ನದಿಯು ಸಮುದ್ರ ಸೇರುವಲ್ಲಿ, ನೀರಿನ ಆಳ ಕಡಿಮೆಯಿದ್ದು ಅಗಲ ಜಾಸ್ತಿ ಇರುವಲ್ಲಿ, ಉಬ್ಬರ ಇಳಿತಗಳ ಆವೇಗ ದಿನಂಪ್ರತಿ ಇರುವಲ್ಲಿ, ಒಂದು ರೀತಿಯ ಕಾಡು ಬೆಳೆದುಕೊಂಡಿರುತ್ತದೆ. ಸಣ್ಣ ಮರಗಳು ಅವು, ಒತ್ತೊತ್ತಾಗಿ ಬೆಳೆದುಕೊಂಡಿರುತ್ತವೆ. ನೆಲದಲ್ಲಿ ತಲೆ ಹುದುಗಿಸಿಕೊಂಡಿರುವ ರೆಂಬೆಗಳಂತೆ ಇವುಗಳ ಕಾಂಡವು ಹಲವು ಟಿಸಿಲುಗಳಲ್ಲಿ, ಹಲವು ಕಡೆಗಳಲ್ಲಿ ಭೂಮಿಯನ್ನು ತಬ್ಬಿ ಹಿಡಿದುಕೊಂಡಿರುತ್ತದೆ. ಮೇಲೆ ಈ ಎಲ್ಲ ಕಾಂಡಗಳೂ ಮತ್ತೊಮ್ಮೆ ಸೇರಿ ಏಕಕಾಂಡವಾಗಿ, ಕಾಂಡದಿಂದ ರೆಂಬೆಗಳು ಮೂಡಿ, ಎಲೆಗಳು ಮೂಡಿ, ಮರವು ನಿಂತಿರುತ್ತದೆ.
ನೆರೆ ಬಂದಾಗ, ನೀರು ಈ ಮರಗಳನ್ನು ಬುಡಮೇಲು ಮಾಡಲಾರದು. ಹಲವು ಕಾಂಡಗಳ ಹಿಡಿತವಿರುತ್ತದೆ ಮರಕ್ಕೆ ಹಾಗೂ ಮರದ ಅಡಿಯಲ್ಲಿ ನೀರು ಸರಾಗವಾಗಿ ಆಚೀಚೆ ಹರಿದುಹೋಗಬಲ್ಲುದಾಗಿರುತ್ತದೆ. ಹೀಗೆ ನೀರು ಹಾಗೂ ನೆಲ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಸಸ್ಯಗಳಿವು, ಉಪ್ಪು ನೀರು ಹಾಗೂ ಸಿಹಿ ನೀರುಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಸಸ್ಯಗಳು. ಸೂಫಿಗಳು ಹಾಗೂ ಸಂತರು ಕೂಡ ಅಳವೆ ಕಾಡುಗಳಂತೆ ಎರಡು ಜಗತ್ತುಗಳನ್ನು ಏಕಕಾಲದಲ್ಲಿ ನಿಭಾಯಿಸುತ್ತಾರೆ.
ಆಧುನಿಕ ಯುಗವು ಅಳವೆ ಕಾಡುಗಳನ್ನು ಅಪ್ರಯೋಜಕ ಅರಣ್ಯಗಳೆಂದು ತಿಳಿದು ಸವರತೊಡಗಿತ್ತು. ಆದರೆ ನಿಧಾನವಾಗಿ ಇವುಗಳ ಉಪಯುಕ್ತತೆ ಅರಿವಾಯಿತು. ಇತ್ತಣಿಂದ ಭೂಮಿ ಕೊಚ್ಚಿಕೊಂಡು ಹೋಗದಂತೆ, ಅತ್ತಣಿಂದ ನೆರೆಯ ನೀರು ಒಳನುಗ್ಗದಂತೆ, ಜೈವಿಕ ತಡೆಗೋಡೆಗಳಂತೆ, ಕಾರ್ಯನಿರ್ವಹಿಸುತ್ತವೆ ಇವು ಎಂದು ಅರಿವಾಯಿತು. ಅನೇಕ ಜೀವ ಪ್ರಭೇದಗಳಿಗೆ ಆಶ್ರಯ ನೀಡುತ್ತವೆ ಎಂದು ಅರಿವಾಯಿತು. ಸೂಫಿ ಪಂಥ ಸಹ ಹೀಗೆಯೇ ಸರಿ.
ಅತ್ತಣಿಂದ ಹಿಂದೂ ನೆಲ, ಇತ್ತಣಿಂದ ಮುಸಲ್ಮಾನ ನೀರು, ಪರಸ್ಪರ ಎರಗಿ ಬರುವಾಗ ನಡುವೆ ನಿಂತು ನಿಭಾಯಿಸುತ್ತವೆ, ಪ್ರೀತಿಯ ನೆಲೆಗಳಾಗಿರುತ್ತವೆ ಇವು. ಸೂಫಿ ನೆಲೆಗಳು ರೂಪಿತವಾದದ್ದು ಮುಸಲ್ಮಾನ ದೊರೆಗಳ ಕಾಲದಲ್ಲಿ. ಆದರೆ ಮುಸಲ್ಮಾನ ದೊರೆಗಳಿಂದಾಗಿ ಅಲ್ಲ ಅಥವಾ ಮುಲ್ಲಾಗಳಿಂದಾಗಿಯೂ ಅಲ್ಲ. ಪ್ರತಿರೋಧದ ನೆಲೆಗಳಾಗಿ ರೂಪಿತವಾದವು. ಹಿಂದೂ– ಮುಸಲ್ಮಾನ ಎರಡೂ ಧರ್ಮಗಳ ಬಡಜನರ ಆಧ್ಯಾತ್ಮಿಕತೆಯಾಗಿ ರೂಪಿತವಾದವು ಸೂಫಿ ಪಂಥಗಳು.
ಇವುಗಳ ಬಗ್ಗೆ ಕೂಡ ಜಗಳ ನಡೆಯುತ್ತಿರುತ್ತದೆ, ಇವುಗಳ ಜನಪ್ರಿಯತೆಯ ಕಾರಣದಿಂದಾಗಿಯೇ ನಡೆಯುತ್ತಿರುತ್ತದೆ. ಹಿಂದೂ ಪ್ರತ್ಯೇಕತಾವಾದಿಗಳು ತಮ್ಮ ನೆಲೆಗಳೆಂದೂ, ಮುಸಲ್ಮಾನ ಪ್ರತ್ಯೇಕತಾವಾದಿಗಳು ತಮ್ಮ ನೆಲೆಗಳೆಂದೂ ಪರಸ್ಪರ ಕಿತ್ತಾಡಿ, ಧಾರ್ಮಿಕ ಸಮತೋಲನವನ್ನು ಹಾಳುಗೆಡವುತ್ತಿರುತ್ತಾರೆ.
ಬಾಬಾಬುಡನ್ ಗಿರಿಯ ಸೂಫಿ-ದತ್ತ ಪೀಠವು ಇಂತಹ ಒಂದು ಉದಾಹರಣೆ. ಈ ಪೀಠವನ್ನು ಶುದ್ಧೀಕರಿಸಿ ಶುದ್ಧಾಂಗ ದತ್ತಪೀಠವಾಗಿಸಬೇಕೆಂಬುದು ಹಿಂದುತ್ವವಾದಿಗಳ ಹಟ, ಶುದ್ಧಾಂಗ ಮಸೀದಿಯಾಗಿಸಬೇಕೆಂಬುದು ಮುಸಲ್ಮಾನ ಪ್ರತ್ಯೇಕತಾವಾದಿಗಳ ಹಟ. ಈಚಿನ ದಿನಗಳಲ್ಲಿ ಹಿಂದುತ್ವ ಮೇಲುಗೈ ಸಾಧಿಸಿದೆಯಾದ್ದರಿಂದ ಹಿಂದೂ ಹಟವು ಮೇಲುಗೈ ಸಾಧಿಸಿದೆ. ‘ಹೀಗೆಲ್ಲ ಮಾಡಬೇಡಿ, ಇದು ತರವಲ್ಲ’ ಎಂದು ಬುದ್ಧಿವಾದ ಹೇಳುವ ಧಾರ್ಮಿಕ ಪರಿಸರವಾದಿಗಳನ್ನು ಮುಸಲ್ಮಾನರ ಏಜೆಂಟರು ಎಂದು ದೂರ ತಳ್ಳಲಾಗಿರುತ್ತದೆ.
ಬಾಬಾಬುಡನ್ ಗಿರಿಯ ಪೀಠದ ಮೇಲುಸ್ತುವಾರಿಯು ಸೂಫಿ ಪಂಥದ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿಯವರ ಬಳಿಯಿದೆ. ಮೊದಲಿನಿಂದಲೂ ಹಾಗೆಯೇ ಇತ್ತು. ಕರ್ನಾಟಕ ಸರ್ಕಾರವು ಕಿತ್ತಾಟವನ್ನು ಗಮನಿಸಿ, ಈಗಿರುವ ವ್ಯವಸ್ಥೆಯ ಅಡಿಯಲ್ಲಿಯೇ ಪೀಠವನ್ನು ಮುಂದುವರೆಸಿಕೊಂಡು ಹೋಗುವುದಾಗಿ ಸುಪ್ರೀಂ ಕೋರ್ಟಿಗೆ ವರದಿ ನೀಡಿದೆ. ಕರ್ನಾಟಕ ಸರ್ಕಾರದ ನಿಲುವನ್ನು ಸುಪ್ರಿಂ ಕೋರ್ಟು ಎತ್ತಿ ಹಿಡಿದಿದೆ.
ಈ ವ್ಯವಸ್ಥೆಯ ಪ್ರಕಾರ ಶಾಖಾದ್ರಿಯವರೇ ಮುಜವರರುಗಳನ್ನು ನೇಮಿಸಿಕೊಂಡು ಧಾರ್ಮಿಕ ವಿಧಿಗಳು ನಡೆದುಬರುವಂತೆ ನೋಡಿಕೊಳ್ಳಬೇಕು. ಸೂಫಿ ಪರಂಪರೆಗೆ ಅನುಗುಣವಾಗಿ ಪೀಠಕ್ಕೆ ಲೋಬಾನ ಸೇವೆ ಮಾಡುವುದು, ಭಕ್ತರಿಗೆ ತೀರ್ಥ ವಿತರಣೆ ಮಾಡುವುದು, ದತ್ತ ಪಾದುಕೆಗಳಿಗೆ ಪುಪ್ಪಾರ್ಚನೆ ಮಾಡುವುದು ಇತ್ಯಾದಿ ಎಲ್ಲವೂ ನಡೆಯಬೇಕು. ಹಿಂದೂ ಗುರುಗಳು ಹಾಗೂ ಮಠಾಧೀಶರು ಬಂದಾಗ, ಅವರು ಗುಹೆಯ ಒಳಗೆ ಪ್ರವೇಶಿಸಿ ಪೂಜೆ ಸಲ್ಲಿಸಲಿಕ್ಕೆ ಅವಕಾಶವಿರಬೇಕು. ಕ್ಷೇತ್ರವು ವಕ್ಫ್ ಮಂಡಳಿಯ ಅಡಿಯಲ್ಲಿ ಬಾರದೆ ಮುಜರಾಯಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಇದು ಸರ್ಕಾರ ಸೂಚಿಸಿರುವ ಸಮತೋಲನ.
ಅಲ್ಲಾಹು ಹಾಗೂ ದತ್ತ, ಅಲ್ಲಾಹು ಹಾಗೂ ಅಲ್ಲಮ, ಅಲ್ಲಾಹು ಹಾಗೂ ಕೃಷ್ಣ ಒಂದೇ ಎಂಬುದು ಒಂದು ಸುಂದರ ಪರಿಕಲ್ಪನೆ. ಮೊಹರಂ ಸಂದರ್ಭದಲ್ಲಿ ಹಿಂದೂಗಳು ಹುಲಿ ವೇಷ ಹಾಕಿ ಕುಣಿದರೆ ಹಿಂದೂ ಧರ್ಮ ಹಾಳಾಗುವುದಿಲ್ಲ. ಮುಖ್ಯವಾದ ಮಾತೆಂದರೆ, ಮುಲ್ಲಾಗಳು ಅಥವಾ ರಾಜಕಾರಣಿಗಳು ರೂಪಿಸಬಾರದು, ಮನುಷ್ಯರು ರೂಪಿಸಬೇಕು.
ಮೊಗಲರ ಬಾದಶಹ ಷಹಜಹಾನನಿಗೆ ಇಬ್ಬರು ಗಂಡು ಮಕ್ಕಳಿದ್ದರು. ಒಬ್ಬ, ಮಾನವತಾವಾದಿ ದಾರಾಶಿಕೋ. ಮತ್ತೊಬ್ಬ, ಮತೀಯವಾದಿ ಔರಂಗಜೇಬ. ದಾರಾಶಿಕೋ ಹಿಂದೂ ಧಾರ್ಮಿಕ ಗ್ರಂಥಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿದ. ಆದರೆ ಮತಾಂತರ ಹೊಂದಲಿಲ್ಲ. ಔರಂಗಜೇಬ ಅಲ್ಲಾಹುವಿನ ಹೆಸರಿನಲ್ಲಿ ಮತಾಂತರಗಳನ್ನು ಪ್ರೇರೇಪಿಸಿದ, ದಬ್ಬಾಳಿಕೆ ನಡೆಸಿದ. ಅಷ್ಟೇ ಏಕೆ, ತನ್ನದೇ ತಂದೆಯ ಕೊಲೆಗೂ ಕಾರಣನಾದ. ದೆಹಲಿಯಲ್ಲಿದ್ದ ಸೂಫಿ ಸಂತರುಗಳನ್ನೆಲ್ಲ ಓಡಿಸಿ ದೇಶಭ್ರಷ್ಟರನ್ನಾಗಿಸಿದ. ದಕ್ಷಿಣದಲ್ಲಿ ಸೂಫಿ ಪಂಥ ಕಟ್ಟಿದ ಹೆಚ್ಚಿನ ಸಂತರು ಔರಂಗಜೇಬನ ಕಾರಣದಿಂದಾಗಿ ಪ್ರಾಣಭಯದಿಂದ ದಕ್ಷಿಣಕ್ಕೆ ಓಡಿಬಂದವರು.
ಸೂಫಿಗಳು ತಾವು ಹೋದಲ್ಲೆಲ್ಲ, ಸ್ಥಳೀಯರೊಟ್ಟಿಗೆ ಹಾಗೂ ಸ್ಥಳೀಯ ಸಂತ ಪರಂಪರೆಗಳೊಟ್ಟಿಗೆ ಒಡನಾಡಿದ್ದಾರೆ. ಉತ್ತರ ಕರ್ನಾಟಕದ ಸೂಫಿಗಳು ಅಲ್ಲಮನ ಆಧ್ಯಾತ್ಮಿಕ ಪ್ರತಿಭೆಗೆ ಮನಸೋತಿದ್ದರು. ರಾಜಸ್ಥಾನದ ಅಜ್ಮೇರಿನಲ್ಲಿ ಗರೀಬ್ ನವಾಜ್ ಛಿಸ್ತಿ ಕಾವಿ ಬಟ್ಟೆ ಧರಿಸುತ್ತಿದ್ದ. ಬಾಬಾಬುಡನ್ ಗಿರಿಯಲ್ಲಿ ತನ್ನ ಪಾದುಕೆಗಳನ್ನು ಬಿಟ್ಟು ದತ್ತ ಬಾಬಾನಲ್ಲಿ ಲೀನವಾದ. ಬಾಬಾ ದತ್ತನಲ್ಲಿ ಲೀನನಾದ. ಐಕ್ಯತೆಯನ್ನು ಪ್ರತಿಪಾದಿಸುವ ಸೂಫಿ ಪಂಥ ಮತಾಂತರದ ಬಲವಂತ ಹೇರುವುದಿಲ್ಲ.
ಇಂದು, ನಿಜಕ್ಕೂ ನಾವು ಪ್ರತ್ಯೇಕಿಸಬೇಕಿರುವುದು ಪ್ರತ್ಯೇಕತಾವಾದವನ್ನು. ಪ್ರತ್ಯೇಕತಾವಾದ ಒಂದು ಅಸಹನೆ. ಅದರ ಬೇರುಗಳು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಆಳದಲ್ಲಿ ಹುದುಗಿರುತ್ತವೆ. ಅದೊಂದು ರೀತಿಯ ಆಸ್ತಿ ಪ್ರಜ್ಞೆ. ದುರಂತವೆಂದರೆ, ಯಂತ್ರ ಯುಗವು ಪ್ರತ್ಯೇಕತಾವಾದ ಬೆಳೆಯಲಿಕ್ಕೆ ಹೇಳಿಮಾಡಿಸಿದ ಭೂಮಿ: ಮಾರುಕಟ್ಟೆಯು ಪ್ರತ್ಯೇಕ ಗಿರಾಕಿಗಳನ್ನು ಬಯಸುತ್ತದೆ, ಬಂಡವಾಳಶಾಹಿ ಪದ್ಧತಿ ಪ್ರತ್ಯೇಕತೆಯನ್ನು ತಾತ್ವಿಕವಾಗಿ ಮೇಲೆತ್ತಿ ಹಿಡಿಯುತ್ತದೆ. ಸಮಾನತೆ ಹಾಗೂ ಸಹಕಾರ ನಿಕೃಷ್ಟ ಗುಣಗಳು ಇಲ್ಲಿ.
ಧಾರ್ಮಿಕ ಪ್ರತ್ಯೇಕತಾವಾದ ಅಥವಾ ಮತೀಯವಾದವು ದೇವರನ್ನೇ ಮರೆತುಬಿಡುತ್ತದೆ. ಭಕ್ತರ ಸಂಘಟನೆಗೆ ಇನ್ನಿಲ್ಲದ ಒತ್ತು ಕೂಡುತ್ತದೆ. ವೀರ ಸಾವರ್ಕರ್ ಹಾಗೂ ಮೊಹಮ್ಮದ್ ಅಲಿ ಜಿನ್ನಾ ಇಬ್ಬರೂ ನಿರೀಶ್ವರವಾದಿಗಳಾಗಿದ್ದರು. ಪ್ರತಿಭಾವಂತರು ಪ್ರತ್ಯೇಕತಾವಾದಕ್ಕೆ ಬಲಿ ಬೀಳುತ್ತಾರೆ ಎಂಬುದಕ್ಕೆ ನಿದರ್ಶನ ಈ ಇಬ್ಬರು ಮಹನೀಯರು. ಪ್ರತ್ಯೇಕತಾವಾದಕ್ಕೂ ಶ್ರೇಷ್ಠತೆಯ ವ್ಯಸನಕ್ಕೂ ಹತ್ತಿರದ ಸಂಬಂಧವಿದೆ.
ಪ್ರತ್ಯೇಕತಾವಾದಕ್ಕೂ ಮೇಲ್ಜಾತಿ– ಮೇಲ್ವರ್ಗಗಳಿಗೂ ಹತ್ತಿರದ ಸಂಬಂಧವಿದೆ. ಹಾಗಾಗಿಯೇ, ಪಂಡಿತರು, ಬುದ್ಧಿಜೀವಿಗಳು, ಸಾಫ್ಟ್‌ವೇರ್ ಎಂಜಿನಿಯರುಗಳು, ವೈಶ್ಯರು, ಕ್ಷತ್ರಿಯರು, ಬ್ರಾಹ್ಮಣರು, ಒಟ್ಟಾರೆಯಾಗಿ ಸಮಾಜದ ಕೆನೆ ಪದರದ ಜನರು ಈ ರೋಗಕ್ಕೆ ಬಲಿಬೀಳಬಲ್ಲರು. ಸಾವರ್ಕರ್ ಹಾಗೂ ಜಿನ್ನಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದವರು, ದೇಶ ಭಕ್ತರು, ಆದರೂ ಬಲಿಯಾದರು. ಶತ್ರುವನ್ನು ಶತ್ರುವಿನ ಮಾದರಿಯಲ್ಲೇ ಮಣಿಸುತ್ತೇನೆ ಎಂದು ಹೊರಟು ಹೀಗಾದರು. ಭಾರತೀಯರನ್ನು ಪ್ರತ್ಯೇಕಿಸಿ ಒಡೆಯುವುದು ಬ್ರಿಟಿಷರಿಗೆ ಅಗತ್ಯವಾಗಿತ್ತು. ಹಿಂದೂ– ಮುಸಲ್ಮಾನ ಸಂಘರ್ಷವನ್ನು ನೀರೆರೆದು ಪೋಷಿಸಿದರು ಅವರು.
ಗಾಂಧೀಜಿ ಭಿನ್ನವಾಗಿದ್ದರು. ಅವರು ದೈವಭಕ್ತರು. ಮತ್ತೊಬ್ಬ ದೈವಭಕ್ತ ಮತ್ತೊಂದು ಹೆಸರಿನಿಂದ ದೈವವನ್ನು ಆರಾಧಿಸಿದರೆ ಅವರಿಗೆ ಸಮಸ್ಯೆ ಎನ್ನಿಸುತ್ತಿರಲಿಲ್ಲ. ರಾಮ-ರಹೀಮ ಎಲ್ಲವೂ ನೀನೇ, ಏಸುಕ್ರಿಸ್ತನೂ ಸಹ ಅತಿ ಪಾವನ ಸಂತನೇ ಸರಿ ಎಂದು ಸರಳವಾಗಿ ಹಾಗೂ ಧ್ಯೆರ್ಯವಾಗಿ ನುಡಿಯಬಲ್ಲವರಾಗಿದ್ದರು ಗಾಂಧೀಜಿ. ರಾಮಕೃಷ್ಣ ಪರಮಹಂಸರೂ ಹೀಗೆಯೇ ಸರಿ. ಎಲ್ಲ ದೇವರಲ್ಲಿಯೂ ತನ್ನ ದೇವರನ್ನೇ ಅಥವಾ ತನ್ನನ್ನೇ ಕಾಣಬಲ್ಲವರಾಗಿದ್ದರು ಅವರು. ಮುಸಲ್ಮಾನನ ವೇಷ ಧರಿಸಿ ಅಲ್ಲಾಹುವಿನಲ್ಲಿ ಲೀನವಾದವರು ತಾನೆ ಅವರು? ಅಷ್ಟೆಲ್ಲ ದೂರ ಏಕೆ ಹೋಗಬೇಕು. ನಮ್ಮದೇ ಹಿತ್ತಲಿಗೆ ಬಂದರೆ, ಹುಬ್ಬಳ್ಳಿಯ ಸಿದ್ಧಾರೂಢರು ಅದ್ವೈತದಲ್ಲಿ ನಂಬಿಕೆ ಇಟ್ಟಿದ್ದರು. ‘ನಿನ್ನಲ್ಲಿಯೇ ನೀನು ದೇವರನ್ನು ಕಾಣು’ ಎನ್ನುತ್ತಿದ್ದರು. ಮುಸಲ್ಮಾನ ಶರೀಫನನ್ನು ಜೊತೆಗಿರಿಸಿಕೊಂಡು ಗೆಳೆತನ ಮಾಡಿದರು ಅವರು.
ಇಂದಿನ ದುರಂತವೆಂದರೆ, ಐಕ್ಯತೆಯ ಸಂಕೇತಗಳಾಗಿದ್ದ ಹಿಂದಿನ ಹಲವು ಸಂಸ್ಥೆಗಳು ಇಂದು ಪ್ರತ್ಯೇಕತಾವಾದದ ಬಲೆಗೆ ಬಿದ್ದಿವೆ. ಹಲವು ಗಾಂಧಿವಾದಿಗಳು ಪ್ರತ್ಯೇಕತೆಯ ಬಲೆಗೆ ಬಿದ್ದಿದ್ದಾರೆ. ರಾಮಕೃಷ್ಣ ಆಶ್ರಮದ ಸನ್ಯಾಸಿಗಳು, ಲಿಂಗಾಯತ ಸನ್ಯಾಸಿಗಳು, ಬ್ರಾಹ್ಮಣ ಸನ್ಯಾಸಿಗಳು, ಒಕ್ಕಲಿಗ ಸನ್ಯಾಸಿಗಳು... ಪ್ರತ್ಯೇಕತಾವಾದದ ಬಲೆಗೆ ಬಿದ್ದಿದ್ದಾರೆ. ಇತ್ತ ನಾವು ಆಧುನಿಕರು, ಇಲ್ಲವೇ ನಿರೀಶ್ವರವಾದಿಗಳಾಗಿದ್ದೇವೆ. ಇಲ್ಲವೇ ಪ್ರತ್ಯೇಕತಾವಾದಿಗಳಾಗಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಮತ್ತೆ ಆಶಾಕಿರಣ ಕಾಣಿಸತೊಡಗಿದೆ. ಮುಸಲ್ಮಾನರಲ್ಲಿ ಬಿನ್ ಲಾಡೆನ್‌ನ ಆವೇಗ ಕಡಿಮೆಯಾಗತೊಡಗಿದೆ. ಹಿಂದೂಗಳಲ್ಲಿಯೂ ಪ್ರತ್ಯೇಕತಾವಾದದ ಆವೇಗ ಕಡಿಮೆಯಾಗುವ ಸೂಚನೆಗಳು ಕಾಣತೊಡಗಿವೆ. ಸಮಸ್ಯೆಯ ಮೂಲವಿರುವುದು ಯಂತ್ರನಾಗರಿಕತೆಯಲ್ಲಿ. ಬದುಕು ಸರಳಗೊಳ್ಳಬೇಕು, ಧರ್ಮ ಸರಳಗೊಳ್ಳಬೇಕು. ಆಗ ಮಾತ್ರ ಶೋಷಣೆ, ಅಸಮಾನತೆ ಹಾಗೂ ಪ್ರತ್ಯೇಕತಾವಾದಗಳ ಆವೇಗ ಕಡಿಮೆಯಾದೀತು.
ಅಡಂಬರದ ಮಸೀದಿ, ಆಡಂಬರದ ಮಂದಿರ ಹಾಗೂ ಆಡಂಬರದ ರಾಜಕಾರಣವು ಧರ್ಮದ ನೆಲೆಗಳಲ್ಲ. ಅವು ಅಧರ್ಮದ ನೆಲೆಗಳು, ದುಡ್ಡಿನ ನೆಲೆಗಳು, ಪ್ರತ್ಯೇಕತೆಯ ನೆಲೆಗಳು. ಸಂತ ಪರಂಪರೆ ಹಾಗೂ ಸೂಫಿ ಪರಂಪರೆ ಎಂಬ ಧಾರ್ಮಿಕ ಅಳವೆ ಕಾಡುಗಳನ್ನು ಧ್ವಂಸ ಮಾಡಲಿಕ್ಕೆ ಹೊರಟಿರುವ ವಿಧ್ವಂಸಕ ನೆಲೆಗಳು ಅವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.