‘ಹೇಗಾದರೂ ಮಾಡು, ಏನಾದರೂ ಮಾಡು, ಆದರೆ ಅಧಿಕಾರ ಹಿಡಿ’. ಇದು ಇಂದಿನ ರಾಜಕಾರಣ. ಭಾರತದ್ದು ಮಾತ್ರವಲ್ಲ, ಇಡೀ ವಿಶ್ವದ ರಾಜಕಾರಣ. ಸಿದ್ಧಾಂತ, ನೀತಿ, ನೈತಿಕತೆಗಳನ್ನು– ಅದು ಜೊಳ್ಳು ಕಾಳೋ ಎಂಬಂತೆ ಗಾಳಿಗೆ ತೂರಲಾಗಿದೆ. ಕಾಂಗ್ರೆಸ್ಸು, ಕಮ್ಯುನಿಸ್ಟರು, ವಿವಿಧ ಬಗೆಯ ಸ್ಥಳೀಯ ಪಕ್ಷಗಳು ಆದಿಯಾಗಿ, ಭಾರತೀಯ ಜನತಾ ಪಕ್ಷವೂ ಸಹಿತ, ಒಂದು ಪಕ್ಷವಾಗಿ ಇಂದು ಅಪ್ರಸ್ತುತವಾಗಿವೆ.
ಮೋದೀಜಿ, ಅಮಿತ್ ಶಾಜಿ, ಡಿ.ಕೆ. ಶಿವಕುಮಾರಜಿ ಇತ್ಯಾದಿ ನಾಯಕಮಣಿಗಳು ವಿಪರೀತ ಪ್ರಸ್ತುತರಾಗಿದ್ದಾರೆ. ಭಾರತದಿಂದಾಚೆಗೆ, ಡೊನಾಲ್ಡ್ ಟ್ರಂಪ್, ಪುಟಿನ್ ಎಂಬಿತ್ಯಾದಿ ನಾಯಕಮಣಿಗಳು ವಿಪರೀತ ಪ್ರಸ್ತುತರಾಗಿದ್ದಾರೆ.
ಮೋದೀಜಿಯವರನ್ನೇ ತೆಗೆದುಕೊಳ್ಳಿ. ಅವರು ಏನೇ ಅನ್ನಲಿ, ಏನೇ ಮಾಡಲಿ ಅಥವಾ ಏನೂ ಮಾಡದೆ ಇರಲಿ, ಅವರ ಜನಪ್ರಿಯತೆ ಅಬಾಧಿತವಾಗಿದೆ ಎಂದು ಭಾಜಪವನ್ನು ಟೀಕಿಸುವ ವರದಿಗಾರರು ಸಹ ಹೇಳುತ್ತಿದ್ದಾರೆ.
ಏನಿದು ಮೋದೀಜಿಯವರ ಜನಪ್ರಿಯತೆಯ ಗುಟ್ಟು? ನನ್ನ ಪ್ರಕಾರ ಮೋದೀಜಿಯವರ ಜನಪ್ರಿಯತೆಯಲ್ಲಿ ಗುಟ್ಟೇ ಇಲ್ಲ. ಇತ್ತ ರಾಮನಾಮ ಜಪಿಸುತ್ತ, ಅತ್ತ ಸ್ಮಾರ್ಟ್ ಸಿಟಿಯನ್ನು ಎತ್ತಿ ಹಿಡಿಯುತ್ತ, ಎರಡೂ ಒಂದೇ ಎಂದು ಅಖಂಡ ಧೈರ್ಯದಿಂದ ಹೇಳುತ್ತಾ ಮೋದೀಜಿ ಸುಳ್ಳನ್ನು ಸತ್ಯವೆಂದು ಅಖಂಡ ಧೈರ್ಯದಿಂದ ಸಾರುತ್ತಾರೆ. ಅದೇ ಅವರ ಯಶಸ್ಸು.
ಸ್ಮಾರ್ಟ್ ಸಿಟಿ ಎಂಬ ಸ್ವರ್ಗದ ಬಗ್ಗೆ ನಾನು ನಿಮಗೆ ವಿವರಿಸಬೇಕಾದ್ದಿಲ್ಲ. ನಿಮಗೆ ತಿಳಿದಿರುವ ಸ್ವರ್ಗ– ಅಥವಾ ನರಕ ಅದು. ಆದರೆ ರಾಮರಾಜ್ಯವೆಂಬುದು ನಿಮಗೆ ಅಷ್ಟಾಗಿ ತಿಳಿಯದೇ ಇರುವ, ಆದರೆ ನೀವು ತುಂಬಾ ಗೌರವಿಸುವ ಒಂದು ಆದರ್ಶ ಆಡಳಿತ ಮಾದರಿ. ಅದರ ಮೇಲೆ ಒಂದಿಷ್ಟು ಬೆಳಕು ಚೆಲ್ಲುವುದು ಇಂದಿನ ಅಗತ್ಯವಾಗಿದೆ.
ರಾವಣನ ಸಂಹಾರದ ನಂತರ, ರಾವಣನ ರಾಜ್ಯವನ್ನು ರಾವಣನ ತಮ್ಮ ವಿಭೀಷಣನಿಗೆ ವಹಿಸಿಕೊಟ್ಟು, ಅಯೋಧ್ಯೆಗೆ ಮರಳುತ್ತಾನೆ ರಾಮ. ಅಲ್ಲಿ, ಪರಮ ಸಭ್ಯನೂ ವಿಶಾಲ ಹೃದಯಿಯೂ ಆದ, ತಮ್ಮ ಭರತನಿಂದ ರಾಜ್ಯವನ್ನು ಮರಳಿ ಪಡೆದು ರಾಜ್ಯಭಾರ ಮಾಡುತ್ತಾನೆ ರಾಮ.
ರಾಮನ ಈ ಘಟ್ಟದ ರಾಜ್ಯಭಾರವನ್ನೇ ರಾಮರಾಜ್ಯವೆಂದು ಕರೆಯುವುದು ನಾವು. ಆದರೆ ರಾಮರಾಜ್ಯವನ್ನು ತದ್ವಿರುದ್ಧವಾದ ಎರಡು ರೀತಿಗಳಲ್ಲಿ ಅರ್ಥೈಸುವುದು ಸಾಧ್ಯವಿದೆ. ಮಾತ್ರವಲ್ಲ, ಎರಡೂ ರೀತಿಗಳಿಗೆ ರಾಮಾಯಣದಲ್ಲಿ ಆಧಾರಗಳನ್ನು ಹುಡುಕುವುದು ಕೂಡ ಸಾಧ್ಯವಿದೆ. ನೀವೇ ನೋಡಿ.
ಒಂದು ಮಾದರಿಯನ್ನು, ನಾನು, ಮೋದೀಜಿ ಮಾದರಿಯೆಂದೂ ಇನ್ನೊಂದು ಮಾದರಿಯನ್ನು ಗಾಂಧೀಜಿ ಮಾದರಿಯೆಂದೂ ಕರೆಯಲು ಇಷ್ಟಪಡುತ್ತೇನೆ.
ಮೋದೀಜಿ ಮಾದರಿಯನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ವಿದೇಶಿ ಬಂಡವಾಳಗಳ ಸಂಯುಕ್ತ ಮಾದರಿಯೆಂದೂ, ಗಾಂಧೀಜಿ ಮಾದರಿಯನ್ನು ಶೂದ್ರ ಮಾದರಿಯೆಂದೂ ಕರೆಯಲು ಇಷ್ಟಪಡುತ್ತೇನೆ.
ಮೋದೀಜಿ ಮಾದರಿಯನ್ನು ನಗರಕೇಂದ್ರಿತ ಮಾದರಿಯೆಂದೂ, ಗಾಂಧೀಜಿ ಮಾದರಿಯನ್ನು ಗ್ರಾಮ ಸ್ವರಾಜ್ಯ ಮಾದರಿಯೆಂದೂ, ಮೋದೀಜಿ ಮಾದರಿಯನ್ನು ಶ್ರೀಮಂತರ ಬದುಕಿನ ಮಾದರಿಯೆಂದೂ, ಗಾಂಧೀಜಿ ಮಾದರಿಯನ್ನು ಸರಳಬದುಕಿನ ಮಾದರಿಯೆಂದು ಕೂಡ ಕರೆಯಬಹುದಾಗಿದೆ. ಇವೆರಡೂ ಮಾದರಿಗಳಿಗೆ ರಾಮಾಯಣದಲ್ಲಿ ಆಧಾರಗಳನ್ನು ಹುಡುಕಬಹುದಾಗಿದೆ. ಹಾಗಾಗಿ ಗೊಂದಲ.
ರಾಮ ಅಯೋಧ್ಯೆಗೆ ಮರಳಿದ ಎಂದೆ. ಅಯೋಧ್ಯೆ ಒಂದು ಸಂಪದ್ಭರಿತವಾದ ನಗರ. ಮೇಲ್ಜಾತಿಗಳು, ಮೇಲ್ವರ್ಗಗಳು, ವಿದೇಶಿ ವರ್ತಕರು, ನೃತ್ಯಗೃಹಗಳು, ನಾಟಕಗೃಹಗಳು, ಭರ್ಜರಿ ದೇವಸ್ಥಾನಗಳು ಹಾಗೂ ತುಂಬಿ ತುಳುಕುತ್ತಿರುವ ನಗರ. ಹಾಗಾಗಿ ಮೋದೀಜಿ, ತಮ್ಮನ್ನೂ ಸಹ ಇವುಗಳಿಂದ ಸುತ್ತುವರೆಸಿಕೊಂಡು, ಡೊನಾಲ್ಡ್ ಟ್ರಂಪುಗಳು ಹಾಗೂ ಪುಟಿನ್‌ಗಳಿಗೆ ಹಸ್ತಲಾಘವ ನೀಡಿಕೊಂಡು ಓಡಾಡುವುದು ಸೂಕ್ತವೇ ಇದೆ. ಆದರೆ, ರಾಮನಿಗೆ ರಾಜ್ಯವನ್ನು ಹಸ್ತಾಂತರಿಸಿದ ಭರತ ಅಯೋಧ್ಯೆಯಿಂದ ರಾಜ್ಯಭಾರ ನಡೆಸಿರಲಿಲ್ಲ.
ಅಯೋಧ್ಯೆಯ ಹೊರವಲಯದಲ್ಲಿದ್ದ ನಂದಿಗ್ರಾಮವೆಂಬ ಒಂದು ಪುಟ್ಟ ಹಳ್ಳಿಯಲ್ಲಿ ಕುಳಿತು, ನಾರುಮಡಿಯುಟ್ಟು, ಹುಲ್ಲಿನ ಚಾಪೆಯ ಮೇಲೆ ಮಲಗಿ, ರಾಜ್ಯಭಾರ ನಡೆಸಿದ್ದ. ಅವನಿಂದ ರಾಜ್ಯ ಪಡೆದ ರಾಮ, ಅವನಿಗಿಂತಲೂ ಇನ್ನೂ ಹೆಚ್ಚು ಆದರ್ಶಮಯವಾಗಿ ರಾಜ್ಯಭಾರ ಮಾಡಬೇಕು ತಾನೆ? ಅವನಿಗಿಂತ ಒಂದು ಹೆಜ್ಜೆ ಮುಂದಿಡಬೇಕೇ ಹೊರತು ಹಿಂದಿಡುವುದಕ್ಕಾಗುವುದಿಲ್ಲ ತಾನೆ? ರಾಮ ಹೆಜ್ಜೆ ಮುಂದಿಟ್ಟ ಎಂದು ಗಾಂಧೀಜಿ ಭಾವಿಸುತ್ತಾರೆ. ಹೆಜ್ಜೆ ಹಿಂದಿಟ್ಟ ಎಂದು ಮೋದೀಜಿ ಭಾವಿಸುತ್ತಾರೆ.
ನಂದಿಗ್ರಾಮ! ಸಾಮಾನ್ಯ ಗ್ರಾಮವಲ್ಲ ಇದು. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಮಾರ್ಕ್ಸ್‌ವಾದಿ ಸರ್ಕಾರವು ‘ಕೈಗಾರಿಕೀಕರಣವನ್ನು ಚುರುಕುಗೊಳಿಸುತ್ತೇವೆ’ ಎಂಬ ಭರದಲ್ಲಿ ನಂದಿಗ್ರಾಮದಿಂದ ಕೃಷಿಕರನ್ನು ಒಕ್ಕಲೆಬ್ಬಿಸಲು ಹೋಗಿ ಅಧಿಕಾರವನ್ನೇ ಕಳೆದುಕೊಂಡಿತು. ಇರಲಿ. ರಾಮರಾಜ್ಯವೆಂಬುದು ನಂದಿಗ್ರಾಮದಿಂದ ಹೊರಹೊಮ್ಮುವ ಒಂದು ಸ್ವರಾಜ್ಯ.
ಮೋದೀಜಿ, ಡಿ.ಕೆ. ಶಿವಕುಮಾರಜಿ ಇತ್ಯಾದಿ ನಾಯಕಮಣಿಗಳು ಮಹಾನಗರಗಳಿಂದ ನಡೆಸುವ ಖರೀದಿ ರಾಜಕಾರಣವಲ್ಲ ಇದು. ಈ ಸಂಗತಿಯನ್ನು ಮೊದಲು ಗ್ರಹಿಸಿದವರು ಗಾಂಧೀಜಿ. ಹಾಗೆಂದೇ ಲಗುಬಗೆಯಿಂದ ಬೆತ್ತಲಾದರು ಅವರು. ಸಣಕಲಾದ ತನ್ನ ಬೆತ್ತಲೆ ಮೈಯ್ಯನ್ನು ಎಲ್ಲರೆದುರಿಗೂ ಹಿಡಿದು ತೋರಿಸಿ, ಖರೀದಿ ರಾಜಕಾರಣ ಮಾಡಬಲ್ಲಂತಹ ಜೇಬು ತನಗಿಲ್ಲವೆಂದು ಖಾತ್ರಿಪಡಿಸಿದರು ಅವರು.
ಗಾಂಧೀಜಿ ಗ್ರಾಮಸ್ವರಾಜ್ಯದತ್ತ ಹೊರಳಿದರು. ಖಾದಿ ಉದ್ದಿಮೆಯತ್ತ ಹೊರಳಿದರು. ಹೈನುಗಾರಿಕೆ ಹಾಗೂ ಕೈಉತ್ಪಾದನೆಯ ಕೃಷಿ ಪದ್ಧತಿಯತ್ತ ಹೊರಳಿದರು. ಉತ್ತೇಜಿಸಿದರು. ಭಾರತದಾದ್ಯಂತ ಸಾವಿರಾರು ನಂದಿಗ್ರಾಮಗಳು ಮೇಲೇಳುವಂತೆ ಮಾಡಿದರು. ಸರಳವಾಗಿ ಹೇಳುವುದಾದರೆ ರಾಮನಂತೆಯೇ ಬದುಕಿ ರಾಮನಾಗಿಯೇ ರಾಜಕಾರಣ ಮಾಡಿದರು. ಆದರೆ ಗಾಂಧೀಜಿ, ತನ್ನ ಜೀವಿತಕಾಲದಲ್ಲಿ ಪೂರ್ತಿ ಯಶಸ್ವಿಯಾಗಲಿಲ್ಲ.
ಆಗುವುದು ಸಾಧ್ಯವೂ ಇರಲಿಲ್ಲ. ಬೇರೆಯವರನ್ನು ಬಿಡಿ, ಅವರೇ ಆಯ್ಕೆ ಮಾಡಿದ ಅವರ ಉತ್ತರಾಧಿಕಾರಿ ನೆಹರೂ ಕೂಡ ಗಾಂಧಿ ಮಾದರಿಯನ್ನು ಇಡಿಯಾಗಿ ಸ್ವೀಕರಿಸಲಿಲ್ಲ. ಅರ್ಧಮರ್ಧ ಸ್ವೀಕರಿಸಿದರು. ಹಾಗೆ ಮಾಡಲಿಕ್ಕೆ ಅವರಿಗೆ ಆಗ ಬಲವಾದ ಚಾರಿತ್ರಿಕ ಕಾರಣಗಳಿದ್ದವು.
ಸಮಾನತೆ ಹಾಗೂ ಸಹಕಾರ ಮನೋಭಾವಗಳನ್ನು ಜಾರಿಗೆ ತರಬಲ್ಲ ಹಾಗೂ ಯಂತ್ರ ಪರವಾದ ಇತರೆ ಮಾದರಿಗಳೂ 1947ರಲ್ಲಿ ಲಭ್ಯವಿದ್ದವು. ಮನುಷ್ಯ, ಮನುಷ್ಯತ್ವ ಕಳೆದುಕೊಳ್ಳದೆ ಯಂತ್ರಗಳನ್ನು ಚಲಾಯಿಸಬಲ್ಲನು ಎಂದು ನಂಬಿದ್ದ ಕಾಲವದು. ನೆಹರೂ ಅವರ ಮುಂದೆ ಸೋವಿಯತ್ ರಷ್ಯಾದ ಸಮಾಜವಾದಿ ಮಾದರಿಯೂ ಲಭ್ಯವಿತ್ತು. ಹಾಗಾಗಿ ಅವರು, ಅರ್ಧ ಗಾಂಧಿ, ಅರ್ಧ ಲೆನಿನ್, ಅರ್ಧ ನಗರೀಕರಣ, ಅರ್ಧ ಗ್ರಾಮಸ್ವರಾಜ್ಯ, ಅರ್ಧ ಸಬ್ಸಿಡಿ, ಅರ್ಧ ಖಾಸಗೀಕರಣ ಎಂಬಿತ್ಯಾದಿಯಾಗಿ– ಪೂರ್ತಿ ಪ್ರಾಮಾಣಿಕತೆಯಿಂದಲೇ ಅರ್ಧಮರ್ಧ ರಾಜ್ಯವಾಳಿದರು.
ನೆಹರೂ ಹಚ್ಚಿದ ರಾಜಕೀಯ ತೇಪೆ ಕೆಲಸವನ್ನು ಪ್ರಾಮಾಣಿಕವಾಗಿಯೇ ಮುಂದುವರೆಸಿದ ಕಾಂಗ್ರೆಸ್ ಪಕ್ಷವು ನರಸಿಂಹರಾಯರ ಕಾಲಕ್ಕೆ ಬಳಲಿ ಬೆಂಡಾಗಿ ಬಸವಳಿದು ಪೂರ್ತಿ ನಗರೀಕರಣದತ್ತ ವಾಲಿ ಮಗುಚಿ ಬಿದ್ದಿತು. ನಂತರದಲ್ಲಿ ಮನಮೋಹನ ಸಿಂಗರ ಕಾಲ ಬಂದಿತು.
ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು ಎಂಬ ಅರ್ಥಶಾಸ್ತ್ರೀಯ ತತ್ವದಲ್ಲಿ ನಂಬಿಕೆಯಿಟ್ಟಿದ್ದ ಮನಮೋಹನ ಸಿಂಗರು– ಪ್ರಾಮಾಣಿಕತೆಯಿಂದಲೇ ಪೂರ್ತಿ ನಗರೀಕರಣ ಅಥವಾ ಪೂರ್ತಿ ಯಾಂತ್ರೀಕರಣ ಅಥವಾ ಪೂರ್ತಿ ವ್ಯಾಪಾರೀಕರಣವನ್ನು ಪ್ರಯತ್ನಿಸಿದರು. ರಾಜಕೀಯವಾಗಿ ಸೋತರು. ಇತ್ತ ಅಟಲ ಬಿಹಾರಿ ವಾಜಪೇಯಿ ಹಾಗೂ ಅವರ ಗೆಳೆಯ ಲಾಲ್ ಕೃಷ್ಣ ಅಡ್ವಾಣಿಯವರು ಅರ್ಧ ರಾಮರಾಜ್ಯ, ಅರ್ಧ ಪ್ರಜಾಪ್ರಭುತ್ವ ಎಂದು ಪ್ರಯತ್ನಿಸಿ ಸೋತರು.
ಪೂರ್ತಿ ಗೆದ್ದವರಂತೆ ಕಾಣುತ್ತಿರುವವರು ಮೋದೀಜಿ ಮಾತ್ರ. ಕಾಲ ಮಾತ್ರವೇ ಹೇಳಬಲ್ಲದು ಮೋದೀಜಿ ಪೂರ್ತಿ ಗೆದ್ದರೋ ಪೂರ್ತಿ ಸೋತರೋ ಎಂದು. ಅದೇನೇ ಇರಲಿ ವಾಜಪೇಯಿ, ಅಡ್ವಾಣಿ, ಜ್ಯೋತಿಬಸು, ಸೋನಿಯಾ ಗಾಂಧಿ, ಮನಮೋಹನ ಸಿಂಗ್ ಇತ್ಯಾದಿ ಎಲ್ಲರೂ, ಕೌರವ ಪಕ್ಷದ ಹಿರಿಯ ಸೇನಾಧಿಪತಿಗಳಂತೆ ಸೋತು ಮಲಗಿದರು. ಅವರನ್ನು ಅಪಹಾಸ್ಯ ಮಾಡಲಾಗದು. ಅತ್ತ ಬೆಂಕಿ, ಇತ್ತ ಬಾಣಲೆಗಳ ನಡುವೆ ನಡೆಯುತ್ತಾ ದಾರಿ ಸವೆಸಿದ ಧೀಮಂತರು ಅವರು.
ರಾಮರಾಜ್ಯವೆಂದರೆ ಸ್ಮಾರ್ಟ್‌ಸಿಟಿ ಎಂದು ಪೂರ್ತಿ ಧೈರ್ಯದಿಂದ ಹೇಳುತ್ತಾರೆ ಮೋದೀಜಿ! ಭಾರತ ದೇಶವೆಂದರೆ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ವಿದೇಶಿ ಬಂಡವಾಳಗಳ ಸಂಯುಕ್ತರಂಗ ಎಂದು ಎದೆತಟ್ಟಿಕೊಂಡು ಹೇಳುತ್ತಾರೆ ಮೋದೀಜಿ! ವಾಲ್ಮೀಕಿ ರಾಮಾಯಣವೆಂಬುದು ಹಳೆಯ ಕಾಲದ ಹೋಲ್ಡಾಲ್ ಇದ್ದಂತೆ, ನಾನಾಗಲೇ ಹೇಳಿದ ಹಾಗೆ.
ಅದರೊಳಗಿನಿಂದ ಸ್ಮಾರ್ಟ್ ಸಿಟಿಯೊಂದನ್ನು ಹುಡುಕಿ ಮೇಲೆತ್ತಿ ತೋರಿಸುವುದು ಅಸಾಧ್ಯವೇನಲ್ಲ. ಸಾವಿರಾರು ಮಂದಿ ಸಂಸ್ಕೃತ ಪಂಡಿತರು, ಮಠಾಧೀಶರು, ಆಧುನಿಕ ಸಂತರು ಸಹಕರಿಸುತ್ತ ಸಾಲಾಗಿ ನಿಂತಿದ್ದಾರೆ. ಸಂಸ್ಕೃತದ ಸ್ಮಾರ್ಟ್ ಸಿಟಿಯೊಂದನ್ನು ನಿರ್ಮಿಸಲಿಕ್ಕಾಗಿ.
ರಾಮಾಯಣದಲ್ಲಿ ಶೂದ್ರರ ನೇರವಾದ ಪ್ರಸ್ತಾಪವಿಲ್ಲ ಅಥವಾ ನೇರವಾಗಿ ಕೃಷಿಯ ಪ್ರಸ್ತಾಪವೂ ಇಲ್ಲ. ರೂಪಕವಾಗಿ ಇವೆಲ್ಲವೂ ಇವೆ. ನೇಕಾರಿಕೆ, ಕಮ್ಮಾರಿಕೆ, ಕುಂಬಾರಿಕೆ, ಕೃಷಿ ಕೂಲಿಗಾರಿಕೆ ಇತ್ಯಾದಿ ಎಲ್ಲವೂ ರೂಪಕವಾಗಿ ಅಡಗಿ ಕುಳಿತಿವೆ ಒಳಗೆ. ರಾಮಾಯಣವು ಶೂದ್ರವರ್ಣದ ಪ್ರಸ್ತಾಪವನ್ನೇ ಮಾಡದಿರುವುದಕ್ಕೆ ಏನು ಕಾರಣ? ಪರಮ ನೀಚ ಕೃತಿಯೇ ಇದು? ಅಥವಾ ಇದನ್ನು ಓದುವ ರೀತಿ ನಮಗೆ ತಿಳಿಯದೆ ಹೋಗಿದೆಯೆ? ಅಂಬೇಡ್ಕರ್ ರಾಮಾಯಣದ ಬಗ್ಗೆ ಸಿಟ್ಟಾದರು. ಮಾರ್ಕ್ಸ್‌ವಾದಿಗಳು ಸಿಟ್ಟಾದರು. ವಿಚಾರವಾದಿಗಳು ಸಿಟ್ಟಾದರು. ಮೋದೀಜಿ, ತಮಗೆ ಬೇಕಿರುವಂತೆ ರಾಮಾಯಣವನ್ನು ಬಳಸಿಕೊಳ್ಳಲು ಬಿಟ್ಟರು ಇವರೆಲ್ಲ. ಹಾಗೂ ನಾವೆಲ್ಲ.
ಗಾಂಧೀಜಿ ಹಾಗೆ ಮಾಡಲಿಲ್ಲ. ಕುವೆಂಪು ಹಾಗೆ ಮಾಡಲಿಲ್ಲ. ರಾಮಾಯಣವನ್ನು ಭಿನ್ನ ರೀತಿಯಿಂದ ಓದಿದರು ಅವರು. ರಾಮಾಯಣವೆಂಬ ಹೋಲ್ಡಾಲಿನೊಳಗಿಂದ ಶೂದ್ರತ್ವವನ್ನು ಎತ್ತಿ ಹಿಡಿದರು. ರಾಮಾಯಣದಲ್ಲಿ ಅಡಗಿರುವ ವಿಚಾರವಾದವನ್ನು ಎತ್ತಿ ಹಿಡಿದರು. ಉದಾಹರಣೆಗೆ ಯಜ್ಞವನ್ನೇ ತೆಗೆದುಕೊಳ್ಳಿ. ಶೂದ್ರತ್ವವನ್ನು ಸಲಹುವುದೇ ಯಜ್ಞ ಎಂದರು ಗಾಂಧೀಜಿ. ಒಟ್ಟು ಕತೆಯ ನೀತಿಯೆಂದರೆ ರಾಮಾಯಣವನ್ನು ರೂಪಕವಾಗಿ ಗ್ರಹಿಸುವುದು ಸಾಧ್ಯವಿದೆ. ರಾಮಾಯಣವೆಂಬ ಗಣಿಯಿಂದ ಚಿನ್ನವನ್ನು ತೆಗೆಯುವುದು ಸಾಧ್ಯವಿದೆ.
ಟನ್ನುಗಟ್ಟಲೆ ತುಪ್ಪವನ್ನು ಬೆಂಕಿಗೆ ಸುರಿಯುವುದು, ಅರ್ಥವಾಗದ ಮಂತ್ರಗಳನ್ನು ಟನ್ನುಗಟ್ಟಲೆ ಮಣಮಣಿಸುವುದು ಹಾಗೂ ಕುರಿಗಳಿಗೆ ಬದಲಾಗಿ– ಯಜ್ಞದ ಕೊನೆಯಲ್ಲಿ, ಮುಸಲ್ಮಾನರನ್ನು ಬಲಿಕೊಡುವುದೇ ಯಜ್ಞದ ಅರ್ಥ ಎಂದು ಮೋದೀಜಿ ಹೇಳಿದರೆ ನಾವು ನಂಬಬೇಕಿಲ್ಲ. ನಾವು ಕುರುಡರಾಗಬೇಕಿಲ್ಲ, ಕಿವುಡರಾಗಬೇಕಿಲ್ಲ.
ಮೋದಿವಾದದ ಮೂಲ ಪುರುಷರೊಬ್ಬರು ಗಾಂಧೀಜಿಯನ್ನು ದೈಹಿಕವಾಗಿ ಕೊಂದರು. ಈಗ ನಾವೆಲ್ಲರೂ ನೈತಿಕವಾಗಿ ಪ್ರತಿದಿನ ಅವರನ್ನು ಕೊಲ್ಲುತ್ತಿದ್ದೇವೆ. ಮೋದೀಜಿ ನಮ್ಮ ನಾಯಕರಾಗಿರುವುದು, ಟ್ರಂಪ್– ಪುಟಿನ್ ಇತ್ಯಾದಿ ರಾಕ್ಷಸರು ಮನುಕುಲದ ನಾಯಕರಾಗಿರುವುದು ನಮ್ಮೆಲ್ಲರ ನೈತಿಕ ಎಡಬಿಡಂಗಿತನದಿಂದಾಗಿಯೇ ಹೌದು. ‘ಹೇ ರಾಮ್’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.