ಭೋಪಾಲದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯ ಗೆಸ್ಟ್ ಹೌಸ್‌ನಲ್ಲಿ ನಾವು ಉಳಿದುಕೊಂಡಿದ್ದೆವು. ಕಾರ್ಖಾನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮೂರು ದಿನ ನಮ್ಮ ಪ್ರದರ್ಶನಗಳನ್ನು ನೀಡಿ ಇನ್ನೇನು ಊರಿಗೆ ಮರಳಲು ಸಿದ್ಧರಾಗಿದ್ದಾಗ ಸಂದೇಶ ಬಂತು, `ರೈಲಿನಲ್ಲಿ ಟಿಕೆಟು ಪಕ್ಕಾ ಆಗಿಲ್ಲ'. ರೈಲಿನಲ್ಲಿ ಟಿಕೆಟು ಪಕ್ಕಾ ಆಗದೆ ಅಷ್ಟು ದೂರ ಪ್ರಯಾಣಿಸುವುದು ಕಷ್ಟಕರ ಎಂಬುದು ಕಲಾವಿದರಾದ ನಮ್ಮೆಲ್ಲರ ಅಭಿಪ್ರಾಯವಾಗಿತ್ತು. ಆದರೆ, ನಮ್ಮ ತಂಡದ ಮುಖ್ಯಸ್ಥರಾದ ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರು, `ನಾವು ಹೇಗೂ ಹೊರಟಾಗಿದೆ. ನಾಳೆ ನಿಂತು ಇಲ್ಲೇನೂ ಮಾಡುವುದಕ್ಕಿಲ್ಲ. ಕೆಲವು ಟಿಕೆಟುಗಳಾದರೂ ಪಕ್ಕಾ ಆಗಬಹುದು. ಉಳಿದವರು ಸಾಮಾನ್ಯ ದರ್ಜೆಯಲ್ಲಾದರೂ ಹೊಂದಿಕೊಂಡು ಹೇಗಾದರೂ ಹೋಗಿಯೇ ಬಿಡುವುದು ಒಳ್ಳೆಯದೆಂದು ನನಗೆ ತೋರುತ್ತದೆ' ಎಂದರು.
ಅಷ್ಟೊಂದು ಸಾಮಾನು - ಸರಂಜಾಮುಗಳಿರುವಾಗ ಅವುಗಳೊಂದಿಗೆ ಕಷ್ಟಪಟ್ಟು ಪ್ರಯಾಣಿಸುವುದು ಕಲಾವಿದರಿಗೆ ಸಹಜವಾಗಿಯೇ ಇಷ್ಟವಿರಲಿಲ್ಲ. ಆದರೆ, ಕೃಷ್ಣ ಭಟ್ಟರ ದನಿ ದೃಢವಾಗಿತ್ತು. `ಒಂದು ದಿನ ತಡವಾದರೂ ಸಮಯ ವ್ಯರ್ಥವಾಗುತ್ತದೆ. ಹೊರಟು ನಿಂತ ಮೇಲೆ ಊರಿನ ದಾರಿ ಹಿಡಿಯುವುದೇ ಕ್ಷೇಮ' ಎಂದು ಆದೇಶದ ದನಿಯಲ್ಲಿಯೇ ನುಡಿದುಬಿಟ್ಟದ್ದರಿಂದ ಕಲಾವಿದರು ಒಲ್ಲದ ಮನಸ್ಸಿನಿಂದ ಹೊರಟು ನಿಂತರು.
1984, ಡಿ.1. ಮುನ್ನಾದಿನ ರೈಲು ರದ್ದಾಗಿರುವ ಕಾರಣದಿಂದಲೋ ಏನೋ, ನಿಲ್ದಾಣದಲ್ಲಿ ಜಾತ್ರೆಯಂತೆ ಜನ ಸೇರಿತ್ತು. `ಇಂಥ ಸ್ಥಿತಿ ಯಾರಿಗೆ ಬೇಕಿತ್ತು...' ಎಂದುಕೊಳ್ಳುತ್ತ ನಾವೆಲ್ಲ ಜನಗಳ ಮಧ್ಯದಲ್ಲಿಯೇ ನುಸುಳುತ್ತ ರೈಲು ಏರಿದೆವು. ಒಳಗೂ ಕಾಲಿಡಲು ಜಾಗವಿಲ್ಲ. ಯಕ್ಷಗಾನದ ಪೆಟ್ಟಿಗೆ, ಸಾಮಾನು ಸಂಜಾಮು, ಗಂಟುಮೂಟೆಗಳನ್ನೆಲ್ಲ ಎಡೆಯೆಡೆಯಲ್ಲಿ ಇಟ್ಟೆವು. ಜಾಗ ಸಾಲದೆ ಶೌಚಾಲಯದೊಳಗೂ ಒಂದಿಷ್ಟು ಸರಕುಗಳು! ನಿಂತುಕೊಂಡು, ಒರಗಿಕೊಂಡು, ಕುಳಿತುಕೊಂಡು, ವಾಲಿಕೊಂಡು ಸಾಗಿತು ಯಾನ. ಬಂದೂ ಬಂದೂ ವಿಜಯವಾಡ ತಲುಪಿದೆವು. ಅಲ್ಲಿ ವಿರಾಮಕ್ಕೆ ಒಂದಿಷ್ಟು ಅವಕಾಶವಿದ್ದುದರಿಂದ ನಿಲ್ದಾಣದಲ್ಲಿದ್ದ ಹೊಟೇಲಿಗೆ ಉಪಾಹಾರ ಸೇವನೆಗೆ ಹೋದೆವು.
ವಿಜಯವಾಡಾದಿಂದ ರೈಲಿನಲ್ಲಿ ಸೀಟು ಸಿಕ್ಕಬಹುದಾದ ಸಾಧ್ಯತೆಯಿದ್ದುದರಿಂದ ನಾವೆಲ್ಲ ಕೊಂಚ ಸಮಾಧಾನದಿಂದಲೇ ಬೆಳಗ್ಗಿನ ಚಹಾ ಕುಡಿಯುತ್ತ್ದ್ದಿದೆವು. ಪ್ರೊಫೆಸರ್ ಕೃಷ್ಣ ಭಟ್ಟರು ಒಂದೆಡೆ ಕುಳಿತು ಅಂದಿನ ಆಂಗ್ಲ ಪತ್ರಿಕೆಯನ್ನು ಓದುತ್ತಿದ್ದರು. ಇದ್ದಕ್ಕಿದ್ದಂತೆಯೇ ಅವರ ಮುಖದಲ್ಲಾದ ಬದಲಾವಣೆಯನ್ನು ನಾನು ಗಮನಿಸಿದೆ. ಮತ್ತೊಂದು ಕ್ಷಣದಲ್ಲಿ ಎದ್ದು ಬಂದವರೇ ನನ್ನ ಕೈಯನ್ನು ಬಲವಾಗಿ ಹಿಡಿದುಕೊಂಡುಬಿಟ್ಟರು. `ನಿನ್ನೆ ನಾನು ಹೊರಡಲೇಬೇಕೆನ್ನುವಾಗ ನೀವೆಲ್ಲ ಬೇಡವೆಂದಿರಿ... ನಾವು ಬಾರದಿರುತ್ತಿದ್ದರೆ ಏನಾಗುತ್ತಿತ್ತು ನೋಡಿ' ಎಂದು ಪತ್ರಿಕೆಯನ್ನು ನಮ್ಮ ಮುಖಕ್ಕೆ ಹಿಡಿದರು.
ಭೋಪಾಲದಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಸಾಲುಸಾಲಾಗಿ ಜನ ನೆಲಕ್ಕುರುಳುತ್ತಿದ್ದಾರೆ!
ನಮ್ಮ ನಡುವೆ ವಿಷಾದದ ಮೌನವೊಂದು ಹೆಪ್ಪುಗಟ್ಟಿ ಕುಳಿತಂತಾಯಿತು. ಪ್ರೊಫೆಸರ್ ಕೃಷ್ಣ ಭಟ್ಟರ ಒಡಲಾಳದ ಎಚ್ಚರದ ದನಿಯೇ ನಮ್ಮನ್ನು ರಕ್ಷಿಸಿತೆಂಬ ಸತ್ಯದ ಅರಿವಾಯಿತು. ಎಲ್ಲರೂ ಕೃಷ್ಣ ಭಟ್ಟರಿಗೆ ಕೃತಜ್ಞತೆಯಿಂದ ವಂದಿಸುವವರೇ. ರೈಲು ಹೊರಡುವ ಸೂಚನೆಯಾಗಿ ಸೀಟಿ ಕೇಳಿಸಿತು. ನಾವೆಲ್ಲ ಬೇಗಬೇಗನೆ ರೈಲು ಹತ್ತಿದೆವು. ಹಿಂತಿರುಗಿದಾಗ ಪ್ರೊಫೆಸರ್ ಕೃಷ್ಣ ಭಟ್ಟರು ಇರಲಿಲ್ಲ. `ಎಲ್ಲಿಹೋದರು...' ಎಂದು ನಾವೆಲ್ಲ ಗಾಬರಿಯಿಂದ ಅತ್ತಿತ್ತ ನೋಡುವಾಗ, ಸಾಕಷ್ಟು ಮುಂದೆ ಸಾಗಿದ ರೈಲಿನ ಕೊನೆಯ ಡಬ್ಬಿ ಹತ್ತಿ ಒಳವಾಗಿಲಿನಿಂದ ನಮ್ಮತ್ತ ಆಗಮಿಸುತ್ತಿರುವುದು ಕಾಣಿಸಿತು. `ರೈಲು ಹೊರಡುವ ಸಮಯದಲ್ಲಿ ಎಲ್ಲಿ ಹೋದಿರಿ ಸಾರ್?' ಅಂತ ಕೇಳಿದೆ.
`ಊರಿನಲ್ಲಿ ಇಂದಿನ ಪತ್ರಿಕೆಯ ಸುದ್ದಿ ಓದಿ ಗಾಬರಿಯಾಗುತ್ತಾರೆ. ದೂರವಾಣಿ ಮೂಲಕ, ಯಕ್ಷಗಾನ ಕೇಂದ್ರದ ಕಲಾವಿದರು ಕ್ಷೇಮವಾಗಿದ್ದಾರೆ- ಅಂತ ನಮ್ಮ ಕಚೇರಿಗೆ ತಿಳಿಸಿ ಬಂದೆ' ಎಂದರು. ಅಂಥ ಉದ್ವೇಗದ ಕ್ಷಣದಲ್ಲಿಯೂ ಊರಿನಲ್ಲಿ, ಮನೆಯಲ್ಲಿ ಪಡಬಹುದಾದ ಆತಂಕದ ಬಗ್ಗೆ ಊಹಿಸಬಲ್ಲವರಾಗಿದ್ದರು. ಮರುದಿನ ಪತ್ರಿಕೆಯಲ್ಲಿ ಸುದ್ದಿ ಬಂತು, `ವಿಷಾನಿಲ ದುರಂತ, ಪಾರಾದ ಯಕ್ಷಗಾನ ಕೇಂದ್ರದ ಕಲಾವಿದರು'.
ಪ್ರೊಫೆಸರ್ ಕೃಷ್ಣ ಭಟ್ಟರ ಜಾಗೃತ ಅಂತಃಪ್ರಜ್ಞೆಯಿಂದಾಗಿ ನಾವೆಲ್ಲ ಜೀವ ಸಹಿತ ಭೋಪಾಲದಿಂದ ಮರಳುವಂತಾದುದನ್ನು ಮನಸ್ಸು ಇವತ್ತಿಗೂ ನೆನೆಯುತ್ತದೆ. ಪರವೂರಿನಲ್ಲಿ ನಮ್ಮ ಪ್ರದರ್ಶನ ಮುಗಿದ ಕೂಡಲೇ ತತ್‌ಕ್ಷಣ ಊರಿಗೆ ಮರಳಬೇಕು ಎಂಬುದು ಎಂದೆಂದಿಗೂ ಎಚ್ಚರಿಕೆಯ ಮಾತಿನಂತಿದೆ.
***
ಆದರೆ, ರಷ್ಯಾಕ್ಕೆಂದು ಹೊರಟವರು ಪ್ರದರ್ಶನವಿಲ್ಲದೆಯೇ ದೆಹಲಿಯಿಂದಲೇ ಮರಳುವಂತಾದರೆ ಹೇಗಾಗಬೇಡ!
ಹೊರಟದ್ದು ಮಹೋನ್ನತ ಭಾರತ ಉತ್ಸವಕ್ಕೆ. ಅದು ಭಾರತ- ರಷ್ಯಾ ಸ್ನೇಹಬಂಧ ಬಲಗೊಳ್ಳಲು ಜಂಟಿಯಾಗಿ ನಡೆಸುವ ಉತ್ಸವ. ರಷ್ಯಾಕ್ಕೆ ತೆರಳುತ್ತಿದ್ದೇವೆಂದು ಊರಿನಲ್ಲಿ ಎಲ್ಲರ ಜೊತೆಗೆ ಹೇಳಿಯಾಗಿದೆ. ದೆಹಲಿಯವರೆಗೂ ಹೋಗಿ ಪ್ರಗತಿ ಮೈದಾನದಲ್ಲಿ ನಡೆಯುವ ರಿಹರ್ಸಲ್‌ನಲ್ಲಿ ಭಾಗವಹಿಸಿಯಾಗಿದೆ. ಹತ್ತಿಪ್ಪತ್ತು ದಿನಗಳ ರಿಹರ್ಸಲ್ ಕೊನೆಯ ಹಂತದಲ್ಲಿರುವಾಗ ಶಿವರಾಮ ಕಾರಂತರು ಬಂದರು. ದಶರಥ್ ಪಟೇಲ್, ಚಂದ್ರಲೇಖಾರಂಥ ಕಲಾನಿರ್ದೇಶಕರ ಸೂಚನೆಯಂತೆ ನಾವು ಯಕ್ಷಗಾನದ ವೇಷಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆಗಳನ್ನಿಟ್ಟಾಗಿತ್ತು. ಯಾವ ಕ್ಷಣಕ್ಕೆ ಉತ್ಸವದ ಉಸ್ತುವಾರಿಗಳು ಯಕ್ಷಗಾನವನ್ನು ಜಾನಪದವೆಂಬ ವಿಭಾಗಕ್ಕೆ ಸೇರಿಸಿ ಕರಾವಳಿಯ ಈ ಕಲೆಯನ್ನು ಮೆರವಣಿಗೆಯಲ್ಲಿ ಸಾಗಿ ಬರುವುದಕ್ಕೆ ಸೀಮಿತಗೊಳಿಸಿದರೋ, ಕಾರಂತರಿಗೆ ಅದು ಒಪ್ಪಿಗೆಯಾಗಲಿಲ್ಲ. `ಯಕ್ಷಗಾನವನ್ನು ಪ್ರದರ್ಶಕ ಕಲೆಯೆಂದು ಪರಿಗಣಿಸದೆ ಇಷ್ಟಕ್ಕೇ ಬಳಸುವ ಬಗ್ಗೆ ನನಗೆ ಸಹಮತವಿಲ್ಲ. ನಾವು ರಷ್ಯಾಕ್ಕೆ ಬರಲು ಸಿದ್ಧರಿಲ್ಲ' ಎಂದು ಖಡಾಖಂಡಿತವಾಗಿ ಹೇಳಿ ಶಿವರಾಮ ಕಾರಂತರು ತಮ್ಮ ವಸತಿಗೃಹಕ್ಕೆ ನಿರ್ಗಮಿಸಿದರು.
ನಾವು ಕೂಡ ಒಲ್ಲದ ಮನಸ್ಸಿನಲ್ಲಿ ನಮ್ಮ ವಸತಿಸ್ಥಳಕ್ಕೆ ಮರಳಿದೆವು. ನಾಳೆ, ರಷ್ಯಾದ ವಿಮಾನ ಹತ್ತುವ ಬದಲು ಊರಿನ ರೈಲು ಏರುವ ಸ್ಥಿತಿ ಬಂದರೂ ಬಂದೀತು ಎಂಬ ಚಿಂತೆಯಲ್ಲಿ ನಮಗೆ ನಿದ್ದೆಯೂ ಬರಲಿಲ್ಲ.
ನಾವು ಉಳಿದುಕೊಂಡಿದ್ದ ಹೊಟೇಲ್- ಯಾತ್ರಿ ನಿವಾಸವೆಂದೇನೋ ಹೆಸರಿರಬೇಕು ಬೆಳಿಗ್ಗೆ ಕರೆ ಬರುವುದೋ ಎಂದು ನಾವು ನಿರೀಕ್ಷೆಯಲ್ಲಿದ್ದೆವು. ಮಧ್ಯಾಹ್ನದ ಹೊತ್ತಿಗೆ ನಮ್ಮನ್ನು ಕರೆದೊಯ್ಯಲು ಒಂದು ವಾಹನ ಬಂತು. ನಾವು ಅಲ್ಲಿ ತಲುಪಿದ ಸ್ವಲ್ಪ ಸಮಯದಲ್ಲಿಯೇ ಶಿವರಾಮ ಕಾರಂತರು ಎಂದಿನ ಗಾಂಭೀರ್ಯದಲ್ಲಿ ಕಾರಿನಿಂದಿಳಿದು ಬಂದರು. ಜೊತೆಗೆ ಕೆ.ವೈ. ಶಾರದಾಪ್ರಸಾದರೂ ಇದ್ದರು. ಶಿವರಾಮ ಕಾರಂತರು ನಮ್ಮತ್ತ ಬಂದವರೇ, `ನೀವು ಮೆರವಣಿಗೆಯಲ್ಲಿ ನಡೆಯುವ ಅಗತ್ಯವಿಲ್ಲ. ನಿಮಗೆ ಪ್ರದರ್ಶಕ ಕಲೆಯ ಮಾನ್ಯತೆಯೇ ದೊರಕಿದೆ' ಎಂದು ಅವರು ಹೇಳುವಾಗ ನಿರಾಳರಾದೆವು.
ಮಾಸ್ಕೋದಲ್ಲಿ ಇಳಿದಾಗ ಭಾರತದಿಂದ ಆಗಮಿಸಿದ್ದ ಎಂತೆಂಥ ಮೇರು ಕಲಾವಿದರು ಇದ್ದರು! ಬಯಲು ಸೀಮೆಯ ಡೊಳ್ಳಿನ ತಂಡದೊಂದಿಗೆ ಪ್ರೊಫೆಸರ್ ಕು.ಶಿ. ಹರಿದಾಸ ಭಟ್ಟರು ಬಂದಿದ್ದರು. ಪ್ರಸಿದ್ಧ ಕಲಾವಿದರೆಲ್ಲ ಶಿವರಾಮ ಕಾರಂತರನ್ನು ಗೌರವದಿಂದ ಮಾತನಾಡಿಸುವವರೇ. ಉದ್ಘಾಟನಾ ಸಮಾರಂಭದಂದು ವೇದಿಕೆಯಲ್ಲಿ ರಷ್ಯಾದ ಪ್ರಧಾನಿ ಮಿಖಾಯೆಲ್ ಗೊರ್ಬಚೆಫ್, ಭಾರತದ ಪ್ರಧಾನಿ ರಾಜೀವ್ ಗಾಂಧಿಯವರ ಜೊತೆಗಿದ್ದ ಹಲವಾರು ಪ್ರಸಿದ್ಧರಲ್ಲಿ ಶಿವರಾಮ ಕಾರಂತರೂ ಒಬ್ಬರಾಗಿದ್ದರು. ಆಗ ಅಖಂಡವಾಗಿದ್ದ ರಷ್ಯಾದ ಅನೇಕ ಪ್ರಾಂತ್ಯಗಳಲ್ಲಿ ಶಿವರಾಮ ಕಾರಂತರ ನಿರ್ದೇಶನದ ಯಕ್ಷಗಾನ ಬ್ಯಾಲೆಯ ಪ್ರದರ್ಶನ ಆಯೋಜನೆಗೊಂಡಿತ್ತು. ಉಜ್ವೇಕಿಸ್ತಾನವೊ, ಬಲ್ಗೇರಿಯಾವೊ, ಹಂಗೇರಿಯವೊ ನೆನಪಿಡಲು ಕಷ್ಟವಾಗುವಂಥ ಹೆಸರಿನ ವಿವಿಧ ಪ್ರದೇಶಗಳನ್ನು ದಾಟಿ ಅಫ್ಘಾನಿಸ್ತಾನದವರೆಗೂ ಬಂದು ಯಕ್ಷಗಾನ ಬ್ಯಾಲೆಯ ಪ್ರದರ್ಶನ ನೀಡಿದೆವು. ಈಗ ನೆಲಕ್ಕೊರಗಿರಬಹುದಾದ ಎಷ್ಟೋ ಬೌದ್ಧಸ್ತೂಪಗಳನ್ನು ಅಲ್ಲಿ ನೋಡಿದ್ದು ಕಣ್ಣ ಮುಂದಿದೆ.
ಯಕ್ಷಗಾನ ಮೆರವಣಿಗೆಯಲ್ಲಿ ಸಾಗುವುದಕ್ಕೆ ಸೀಮಿತವಾದ ಕಲೆಯಲ್ಲ, ಅದಕ್ಕೆ ಉಳಿದ ಶಾಸ್ತ್ರೀಯ ಕಲೆಗಳಂತೆ ಸಭಾಂಗಣದೊಳಗೆ ಪ್ರದರ್ಶನದ ಮಾನ್ಯತೆ ನೀಡಬೇಕೆಂಬ ಶಿವರಾಮ ಕಾರಂತರ ಬದ್ಧತೆ ನನ್ನನ್ನು ಬಹಳ ಕಾಲ ಕಾಡುತ್ತಿತ್ತು. ಹುಲಿವೇಷದಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಕುಣಿಯಬಾರದು, ಯಕ್ಷಗಾನದಲ್ಲಿ ಹುಲಿ ವೇಷ ಕುಣಿಯಬಾರದು ಎಂದು ಯಾರೋ ಹೇಳಿದಂತಾಗಿ ಹಿಂದಿರುಗಿ ನೋಡಿದೆ.
***
ಹುಲಿವೇಷದ ಬಗ್ಗೆ ಹೇಳ ಹೊರಟರೆ ಅದೊಂದು ದೊಡ್ಡ ಕಥೆ.
ಪ್ರಾಯ ಹದಿನಾಲ್ಕೋ ಹದಿನೈದೋ. ನಾನಿನ್ನೂ ಯಕ್ಷಗಾನ ಕೇಂದ್ರಕ್ಕೆ ಸೇರಿರಲಿಲ್ಲ. ಆದರೆ, ಹವ್ಯಾಸಿ ಸಂಘಗಳಲ್ಲಿ ವೇಷ ಮಾಡುತ್ತಿದ್ದ ಅನುಭವವಿತ್ತು. ಉಡುಪಿಯಲ್ಲಿ ಶ್ರಿಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹುಲಿವೇಷದ ಕುಣಿತ ತುಂಬ ಜನಪ್ರಿಯ. ನಿಡುಗಾಲ ಊರಿಗೆ ಮಾರಿಯಾಗಿ ಕಾಡುತ್ತಿದ್ದ ಉಗ್ರ ವ್ಯಾಘ್ರವನ್ನು ಉಡುಪಿಯ ಮಠದ ಯತಿಗಳೋರ್ವರು ತಮ್ಮ ಸಿದ್ಧಿಯಿಂದ ಮಣಿಸಿದ ಬಳಿಕ ಉಡುಪಿಯಲ್ಲಿ ಹುಲಿ ವೇಷ ಧರಿಸುವುದು ಸಂಪ್ರದಾಯವಾಯಿತೆಂಬುದು ಪ್ರತೀತಿ. ಶ್ರಿಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಸಂದರ್ಭದಲ್ಲಿ ಊರ ಯುವಕರೆಲ್ಲ ಹುಲಿ ವೇಷ ಧರಿಸಿ ಕುಣಿಯುವಾಗ ನನಗೂ ಆಸೆಯಾಯಿತು. ಆಗ ಸುಂದರ ಎಂಬೊಬ್ಬ ಪ್ರಸಿದ್ಧ ಹುಲಿವೇಷಧಾರಿಯಿದ್ದರು. ಅನೇಕರಿಗೆ ಪಿಲಿ (ಹುಲಿಯ ತುಳುಪದ) ಎಂಬ ಪೂರ್ವಪ್ರತ್ಯಯದೊಂದಿಗೆ `ಪಿಲಿ ಲಕ್ಷ್ಮಣ', `ಪಿಲಿ ಸುಂದರ' ಮುಂತಾದ ಹೆಚ್ಚುಗಾರಿಕೆಯ ಹೆಸರಿತ್ತು. ಹುಲಿವೇಷದ ತಂಡದವರನ್ನು ಸಂಪರ್ಕಿಸಿ ನನ್ನ ಮೈಗೂ ಹುಲಿಯ ಬಣ್ಣ ಹಚ್ಚಬೇಕೆಂದು ವಿನಂತಿಸಿದೆ. `ಹದಿನೈದು ರೂಪಾಯಿಯಾಗುತ್ತದೆ' ಎಂಬ ಉತ್ತರ ಬಂತು. ಆಗ ಹದಿನೈದು ರೂಪಾಯಿಗೆ ನೂರರ ಬೆಲೆ!
ಯಾರಲ್ಲಾದರೂ ದುಡ್ಡು ಬೇಡುವುದು ಅನಿವಾರ್ಯವಾಯಿತು. ನಾನು ಆಶ್ರಯಿಸಿದ್ದ ಗುರು ಗುಂಡಿಬೈಲು ನಾರಾಯಣ ಶೆಟ್ಟರ ಪತ್ನಿಯ ಬಳಿಗೆ ಹೋಗಿ, `ಅಮ್ಮ, ಹದಿನೈದು ರೂಪಾಯಿ ಬೇಕಿತ್ತು' ಎಂದೆ. `ಯಾಕೊ?' ಎಂದು ಕೇಳಿದಾಗ ನಾನು ಪ್ರಾಮಾಣಿಕವಾಗಿ ಹುಲಿವೇಷ ಹಾಕುವ ಆಸೆಯನ್ನು ವ್ಯಕ್ತಪಡಿಸಿದೆ. `ಹಾಗೊ? ನನ್ನಲ್ಲಿ ಅಷ್ಟು ಹಣವಿಲ್ಲ' ಎಂದುಬಿಟ್ಟರು. ಆ ಮಾತಿನಲ್ಲಿ ಅವರಿಗೆ (ಗುಂಡಿಬೈಲು ನಾರಾಯಣ ಶೆಟ್ಟರಿಗೆ) ನಾನು ಹುಲಿವೇಷ ಹಾಕುವುದು ಒಪ್ಪಿಗೆಯಾಗಲಿಕ್ಕಿಲ್ಲ ಎಂಬ ಧ್ವನಿಯೂ ಇತ್ತು. ಹುಣಿಸೆ ಹುಳಿಯನ್ನು ಮರದಿಂದ ಕೊಯ್ದು ಬೀಜಗಳನ್ನು ಬೇರ್ಪಡಿಸಿ ಬಳಕೆಗೆ ಅನುಕೂಲವಾಗುವಂತೆ ಸಂಗ್ರಹಿಸಿ ಕೊಟ್ಟು ಋಣವನ್ನು ತೀರಿಸುವೆನೆಂದು ವಾಗ್ದಾನ ಮಾಡಿ ಗುರುಪತ್ನಿಯ ಮನವೊಲಿಸಿದೆ. `ಆದರೆ ಸಂಜೀವಾ, ನೀನು ಹುಲಿ ವೇಷ ಹಾಕಿಕೊಂಡು ನಮ್ಮ ಮನೆಯಂಗಳಕ್ಕೆ ಬಂದು ಕುಣಿಯಬಾರದು. ಅವರಿಗೆ (ನಾರಾಯಣ ಶೆಟ್ಟರಿಗೆ) ಸಿಟ್ಟು ಬಂದೀತು' ಎಂದು ಎಚ್ಚರಿಸಿ ಅಡುಗೆ ಕೋಣೆಯ ಕತ್ತಲೆಯಲ್ಲಿಟ್ಟಿದ್ದ ಹದಿನೈದು ರೂಪಾಯಿಗಳನ್ನು ತೆಗೆದು ಕೊಟ್ಟರು.
ಒಂದು ಚಡ್ಡಿ ಹೊರತುಪಡಿಸಿದರೆ ತೆರೆದ ಮೈ. ನಡುಗುವಂಥ ಚಳಿಗಾಳಿ. ಬಟ್ಟೆ ಹೊದ್ದುಕೊಳ್ಳೋಣವೆಂದರೆ ಬಣ್ಣ ಹಾಕಲು ತೊಡಕು. ಬಣ್ಣ ಹಾಕಿದ ಬಳಿಕವಂತೂ ಎರಡು ದಿನ ಯಾವುದಕ್ಕೂ ತಾಕದೆ, ಬಣ್ಣ ಅಳಿಸಿಹೋಗದಂತೆ ಉಳಿಸಿಕೊಳ್ಳುವ ಎಚ್ಚರವಿರಬೇಕು. ಆ ಅರೆಗತ್ತಲಿನಲ್ಲಿ ಬಣ್ಣ ಹಾಕುವವರೂ ಒಳ್ಳೆಯ ಲಹರಿಯಲ್ಲಿರುತ್ತಿದ್ದರು. ಚಿಟ್ಟೆ ಹುಲಿ, ಪಟ್ಟೆ ಹುಲಿ, ಕಪ್ಪು ಹುಲಿ ಹೀಗೆ ಬಹುವಿಧಗಳ ಹುಲಿಗಳನ್ನು ರೂಪಿಸುವುದರಲ್ಲಿ ಪರಿಣತರು. `ನಿನಗೆ ಕಪ್ಪು ಹುಲಿ ಚೆನ್ನಾಗಿ ಹಿಡಿಸುತ್ತದೆ' ಎಂದು ಗೋಡೆಗೆ ಪೈಂಟು ಹೊಡೆಯುವಂತೆ ನನ್ನ ದೇಹಕ್ಕೆ ಬಣ್ಣ ಬಳಿಯತೊಡಗಿದ ಒಬ್ಬಾತ. ನನ್ನ ಮೈಗೆ ಆ ಬಣ್ಣ ತಾಕಿದಾಗ ಉರಿಯೋ ಉರಿ! ಆದರೂ ಸಹಿಸಿಕೊಂಡೆ. ಎರಡು ಉದ್ದನೆಯ ಕೋಲುಗಳನ್ನು ಹಿಡಿದುಕೊಂಡು ನೆಲಕ್ಕೂರಿ ಕೈಯಗಲಿಸಿ ನಿಲ್ಲಬೇಕು. ಕೈಕಾಲುಗಳು ಸೋತು ಹೋದ ಅನುಭವ. ಮಧ್ಯರಾತ್ರಿ ಬಣ್ಣ ಹಚ್ಚಲು ಆರಂಭವಾದರೆ ಮುಗಿಯುವಾಗ ಮುಂಜಾನೆಯ ಕೋಳಿ ಕೂಗುತ್ತದೆ. ಬೆಳಗಾಗುತ್ತಿರುವಂತೆ ನನ್ನ ಮೈಯನ್ನೊಮ್ಮೆ ನೋಡಿದೆ. ಕಪ್ಪು ಹುಲಿಯ ಬದಲಿಗೆ ಹಸಿರು ಹುಲಿಯಾಗಿರುವಂತೆ ಕಂಡಿತು. ಅರೆಗತ್ತಲಲ್ಲಿ ಎಡವಟ್ಟಾಗಿತ್ತು. ಕಪ್ಪು ಬಣ್ಣವೆಂದು ಹಸಿರು ಬಣ್ಣವನ್ನು ಬಳಿದು ಬಿಟ್ಟಿದ್ದ ಪುಣ್ಯಾತ್ಮ ಕಲಾಕಾರ! ಎಲ್ಲರೂ ಪಚ್ಚೆ ಹುಲಿ ಎಂದು ನಗುತ್ತಾರೆಂದು ಭಾವಿಸಿ ತತ್‌ಕ್ಷಣ ಬಣ್ಣವನ್ನು ಒರೆಸಿ ಬಿಡುವೆನೆಂದು ತೀರ್ಮಾನಿಸಿದೆ. ನನ್ನ ಜೊತೆಗಿದ್ದ ಹಿರಿಯರು, `ಒಮ್ಮೆ ಹಾಕಿದ ಬಣ್ಣವನ್ನು ಅಳಿಸಬಾರದು. ಏನಿದ್ದರೂ ಮೊಸರುಕುಡಿಕೆ ಉತ್ಸವ ಮುಗಿದ ಮೇಲೆಯೇ ಬಣ್ಣ ತೆಗೆಯತಕ್ಕದ್ದು. ಇದೇನು ಆಟ ಅಂತ ತಿಳ್ಕೊಂಡಿಯಾ? ದೇವರ ಸೇವೆ!' ಎಂದು ನನ್ನನ್ನು ಹೆದರಿಸಿದರು.
`ಹುಲಿವೇಷ'ವೂ ಕಾಲಾಂತರದಲ್ಲಿ ಆರಾಧಾನಾತ್ಮಕ ಲಕ್ಷಣಗಳನ್ನು ಮೈಗೂಡಿಸಿಕೊಂಡಿತ್ತೆಂಬುದಕ್ಕೆ ಕೆಲವರಿಗೆ ಹುಲಿಯ (ಪಿಲಿಚಾಮುಂಡಿ ದೈವದ) ಆವೇಶ ಬರುತ್ತಿದ್ದುದೇ ಸಾಕ್ಷಿ. ಎಲ್ಲ ವೇಷಗಳು ಸಿದ್ಧಗೊಂಡ ಬಳಿಕ ನಡುವೆ ಬೆಂಕಿ ಹಾಕಿ ಲೋಬಾನದ ಹೊಗೆಯನ್ನು ಆಘ್ರಾಣಿಸುವುದೊಂದು ಪದ್ಧತಿ. ಹುಲಿಗಳು ಬೆಂಕಿಯತ್ತ ಬಾಗುವಾಗ ಹುಲಿವೇಷಧಾರಿಗಳ ಸೊಂಟಕ್ಕೆ ಜಟ್ಟಿಬಟ್ಟೆಯನ್ನು ಬಿಗಿದು ಅದರ ಒಂದು ತುದಿಯನ್ನು ಹಿಂದುಗಡೆಯಿಂದ ಎಳೆದು ಹಿಡಿಯುತ್ತಿದ್ದರು. ಮನೆಯಲ್ಲೊಬ್ಬರು ಹುಲಿಯ ವೇಷ ಹಾಕಲೇಬೇಕೆಂಬ ಸಂಪ್ರದಾಯ ಬದ್ಧತೆಯಿದ್ದರೆ, ವೇಷ ಹಾಕಲು ಅನುಕೂಲ ಸ್ಥಿತಿಯಿಲ್ಲವಾದರೆ, ಅಂಥವರು ಹುಲಿವೇಷಧಾರಿಯೊಬ್ಬನ ಸೊಂಟದ ಬಟ್ಟೆಜಟ್ಟಿಯನ್ನು ಎಳೆದು ಹಿಡಿದು, `ನನ್ನ ಬದಲಿಗೆ ಇವನು' ಎಂಬ ಸಾಂಕೇತಿಕವಾಗಿ ಸೂಚಿಸುವ ಪರಿಪಾಠವೂ ಇತ್ತು. ಲೋಬಾನದ ಹೊಗೆಯನ್ನು ಆಘ್ರಾಣಿಸುತ್ತಿರುವಂತೆ ಕೆಲವರು ಆವೇಶಕ್ಕೊಳಗಾಗಿ ಗರ್ಜಿಸುತ್ತಿದ್ದರು. ನಾನು ಬಾಗಿ ಲೋಬಾನದ ಹೊಗೆಯನ್ನು ಆಘ್ರಾಣಿಸುತ್ತಿರುವಾಗ ನನ್ನ `ಮೈಮೇಲೆ' ಬಂದಂತಾಗಿ, ಅತ್ತಿತ್ತ ಓಡಿ, ತೆಂಗಿನ ಮರ ಏರಲು ಹವಣಿಸಿದೆ. ನನ್ನನ್ನು ಜಟ್ಟಿಯಿಂದ ಎಳೆದು ಹಿಡಿದವರು ತಮ್ಮ ಶಕ್ತಿಯೆಲ್ಲವನ್ನು ಬಳಸಿ ನನ್ನನ್ನು ನಿಯಂತ್ರಿಸಿದರು.
ಹಾಗೆ, ಮೊಸರುಕುಡಿಕೆಯ ದಿನ ಮನೆಮನೆಗೆ ಹೊರಟಿತು ನಮ್ಮ ಹುಲಿವೇಷ ಸವಾರಿ! ನನ್ನದು ಹುಲಿಯ ವೇಷಕ್ಕೆ ಯಕ್ಷಗಾನದ ಹೆಜ್ಜೆಗಳು! ಹಾಗಾಗಿ, ನನ್ನ ಮರಿ ಹುಲಿ ಎಲ್ಲರ ಗಮನ ಸೆಳೆಯಿತು. ಕೆಲವರು ಬಾಗಿ ಕುರಿಗಳನ್ನೆತ್ತಿ ಎಸೆಯುತ್ತಿದ್ದರೆ, ಕೆಲವರು ಹಲ್ಲುಗಳಲ್ಲಿ ಅಕ್ಕಿಮುಡಿಯನ್ನು ಎತ್ತುವ ಸಾಹಸ ಪ್ರದರ್ಶಿಸುತ್ತಿದ್ದರು. ಇನ್ನು ಕೆಲವರು ಕರಿಮೆಣಸಿನ ಕಾಷಾಯದ ಪಾತ್ರೆಯೊಳಕ್ಕೆ ಮುಖ ಹುದುಗಿಸಿ ಅದರ ಆಳದಲ್ಲಿದ್ದ ನಾಣ್ಯವನ್ನು ಕಚ್ಚಿ ಎತ್ತಿತೋರಿಸಿ ಬಹುಮಾನ ಗಿಟ್ಟಿಸುತ್ತಿದ್ದರು. ನಾನು ಚಕ್ರಾಕಾರದಲ್ಲಿ ಹಿಂಬಾಗಿ ನೆಲದಲ್ಲಿರುವ ನಾಣ್ಯವನ್ನು ಕಚ್ಚಿ ತೆಗೆಯುವುದರಲ್ಲಿ ಪ್ರವೀಣನಾಗಿದ್ದೆ. ಮನೆ ಮನೆಗಳ ಅಂಗಳಗಳಲ್ಲಿ `ಹುಲಿ' ಕುಣಿಯುತ್ತ ಸಾಗಿದ ನಮ್ಮ ಸವಾರಿ ಬನ್ನಂಜೆಯ ಬಳಿಯಿದ್ದ ಗುಂಡಿಬೈಲು ನಾರಾಯಣ ಶೆಟ್ಟರ ಮನೆಯ ಬಳಿಗೆ ಬರುವಾಗ ನನ್ನ ಎದೆಯೊಳಗೆ ಚಳಿ ಕೂತಿತು. ಅಲ್ಲಿಯೇ ಸನಿಹದಲ್ಲಿದ್ದ ಗ್ಯಾರೇಜಿನೊಳಗೆ ಅವಿತು, ಸಂಗಡಿಗರಲ್ಲಿ `ನೀವು ಹೋಗಿ ಬನ್ನಿ' ಎಂದು ನಾನು ಹಿಂದುಳಿದೆ.
ಅಷ್ಟರಲ್ಲಿ ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರ ಕಿವಿಗೆ ನನ್ನ ಹುಲಿವೇಷದ ಕೀರ್ತಿ ತಲುಪಿತ್ತು. ಅವರು ಮನೆಯಂಗಳಕ್ಕೆ ಬಂದ ಹುಲಿವೇಷದವರಲ್ಲಿ, `ನಿಮ್ಮ ತಂಡದಲ್ಲಿ ಸಂಜೀವನೂ ಇದ್ದಾನಂತಲ್ಲ... ಎಲ್ಲಿದ್ದಾನೆ ಅವನು? ಭಾರಿ ಕುಣಿಯುತ್ತಾನಂತೆ...' ಎಂದು ನನ್ನನ್ನು ಕರೆತರುವಂತೆ ಸೂಚಿಸಿದರು. ನನಗೆ ಕರೆಬಂದದ್ದೇ ನಾನು ಬೆಕ್ಕಿನಂತೆ ಗ್ಯಾರೇಜಿನಿಂದ ಹೊರಬಂದು, ಗುರುಗಳ ಮನೆಯಂಗಳದತ್ತ ಕಳ್ಳ ಹೆಜ್ಜೆಗಳಲ್ಲಿ ನಡೆಯತೊಡಗಿದೆ.
(ಸಶೇಷ)
ನಿರೂಪಣೆ: ಹರಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.