ಮೊನ್ನೆ, ಒಂದು ಕಾಲೇಜಿನಲ್ಲಿ ಅಹಿಂಸಾತ್ಮಕ ಸಂವಹನವನ್ನು ಕುರಿತಂತೆ ಕಾರ್ಯಗಾರ ನಡೆಸುತ್ತಿದ್ದೆ. ಕಾರ್ಯಗಾರದಲ್ಲಿ ಭಾಗವಹಿಸಿದ್ದ ಯುವಕರಲ್ಲಿ ಮತ್ತೆ ಮತ್ತೆ ಮೇಲೆದ್ದು ಬರುತ್ತಿದ್ದ ಪ್ರಶ್ನೆಯೆಂದರೆ, ‘ಯುದ್ಧ ನಡೆದಿರುವಾಗ ನಿಮ್ಮ ಅಹಿಂಸೆ ಅದು ಹೇಗೆ ಕೆಲಸಕ್ಕೆ ಬರುತ್ತದೆ’ ಎಂಬುದಾಗಿತ್ತು. ಮುಯ್ಯಿಗೆ ಮುಯ್ಯಿ ತೀರಿಸುವುದು ಅನಿವಾರ್ಯ ಎಂಬ ಭಾವನೆ ಹೆಚ್ಚಿನ ಯುವಕರಲ್ಲಿ ನಾಟಿಬಿಟ್ಟಿತ್ತು. ಮಾತ್ರವಲ್ಲ, ನನ್ನ ಅನುಮಾನವೆಂದರೆ, ವ್ಯವಸ್ಥಿತವಾಗಿ ನಾಟಿಸಲಾಗಿತ್ತು. ವ್ಯವಸ್ಥೆಯೇ ಮುಂದೆ ನಿಂತು, ಮುಯ್ಯಿ ತೀರಿಸುವುದೇ ಶ್ರೇಷ್ಠವೆಂಬ ಭಾವನೆಯನ್ನು ಎಲ್ಲ ಯುವಕರ ಮನಸ್ಸಿನ ಮೇಲೆ ನಾಟಿ ಮಾಡಿಸಿತ್ತು.
ಸ್ಪರ್ಧೆ ಅನಿವಾರ್ಯ. ಯುದ್ಧ ಅನಿವಾರ್ಯ. ಯೋಧರು ಮಾತ್ರವೇ ರಾಷ್ಟ್ರಪ್ರೇಮದ ಸಂಕೇತ, ಭಾರತದ ವಿಭಜನೆಯನ್ನು ತಡೆಯುವಲ್ಲಿ ಗಾಂಧೀಜಿ ಸೋತರು, ನಾಥೂರಾಮ್ ಗೋಡ್ಸೆಗೆ ಒಂದು ಚಾನ್ಸ್ ಕೊಟ್ಟಿದ್ದರೆ ಆತ ಅದೇ ಪ್ರಯತ್ನದಲ್ಲಿ ಗೆದ್ದಿರುತ್ತಿದ್ದ ಎಂದೆಲ್ಲ ಯುವಕರಿಗೆ ಹೇಳಿಕೊಡಲಾಗಿದೆ. ಕೊಂದು ಸಾಯುವವನು ಕೊಲ್ಲಿಸಿಕೊಂಡು ಸಾಯುವವನಿಗಿಂತಲೂ ಶ್ರೇಷ್ಠ ಎಂದು ಹೇಳಿಕೊಡಲಾಗಿದೆ. ಹುಲಿಯು ಹುಲ್ಲೆಗಿಂತ ಶ್ರೇಷ್ಠ ಎಂದು ಹೇಳಿಕೊಡಲಾಗಿದೆ.
ಯಾರು ಹೇಳಿಕೊಡುತ್ತಿದ್ದಾರೆ ಹಾಗಾದರೆ? ಹಿರಿಯರೇ ಹೇಳಿಕೊಡುತ್ತಿದ್ದಾರೆ; ಮಧ್ಯಮವರ್ಗದ ಹಿರಿಯರು. ತರಕಾರಿ ಹೆಚ್ಚಲಿಕ್ಕೆ ಕೂಡ ಕತ್ತಿ ಬಳಸಲು ಹಿಂಜರಿಯುವ ಹಿರಿಯರು. ಮೇಲ್ಜಾತಿ, ಮೇಲ್ವರ್ಗಗಳ ಅಪ್ಪಟ ಅಹಿಂಸಾತ್ಮಕ ಜೀವನ ನಡೆಸುವ ಹಿರಿಯರು ಕೆರಳಿದ್ದಾರೆ. ಕಿರಿಯರನ್ನು ಕೆರಳಿಸುತ್ತಿದ್ದಾರೆ.
ಅದೇನೇ ಇರಲಿ, ಹಿಂಸಾವಾದವು ಇತ್ತೀಚಿನವರೆಗೆ ಬಹಿರಂಗ ಚರ್ಚೆಗೆ ಬರುತ್ತಿರಲಿಲ್ಲ. ಅಧಿಕೃತ ಸಮಾರಂಭಗಳಲ್ಲಿ, ಮಠಾಧೀಶರ ಪ್ರವಚನದಲ್ಲಿ ಅದು ಚರ್ಚೆಗೆ ಬರುತ್ತಿರಲಿಲ್ಲ. ಆದರೆ ಈಗ ಬರತೊಡಗಿದೆ. ಗಲ್ಲಿಗಲ್ಲಿಗಳಲ್ಲಿ, ಬಾರುಗಳಲ್ಲಿ, ಸೋಷಿಯಲ್ ಮೀಡಿಯಾ ಎಂಬ ಕಿಕ್ಕಿರಿದ ಖಾಸಗಿತನದಲ್ಲಿ ಮೊದಲು ಕಾಣಿಸಿಕೊಂಡಿತು ಹಿಂಸಾವಾದ. ನಂತರದಲ್ಲಿ ಚುನಾವಣಾ ಭಾಷಣಗಳಲ್ಲಿ ಕಾಣಿಸಿಕೊಂಡಿತು. ಒಂದು ಉದಾಹರಣೆ ಕೊಡುತ್ತೇನೆ. ಅದೊಂದು ಪ್ರಗತಿಪರವಾದ ಹಾಗೂ ಅಹಿಂಸಾವಾದಿ ಮಠ. ಮಠದ ಅಂಗಳದಲ್ಲಿ ಒಂದು ದೇಶಭಕ್ತಿ ಮ್ಯೂಸಿಯಂ ಎದ್ದು ಬಂದಿದೆ. ಇತ್ತೀಚೆಗೆ ಎದ್ದು ಬಂದಿದೆ. ಅಲ್ಲಿ ಬಸವನ ಮೂರ್ತಿಯಷ್ಟೇ ಹೆಮ್ಮೆಯಿಂದ ಬಂದೂಕುಧಾರಿ ಯೋಧರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಕೊಲ್ಲುವ ಹಾಗೂ ಕೊಲ್ಲಿಸುವ ವಾಸ್ತವವಾದಿ ವಿಗ್ರಹಗಳನ್ನು ಅಲ್ಲಿ ಹೆಮ್ಮೆಯಿಂದ ಸ್ಥಾಪಿಸಲಾಗಿದೆ. ಅಹಿಂಸೆಯನ್ನು ಪಾರಮಾರ್ಥಿಕ ಜಗತ್ತಿಗೆ ಸಾಗುಹಾಕಲಾಗಿದೆ. ಹಿಂಸೆಯನ್ನು ಲೌಕಿಕವಾಗಿ ಮಾನ್ಯ ಮಾಡಲಾಗಿದೆ. ವೈಷ್ಣವರು, ವೀರಶೈವರು, ಜೈನರು, ಬೌದ್ಧರು ಎಲ್ಲರೂ ಹೀಗೆಯೇ ಮಾಡಿದ್ದಾರೆ. ಇದು ವೈರುಧ್ಯ ಎಂದೆನ್ನಿಸುತ್ತಿಲ್ಲ ನಮಗೆ. ಗಟ್ಟಿಸಿ ಕೇಳಿದರೆ, ‘ಮತ್ತೆ ಹೇಗೆ ಎದುರಿಸುತ್ತೀರಿ ಇತರರನ್ನ’ ಎನ್ನುತ್ತಾರೆ.
ಪ್ರತ್ಯೇಕತೆಯ ಗೋಪ್ಯದಲ್ಲಿ, ಹಿಂಸೆಯು ಕಾಮುಕತೆಯಂತೆ ಮೈಚಳಿ ಬಿಟ್ಟು ಎದ್ದುನಿಲ್ಲುತ್ತದೆ. ‘ಇಲ್ಲ ಸಾರ್! ಈ ನನ್ ಮಕ್ಳನ್ನ ಹೀಗೇ ಬಿಟ್ರೆ ಆಗಲ್ಲ ಸಾರ್! ನಾಲ್ಕು ಬಿಡ್ದೆಹೋದ್ರೆ ದಾರಿಗ್ ಬರಲ್ಲ... ಈ ನನ್ ಮಕ್ಳು!’ ಎಂದೆನ್ನುತ್ತದೆ. ಎದುರಿಗಿರುವವನು ‘ಹೌದು ಸಾರ್ ಹೌದು!’ ಎನ್ನುತ್ತ ಬಿರುಸಾಗಿ ತಲೆಯಾಡಿಸುತ್ತಾನೆ. ನಮ್ಮ ರಾಜಕಾರಣವನ್ನೇ ಗಮನಿಸಿ! ಜನಪ್ರಿಯತೆಯ ಒಂದು ತುದಿಯಲ್ಲಿ ನಕ್ಸಲ್‍ವಾದ ನಿಂತಿದ್ದರೆ ಮತ್ತೊಂದು ತುದಿಯಲ್ಲಿ ಧಾರ್ಮಿಕ ಹಿಂಸಾವಾದ ನಿಂತಿದೆ. ಎರಡೂ ಪರಸ್ಪರ ಹೂಂಕರಿಸುತ್ತ ನಿಂತಿವೆ. ನಕ್ಸಲ್‍ವಾದವು ಬಡವರ ಹಿಂದೆ ನಿಂತಿದ್ದರೆ. ಧಾರ್ಮಿಕ ಉಗ್ರವಾದವು ವ್ಯವಸ್ಥೆಯ ಮುಂದೆ ನಿಂತಿದೆ. ತಾನೇ ವ್ಯವಸ್ಥೆಯೋ ಎಂಬಂತೆ ನಿಂತಿದೆ. ಇರಲಿ. ಕಾರ್ಯಾಗಾರಕ್ಕೆ ಹಿಂದಿರುಗುತ್ತೇನೆ.
ಕಾರ್ಯಾಗಾರದಲ್ಲಿ ನನ್ನ ಜೊತೆಗೆ ಭಾಗವಹಿಸಿದ್ದ ತಜ್ಞರು ಯುವಕರ ಪ್ರಶ್ನೆಗಳಿಗೆ ಸೈದ್ಧಾಂತಿಕ ಉತ್ತರ ನೀಡಲು ಹೆಣಗಿದ್ದರು. ಸೋತಿದ್ದರು. ನನ್ನ ಸರದಿ ಬಂತು. ಹಿಂಸೆಯನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಪ್ರಯತ್ನವನ್ನೇ ಮಾಡಲಿಲ್ಲ ನಾನು. ಸೋಲೊಪ್ಪಿಕೊಂಡುಬಿಟ್ಟೆ. ‘ಹೌದು ಮಾರಾಯ! ಯುದ್ಧ ಶುರುವಾದ ನಂತರ ಅಹಿಂಸೆ ಖಂಡಿತವಾಗಿ ಖೊಟ್ಟಿನಾಣ್ಯ! ದಂಗೆ, ಮತೀಯ ಗಲಭೆ, ಗಂಡ– ಹೆಂಡಿರ ಜಗಳ ಇತ್ಯಾದಿ ಯಾವುದೇ ಆಗಲಿ, ಹಿಂಸೆ ಶುರುವಾದ ನಂತರ ಅಹಿಂಸೆ ಖಂಡಿತವಾಗಿ ಖೊಟ್ಟಿನಾಣ್ಯ! ಗಂಡನ ಕೈಯಿಂದ ಹೆಂಡತಿಗೆ ಕಪಾಳಮೋಕ್ಷ ಆದ ಮೇಲೆ ಅಹಿಂಸೆ ಕಿಲುಬುಕಾಸಿಗೆ ಸಮ ಮಾರಾಯ!...’ ಅಂದೆ.
ಹಿಂಸೆಯೇ ಆಕರ್ಷಕವಾದದ್ದು, ಅಹಿಂಸೆ ಅನಾಕರ್ಷಕವಾದ್ದದ್ದು ಎಂಬುದಕ್ಕೆ ಉದಾಹರಣೆ ನೀಡಿದೆ. ‘ಶೋಲೆ ಪಿಕ್ಚರ್ರಿನಲ್ಲಿ ಧರ್ಮೇಂದ್ರನಿಗಿಂತ ಗಬ್ಬರ್‍ಸಿಂಗನೇ ಜನಪ್ರಿಯ ಕ್ಯಾರೆಕ್ಟರು ಅಲ್ವೇನ್ರಯ್ಯ?’ ಅಂದೆ. ನಕ್ಕರು. ಕೊಂಚ ಧೈರ್ಯ ಬಂತು. ಮುಂದುವರೆದೆ. ‘ಆದರೆ, ಯುದ್ಧ, ಕಪಾಳಮೋಕ್ಷ, ದಂಗೆ ಎಲ್ಲವೂ ಕಡೆಯ ಅಸ್ತ್ರ ಅಂತಲಾದ್ರೂ ಒಪ್ತೀರಾ?’ ಅಂತ ಪ್ರಶ್ನೆ ಕೇಳಿದೆ. ಕಾದೆ. ಒಂದೆರಡು ಯುವತಲೆಗಳು ಹೌದೆಂಬಂತೆ ಆಡಿದವು. ಮುಂದುವರೆದೆ. ‘ಹಿಂಸೆ ಸಂವಹನ ಅಲ್ಲ ಮಾರಾಯ! ಸಂಭಾಷಣೆ ಕೂಡಾ ಅಲ್ಲ ಅದು! ಸಂವಹನದ ತುಂಡು ಹಿಂಸೆ! ತುಂಡಾದ ಸಂವಹನವನ್ನ ಜೋಡಿಸುವುದು ಅಸಾಧ್ಯವಲ್ಲ, ಆದರೆ ರೇಜಿಗೆ ಕೆಲಸ!...’ ಅಂದೆ. ಹುಡುಗರಿಗೆ ಪೂರ್ತಿ ಅರ್ಥವಾಗಿರಲಿಲ್ಲ. ಆದರೆ ಅರ್ಥ ಮಾಡಿಕೊಳ್ಳಬೇಕೆಂದು ಹೆಣಗುತ್ತಿದ್ದರು. ಸದ್ದಡಗಿತ್ತು. ‘ನಾವಿಲ್ಲಿ ಚರ್ಚಿಸುತ್ತಿರುವುದು, ಒಂದು ಜೀವಂತವಾದ, ತುಂಬ ನಾಜೂಕಾದ ಹಾಗೂ ಬೇಗ ತುಂಡಾಗಬಲ್ಲ ಸಂಗತಿಯ ಬಗ್ಗೆ’ ಅಂದೆ. ‘ಅದೇನು ಗೊತ್ತಾ...’ ಎಂದು ಪ್ರಶ್ನೆ ಮಾಡಿದೆ. ಗೊತ್ತಿಲ್ಲ ಎಂಬಂತೆ ಮುಖ ಮಾಡಿದರು. ‘ಅದನ್ನ ಪ್ರೀತಿ ಅಂತ ಕರೀತಾರೆ!’ ಅಂದೆ. ಮುಗಳುನಗೆ ಮೂಡಿತು.
‘ಪ್ರೀತಿಯೇ ಸಂವಹನ ಮಾರಾಯ! ಪ್ರೀತಿಯೇ ಡೈಲಾಗು! ಪ್ರೀತಿಯೇ ಸಂಭಾಷಣೆ!’ ಅಂದೆ. ಚೇಷ್ಟೆ ಮಾಡುವವನಂತೆ, ‘ಪ್ರೀತಿಯನ್ನು ಬರೇ ಕೇಳಬಾರದು, ಕೊಡುತ್ತಿರಬೇಕು’ ಅಂದೆ. ‘ಧಾರಾಳವಾಗಿ ಕೊಡಬೇಕು!... ಎಲ್ಲರನ್ನ ಮಾತಾಡಿಸಬೇಕು, ಪ್ರೀತಿಯಿಂದ ಉತ್ತರಿಸದೆ ಹೋದರೂ ಮಾತಾಡಿಸಬೇಕು’ ಅಂದೆ. ಅನೇಕ ಮುಖಗಳು ಹಲ್ಲು ಕಿರಿದವು. ‘ತುಂಬ ಎಳೆಯದಾದ್ದು ಅದು, ತುಂಬ ಸೂಕ್ಷ್ಮವಾದ್ದು, ಬಳ್ಳಿ ಇದ್ದಹಾಗೆ ಅದು!... ಅದನ್ನ ಕಾಪಾಡಿಕೊಂಡು ಬಂದರೆ, ನೀರೆರೆದರೆ, ಮುಂದೆ ಬಲಿಷ್ಠವಾಗಿ ಬೆಳೆಯುತ್ತೆ!... ಬಳ್ಳಿಯೇ ಮರವಾಗುತ್ತೆ, ಮರದಿಂದ ಮರಕ್ಕೆ ಹಬ್ಬುತ್ತೆ!... ಇಡೀ ಕಾಡನ್ನೇ ಹಸಿರಿನಿಂದ ತುಂಬಿಬಿಡುತ್ತೆ ಅದು!’ ಅಂದೆ. ಹುಡುಗರು ಚಪ್ಪಾಳೆ ತಟ್ಟಿದರು. ವಿದೂಷಕನ ತರಹ ಮುಖ ಮಾಡಿಕೊಂಡು ಹಲ್ಲು ಕಿರಿದೆ. ‘ಈಗ ನಿಮಗೆ ಹೇಳ್ತಾ ಇರೋದೆಲ್ಲ ನಾನು ಮಾಡಿಬಿಟ್ಟಿದೀನಿ ಅಂದ್ಕೊಬೇಡಿ ಮತ್ತೆ! ನಾನೂ ಸೋತಿದೀನಿ! ಪ್ರೀತಿ ಮುರ್ದಿದೀನಿ!... ವಿಪರೀತ ಸಿಟ್ಟು ಮಾಡಿದೀನಿ! ಕೆಟ್ಟದಾಗಿ ಆಡಿದೀನಿ!... ಆದ್ರೆ ಮತ್ತೆ ಮತ್ತೆ ಸೀರಿಯಸ್ಸಾಗಿ ಟ್ರೈ ಮಾಡಿದೀನಿ!’ ಅಂದೆ. ಹುಡುಗರು ಚಪ್ಪಾಳೆ ತಟ್ಟಿದರು.
ಬಾಯಿ ಬಂದಿತ್ತು. ಬುದ್ಧ ಎತ್ತಿಹಿಡಿದ ಕಮಲದ ದಂಟಿನ ಉದಾಹರಣೆ ನೀಡಿದೆ. ಗಾಂಧೀಜಿ ನೂತ ನೂಲಿನೆಳೆಯ ಉದಾಹರಣೆ ನೀಡಿದೆ. ಅಂಬೇಡ್ಕರ್ ಹಿಡಿದು ನಿಂತ ಭಿಕ್ಷುವಿನ ಬಡಿಗೆಯ ಉದಾಹರಣೆ ನೀಡಿದೆ. ಹೀಗೆ, ಎಲ್ಲೆಲ್ಲೋ ಸುತ್ತಾಡಿ ಕಡೆಗೆ ಹೇಮಾಮಾಲಿನಿಯ ನವಿರಾದ ಪದತಲಕ್ಕೆ ಬಂದು ತಲುಪಿದೆ. ಗಬ್ಬರ್‍ಸಿಂಗನು ನವಿರಾದ ಆ ಪದತಲಗಳನ್ನು ಹೇಗೆ ಗಾಜಿನ ಚೂರುಗಳ ಮೇಲೆ ನರ್ತಿಸುವಂತೆ ಮಾಡಿದ ಎಂದು ವಿವರಿಸಿದೆ. ಹಳೇ ಪಿಚ್ಚರ್ರು. ಅನೇಕರು ನೋಡಿಯೇ ಇರಲಿಲ್ಲ. ಆದರೂ ಅವರಿಗೆ ನೆನಪಿತ್ತು. ನವಿರಾದ ಪದತಲದಿಂದ ಬಿಸಿಯಾದ ರಕ್ತ ಜಿನುಗಿತಲ್ಲವೇ ಅಂತ ಕೇಳಿದೆ. ‘ಹೌದು ಸಾರ್!’ ಅಂದ್ವು ಹುಡುಗ್ರು. ಬಿಸಿರಕ್ತ ತಣ್ಣಗಾಗುವ ಮುಂಚೆ ಹೇಮಾಮಾಲಿನಿಯನ್ನ ಉಳಿಸಬೇಕಲ್ಲವೇ ಅಂತ ಕೇಳಿದೆ!
ಹುಡುಗರು ಚಪ್ಪಾಳೆ ತಟ್ಟಿದರು. ನನ್ನ ಅದೃಷ್ಟ ನೋಡಿ! ಬುದ್ಧ, ಗಾಂಧಿ, ಅಂಬೇಡ್ಕರ್‍ಗಿಂತ ಮಿಗಿಲಾಗಿ ಕ್ರೂರಿ ಗಬ್ಬರ್ ಸಿಂಗ್ ಅಂದು ಅಹಿಂಸೆಯ ಸಹಾಯಕ್ಕೆ ಬಂದಿದ್ದ. ಸೋಲಿನಿಂದ ನನ್ನನ್ನು ಪಾರು ಮಾಡಿದ್ದ. ‘ಹೌದು ಸಾರ್! ವಿಲನ್‍ಗಳೇ ಪಾಪ್ಯುಲರ್! ಆದ್ರೆ ಹೀರೋನೇ ಕರೆಕ್ಟೂ ಸಾರ್!’ ಅಂದ್ವು ಹುಡುಗರು. ನಾನು ನಕ್ಕೆ. ಮತ್ತೆ ಚೇಷ್ಟೆ ಮಾಡಿದೆ. ‘ಈಚಿಗಿನ ಹೀರೋಗಳು ವಿಲನ್ ಥರಾ ಕಾಣಿಸ್ತಾರೆ ಅಲ್ವಾ?’ ಅಂತ ಕೆದಕಿದೆ. ‘ಮೂರು ಹೊತ್ತೂ ಲಾಂಗು ಮಚ್ಚು ಹಿಡ್ಕೊಂಡು, ಕೆಟ್ಟಕೊಳ್ಕ ಬೈಕಂಡು ತಿರುಗ್ತಾರೆ ಅಲ್ವಾ!’ ಅಂದೆ. ‘ತಪ್ಪಾ ಸಾರ್!’ ಅಂತ ಪ್ರಶ್ನೆ ಮಾಡಿದ್ವು ಹುಡುಗ್ರು. ‘ನೀವೇ ಹೇಳಿ’ ಅಂದೆ. ‘ನೀವೇ ಹೇಳಿ! ನೀವೇ ಹೇಳಿ!’ ಎಂದು ಮುಗಿಬಿದ್ದವು ಹುಡುಗ್ರು. ಹೇಳಿದೆ.
‘ಹೀರೋಗಳು ಮೊದ್ಲು ಹೀಗಿರಲಿಲ್ಲ...! ರಾಮನ್ ಥರ ಇದ್ರು, ಬುದ್ಧನ್ ಥರ ಇದ್ರು, ಮಹಾವೀರನ್ ಥರ ಇದ್ರು! ಈಗ-ಪಿಚ್ಚರ್ ಓಡ್ಲಿ ಅಂತ, ಕೈ ತುಂಬ ಲಾಂಗು ಮಚ್ಚು ಹಿಡ್ಸಿದೀವಿ ನಾವು!’ ಅಂದೆ, ‘ಹಿಂಸೆ ತುಂಬ ಅಟ್ರ್ಯಾಕ್ಟಿವ್ ಅಂತ ಹಿಡ್ಸಿದೀವಿ! ಪ್ರೊಡ್ಯೂಸರ್ರಿಗೆ ದುಡ್ಡು ಬರುತ್ತೆ ಅಂತ ಹಿಡ್ಸದೀವಿ!... ಆದರೆ ನಿಮ್ಗೆ ಅದು ಕೆಟ್ಟದ್ ಮಾಡತ್ತೆ!’ ಅಂದೆ. ಮೌನವಾದೆ.
‘ಅಹಿಂಸೆ ಖಂಡಿತಾ ಅಟ್ರ್ಯಾಕ್ಟಿವ್ ಅಲ್ಲ! ಅದರಿಂದ ಪಿಚ್ಚರ್ ಓಡಲ್ಲ. ಆದರೆ ಅನಿವಾರ್ಯ ಅದು!’ ಅಂದೆ. ‘ಅಮ್ಮ ಇದ್ಹಾಗೆ!’ ಅಂದೆ. ಅವರಿಗೆ ಅರ್ಥ ಆಗಲಿಲ್ಲ. ‘ಅಮ್ಮ ಅಟ್ರ್ಯಾಕ್ಟಿವ್ ಅಲ್ಲ!... ಆಗಾಗ ಬೈಸ್ಕೊತಿರ್ತಾಳೆ!... ಬೈಸ್ಕೊಂಡ್ರೂನೂ ಊಟ ಕೊಡ್ತಾಳೆ ತಾನೆ?’ ಅಂದೆ, ಹುಡುಗರು ಹೂಂ ಅಂದರು ‘ಗಾಂಧೀಜೀನೂ ಅಮ್ಮನ್ ತರಹ! ಗಾಂಧೀಜೀನ ಎಷ್ಟೇ ಬೈರಿ, ಪ್ರತಿಮೆ ಧ್ವಂಸ ಮಾಡ್ರಿ, ಕನ್ನಡ್ಕ ಮುರ್ದಾಕ್ರಿ!... ಮುದ್ಕ ನಗ್‍ನಗ್ತಾನೇ ಇರ್ತಾನೆ!’ ಅಂದೆ. ಹೌದು ಅಂದರು.
‘ಬೇಕಾದಷ್ಟು ಬೈರಿ!... ಥೂ!... ದೇಶ ಒಡ್ದೆ ನೀನು! ಮುಸಲ್ಮಾನ್ರ ಏಜೆಂಟ್ ನೀನು!... ದಲಿತ ವಿರೋಧಿ ನೀನು! ಸಂತನ್ ಥರ ಸೋಗ್ಹಾಕಿರೋ ಖದೀಮ ನೀನು!...’ ಅಂತೆಲ್ಲ ಬೈರಿ. ಅನೇಕರು ಬೈದಿದಾರೆ ಹಿಂದೆಲ್ಲ! ‘ಬೈಸ್ಕೊಂಡು ಕಣ್ಣುಮುಚ್ಕೊಂಡು ಕೂತಿರ್ತಾನೆ ಮುದ್ಕ!... ಹೌದು ತಾನೆ? ತಿರಿಗ್ಸಿ ಬಯ್ಯಲ್ಲ ತಾನೆ?’ ಅಂದೆ ‘ಹೌದು ಸಾರ್!’ ಅಂದ್ವು.
‘ಇದು ಹೇಡಿತನವಾ?’. ಪ್ರಶ್ನೆ ಕೇಳಿದೆ. ‘ಅಮ್ಮಂದ್ರು ಹೇಡಿಗ್ಳಾ?’. ಮತ್ತೊಂದು ಪ್ರಶ್ನೆ ಕೇಳಿದೆ. ‘ಹೋಗ್ಲಿ! ಅಪ್ಪಂದ್ರು ಧೀರರಾ?’ ಕಾದೆ. ಒಂದು ಹುಡುಗಿ ನಿಧಾನವಾಗಿ ಎದ್ದು ನಿಂತಿತು. ‘ಇಲ್ಲ ಸಾರ್! ಅಮ್ಮನೇ ಧೀರಳು! ಸುಮ್ಮನಿರ್ತಾಳೆ! ಜಗಳಾ ಆದಾಗ ಅಪ್ಪ ಕೈಕಾಲು ಕಳ್ಕೊಂಡು ಕೂಗಾಡಿ ಬಿಡ್ತಾರೆ!’ ಅಂದಳು. ಇಡೀ ಕ್ಲಾಸು ಚಪ್ಪಾಳೆ ತಟ್ಟಿತು. ಚಪ್ಪಾಳೆ ದನಿ ತಣ್ಣಗಾದ ಮೇಲೆ ಹೇಳಿದೆ. ‘ನೀನು ಹೇಳೋದು ನಿಜ! ಆದರೆ ಕೆಲವು ಸಲ ಅಮ್ಮನ ವೇಷದ ರಾಕ್ಷಸಿಯರೂ ಇರ್ತಾರೆ! ಅಪ್ಪನ ವೇಷದ ಪುಣ್ಯವಂತರೂ ಇರ್ತಾರೆ! ಮರೀಬೇಡಿ!...’
ಹೀಗೇ ಮಾತು ಮುಂದುವರೆಸಿ, ಸಂಯಮದ ಬಗ್ಗೆ, ಸಹಕಾರದ ಬಗ್ಗೆ, ಸತ್ಯಾಗ್ರಹದ ಬಗ್ಗೆ ಮಾತನಾಡಿದೆ. ಅಂದು, ಗಬ್ಬರ್‍ಸಿಂಗ್ ತನ್ನ ಆಕರ್ಷಣೆಯ ಬಲವನ್ನು ನನಗೆ ನೀಡಿದ್ದನಾದ್ದರಿಂದ, ಅಷ್ಟೇನೂ ಆಕರ್ಷಕವಲ್ಲದ ನನ್ನ ಭಾಷಣವೂ ಸಹ ಗೆದ್ದು ಬಿಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.