ADVERTISEMENT

ಬುದ್ಧನಿಂದ ಅಂಬೇಡ್ಕರ್‌ವರೆಗೆ...

ವಸು ಮಳಲಿ
Published 13 ಅಕ್ಟೋಬರ್ 2014, 19:30 IST
Last Updated 13 ಅಕ್ಟೋಬರ್ 2014, 19:30 IST
ಬುದ್ಧನಿಂದ ಅಂಬೇಡ್ಕರ್‌ವರೆಗೆ...
ಬುದ್ಧನಿಂದ ಅಂಬೇಡ್ಕರ್‌ವರೆಗೆ...   

‘ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎಂದು ಯುರೋಪಿ­ಯನ್‌ರ ಕ್ಲಬ್‌ನ ಬಾಗಿಲುಗಳ ಮೇಲೆ ಬರೆ­ದಿ­ರುವ ಆ ಸಾಲುಗಳಾದರೂ ಪರವಾಗಿಲ್ಲ. ನಮ್ಮ ದೇಗುಲಗಳ ಬಾಗಿಲಲ್ಲಿ ದೇವರು, ಪ್ರಾಣಿಗಳು ಮತ್ತು ಹಿಂದೂಗಳು ಎಲ್ಲರಿಗೂ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ಮಾತ್ರ ಪ್ರವೇಶವಿಲ್ಲ ಎಂದಿ­ರುತ್ತದೆ. ಹೀಗೆಂದು ದೇವಾಲಯ ಪ್ರವೇಶವನ್ನು ಕುರಿತು ಬರೆದ ಗಾಂಧೀಜಿಯವರಿಗೆ ಉತ್ತರ ನೀಡಿ­ದವರು ಬಾಬಾ ಸಾಹೇಬ್ ಅಂಬೇಡ್ಕರ್. ಅಸಮಾನತೆಯ ನೆಲಗಟ್ಟಿನ ಮೇಲೆ ನಿಂತ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ವನ್ನು ಸ್ವೀಕರಿಸಿದಾಗ ಅದು ಅಂಬೇಡ್ಕರ್‌ ಒಬ್ಬರ ಬದುಕಿಗೆ ತಿರುವಾಗಿರಲಿಲ್ಲ. ಭಾರತದ ಭವಿಷ್ಯಕ್ಕೆ ಬರೆದ ತಿರುವಾಗಿತ್ತು.
ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ ಈ ದಿನ ಬುದ್ಧ ಮತ್ತು ಬೌದ್ಧ ಧರ್ಮದ ಜಾಡನ್ನು ಹಿಡಿದು ಚಿಂತಿಸುವಂತೆ ಮಾಡಿದೆ. ಬುದ್ಧ ಹಾಗೂ ಬೌದ್ಧ ಧರ್ಮವನ್ನು ವಿವರಿಸುವ ಶಾಲಾ ಪಠ್ಯಗಳು ಬುದ್ಧನ ಬದುಕಿನ ಬಗೆಗೆ ಬಂದಿರುವ ಸರಳವಾದ ಕಥೆಯನ್ನು ಹೇಳುತ್ತಾ ಬಂದಿವೆ. ಒಬ್ಬ ರೋಗಿ, ಮುದುಕ ಮತ್ತು ಭಿಕ್ಷುಕ­ನನ್ನು ನೋಡಿ ಸಂಸಾರವನ್ನು ತೊರೆಯುವ ಈ ಪುರಾಣೀಕರಿಸಿದ ಕಥೆ ರೂಪಕ ಭಾಷೆಯದ್ದಾಗಿರ­ಬೇಕು. ಚರಿತ್ರೆಯ ಆಳಕ್ಕಿಳಿದು ನೋಡುವ ಅಂಬೇಡ್ಕರ್ ನದಿ ವ್ಯಾಜ್ಯದಂತಹ ಎರಡು ರಾಜ್ಯಗಳ ನಡುವಿನ ಹೋರಾಟವನ್ನು ತಪ್ಪಿಸಲು ಸಿದ್ಧಾರ್ಥ ರಾಜ್ಯವನ್ನು ತೊರೆಯಬೇಕಾಯಿ­ತೆಂದು ವಿವರಿಸುತ್ತಾರೆ.

ಕ್ರಿ.ಪೂ. ಆರನೆಯ ಶತಮಾನ ಹಲವು ವೈಚಾ­ರಿಕ ವಾದಗಳ ಹುಟ್ಟಿಗೆ ಕಾರಣವಾಗಿದೆ. ಈ ಎಲ್ಲಾ ಸಿದ್ಧಾಂತಗಳಲ್ಲಿ ಕಾಣುವ ಸಾಮಾನ್ಯ­ವಾದ ವಿಚಾರವೆಂದರೆ ವೈದಿಕ ಪಾರಮ್ಯದ ವಿರೋಧ. ಈ ವಿರೋಧವನ್ನು ಕಂಡುಕೊಂಡ ಮಾರ್ಗ ಮಾತ್ರ ದೊಡ್ಡ ಸಿದ್ಧಾಂತದ ಹುಟ್ಟಿಗೆ ಕಾರಣವಾಯಿತು. ಸಮಾಜದ ಅಸಮಾನತೆ­ಯನ್ನು ಒಪ್ಪುವ ಮತ್ತು ಅಮೂರ್ತದಲ್ಲಿ ತನ್ನ ವಿಚಾರವನ್ನು ಮಂಡಿಸುವ, ವಿಚಾರವನ್ನು ಪ್ರತಿ­ಭ­ಟಿಸದೆ ವೇದ ಸಮಾಜದ ಹೊರಗುಳಿದ ಜನ­ರಿಗೆ ಬೇರೆ ಮಾರ್ಗವೇ ಇರಲಿಲ್ಲ. ಬುದ್ಧನ ವಿಚಾರ­ಗಳು ಹೇಗೆ ಹರಿದು ಬಂದಿವೆ ಎಂಬ ಚಾರಿತ್ರಿಕ ಬೆಳವಣಿಗೆಯನ್ನು ಅಂಬೇಡ್ಕರ್ ‘ಬುದ್ಧ ಅಂಡ್ ಹಿಸ್ ಧಮ್ಮ’ ಕೃತಿಯಲ್ಲಿ ಸ್ಪಷ್ಟವಾದ ವಿವರಣೆ­ಯನ್ನು ನೀಡುತ್ತಾರೆ. ಬುದ್ಧ ಕೊಟ್ಟ ವಿಚಾರ ವಾಸ್ತವದ ಬದುಕಿಗೆ ನೀಡಿದ ಮಾರ್ಗವಾಗಿತ್ತೇ ಹೊರತು ಕಣ್ಣಿಗೆ ಕಾಣದ, ಕೈಗೆಟುಕದ ಆತ್ಮ, ಪರಮಾತ್ಮನ ಚಿಂತೆ ಅದಾಗಿರಲಿಲ್ಲ.

ಬುದ್ಧ ಎಲ್ಲೂ ತನ್ನನ್ನು ದೇವರೆಂದು ಹೇಳಿ­ಕೊಳ್ಳ­ಲಿಲ್ಲವೆಂದು ನಾಗಾರ್ಜುನ ತನ್ನ ‘ಮಧ್ಯ­ಮಕ ಕಾರಿಕಾ’­ದಲ್ಲಿ ಮತ್ತೆಮತ್ತೆ ಹೇಳುತ್ತಾನೆ.
ಬೌದ್ಧ ಧರ್ಮವಾಗಲಿ ಅಥವಾ ಬೇರೆ ಯಾವುದೇ ಧರ್ಮವಾಗಲೀ ನಾವಿಂದು ಕೇಳಿ­ಕೊಳ್ಳ­ಬೇಕಾಗಿರುವುದು ಇವತ್ತಿನ ಬದುಕಿಗೆ ಎಷ್ಟು ಸಮಂಜಸ ಮತ್ತು ಎಷ್ಟರಮಟ್ಟಿಗೆ ಅದು ನಮ್ಮ ಬದುಕನ್ನು ನಿರ್ದೇಶಿಸುತ್ತದೆ.

ಬುದ್ಧನ ತತ್ವ ಜನರು ತಮ್ಮ ಬದುಕನ್ನು ರೂಪಿಸಿ­ಕೊಳ್ಳಲು ಹಲವು ರೀತಿಯಲ್ಲಿ ಕಾರಣವಾ­ಗಿದ್ದು, ಗೊತ್ತಿದ್ದೋ ಗೊತ್ತಿಲ್ಲದೆಯೇ ಅದು ಭಾರತೀಯನ ಬದುಕಿನ ಭಾಗವಾಗಿದೆ. ಬೌದ್ಧ ಧರ್ಮದ ಅಧ್ಯಯನ ಮಾಡುವ ವಿದ್ವಾಂಸರು ಬೌದ್ಧ ಧರ್ಮದ ಬೆಳವಣಿಗೆಯನ್ನು ಗುರುತಿಸಿ ಅನಂತರದಲ್ಲಿ ಅದರ ಪತನವನ್ನು ಗುರುತಿ­ಸುತ್ತಾ ಬಂದಿದ್ದಾರೆ. ಆದರೆ ಬೌದ್ಧ ಧರ್ಮ ಧಾರ್ಮಿಕ ಆಚರಣೆಯಾಗಿ ನಶಿಸಿಹೋಗಿದ್ದರೂ ಜನರ ಬದುಕಿನ ಭಾಗವಾಗಿ ಹರಿದುಬಂದಿದೆ ಎಂದು ಹೇಳಲು ಹಲವು ನಿದರ್ಶನಗಳು ದೊರೆ­ಯುತ್ತವೆ. ಬೌದ್ಧರ ಹತ್ಯೆ  ಬೌದ್ಧ ಧರ್ಮ­ವನ್ನು ಮರೆಮಾಡಲು ಸಾಧ್ಯವಾಗಿದೆಯೇ ಹೊರತು ಜನಪದರ ಬದುಕಿನ ಭಾಗವೇ ಆಗಿಹೋದ ಬೌದ್ಧ ತತ್ವಗಳನ್ನು ಅಳಿಸಿ ಹಾಕಲು ಸಾಧ್ಯವಾ­ಗಿಲ್ಲ. ಬೌದ್ಧ ಚಿಂತನೆ ಕಾಲದೇಶಗಳನ್ನು ಮೀರಿ ಹರಡುತ್ತಾ ಬಂದಿದೆ. ವೈಚಾರಿಕತೆ, ತರ್ಕ, ಅನುಭವ ವೇದ್ಯವಾದ ಸತ್ಯ, ಸಮಾನತೆ, ವ್ಯಕ್ತಿಯ ವಿಮೋಚನೆ ಇಂತಹ ಆಲೋಚನೆಯ ಮೇಲೆ ಚಿಂತನೆಯನ್ನು ಮಾಡಬಲ್ಲ ಯಾವುದೇ ತತ್ವಜ್ಞಾನಿ ಮರಳಿ ಬೌದ್ಧ ತತ್ವದ ಒಳಹೊಕ್ಕು ನೋಡಬೇಕಾಗುತ್ತದೆ.

ಭಾರತದ ಮಟ್ಟಿಗಂತೂ ವೈದಿಕ ನಂಬಿಕೆ­ಗಳನ್ನು ಕುರಿತಾದ ಪ್ರಶ್ನೆ ಮತ್ತು ಪ್ರತಿಭಟನೆ ನಿರಂತರವಾಗಿ ಈ ನಾಡಿನಲ್ಲಿ ನಡೆಯುತ್ತಾ ಬಂದಿದೆ. ವಿರೋ­ಧವೇ ಒಂದು ಧಾರೆಯಾಗಿ ಹರಿದು ಬರದಿ­ದ್ದರೂ, ಮತ್ತೆ ಮತ್ತೆ ವೈಚಾರಿಕತೆ ತಲೆ ಎತ್ತಿ ಬ್ರಾಹ್ಮಣ್ಯವನ್ನು ಪ್ರಶ್ನಿಸಿದೆ.
ಬುದ್ಧನ ನಂತರ ಬಂದ ಪುರಾಣಗಳಲ್ಲಿ - ‘ವಾಯುಪುರಾಣ’, ‘ಮತ್ಸ್ಯ ಪುರಾಣ’, ‘ಅಗ್ನಿ­ಪುರಾಣ’-ಗಳು ಬುದ್ಧನನ್ನು ಕಠಿಣವಾಗಿ ಟೀಕೆ ಮಾಡಿವೆ. ಕೆಲವು ನೇರವಾಗಿಯೇ ಖಂಡಿಸಿವೆ. ವೈದಿಕ ಯಜ್ಞ ಯಾಗಗಳನ್ನು ನಾಶ ಮಾಡಿದವ­ನೆಂದೂ ಹೇಳುತ್ತವೆ. ಆದರೆ ‘ವಿಷ್ಣುಪುರಾಣ’ ರಚನೆಯಾಗುವ ಹೊತ್ತಿಗೆ ಬುದ್ಧನನ್ನು ದಶಾವ­ತಾರಗಳಲ್ಲಿ ಕಡೆಯವನೆಂದು ಹೇಳಲಾಗುತ್ತದೆ. ಆ ಹೊತ್ತಿಗೆ ಬೌದ್ಧರು ಪ್ರಬಲ ಶತ್ರುಗಳಾಗಿರ­ಲಿಲ್ಲ­­ವೆನಿ­ಸುತ್ತದೆ. ಜಗತ್ತಿಗೆ ವಿಶಿಷ್ಟವಾದ ರಾಜಕೀಯ ಚಿಂತನೆಯನ್ನು ನೀಡಿದ ಅಶೋಕನ ಒಟ್ಟಾರೆ ಆಲೋಚನೆಯ ನೆಲೆಗಟ್ಟು ಬುದ್ಧನ ವಿಚಾರವೇ ಆಗಿದೆ. ಕಾಲಕಾಲಕ್ಕೆ ಪರಿಷ್ಕೃತಗೊಂಡು ಹರಿದು­ಬಂದ ಚಿಂತನೆಯನ್ನು ಲಿಖಿತರೂಪಕ್ಕೆ ತಂದ ಹೆಗ್ಗಳಿಕೆ ಅಶೋಕನಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ನಾಡಿನಾದ್ಯಂತ ಶಿಲಾಶಾಸನಗಳ ಮೇಲೆ ನಶಿಸಿ­ಹೋಗದಂತೆ ಕೆತ್ತಿಸುವ ಬಹುದೊಡ್ಡ ಯೋಜನೆ­ಯನ್ನೇ ರೂಪಿಸುತ್ತಾನೆ. ಅಕ್ಷರ ಎಂದರೆ ನಶಿಸಿ­ಹೋಗದೆ ಇರುವುದು. ವೇದ ಸಾಹಿತ್ಯ ಮೌಖಿಕ­ವಾಗಿ ಮಾತ್ರವೇ ಉಳಿಯುವಂತೆ ಯೋಜಿಸಿ­ಕೊಂಡ ಬ್ರಾಹ್ಮಣರ ಶೈಲಿಗೆ ವಿರುದ್ಧವಾಗಿ ಅಶೋಕ ನಡೆದುಕೊಳ್ಳುತ್ತಾನೆ. ವಿಸ್ತಾರವಾದ ಜನ­ಸ್ತೋಮ­ವನ್ನು ತಲುಪುವುದು ಅವನ ಉದ್ದೇಶ­ವಾಗಿರುತ್ತದೆ. ಆ ಬರವಣಿಗೆ ಈ ನಾಡಿನ ಎಲ್ಲಾ ಲಿಪಿಗೂ ಮೂಲವಾಗುತ್ತದೆ. ಈ ನಾಡನ್ನು ಅಕ್ಷರಸ್ಥಗೊಳಿಸಲು ಬೌದ್ಧ ಧರ್ಮಕ್ಕೆ ಸಾಧ್ಯ ವಾಗುತ್ತದೆ. ಕಂಠಸ್ಥವಾದ, ಸಂಸ್ಕೃತ ಭಾಷೆಯೂ ಲಿಪಿಯನ್ನು ಅಳವಡಿಸಿಕೊಂಡಾಗ ಬರಹ ರೂಪ ದಲ್ಲಿ ಬಂದ ಕೃತಿ ಅಶ್ವಘೋಷನ ‘ಬುದ್ಧ ಚರಿತೆ’. ಈ ಕೃತಿ ಬರುವ ಹೊತ್ತಿಗೆ ಬುದ್ಧನ ಬದುಕು ಸಾಕಷ್ಟು ಪುರಾಣದ ಸ್ವರೂಪ­ವನ್ನು ಪಡೆದು ಕೊಂಡಿರುವುದು ಸ್ಪಷ್ಟವಾಗುತ್ತದೆ. ಬುದ್ಧನ ವಿಚಾರ, ಆರುನೂರು ವರ್ಷಗಳು ಕಳೆ­ಯುವ ಹೊತ್ತಿಗೆ ಬುದ್ಧನ ಸುಂದರವಾದ ಶಿಲ್ಪ­ಗಳು ಮೂಡಿಬಂದಿದ್ದವು. ಗ್ರೀಕ್ ಹಾಗೂ ಭಾರತೀಯ ಅಂಶಗಳು ಮೇಳೈಸಿ ಒಡಮೂಡಿದ ಬುದ್ಧನ ಶಿಲ್ಪ ಭಾರತೀಯ ಶಿಲ್ಪಕಲೆಗೆ ಭದ್ರವಾದ ಬುನಾದಿಯನ್ನು ಹಾಕಿತು. ಅಲ್ಲಿಂದ ಮುಂದೆ ಬೆಳೆದ ಶಿಲ್ಪಗಳು ಶಿವನದ್ದಾಗಲೀ, ವಿಷ್ಣುವಿನ-­ದ್ದಾ­ಗಲೀ, ಜಿನಬಿಂಬವಾಗಲೀ ಬುದ್ಧ ಶಿಲ್ಪದ ಅನುಕ­ರ­ಣೆಯೇ ಆಗಿತ್ತು. ದೂರದೃಷ್ಟಿಯುಳ್ಳವನು, ಜ್ಞಾನಿ ಎಂದು ಸಾಂಕೇತಿಕವಾಗಿ ಹೇಳಲು ಹೊರಟ ಶಿಲ್ಪಿ ಬುದ್ಧನ ಹಣೆಯಲ್ಲಿ ಊರ್ಣ­ವನ್ನು ಸಂಕೇತವಾಗಿ ಬಳಸಿದ ಅದರ ಮುಂದುವ­ರಿದ ರೂಪವೋ ಎನ್ನುವಂತೆ ಶಿವನ ಶಿಲ್ಪವನ್ನು ಕೆತ್ತುವಾಗ ಹಣೆಗೆ ಮತ್ತೊಂದು ಕಣ್ಣನ್ನೋ ಚಿತ್ರಿ ಸಿದ. ಹೀನಯಾನ ಬೌದ್ಧಧರ್ಮ ಬುದ್ಧ­ನನ್ನು ಹಲವು ಸಂಕೇತಗಳಲ್ಲಿ ಸೂಚಿಸಿತ್ತು. ಬೋಧಿ ವೃಕ್ಷ, ಪಾದದ ಚಿತ್ರ, ತೆರೆದ ಸಿಂಹಾಸನ ಇತ್ಯಾದಿ. ಆನಂತರದ ಎಲ್ಲಾ ದೇವಾಲಯ­ಗಳಲ್ಲೂ ಪಾದದ ಶಿಲ್ಪವನ್ನು ಸಂಪ್ರದಾಯಗೊಳಿಸಿಕೊಳ್ಳ ಲಾಯಿತು. ಅಶೋಕ ಸ್ತಂಭವೇ ಸಂಕೇತವಾಗಿ ಕಾಣಿಸಿಕೊಂಡದ್ದು ಅಷ್ಟೇ ಕುತೂ­ಹಲಕರ­ವಾ­ಗಿದೆ. ಬೌದ್ಧ ಸ್ತೂಪಗಳ ಮುಂದೆ ಅಶೋಕ ಸ್ತಂಭ­ವನ್ನು ನಿಲ್ಲಿಸಿದ್ದು ಅದನ್ನೇ  ಅನುಸರಿಸಿ ಬಸದಿಗಳ ಮುಂದೆ ಬ್ರಹ್ಮ ಸ್ತಂಭ, ಶಿವಾಲಯ­ಗಳ ಮುಂದೆ ನಂದಿಧ್ವಜ ಸ್ಥಾಪಿತ­ವಾದವು. ಮೂಲ ಉದ್ದೇಶ ಮರೆತು ಕಂಬಗಳು ಒಂದು ರೀತಿಯಲ್ಲಿ ಆಯಾ ಮತದ ಧ್ವಜಸ್ತಂಭ­ಗಳಾದವು. ಇಂತಹ ನೂರಾರು ರೂಪಾಂತರ­ಗೊಂಡ ಸಾಂಸ್ಕೃತಿಕ ತುಣುಕುಗಳನ್ನು ಕಲೆಹಾಕ­ಬಹುದು.

ಇದೆಲ್ಲಕ್ಕೂ ಮುಖ್ಯವಾಗಿ ಎರಡು ಪ್ರಧಾನ­ವಾದ ಕುರುಹುಗಳೆಂದರೆ ಜನಪದರ ಬದುಕಿ­ನಲ್ಲಿ ಸೇರಿದ ವೈಚಾರಿಕತೆ ಮತ್ತು ಜ್ಞಾನಧಾರೆ­ಯಾಗಿ ಹರಿದು ಬಂದ ಕ್ರಮ. ದುಡಿಮೆಯನ್ನೇ ನಂಬಿ ಬದುಕುವ ವರ್ಗ ಯಾವುದೇ ವಿವರಣೆ­ಯಿಲ್ಲದೆ ಕರ್ಮ ಸಿದ್ಧಾಂತಿಗಳೇ ಆಗಿದ್ದಾರೆ. ಹುಟ್ಟು ಸಾವುಗಳಲ್ಲಿ ಸರಳವಾದ ಆಚರಣೆ­ಗಳಲ್ಲಿ ಬದುಕನ್ನು ನಿಭಾಯಿಸುತ್ತಾರೆ. ಆತ್ಮ ಪರಮಾತ್ಮನ ಕಲ್ಪನೆ ಅವರನ್ನು ಭೀಕರವಾಗಿ ಕಾಡಿಸದೆ ಇರುವುದರಿಂದ ಬದುಕು ಸರಾಗವಾಗಿ ಸಾಗುತ್ತದೆ. ಇತ್ತೀಚೆಗೆ ಬೌದ್ಧರಾದ ಕೆಲವರು ತಮ್ಮ ದಿನನಿತ್ಯದ ಬದುಕಿನಲ್ಲಿ ಹೇಗೆ ನಡೆದು­ಕೊಳ್ಳ­ಬೇಕೆಂದು ಗೊಂದಲಕ್ಕೆ ಬಿದ್ದದ್ದನ್ನು ಕಂಡಿ­ದ್ದೇನೆ. ವ್ಯಕ್ತಿ ಸತ್ತಾಗ ಅವನ ದೇಹವನ್ನು ತೊಳೆದು ಮಣ್ಣು ಮಾಡುವ ಇಲ್ಲವೆ ಚಿತೆಯಾ­ಗಿ­ಸುವ ಜನಪದರ ಬದುಕು ಸಹಜವಾಗಿಯೇ ವೈಚಾರಿಕವಾಗಿ ಚರಿತ್ರೆಯುದ್ದಕ್ಕೂ ಟೀಕೆಗೊಳ­ಗಾದ ವೈದಿಕರ ಸಂಕೀರ್ಣವಾದ ಮತ್ತು ಅವ­ರಿಗೇ ರೇಜಿಗೆ ಹುಟ್ಟಿಸುವಂತಹ ಆಚರಣೆಗಳಿಗಿಂತ ಜನಸಾಮಾನ್ಯರ ಆಚರಣೆಗಳು ಹೆಚ್ಚು ಬದುಕಿಗೆ ಪೂರಕವಾಗಿ ಕಾಣುತ್ತವೆ. ಆದ್ದರಿಂದ ಯಾವ ವಿಶೇಷ ಆಚರಣೆಯನ್ನು ಮಾಡದೆ ಅವನು ಬೌದ್ಧನಾಗುತ್ತಾನೆ. ಹೀಗೆ ಭಾರತದ ಜೀವನ ಕ್ರಮದಲ್ಲಿ ಹೆಚ್ಚು ವಾದಕ್ಕೆ ಒಳಗಾದ ನಡೆ­ಗಳೆಂದರೆ ಮಾಂಸಾಹಾರ ಮತ್ತು ಸನ್ಯಾಸ.

ಬುದ್ಧ ಹಾಗೂ ಮಹಾವೀರ ಬೋಧಿಸಿದ ಅಹಿಂಸೆಯ ತತ್ವಗಳು ಸರಳೀಕೃತಗೊಂಡು ಸಸ್ಯಾ­ಹಾರದ ಆಚರಣೆಯಲ್ಲಿ ಕೊನೆಗೊಂಡಿವೆ. ಅವರು ಬೋಧಿಸಿದ ಪ್ರಾಣಿದಯೆ ಸಸ್ಯಾಹಾರದ ಶ್ರೇಷ್ಠತೆಯಲ್ಲಿ ಕೊನೆಗೊಂಡಿದೆ. ಅದು ಜನರ ಆಹಾರ ಕ್ರಮದ ನಿಂದನೆಯಾಗಿರದೆ ಮೂಢ­ನಂಬಿಕೆಯ ಪ್ರಾಣಿ ಬಲಿಯ ಖಂಡನೆಯಾಗಿತ್ತು. ವೈದಿಕ ಆಚರಣೆಗಳಲ್ಲಿ ಉತ್ಕರ್ಷವೇ ಯಜ್ಞವಾ­ಗಿದ್ದು ಅದಕ್ಕೆ ಅರ್ಪಿಸುತ್ತಿದ್ದ ಪ್ರಾಣಿಗಳ ಹವಿಸ್ಸು ಅದರ ನಿಂದನೆಗೆ ಕಾರಣವಾಗಿತ್ತು. ಕೃಷಿಗೆ ಅಗತ್ಯವಾದ ದನಗಳ ರಕ್ಷಣೆ ಮತ್ತು ಕಾಡು­ಪ್ರಾಣಿಗಳ ರಕ್ಷಣೆಯ ಆಲೋಚನೆ ಮತ್ತು ಜೀವ­ಗಳೆಲ್ಲದರ ಸಮಾನ ಗೌರವ, ಪ್ರಾಣಿದಯೆ, ಹಾಗೂ ಅಹಿಂಸೆಯ ಪರಿಕಲ್ಪನೆಯನ್ನು ಹುಟ್ಟು­ಹಾಕಿತ್ತು. ಅದು ವ್ಯಕ್ತಿಯೊಬ್ಬನ ಆಹಾರದ ನಿಂದನೆ­­­ಯಾಗಿರಲಿಲ್ಲ. ಪ್ರಾಣಿದಯೆಯ ಅರ್ಥ ಸಂಕುಚಿತಗೊಂಡು ಸಮಾಜದಲ್ಲಿ ಈಗಾಗಲೇ ಇದ್ದ ಮೇಲು ಕೀಳಿನ ಭಾವನೆಗೆ ಮತ್ತಷ್ಟು ಒತ್ತಾಸೆ ನೀಡಿದ್ದು ದುರಂತವೇ ಆಗಿದೆ.

ಬೌದ್ಧಧರ್ಮದ ಟೀಕಾಕಾರರು ಸನ್ಯಾಸ­ವನ್ನು ಜೀವ ವಿರೋಧವಾಗಿ ಖಂಡಿಸುತ್ತಾರೆ. ಎರಡೂ­ವರೆ ಸಾವಿರ ವರ್ಷಗಳ ಹಿಂದೆ ಇನ್ನೂ ವಿಕಾಸ­ವಾಗುತ್ತಿದ್ದ ಸಮಾಜದಲ್ಲಿ ಗಂಡು ಹೆಣ್ಣಿನ ಸಂಬಂಧಗಳ ನಡುವೆ ಇದ್ದ ಸಂಕೀರ್ಣತೆ ಇಂತಹ ಪರ್ಯಾಯದ ಸೂಚನೆಗೆ ಕಾರಣವಾಗಿರಲೂ­ಬಹುದು. ವಿವಾಹ ಒಂದು ಸಾಂಸ್ಥಿಕ ರೂಪವನ್ನು ಪಡೆದು ಅದರ ಮೇಲೆ ನಿರ್ಬಂಧವನ್ನು ಹೇರು­ವುದು ಅನಿವಾರ್ಯವಾಗಿರಬೇಕು. ಪುರುಷ ಪ್ರಧಾನ ಮೌಲ್ಯಗಳು ಆರ್ಭಟಿಸಿ ಹೆಣ್ಣಿನ ಸ್ಥಾನ ಸಂಕುಚಿತಗೊಂಡ ಸಂದರ್ಭದ ಹಿನ್ನೆಲೆಯಲ್ಲಿ ಸನ್ಯಾಸವನ್ನು ಅರ್ಥ­ಮಾಡಿಕೊಳ್ಳಬೇಕಾಗು­ತ್ತದೆ. ಕಲುಷಿತಗೊಂಡು ಸಂಸಾರವೇ ಅದರ ತಿರಸ್ಕಾರಕ್ಕೆ ಕಾರಣವಾಗಿದೆ. ಕಡೆಯದಾಗಿ ಆದರೆ ಬಹುಮುಖ್ಯವಾಗಿ ಗಮನಿಸಬೇಕಾಗಿರು­ವುದು ಭಾರತದ ಜ್ಞಾನಮಾರ್ಗದಲ್ಲಿ ಬೌದ್ಧ ಚಿಂತನೆ ನಿರಂತರತೆಯನ್ನು ಕಾಯ್ದುಕೊಂಡಿದೆ. ಆಧುನಿಕ ಕಾಲದ ಜಗತ್ತಿನ ಪ್ರಮುಖ ಚಿಂತನೆ­ಗಳಿಗೆ ಬೌದ್ಧ ಚಿಂತನೆ ಅಡಿಪಾಯವನ್ನು ಹಾಕಿದೆ. ಅದು ಬೆಳೆದು ಬಂದ ಕ್ರಮವನ್ನು ಕೇವಲ ಭಾರತದ ಚಿಂತನೆಗಳಲ್ಲಿ ಮಾತ್ರವೇ ಹುಡುಕು­ವುದು ಸಾಧುವಲ್ಲ. ತರ್ಕ, ಅಸ್ತಿತ್ವವಾದವನ್ನು ಪ್ರತಿಪಾದಿಸುವ ಆಧುನಿಕ ಯುರೋಪಿನ ಚಿಂತನೆ­ಗಳಲ್ಲೂ ನಾವು ಬೌದ್ಧ ಚಿಂತನೆಯ ಮುಂದುವ­ರಿ­ಕೆ­ಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಭಾರತದಲ್ಲಿ ಬಂದ ನಾಗಾರ್ಜುನ ತರ್ಕದ ಧಾಟಿ­ಯನ್ನು ಅಲ್ಲಮನಲ್ಲಿ ಕಾಣುವುದು ಹಾಗೂ ಜನಪದರ ಮನಸೂರೆಗೊಂಡ ಮಂಟೇ­ಸ್ವಾಮಿಯಲ್ಲಿ ನೋಡುವುದು ಅಥವಾ ಇದೆಲ್ಲ­ವನ್ನೂ ಶ್ರಮಣ ಪರಂಪರೆಯೆಂದು ಗುರುತಿಸು­ವುದು ಒಂದು ಕ್ರಮವಾಗುತ್ತದೆ. ಶ್ರಮಣ ಪರಂಪರೆ ವೈದಿಕ ಚಿಂತನೆಗೆ ಮುಖಾಮುಖಿ­ಯಾಗಿ ಹರಿದುಬಂದಿದೆ. ಅದರ ಅಸ್ತಿತ್ವವೇ ಇಲ್ಲವೇನೋ ಎನ್ನುವಂತೆ ಇಂದು ನಮ್ಮ ಪಠ್ಯ­ಕ್ರಮವನ್ನೇ ರೂಪಿಸಿ ಕೊಂಡಿರುವುದು ಒಂದು ಜ್ಞಾನಧಾರೆಯನ್ನೇ ಮರೆಮಾಚಿದ ಕ್ರೌರ್ಯ­ವಾಗಿದೆ. ಬೌದ್ಧರ ಹತ್ಯೆಗಿಂತಲೂ ಚಿಂತನೆಯ ಕಗ್ಗೊಲೆ ಸಮಾಜವನ್ನು ಕಗ್ಗತ್ತಲೆಗೆ ತಳ್ಳಿದೆ.

ಆಧುನಿಕ ಸಂದರ್ಭದಲ್ಲಿ ಪಾಶ್ಚಿಮಾತ್ಯ ವಿಚಾರಧಾರೆಯೆಂದು ಮೆಟೀರಿಯಲಿಸಂನ ಹೆಸರಿ­ನಲ್ಲಿ ಮಾರ್ಕ್ಸ್‌ನ ಚಿಂತನೆಯ ಹೆಸರಿನಲ್ಲಿ ಸ್ವೀಕರಿಸುತ್ತಿದ್ದೇವೆ. ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸಲು ಬೇಕಾದ ಹರಿತವಾದ ಖಡ್ಗವಾಗಿ ಕಾಣಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಅತ್ಯಾ­ಧುನಿಕ ಮನುಷ್ಯನಿಗೆ ಬೇಕಾದ ಶೋಷಣೆಯ ವಿರುದ್ಧದ ಸಮಾನತೆಯನ್ನು ಪ್ರತಿಪಾದಿಸುವ ಮೇಲು ಕೀಳಿನ ಭೇದವನ್ನು ತಿರಸ್ಕರಿಸುವ ಬುದ್ಧನ ವಿಚಾರ­ವನ್ನು ಅಂಬೇಡ್ಕರ್ ಒಪ್ಪಿ ಅಪ್ಪಿಕೊಳ್ಳು­ತ್ತಾರೆ. ದುಡಿಮೆಯನ್ನೇ ನಂಬಿ, ಸಹಜವಾಗಿಯೇ ಸರಳವಾಗಿ ಬದುಕುವ ಮೌನದಲ್ಲಿ ಬೌದ್ಧರೇ ಆಗಿದ್ದಾರೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.