‘ಚಪಡೇನ ಲಿಖಿತೇ-–ಲಿಪಿಕರೇಣ’. 2,300 ವರ್ಷಗಳ ಹಿಂದೆ ರಾಜಾಶೋಕನ ಆದೇಶದ ಮೇರೆಗೆ ಕನ್ನಡ ನಾಡಿನಲ್ಲಿ ಬಂಡೆಗಲ್ಲಿನ ಮೇಲೆ ಶಾಸನವನ್ನು ಬರೆದ ಲಿಪಿಕಾರ ಚಪಡ. ಗಾಂಧಾರ ನಾಡಿನಿಂದ ಬಂದ ಈತನಿಗೆ ಈ ನಾಡಿನಲ್ಲಿ ಲಿಪಿ ಮೂಡಿಸಿದ ಮೊದಲ ಲಿಪಿಕಾರನೆಂಬ ಹೆಗ್ಗಳಿಕೆ ಸಲ್ಲುತ್ತದೆ. ಹಾಗೆಂದು ತಿಳಿಸಿಕೊಟ್ಟವರು ಷ.ಶೆಟ್ಟರ್.
ಇವರು ಕನ್ನಡನಾಡಿನ ಮೊದಲ ಸಹಸ್ರಮಾನದ ಎರಡೂವರೆ ಸಾವಿರ ಶಾಸನಗಳನ್ನು ಜಾಲಾಡಿ ತೆಗೆದು ಕಟ್ಟಿದ ಚರಿತ್ರೆಯ ಬೃಹತ್ ಗ್ರಂಥ: ‘ಹಳಗನ್ನಡ-– ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಇಂದು ನಮ್ಮ ಮುಂದಿದೆ. ಮತ್ತೆ ಮತ್ತೆ ಚರಿತ್ರೆಯ ಸಂಶೋಧನೆ ನಡೆಯಬೇಕೆಂಬ ಮಾತನ್ನು ಈ ಕೃತಿ ಅನುಮೋದಿಸಿದಂತಿದೆ. ಈವರೆಗೆ ನಂಬಿದ್ದ ಹಲವು ‘ಮಿಥ್’ಗಳನ್ನು ಇದು ಒಡೆದುಹಾಕುತ್ತದೆ. ಅದರಲ್ಲೂ ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣವೆಂಬ ಭ್ರಮೆಗಳು ಇಲ್ಲಿ ಕುಸಿದು ಬೀಳುತ್ತವೆ.
ಲಿಪಿಯ ವಿಕಾಸದಲ್ಲೂ ಎಷ್ಟೊಂದು ಕಥೆಗಳು: ಯಾರು ಬರೆದರು? ಯಾಕೆ ಬರೆದರು? ಯಾರು ಬರೆಸಿದರು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಮೌರ್ಯ ದೊರೆ ಅಶೋಕನ ಶಾಸನ ಬರೆಸುವ ವಿಶೇಷವಾದ ಆಸ್ಥೆ ದೇಶದಾದ್ಯಂತ ಬರವಣಿಗೆಯ ಸಂಸ್ಕೃತಿಯನ್ನು ಹರಡಿತು. ‘ಬರೆದರೆ ಅನರ್ಹರೊಡನೆ ಅರಿವನ್ನು ಹಂಚಿಕೊಳ್ಳಬೇಕಾಗುವುದೆಂಬ ಆತಂಕದಲ್ಲಿ ಅಂದಿನ ಒಂದು ವರ್ಗವು ಅರಿವಿನ ಕೀಲಿಯನ್ನು ಕಂಠಸರಳುಗಳ ಹಿಂದೆ ಅಡಗಿಸಿಟ್ಟಿತ್ತು.
ಇದನ್ನು ಬಿಡುಗಡೆ ಮಾಡಿ ಬರೆಯುತ್ತಾ ಬೆಳೆಯುವ ಮಾರ್ಗವನ್ನು ತಿಳಿಸಿಕೊಟ್ಟವರಲ್ಲಿ ಬೌದ್ಧರು ಮೊದಲಿಗರು’. ಈ ವಾದವನ್ನು ಕನ್ನಡದ ನೆಲಕ್ಕೂ ಅನ್ವಯಿಸಿ ವಿಚಾರವನ್ನು ಮಂಡಿಸಿದ್ದಾರೆ. ಇಂತಹ ಹಲವು ಬೆಚ್ಚಿಬೀಳಿಸುವ ಸಂಗತಿಗಳು ಇಲ್ಲಿ ಕಂಡುಬರುತ್ತವೆ. ಲಿಪಿಬರವಣಿಗೆ ಬ್ರಾಹ್ಮಣರ ಆಸಕ್ತಿಯಾಗಿರಲಿಲ್ಲ. ವೈದಿಕ ವ್ಯವಹಾರದ ಬಗೆಗೆ ಹೆಚ್ಚು ತೊಡಗಿಕೊಂಡಿದ್ದರಿಂದ ಮೊದಲ ಸಹಸ್ರಮಾನದಲ್ಲಿ ಈ ನಾಡಿನಲ್ಲಿ ‘ಕವಿಗಳಾಗಿ, ಸಾಹಿತಿಗಳಾಗಿ, ವೈಚಾರಿಕರಾಗಿ ವೈದಿಕರಾರೂ ಹೆಸರು ಮಾಡಲಿಲ್ಲ.’
ಸಂಸ್ಕೃತ ಭಾಷೆಯಲ್ಲಿ ಲಿಪಿ ಮೂಡಿಸಿದವರು ವೈದಿಕೇತರರಾದ ವಿಶ್ವಕರ್ಮರು. ಎಂಟನೇ ಶತಮಾನದಲ್ಲಿ ವೈದಿಕವ್ಯವಸ್ಥೆ ಬಹುತೇಕ ಕುಸಿದು ಬಿದ್ದಾಗ ಆ ಸ್ಥಾನವನ್ನು ತುಂಬಲು ಮುಂದೆ ಬಂದವರು ಪೌರಾಣಿಕರು ಮತ್ತು ಶೂದ್ರರು. ಹಾಗಾಗಿ ಎಂಟನೇ ಶತಮಾನದ ನಂತರ ಬ್ರಾಹ್ಮಣೇತರರು ಹೆಚ್ಚಾಗಿ ದಾನದತ್ತಿಗಳನ್ನು ಪಡೆದರು. ಸಂಸ್ಕೃತ ಭಾಷೆಯ ವ್ಯವಹಾರ ಬಹುತೇಕ ಬ್ರಾಹ್ಮಣ ಸಮುದಾಯದಲ್ಲಿ ನಡೆದುದರಿಂದ ಉಳಿದ ಸಮುದಾಯಗಳು ಅದರ ಲಾಭ ಪಡೆಯುವುದಕ್ಕಿಂತ, ಶೂದ್ರ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯಲ್ಲಿ ಕೊಡುಕೊಳೆ ಹೆಚ್ಚಾಗಿ ನಡೆದಿದೆ ಎಂಬುದನ್ನು ಸಾಬೀತು ಮಾಡಲು ಈ ಶಾಸನಗಳ ನೆರವು ಪಡೆದಿದ್ದಾರೆ.
ಪ್ರಾಚೀನ ಲಿಪಿ ಅಧ್ಯಯನ ಈ ನಾಡಿನಲ್ಲಿ ನಡೆದೇ ಇದೆ. ಆದರೆ ಷ.ಶೆಟ್ಟರ್ ಆಸಕ್ತಿ ಭಿನ್ನವಾದುದು. ಲಿಪಿಯ ತಜ್ಞರು ಮಾತ್ರವಾಗದೆ ಚರಿತ್ರೆಕಾರರು, ಭಾಷಾತಜ್ಞರು, ಕವಿಚರಿತ್ರೆಕಾರರು, ವೈಯ್ಯಾಕರಣಿಗಳು ಎಲ್ಲವೂ ಆಗಿ ಈ ಕೃತಿಯಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಈ ಕೃತಿಯ ಮೂಲ ಪ್ರಶ್ನೆ ಏಳುವುದು ಲಿಪಿಕಾರರ ಹಿನ್ನೆಲೆಯಲ್ಲಿ. ಕಲ್ಲಿನ ಮೇಲೆ ತಾಮ್ರಪಟಗಳ ಮೇಲೆ ಲಿಪಿಯನ್ನು ಕೊರೆದವನ ಬದುಕು ಏನು? ಎಂಬುದು ತಿಳಿಯುತ್ತದೆ. ಮೂಲಕರ್ತೃವನ್ನೇ ಬಿಟ್ಟು ಶಾಸನ ಅಧ್ಯಯನದ ಫಲವನ್ನು ಮಾತ್ರ ಮೆಲ್ಲುತ್ತಿದ್ದ ನಮಗೆ ಹೊಸ ಕಣ್ನೋಟವನ್ನು ಇದು ಕೊಡುತ್ತದೆ.
ಶೆಟ್ಟರ್ ಅವರು ಈ ಹಿಂದೆಯೂ ಶಿಲ್ಪವನ್ನು ಬಿಟ್ಟು ಶಿಲ್ಪಿಗಳ ಬಗೆಗೆ ಒಲವು ತೋರಿದ್ದರು. ಶಿಲ್ಪಿಗಳ ಹೆಜ್ಜೆಗುರುತಿನ ಅವರ ಶೋಧನೆ ವಿದ್ವತ್ಲೋಕದ ಗಮನವನ್ನು ಸೆಳೆದಿತ್ತು. ಮೂಲತಃ ಕಲೆಯ ಇತಿಹಾಸದಲ್ಲಿ ಅವರಿಗೆ ಆಸಕ್ತಿ. ಹೀಗಾಗಿ ಅವರ ಹೊಯ್ಸಳ ವಾಸ್ತುಶಿಲ್ಪದ ಅಧ್ಯಯನವು ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಜಾಗತಿಕ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟ ಸಂಶೋಧನೆಗಳೆಂದರೆ ‘ಸಾವನ್ನು ಅರಸಿ’ ಮತ್ತು ‘ಸಾವಿಗೆ ಆಹ್ವಾನ’.
ಕನ್ನಡ–ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುವ ಈ ಕೃತಿಗಳು ಜೈನರ ಸಲ್ಲೇಖನದ ಆಚರಣೆಯ ಕುತೂಹಲದಿಂದ ರೂಪು ಪಡೆದವು. ಈ ಕೃತಿಗಳು ಮೊದಲು ಇಂಗ್ಲಿಷ್‌ನಲ್ಲಿ ಬಂದ ಕಾರಣದಿಂದ ಅಷ್ಟಾಗಿ ಕನ್ನಡ ಓದುಗರ ಗಮನ ಸೆಳೆಯಲಿಲ್ಲ. ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದ ಈ ಚರಿತ್ರೆಕಾರರು ಕನ್ನಡಿಗರ ಕೈಗೆಟಕುವಂತಾದುದು ಅವರ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು–ನುಡಿ’ ಕೃತಿಯಿಂದ. ಈ ಕೃತಿಯು ನೆಲದ ಜನ ಹೊತ್ತು ಮೆರೆದು ಒಬ್ಬ ವಿದ್ವಾಂಸನಿಗೆ ಸಿಗಬೇಕಾದ ಓದುಗರ ಪ್ರೀತಿಯನ್ನು ತಂದುಕೊಟ್ಟಿತು.
ಸಂಶೋಧನೆಗಳು ತಾಯಿನುಡಿಯಲ್ಲಿ ನಡೆಯಬೇಕು, ಅದರ ಸಹಜತೆಯೇ ಅದರ ಸಾಮರ್ಥ್ಯವಾಗಿರುತ್ತದೆಂಬುದಕ್ಕೆ ಹಿಡಿದ ಸೊಡರು ‘ಶಂಗಂ ತಮಿಳಗಂ’. ಈ ಎರಡೂ ಸಂಶೋಧನೆಗಳು ಕನ್ನಡ ನಾಡಿನ ಪ್ರಾಚೀನರ ಬದುಕಿನ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡ ಭಾಷೆ–-ಸಾಹಿತ್ಯವನ್ನು ಸಂಸ್ಕೃತದ ಹಿನ್ನೆಲೆಯಲ್ಲಿ ನೋಡುವುದು ಬೆಳೆದು ಬಂದಿದೆ. ಆದರೆ ‘ಕವಿರಾಜಮಾರ್ಗ’ ಕೃತಿಯನ್ನು ನೆಪವಾಗಿರಿಸಿಕೊಂಡು ದ್ರಾವಿಡ ಮೂಲದ ಅಧ್ಯಯನವನ್ನು ತೋರಿಸಿಕೊಟ್ಟ ಕೃತಿ ‘ಶಂಗಂ ತಮಿಳಗಂ’.
ಹಾಗೆಯೇ ಕನ್ನಡ ಭಾಷೆ ಹಾಗೂ ಲಿಪಿಯ ಬೆಳವಣಿಗೆಯಲ್ಲಿ ಪ್ರಾಕೃತದ ಪ್ರಭಾವವನ್ನು ಗಮನಿಸಬೇಕಾದ ಅಗತ್ಯವನ್ನು ಬೆರಳು ಮಾಡಿ ತೋರುತ್ತಿರುವ ಪುಸ್ತಕ ‘ಹಳಗನ್ನಡ’. ಈ ಎಲ್ಲದರ ಹಿಂದಿರುವ ಬೌದ್ಧಧರ್ಮದ ಮಹತ್ವ ಕರ್ನಾಟಕ ಚರಿತ್ರೆಯನ್ನು ಹೊಸ ಕ್ರಮದಲ್ಲಿ ನೋಡುವಂತೆ ಮಾಡುತ್ತದೆ. ಈ ಎರಡೂ ಸಂಶೋಧನೆಗಳಿಂದ ಕನ್ನಡ ನಾಡಿನಲ್ಲಿ ಆರಂಭವಾದ ರಾಜತ್ವದ ನೆಲೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ರಾಜತ್ವ ಬೆಳೆದುಬರುವಾಗ ಹಲವು ಅಂಶಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡಿರುತ್ತವೆ.
ಕರ್ನಾಟಕದ ಕದಂಬರ ಕುಲದ ಹುಟ್ಟಿನ ಬಗ್ಗೆ ಇದ್ದ ಈವರೆಗಿನ ಕಥೆಗಳು ಬ್ರಾಹ್ಮಣ ಮೂಲವನ್ನು ಹೇಳುತ್ತಿದ್ದು ಅದನ್ನು ನಿರಾಕರಿಸುವ ಹಲವು ಪುರಾವೆಗಳನ್ನು ಶೆಟ್ಟರ್ ನಮಗೆ ತೋರಿಸುತ್ತಾರೆ. ಕದಂಬರೂ ಆರಂಭದಲ್ಲಿ ಬೌದ್ಧಧರ್ಮದ ಏಳಿಗೆಯನ್ನು ಬಯಸಿದವರು. ಆನಂತರ ವೈದಿಕರ ನೆರಳಿಗೆ ಹೋಗುತ್ತಾರೆ. ಅಲ್ಲಿಯವರೆಗೆ ಅಂದರೆ ಸುಮಾರು 600 ವರ್ಷಗಳ ಕಾಲ ಪ್ರಾಕೃತ ಭಾಷೆ ಈ ನಾಡಿನ ವ್ಯವಹಾರ ಭಾಷೆಯಾಗಿತ್ತು. ಮುಂದೆ ಪ್ರಾಕೃತದೊಂದಿಗೆ ಬೆರೆತ ಕನ್ನಡ–ಪ್ರಾಕೃತ ಮಿಶ್ರಿತ ಸಂಸ್ಕೃತ, ಸಂಸ್ಕೃತಭೂಯಿಷ್ಠ ಕನ್ನಡ ಹೀಗೆ ಮಾರ್ಪಾಡಾಗುತ್ತಾ ಬಂದಿದೆ.
ದೊಡ್ಡ ಸಂಖ್ಯೆಯಲ್ಲಿ ಸಂಸ್ಕೃತ ಶಾಸನಗಳು ಕದಂಬರ ಕಾಲದಲ್ಲಿ ತಾಮ್ರಪಟದ ಮೇಲೆ ರಚಿತವಾಗಿದ್ದು ಅವು ಧರ್ಮದತ್ತಿಯ ಹೊಸ ವ್ಯಾಖ್ಯಾನ ಮತ್ತು ಹೊಸ ಆರ್ಥಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿದವೆನ್ನಬಹುದು. ಗಂಗರ ಕಾಲದ ವಿಶೇಷವೆಂದರೆ ಅವರು ಬ್ರಾಹ್ಮಣೇತರರ ಸೇವೆಯನ್ನು ಗುರುತಿಸಿ ಗೌರವಿಸಿದರು. ಹೋರಾಡಿದ ವೀರರಿಗೆ ಅವರು ಪಟ್ಟ ಕಟ್ಟುತ್ತಿದ್ದರು.
‘ಹಳಗನ್ನಡ’ ಕೃತಿಯ ಸೆಳೆತ ಲಿಪಿಕಾರನ ಕಡೆಗೆ. ಅದರಲ್ಲೂ ವಿಶ್ವಕರ್ಮ, ತ್ವಷ್ಟಾರ– -ತಟಾರ-– ತಟ್ಟಕ, ಕಂಚುಗಾರ, ಬಡಗಿ ಇವರು ನಡೆಸಿದ ಲಿಪಿ ವ್ಯವಸಾಯದ ಬಗೆಗೆ ಕೇಂದ್ರೀಕೃತವಾಗಿದೆ.
ಲಿಪಿಕಾರರಾಗಿದ್ದ ವಿಶ್ವಕರ್ಮರು ವೈದಿಕರಿಗಿಂತ ಹೆಚ್ಚಿನ ದತ್ತಿಗಳನ್ನು ಬ್ರಹ್ಮದೇಯಗಳನ್ನು ಪಡೆದುಕೊಂಡ ನಿದರ್ಶನಗಳೂ ಇವೆ (ಬ್ರಾಹ್ಮಣರಿಗೆ ನೀಡುತ್ತಿದ್ದ ಭೂಮಿಯನ್ನು ಬ್ರಹ್ಮ ದೇಯಗಳೆನ್ನುತ್ತಿದ್ದರು). ಲಿಪಿಕಾರನೇ ಶಾಸನ ಸಾಹಿತ್ಯವನ್ನು ಬರೆಯುತ್ತಿದ್ದ ರೂಢಿಯೂ ಇತ್ತೆಂಬುದಕ್ಕೂ ಸಾಕಷ್ಟು ಪುರಾವೆಗಳನ್ನು ನೀಡಿದ್ದಾರೆ. ಲಿಪಿ ಜನಸಾಮಾನ್ಯರದಾಗಿರಲಿಲ್ಲವೆಂಬ ಭಾವನೆಯೇ ನಮ್ಮನ್ನು ಶಾಸನಗಳ ಬಗೆಗೆ ಮುಜುಗರವನ್ನು ಮೂಡಿಸಿತ್ತು. ಹಾಗೆ ಭಾವಿಸಲೂ ಕಾರಣಗಳಿವೆ.
ಆಧುನಿಕ ಕಾಲದಲ್ಲಿ ಚರಿತ್ರೆ ಬರೆಯತೊಡಗಿದ ಆರಂಭದ ವಿದ್ವಾಂಸರು ತಪ್ಪಾಗಿ ಗ್ರಹಿಸಿ ಬ್ರಾಹ್ಮಣರು ಮಾತ್ರವೇ ಜ್ಞಾನವನ್ನು, ಧರ್ಮವನ್ನೂ, ವಿಶೇಷ ಚಿಂತನೆಗಳೆಲ್ಲವನ್ನೂ ನೀಡಿದವರೆಂಬಂತೆ ಹೇಳುತ್ತಾ ಬಂದುದರಿಂದ, ಉಳಿದ ಸಮುದಾಯಗಳು ತಮ್ಮ ಮೂಲಗಳನ್ನು ಹುಡುಕಿಕೊಳ್ಳುವಂತೆ ಮಾಡಿವೆ. ಎಂ.ಎನ್. ಶ್ರೀನಿವಾಸ್ ಅವರು ಹೇಳುವ ‘ಸಂಸ್ಕೃತೀಕರಣ’ ಅಂದರೆ ಅದರ ಅರ್ಥ ‘ಬ್ರಾಹ್ಮಣೀಕರಣ’ವೇ ಆಗಿದೆ. ಬುಡಕಟ್ಟು ಹಾಗೂ ತಳ ಸಮುದಾಯಗಳು ತಮ್ಮ ಉನ್ನತಿಯನ್ನು ಸಂಸ್ಕೃತಾನುಕರಣೆಯಲ್ಲಿ ಕಾಣುತ್ತ ವೆಂದು ಶ್ರೀನಿವಾಸ್ ಹೇಳುತ್ತಾರೆ.
ಅಂದರೆ ಸರಳ ಮಾತಿನಲ್ಲಿ ಬ್ರಾಹ್ಮಣರ ಬದುಕಿನ ಅನುಕರಣೆ ಎಂದಂತಾಗುತ್ತದೆ. ಹೀಗೆ ವಿವರಿಸತೊಡಗಿ ಆ ಜಾಡಿನಲ್ಲೇ ನಂತರದ ಚರಿತ್ರೆ ಕುರಿತ ಸಂಶೋಧನೆಗಳು ನಡೆದಿವೆ. ರಾಜಮನೆತನಗಳು, ಕವಿಗಳು ಮತ್ತಾವುದೇ ಮಹತ್ವದ ವಿಚಾರವನ್ನು ಹೇಳುವಾಗ ಅದರಲ್ಲಿ ಬ್ರಾಹ್ಮಣ್ಯವನ್ನು ಹುಡುಕುವುದು ಸಹಜವಾಗಿ ನಡೆದುಬಂದಿತ್ತು. ದೇವರು, ಧರ್ಮ ಎಲ್ಲವೂ ಬಾಹ್ಮಣರಿಗೆ ಸೇರಿದ್ದೆಂಬಂತೆ ಭಾವಿಸಲಾಗುತ್ತಿತ್ತು.
ಭಾರತದಲ್ಲಿ ತಲೆ ಎತ್ತಿದ ದ್ರಾವಿಡ ಐಡೆಂಟಿಟಿಯ ಹೋರಾಟಗಳು, ತಳಸ್ತರದ ಹೋರಾಟಗಳು, ಕಡೆಗೆ ದಲಿತ ಚಳವಳಿ– ಇವು ತಮ್ಮತನದ ಹುಡುಕಾಟದಲ್ಲಿ ಸ್ಥಾಪಿತ ವಿಚಾರಗಳನ್ನು ಮುರಿದು ಕಟ್ಟುವ ಯತ್ನದಲ್ಲಿ ತೊಡಗಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಲಿಪಿಕಾರನೊಬ್ಬ ಬಡಗಿ, ಅಕ್ಕಸಾಲಿ ಅಥವಾ ಕಂಚುಗಾರನಾಗಿದ್ದ ಎನ್ನುವುದರಲ್ಲಿ ಹೊಸ ಸಂಭ್ರಮ ಕಾಣುತ್ತದೆ. ತಳಸ್ತರದ ಚರಿತ್ರೆ ಕಟ್ಟಿಕೊಳ್ಳಲು ಶಾಸನಸಾಹಿತ್ಯದ ಮೊರೆ ಹೋಗಬೇಕೆನಿಸಿತ್ತು.
ಬ್ರಾಹ್ಮಣೀಕರಣದ ಭ್ರಮೆಗಳನ್ನು ಕಳಚುವುದು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಬ್ರಾಹ್ಮಣೇತರ ಸಮುದಾಯಗಳಲ್ಲಿ ನಡೆದೇ ಇರುತ್ತದೆ. ಸೌಜನ್ಯದಿಂದ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಬರವಣಿಗೆಗಳು ಹಾಗೂ ಆಕ್ರೋಶದಿಂದ ಹೇಳಿದ ಬರವಣಿಗೆಗಳು ಎರಡೂ ನಮ್ಮ ನಡುವೆ ನಡೆದೇ ಇವೆ. ಇಂತಹ ಸಾಹಿತ್ಯ ರಚಿಸಿದ ಕುವೆಂಪು ನಿಂದನೆಗೆ ಗುರಿಯಾಗಿದ್ದನ್ನೂ ಇಲ್ಲಿ ನೆನೆಯ ಬಹುದು. ‘ಶೂದ್ರ ತಪಸ್ವಿ’, ‘ಜಲಗಾರ’ ಇವೆಲ್ಲಾ ಶೂದ್ರ ವಿಮೋಚನೆಯ ನೆಲೆಯಲ್ಲಿ ಹುಟ್ಟಿದ ಸಾಹಿತ್ಯವೇ ಆಗಿದೆ. ಲೋಹಿಯಾರ ರಾಮ ಕೃಷ್ಣ ಶಿವನ ಕುರಿತ ವಿಚಾರ, ಡಿ.ಆರ್ ನಾಗರಾಜರ ‘ಅಲ್ಲಮ ಮತ್ತು ಶೈವ ಪ್ರತಿಭೆ’ ಈ ಹುಡುಕಾಟದಲ್ಲಿ ಕಟ್ಟಿಕೊಟ್ಟ ವಿಚಾರಗಳೇ ಆಗಿವೆ.
‘ಹಳಗನ್ನಡ’ ಕೃತಿಯಲ್ಲಿ ‘ವೈದಿಕರಿಂದ ದೂರ ನಿಂತ ರಾಜಮನೆತನಗಳು’ ಎಂದು ಒಂದು ಅಧ್ಯಾಯವನ್ನೇ ಕಾಣಬಹುದು. ಗಂಗರು, ನೊಳಂಬರು, ಅಳುಪರು, ಬಾಣರು, ಚೋಳರು ಮುಂತಾದವರ ಆಳ್ವಿಕೆಯಲ್ಲಿ ಹೇಗೆ ಉಳಿದ ಸಮುದಾಯಗಳು ಮನ್ನಣೆಗೆ ಒಳಗಾಗಿವೆ ಎಂಬುದನ್ನು ವಿವರಿಸುತ್ತಾ ಹೋಗಿದ್ದಾರೆ. ಕಡೆಗೆ ರಾಜಮನೆತನವೊಂದು ತೆರಿಗೆ ಕೊಡದ ವೈದಿಕರ ಕೊಲೆ ಮಾಡಿದ ಶಾಸನದ ಉಲ್ಲೇಖವೂ ಬರುತ್ತದೆ. ಬಹುಶಃ ಆ ಕಾಲದಲ್ಲೂ ಬ್ರಾಹ್ಮಣ ವಿರೋಧದ ನಡೆಯನ್ನು ಪ್ರಕಟಪಡಿಸಿಕೊಳ್ಳಲು ಬಯಸಿದ್ದರೇ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ. ಅಧಿಕಾರದ ಸವಲತ್ತುಗಳನ್ನು ಬ್ರಾಹ್ಮಣರು ಪಡೆದಿರುತ್ತಾರೆಂಬ ಗುಮಾನಿಯೇ ಇದಕ್ಕೆ ಕಾರಣವಾಗಿರಲೂಬಹುದು.
ಈ ಎಲ್ಲಾ ರಾಜಕೀಯದೊಳಗೆ ರೂಪಿತವಾದ ಭಾಷೆ, ಸಾಹಿತ್ಯವನ್ನೂ ಹೊಸ ದೃಷ್ಟಿಕೋನದಲ್ಲಿ ಮರುಓದಿಗೆ ಒಳಪಡಿಸಿಕೊಳ್ಳಬೇಕಾಗಿದೆ. ಚರಿತ್ರೆ ಪ್ರಸಕ್ತ ರಾಜಕೀಯದಲ್ಲೇ ರೂಪುಗೊಳ್ಳುತ್ತದೆ. ಮತ್ತೆ ಮತ್ತೆ ಜಾತಿ ಚರ್ಚೆ ನಡೆಯುವ ಕಾರಣವೂ ಇದೇ ಆಗಿದೆ. ಸಂಸ್ಕೃತಕ್ಕೆ ಸಿಕ್ಕ ಗೌರವ ಪ್ರಾಕೃತ ಭಾಷೆಗೆ ಸಿಗದಿರಲೂ ಇದೇ ಕಾರಣವಾಗಿದೆ. ಪ್ರಾಕೃತವನ್ನು ಹೊತ್ತ ಲಿಪಿಯನ್ನು ಬ್ರಾಹ್ಮಿ ಎಂದು ಮುಂದೊಮ್ಮೆ ಕರೆಯಲಾಗಿದೆ, ಅಶೋಕನ ಕಾಲಕ್ಕೆ ಹಾಗೆ ಕರೆದಿರಲಿಲ್ಲ– ಇಂತಹ ಹಲವು ಪ್ರಶ್ನೆಗಳನ್ನೂ ಈ ಕೃತಿ ಹುಟ್ಟುಹಾಕಿದೆ.
ಎಂಬತ್ತರ ಹರಯದಲ್ಲೂ, ಮೂಗಿನ ತುದಿಯಲ್ಲಿ ಕನ್ನಡಕವನ್ನಿರಿಸಿಕೊಂಡು ಪುಸ್ತಕಗಳ ರಾಶಿಯಲ್ಲಿ ಮುಗುಳ್ನಗುವ ಶೆಟ್ಟರರ ಜೊತೆ ಮಾತಿಗೆ ಕೂತರೆ ತಾಸುಗಳು ಕಳೆದು ಹೋಗುವುದು ಅರಿವಿಗೆ ಬಾರದು. ಹೆಚ್ಚಾಗಿ ಜನರ ಜೊತೆ ಬೆರೆಯದೆ ಚಿಂತನೆಗೇ ಹೆಚ್ಚು ಸಮಯವನ್ನು ಕೊಟ್ಟುಕೊಂಡವರು ಅವರು. ಸಣ್ಣ ಪುಟ್ಟ ಆಮಿಷಗಳನ್ನು ಬದಿಗೊತ್ತಿ ಬೃಹತ್ ಯೋಜನೆಗಳಲ್ಲಿ ತೃಪ್ತಿ ಪಡೆದವರು. ಶುಷ್ಕ ವಿಚಾರವಂತರಲ್ಲ. ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಆಸಕ್ತಿಯ ಕ್ಷೇತ್ರಗಳು.
ಅಷ್ಟೇ ಅಲ್ಲ, ಅವುಗಳ ಮೇಲೆ ಪ್ರಭುತ್ವವನ್ನು ಸಾಧಿಸಿದವರು. ಇಲ್ಲಿಗೆ ಅವರ ಸಂಶೋಧನೆ ಕೊನೆಗೊಳ್ಳುವುದಿಲ್ಲ. ದಶಕಗಳಿಂದ ಕಲೆಹಾಕಿ ಬರೆದ ‘ಕವಿರಾಜಮಾರ್ಗ’ದ ಪದಪದಕ್ಕೂ ಬರೆದ ವಿವರಣೆಯನ್ನು ನಾವು ಓದಬೇಕಾಗಿದೆ. ಒಂದು ದಿನ ‘ಆದಿಪುರಾಣ’, ‘ಚಾವುಂಡರಾಯ ಪುರಾಣ’ ಈ ಎಲ್ಲಾ ಕೃತಿಗಳಿಗೆ ಅವರು ಅಚ್ಚುಕಟ್ಟಾಗಿ ಕೈಯಲ್ಲಿ ಬರೆದಿಟ್ಟ ಅರ್ಥವಿವರಣೆಯ ಬೃಹತ್ ಗ್ರಂಥಗಳನ್ನು ನೋಡಿ ಅವಾಕ್ಕಾದೆ. ‘ಶಂಗಂ ತಮಿಳಗಂ’ ಪುಸ್ತಕ ಕೇವಲ ‘ಕವಿರಾಜಮಾರ್ಗ’ ಕೃತಿಗೆ ಬರೆದ ಪ್ರಸ್ತಾವನೆಯಾಗಿತ್ತು. ಕನ್ನಡದ ಹೆಮ್ಮೆಯ ‘ಗುರುಗಳಿಗೆ’ ವಂದಿಸುತ್ತಾ...
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.