ADVERTISEMENT

ಉತ್ತರ ಕರ್ನಾಟಕಕ್ಕೆ ಎಂತಹ ಅಭಿವೃದ್ಧಿ ಬೇಕು?

‘ಹೆದ್ದಾರಿ ನಾಗರಿಕತೆ’ಯಲ್ಲಿ ಒಳಿತು ಸಾಯುತ್ತದೆ, ಕೆಡುಕು ನಳನಳಿಸಿ ಬದುಕುತ್ತದೆ

ಪ್ರಸನ್ನ
Published 15 ಆಗಸ್ಟ್ 2018, 19:30 IST
Last Updated 15 ಆಗಸ್ಟ್ 2018, 19:30 IST
ರರರ
ರರರ   

ಉತ್ತರ ಕರ್ನಾಟಕವನ್ನು ನಾವು ಎರಡು ರೀತಿಯಿಂದ ನೋಡಬಹುದಾಗಿದೆ. ಶ್ರೀಮಂತವಾದ ಹಾಗೂ ಸಭ್ಯವಾದ ಒಂದು ಸಂಸ್ಕೃತಿಯಾಗಿ ಅದನ್ನು ನೋಡಬಹುದಾಗಿದೆ. ತೀವ್ರತರವಾದ ದಾರಿದ್ರ್ಯಕ್ಕೆ ಸಿಕ್ಕಿಕೊಂಡಿರುವ ಒಂದು ಭೂಭಾಗವಾಗಿಯೂ ಅದನ್ನು ನೋಡಬಹುದಾಗಿದೆ. ಈ ದೇಶವು ಬ್ರಿಟಿಷರ ಗುಲಾಮನಾಗುವ ತನಕ, ಆ ಮೂಲಕ ನಾವು ಯಂತ್ರನಾಗರಿಕರಾಗುವ ತನಕ, ಉತ್ತರ ಕರ್ನಾಟಕವು ದರಿದ್ರವಾಗಿರಲಿಲ್ಲ ಎಂಬುದು ನಾವು ಗಮನಿಸಬೇಕಾದ ಬಹುಮುಖ್ಯ ಸಂಗತಿಯಾಗಿದೆ. ಇಡೀ ಏಷಿಯಾ ಖಂಡದಲ್ಲಿಯೇ ಉತ್ಕೃಷ್ಟವಾದ ಹಾಗೂ ದಟ್ಟವಾದ ಹತ್ತಿ ಬೆಳೆಗಾರಿಕೆಯ ಪ್ರದೇಶ ಇದಾಗಿತ್ತು.

ಭಾರತದಲ್ಲಿಯೇ ಅತಿ ದಟ್ಟವಾದ ಕೈಮಗ್ಗ ನೇಕಾರಿಕೆಯ ಪ್ರದೇಶ ಕೂಡ ಇದಾಗಿತ್ತು. ಜೋಳ, ಬೇಳೆಕಾಳು, ಹಾಲು– ಹಣ್ಣುಗಳ ಉತ್ಪಾದನೆಯಲ್ಲಿ ಸ್ವಯಂಪರಿಪೂರ್ಣವಾಗಿತ್ತು ಉತ್ತರಕರ್ನಾಟಕ. ಬೌದ್ಧಧರ್ಮ, ಜೈನಧರ್ಮ, ವಚನ ಚಳವಳಿ, ಸೂಫಿ ಚಳವಳಿಗಳಿಗೆ ನೆಲೆಯಾಗಿತ್ತು. ಇಡೀ ದಕ್ಷಿಣಭಾರತವನ್ನು ಆವರಿಸಿಕೊಂಡು ಒಡಿಶಾ ರಾಜ್ಯದವರೆಗೂ ವಿಸ್ತರಿಸಿದ್ದ ಚಾಲುಕ್ಯ ಹಾಗೂ ವಿಜಯನಗರ ಸಾಮ್ರಾಜ್ಯಗಳಿಗೆ ನೆಲೆಯಾಗಿತ್ತು ಇದು. ಬಿಹಾರ, ಉತ್ತರಪ್ರದೇಶ ಇತ್ಯಾದಿ ಸಮುದ್ರ ತೀರವಿರದ ರೈತಾಪಿ ಪ್ರದೇಶಗಳಂತೆಯೇ ಉತ್ತರ ಕರ್ನಾಟಕವೂ, ಬ್ರಿಟಿಷರು ಈ ದೇಶಕ್ಕೆ ಬರುವವರೆಗೆ, ಸಾಕಷ್ಟು ಆರೋಗ್ಯಕರವಾಗಿಯೇ ಇತ್ತು. ಬ್ರಿಟಿಷರು ಕಾಲಿಟ್ಟ ನಂತರ ಪರಿಸ್ಥಿತಿ ತಲೆಕೆಳಗಾಯಿತು. ಬಂದರುಗಳು ಹಾಗೂ ರೈಲುಮಾರ್ಗಕ್ಕೆ ತೆರೆದುಕೊಂಡ ಭೂಪ್ರದೇಶಗಳು, ಅವು ಬರಡಾಗಿದ್ದರೂ ಶ್ರೀಮಂತವಾದವು. ಫಲವತ್ತಾದ ಭೂಪ್ರದೇಶಗಳು ಫಲವತ್ತಾಗಿದ್ದರೂ ಬರಡಾದವು.

ಬ್ರಿಟಿಷರು ತೊಲಗಿದ ನಂತರವೂ ಇದೇ ಪರಿಸ್ಥಿತಿ ಮುಂದುವರೆಯಿತು. ತಡೆಯಿರದ ವಾಣಿಜ್ಯ ಮಾತ್ರವೇಪ್ರಗತಿಯೆಂದಾಯಿತು. ವೈಯಕ್ತಿಕ ಲಾಭಕ್ಕಾಗಿ ರೈತರನ್ನು ಗುಳೆ ಎಬ್ಬಿಸುವುದು, ನೇಕಾರನ ಹೆಂಡತಿ ಬತ್ತಲೆ ಅಲೆಯುವಂತೆ ಮಾಡುವುದು, ಸ್ವತಂತ್ರ ಭಾರತದಲ್ಲಿ ಕೂಡ ಸರ್ವೇ ಸಾಮಾನ್ಯವಾಯಿತು. ಕೇವಲ ಮಹಾನಗರಗಳು ಹಾಗೂ ಹೆದ್ದಾರಿಗಳನ್ನು ಬೆಳೆಸುವುದರಲ್ಲಿ ಆಸಕ್ತವಾದವು ಸರ್ಕಾರಗಳು. ಇದೊಂದು ಕರಾಳವಾಸ್ತವ. ಇದನ್ನು ಕಣ್ಣಿಗೆ ಕಟ್ಟಬಲ್ಲ ಒಂದು ರೂಪಕವನ್ನು ನಿಮ್ಮ ಮುಂದಿಟ್ಟು ಚರ್ಚೆ ಮುಂದುವರೆಸಲು ಇಷ್ಟಪಡುತ್ತೇನೆ.

ADVERTISEMENT

ಸ್ಟೀಫನ್ ಹಾಕಿಂಗ್ ಎಂಬ ಒಬ್ಬ ವಿಜ್ಞಾನಿಯ ಚಿತ್ರಣವಿದು. 20ನೇ ಶತಮಾನದ ಉತ್ತರಾರ್ಧ ಕಂಡ ಬಹುದೊಡ್ಡ ವಿಜ್ಞಾನಿ ಹಾಕಿಂಗ್. ಆತ ಒಂದು ಅಪರೂಪದ ಕಾಯಿಲೆಗೆ ತುತ್ತಾಗಿದ್ದ. ದೇಹದ ಹೆಚ್ಚಿನ ಭಾಗದ ಉಪಯೋಗ, ದನಿ ಹಾಗೂ ಕೈಕಾಲುಗಳ ಉಪಯೋಗವನ್ನೇ ಕಳೆದುಕೊಂಡಿದ್ದ ಆತ. ನೋಡಲಿಕ್ಕೆ ಅಸಹಾಯಕ ಕೋತಿ ಮರಿಯಂತೆ ಕಾಣುತ್ತಿದ್ದ ಆತ.

ಯಂತ್ರಗಳ ಸಹಾಯ ಪಡೆದು, ಹೆಚ್ಚೂಕಡಿಮೆ ಯಂತ್ರಮಾನವನಾಗಿ ಬದುಕಿದ ಹಾಕಿಂಗ್. ಆತನ ಮಾತನ್ನು ಯಂತ್ರವು ಆಡುತ್ತಿತ್ತು. ಗಾಲಿಯಂತ್ರವೊಂದು ಆತನನ್ನು ಹೊತ್ತೊಯ್ಯುತ್ತಿತ್ತು. ಗಾಲಿಯಂತ್ರಕ್ಕಿದ್ದ ಒತ್ತುಗುಂಡಿಗಳು, ಆತನ ಮನಸ್ಸಿನ ಇಚ್ಛೆಯನ್ನು ಅದು ಹೇಗೋ ತಿಳಿದುಕೊಂಡು, ತಂತಾನೆ ಮುಂದೆ ಸಾಗಿಸುತ್ತಿದ್ದವು. ಆಶ್ಚರ್ಯದ ಸಂಗತಿಯೆಂದರೆ, ಇಷ್ಟೆಲ್ಲಾ ಭಯಾನಕವಾದ ಈ ರೋಗವು ಆತನ ಪ್ರಖರ ಬುದ್ಧಿಮತ್ತೆಯನ್ನು ಮಾತ್ರ ಒಂದಿನಿತೂ ಕುಗ್ಗಿಸಿರಲಿಲ್ಲ.

ಜೊತೆಗೆ ಸ್ಟೀಫನ್ ಹಾಕಿಂಗ್‌ನಿಗೆ ಮತ್ತೊಂದು ಬೆಂಬಲವಿತ್ತು. ಒಬ್ಬ ಪ್ರೀತಿಯ ಮಡದಿಯಿದ್ದಳು ಆತನಿಗೆ. ಆಕೆ ಧೀಮಂತ ಹೆಂಗಸು. ಆತನನ್ನು ಒಂದು ಮಗುವಿನಂತೆ ಕಾಪಾಡಿಕೊಂಡು ಬಂದಳು ಆಕೆ. ಹೀಗೆ, ಅತ್ತ ಯಂತ್ರ, ಇತ್ತ ಮಾನವ ಪ್ರೀತಿ, ಇವುಗಳ ಸಹಾಯದಿಂದ ಹಾಕಿಂಗ್ ದಶಕಗಳ ಕಾಲ ಸಂಶೋಧನೆ ನಡೆಸಿದ, ವೈಜ್ಞಾನಿಕ ಸತ್ಯಗಳನ್ನು ಜಗತ್ತಿಗೆ ಸಾರಿದ. ಇಂತಹ ಹಾಕಿಂಗ್‌ ಸಾಯುವುದಕ್ಕೆ ಕೊಂಚ ಮೊದಲು ಒಂದು ನಿಷ್ಠುರ ಸತ್ಯವನ್ನು ಜಗತ್ತಿಗೆ ಸಾರಿದ. ಮನುಕುಲವು, ಇನ್ನು ಹೆಚ್ಚೆಂದರೆ 300 ವರ್ಷ ಬಾಳೀತು ಅಷ್ಟೆ ಎಂದು ಸಾರಿದ. ಯಂತ್ರನಾಗರಿಕತೆಯ ಅವಸಾನ ಸಮೀಪಿಸಿದೆ ಎಂದು ಸಾರಿದ. ಯಂತ್ರನಾಗರಿಕತೆಯ ಬಗ್ಗೆ ಇಷ್ಟು ನಿಖರವಾದ ಹಾಗೂ ನಿಷ್ಠುರವಾದ ಸತ್ಯವನ್ನು ಈವರೆಗೆ ಯಾರೂ ನುಡಿದಿರಲಿಲ್ಲ. ಗಾಂಧೀಜಿ ಸಹ ನುಡಿದಿರಲಿಲ್ಲ.

ಉತ್ತರಕರ್ನಾಟಕದ ಸಭ್ಯ ಮಾನವೀಯತೆ, ದರಿದ್ರ ವಾಸ್ತವ ಹಾಗೂ ಅಭಿವೃದ್ಧಿ ಮಾದರಿ ಎಲ್ಲದಕ್ಕೂ ರೂಪಕವಾಗಬಲ್ಲ ಚಿತ್ರಣವಿದು. ಉತ್ತರಕರ್ನಾಟಕದ ದೇಹವನ್ನು, ಅಭಿವೃದ್ಧಿಯ ಹೆಸರಿನಲ್ಲಿ ಸ್ಟೀಫನ್ ಹಾಕಿಂಗ್‌ನ ದೇಹವನ್ನಾಗಿಸಲು ಹೊರಟಿದ್ದೇವೆ ನಾವು. ದಾರಿದ್ರ್ಯವೆಂಬ ಕಾಯಿಲೆಗೆ ಯಂತ್ರಗಳು ಮದ್ದು ಎಂದು ತಿಳಿದಿದ್ದೇವೆ. ಯಂತ್ರಗಳೇ ಕಾಯಿಲೆಯಾಗಬಲ್ಲವು ಎಂಬ ಅಪಾಯದ ಅರಿವು ನಮಗಿನ್ನೂ ಮೂಡಿಲ್ಲ. ಹಾಗಾಗಿ, ಉತ್ತರಕರ್ನಾಟಕದ ಸಭ್ಯತೆ, ಸಂಸ್ಕೃತಿಗಳನ್ನು ನಾಮಾವಶೇಷ ಮಾಡಬಲ್ಲ ಅಭಿವೃದ್ಧಿಯನ್ನು ಅದರ ಮೇಲೆ ಹೇರುತ್ತಿದ್ದೇವೆ. ಅದರ ಸಹಜಶಕ್ತಿಗಳಾದ ಕೃಷಿ, ಕೈಮಗ್ಗ, ಕುಶಲ ಕರ್ಮಗಳನ್ನು ನಾಶಮಾಡಿ ಬಾಟ್ಲಿಂಗ್ ಪ್ಲಾಂಟುಗಳು, ಅನಗತ್ಯ ಕಾರ್ಖಾನೆಗಳು ಹಾಗೂ ಬೃಹತ್ ನಗರಗಳನ್ನು ಅಲ್ಲಿ ನಿರ್ಮಿಸತೊಡಗಿದ್ದೇವೆ.

ನಾನು ಇದನ್ನು ಹೆದ್ದಾರಿ ನಾಗರಿಕತೆ ಎಂದು ಕರೆಯಲು ಬಯಸುತ್ತೇನೆ. ಹೆದ್ದಾರಿಗಳ ಬದಿಯಲ್ಲಿರುವುದು, ಅದು ವೇಶ್ಯಾವಾಟಿಕೆಯಿರಲಿ, ಜೂಜುಕಟ್ಟೆಯಿರಲಿ, ಮದ್ಯದಂಗಡಿಯಿರಲಿ ಅಥವಾ ಕಳೆಗಿಡಗಳಿರಲಿ, ನಳನಳಿಸಿ ಬೆಳೆಯುತ್ತವೆ ಈ ನಾಗರಿಕತೆಯಲ್ಲಿ. ಹೆದ್ದಾರಿಗಳಿಂದ ದೂರ ಉಳಿದದ್ದು, ಅದು ಹಳ್ಳಿಗಳಿರಲಿ, ಎರೆ ಭೂಮಿಯಿರಲಿ, ಕಾಯಕ ಜೀವಿಗಳಿರಲಿ, ಮಠಮಾನ್ಯಗಳಿರಲಿ, ಕನ್ನಡ ಶಾಲೆಗಳಿರಲಿ, ರೋಗಗ್ರಸ್ತವಾಗಿ ಸಾಯುತ್ತವೆ. ಒಳಿತು ಸಾಯುತ್ತದೆ. ಕೆಡುಕು ನಳನಳಿಸಿ ಬದುಕುತ್ತದೆ ಹೆದ್ದಾರಿ ನಾಗರಿಕತೆಯಲ್ಲಿ. ಹೆದ್ದಾರಿ ನಾಗರಿಕತೆ ಮೂಲತಃ ವಾಣಿಜ್ಯ ನಾಗರಿಕತೆಯಾಗಿದೆ. ಈ ವಾಣಿಜ್ಯ ನಾಗರಿಕತೆಯೊಳು ಮೊದಲು ನಮ್ಮನ್ನು ರೋಗಗ್ರಸ್ತವಾಗಿಸಲಾಗುತ್ತದೆ. ನಂತರ, ಯಂತ್ರಚಾಲಿತ ಗಾಡಿಗಳಲ್ಲಿ ನಮ್ಮನ್ನು ಸ್ಟೀಫನ್ ಹಾಕಿಂಗ್‌ನಂತೆ ಹಾಕಿಕೊಂಡು, ದುಡ್ಡು ಸುಲಿದು ಸುಲಿದು ಸಾಯಿಸುತ್ತದೆ ಈ ನಾಗರಿಕತೆ.

ಉತ್ತರಕರ್ನಾಟಕಕ್ಕೆ ಅಭಿವೃದ್ಧಿಯ ಅಗತ್ಯವಿದೆ. ಖಂಡಿತವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ವಂಚಿತವಾಗಿದೆ. ಅಲ್ಲಿ ಉದ್ಯೋಗ ಸೃಷ್ಟಿಯ ಅಗತ್ಯವಿದೆ. ಸರಳವಾದ ಆದರೆ ವೈಜ್ಞಾನಿಕವಾದ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ. ಆರೋಗ್ಯ ವ್ಯವಸ್ಥೆಯ ಅಗತ್ಯವಿದೆ. ಆದರೆ, ಅಲ್ಲಿನ ಪಾರಂಪರಿಕ ಉದ್ದಿಮೆಗಳಾದ ಕೃಷಿ, ಕೈಮಗ್ಗ ಹಾಗೂ ಕುಶಲಕರ್ಮಗಳು ಇವುಗಳನ್ನು ಪೂರೈಸಲಾರವು ಎಂದು ನಮ್ಮ ಸರ್ಕಾರಗಳಿಗೆ ಯಾರು ಹೇಳಿದರೋ ಕಾಣೆ.

ಕೈಮಗ್ಗ ಕ್ಷೇತ್ರದ ನನ್ನ ಆಸಕ್ತಿಯ ಕಾರಣದಿಂದಾಗಿನಾನು ಉತ್ತರಕರ್ನಾಟಕದ ಮೂಲೆಮೂಲೆ ಸುತ್ತಿದ್ದೇನೆ. ಇತ್ತೀಚೆಗೆ ಮತ್ತೊಮ್ಮೆ ಅಲ್ಲಿಗೆ ಹೋಗಿದ್ದೆ ನಾನು. ಹುಬ್ಬಳ್ಳಿ– ಧಾರವಾಡ ನಡುವೆ ನಿರ್ಮಿಸಲಾಗುತ್ತಿರುವ, ಬಿ.ಆರ್.ಟಿ.ಎಸ್ ಎಂಬ ಹೆಸರಿನ, ವಿಪರೀತ ಅಗಲವಾದ ಕಾಂಕ್ರೀಟಿನ ರಸ್ತೆಯ ಅವಾಂತರವನ್ನು ಕಂಡೆ. ಸಾವಿರಾರು ಕೋಟಿ ರೂಪಾಯಿಗಳನ್ನು ಈ ರಸ್ತೆಯ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುತ್ತಿದೆ. ಈ ಬಿ.ಆರ್.ಟಿ.ಎಸ್, ಭಾರತದ ಮತ್ತೊಂದು ನಗರದಲ್ಲಿ, ಈಗಾಗಲೇ ಸೋತಿರುವ ದುಬಾರಿ ವ್ಯವಸ್ಥೆಯಾಗಿದೆ. ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಇದನ್ನು ಬಲವಂತದಿಂದ ಉತ್ತರ ಕರ್ನಾಟಕದ ಮೇಲೆ ಹೇರಲಾಗುತ್ತಿದೆ.

ಉತ್ತರಕರ್ನಾಟಕವನ್ನು ಬೆಂಗಳೂರನ್ನಾಗಿಸಲಾಗುತ್ತಿದೆ. ಅದು, ಹುಬ್ಬಳ್ಳಿಯಿರಲಿ ಗದಗವಿರಲಿ ಕಲಬುರ್ಗಿ ಬೆಳಗಾವಿ ಬಾಗಲಕೋಟೆ ವಿಜಯಪುರ ಯಾವುದೇ ಇರಲಿ, ಎಲ್ಲೆಲ್ಲೂ ದುಬಾರಿ ಕ್ಯಾಪಿಟೇಶನ್ ಶುಲ್ಕ ಬೇಡುವ ಶಿಕ್ಷಣ ವ್ಯವಸ್ಥೆಗಳು, ದುಬಾರಿ ಆಸ್ಪತ್ರೆಗಳು ಹಾಗೂ ಕಾಂಕ್ರೀಟಿನ ರಾಕ್ಷಸ ಕಟ್ಟಡಗಳು ಮೇಲೇಳುತ್ತಿವೆ. ಎಲ್ಲಿ ನೋಡಿದರೂ ಜಾಹೀರಾತುಗಳು, ಎಲ್ಲಿ ನೋಡಿದರೂ ವಾಣಿಜ್ಯ ಕುಣಿದಾಡತೊಡಗಿದೆ. ವಾಣಿಜ್ಯವೊಂದೇ ದೈವ ಎಂದು ಉತ್ತರಕರ್ನಾಟಕದ ಮಂದಿಗೆ ಬೋಧಿಸಲಾಗುತ್ತಿದೆ.

ಹೊಲಗಳನ್ನು ನೋಡಬೇಕು ನೀವು. ಮರುಭೂಮಿಯಂತೆ ಕಾಣತೊಡಗಿವೆ ಅವು. ಅವುಗಳ ನಡುವೆ ಅಲ್ಲಲ್ಲಿ ಶ್ರೀಮಂತರು ನಡೆಸಿರುವ ತೀವ್ರ ಬೇಸಾಯ ಪದ್ಧತಿಯ ಪ್ಲಾಸ್ಟಿಕ್ಕಿನ ಓಯಸಿಸ್ಸುಗಳು ಎದ್ದುನಿಂತಿವೆ. ಸುತ್ತಲ ಜಮೀನುಗಳ ಅಂತರ್ಜಲವನ್ನು ಹೀರಿಕೊಂಡು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ ಈ ಓಯಸಿಸ್ಸಿನಲ್ಲಿ. ಉತ್ತರಕರ್ನಾಟಕದ ಮಂದಿ ತಮ್ಮ ಆಹಾರದಿಂದ ಜೋಳವನ್ನು ಹೊರಹಾಕತೊಡಗಿದ್ದಾರೆ. ಅಕ್ಕಿಯ ಹಿಟ್ಟನ್ನು ಬೆರೆಸಿದ ಜೋಳದ ರೊಟ್ಟಿ ತಟ್ಟತೊಡಗಿದ್ದಾರೆ. ಅಥವಾ ಅನ್ನ ತಿನ್ನತೊಡಗಿದ್ದಾರೆ. ಮಳೆ ಆಧಾರಿತ ಬೇಸಾಯ ಪದ್ಧತಿಯಲ್ಲಿ ಸಿದ್ಧಹಸ್ತರಾಗಿದ್ದರು ಉತ್ತರಕರ್ನಾಟಕದ ಮಂದಿ. ಮಳೆಯು ಕಡಿಮೆ ಬಿದ್ದಾಗ ಅಥವಾ ವಿಪರೀತ ಬಿದ್ದಾಗ ಅಥವಾ ಪೂರ್ತಿ ಬೀಳದೆ ಇದ್ದಾಗ ಏನು ಮಾಡಬೇಕೆಂಬ ಅರಿವಿತ್ತು ಅವರಿಗೆ. ಬರಗಾಲ ಬಿದ್ದಾಗ, ಜೋಳ ತೆನೆಕಟ್ಟದಿದ್ದರೆ, ಜಾನುವಾರುಗಳಿಗೆ ಮೇವನ್ನಂತೂ ನೀಡುತ್ತಿತ್ತು. ಹತ್ತಿಯು ಹಟಹಿಡಿದು ಬೆಳೆಯುತ್ತಿತ್ತು. ವಿಷಕಾರಿ ಕೀಟನಾಶಕಗಳು, ಸರ್ಕಾರಿ ಗೊಬ್ಬರಗಳು, ಟ್ರ್ಯಾಕ್ಟರುಗಳಿಲ್ಲದೆ ಬೆಳೆ ತೆಗೆಯಬಲ್ಲವರಾಗಿದ್ದರು ಅವರು.

ಗೋರಕ್ಷಣೆಯ ನಿಜವಾದ ಅರ್ಥವೇನೆಂದು ತಿಳಿಯಬೇಕೆಂದರೆ ಉತ್ತರಕರ್ನಾಟಕದ ರೈತರನ್ನು ನೋಡಬೇಕು ನೀವು. ಗೋವು ಈಗಲೂ ಅವರ ಜೀವನದ ಭಾಗವಾಗಿದೆ. ಅನೇಕ ಮನೆಗಳಲ್ಲಿ ಗೋವನ್ನು ಮನೆಯಿಂದಾಚೆ ಕಟ್ಟುವುದಿಲ್ಲ, ಮನೆಯ ಒಳಗೇ ಕಟ್ಟುತ್ತಾರೆ ಅಲ್ಲಿ. ಒಳಗೇ, ತಗ್ಗಾದ ಭಾಗದಲ್ಲಿ ಗೋವುಗಳು ಅಥವಾ ಕುರಿಮೇಕೆಗಳು, ಎತ್ತರದ ಕಲ್ಲಿನ ಕಟ್ಟೆಗಳ ಮೇಲೆ ಮನುಷ್ಯರು ವಾಸಿಸುತ್ತಾರೆ. ಗೋವು ರೈತನ ರಕ್ಷಣೆ ಮಾಡುತ್ತದೆ, ರೈತ ಗೋವಿನ ರಕ್ಷಣೆ ಮಾಡುತ್ತಾನೆ. ಗೋವನ್ನು ನಿಜಕ್ಕೂ ಕೊಲ್ಲುತ್ತಿರುವುದು ಟ್ರ್ಯಾಕ್ಟರುಗಳು ಹಾಗೂ ಟಿಲ್ಲರುಗಳು.

ಸರ್ಕಾರಗಳು ರೈತನಿಗೆ ಸಹಾಯ ಮಾಡುತ್ತೇವೆಂದು ಆಗಾಗ ಸಾಲಮನ್ನಾ ಮಾಡುತ್ತವೆ. ಸಾಲಮನ್ನಾ ಮೂಲಕ ರೈತರ ಉದ್ಧಾರವಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ರೈತನೇಕೆ ಮತ್ತೆ ಮತ್ತೆ ಸಾಲಗಾರನಾಗುತ್ತಿದ್ದಾನೆ ಎಂದು ಯಾರೂ ಪ್ರಶ್ನೆ ಕೇಳುವುದಿಲ್ಲ. ರೈತರನ್ನು ಸಾಲಗಾರನನ್ನಾಗಿ ಮಾಡಲಾಗುತ್ತಿದೆ. ಟ್ರ್ಯಾಕ್ಟರು ಕಂಪನಿಗಳು, ಬೀಜದ ಕಂಪನಿಗಳು, ರಸಗೊಬ್ಬರದ ಕಂಪನಿಗಳು, ಕ್ರಿಮಿನಾಶಕಗಳ ಕಂಪನಿಗಳು, ಬೋರ್‌ವೆಲ್ ಕಂಪನಿಗಳು, ರೈತನಿಗೆ ಸುಳ್ಳು ಕನಸುಗಳನ್ನು ಬಿತ್ತುತ್ತವೆ. ಕಂಪನಿ ಪದಾರ್ಥಗಳನ್ನು ಕೊಳ್ಳಲೆಂದು ಸರ್ಕಾರಗಳು ರೈತನಿಗೆ ಸಾಲ ನೀಡುತ್ತವೆ, ಸಬ್ಸಿಡಿ ನೀಡುತ್ತವೆ. ಬೇಡದ ಪದಾರ್ಥಗಳನ್ನು ಕೊಂಡ ರೈತ ಸಾಲಗಾರನಾಗುತ್ತಿದ್ದಾನೆ. ಕಂಪನಿಗಳು ಶ್ರೀಮಂತ
ವಾಗುತ್ತಿವೆ. ಸರ್ಕಾರಗಳು ಸಾಲ ತೀರಿಸುತ್ತಿರುವುದು ಕಂಪನಿಗಳ ಸಲುವಾಗಿ. ಈಗಲೂ ನಮ್ಮದು ಕಂಪನಿ ಸರ್ಕಾರವೇ ಸರಿ!

ಟ್ರ್ಯಾಕ್ಟರಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಮೂರು–ನಾಲ್ಕು ಎಕರೆ ಭೂಮಿಯಿರುವ ರೈತರಿಗೆಲ್ಲ ಟ್ರ್ಯಾಕ್ಟರಿನ ಹುಚ್ಚು ಹಿಡಿಸಲಾಗುತ್ತಿದೆ. ಒಂದು ಟ್ರ್ಯಾಕ್ಟರು 40ರಿಂದ 50 ಎಕರೆ ಭೂಮಿಯನ್ನು ಉತ್ತಬಲ್ಲದು. ರೈತರಲ್ಲೀಗ ಅಗತ್ಯಕ್ಕಿಂತ ದುಪ್ಪಟ್ಟು ಟ್ರ್ಯಾಕ್ಟರುಗಳಿವೆ. ಟ್ರ್ಯಾಕ್ಟರು ಕಂಪನಿಗಳ ಲಾಭ ದೇಶದ ಅಭಿವೃದ್ಧಿಯೆಂದೂ, ರೈತನ ಸಾವನ್ನು ಆತ್ಮಹತ್ಯೆಯೆಂದೂ ಪರಿಗಣಿಸಲಾಗುತ್ತಿದೆ. ಟ್ರ್ಯಾಕ್ಟರಿನ ಬಗ್ಗೆ ನಾನು ಹೇಳಿದ ಮಾತೇ ಕ್ರಿಮಿನಾಶಕಗಳು, ಬೀಜ ಖರೀದಿ, ಗೊಬ್ಬರ ಖರೀದಿಗಳಿಗೂ ಸಲ್ಲುತ್ತದೆ ಎಂದು ಬೇರೆ ಹೇಳಬೇಕಿಲ್ಲ ನಾನು. ಅಥವಾ ನೇಕಾರರ ಉದಾಹರಣೆ ತೆಗೆದುಕೊಳ್ಳಿ. ನೇಕಾರರನ್ನು ಸಲಹ ಬೇಕಿದ್ದ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮವು ಮುಚ್ಚುವ ಸ್ಥಿತಿಗೆ ಬಂದಿದೆ. 45 ಸಾವಿರ ನೇಕಾರ ಕುಟುಂಬಗಳಿಗೆ ಉದ್ಯೋಗಖಾತ್ರಿ ನೀಡುತ್ತಿದ್ದ ಸಂಸ್ಥೆಯು ಇಂದು ಆರುಸಾವಿರ ನೇಕಾರರನ್ನು ಸಲಹಲಾಗದೆ ಪರದಾಡುತ್ತಿದೆ. ಇತ್ತ ಸರ್ಕಾರ ತನ್ನದೇ ಆಂತರಿಕ ಬಳಕೆಗಾಗಿ ಹೊರ ರಾಜ್ಯಗಳಿಂದ ಪವರ್‌ಲೂಮಿನ ಬಟ್ಟೆ ಖರೀದಿಸುತ್ತಿದೆ.

ಉತ್ತರ ಕರ್ನಾಟಕಕ್ಕೆ ನೆರವಿನ ಅಗತ್ಯವಿದೆ ನಿಜ. ಆದರೆ ಅದು ದುಂದುವೆಚ್ಚವಾಗಬಾರದು ತಾನೇ? ಅಭಿವೃದ್ಧಿಯ ಮಾನದಂಡಗಳನ್ನು ಸರ್ಕಾರಗಳು ಮಾತ್ರವೇ ನಿರ್ಧರಿಸಬಾರದು. ಜನರು ನಿರ್ಧರಿಸಬೇಕು ತನಗೆಂತಹ ಅಭಿವೃದ್ಧಿ ಬೇಕೆಂದು. ಉತ್ತರ ಕರ್ನಾಟಕ ಹೇಳಬೇಕು. ಸರ್ಕಾರಗಳು ಬದಲಾದಂತೆಲ್ಲ ಬದಲಾಗಬಾರದು ಸರ್ಕಾರಿ ಯೋಜನೆಗಳು. ದೂರದೃಷ್ಟಿ ಹಾಗೂ ಬದ್ಧತೆಯುಳ್ಳ ಅಭಿವೃದ್ಧಿ
ಉತ್ತರಕರ್ನಾಟಕದ ಅಗತ್ಯವಾಗಿದೆ.

ಬೆಂಗಳೂರಂತೂ ವಿನಾಶದ ಅಂಚಿಗೆ ತಲುಪಿಯಾಗಿದೆ. ಬೆಂಗಳೂರಿನ ವಿನಾಶಕ್ಕೆ ಸ್ಟೀಫನ್ ಹಾಕಿಂಗ್ ಹೇಳುವಂತೆ ಮುನ್ನೂರು ವರ್ಷ ಖಂಡಿತ ಬೇಕಿಲ್ಲ. ಆದರೆ ಬೆಂಗಳೂರೆಂಬ ರೋಗವು ಇಡೀ ರಾಜ್ಯಕ್ಕೆ ಆವರಿಸಬೇಕಿಲ್ಲ. ಉತ್ತರಕರ್ನಾಟಕವು ಗ್ರಾಮಸ್ವರಾಜ್ಯದ ಸ್ಥಾಪನೆಗೆ ಹೇಳಿ ಮಾಡಿಸಿದ ಪ್ರಯೋಗ ಶಾಲೆಯಾಗಿದೆ. ಎಲ್ಲರೂ ಸೇರಿ ಒಮ್ಮನಸ್ಸಿನಿಂದ ಪ್ರಯೋಗ ಮಾಡೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.