ADVERTISEMENT

ಬೆಲ್ಲಕ್ಕೆ ಮುತ್ತುವ ಇರುವೆಗಳ ಹಾಗೆ!

ಪ್ರಸನ್ನ
Published 4 ಜುಲೈ 2018, 19:36 IST
Last Updated 4 ಜುಲೈ 2018, 19:36 IST
   

ಈ ಬಾರಿಯ ಲೇಖನವು ಸ್ಥೂಲದೇಹಿ ನಗರಗಳನ್ನು ಕುರಿತಾದದ್ದು. ನಗರಗಳು ಅದೆಷ್ಟು ಸ್ಥೂಲದೇಹಿಯಾಗಿ ಬೆಳೆಯುತ್ತಿವೆಯೆಂದರೆ, ನೀವು ಕಲ್ಪಿಸಿಕೊಳ್ಳಲಾರಿರಿ ಕೂಡ.

ಮೇಲು ಮೇಲೆ ನಗರಗಳು ಭವ್ಯವಾಗಿಯೇ ಬೆಳೆಯುತ್ತಿವೆ. ಲಂಡನ್, ನ್ಯೂಯಾರ್ಕ್, ಮುಂಬೈ, ಬೆಂಗಳೂರು ಎಂಬ ಹೆಸರು ಕೇಳುತ್ತಲೇ ನಿಮ್ಮ ಬಾಯಲ್ಲಿ ನೀರೂರುತ್ತದೆ. ವಿಮಾನದಲ್ಲಿ ಹಾರಿ ಬೇಗ ಅಲ್ಲಿಗೆ ತಲುಪಿಬಿಡಬೇಕು, ಅಲ್ಲಿನ ಕೆಫೆಗಳಲ್ಲಿ ಪ್ರೇಯಸಿಯೊಟ್ಟಿಗೆ ಕುಳಿತು ಸಾಹಿತ್ಯ ಚರ್ಚಿಸಬೇಕು ಅನ್ನಿಸುತ್ತದೆ. ಮಾಲ್‍ಗಳು, ಮೇಲ್ಸೇತುವೆಗಳು, ಮೇಟ್ರೊ ರೈಲುಗಳು ಹಾಗೂ ಸುಲಭಜೀವಿ ಸುಂದರ ನಾಗರಿಕರುಗಳಿಂದ ತುಂಬಿವೆ ನಗರಗಳು ಅನ್ನಿಸುತ್ತದೆ. ‘ಆಹಾ! ಇದುವೇ ಆಧುನಿಕ ಸ್ವರ್ಗ!’ ಎಂದೆನ್ನಿಸುತ್ತದೆ ಇವುಗಳನ್ನು ನೋಡಿದಾಗ ನಿಮಗೆ.‌

ಆದರೆ ಇವು ನಿಜಕ್ಕೂ ಹಾಗಿಲ್ಲ. ಇವುಗಳಲ್ಲಿದ್ದ ನಾಗರಿಕ ಸಂಸ್ಥೆಗಳೆಲ್ಲವೂ ಕ್ರಮೇಣ ಪೊಳ್ಳಾಗತೊಡಗಿವೆ, ದುಬಾರಿಯಾಗತೊಡಗಿವೆ, ವ್ಯಾಪಾರಿ ಕೇಂದ್ರಗಳಾಗತೊಡಗಿವೆ. ಸ್ಥೂಲದೇಹಕ್ಕೆ ಅಮರಿಕೊಳ್ಳುವ ಅಸಹ್ಯ ರೋಗಗಳೆಲ್ಲವೂ ಮಹಾನಗರಗಳಿಗೆ ಕ್ರಮೇಣ ಅಮರಿಕೊಂಡಿವೆ. ಗಂಭೀರ ರೀತಿಯ ಉಸಿರಾಟದ ತೊಂದರೆ, ಹೃದಯರೋಗ, ಮಾನಸಿಕ ಕಾಯಿಲೆ, ಮಲ್ಟಿಪಲ್ ಆರ್ಗನ್ ಪೇಫಲ್ಯ... ಇತ್ಯಾದಿ ಎಲ್ಲ ಕಾಯಿಲೆಗಳೂ ನಗರಗಳಿಗೆ ಈಗಾಗಲೇ ಬಡಿದುಕೊಂಡಿವೆ.

ADVERTISEMENT

ಇದೆಲ್ಲದರ ಜೊತೆಗೆ, ಇನ್ನೊಂದು ಗಂಭೀರ ಕಾಯಿಲೆ ಬಡಿದುಕೊಂಡಿದೆ ನಗರಗಳಿಗೆ. ಗ್ರಾಮೀಣ ಬಡವರ ಗುಳೆ ಎಂಬ ಹೆಸರಿನ ಕಾಯಿಲೆಯದು. ಬೆಲ್ಲಕ್ಕೆ ಮುತ್ತಿಕೊಳ್ಳುವ ಇರುವೆಗಳಂತೆ ಗ್ರಾಮೀಣ ಬಡವರು ನಗರಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆ. ಹಸಿದಿದ್ದಾರೆ ಅವರು. ಹಿಂಸ್ರಪಶುಗಳಾಗಿದ್ದಾರೆ. ತಮ್ಮ ಸಭ್ಯತೆಯನ್ನು ಗ್ರಾಮದಲ್ಲಿಯೇ ಎಸೆದು, ಆಟೊರಿಕ್ಷಾಗಳ ಹಿಂಭಾಗದಲ್ಲಿ ಅಂಟಿಸಲಾಗಿರುವ ರಾಕ್ಷಸ ರೂಪದ ಹನುಮಂತನ ಚಿತ್ರದಂತಾಗಿ, ನಗರಗಳತ್ತ ಧಾವಿಸಿಬರುತ್ತಿದ್ದಾರೆ.

ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪ್ರತಿದಿನ ಇಲ್ಲಿಗೆ ಬರುವ ನೂರಾರು ರೈಲುಗಳು ಹಾಗೂ ಸಾವಿರಾರು ಬಸ್ಸುಗಳನ್ನು ತುಂಬಿಕೊಂಡು ಬರುತ್ತಿದ್ದಾರೆ ಅವರು. ದೇಶದ ನಾಲ್ಕೂ ದಿಕ್ಕಿನಿಂದ ಧಾವಿಸಿಬರುತ್ತಿದ್ದಾರೆ ಅವರು. ವಿಚಿತ್ರ ಭಾಷೆ ಮಾತನಾಡುತ್ತಾರೆ. ವಿಚಿತ್ರ ರೀತಿಯ ಉಡುಪು ಧರಿಸಿರುತ್ತಾರೆ.

ನಾವು ಅನೇಕರು, ನಮ್ಮದೇ ಬದುಕಿನಲ್ಲಿ ಮಾಟವಾದ ಮೈಕಟ್ಟಿನ ಒಬ್ಬ ಸುಂದರ ಯುವಕನ ರೂಪದಲ್ಲಿ ಬೆಂಗಳೂರು ನಗರವನ್ನು ನೋಡಿದ್ದೆವು. ಯುವಕನ ದಟ್ಟ ತಲೆಕೂದಲಿನಂತೆ ಹಸಿರು ತುಂಬಿಕೊಂಡಿತ್ತು, ಒಂದು ಕಾಲದಲ್ಲಿ ಈ ನಗರದ ತಲೆಗೆ. ಯುವಕನ ಮುಗುಳುನಗೆಯಂತಿತ್ತು ಒಂದು ಕಾಲದಲ್ಲಿ, ಇಲ್ಲಿನ ಹವಾಮಾನ. ಯುವಕನ ಗಟ್ಟಿಮುಟ್ಟಾದ ರಟ್ಟೆಗಳಂತಿದ್ದವು, ಒಂದು ಕಾಲದಲ್ಲಿ ಸಾರ್ವಜನಿಕ ವಲಯದ ಇಲ್ಲಿನ ಕಾರ್ಖಾನೆಗಳು.

ಹೆದರದಿರಿ! ಬೆಂಗಳೂರಿನ ಕಾಯಿಲೆಯನ್ನು ಬಗೆಬಗೆಯಾಗಿ ವಿವರಿಸುತ್ತ ಕೂರುವುದಿಲ್ಲ ನಾನು. ಒಂದೇ ಒಂದು ಕಾಯಿಲೆಯನ್ನು ಕೈಗೆತ್ತಿಕೊಂಡು ವಿವರವಾಗಿ ಚರ್ಚಿಸಬಯಸುತ್ತೇನೆ. ಸಮಸ್ಯೆಯನ್ನು ಬೆಂಗಳೂರು ನಗರಕ್ಕೆ ನೀರುಣಿಸಲೆಂದು ಹರಸಾಹಸಪಡುತ್ತಿರುವ ಕರ್ನಾಟಕ ಸರ್ಕಾರದ ವ್ಯರ್ಥಪ್ರಯತ್ನವನ್ನು ಒಂದು ಉದಾಹರಣೆಯಾಗಿ ತೆಗೆದುಕೊಂಡು ಚರ್ಚೆ ಆರಂಭಿಸುತ್ತೇನೆ.

ಕರ್ನಾಟಕದಲ್ಲಿ ಶರಾವತಿ ಎಂಬ ಒಂದು ನದಿ ಹರಿಯುತ್ತದೆ. ಕರ್ನಾಟಕದ ದೊಡ್ಡ ನದಿಗಳೆಲ್ಲ ಪೂರ್ವಕ್ಕೆ ಹರಿದರೆ ಇದು ಪಶ್ಚಿಮಕ್ಕೆ ಹರಿಯುತ್ತದೆ. ಒಂದು ಸಣ್ಣ ನದಿ ಇದು. ಆದರೆ ಮಳೆಗಾಲದ ಮೂರು ತಿಂಗಳು ಸಮೃದ್ಧವಾಗಿ ನೀರು ಹರಿಸುತ್ತದೆ ಈ ನದಿ. ಪಶ್ಚಿಮ ಘಟ್ಟಗಳಲ್ಲಿ, ಶಿವಮೊಗ್ಗ ಜಿಲ್ಲೆಯ ದಕ್ಷಿಣದಲ್ಲಿ ಹುಟ್ಟುವ ಈ ನದಿಯು ಘಟ್ಟ ಪ್ರದೇಶದಲ್ಲಿಯೇ ಹರಿದು, ಇದೇ ಜಿಲ್ಲೆಯ ಉತ್ತರ ತುದಿಯಲ್ಲಿ ಜೋಗವೆಂಬ ಕುಗ್ರಾಮದ ಬಳಿ ಒಂದು ಸಾವಿರ ಅಡಿ ಆಳಕ್ಕೆ ಧುಮುಕಿ ತೀರ ಪ್ರದೇಶದ ಕಾಡುಗಳ ನಡುವೆ ಹರಿದು ಹೊನ್ನಾವರದ ಬಳಿ ಅರಬ್ಬಿ ಸಮುದ್ರ ಸೇರುತ್ತದೆ. ಸದರಿ ಗುಂಡಿಯು ಜೋಗದ ಜಲಪಾತ ಎಂದು ಹೆಸರುವಾಸಿಯಾಗಿದೆ.

1905ನೆಯ ಇಸವಿಯಲ್ಲಿ ಒಮ್ಮೆ ಸರ್ ಎಂ. ವಿಶ್ವೇಶ್ವರಯ್ಯನವರು ತಮ್ಮ ದಿವಾನಗಿರಿಯ ಸಂದರ್ಭದಲ್ಲಿ ಕಾರ್ಯನಿಮಿತ್ತ ಅತ್ತಕಡೆ ಹೋಗಿದ್ದವರು ಜೋಗದ ಗುಂಡಿಯಲ್ಲಿ ಇಣುಕಿ ನೋಡಿದರಂತೆ. ನೋಡಿದಾಗ, ನೊರೆ ನೊರೆಯಾಗಿ ಭೋರ್ಗರೆಯುತ್ತ ಕೆಳಗೆ ಧುಮ್ಮಿಕ್ಕುತ್ತಿದ್ದ ನೀರನ್ನು ಕಂಡು ‘ಅಯ್ಯೋ ಶಿವನೇ! ಎಂತಹ ವ್ಯರ್ಥ!’ ಎಂದು ಉದ್ಗರಿಸಿದರಂತೆ. ಉದ್ಗರಿಸಿದರು ಮಾತ್ರವಲ್ಲ, ವಿದ್ಯುತ್ ತಯಾರಿಕೆಗಾಗಿ ಒಂದು ಕಾರ್ಯಯೋಜನೆಯನ್ನೂ ತಯಾರಿಸಿದರಂತೆ.

ಅವರು ತಯಾರಿಸಿದ ಕಾರ್ಯಯೋಜನೆಯ ಪ್ರಕಾರ 1945ರಲ್ಲಿ ಹಿರೇಭಾಸ್ಕರ ಎಂಬ ಅಣೆಕಟ್ಟೆಯನ್ನು ನಿರ್ಮಿಸಲಾಯಿತು ಹಾಗೂ ವ್ಯರ್ಥ ಧುಮ್ಮಿಕ್ಕುತ್ತಿದ್ದ ಶರಾವತಿಯ ನೀರನ್ನು ಕೊಳವೆಗಳ ಮೂಲಕ ಹರಿಯುವಂತೆ ಮಾಡಿ, ಕಡೆಯುವ ವ್ಯವಸ್ಥೆ ಮಾಡಿ, ಒಂದಿಷ್ಟು ವಿದ್ಯುತ್ತನ್ನು ಉತ್ಪಾದಿಸಲಾಯಿತು. ಮುಂದೆ, ವಿದ್ಯುತ್ತಿನ ಬೇಡಿಕೆ ಹೆಚ್ಚಿದಾಗ ಹಿರೇಭಾಸ್ಕರಕ್ಕಿಂತ ಮಿಗಿಲಾದ ಲಿಂಗನಮಕ್ಕಿ ಅಣೆಕಟ್ಟೆ ರೂಪಿತವಾಯಿತು, ಕಡೆಯುವ ವ್ಯವಸ್ಥೆಯೂ ಹಿರಿದಾಯಿತು. ಹೀಗೆ, ಆ ಕಾಲದಲ್ಲಿ ಭಾರತದಲ್ಲಿಯೇ ಹೆಸರುವಾಸಿಯಾಗಿದ್ದ ಜಲವಿದ್ಯುತ್ ಯೋಜನೆಯೊಂದು ರೂಪು ಪಡೆಯಿತು.

ಎರಡು ವರ್ಷಗಳ ಹಿಂದೆ ಒಬ್ಬ ಎಂಜಿನಿಯರ್ ಸಾಹೇಬರು, ಹಣದ ಕುಳವೊಂದರ ಪರವಾಗಿ, ಒಂದು ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟರು. ‘ಖಾಸಗಿ ಸಹಭಾಗಿತ್ವದ ಜೋಗ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ’ ಎಂದು, ತುಂಬ ಆಕರ್ಷಕವಾದ ಹೆಸರಿನಿಂದ ಅದನ್ನು ಕರೆದರು. ಸರ್ಕಾರವು ಸದರಿ ಯೋಜನೆಯಲ್ಲಿ ತೀವ್ರತರವಾದ ಆಸಕ್ತಿ ವಹಿಸಿತು.

ಈ ಯೋಜನೆಯ ಪ್ರಕಾರ, ಈಗಾಗಲೇ ಕಡೆದು ಉತ್ಪಾದಿಸಿದ ವಿದ್ಯುತ್ತನ್ನು ಬಳಸಿಕೊಂಡು, ಶರಾವತಿಯ ನೀರನ್ನು ಜೋಗದ ಗುಂಡಿಯಿಂದ ಮತ್ತೊಮ್ಮೆ ಮೇಲೆತ್ತುವುದು ಹಾಗೂ ಮತ್ತೆ ಗುಂಡಿಗೆ ಚೆಲ್ಲುವುದು! ದಿಗ್ಭ್ರಾಂತರಾದ ಸಾಮಾನ್ಯರು, ‘ಹೀಗೇಕೆ ಸ್ವಾಮಿ!’ ಎಂದು ಕೇಳಿದರು. ‘ಬೆಂಗಳೂರಿನ ಪ್ರವಾಸಿಗರನ್ನು ಜೋಗಕ್ಕೆ ಆಕರ್ಷಿಸಲಿಕ್ಕೆ!’ ಎಂಬ ಧೀರಗಂಭೀರ ಉತ್ತರಬಂತು ಅಧಿಕಾರಿಗಳಿಂದ. ‘ಅಲ್ಲ ಸ್ವಾಮಿ! ಪ್ರಕೃತಿತರ್ಕವೂ ಸೇರಿದಂತೆ, ಎಲ್ಲಾ ತರ್ಕಗಳ ಉಲ್ಲಂಘನೆಯಾಗಲಿದೆಯಲ್ಲ ನಿಮ್ಮ ಯೋಜನೆಯಿಂದ’ ಎಂದು ಕೇಳಿದ್ದಕ್ಕೆ, ‘ರೊಕ್ಕ ಬರುತ್ತದಲ್ಲ!’ ಎಂಬ ಉತ್ತರ ಬಂತು! ಜನ ಉಗಿದರು. ಯೋಜನೆ ತಾತ್ಕಾಲಿಕವಾಗಿ ಹಿಂದೆ ಸರಿಯಿತು. ಇದು ಕಳೆದ ವರ್ಷ.

ಈ ವರ್ಷ, ಇದಕ್ಕಿಂತಲೂ ತರ್ಕಹೀನವಾದ, ಆದರೆ ಇದಕ್ಕಿಂತಲೂ ಭಾರಿಯಾದ ಯೋಜನೆಯೊಂದು ಇದೇ ಸ್ಥೂಲದೇಹಿ ನಗರದಿಂದ ಹೊರಬಿದ್ದಿದೆ. ಹೊಸ ಯೋಜನೆಯ ಪ್ರಸ್ತಾವ ಈ ರೀತಿಯಿದೆ. ಲಿಂಗನಮಕ್ಕಿಯಲ್ಲಿ ಕಡೆದ ವಿದ್ಯುತ್ತನ್ನೇ ಬಳಸಿಕೊಂಡು, ಸಣ್ಣದೊಂದು ವಾಹನವನ್ನು ರಿವರ್ಸ್ ಮಾಡುವಂತೆ ಪಶ್ಚಿಮಕ್ಕೆ ಹರಿಯುವ ನದಿಯನ್ನು ಪೂರ್ವಕ್ಕೆ ತಿರುಗಿಸುವುದು. ನಂತರ ಗುಡ್ಡ ಹತ್ತಿಸುವುದು. ನಂತರ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಇತ್ಯಾದಿ ಜಿಲ್ಲೆಗಳ ಮೂಲಕ ಆಕೆಯನ್ನು ಕರೆತರುವುದು. ದಾರಿಯಲ್ಲಿ ಸಿಗುವ ಅರಣ್ಯಗಳನ್ನು ಕಡಿಯುವುದು, ಕೃಷಿಭೂಮಿಯನ್ನು ನಾಶಪಡಿಸುವುದು, ಭೂಮಿಯಡಿ ಸುರಂಗ ಕೊರೆಯುವುದು... ಇತ್ಯಾದಿ.

ಬೃಹತ್‌ ಸಿಮೆಂಟು ಕೊಳವೆಗಳ ಮೂಲಕ ಹೀಗೆ ನಾಲ್ಕುನೂರು ಕಿಲೋಮೀಟರು ದೂರ ಆಕೆಯನ್ನು ಕರೆತಂದು ಬೆಂಗಳೂರು ಮಹಾನಗರವನ್ನು ತಲುಪಿಸುವುದು. ಅಲ್ಲಿ, ಮಂತ್ರಿಮಹೋದಯರು, ಸಿನಿಮಾ ನಟಿಯರು, ಉದ್ದಿಮೆಪತಿಗಳು, ವಣಿಕರು, ವಾರಾಂಗನೆಯರು, ಬುದ್ಧಿಜೀವಿಗಳು ಇತ್ಯಾದಿ ವ್ಯಕ್ತಿಗಳ ನಲ್ಲಿಗಳಲ್ಲಿ ಶರಾವತಿಯನ್ನು ಹರಿಸುವುದು. ಶ್ರೀಮಂತರ ಕಾಲು ಹಾಗೂ ಕಾರು ಎರಡನ್ನೂ ಅವಳಿಂದ ತೊಳೆಸಿ, ತಮ್ಮ ಕಾರ್ಖಾನೆಗಳ ಮೂಲಕ ದಿನವೂ ಅವರು ಬಹಿರ್ದೆಸೆಗೆ ತಳ್ಳುತ್ತಿರುವ ಹೇಸಿಗೆಯನ್ನು ತೊಳೆಸಿ, ಪಾದರಸ, ಕ್ಯಾಡ್ಮಿಯಂ, ಸೀಸ ಇತ್ಯಾದಿ ವಿಷ ಬೆರೆಸಿ, ಬೆಂಗಳೂರಿನ ಸುತ್ತಲ ತರಕಾರಿ ತೋಟಗಳಿಗೆ ಉಣಿಸಿ- ಅರಬ್ಬಿ ಸಮುದ್ರ ಸೇರಲೆಂದು ಹೊರಟಿದ್ದವಳನ್ನು, ತಮಿಳುನಾಡಿನ ಮೂಲಕ ಬಂಗಾಲಕೊಲ್ಲಿಗೆ ಕಳುಹಿಸಿಕೊಡುವುದು. ಹೇಗಿದೆ ಯೋಜನೆ?

ಈ ಪ್ರಸಂಗವನ್ನು ಇಷ್ಟೆಲ್ಲ ವಿವರವಾಗಿ ಹಾಗೂ ಇಷ್ಟೆಲ್ಲ ರೋಚಕವಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಿರುವುದಕ್ಕೆ ಕಾರಣವಿದೆ. ಅದು ಈ ಯೋಜನೆಯ ತರ್ಕಹೀನತೆಯನ್ನು ಬಯಲಿಗೆಳೆಯುವುದು ಮಾತ್ರವೇ ಅಲ್ಲ, ಈಗಾಗಲೇ ಸ್ಥೂಲದೇಹಿಯಾಗಿ ಬೆಳೆದಿರುವ ಬೆಂಗಳೂರು ನಗರವನ್ನು ಇನ್ನಷ್ಟು ಸ್ಥೂಲದೇಹಿಯಾನ್ನಾಗಿಸುವುದು ನಿಜಕ್ಕೂ ಅಗತ್ಯವೇ ಎಂಬ ಪ್ರಶ್ನೆ ಎತ್ತುವುದು ಹಾಗೂ ಗ್ರಾಮೀಣ ಬಡವರ ಗುಳೆ ಪ್ರಕ್ರಿಯೆಗೂ ಈ ಪ್ರಶ್ನೆಗೂ ಇರುವ ನೇರ ಸಂಬಂಧವನ್ನು ವಿಶ್ಲೇಷಿಸುವುದು.

ನಗರಗಳು ಬೆಲ್ಲವಾಗಬೇಕಿಲ್ಲ. ಗ್ರಾಮೀಣ ಬಡವರು ಇರುವೆಗಳಾಗಬೇಕಿಲ್ಲ. ನದಿಗಳ ನೀರನ್ನು ಬಲವಂತವಾಗಿ ತಿರುಗಿಸಬೇಕಿಲ್ಲ. ಬಳ್ಳಾರಿಯ ಗುಡ್ಡಗಳನ್ನು ಅಗೆದು ಬೋಳು ಮಾಡಬೇಕಿಲ್ಲ. ಗ್ರಾಮೀಣ ಜನರು ತಮ್ಮ ಆಹಾರವನ್ನು ತಾವೇ ಬೆಳೆದುಕೊಳ್ಳುತ್ತಿದ್ದರು. ತಮ್ಮ ಮನೆಗಳನ್ನು ತಾವೇ ಕಟ್ಟಿಕೊಳ್ಳುತ್ತಿದ್ದರು. ನದಿ ಬಯಲುಗಳಲ್ಲಿ, ಕಾಡುಗಳ ಬದಿಯಲ್ಲಿ, ಫಲವತ್ತಾದ ಮಣ್ಣಿನಲ್ಲಿ ನೆಲೆಗೊಂಡಿದ್ದರು ಅವರು. ಹಳೆಯ ವ್ಯವಸ್ಥೆ ಹೊಸ ವ್ಯವಸ್ಥೆಯಷ್ಟು ಲಾಭದಾಯಕವಾಗಿರಲಿಲ್ಲ ನಿಜ. ಆದರೆ ಇಷ್ಟು ಅಸ್ಥಿರವಾಗಿ ಇರಲಿಲ್ಲ. ಇಷ್ಟು ಅಪಾಯಕಾರಿಯಾಗಿಯೂ ಇರಲಿಲ್ಲ. ಈಗ, ಕೃಷಿ, ಕೈಮಗ್ಗ, ಕುಶಲಕರ್ಮ, ಕುರಿಗಾಹಿತನ, ದನಗಾಹಿತನ, ಕಾಡು ಉತ್ಪನ್ನಗಳ ಶೇಖರಣೆ ಇತ್ಯಾದಿ ಎಲ್ಲ ಕೆಲಸಗಳನ್ನೂ ತೊರೆದು ಗ್ರಾಮಸ್ಥರು ನಗರಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆ. ಹಾಕುವಂತೆ ನಾವೇ ಪ್ರಚೋದಿಸುತ್ತಿದ್ದೇವೆ.

ಗ್ರಾಮೀಣ ಬಡವರನ್ನು ಗ್ರಾಮೀಣ ಪ್ರದೇಶದಲ್ಲಿಯೇ ಸಲಹಬೇಕಲ್ಲವೆ? ಶ್ರಮದ ಉತ್ಪಾದಕತೆಯನ್ನು ಉತ್ತೇಜಿಸಬೇಕಲ್ಲವೆ? ಈಗಲಾದರೂ ಇಷ್ಟು ತಡವಾಗಿಯಾದರೂ ನಾವು ಹಾಗೆ ಮಾಡಬೇಕಲ್ಲವೆ? ಸರ್ಕಾರಗಳು ಮಾಡಲಾಗದಿದ್ದರೆ ಈ ಕೆಲಸವನ್ನು ನಾವೇ ಮಾಡಬೇಕಲ್ಲವೆ? ಶರಾವತಿಯು ಪಶ್ಚಿಮ ದಿಕ್ಕಿಗೆ ಹರಿಯಲಿಕ್ಕೆ ಬಿಡಬೇಕು. ಪಶ್ಚಿಮಘಟ್ಟವು ಕಾಡಾಗಿ ಉಳಿಯಲಿಕ್ಕೆ ಬಿಡಬೇಕು. ಕೃಷಿ, ಹೈನುಗಾರಿಕೆ, ಕೈಮಗ್ಗ, ಕುಶಲಕರ್ಮಗಳಿಗೆ ನಾವು ಬೆಲೆ ಕೊಡಬೇಕು. ಗ್ರಾಮ ಸ್ವರಾಜ್ಯವು ಕೇವಲ ಗ್ರಾಮೀಣ ಬಡವರ ಹೋರಾಟವಲ್ಲ. ನಗರ ನಾಗರಿಕರ ಉಳಿವಿನ ಹೋರಾಟವೂ ಆಗಿದೆ ಅದು.

ಮಂತ್ರಿಮಹೋದಯರು, ಉದ್ದಮೆಪತಿಗಳು, ವಣಿಕರು ಒಟ್ಟಾರೆಯಾಗಿ ರೊಕ್ಕ ಮಾಡುವವರ ಕಿವಿಹಿಂಡಬಲ್ಲವರು ನಗರಜೀವಿಗಳು ಮಾತ್ರವೇ ಹೌದು. ಗ್ರಾಮೀಣ ಬಡವರು ಸೋತು ಸುಣ್ಣವಾಗಿದ್ದಾರೆ. ಆಹಾರವಿಲ್ಲದೆ, ನೀರಿಲ್ಲದೆ, ನೆಲೆಯಿಲ್ಲದೆ ಗುಳೆ ಎದ್ದಿದ್ದಾರೆ. ಅವರು ನಿಮ್ಮ ಮನೆಯಂಗಳವನ್ನು ತಲುಪುವ ಮೊದಲು ನೀವೇ ಅವರ ಮನೆಯಂಗಳವನ್ನು ತಲುಪಿರಿ. ಪಕ್ಷ ರಾಜಕಾರಣವನ್ನು ಕೊಂಚಕಾಲ ಮರೆಯಿರಿ. ಸರ್ಕಾರಗಳನ್ನು ಕೊಂಚಕಾಲ ಮರೆಯಿರಿ.

ನೀವೇ ಜನಹಿತ ಕಾರ್ಯ ಮಾಡಿರಿ. ನೀವೇ ಬೆಂಗಳೂರಿನಿಂದಾಚೆಗೆ ಬನ್ನಿರಿ. ಇದೊಂದು ಅದ್ಭುತ ಅವಕಾಶ ನಿಮಗೆ. ನೂರಾರು ರಚನಾತ್ಮಕ ಸಂಘಟನೆಗಳು ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಹರಡಿಕೊಂಡು ಕೆಲಸ ಮಾಡುತ್ತಿವೆ. ನೀವೂ ಕೈಹಚ್ಚಿರಿ. ಎರಡನೆಯ ಸ್ವಾತಂತ್ರ್ಯ ಚಳವಳಿ ಇದು ಎಂದು ತಿಳಿದು ಕೈಹಚ್ಚಿರಿ.

1991ರಲ್ಲಿ ಈ ದೇಶದಲ್ಲಿ ಶುರುವಾಯಿತು ನಗರ ನಿರ್ಮಾಣದ ಭರಾಟೆ. ಹಾಗೂ ರಾಮಮಂದಿರ ನಿರ್ಮಾಣದ ಭರಟೆ! ರಸ್ತೆಗಳ ನಿರ್ಮಾಣ, ಮೇಲ್ಸೇತುವೆಗಳ ನಿರ್ಮಾಣ, ಮನೆಗಳ ನಿರ್ಮಾಣ, ಮಾಲ್‍ಗಳ ನಿರ್ಮಾಣವೇ ಒಂದಿಷ್ಟು ಕಾಲ ನಿಮಗೆಲ್ಲ ಉದ್ಯೋಗ ನೀಡಿತು. ಆದರೆ ಎಷ್ಟೆಂದು ಮಾಡುತ್ತೀರಿ ರಸ್ತೆಗಳ ನಿರ್ಮಾಣವನ್ನು? ಎಷ್ಟೆಂದು ಮಾಡುತ್ತೀರಿ ಮಾಲ್‍ಗಳ ನಿರ್ಮಾಣವನ್ನು? ನಗರಗಳು ತುಂಬಿಹೋಗಿವೆ, ಕಾಲಾಡಿಸಲಿಕ್ಕೆ ಜಾಗವಿಲ್ಲದಂತಾಗಿದೆ. ಯಂತ್ರಚಾಲಿತವಾದಂತೆಲ್ಲ ಅವು ಉದ್ಯೋಗರಹಿತವಾಗುತ್ತಿವೆ. ದುಬಾರಿಯಾಗುತ್ತಿವೆ. ಮನುಷ್ಯರಿಲ್ಲದೆ ಕೆಲಸ ಮಾಡುತ್ತಿವೆ ಕಾರ್ಖಾನೆಗಳು. ಮನುಷ್ಯರಿಲ್ಲದೆ ಹಣ ಮಾಡುತ್ತಿದೆ ನಗರ ವ್ಯವಸ್ಥೆ.

ನೆನಪಿಡಿ! ಸ್ಥೂಲಕಾಯವನ್ನು ಕರಗಿಸುವುದು ಹಾಗೂ ಬೆಲ್ಲವನ್ನು ಬಡವರಿಗೆ ಹಂಚುವುದು ನಿಮ್ಮ ಕೆಲಸ. ಈ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ನೀವು ನಿಮ್ಮದೇ ಸ್ಥೂಲಕಾಯವನ್ನು ಕರಗಿಸಿ ಆರೋಗ್ಯವಂತರಾಗಬಹುದು. ಬೇರೆ ದಾರಿಯಿಲ್ಲ ನಿಮಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.