1983ಯಲ್ಲಿ ನಾನು ಸೀನಿಯರ್ ಮೇಜರ್ ಆಗಿ ಬಡ್ತಿ ಹೊಂದಿದೆ. ಆಗ 14 ಸಿಖ್ ಲೈಟ್ ಇನ್‍ಫ್ರೆಂಟ್ರಿಗೆ ಲಡಾಖ್‌ನ ಲೇಹ್ ಕ್ಯಾಂಪ್‌ಗೆ ತೆರಳುವಂತೆ ಸೂಚಿಸಿದರು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ಕ್ಯಾಂಪ್‌ಗೆಬೆಟಾಲಿಯನ್ ಹೋಗುವ ಮೂರು ತಿಂಗಳು ಮುಂಚಿತವಾಗಿ ಒಂದು ಅಡ್ವಾನ್ಸ್ ಪಾರ್ಟಿಯನ್ನು ಅಲ್ಲಿಗೆ ಕಳುಹಿಸಿಕೊಡಲಾಗುತ್ತದೆ. ಆ ತಂಡವು ಅಲ್ಲಿನ ಸ್ಥಿತಿಗತಿಯನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ತಂಡದಲ್ಲಿ ಮೂವರು ಅಧಿಕಾರಿಗಳು, ಪ್ರಮುಖ ಸೈನಿಕರು ಸೇರಿದಂತೆ ಅಂದಾಜು 100 ಮಂದಿ ಇರುತ್ತಾರೆ. ಅಲ್ಲಿ ಅದಾಗಲೇ ಇರುವ ಬೆಟಾಲಿಯನ್ ಜೊತೆ ಬೆರೆತು, ಅಲ್ಲಿನ ಸವಾಲುಗಳನ್ನು, ಜವಾಬ್ದಾರಿಯನ್ನು ಮತ್ತು ಆ ಭೂ ಪ್ರದೇಶಕ್ಕೆ ಹೊಂದಿಕೊಂಡು ಬಾಳುವುದು ಹೇಗೆ ಎಂಬ ಜೀವನ ಶೈಲಿಯನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಿಖ್ ಇನ್‍ಫೆಂಟ್ರಿ ಲೇಹ್‌ಗೆ ಬರುವ ವೇಳೆಗೆ ಈ ತಂಡವು ಎಲ್ಲವನ್ನೂ ಅರ್ಥ ಮಾಡಿಕೊಂಡಿರಬೇಕು. ಈ ಅಡ್ವಾನ್ಸ್ಡ್ ತಂಡದ ಮುಖ್ಯಸ್ಥನಾಗಿ ನನ್ನನ್ನು ನೇಮಿಸಲಾಯಿತು.
ಲಡಾಖ್‌ಗೆ ಹೋಗಲು ಮೂರು ದಾರಿಗಳಿವೆ. ಮೊದಲನೆಯದು ಶ್ರೀನಗರದ ಮಾಗರ್ವಾಗಿ ಜೋಸಿಲಾ ಕಣಿವೆ ಮೂಲಕ, ಎರಡನೆಯದು ಚಂಡಿಗಢ ಮಾರ್ಗದ ಮೂಲಕ ಮನಾಲಿ, ಉಪ್ಷಿಯನ್ನು ದಾಟಿ ಲೇಹ್ ತಲುಪುವುದು. ಈ ದಾರಿ ಬಹಳ ಕಷ್ಟ. ಮೂರನೆಯದ್ದು ಚಂಡೀಗಢ ಏರ್‍ಬೇಸ್‍ನಿಂದ ಸೀದಾ ಲೇಹ್‍ಗೆ ವಿಮಾನದಲ್ಲಿ ಹೋಗುವುದು. ನಾವು ಚಂಡೀಗಢದಿಂದ ವಿಮಾನದಲ್ಲಿಯೇ ಹೋಗಲು ನಿರ್ಧರಿಸಿದೆವು. ನಮ್ಮ ಬಳಿ ಬಹಳಷ್ಟು ಯುದ್ಧ ಸಾಮಗ್ರಿಗಳೂ ಇದ್ದವು. ಸಮುದ್ರಮಟ್ಟದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಅಡಿಗಳ ಎತ್ತರದಲ್ಲಿರುವ ಲೇಹ್‌ಗೆ ನಮ್ಮನ್ನು ಕರೆದೊಯ್ದರು.
ಲೇಹ್ ಒಂದು ಅತೀ ಎತ್ತರದ ಮರುಭೂಮಿ. ಅಲ್ಲಿ ಬಣ್ಣಬಣ್ಣದ ಬೆಟ್ಟಗಳಿವೆ. ಈ ಜಾಗ ಪ್ರವಾಸಿಗರಿಗೆ ನೋಡಲು ಬಹಳ ಚಂದ. ಆದರೆ ಬದುಕು ಭಾರಿ ಕಷ್ಟ. ವರ್ಷದಲ್ಲಿ 3 ತಿಂಗಳ ಈ ಕಾಲ ಕಣಿವೆಯಲ್ಲಿ ನೀರು ಹರಿಯುತ್ತದೆ. ಆಗಷ್ಟೇ ಅಲ್ಲಿ ಹಸಿರು ಕಾಣಿಸುವುದು. ನಾವು ಅಲ್ಲಿ ಇಳಿದ ಕೂಡಲೇ ನಮ್ಮ ದೇಹ ಜೋಲಿ ಹೊಡೆಯುತ್ತಿತ್ತು. ಎತ್ತರದ ಹವಾಮಾನಕ್ಕೆ ಹೊಂದಿಕೊಳ್ಳುವುದು ಸುಲಭವಲ್ಲ. ನಾವೆಲ್ಲ ಲೇಹ್‍ನಲ್ಲಿದ್ದ ಟ್ರಾನ್ಸಿಸ್ಟ್ ಕ್ಯಾಂಪ್‍ನಲ್ಲಿ ವರದಿ ಮಾಡಿಕೊಂಡೆವು. ಅಲ್ಲಿ 10 ದಿನಗಳ ಕಾಲ ಹವಾಮಾನ ಹೊಂದಾಣಿಕೆಯ ಅಭ್ಯಾಸ ಮಾಡಿಕೊಳ್ಳಲು ಹೇಳಿದರು.
ಹೊಂದಾಣಿಕೆ ಸುಲಭದ ವಿಷಯವಲ್ಲ. ಅಗತ್ಯ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಹೆಚ್ಚು ದ್ರವಾಹಾರ ಸೇವಿಸುವುದು, ಸಮತಟ್ಟಾದ ಜಾಗದಲ್ಲಿ ನಡೆಯುವುದು, ಆರೋಗ್ಯ ತಪಾಸಣೆ ಮಾಡುವುದು ಹೀಗೆ 10 ದಿನಗಳ ಒಂದು ಕೋರ್ಸೇ ಇದೆ. ‘ಪ್ರಕೃತಿಯೊಡನೆ ಸೆಣಸಾಟ ಬೇಡ. ಪ್ರಕೃತಿಗೆ ಶರಣಾಗಿ ಬದುಕಬೇಕು’ ಎಂಬುದನ್ನು ಪದೇ ಪದೇ ನಮಗೆ ಹೇಳುತ್ತಾರೆ. ಸೂಪರ್ ಮ್ಯಾನ್ ರೀತಿ ಉಡಾಫೆಯಿಂದ ವರ್ತಿಸಿದಲ್ಲಿ ಆರೋಗ್ಯ ಕೈ ಕೊಡುತ್ತದೆ.
‘ಡೋಂಟ್ ಬಿ ಎ ಗಾಮಾ ವೆನ್ ಯು ಆರ್ ಇನ್ ದ ಲ್ಯಾಂಡ್ ಆಫ್ ಲಾಮಾ’ ಎಂದು ಆಗಾಗ ಹೇಳುತ್ತಿರುತ್ತಾರೆ. ಅಂದರೆ ಗಟ್ಟಿಮುಟ್ಟು ದೇಹ ಇದೆ ಎಂದು ಉಡಾಫೆಯಿಂದ ಇರುವುದು ಸರಿಯಲ್ಲ ಎಂಬ ಎಚ್ಚರಿಕೆ ಅದು. ಅಲ್ಲಿ ಒಬ್ಬರೇ ಎಲ್ಲಿಯು ಹೋಗುವಂತಿಲ್ಲ. ಬೆಟ್ಟದ ಕಾಡುನಾಯಿಗಳು ಏನನ್ನು ಬೇಕಾದರೂ ಬೇಟೆಯಾಡಿಬಿಡುತ್ತವೆ.
ಅಲ್ಲದೆ ಆ ಮೈನಸ್ ಉಷ್ಣಾಂಶದಲ್ಲಿ ಆರೋಗ್ಯ ವ್ಯತ್ಯಯವಾಗುತ್ತದೆ. ಸೆರೆಬ್ರಲ್ ಅಡಿಮಾ ಎಂದರೆ ಮೆದುಳಿಬಳ್ಳಿಯ ಬಳಿ ತೇವಾಂಶ ಶೇಖರಣೆ ಆದರೆ ನಮ್ಮ ಯೋಚನೆಯು ಕೈ ಕೊಡುತ್ತದೆ. ಒಂದು ಜಾಗಕ್ಕೆ ಹೋಗಬೇಕೆಂದು ಹೊರಟರೂ ಕಾಲುಗಳು ಬೇರೆಲ್ಲೋ ನಡೆದುಬಿಡುತ್ತವೆ. ಚಳಿ ಇದೆ ಎಂದು ಬಿಸಿಲಿಗೆ ಮೈಯೊಡ್ಡಿದರೆ ಇನ್‍ಫ್ರಾ ರೆಡ್ ಕಿರಣಗಳಿಂದಾಗಿ ಚರ್ಮ ಸುಟ್ಟುಬಿಡುತ್ತದೆ. ಬಿಸಿಲು ಸುಡುತ್ತಿದೆ ಎಂದು ನೆರಳಿನಲ್ಲಿದ್ದರೆ ಚಳಿಹೆಚ್ಚಾಗಿ ಕೈಗಳಲ್ಲಿ ಬೊಬ್ಬೆ ಬರುತ್ತದೆ. ಹಾಗೆಂದು ಬೆಂಕಿಯ ಮುಂದೆ ಕುಳಿಕೊಳ್ಳುವಂತಿಲ್ಲ. ಉಗುರುಬೆಚ್ಚಗಿನ ಉಪ್ಪುನೀರಿನಲ್ಲಿ ಕಾಲಿಡಬೇಕು.
ಇನ್ನು ಶ್ವಾಸಕೋಶದಲ್ಲಿ ನೀರು ಸೇರಿದರೆ ಅದನ್ನು ಪಲ್ಮನರಿ ಅಡಿಮಾ ಎನ್ನುತ್ತಾರೆ. ಅದು ಭಾರೀ ಅಪಾಯಕಾರಿ. ಸ್ನೋ ಬ್ಲೈಂಡ್‍ನೆಸ್ ಆಗುವ ಸಂಭವವೂ ಇದೆ. ಹಾಗಾಗಿ ಆರೋಗ್ಯದ ಕುರಿತು ಎಚ್ಚರವಹಿಸುತ್ತಲೇ ಇರಬೇಕು. ಪ್ರಕೃತಿಯೊಂದಿಗೆ ನಿಧಾನವಾಗಿ ಹೊಂದಾಣಿಕೆ ಮಾಡಿಕೊಂಡು ವಿರೋಧಿಗಳೊಡನೆ ಹೋರಾಡಲು ಸಜ್ಜಾಗಬೇಕು. ಎಲ್ಲವೂ ನಿಧಾನವಾಗಿ ಆಗಬೇಕು.
9ನೇ ದಿನ ನಮಗೆಲ್ಲ ಹತ್ತುವ ಚಟುವಟಿಕೆ ಆರಂಭ. 10ನೇ ದಿನ ಅಲ್ಲಿಂದ ಹೊರಡುವ ಮುನ್ನ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಬಿ.ಪಿ. ವ್ಯತ್ಯಾಸ ಇದ್ದವರು, ಆರೋಗ್ಯ ಹೊಂದಾಣಿಕೆ ಆಗದವರನ್ನು ಗಮನಿಸಿ ಈ ಸಂದರ್ಭದಲ್ಲಿಯೇ ವಾಪಸ್ ಕಳಿಸಲಾಗುವುದು. 11ನೇ ದಿನದಂದು ಇಡೀ ತಂಡವೇ ಹೊರಡಲು ಸಜ್ಜಾಗಿರುತ್ತದೆ. ಅಲ್ಲಿನ ಜೀವನ ಶೈಲಿಯೇ ವಿಭಿನ್ನ. ಕಾರು, ಜೀಪುಗಳ ರೇಡಿಯೇಟರ್‍ಗೆ ಆಂಟಿ ಫ್ರೀಸರ್ ಹಾಕಬೇಕು. ಇಲ್ಲವಾದರೆ ರೇಡಿಯೇಟರ್‌ಗೆ ಹಾಕಿದ ನೀರು ಮಂಜುಗಡ್ಡೆಯಾಗಿಬಿಡುವುದರಿಂದ ರೇಡಿಯೇಟರ್ ಬಿಸಿ ಜಾಸ್ತಿಯಾಗಿ ಎಂಜಿನ್ ಹೊತ್ತಿ ಉರಿಯುತ್ತದೆ. ಬೆಟ್ಟ ಏರುವ ಗಾಡಿಗಳ ಟೈರುಗಳಿಗೆ ನಾನ್‍ಗ್ರಿಪ್ ಚೈನ್‍ಗಳನ್ನು ಅಳವಡಿಸಬೇಕು. ಆಗ ಮಂಜುಗಟ್ಟೆಯ ಮೇಲೆ ಚಲಿಸುವುದು ಸಾಧ್ಯವಾಗುತ್ತದೆ.
ವಾಹನಗಳು ಚಲಿಸಬಹುದಾದ ಅತಿ ಎತ್ತರದ ಪ್ರದೇಶ ಎಂಬ ಹೆಗ್ಗೆಳಿಕೆ 17 ಸಾವಿರ ಎತ್ತರದಲ್ಲಿರುವ ಸಿಯಾಚಿನ್ ಬಳಿಯ ಕರ್ದುಂಗ್ ಲಾ ಪಾಸ್‌ನ ರಸ್ತೆಗಿದೆ. ನಾವು ಹೋಗಬೇಕಾದ್ದು ಎರಡನೇ ಅತೀ ಎತ್ತರದ ವಾಹನ ಚಲಾಯಿಸಬಹುದಾದ ಕಣಿವೆ. ಅದರ ಹೆಸರು ಚಾಂಗ್ ಲಾ. 16 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಕಣಿವೆ ಅದು. ಚಾಂಗ್ ಲಾ ಕಣಿವೆಯಲ್ಲಿ ಚಾಂಗ್ ಲಾ ಬಾಬಾ ಮಂದಿರವಿದೆ.
ಈ ಮಂದಿರದಲ್ಲಿ ನಮಸ್ಕರಿಸಿದಬಳಿಕ ಆ ಬೆಟ್ಟವನ್ನು ನಾವು ಇಳಿಯಲಾರಂಭಿಸಿ 14 ಸಾವಿರ ಅಡಿ ಎತ್ತರದ ಜಾಗದಲ್ಲಿ ನಮ್ಮ ರೆಜಿಮೆಂಟ್ ಜಾಗವನ್ನು ತಲುಪಿದೆವು. ಅದು 14 ಡೋಗ್ರಾ ರೆಜಿಮೆಂಟ್. ಅಲ್ಲಿ ಮತ್ತೆ ಹವಾಮಾನ ಹೊಂದಾಣಿಗೆ ಮಾಡಿಕೊಳ್ಳುವುದು ಅಗತ್ಯ.
ನಾವು ತಲುಪಿ 60 ದಿನಗಳ ನಂತರ ರಸ್ತೆ ಮಾರ್ಗವಾಗಿ ನಮ್ಮ ಪೂರ್ಣ ಬೆಟಾಲಿಯನ್ ಬಂತು. ನಾವೆಲ್ಲರೂ ಚು ಶುಲ್ ವ್ಯಾಲಿಗೆ ಬಂದೆವು.
ಚು ಶುಲ್ ಎಂಬ ಜಾಗದ ಬಗ್ಗೆ ಹೇಳಬೇಕು. ಇಲ್ಲಿ ಸಪಾಟಾದ ಭಾರತೀಯ ಏರ್‌ಫೀಲ್ಡ್ ಇತ್ತು. ಅಂದಿನ ಕಾಲದಲ್ಲಿಯೇ ಜಗತ್ತಿನ ಯಾವುದೇ ದೇಶದಿಂದ ವಿಮಾನಗಳು ಬಂದು ಇಳಿಯಬಹುದಾದಂತಹ, ಜಗತ್ತಿನ ಅತಿ ಎತ್ತರದ ಈ ಏರ್‌ಫೀಲ್ಡ್‌ನ್ನು ಸಿದ್ಧಪಡಿಸಲಾಗಿತ್ತು. ಆದರೆ 1962ರಲ್ಲಿ ಚೀನಾದವರು ಇದೇ ಚು ಶುಲ್ ನ ಇನ್ನೊಂದು ಭಾಗದಲ್ಲಿ ಬಂದು ನಿಂತುಬಿಟ್ಟರು. 15,500 ಅಡಿ ಎತ್ತರದ ಆ ಜಾಗದಲ್ಲಿ ಚೀನಾದ ಸೇನೆಯು ಆ ಕಡೆ ಬಂದು ನಿಂತ ನಂತರ ಭಾರತೀಯ ಸೇನೆ ಆ ಏರ್‍ಫೀಲ್ಡ್ ಅನ್ನು ಬಿಟ್ಟು ಬರುವುದು ಅನಿವಾರ್ಯವಾಯಿತು. ಈ ಏರ್‍ಫೀಲ್ಡ್‌ನಲ್ಲಿ ನಿಂತರೆ ಚೀನಾ ಗೇಟ್ ಚೆನ್ನಾಗಿ ಕಾಣಿಸುತ್ತಿತ್ತು.
1962ರಲ್ಲಿ ಈ ಏರ್‍ಫೀಲ್ಡ್ ಬಿಟ್ಟು ಬರುವಾಗ ಭಾರತೀಯ ಸೇನೆಯು ಅನೇಕ ಜೆರಿಕೇನ್‍ಗಳನ್ನು ಅಲ್ಲಿಯೇ ಬಿಟ್ಟು ಬಂದಿತ್ತು. ಭಾರೀ ಸಂಖ್ಯೆಯ ಈ ಜೆರಿಕೇನ್‍ಗಳು ಹೊಚ್ಚಹೊಸದರಂತೆ ಅಲ್ಲಿಯೇ ಇದ್ದವು. ಅಲ್ಲಿನ ಕಡಿಮೆ ಉಷ್ಣಾಂಶದಲ್ಲಿ ಅವು ತುಕ್ಕು ಹಿಡಿದಿರಲಿಲ್ಲ. ರೋಲ್ಸ್ ರಾಯ್ಸ್ ವಿಮಾನಗಳ ಎಂಜಿನ್‍ಗಳು ಕೂಡ ಇದ್ದವು. ಎಂಜಿನ್ ಆಯಿಲ್ ಕೂಡ ಫ್ರೆಶ್ ಆಗಿಯೇ ಉಳಿದಿತ್ತು. ಈ ಸಾವಿರಾರು ಜೆರಿಕೇನ್‍ಗಳನ್ನು ಸೀಲ್ ಮಾಡಿ ಗೋಡೆಯನ್ನಾಗಿ ಮಾಡಿಕೊಂಡು ನಾವು ಬಂಕರ್ ನಿರ್ಮಿಸಿದೆವು. ಕೇನ್‌ಗಳು ನಮ್ಮ ಬಂಕರ್‍ಗಳನ್ನು ಬೆಚ್ಚಗೆ ಇಡಲು ಸಹಕಾರಿಯೂ ಆಗಿದ್ದವು. ಇಷ್ಟೊಂದು ಬೃಹತ್ ಬಂಕರ್ ನಿರ್ಮಿಸಲು ಬೇಕಾದಷ್ಟು ಜೆರಿಕೇನ್‍ಗಳು ಸಿಕ್ಕವು ಎಂದರೆ ಎಷ್ಟು ಕೇನ್‍ಗಳು ಅಲ್ಲಿದ್ದವು ಎಂದು ನೀವೇ ಊಹಿಸಿ. ಬಂಕರ್‍ನ್ನು ಬೆಚ್ಚಗೆ ಇಡಲು ಸೀಮೆಎಣ್ಣೆ ಹನಿಹನಿಯಾಗಿ ಬೀಳಲು ವ್ಯವಸ್ಥೆ ಮಾಡಲಾಗಿತ್ತು. ಸೈನಿಕರನ್ನು ಬೆಚ್ಚಗೆ ಇಡಲು ಹೀಗೆ ಸೀಮೆಎಣ್ಣೆ ಬಳಸಿ ಬೆಂಕಿಯನ್ನು ಕಾಯ್ದುಕೊಳ್ಳುವುದು ಮುಖ್ಯ. ಇಂತಹ ಕಾರಣಗಳಿಗಾಗಿಯೇ ಸೇನೆಯ ಹೆಚ್ಚಿನ ಸಂಪನ್ಮೂಲ ಖರ್ಚುಮಾಡಬೇಕಾಗುತ್ತದೆ.
ಅಲ್ಲಿ ಸುಮಾರು ಝೀಬ್ರಾದಷ್ಟು ಎತ್ತರ ಇರುವ ಕಿಯಾಂಗ್ ಎಂಬ ಪ್ರಾಣಿಗಳಿದ್ದವು. ಅಲ್ಲಲ್ಲಿ ಇದ್ದ ಬಿಸಿನೀರಿನ ಬುಗ್ಗೆಯಲ್ಲಿ ಭಾರೀ ದುಬಾರಿಯ ಟ್ರೌಟ್ ಫಿಶ್‌ಗಳೂ ಇದ್ದವು. ಬ್ಲಾಕ್ ನೆಕ್ ಕ್ರೇನ್ ಹಕ್ಕಿಗಳ ಸಂತಾನೋತ್ಪತ್ತಿ ಜಾಗವೂ ಅದೇ ಆಗಿತ್ತು.
ಇವು ಅಳಿವಿನಂಚಿನಲ್ಲಿರುವ ಹಕ್ಕಿಗಳಾಗಿದ್ದವು. ಅವುಗಳು ಗಂಡು–ಹೆಣ್ಣು ಜೊತೆಯಾಗಿ ಬಾಳುವ ಹಕ್ಕಿಗಳು. ಹಾಗಾಗಿ ಒಂದು ಹಕ್ಕಿ ಸತ್ತರೆ ಮತ್ತೊಂದೂ ಸಾಯುವುದೇ. ಒಂದು ಬಾರಿಗೆ ಒಂದೇ ಮೊಟ್ಟೆ ಇಡುತ್ತಿತ್ತು. ಆ ಮೊಟ್ಟೆಗೆ ಆಗಿನ ಕಾಲದಲ್ಲಿಯೇ ₹ 1 ಲಕ್ಷ ಬೆಲೆ ಇದ್ದುದರಿಂದ ಮೊಟ್ಟೆ ಕದಿಯುವವರೂ ಇದ್ದರು. ಹಾಗಾಗಿ ಸೇನೆಯವರು ಈ ಹಕ್ಕಿಗಳ ರಕ್ಷಣೆಗೆ ಬದ್ಧರಾಗಿದ್ದರು. ಇದೇ ಪ್ರದೇಶದಲ್ಲಿ ಪೆಗಾಂಸೊ ಎಂಬ ಸರೋವರ ಇದೆ. ಸುಮಾರು 120 ಕಿ.ಮೀ. ಉದ್ದದ ಈ ಸರೋವರದ ಅಗಲ 2 ಕಿ.ಮೀ. ಈ ಸರೋವರದ ಮುಕ್ಕಾಲು ಭಾಗಈಗ ಚೀನಾದವರ ಬಳಿ ಇದೆ. ಬೇಸಿಗೆಯಲ್ಲಿ ಅದನ್ನು ಸುತ್ತುವರಿದು ಹೋಗಿ ಬರಲು 6 ದಿನಗಳು ಬೇಕು. ಅದನ್ನು ದಾಟುವುದು ಕಷ್ಟ. ಆದರೆ ಚಳಿಗಾಲದಲ್ಲಿ ಹಿಮ ಗಟ್ಟಿ ಇರುತ್ತಿದ್ದುದರಿಂದ ದಾಟುವುದು ಸಾಧ್ಯವಾಗಿತ್ತು. ನಮ್ಮ ಪ್ಯಾಟ್ರೋಲಿಂಗ್ ತಂಡವು ಮೊದಲು ಯಾಕ್ ಪ್ರಾಣಿಯನ್ನು ಕಳುಹಿಸಿ ಹಿಮ ಗಟ್ಟಿಯಾಗಿರುವ ಜಾಗವನ್ನು ಗುರುತುಮಾಡಿಕೊಂಡು, ಅದರ ಹಿಂದೆಯೇ ಸಾಗುತ್ತಿತ್ತು. ಎಲ್ಲ ಹಿಮ ಗಟ್ಟಿಯಾಗಿದೆ, ಎಲ್ಲಿ ಮಿದುವಾಗಿದೆ ಎಂಬುದನ್ನು ಗ್ರಹಿಸುವ ಶಕ್ತಿ ಈ ಯಾಕ್ ಪ್ರಾಣಿಗೆ ಇತ್ತು. ಯಾಕ್‌ನ ಮಾರ್ಗದರ್ಶನದಲ್ಲಿ ಕೆಲವೇ ಗಂಟೆಗಳಲ್ಲಿ ಈ ಸರೋವರ ದಾಟುವುದು ಸಾಧ್ಯವಾಗಿತ್ತು. ಈ ಸರೋವರ ಒಂದು ದಿನದಲ್ಲಿ ನೀಲಿ, ತಿಳಿಹಸಿರು, ಕಡು ಹಸಿರು ಹೀಗೆ ಬಣ್ಣ ಗಳನ್ನು ಬದಲಿಸುವ ಸುಂದರ ಸರೋವರವಾಗಿತ್ತು.
ಮುಂದಿನ ವಾರ: ರಝಾಂಗ್ ಲಾ ಪಾಸ್‌ನಲ್ಲಿ ಹೋರಾಡಿದ ವೀರರ ಅವಶೇಷಗಳು
ನಿರೂಪಣೆ: ಅರೆಹೊಳೆ ಸದಾಶಿವರಾವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.