ADVERTISEMENT

ಗಾಂಧರ್ವ ವೇದಿಗಳ ನಡುವೆ ಯಕ್ಷರ ಗಾನ

ಗುರು ಬನ್ನಂಜೆ ಸಂಜೀವ ಸುವರ್ಣ
Published 24 ಆಗಸ್ಟ್ 2013, 19:59 IST
Last Updated 24 ಆಗಸ್ಟ್ 2013, 19:59 IST
ಶಹನಾಯಿ ಗಾರುಡಿಗ ಬಿಸ್ಮಿಲ್ಲಾಖಾನ್ ರೊಂದಿಗೆ ಕೂಡ್ಲಿ ದೇವದಾಸ ರಾವ್, ಎಳ್ಳಂಪಳ್ಳಿ ವಿಠಲಾಚಾರ್‌ ಹಾಗೂ ಬನ್ನಂಜೆ ಸಂಜೀವ ಸುವರ್ಣರು
ಶಹನಾಯಿ ಗಾರುಡಿಗ ಬಿಸ್ಮಿಲ್ಲಾಖಾನ್ ರೊಂದಿಗೆ ಕೂಡ್ಲಿ ದೇವದಾಸ ರಾವ್, ಎಳ್ಳಂಪಳ್ಳಿ ವಿಠಲಾಚಾರ್‌ ಹಾಗೂ ಬನ್ನಂಜೆ ಸಂಜೀವ ಸುವರ್ಣರು   

ಮೇರಾ ಜನ್ಮ್ ಸಾರ್ಥಕ್ ಹುವಾ. ಐಸಾ ಕಲಾ ಪ್ರಕಾರ್ ಕೋ ಮೈ ನೆ ಅಭಿ ತಕ್ ನ ದೇಖಾ, ಆಪ್ ಲೋಗ್ ಮುಜೆ ರಾಮಾಯಣ್ ಕಾಲ್ ತಕ್ ಲೇ ಕೆ ಗಯೇ. ಜಟಾಯು ಜೈ ಸಾ ಪರಿಸ್ಥಿತಿ ಕಿಸೀ ಕೋ ಭೀ ನಹೀ ಆನಾ ಚಾಹೀಯೆ, ಮೈ ಎ ಶೋ ಕೋ ಕಭೀ ಭೀ ನಹೀ ಭೂಲೂಂಗ.

ಈ ಮಾತು ಕೇಳಿದ ಬಳಿಕ ಜೀವನದಲ್ಲಿ ಬೇರೆ ಪ್ರಶಸ್ತಿ ಬೇಕೆ?
ಏಕೆಂದರೆ, ಹೇಳಿದವರು ಅವರಿವರಲ್ಲ, ಉಸ್ತಾದ್ ಬಿಸ್ಮಿಲ್ಲಾ ಖಾನರು!

೧೯೯೮. ಬಿಹಾರದಲ್ಲೊಂದು ರಂಗೋತ್ಸವ. ಎಂಟು ದಿನಗಳ ಕಾಲ ದೇಶದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಕಥಕಳಿ, ಕೂಚುಪುಡಿ, ಒಡಿಸ್ಸಿ, ವೈವಿಧ್ಯಮಯ ಜಾನಪದ ರಂಗ ಕಲೆಗಳಲ್ಲದೆ, ಗಾಯಕರ ವಾದಕರ ಮೇಳವೂ ಅಲ್ಲಿ ನೆರೆದಿತ್ತು. ನಮ್ಮ ಯಕ್ಷಗಾನ ಕೇಂದ್ರದ ತಂಡಕ್ಕೂ ಆ ಉತ್ಸವದಲ್ಲೊಂದು ಅವಕಾಶ ಸಿಕ್ಕಿತ್ತು. ಅದನ್ನು ಉದ್ಘಾಟಿಸಲೆಂದು ಸಂಗೀತ ಭೀಷ್ಮಾಚಾರ್ಯ ಉಸ್ತಾದ್ ಬಿಸ್ಮಿಲ್ಲಾ ಖಾನರು ರಂಗವೇರಿದಾಗ ಜನ ಎದ್ದು ನಿಂತು, ‘ಹೋ’ ಹರ್ಷೋದ್ಗಾರ ಮಾಡಿದರು.

ರಂಗಮಂಟಪ ಕೆಳಗೆ ಬಿಳಿಯ ಉಡುಗೆ ತೊಟ್ಟಿದ್ದ ಹಿರಿಯರೊಬ್ಬರು ಕೈಯಲ್ಲಿ ದೊಣ್ಣೆ ಹಿಡಿದು ‘ಬೈಟ್ ಜಾವ್’ ಎಂದು ಜನರನ್ನು ಗದರಿಸುತ್ತಿದ್ದರು. ನಾನು ಅವರನ್ನೇ ಸರಿಯಾಗಿ ನೋಡಿದೆ. ಹೌದಲ್ಲ, ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವರು! ಜನರ ನಡುವೆಯೇ ಸಾಮಾನ್ಯನಂತೆ, ಆದರೆ ನಿಯಂತ್ರಿಸುವ ಅಧಿಕಾರವಿದ್ದಂತೆ ಕಾಣಿಸುತ್ತಿದ್ದ ಅವರೇ ರಂಗೋತ್ಸವದ ನೇತೃತ್ವ ವಹಿಸಿದ್ದರು.

ಬಿಸ್ಮಿಲ್ಲಾ ಖಾನ್ ಶಹನಾಯಿಯನ್ನು ತುಟಿಗಾನಿಸಿ ಸ್ವರ ಹೊಮ್ಮಿಸಿದಾಗ ಜನ ಮತ್ತೆ ‘ಹೋ’ ಎಂದರು. ಆದರೆ, ಕೆಲವು ಕ್ಷಣದಲ್ಲಿಯೇ ಆ ಗಾಂಧರ್ವ ವೇದಿಯ ವಾದ್ಯದಿಂದ ಹೊಮ್ಮುತ್ತಿದ್ದ ಆರ್ದ್ರ ಸ್ವರ ಗಂಧದಂತೆ ಸಭಾಂಗಣವನ್ನು ಆವರಿಸಿ ಸಭೆ ಮೌನವಾಯಿತು.
ಬಿಸ್ಮಿಲ್ಲಾ ಖಾನರು ವೇದಿಕೆಯಿಂದ ಎದ್ದಾಗ ತೆರೆಮರೆಯಲ್ಲಿ ನಾಟ್ಯದ್ರೋಣಾಚಾರ್ಯರು ಸಿದ್ಧರಾಗಿದ್ದರು. ಯಾರೆಂದು ಕೇಳುತ್ತೀರಾ?
ಗುರು ಕೇಳುಚರಣ ಮಹಾಪಾತ್ರರು!

ನಾನು ವೇಷಭೂಷಣಗಳನ್ನು ಬೇಗಬೇಗನೆ ಮುಗಿಸಿ ತೆರೆಯ ಮರೆಯಲ್ಲಿ ನಿಂತುಕೊಂಡು ರಂಗದ ಮೇಲೆ ಕಣ್ಣುಗಳನ್ನು ನೆಟ್ಟಿದ್ದೆ. ಲತೆಯಂತೆ ಮೈ ಬಳುಕಿಸುತ್ತ ಆ ಒಡಿಸ್ಸಿಯ ಹೆಜ್ಜೆಗಳೊಂದಿಗೆ ಸಭಾದರ್ಶನ ಮಾಡುವಾಗ ಸಭೆ ಮತ್ತೆ ‘ಹೋ’ ಎಂದಿತು. ಲಾಲೂ ಪ್ರಸಾದರು ಮತ್ತೆ ದೊಣ್ಣೆ ಎತ್ತಿ ಗದರಿಸಿದರು.

ದೋಣಿಗೆ ಹುಟ್ಟು ಹಾಕುತ್ತ ನೀರಿನ ಮೇಲೆ ಪರವಶನಾಗಿ ತೇಲುತ್ತಿರುವ ಗುಹ, ರಾಮಲಕ್ಷ್ಮಣರ ಚರಣಗಳನ್ನು ತನ್ನ ಎದೆಯ ಮೇಲಿರಿಸಿ ಭಕ್ತಿಯ ಎತ್ತರಕ್ಕೇರುವುದನ್ನು ಗುರು ಕೇಳುಚರಣರು ಅಭಿನಯಿಸಿದ ಮೇಲೆ ಅವರು ಮಹಾಪಾತ್ರದೊಳಗೆ ಹರಿಯುವ ಪ್ರತಿಭಾನದಿಯೆಂದು ನನಗೆ ಖಚಿತವಾಯಿತು. ಅವರ ಗುಹನ ಪಾತ್ರ ಚಿತ್ರಣ ನನ್ನ ಮನಸ್ಸಿನಲ್ಲಿ ಎಷ್ಟೊಂದು ಆಳವಾಗಿ ನೆಟ್ಟಿತೆಂದರೆ ಯಕ್ಷಗಾನದಲ್ಲಿ ಮುಂದೆ ಅಂಥ ಭಾವನಾತ್ಮಕ ಪಾತ್ರಗಳು ಬಂದಾಗ ನನಗರಿವಿಲ್ಲದಂತೆಯೇ ‘ಗುಹ’ನೇ ಕಣ್ಣೆದುರು ಬಂದು ನಿಲ್ಲುತ್ತಿದ್ದ.

ಇವರಿಬ್ಬರ ಗಾಯನ, ನರ್ತನಗಳ ಬಳಿಕ ನಮ್ಮ ಯಕ್ಷಗಾನ ಪ್ರದರ್ಶನ! ನಮ್ಮದೆಂದರೆ ಶಿವರಾಮ ಕಾರಂತರು ನಿರ್ದೇಶಿಸಿದ ‘ಜಟಾಯು ಮೋಕ್ಷ’. ನಾನು ಒಂದು ಕ್ಷಣ ಬಿಸ್ಮಿಲ್ಲಾ ಖಾನರ ಮತ್ತು ಕೇಳುಚರಣರ ಮಧ್ಯೆ ನಮ್ಮ ಶಿವರಾಮ ಕಾರಂತರನ್ನು ಕಲ್ಪಿಸಿಕೊಂಡು ಪುಳಕಗೊಂಡೆ. ಆದರೇನು, ಅವರು ನಮ್ಮನ್ನಗಲಿ ಆಗಲೇ ವರ್ಷವಾಗಿತ್ತು.

ರಂಗೋತ್ಸವದಲ್ಲಿ ಶಿಖರಪ್ರತಿಭೆಯ ಕಲಾವಿದರು ತಮ್ಮ ರಾಗ, ಭಾವಗಳಿಂದ ಪ್ರೇಕ್ಷಕರನ್ನು ವಶವರ್ತಿಗಳನ್ನಾಗಿ ಮಾಡಿದ ಮೇಲೆ ನಾವೆಂಥ ಪ್ರದರ್ಶನ ಕೊಡುವುದು ಎಂಬ ಆತಂಕ ಒಳಗೊಳಗೆ ಇತ್ತು. ಯಥಾಪ್ರಕಾರ, ’ಧೀರ ಗಂಭೀರೊ ಬಹು ಪರಾಕ್ ಶರಧಿ ಗಂಭೀರೊ ಬಹುಪರಾಕ್ ಕಸ್ತೂರಿ ಕೋಲಾಹಲೋ ಬಹುಪರಾಕ್’ ಎಂದು ಹೇಳುತ್ತ ನಾವು ದೀಪವನ್ನು ರಂಗದ ಮುಂದೆ ಇರಿಸಿದೆವು. ನಮ್ಮದು ಬೆಳಕಿನ ಸೇವೆ. ಬೆಳಕೇ ನಮ್ಮ ಸೇವೆಯನ್ನು ತೆಗೆದುಕೊಳ್ಳುತ್ತಿದೆ ಎಂಬ ಭಾವನೆ ಬಂದ ಬಳಿಕ ಆತಂಕವೆಲ್ಲ ದೂರವಾಗಿತ್ತು.

ನಮ್ಮ ಪ್ರದರ್ಶನದಲ್ಲಿ ರಾವಣ, ಶೂರ್ಪನಖಿಯರ ಆಗಮನವಾದಾಗ ಸಭೆ ಮತ್ತೆ ‘ಹೋ’ ಎಂದಿತು. ಆದರೆ, ರಾವಣನಿಂದ ಪಕ್ಕ ಮುರಿಯಲ್ಪಟ್ಟು ಜಟಾಯು ಧರೆಗುರುಳಿದಾಗ ಜನ ಮೌನಕ್ಕೆ ಸರಿದರು. ನಾನು ‘ಜಟಾಯು’ವಾಗಿ ವಿಲವಿಲನೆ ಒದ್ದಾಡುತ್ತ ಬೀಳುವ ಕ್ಷಣ ಸಭೆಯಲ್ಲಿ ರೋದನದ ಛಾಯೆಯೊಂದು ಕವಿದುಬಿಟ್ಟಿತು. ಸ್ವತಃ ಪಾತ್ರಧಾರಿಯಾಗಿದ್ದ ನಾನು ಸಭಾ ಪ್ರತಿಕ್ರಿಯೆಯನ್ನು ಅನುಭವಿಸುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ಆಮೇಲೆ ಬಂದ ಮೆಚ್ಚುಗೆಯ ನುಡಿಗಳಿಂದ ನನಗಿದು ವೇದ್ಯವಾಯಿತು. ‘ಬಹುತ್ ಅಚ್ಛಾ ಥ’ ಎಂಬ ಮೆಚ್ಚುಗೆಯ ಮಾತುಗಳು ನಮಗೆ ಕೊಂಚ ಸಮಾಧಾನ ಉಂಟುಮಾಡಿದವು.

ನಾವು ವೇಷಭೂಷಣಗಳನ್ನು ಕಳಚಿ, ಮುಖದ ಬಣ್ಣ ಅಳಿಸುತ್ತಿದ್ದಾಗ ಟೋಪಿ ಧರಿಸಿದ ವೃದ್ಧ ಗಂಧರ್ವ ಚೌಕಿಗೆ ಬಂದರು, ಯಕ್ಷರನ್ನು ಕಾಣಲು! ನಾವೆಲ್ಲ ಎದ್ದು ನಿಂತು ಬಾಗಿ ನಮಸ್ಕರಿಸಿದೆವು. ಹಿಂದಿಯಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದರು. ‘ನಿಮ್ಮ ಜೊತೆ ಒಂದು ಫೋಟೊ ತೆಗೆಸಿಕೊಳ್ಳಬಹುದೆ?’ ಎಂದು ವಿನಂತಿಸಿದೆವು. ಬಿಸ್ಮಿಲ್ಲಾ ಖಾನರೆಂದರು, “ನೀವೀಗ ಅರ್ಧ ವೇಷದಲ್ಲಿದ್ದೀರಿ. ಒಂದೋ ಪೂರ್ಣ ಪುರಾಣಲೋಕದ ಪಾತ್ರದ ಸ್ಥಿತಿಯಲ್ಲಿರಬೇಕು. ಇಲ್ಲವೇ, ಲೌಕಿಕರ ಉಡುಪಿನಲ್ಲಿರಬೇಕು. ಅರ್ಧ ವೇಷದಲ್ಲಿ ನೀವು ಯಾರಿಗೂ ಕಾಣಿಸಬಾರದು. ಫೋಟೊವನ್ನೂ ತೆಗೆಸಿಕೊಳ್ಳಬಾರದು. ನಾಳೆಯೂ ನಾನು ಬರುತ್ತೇನೆ. ಆಗ ನೀವು ಫೋಟೊ ತೆಗೆಸಿಕೊಳ್ಳುವಿರಂತೆ” ಎಂದರು.

‘ಅರ್ಧ ವೇಷದಲ್ಲಿ ಕಾಣಿಸಿಕೊಳ್ಳಬಾರದು’ ಎಂಬ ಬಿಸ್ಮಿಲ್ಲಾಖಾನರ ಮಾತು ಎಲ್ಲ ಕಾಲಕ್ಕೂ ಪ್ರಸ್ತುತವಾಗುವಂತಿದೆ. ಯಕ್ಷಗಾನ ಕಲಾವಿದರು ವೇಷ ಧರಿಸಿ ವೇದಿಕೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಅರ್ಧ ವೇಷ ಧರಿಸಿ ಚೌಕಿಯ ಮರೆಯಿಂದ ಹೊರಗೆ ಬರುವುದು ಇವೆಲ್ಲ ನನಗೆ ಸಭ್ಯವಾಗಿ ತೋರುವುದಿಲ್ಲ ಎಂಬ ನನ್ನ ಭಾವನೆ ಆ ಮಾತಿನಿಂದ ಇನ್ನಷ್ಟು ದೃಢವಾಯಿತು. ಗುರು ವೀರಭದ್ರ ನಾಯಕರು, ಶಿರಿಯಾರ ಮಂಜು ನಾಯ್ಕರು ಮುಖದ ಬಣ್ಣ ಅಳಿಸುವವರೆಗೂ ಲೌಕಿಕ ವ್ಯವಹಾರವನ್ನು ಸಂಪೂರ್ಣ ಮರೆತೇಬಿಟ್ಟಿದ್ದನ್ನು ನಾನು ಬಲ್ಲೆ.

ಕರ್ನಾಟಕದ ಕರೆನಾಡಿನ ಯಕ್ಷರಾದ ನಾವು ದೇಶದಗಲದ ಗಂಧರ್ವರೊಂದಿಗೆ ಸಹಪಂಕ್ತಿಯಲ್ಲಿ ಕುಳಿತುಕೊಳ್ಳುವ ಅವಕಾಶಕ್ಕೆ ಕಾರಣರಾದ ‘ಕಿನ್ನರ’ನನ್ನು ನನ್ನ ಮನಸ್ಸು ಪದೇ ಪದೇ ಸ್ಮರಿಸಿಕೊಳ್ಳುತ್ತಿತ್ತು. ಶಿವರಾಮ ಕಾರಂತರು ಈ ಕ್ಷೇತ್ರಕ್ಕೆ ಪ್ರವೇಶಿಸದಿರುತ್ತಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ. ಭಾವಾಭಿನಯಗಳಿಗೆ ಒತ್ತುಕೊಟ್ಟು ಯಕ್ಷಗಾನ ಕಲೆಯನ್ನೇ ಮರುನಿರೂಪಿಸಿದವರು ಅವರು. ಇವತ್ತಿಗೂ ನನ್ನ ಬದುಕಿನ ಉಜ್ವಲ ಗಳಿಗೆಗಳನ್ನು ಶಿವರಾಮ ಕಾರಂತರ ಸ್ಮೃತಿಯ ಹೊರತಾಗಿ ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಬಯಲುಗದ್ದೆಯಲ್ಲಿ ಸಾಂಪ್ರದಾಯಿಕ ರಂಗಸ್ಥಳದ ಮಧ್ಯೆ ಕುಣಿಯಬೇಕಾಗಿದ್ದ ನನ್ನಂಥವನಿಗೆ ಆಧುನಿಕ ಸಭಾಂಗಣದ ಶಿಸ್ತನ್ನು ಕಲಿಸಿದವರು ಕಾರಂತರೇ. ಒಂದು ಕಾಲದಲ್ಲಿ ನನ್ನ ಮನಸ್ಸನ್ನು ಕೂಡ ನಾಲ್ಕು ಕಂಬಗಳ ನಡುವಿನ ಜಾಗಕ್ಕಷ್ಟೇ ಮನಸ್ಸನ್ನು ಒಪ್ಪಿಸಿಕೊಂಡಿದ್ದೆ...
                                                                    ****

ನಾಲ್ಕು ಕಂಬಗಳೆಂದೆನೆ? ಅಲ್ಲಲ್ಲ ಎಂಟು ಕಂಬಗಳು. ಅಂದರೆ ಎರಡು ರಂಗಸ್ಥಳ!

ನಾನು ಹೇಳಹೊರಟಿರುವುದು ಜೋಡಾಟದ ಬಗ್ಗೆ ಎಂದು ನೀವೀಗ ಊಹಿಸಿರಬೇಕು. ಹೌದು, ನಾನೂ ಒಮ್ಮೆ ಜೋಡಾಟದಲ್ಲಿ ಚೆಂಡೆವಾದಕನಾಗಿ ಭಾಗವಹಿಸಿದ್ದೆ. ನನ್ನ ಕೈಸೋತು ‘ಶಿವ ಶಿವಾ’ ಎಂದದ್ದೂ ನೆನಪಾಗುತ್ತದೆ. ಏಕೆಂದರೆ, ಆಚೆ ರಂಗಸ್ಥಳದಲ್ಲಿದ್ದವರು ಆ ಕಾಲದ ಚೆಂಡೆನುಡಿತದ ಜಾದೂಗಾರ, ನನ್ನ ಚೆಂಡೆಗುರು ಕೆಮ್ಮಣ್ಣು ಆನಂದರವರು.

ನನಗೆ ಜೋಡಾಟದ ಬಗ್ಗೆ ವಿಶೇಷ ಆಸಕ್ತಿಯೇನೂ ಇರಲಿಲ್ಲ. ಪಂಥವೇ ಮುಖ್ಯವಾಗಿ ಕಲೆಗಾರಿಕೆ ಗೌಣವಾಗಿ ಗುಲ್ಲುಗೊಂದಲದ ಪ್ರದರ್ಶನವಾಗಿಬಿಡುವ ಜೋಡಾಟವೆಂದರೆ, ಒಂದೇ ಪ್ರಸಂಗವನ್ನು ಏಕಕಾಲದಲ್ಲಿ ಎರಡು ರಂಗಸ್ಥಳಗಳಲ್ಲಿ ಆಡುವುದು. ಶ್ರುತಿ ಏರಿಸುತ್ತ ಹೋಗುವುದು, ಐದಾರು ಚೆಂಡೆಮದ್ದಲೆಗಳನ್ನು ನುಡಿಸುವುದು, ಮತ್ತೊಂದು ರಂಗಸ್ಥಳದಲ್ಲಿರುವ ಕಲಾವಿದನನ್ನು ಸೋಲಿಸುವಂತೆ ಮಂಡಿಯಲ್ಲಿ ತಿರುಗುವುದು... ಇವೇ ಕೆಲವು ಚಮತ್ಕಾರಗಳಿಂದ ಕಳೆಗಟ್ಟುವ ಜೋಡಾಟಕ್ಕೆ ಅದರದ್ದೇ ನಿಯಮಗಳಿರುತ್ತಿದ್ದವು. ನಿಯಮ ಮುರಿದಾಗ ಎಚ್ಚರಿಸುವುದಕ್ಕೆ ಊರಿನ ಪ್ರತಿಷಿ್ಠಿತರೊಬ್ಬರು ‘ಮಧ್ಯಸ್ಥ’ರಾಗಿ ನಿಲ್ಲುತ್ತಿದ್ದರು.

ಎಂಬತ್ತರ ದಶಕದ ಪೂರ್ವಭಾಗದ ಆಸುಪಾಸಿನಲ್ಲಿ ಜರುಗಿದ ಘಟನೆಯಿದು. ಪ್ರಸಿದ್ಧ ಹವ್ಯಾಸಿ ಭಾಗವತ ತೋನ್ಸೆ ಜಯಂತ ಕುಮಾರರು ಬಾರ್ಕೂರಿನ ಸಮೀಪ ನಡೆಯಲಿರುವ ಹವ್ಯಾಸಿ ಸಂಘಗಳ ಜೋಡಾಟವೊಂದಕ್ಕೆ ನನ್ನನ್ನು ಚೆಂಡೆವಾದಕನನ್ನಾಗಿ ಕರೆದಾಗ ಮತ್ತು ಇನ್ನೊಂದು ರಂಗಸ್ಥಳದಲ್ಲಿ ಕೆಮ್ಮಣ್ಣು ಆನಂದರಿದ್ದಾರೆಂದು ಹೇಳಿದಾಗ ನಾನು ‘ಬೇಡ, ಬರುವುದಿಲ್ಲ’ ಎಂದೇ ಹೇಳಿದೆ.

ಆದರೂ ಮತ್ತೋರ್ವ ಚೆಂಡೆವಾದಕ, ಮಾರ್ತಾ ಆಶ್ಚನ್ ಅವರ ಪ್ರದರ್ಶನಗಳಲ್ಲಿ ಅಮೆರಿಕದಲ್ಲಿಯೂ ಚೆಂಡೆ ನುಡಿಸಿ ಅನುಭವವಿದ್ದ ಬ್ರಹ್ಮಾವರ ಅನಂತುರವರು ಕೂಡ ಇದ್ದಾರೆಂದು ಹೇಳಿದ ಕಾರಣದಿಂದ ಹೇಗೋ ಒಪ್ಪಿದೆ. ಆದರೆ, ಜೋಡಾಟದ ನಿಯಮಗಳಿಗೆ ಬದ್ಧತೆ ಇರಬೇಕೆಂದೂ ಏಕಕಾಲದಲ್ಲಿ ಐದಾರು ಚೆಂಡೆಗಳನ್ನು ನುಡಿಸಲು ನನ್ನಿಂದಾಗದೆಂದೂ ಹೇಳಿದೆ. ‘ಹಾಗೇನೂ ಇಲ್ಲ, ನಿನಗೆ ಗೆದ್ದರೂ ಹೆಸರು. ಸೋತರೂ ಹೆಸರು. ಧೈರ್ಯ ಮಾಡಿಕೊಂಡು ಬಾ’ ಎಂಬ ಮಾರುತ್ತರ ಬಂದುದರಿಂದ ಆದದ್ದಾಗಲಿ ಎಂದು ಹೊರಟುನಿಂತೆ.

ಭಾಗವತ ನಾರ್ಣಪ್ಪ ಉಪ್ಪೂರರು, ಹಿರಿಯಡ್ಕ ಗೋಪಾಲ ರಾಯರು, ಮಣೂರು ಮಹಾಬಲ ಕಾರಂತರು, ಬೆಳಿಂಜೆ ತಿಮ್ಮಪ್ಪ ನಾಯ್ಕರಂಥ ಮೇರುಪ್ರತಿಭೆಗಳೊಂದಿಗೆ ಒಡನಾಡಿದ ಅನುಭವವಿದ್ದ ಕೆಮ್ಮಣ್ಣು ಆನಂದರವರು ಚೆಂಡೆವಾದನದಲ್ಲಿ ಚರಿತ್ರೆ ಬರೆದವರು. ಚೆಂಡೆಯ ತಾರಸ್ಥಾಯಿಯನ್ನು ನಿಯಂತ್ರಿಸಿ ಮದ್ದಲೆಯ ಸಮಶ್ರುತಿಗೆ ಹೊಂದಿಸಿದ ಸಮರ್ಥರು.

ಆದರೆ, ಅವರ ವ್ಯಕ್ತಿತ್ವ ಮಾತ್ರ ವಿಕ್ಷಿಪ್ತ. ಜೋಡಾಟ ನಡೆಯುವ ಸ್ಥಳ ತಲುಪಿ ನಮ್ಮ ತಂಡಕ್ಕಾಗಿ ನಿಯೋಜಿಸಿದ್ದ ನೇಪಥ್ಯದಲ್ಲಿ ಚೆಂಡೆಯ ಚೀಲವನ್ನು ಇಳಿಸಿ ಮತ್ತೊಂದು ತಂಡದ ನೇಪಥ್ಯಕ್ಕೆ ಹೋದೆ. ‘ಬಂದೆಯಾ ಬಾ ಬಾ. ಒಳ್ಳೆಯದೇ ಆಯಿತು’ ಎಂದು ಕರೆದರು ಆನಂದರು, ಪ್ರೀತಿಯಿಂದಲ್ಲ, ಸಹಜವಾದ ಜಿದ್ದಿನಿಂದ. ನಾನು ಹೋಗಿ ಅವರಿಗೆ ಬಾಗಿ ವಂದಿಸಿದೆ. ‘ಒಳ್ಳೆಯದೇ ಆಯಿತು’ ಎಂಬ ಮಾತಿನಲ್ಲಿರುವ ಧ್ವನಿ ನನಗೆ ಅರ್ಥವಾಗದೇ ಇರಲಿಲ್ಲ.

ಹಿಂದೊಮ್ಮೆ ಅವರು ‘ಲಹರಿ’ಗೆ ವಶರಾಗಿ ಕಾರ್ಯಕ್ರಮದ ಸಂಘಟಕರಿಗೆ ತೊಂದರೆಗೆ ಕೊಟ್ಟಿದ್ದಕ್ಕಾಗಿ ನಾನು ತುಸು ಬೈದಿದ್ದೆ. ಆ ಕಾರಣ ನನ್ನ ಮೇಲಿನ ಸಿಟ್ಟು ಸ್ಪಷ್ಟವಾಗಿ ವ್ಯಕ್ತವಾದುದು ಕೆಲವು ಸಮಯದ ಬಳಿಕ ಜರುಗಿದ ಪ್ರದರ್ಶನವೊಂದರಲ್ಲಿ. ನನ್ನ ವೇಷದ ಕುಣಿತಕ್ಕೆ ಚಿತ್ರವಿಚಿತ್ರ ಪೆಟ್ಟುಗಳನ್ನು ಬಾರಿಸಿ ಕಾಲ್ತೆಗೆಯದಂತೆ ಮಾಡಿ, ಹುಬ್ಬು ಹಾರಿಸಿ ‘ಹ್ಯಾಗೆ?’ ಎಂಬ ಭಾವದಲ್ಲಿ ನನ್ನತ್ತ ನೋಡಿದ್ದರು. ಒಂದೆರಡು ಪದಾಭಿನಯಗಳ ಬಳಿಕ ನಾನೂ ನನ್ನ ಕಸರತ್ತನ್ನು ಆರಂಭಿಸಿ ವಿಷಮ ಹೆಜ್ಜೆಗಳನ್ನು ಹಾಕುತ್ತ ಅದೇ ಭಂಗಿಯಲ್ಲಿ ಅವರತ್ತ ನೋಡಿದ್ದೆ. ಎಷ್ಟು ಸಿಟ್ಟಿದ್ದರೂ ನನ್ನ ಚಮತ್ಕೃತಿಯನ್ನು ನೋಡಿ ಅವರಿಗೆ ಸಂತೋಷವಾಗಿತ್ತೆಂದು ಅವರ ಮುಖ ನೋಡಿದಾಗ ಗೊತ್ತಾಗಿತ್ತು. ಇವತ್ತು ಕೂಡ ನನ್ನ ಚೆಂಡೆಯ ಧ್ವನಿಯನ್ನು ಉಡುಗಿಸಿ ಬಿಡುತ್ತಾರೆಂದು ಖಚಿತವಾಗಿತ್ತು.

ಪ್ರಸಂಗಾರಂಭವಾಗಿ ಸ್ವಲ್ಪಹೊತ್ತು ಕಳೆಯುತ್ತಿದ್ದಂತೆ ಆ ಕಡೆಯ ರಂಗಸ್ಥಳಕ್ಕೆ ಆನಂದರವರ ಪ್ರವೇಶವಾಗಿದೆಯೆಂದು ಪ್ರೇಕ್ಷಕರ ಕರತಾಡನದಿಂದ ಗೊತ್ತಾಯಿತು. ನಮ್ಮ ಕಡೆಯಿಂದ ನನಗೆ ಕರೆಬಂತು. ನಾನು ಹೋಗುವುದೋ ಬೇಡವೊ ಎಂಬ ಗೊಂದಲದಲ್ಲಿ ಸುಮ್ಮನೆ ಕುಳಿತೆ. ಮತ್ತೂ ಒತ್ತಾಯ ಬಂದಾಗ ಧೈರ್ಯ ಮಾಡಿ ಚೆಂಡೆಯ ಕೋಲುಗಳನ್ನೆತ್ತಿಕೊಂಡೆ. ಸುಮಾರು ಹೊತ್ತು ಶಕ್ತಿ ಮೀರಿ ಬಾರಿಸಿದೆ. ನನಗೂ ಕೆಲವು ಚಪ್ಪಾಳೆಗಳು ಸಿಕ್ಕಿದವು.

ಇನ್ನು ಸುಮ್ಮನಿರಲಾಗದು ಎಂದವರೇ ಆನಂದರವರು ಒಂದೊಂದೇ ಚೆಂಡೆಯನ್ನು ತರಿಸಿ ಸಾಲಾಗಿರಿಸತೊಡಗಿದರು. ಅಷ್ಟರಲ್ಲಿ ನಾನೂ ಅನಿವಾರ್ಯವಾಗಿ ಕೆಲವು ಚೆಂಡೆಗಳನ್ನು ನನ್ನ ಮುಂದೆ ಇಟ್ಟುಕೊಂಡೆ. ಆದರೆ, ನನಗೆ ಹಲವು ಚೆಂಡೆಗಳನ್ನು ನುಡಿಸಿ ಅಭ್ಯಾಸವಿರಲಿಲ್ಲ. ಕೊನೆಗೊಮ್ಮೆ ಏಳು ಚೆಂಡೆಗಳನ್ನು ಇಟ್ಟುಕೊಂಡು ‘ಜಲತರಂಗ’ದ ಹಾಗೆ ಸಪ್ತಸ್ವರವನ್ನು ನುಡಿಸತೊಡಗಿದರು.
ನಾನು ಅವರ ಕೈಚಳಕಕ್ಕೆ ದಂಗಾಗಿ ಹೋದೆ. ತುಸು ಹೊತ್ತು ಕಳೆದಿರಬಹುದು, ಕೆಮ್ಮಣ್ಣು ಆನಂದರವರು ಮಾಯವಾಗಿದ್ದರು!

ಅವರಿಲ್ಲ, ಚೆಂಡೆಯ ಧ್ವನಿ ಮಾತ್ರ ನಿಚ್ಚಳವಾಗಿ ಕೇಳಿಸುತ್ತಿದೆ. ಅವರು ರಂಗಸ್ಥಳದ ಹಿಂದೆ ಅಡ್ಡಚೌಕಿಯಲ್ಲಿ ಕುಳಿತುಕೊಂಡು ‘ಶಬ್ದವೇಧಿಯನ್ನು ಬಲ್ಲ ಬಿಲ್ಗಾರನಂತೆ’ ರಂಗಸ್ಥಳವನ್ನು ನೋಡದೆ ಅಲ್ಲಿ ಆಗುವ ವಿದ್ಯಮಾನಗಳಿಗೆ ಒಂದಿಷ್ಟೂ ತೊಂದರೆಯಾಗದಂತೆ ನುಡಿಸುತ್ತಿದ್ದರು. ಆ ಕೋಲಕೌಶಲಕ್ಕೆ ಜನ ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು. ಆ ಚಪ್ಪಾಳೆಯ ನಡುವೆ ನನ್ನ ಚೆಂಡೆಯ ಧ್ವನಿ ಕೇಳಿಸಲಿಲ್ಲವೆಂದರೂ ಸರಿಯೇ. ಕಲೆಯೂ ಚಮತ್ಕಾರವೂ ಹದವಾಗಿ ಬೆಸೆದುಕೊಂಡ ಆನಂದವರ ತ್ರಿವಿಕ್ರಮವತಾರವನ್ನು ಕಂಡ ಮೇಲೆ ಇವರ ಮುಂದೆ ಗೆಲ್ಲಲು ಸರ್ವಥಾ ಸಾಧ್ಯವಿಲ್ಲ ಅಂತನ್ನಿಸಿತ್ತು. ಹಾಗೆಂದು, ಸೋತರೂ ಸೋಲೆಂದು ಅನ್ನಿಸಲಿಲ್ಲ.

ಒಂದು ಘಟನೆ ನೆನಪಾಗುತ್ತಿದೆ. ಒಮ್ಮೆ ರಿಹರ್ಸಲ್ ನಡೆಯುತ್ತಿತ್ತು. ನನ್ನನ್ನು ಮಾತನಾಡಿಸಲೆಂದು ಯಕ್ಷಗಾನ ಕೇಂದ್ರಕ್ಕೆ ಬಂದಿದ್ದ ಆನಂದರವರು, ‘ನನಗೆ ಕಾರಂತರ ಅಭಿನಯವನ್ನು ನೋಡಲೇಬೇಕು’ ಎಂದು ಹೇಳುತ್ತ ಯಾರೂ ತಡೆದರೂ ಕೇಳದೆ ಅಭ್ಯಾಸದ ಕೊಠಡಿಯೊಳಗೆ ನುಗ್ಗಿಬಿಟ್ಟಿದ್ದರು. ‘ಲಹರಿ’ಯಲ್ಲಿದ್ದ ಅವರನ್ನು ನೋಡಿ ಕಾರಂತರು ಕೆರಳಿಬಿಡುತ್ತಾರೆ ಎಂದು ನಮಗೆಲ್ಲ ಭಯವಾಯಿತು. ಆದರೆ, ಕಾರಂತರು ಅಭಿನಯವನ್ನು ನಿಲ್ಲಿಸಿ ‘ಈತನನ್ನು ಒಮ್ಮೆ ಹೊರಗೆ ಕಳಿಸಿ’ ಎಂಬ ಭಾವದಲ್ಲಿ ಕುರ್ಚಿಯ ಮೇಲೆ ಸುಮ್ಮನೆ ಕುಳಿತುಬಿಟ್ಟರೇ ವಿನಾ ಬೈದಿರಲಿಲ್ಲ.

ಚೆಂಡೆಯಲ್ಲಿ ಕೈಸೋತ ಅನುಭವದ ಬಳಿಕ ಜೋಡಾಟದ ಬಗ್ಗೆ ನನ್ನಲ್ಲಿ ಭಯ ಕೂತುಬಿಟ್ಟಿತು. ಇವತ್ತಿಗೂ ಅದು ಇದೆ. ಒಂದಕ್ಕಿಂತ ಹೆಚ್ಚು ಚೆಂಡೆ, ಮದ್ದಲೆಗಳನ್ನು ನುಡಿಸುವ ಆಸಕ್ತಿಯಾಗಲಿ ಅಗತ್ಯವಾಗಲಿ ನನ್ನಂಥವರಿಗೆ ಇಲ್ಲವೇ ಇಲ್ಲ. ಕಲೆ ಬೇರೆ, ಚಮತ್ಕಾರ ಬೇರೆ...

                                                                    ****

ADVERTISEMENT

ಹೌದು, ಅವೆರಡೂ ಬೇರೆ ಬೇರೆಯೇ ಎಂಬ ಕಾರಣಕ್ಕಾಗಿಯೇ ಕಾರಂತರು ಯಕ್ಷಗಾನದಲ್ಲಿರುವ ಕಲಾತ್ಮಕ ಅಂಶಗಳನ್ನು ಎತ್ತಿ ಹಿಡಿದರು. ಅವರ ಯಕ್ಷಗಾನ ಬ್ಯಾಲೆಯಲ್ಲಿ ವೇದಿಕೆ ಹೇಗಿರಬೇಕು, ಬ್ಯಾಕ್ ಹಾಗೂ ಸೈಡ್ ಸ್ಕ್ರೀನ್‌ಗಳ ಬಣ್ಣ ಯಾವುದು, ಸೈಡ್‌ವಿಂಗ್ಸ್‌ಅನ್ನು ಹೇಗೆ ನಿಲ್ಲಿಸಬೇಕು, ಬೆಳಕಿನ ಪ್ರಖರತೆ ಎಷ್ಟಿರಬೇಕು, ಹಿಮ್ಮೇಳದವರು ಎಲ್ಲಿ ಕುಳಿತುಕೊಳ್ಳಬೇಕು, ಪರದೆ ಹಿಡಿಯುವವರು ಎಂಥ ಉಡುಪಿನಲ್ಲಿರಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಖಚಿತವಾದ ನಿರ್ಧಾರಗಳಿದ್ದವು. ಅವರ ಕಲ್ಪನೆಗಳಿಗೆ ಮೂರ್ತ ರೂಪ ಕೊಡಬೇಕಾದ ಕಲಾವಿದರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದುದೇ ಹೆಚ್ಚು.

ಕಲಾವಿದರಿಗೆ ಅನ್ಯ ಕಲಾಪ್ರಕಾರಗಳ ಅನುಭವವಿರದಿದ್ದುದೂ ಇದಕ್ಕೆ ಮುಖ್ಯ ಕಾರಣ. ಕಲಾವಿದರ ಮಾತಿಗೆ ಸ್ಪಂದಿಸಿ ಅಗತ್ಯ ಕಂಡಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿದರು. ಅದರಂತೆ, ಅವರು ವೇಷಭೂಷಣದಲ್ಲಿ ಮಾಡಿದ ಪರಿಷ್ಕಾರಗಳ ಬಗ್ಗೆ  ಸಂಪ್ರದಾಯಬದ್ಧರಿಗೆ ಸಹಮತವಿರಲಿಲ್ಲವೆಂಬುದು ಬೇರೆ ಮಾತು. ಆದರೆ, ಅಭಿನಯ ಸಮರ್ಥವಾಗಿ ಕಾಣಿಸಲು ಇಂಥ ಬದಲಾವಣೆ ಅನಿವಾರ್ಯವೆಂಬುದು ಕಾರಂತರ ನಿಲುವಾಗಿತ್ತು. ಶನಿ, ಶಿಖಂಡಿ, ಮಹಾಶೇಷ, ಮೇದೋಹುತ ಮುಂತಾದ ಪಾತ್ರಗಳಿಗೆ ಯಕ್ಷಗಾನದ ಚೌಕಟ್ಟಿನೊಳಗೆ ಅವರೇ ಹೊಸ ಮುಖವರ್ಣಿಕೆಗಳನ್ನು ಸೃಷ್ಟಿಸಿದ್ದರು.

ಸಮಯ ಸಿಕ್ಕಿದ್ದಾಗಲೆಲ್ಲ ನಾನು ಕಾರಂತರಲ್ಲಿ ನನಗನ್ನಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವರು ನೀಡುತ್ತಿದ್ದ ಉತ್ತರಗಳು ನನ್ನ ಪಾಲಿಗೆ ಜಿಜ್ಞಾಸೆಯ ತೊರೆಯನ್ನು ಉತ್ತರಿಸುವ ಹರಿಗೋಲುಗಳಾಗಿದ್ದವು.

ನಾನು ಕೇಳಿದ ಅಂಥ ಪ್ರಶ್ನೆಗಳಲ್ಲೊಂದು- “ಕೃಷ್ಣನ ವೇಷವನ್ನು ಸೀರೆ ಉಡಿಸಿ (ಕಸೆ- ಕಚ್ಚೆ ಹಾಕಿ) ಯಾಕೆ ಮಾಡುತ್ತಾರೆ?”

(ಸಶೇಷ)
ನಿರೂಪಣೆ: ಹರಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.