ಇರಲಿಲ್ಲ. ಅವರದ್ದು ಅತ್ಯಂತ ಮಾನ­ವೀಯವಾದ ನಡವಳಿಕೆ.

ಗಂಡೆಂಬ ಅಹಂಕಾರವಿರಲಿ, ಹೆಣ್ಣಾದ ಕಾರಣಕ್ಕೂ ಬೀಗುವ ದರ್ಪ ಅರೆ ಗಳಿಗೆ ಹೆಣ್ತನ­ವನ್ನು ಕಳೆದುಕೊಳ್ಳುವ ಭಾವದಲ್ಲಿ ಅಡಗಿತ್ತು. ನಾನು ಹೆಣ್ಣಾದ ಕಾರಣಕ್ಕೂ ನನ್ನೊಳಗೊಂದು  ಅಹಂ ಇದೆಯೆಂದು ಮೊದಲ ಬಾರಿಗೆ ಅರಿವಾಗಿತ್ತು.
ಹತ್ತಾರು ಪ್ರಶ್ನೆಗಳು ಮನಸ್ಸಿಗೆ ಬಂದು ಹೋಗಿದ್ದು ಬಹಳ ಸಹಜವಾಗಿತ್ತು. ಹೆಣ್ಣಾಗಿ ಹುಟ್ಟಿ ಆನಂತರದಲ್ಲಿ ಗಂಡಾದವರು, ಗಂಡಾಗಿ ಹುಟ್ಟಿ ಆ ನಂತರದಲ್ಲಿ ಹೆಣ್ಣಾದವರು ಅಲ್ಲಿ­ದ್ದರು. ಹೀಗೆ ರೂಪಾಂತರಗೊಳ್ಳುವ ಒತ್ತಡವೂ ಪ್ರಕೃತಿ­ದತ್ತವಾಗಿರುತ್ತದೆ. ಸ್ವೀಕರಿಸಿದ ಹೊಸ ಭಾವಕ್ಕೆ ತಕ್ಕಂತೆ ದೇಹವೂ ಪೂರ್ಣವಾಗಿ ಮಾರ್ಪಾಡಾಗುವುದಿಲ್ಲ. ಆದ್ದರಿಂದ ಅದಕ್ಕೆ ತಕ್ಕಂತೆ ಅಂಗ ಪರಿವರ್ತನೆಯನ್ನು ಮಾಡಿಕೊಳ್ಳು­ವುದು ಅನಿವಾರ್ಯವಾಗುತ್ತದೆ.

ಆದರಿದು ದೈಹಿಕ ವಿಚಾರ ಮಾತ್ರವಲ್ಲ. ಹುಡುಗನೊಬ್ಬ ಹರೆ­ಯಕ್ಕೆ ಬಂದಾಗ ಹೆಣ್ಣಿನಂತೆ ಕಾಣ­ತೊಡ­ಗಿದರೆ ಅವನು ಮಾನಸಿಕವಾಗಿ ಜರ್ಜರಿತ­ನಾಗುತ್ತಾನೆ. ಈವರೆಗೆ ಹೀಗಾಗುವ ಪ್ರಕ್ರಿಯೆ ಅವರು  ಸಮಾಜದಿಂದ ದೂರ ಉಳಿಯುವಂತೆ  ಮಾಡಿತ್ತು. ಆದರೆ ಅದಕ್ಕಾಗಿ ಬರುವ  ಒಂದು ಕಾನೂನು, ಸಮಾಜದಲ್ಲಿ ಕೆಲವು ಹಂತ­ಕ್ಕಾ­ದರೂ ಅವರ ರಕ್ಷಣೆ ಮಾಡಬಲ್ಲದು. ಭಾರತ, ಮೂರನೆ ಲಿಂಗ (ಥರ್ಡ ಜಂಡರ್) ಎಂದು ಕಾನೂನು ರೀತ್ಯ ಪರಿಗಣಿಸಿದ ರಾಷ್ಟ್ರ­ವೆಂಬ ಹೆಗ್ಗಳಿಕೆಯನ್ನು ಪಡೆಯುತ್ತದೆ. ಈ ವರ್ಷದ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿ­­ನಲ್ಲಿ ಈ ಅಂಶವನ್ನು ಎತ್ತಿಹಿಡಿದಿದೆ. ಚುನಾ­ವಣೆಯ ಅಬ್ಬರದಲ್ಲಿ ತೀರ್ಪನ್ನು ಬೆಂಬ­ಲಿಸುವ ಸೌಜನ್ಯವನ್ನು ಮರೆತಿದ್ದೇವೆ. ಈವರೆಗೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅವರ ಪರವಾದ ಮಾನವ ಹಕ್ಕು ಹೋರಾಟಗರರು, ಆಮ್‌ನೆಸ್ಟಿ ಇಂಟರ್‌ನ್ಯಾಷನಲ್ ನಡೆಸಿದ ನಿರಂತರ­ವಾದ ಮತ್ತು ದೀರ್ಘವಾದ ಹೋರಾ­ಟದ ಫಲವಾಗಿ ಈ ತೀರ್ಪು ಹೊರಬಂದಿದೆ.

ಕಳೆದ ಎರಡು ವರ್ಷಗಳಲ್ಲಿ  ಜಗತ್ತಿನ ಹಲವು ರಾಷ್ಟ್ರಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಪೂರಕ­ವಾದ ಕಾನೂನು, ಕಾಯಿದೆಗಳನ್ನು ತಂದಿವೆ. ಜಗತ್ತು ಭಿನ್ನತೆಯನ್ನು ಒಪ್ಪಿಕೊಳ್ಳಲು,  ಹೊಸ ಚಹರೆಗಳನ್ನು ಗೌರವಿಸಲು ಇಷ್ಟು ದೀರ್ಘಕಾಲ ನರಳಬೇಕಾಯಿತು. ಅದನ್ನು ಜಾರಿಗೊಳಿಸಲು ಪೂರಕವಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿ­ಕೊಳ್ಳ­ಬೇಕಾಗುತ್ತದೆ. ಮೂಲಭೂತವಾಗಿ ಅವರಿಗೆ ದೊರೆಯಬೇಕಾದ ವೈದ್ಯಕೀಯ ನೆರವು, ಗುಪ್ತವಾಗಿ ನಡೆಯುತ್ತಿದ್ದ ಶಸ್ತ್ರಚಿಕಿತ್ಸೆಯನ್ನು ಪರಿಣತ ವೈದ್ಯರು ಅಧಿಕೃತವಾಗಿ ಮಾಡ­ಬಹು­ದಾಗಿದೆ. ಅವರ ಬದಲಾದ ಲಿಂಗಕ್ಕೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯ­ವನ್ನು ಅವರು ಬಳಸಬಹುದು.

ಕಳೆದ ಎರಡು ವರ್ಷಗಳಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಕೊಟ್ಟು ಅವರ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟುದು ಅಭಿ­ನಂದ­ನೀಯವಾದುದು. ಹಾಗೆ ಬಂದ ವಿದ್ಯಾರ್ಥಿ­ಗಳ ಮುಖದಲ್ಲಿ ಖಿನ್ನತೆ, ಹಿಂಜರಿಕೆ ಮನೆ­ಮಾಡಿ­ರುತ್ತದೆ. ಮುಕ್ತವಾಗಿ ಬೆರೆಯಲು, ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪ್ರತಿಭೆಯನ್ನು ಮೆರೆಯಲು ಸಮಾಜ ಮತ್ತಷ್ಟು ಪೂರಕವಾದ ವಾತಾವರಣ­ವನ್ನು ಒದಗಿಸಬೇಕಾಗುತ್ತದೆ.

ಓದು ಮುಗಿಸಿದ ವಿದ್ಯಾರ್ಥಿಗಳು  ಸಂಶೋ­ಧನೆ, ಉದ್ಯೋಗ, ಮದುವೆ, ಸ್ಪರ್ಧಾ­ತ್ಮಕ ಪರೀಕ್ಷೆ, ಹೀಗೆ ಯಾವುದೋ ಸಮಸ್ಯೆಗಾಗಿ ನನ್ನನ್ನು ಮತ್ತೆ ಮತ್ತೆ ಹುಡುಕಿಕೊಂಡು ಬರು­ತ್ತಿರು­ತ್ತಾರೆ. ಆದರೆ ಅಂದು ಮನೆಗೆ ಹುಡುಕಿ­ಕೊಂಡು ಬಂದ ‘ಸುಮತಿ’ಗೆ ಅದಾವ ಕಾರಣವೂ ಇರಲಿಲ್ಲ. ಏನೋ ವಿಚಾರವನ್ನು ಹೇಳಿಕೊಳ್ಳ­ಲಾಗದೆ ಪರದಾಡುತ್ತಿದ್ದಳು. ಒಂದೇ ಸಮನೆ ಕಣ್ಣೀರಿಡು­ತ್ತಿದ್ದಳು. ಮೈಕೈ ತುಂಬಿಕೊಂಡು ಬೆಳೆದ ಸುಂದರ ಹುಡುಗಿ, ಅತಿ ವಿನಯವಂತೆ, ನನ್ನ ಮೆಚ್ಚಿನ ಶಿಷ್ಯರಲ್ಲಿ ಆಕೆಯೂ ಒಬ್ಬಳು. ಸಣ್ಣ ಸರ್ಕಾರಿ ನೌಕರಿಯಲ್ಲಿರುವ ತಂದೆ ಜೊತೆಗೆ ತಮ್ಮ, ತಂಗಿ. ಅವಳ ಮೆಡಿಕಲ್ ಫೈಲನ್ನು ನನಗಿಟ್ಟಾಗ ನನಗೆ ಗಾಬರಿಯೇ ಆಗಿತ್ತು. ವೈದ್ಯಕೀಯ ವರದಿಯ ಕಡೆಯಲ್ಲಿ ಇಂಗ್ಲಿಷ್‌ನಲ್ಲಿ ‘ಥರ್ಡ್‌ ಜೆಂಡರ್’ ಎಂದು ನಮೂದಿಸಿತ್ತು. ಈಗ ಅವಳು ಅವನಾಗಿದ್ದಾಳೆ. ಅದನ್ನು ನಿಭಾಯಿಸು­ವು­ದಾದರೂ ಹೇಗೆ? ಇದು  ಅವಳ ತಂದೆ ತಾಯಿಗೆ ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಾಗದಂತೆ ಕಾಲ ತಳ್ಳಿದ್ದಾಳೆ. ಹೆಣ್ಣು ಮಕ್ಕಳ ಹಾಸ್ಟೆಲ್‌ನಲ್ಲಿ ಒಂಟಿಯಾಗಿ ಉಳಿಯುತ್ತಾ ಬಂದಿ­ದ್ದಾಳೆ. ಯಾವ ದಾಖಲೆಗಳಲ್ಲೂ ಅವಳ ಬದಲಾದ ಲಿಂಗದ ಮಾಹಿತಿ ಇಲ್ಲದೆ ಇರು­ವುದರಿಂದ ಮತ್ತು ಮುಖಲಕ್ಷಣ ಹೆಚ್ಚು ಬದ­ಲಾವಣೆಯನ್ನು ಹೊಂದದೆ ಇದ್ದುದರಿಂದ ಅಷ್ಟು ಸುಲಭ­ವಾಗಿ ಯಾರೂ ಅವಳನ್ನು ಪತ್ತೆ ಹಚ್ಚಿರ­ಲಿಲ್ಲ. ಅವಳ ಅಂತರಂಗದ ಭಾವನೆಗಳು ಬೇರೆ­ಯಾಗಿವೆ. ಹೆಣ್ಣಿನಂತೆ ಬಟ್ಟೆ ಹಾಕುವುದು ಅವಳಿಗೆ ಬೇಡವಾಗಿದೆ. ಮನೆ ವಾತಾವರಣ ಕದಡಿಹೋಗಿದೆ. ಇಂತಹ ಸಂದರ್ಭಗಳಲ್ಲಿ  ಮನೆಯವರ ಕಾಟದಿಂದ ರೋಸಿ ಬೀದಿಗೆ ಬೀಳು­ವುದು ಸಾಮಾನ್ಯವಾಗಿರುತ್ತದೆ. ಮನೆಯವರು ಉಳಿದ ಮಕ್ಕಳ ಭವಿಷ್ಯ ಮುಂದಿಟ್ಟು  ಕೊಂಡು ಇವರಿಂದ ಜಾರಿಕೊಳ್ಳಲು ಬಯಸುತ್ತಾರೆ.

ಸಮಾಜದಲ್ಲಿ ಅವರನ್ನು ಅರಸಿ ಬರುವ ಕಾಯಕವೆಂದರೆ ಲೈಂಗಿಕ ಸೇವೆ. ಆ ವೃತ್ತಿ ಅವಳ ಆಯ್ಕೆಯಲ್ಲ. ಆದರೆ ತನ್ನನ್ನು ಟ್ರಾನ್ಸ್‌ ಜೆಂಡರ್ ಎಂದರೆ ಕೆಲಸ ನೀಡುವವರು ಯಾರು? ಶಿಕ್ಷಕನಾಗಿ ನಿಲ್ಲಬೇಕೆಂಬ ಬಯಕೆ ಸುಮತಿಗೆ. ಆ ಅರ್ಹತೆ ಆಕೆಗೆ ಇದೆ, ಆದರೆ ಸಮಾಜ ಇದನ್ನು ಮನ್ನಿಸಬಲ್ಲದೆ? ಇಲ್ಲವೆ ಎಲ್ಲರಂತೆ ತಮ್ಮ ಸಮುದಾಯವನ್ನು ಸೇರಬೇಕೆ? ಸದ್ಯಕ್ಕೆ ಸುಮತಿ  ತನ್ನಲ್ಲಿ ಮೂಡಿಬರುತ್ತಿರುವ ಪುರುಷ ಲಕ್ಷಣಗಳನ್ನು ಮುಚ್ಚಿಟ್ಟು ಹೆಣ್ಣಾಗಿ ಉದ್ಯೋಗ ಪಡೆದುಕೊಳ್ಳುವುದು ಉತ್ತಮವೆನಿಸಿತ್ತು. ಆದರೆ ಹೆಣ್ಣು ಮಕ್ಕಳಂತೆ ಬಟ್ಟೆ ತೊಡುವುದು ಅವಳಿಗೆ ಇರಿಸು ಮುರಿಸಾಗುತ್ತದೆ. ಈ ಎಲ್ಲಾ ಗೊಂದಲ­ದಲ್ಲಿ ಭವಿಷ್ಯಕ್ಕೆ ಸೊಡರು ಹಿಡಿವಂತೆ ನ್ಯಾಯಾಂಗದ ತೀರ್ಪು ಹೊರಬಂದಿದೆ. ಸುಮತಿ­ಗೊಂದು ದಾರಿ ಕಾಣಬಹುದೆ? ಸುಮತಿ ಒಬ್ಬ­ಳಲ್ಲ, ಒಂದು ಹೆಸರಲ್ಲ...ಅದು ಹೊಸ ಚಹರೆ. ಹೆಣ್ಣು ಗಂಡು ಸಮಾನವಾದ ಮತ್ತೊಂದು ಲಿಂಗ. ಅವರು ಹೆಣ್ಣೆಂದು ಗುರುತಿಸಿಕೊಂಡರೆ ಹೆಣ್ಣಾಗಿ,  ಗಂಡೆಂದು ಗುರುತಿಸಿಕೊಂಡರೆ ಗಂಡಾಗಿ ಗೌರವಿಸುವ ನಡೆಯನ್ನು ನಾವು ಕಲಿಯಬೇಕಾಗಿದೆ

ಉತ್ತರ ಭಾರತದಲ್ಲಿ  ಲೈಂಗಿಕವಾಗಿ ರೂಪಾಂ­ತರ ಹೊಂದಿದವರು ತಮ್ಮದೇ ಆದ ಹಿಜ್ಡಾ­­ಸಮುದಾಯವನ್ನು ಕಟ್ಟಿಕೊಂಡು ಬದು­ಕುತ್ತಿ­­ದ್ದಾರೆ. ಇಸ್ಲಾಂ ಧರ್ಮವನ್ನು ಒಪ್ಪಿ­ಕೊಳ್ಳುತ್ತಾರೆ. ಚಾರಿತ್ರಿಕ ಕಾಲದಿಂದಲೂ ಇಸ್ಲಾಂ ಸಮಾಜ ಹಿಜ್ಡಾ ಸಮುದಾಯವನ್ನು  ಬೇರೆ ಬೇರೆ ರೀತಿಯಲ್ಲಿ ಮನ್ನಿಸುತ್ತಾ ಬಂದಿದೆ. ಅವರು ಅಂತಃಪುರದ ಸೇವಕರಾಗಿ ಕಾವಲು­ಗಾರ­ರಾಗಿ ಹೆಚ್ಚು ನಂಬಿಕೆಯನ್ನು ಗಳಿಸಿದ್ದರು. ಆದರೆ ಮೂಢನಂಬಿಕೆಯ ಆಚರಣೆ­ಗಳೂ ಅವರಲ್ಲಿ ಸೇರಿಹೋಗಿವೆ. ದಕ್ಷಿಣ ಭಾರತದಲ್ಲಿ ಹಿಜ್ಡಾ ಆಚರಣೆ ಚಾಲ್ತಿಯಲ್ಲಿಲ್ಲ. ಆದರೂ ಮುಂಬೈ ಪ್ರಭಾವದಿಂದ ರೈಲುಗಳಲ್ಲಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.

ಲೈಂಗಿಕ ಸೇವೆಯ ಜೊತೆಗೆ ಭಿಕ್ಷಾಟನೆಯು ಬದುಕಿನ ಪ್ರಮುಖ ದಾರಿಯಾಗಿದೆ. ಅವರನ್ನು ಮಂಗಳಮುಖಿಯರೆಂದು ಕರೆಯುತ್ತಾ ಅವರಿಗೆ ಭಿಕ್ಷೆ ನೀಡುವ ವ್ಯಾಪಾರಿ ಸಮುದಾಯ ಕೆಲವು ಶಕುನದ ನಂಬಿಕೆಗಳನ್ನು ಉಳಿಸಿಕೊಂಡಿದೆ. ಪ್ರತಿದಿನ ಅವರ ಕೈಯಲ್ಲಿ ಅಂಗಡಿಯ ಮುಂದೆ ಕಾಯಿ ಒಡೆಸಿ, ದೃಷ್ಟಿತೆಗೆಸುವ ಆಚರಣೆಗಳನ್ನು     ಮುಂದುವರಿಸಿ ಕೊಂಡು ಬಂದಿದೆ. ತಮ್ಮನ್ನು ಮಂಗಳ ಮುಖಿಯರೆಂದು ಕರೆಯುವುದಕ್ಕೆ ಅವರಲ್ಲಿ ಕೆಲವರ ಸಮ್ಮತಿಯೂ ಇದೆ. ಒಟ್ಟಿನಲ್ಲಿ ಅವರು ಸಮಾಜದಲ್ಲಿ ಎಲ್ಲರಂತೆ ಬದುಕದೆ ಅಡ್ಡದಾರಿಗಳಲ್ಲೇ ಉಳಿಯುತ್ತಾರೆ. ಆದರೆ ಅಡ್ಡ ದಾರಿಯಲ್ಲಿ ಉಳಿಸುವುದು ಮುಖ್ಯವಾಹಿನಿಯ ಹುನ್ನಾರವೆಂದು ಅವರು ತಿಳಿಯಬೇಕಾಗಿದೆ. ತನ್ನ ಸುಖಕ್ಕಾಗಿ ಅಸಹಾಯಕರನ್ನು ಬಳಸಿಕೊಳ್ಳಲು ಯಾವ ಗಳಿಗೆಯಲ್ಲೂ ಪ್ರಬಲರು ಹಿಂದೆ ಬೀಳು­ವುದಿಲ್ಲ.

ಲಿಂಗಾಂತರ ಗೊಂಡವರ ಅಸ­ಹಾಯ ಕತೆಯನ್ನು ಪುರುಷಪ್ರಧಾನ ಸಮಾಜ ಬಹು ಸೊಗಸಾಗಿ ಬಳಸಿಕೊಂಡಿದೆ. ಮುಂದೆಯೂ ಅದರ ಲಾಭವನ್ನು ಪಡೆಯಲು ಕಾದು ಕುಳಿತಿರುತ್ತದೆ. ಇವರಲ್ಲಿ ಇವತ್ತು ನೂರಕ್ಕೆ ತೊಂಬತ್ತು ಮಂದಿ ಲೈಂಗಿಕ ಸೇವೆಯಲ್ಲಿ ತೊಡಗಿ­ದ್ದಾರೆ. ಅದನ್ನು ಬೆಂಬಲಿಸುವ ಮತ್ತು ಸಮರ್ಥಿ­ಸುವ ಸಂಸ್ಥೆಗಳು ಅವರ ನಡುವೆ ಕೆಲಸ ಮಾಡು­ತ್ತಿವೆ. ಲಿಂಗಾಂತರಗೊಂಡ ಹಿಂಸೆಯ ಜೊತೆಗೆ ಲೈಂಗಿಕ ಕಾರ್ಯಕರ್ತರಾಗುವ ಮೂಲಕ ಸಮಾಜದಲ್ಲಿ ಮತ್ತಷ್ಟು ನಿಂದನೆಗೆ ಗುರಿ­ಯಾಗುತ್ತಾರೆ. ಈ ಎಲ್ಲದರ ಹಿಂದೆ ಅವರನ್ನು ಬಿಡದೆ ಬೆನ್ನು ಹತ್ತುವ ಎಚ್‌ಐವಿ ಸೋಂಕು. ಭಾರತದಂತಹ ದೇಶ ಇನ್ನೂ ಎಚ್‌ಐವಿ ಸೋಂಕಿತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ತರಬೇತಿಯನ್ನೇ ಪಡೆದಿಲ್ಲ. ಅಸ್ಪೃಶ್ಯತೆ ಹೇಗೆಲ್ಲಾ ಆವರಿಸುತ್ತದೆ-. ಅದರ ಕರಾಳತೆ ಕೈಗಳು ಎಲ್ಲಿಗೆ ಬೇಕಾದರೂ ಚಾಚುತ್ತವೆ.  ಕಡೆಗೆ ಆಸ್ಪತ್ರೆಯನ್ನೂ ಬಿಡುವುದಿಲ್ಲ.

ಕಮ್ಮಟದಲ್ಲಿ ಗಟ್ಟಿಯಾಗಿ ದಿಟ್ಟವಾಗಿ ತಮ್ಮ ಪರಿಚಯವನ್ನು ಹೇಳಿಕೊಂಡ ಸೋದರ ಸೋದರಿ­ಯರು ಬಹಳ ಮುಕ್ತವಾಗಿ ತಮ್ಮ ಲೈಂಗಿಕ, ಸಾಮಾಜಿಕ ಚಹರೆಗಳನ್ನು ತಿಳಿಸಿದರು. ತಾನೊಬ್ಬಳು ಟ್ರಾನ್ಸ್‌ ಜೆಂಡರ್ ಹಾಗೂ ಲೈಂಗಿಕ ಕಾರ್ಯಕರ್ತೆ ಮತ್ತು ಎಚ್‌ಐವಿ ಪಾಸಿಟಿವ್ ಇರುವ ಎಲ್ಲರಿಗಾಗಿ ದುಡಿಯುವ ಮಾನವ ಹಕ್ಕು ಹೋರಾಟಗಾರ\ಹೋರಾಟಗಾರ್ತಿ ಎಂದು ಹೇಳಿಕೊಂಡರು. ನನ್ನ ಮನಸ್ಸು ತುಂಬಿಬಂದಿತ್ತು. ಇವರಲ್ಲಿ ಮಾನವೀಯ ಮೌಲ್ಯಗಳು ಮನೆಮಾಡಿವೆ.  ನಿಶಾ, ಗೀತಾ, ಕಿರಣ, ಆಶಾ ಮತ್ತ್ಯಾರೆ ಆಗಿರಲಿ ಅವರಿಗೆ ಹೊಸದೊಂದು ಬದುಕು ಸಿಗಲಿ.
ಇಸ್ಲಾಂನಂತೆ ಕ್ರೈಸ್ತ ಸಮಾಜ ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಉದಾರವಾಗಿ ನಡೆದುಕೊಂಡಿಲ್ಲ. ಹಾಗಾಗಿ ಯೂರೋಪ್ ದೇಶಗಳು ಅವರ ಪರವಾಗಿ ಕಾಯ್ದೆಯನ್ನು ರೂಪಿಸಲು ತೊಡಕಾಗಿತ್ತು.

ಆದರಿಂದು ಹಲವು ರಾಷ್ಟ್ರಗಳು  ಲೈಂಗಿಕ ಸ್ವಾತಂತ್ರ್ಯವನ್ನು ವಿಸ್ತರಿಸಲು ಮುಂದಾಗಿವೆ. ಗಂಡಸರಿಬ್ಬರು ದಂಪತಿ­ಯಾಗು­ವುದನ್ನು, ಹೆಂಗಸರಿಬ್ಬರು ದಂಪತಿಯಾಗು­ವುದನ್ನು ಮನ್ನಿಸಿವೆ. ನೇಪಾಳ ತನ್ನ ಹೊಸ ಸಂವಿಧಾನದಲ್ಲಿ ಮೂರು ಲಿಂಗಗಳನ್ನು ಸೇರಿಸಿದೆ. ಆದರೆ ಭಾರತದ ಸುಪ್ರೀಂಕೋರ್ಟ್ ಗೇ ಮತ್ತು ಲೆಸ್ಬಿಯನ್ ಸಂಬಂಧವನ್ನು ಲೈಂಗಿಕ ಅಲ್ಪಸಂಖ್ಯಾತರೆಂದು ಪರಿಗಣಿಸಲು ನಿರಾ­ಕರಿಸಿದೆ. ಇತರ ಹಿಂದುಳಿದವರ (ಒಬಿಸಿ) ಮೀಸಲಾತಿಯಡಿ ಅವಕಾಶಗಳನ್ನು ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡಲು ಆದೇಶಿಸಿದೆ. ಅವರ ಸಂಗಾತಿಗಳ ಜೊತೆ ಬದುಕುವ ಅವಕಾಶವೂ ಅವರಿಗಿದೆ. ಮಗುವಿನ ಜನನ ಪ್ರಮಾಣ ಪತ್ರ­ದಲ್ಲಿಯೇ ಮೂರನೆ ಲಿಂಗವನ್ನು ಗುರುತಿಸಲು ಅವಕಾಶವನ್ನು ಜರ್ಮನಿ ಕಲ್ಪಿಸಿದೆ. ಅಲ್ಲಿ ‘ಎಕ್ಸ್‌’ ಸಂಕೇತವನ್ನು ಬಳಸಬಹುದು.

ಈವರೆಗೆ ಸಂಬೋಧಿಸಿದ ಶಿಖಂಡಿ, ಖೋಜಾ, ಹಿಜ್ಡಾ, ನಪುಂಸಕ ಈ ಯಾವುದೇ ಸಂಬೋಧನೆಗಳು ಅವಮಾನಕರವಾದಲ್ಲಿ ಅವರು ಬಯಸುವ  ಅವರ ವಿಶೇಷ ಲಿಂಗವನ್ನು ಒಪ್ಪಿಕೊಳ್ಳಲು ಮತ್ತು ಗೌರವಿಸಲು
ನಾವು ಸಿದ್ಧ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.