ಸೇನಾನಿಯ ಬದುಕು ನಿವೃತ್ತಿಯ ಅಂಚಿಗೆ ಬರುತ್ತಿರುವ ಈ ಹೊತ್ತಿನಲ್ಲಿ ಹಂಚಿಕೊಳ್ಳಲೇ ಬೇಕಾಗುವ ಅತ್ಯಂತ ಪ್ರಮುಖ ಹಾಗೂ ಸೋಜಿಗದ ವಿಷಯ ಇಲ್ಲಿ ಹೇಳಲೇ ಬೇಕು. ಅದುವೇ ಸಿಕ್ಕಿಂ ವಾಟರ್ ಶೆಟ್ ನಲ್ಲಿ, ಪರ್ವತ ಶ್ರೇಣಿಯಲ್ಲಿರುವ ಪವಿತ್ರ ಮಂದಿರ- ಬಾಬಾ ಹರ್ಬಜನ್ ಸಿಂಗ್ ಮಂದಿರ!. ಹೆಸರೇ ಒಂದು ರೀತಿಯ ವಿಚಿತ್ರ ಅನಿಸಿದರೆ ಅಚ್ಚರಿ ಇಲ್ಲ.
ಪಂಜಾಬ್ ರೆಜಿಮೆಂಟ್ ನಲ್ಲಿ 1968ರಲ್ಲಿ ಬಾಬಾ ಹರ್ಭಜನ್ ಸಿಂಗ್ ಎಂಬೊಬ್ಬ ಸಿಪಾಯಿ ಇದ್ದರು. ಒಂದು ದಿನ ಅವರು ಒಂದು ಸೇನಾ ನೆಲೆಗೆ ಕೆಲ ಅಗತ್ಯ ವಸ್ತುಗಳನ್ನು ಸಾಗಿಸುವ ತಂಡದೊಂದಿಗೆ ಹೊರಟರು. ಕಡಿದಾದ ಪರ್ವತ ಪ್ರದೇಶದಲ್ಲಿ ಸಾಗುತ್ತಿರುವಾಗ ಹೇಗೋ ನಿಯಂತ್ರಣ ತಪ್ಪಿ ಆಳವಾದ ಪ್ರಪಾತಕ್ಕೆ ಬಿದ್ದು ಬಿಟ್ಟರು. ಹರ್ಭಜನ್ ಕಾಣೆಯಾಗಿದ್ದಾರೆ ಎಂದು ದಾಖಲಾಯ್ತು.
ಅಚ್ಚರಿ ಎಂದರೆ ಅದೇ ರಾತ್ರಿ ಅವರು ಮೇಲಾಧಿಕಾರಿಯೊಬ್ಬರ ಕನಸಿನಲ್ಲಿ ಕಾಣಿಸಿಕೊಂಡರು. ಕಾಣೆಯಾಗಿರುವ ತನ್ನ ಶವ ಇರುವ ಸ್ಥಳವನ್ನು ಅವರಿಗೆ ಕನಸಿನಲ್ಲಿ ಹೇಳಿದರಂತೆ. ತನ್ನನ್ನು ಅಲ್ಲಿಯೇ ಸಮಾಧಿ ಮಾಡಬೇಕೆಂಬ ವಿನಂತಿಯನ್ನೂ ಮಾಡಿದರು. ಅಚ್ಚರಿ ಎಂದರೆ ಕನಸಿನಲ್ಲಿ ಉಲ್ಲೇಖವಾದ ಸ್ಥಳದಲ್ಲಿಯೇ ಶವ ಸಿಕ್ಕಿತು ಮತ್ತು ಅದನ್ನಲ್ಲಿ ಸಮಾಧಿ ಮಾಡಲಾಯ್ತು!.
ಅಂದಿನಿಂದ ಅಲ್ಲಿ ಅನೇಕ ಪವಾಡಗಳು ಸಂಭವಿಸಲಾರಂಭಿಸಿದುವು. ಮತ್ತೆ ಆ ಸಮಾಧಿಯನ್ನು ಬ್ರಿಗೇಡ್ ಕೇಂದ್ರದ ಸಮೀಪದ ಮುಖ್ಯ ರಸ್ತೆಗೆ ಸ್ಥಳಾಂತರಿಸಲಾಯ್ತು. ಕ್ರಮೇಣ ಅಲ್ಲಿಗೆ ಸೈನಿಕರು ಹಾಗೂ ಪ್ರವಾಸಿಗರೂ ಬರಲಾರಂಭಿಸಿದರು. ಅನೇಕರು ಹೇಳುವ ರೀತಿಯ ವಿಧ ವಿಧದ ಪವಾಡಗಳೂ ಅಲ್ಲಿ ನಡೆಯುತ್ತಿದ್ದುವು. ಸಂದರ್ಶಿಸುವ ಪ್ರವಾಸಿಗರೂ ಹೆಚ್ಚಿದ ಹಿನ್ನೆಲೆಯಲ್ಲಿ ಅಲ್ಲಿಯೇ ಒಂದು ಅಡುಗೆ ಕೋಣೆಯನ್ನೂ ಸೈನ್ಯವೇ ಆರಂಭಿಸಿ, ಬಂದವರಿಗೆ ಊಟದ ವ್ಯವಸ್ಥೆಯನ್ನೂ ಆರಂಭಿಸಲಾಯ್ತು. ಪೂರ್ವ ಸಿಕ್ಕಿಂನಲ್ಲಿ ಜನರು ಮಂಗಳವಾರ ಮತ್ತು ಶುಕ್ರವಾರಗಳಂದು ಶುದ್ಧ ಶಾಖಾಹಾರಿ ಆಹಾರ ಸೇವಿಸುತ್ತಾರೆ ಮತ್ತು ಈ ಎರಡೂ ದಿನಗಳಲ್ಲಿ ಅವರಿಗೆ ಮದ್ಯಪಾನ ವರ್ಜ್ಯ. ಈ ಕಾರಣದಿಂದಲೇ ಇಲ್ಲಿಗೆ ಸಮೀಪದ ಎರಡು ಸೇನಾನೆಲೆಗಳೂ ಇದನ್ನು ಪಾಲಿಸುತ್ತವೆ.
ಬಾಬಾ ವಾಟರ್ ಶೆಡ್‍ನಲ್ಲಿ ಜನರ ರಕ್ಷಣೆ ಮಾಡುತ್ತಾರೆ ಎಂಬ ನಂಬಿಕೆ ಜನಜನಿತವಾಗಿತ್ತು. ಮತ್ತೂ ವಿಶೇಷ ಎಂದರೆ ಚೈನಾ ಸೈನಿಕರೂ ಈ ಪವಾಡವನ್ನು ಶ್ರದ್ಧೆಯಿಂದ ನಂಬುವಂತಾಯ್ತು. ಅವರೂ ಅಲ್ಲಿಗೆ ಭಕ್ತಿ ಭಾವದೊಂದಿಗೆ ಬರಲಾರಂಭಿಸಿದ್ದರು.
ನಂಬಿಕೆ ನೋಡಿ. ಸಿಪಾಯಿ ಆಗಿದ್ದ ಹರ್ಭಜನ್ ಸತ್ತ ಮೇಲೂ ಅವರು ಜೀವಂತವಾಗಿದ್ದಿದ್ದರೆ ಸಿಗಬೇಕಾಗಿದ್ದ ಎಲ್ಲಾ ಹುದ್ದೆಗಳನ್ನೂ ಅವರಿಗೆ ನೀಡಲಾಯ್ತು. ಸಿಪಾಯಿಯಿಂದ ಕ್ರಮೇಣ ಲ್ಯಾನ್ಸ್ ನಾಯಕ್, ನಂತರ ನಾಯಕ್, ತದನಂತರ ಹವಾಲ್ದಾರ್...ಹೀಗೆ ಎಲ್ಲಾ ಹಂತಗಳ ಪ್ರಮೋಶನ್‍ನ್ನು ಅವರು ಜೀವಿತದಲ್ಲಿದ್ದರೆ ಸಿಗಬಹುದಾದ ಕ್ರಮದಲ್ಲೇ ನೀಡುತ್ತಾ, ನಿವೃತ್ತಿಯ ವೇಳೆಗೆ ಪಡೆಯಬಹುದಾಗಿದ್ದ ಕ್ಯಾಪ್ಟನ್ ಹುದ್ದೆಯ ತನಕ ಪದೋನ್ನತಿ ನೀಡಿ ಗೌರವಿಸಲಾಯ್ತು. –ಇದು ಬಹುಶಃ ಪ್ರಪಂಚದ ಸೇನೆಯ ಇತಿಹಾಸದಲ್ಲೇ ಕಂಡೂ ಕೇಳರಿಯದ ಕೌತುಕದ ವಿಷಯ.
ಪಂಜಾಬ್ ಸಮೀಪದ ಕಪುರ್ತಲಾ ಎಂಬ ಹಳ್ಳಿಯಿಂದ ಬಂದವನಾಗಿದ್ದ ಹರ್ಭಜನ್ ಕುಟುಂಬಕ್ಕೆ, ಈ ಮಂದಿರದಲ್ಲಿ ಸಂಗ್ರಹವಾಗುತ್ತಿದ್ದ ಕಾಣಿಕೆ ರೂಪದ ಹಣದಲ್ಲಿ ಒಂದು ಭಾಗ ಮತ್ತು ಸೇನಾ ನಿಯಮಗಳ ಪ್ರಕಾರ ಸಿಗಬೇಕಾಗುವ ನಿವೃತ್ತಿ ವೇತನ ಹಾಗೂ ಇನ್ನಿತರ ಸೌಲಭ್ಯಗಳು ಕಾಲ ಕಾಲಕ್ಕೆ ತಲುಪುತ್ತಿದ್ದುವು. ಒಂದು ರೀತಿಯಲ್ಲಿ ಹರ್ಭಜನ್ ನಮ್ಮ ಭಾರತೀಯ ಸೇನೆಯಲ್ಲಿ ಚಿರಂಜೀವಿ ಎಂದೂ ಹೇಳಬಹುದು.
ಹೀಗೆ ಪ್ರಬಲ ನಂಬಿಕೆಯ ತಾಣವಾಗಿ, ಈಗ ಒಂದು ತೀರ್ಥ ಕ್ಷೇತ್ರವಾಗಿ ಈ ಕ್ಷೇತ್ರ ಪ್ರಸಿದ್ಧಿಯನ್ಜು ಪಡೆದಿದೆ. ಈ ದೇವಸ್ಥಾನದ ಮೇಲ್ವಿಚಾರಣೆಯನ್ನೂ ಇಬ್ಬರು ಸೈನಿಕರ ತಂಡ ನಿರಂತರವಾಗಿ ನೋಡಿಕೊಳ್ಳುತ್ತಿದೆ. ಸೇನಾ ನಿಯಮ ಮತ್ತು ಆರ್ಹತೆಗನುಸಾರವಾಗಿ ಬಾಬಾ ಹರ್ಭಜನ್ ರನ್ನು ವಾರ್ಷಿಕ ರಜೆಯ ಮೇಲೆ ಅವನ ಹುಟ್ಟೂರಿಗೆ ಕಳುಹಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಗರುದ್ವಾರದ ಧ್ವಜ ಇರುವ ಒಂದು ಸೇನೆಯ ಜಿಪ್ಸಿಯಲ್ಲಿ, ಹರ್ಭಜನ್ ಫೋಟೋ ಇಡಲಾಗುತ್ತದೆ. ಇಬ್ಬರು ಸೈನಿಕರ ಸುಪರ್ದಿಯಲ್ಲಿ ಈ ವಾಹನ ಅವನ ಹುಟ್ಟೂರಿಗೆ ಹೋಗುತ್ತದೆ. ಸಿಲಿಗುರಿಗೆ ಈ ವಾಹನ ಹೋಗುವ ಮಾರ್ಗದಲ್ಲಿ ಪ್ರತೀ ಹಳ್ಳಿಯಲ್ಲೂ ವಾಹನದಲ್ಲಿ ಹರ್ಭಜನ್ ಬರುವ ನಂಬಿಕೆಯೊಡನೆ ಪೂಜೆ ನೆರವೇರಿಸಲಾಗುತ್ತದೆ.
ಸಿಲುಗುರಿಯಿಂದ ಜಲಂಧರ್ ವರೆಗೆ ಹೋಗುವ ಈ ರೈಲಿನಿಂದ ಹರ್ಭಜನ್‍ಗೆ ಜಲಂಧರ್ ನಲ್ಲಿ ಸೈನ್ಯದ ಅಧಿಕಾರಿಗಳು ಮತ್ತೆ ಸ್ವಾಗತ ನೀಡುತ್ತಾರೆ. ಅಲ್ಲಿ ಮತ್ತೆ ರೈಲು ಬದಲಾವಣೆಯಾಗಿ ಕಪುರ್ತಲಾಕ್ಕೆ ಇವರನ್ನು ಕಳುಹಿಸಲಾಗುತ್ತದೆ.
ಕಪುರ್ತಲಾದಲ್ಲಿ ಇವರನ್ನು ಅವರ ಕುಟುಂಬದ ಸದಸ್ಯರು ಸ್ವಾಗತಿಸಿ, ಮನೆಗೆ ಕರೆದೊಯ್ಯುತ್ತಾರೆ. ಅಲ್ಲಿ ಒಂದು ತಿಂಗಳು ಪ್ರತೀ ದಿನ ವಿಶೇಷ ಪೂಜೆ ಮಾಡಲಾಗುತ್ತದೆ. ಮನೆಗೆ ಮಗ ಬಂದ ಸಂಭ್ರಮದ ವಾತಾವರಣ ನೆಲೆಸಿರುತ್ತದೆ. ಇದೇ ಸಂದರ್ಭದಲ್ಲಿ ಹರ್ಭಜನ್ ಕುಟುಂಬಕ್ಕೆ ಸಲ್ಲಬೇಕಾಗುವ ಹಣವನ್ನು ನೀಡಲಾಗುತ್ತದೆ. ಮತ್ತೆ ಒಂದು ತಿಂಗಳ ನಂತರ ಸಿಕ್ಕಿಂ ವಾಟರ್ ಶೆಡ್‍ನ ಶ್ರೇಣಿಯ ಮಂದಿರಕ್ಕೆ ಇದೇ ಕ್ರಮದಲ್ಲಿ ಹರ್ಭಜನ್‍ರನ್ನು ಕರೆತರಲಾಗುತ್ತದೆ!.
ಸುಮಾರು 13000ಅಡಿ ಎತ್ತರದ ಈ ಪ್ರದೇಶದಲ್ಲಿ ಪ್ರತೀ ಭಾನುವಾರ 300-400ಜನ ಮಧ್ಯಾಹ್ನದ ಪೂಜೆ ವೇಳೆಗೆ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ ಎಂದರೆ ಹರ್ಭಜನ್ ಮಹಾತ್ಮೆ ಅರ್ಥವಾದೀತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.