1961ರಲ್ಲಿಯೇ ಜಪಾನ್ ಗೆ ಹೋಗಿ. ವಿಶೇಷ ತರಬೇತಿ ಪಡೆದವರು ನನ್ನಪ್ಪ. ಇಂದಿಗೂ ದೇಶದ ಮೊದಲ ಫಿಶರೀಸ್ ಕಾಲೇಜ್ ಎಂಬ ಹೆಗ್ಗಳಿಕೆ ಇರುವ ಮಂಗಳೂರು ಫಿಶರೀಸ್ ಕಾಲೇಜನ್ನು ಸ್ಥಾಪಿಸಿದವರು ನಮ್ಮಪ್ಪ ಮತ್ತು ಅವರ ಸಂಗಡಿಗರು. ಆ ಕಾಲದಲ್ಲಿಯೇ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಬಿಎಸ್‍ಸಿ ಮುಗಿಸಿದ್ದರು. ನಾನೂ ಓದಿ 1978ರಲ್ಲಿ ಸಸ್ಯಶಾಸ್ತ್ರ, ಜೀವಶಾಸ್ತ್ರ ಮತ್ತು ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದೆ.
ಆದರ್ಶಗಳಿಂದಲೇ ಬದುಕುತ್ತಿದ್ದ ನನ್ನೊಳಗೆ ಒಂದು ಅದಮ್ಯ ದೇಶ ಪ್ರೀತಿಯ ಹುಟ್ಟು ಮತ್ತು ಬೆಳವಣಿಗೆಗೂ ಕಾರಣವಾಯ್ತು. 1965ರಲ್ಲಿ ಬಾರತ ಪಾಕಿಸ್ಥಾನ ಯುದ್ಧವಾಯಿತು. ಆಗ ದೇಶಕ್ಕೆ ಸೈನಿಕರನ್ನು ನೇಮಕ ಮಾಡುವುದಕ್ಕೆ ಪೂರ್ವಭಾವಿ ಎನ್ನುವಂತೆ ಮತ್ತು ಯುವ ಜನತೆಯಲ್ಲಿ ಈ ಜಾಗೃತಿಯನ್ನು ವಿದ್ಯಾರ್ಥಿ ದೆಸೆಯಲ್ಲೇ ಬೆಳೆಸುವ ನಿಟ್ಟಿನಲ್ಲಿ, ಪ್ರತೀ ಕಾಲೇಜಿನಲ್ಲೂ ಎನ್‍ಸಿಸಿ ಘಟಕ ತೆರೆಯಬೇಕೆಂಬ ಆಜ್ಞೆಯನ್ನು ಅಂದಿನ ಸರಕಾರ ವಿಧಿಸಿತು. ಇದು ನನ್ನಂತಹ ಅನೇಕರ ಪಾಲಿಗೆ ವರದಾನವೂ ಆಯ್ತು. ಹೀಗೆ ಎನ್‍ಸಿಸಿ ಸೇರಿದೆ. ಎನ್‍ಸಿಸಿ ಅಧಿಕಾರಿಗಳ ಕೆಳಗೆ, ಗ್ರೂಪ್ ಸೀನಿಯರ್ ಆಗಿ ನಾನು ತಂಡವನ್ನು ಮುನ್ನಡೆಸುವ, ಒಂದು ರೀತಿಯ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದೆ. ನನ್ನ ಒಂದೇ ಕೂಗಿಗೆ ಸಾವಿರಕ್ಕೂ ಮಿಕ್ಕಿ ಇರುತ್ತಿದ್ದ ಎನ್‍ಸಿಸಿ ಸದಸ್ಯರು(ಕೆಡೆಟ್)ಗಳು ಪಥ ಸಂಚಲನ, ಆಕ್ಷನ್ ಮಾಡುತ್ತಿದ್ದಾಗ, ಖುಷಿ ಆಗುತ್ತಿತ್ತು. ಎರಡು ಸಲ ಅತ್ಯತ್ತಮ ಕೆಡೆಟ್ ಎಂದು ಗುರುತಿಸಲ್ಪಟ್ಟ ನಾನು, ಸೈನಿಕರ ಕ್ಯಾಂಪ್‍ನ್ನು ಸಲ ಸಂದರ್ಶಿಸಿದ್ದೆ. ಇದೆಲ್ಲವೂ ಎನ್‍ಸಿಸಿ ಕೆಡೆಟ್ ಗಳ ಪಾಲಿಗೆ ಒಂದು ವಿಶೇಷ ಗೌರವ ಮತ್ತು ಸಾಧನೆಯಾಗಿ ದಾಖಲಾಗಿತ್ತು.
ಸೈನ್ಯ ಸೇರಿದ್ದು ಒಂದು ರೀತಿಯ ಅನಿರೀಕ್ಷಿತೆ ಬೆಳವಣಿಗೆ. ಅಮ್ಮ, ಅಪ್ಪ ಅಥವಾ ಮಾವಂದಿರು ಇದನ್ನು ಖಂಡಿತ ನಿರೀಕ್ಷಿಸಿರಲಿಲ್ಲವೇನೋ. ನನ್ನ ಪದವಿ ಮುಗಿಯುತ್ತಲೇ, ಎನ್‍ಸಿಸಿ ಮತ್ತು ದೇಶದ ಅಂದಿನ ವಿದ್ಯಮಾನಗಳು ಭಿನ್ನವಾದ ಕೆಲಸದ ಹುಡುಕಾಟಕ್ಕೆ ಪ್ರೇರೇಪಿಸಿತು.
ನಾನು ಏಕ ಕಾಲಕ್ಕೆ ಭಾರತದ ಅರಣ್ಯ ಸೇವೆ ಮತ್ತು ಭಾರತೀಯ ಸೈನ್ಯಕ್ಕೆರಡೂ ಅರ್ಜಿ ಹಾಕಿದೆ. ಅದರಂತೆ ಬೆಂಗಳೂರಿನ ವಿಧಾನ ಸೌಧದಲ್ಲಿ ಅರಣ್ಯ ಇಲಾಖೆಯ ಸಂದರ್ಶನಕ್ಕೆ ಕರೆ ಬಂದು ಪರೀಕ್ಷೆ ಬರೆದು ಮುಗಿಸಿ ಮನೆಗೆ ಮರಳುವಾಗ ಮತ್ತೊಂದು ಸಂದರ್ಶನ ಪತ್ರ ಬಂದಿತ್ತು. ತೆರೆದು ನೋಡಿದರೆ ಅದು ಭಾರತೀಯ ಸೈನ್ಯದ್ದಾಗಿತ್ತು. ಮತ್ತೆ ಮರಳಿ ಬೆಂಗಳೂರು ಬಸ್ ಹತ್ತಿದೆ.
ಬೆಂಗಳೂರಲ್ಲಿ ಸಂದರ್ಶನ ಕ್ಕೆ ಸೇರಿದ್ದ ಯುವ ಜನರನ್ನು ನೋಡಿಯೇ ನಾನೊಂದು ಕ್ಷಣಕ್ಕೆ ಬೆರಗಾಗಿದ್ದು ಸುಳ್ಳಲ್ಲ. ಆದರೆ ನನ್ನೊಳಗೆ ಮಹೋನ್ನತ ಕನಸಿತ್ತು. ದೇಶಸೇವೆ ಮಾಡಲು ಸಿಕ್ಕುವ ಅತ್ಯಂತ ಉನ್ನತ ಅವಕಾಶವಿದ್ದರೆ ಅದು ಸೈನ್ಯದಲ್ಲಿ ಎಂಬುದು ನನ್ನ ನಂಬಿಕೆ. ಸೈನ್ಯದ ಸಂದರ್ಶನದಲ್ಲಿ ನಮ್ಮ ಮಾನಸಿಕ ಸ್ಥಿತಿ, ದೈಹಿಕ ಆರ್ಹತೆ, ಕುಟುಂಬದ ಹಿನ್ನೆಲೆ, ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಚಾಣಾಕ್ಷತೆ...ಹೀಗೆ ಎಲ್ಲದರ ಪರೀಕ್ಷೆಯೂ ನಡೆಯುತ್ತದೆ. ಎಲ್ಲಿಯೂ ಅಧ್ಯಯನ ಮಾಡಿಬರಲು ಸಮಯ ಇರುವುದಿಲ್ಲ. ಹೆಚ್ಚಿನ ಪರೀಕ್ಷೆಗಳು ಆ ಕ್ಷಣದಲ್ಲಿಯೇ ಉತ್ತರ ಬಯಸುತ್ತವೆ. ಇದು ದೇಹ, ಬುದ್ಧಿ ಅಥವಾ ಸಮಯ...ಯಾವುದಕ್ಕೂ ಸಂಬಂಧಿಸಿದ್ದಾಗಿರಬಹುದು. ಹೀಗೆ ಮೊದಲ ದಿನದ ಪರೀಕ್ಷೆಯ ಕೊನೆಯಲ್ಲಿ 400ಅಭ್ಯರ್ಥಿಗಳಲ್ಲಿ ಸುಮಾರು 200ಜನ ಮಾತ್ರ ಉಳಿದುಕೊಂಡಿದ್ದರು. ಆ 200ರಲ್ಲಿ ನಾನೂ ಒಬ್ಬನಾಗಿದ್ದುದು, ನನ್ನೊಳಗೆ ಏನೋ ಹೊಸ ಭರವಸೆಯ ಹುಟ್ಟಿಗೆ ಕಾರಣವಾಗಿತ್ತು. ಐದು ದಿನಗಳ ಕಾಲ ನಡೆಯುವ ವಿವಿಧ ರೀತಿಯ ಸಂದರ್ಶನದ ಕೊನೆಯಲ್ಲಿ ಕೇವಲ ಇಬ್ಬರ ಆಯ್ಕೆಯಾಗಿತ್ತು. ಅದರಲ್ಲಿ ನಾನೂ ಒಬ್ಬ.
ಯುದ್ಧ ಗೆದ್ದ ಉತ್ಸಾಹದಲ್ಲಿ ಮನೆಗೆ ಬಂದವನೇ ವಿಷಯ ತಿಳಿಸಿದೆ. ತಳಮಳವಾದರೂ ಮನೆಯವರು ಬೆಂಬಲಿಸಿದರು. ಮಾವ ಚಿಕ್ಕಪ್ಪ ರೈ ಪ್ರೋತ್ಸಾಹಿಸಿದರು. . ಅಷ್ಟರಲ್ಲಿ ನನಗೆ ಭಾರತೀಯ ಅರಣ್ಯ ಇಲಾಖೆಯಿಂದಲೂ ಆಯ್ಕೆಯಾದ ಬಗ್ಗೆ ಪತ್ರ ಬಂತು. ಆದರೆ ನನ್ನ ಆಯ್ಕೆ ಸೈನ್ಯವೇ ಆಗಿತ್ತು.
ನನ್ನಮ್ಮ ಸುಮತಿ ರೈ ಆ ಕಾಲದಲ್ಲಿ ಒಂದು ರೀತಿಯ ಫೈರ್ ಬ್ರಾಂಡ್. ಸ್ವಾತಂತ್ರ್ಯ ಭಾರತದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಅಮ್ಮ ಅದರ ವಿರುದ್ಧ ಹೋರಾಡಿದ್ದರು. ಹೋರಾಟಗಾರರು ಭೂಗತರಾಗಿ ಕೆಲಸ ಮಾಡುತ್ತಿದ್ದಾಗ, ಅಮ್ಮ ಅಡುಗೆ ಮಾಡಿಕೊಟ್ಟು ನೆರವಾಗುತ್ತಿದ್ದರು. ಅಮ್ಮನ ಅಣ್ಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದರೆ ಅಮ್ಮ ಜನಸಂಘ ಬೆಂಬಲಿಸಿ ತುರ್ತುಪರಿಸ್ಥಿತಿಯ ವಿರುದ್ಧ ಸಿಡಿದೆದ್ದರು. ಅವರವರ ಅಭಿಪ್ರಾಯಕ್ಕೆ ತಕ್ಕಂತೆ ಬಾಳುವ ಸ್ವಾತಂತ್ರ್ಯ ನಮ್ಮ ಮನೆಯಲ್ಲಿತ್ತು. ಆ ಮುಕ್ತತೆಯೂ ವ್ಯಕ್ತಿ ಗೌರವದ ಸಂಕೇತವೇ.
ಅಂತೂ ಭಾರತೀಯ ಸೈನ್ಯದ ತರಬೇತಿಗೆ ಆಯ್ಕೆಯಾದ ನಾನು ಚೆನ್ನೈಗೆ ಹತ್ತು ತಿಂಗಳ ತರಬೇತಿಗೆ ಹೋದೆ. ಅದು 1969-70ರ ಕಾಲ. ತರಬೇತಿ ಮುಗಿದ ನಂತರ, ಮಾರ್ಚ್ 1970ರಲ್ಲಿ ಭಾರತೀಯ ಸೈನ್ಯದ ಸಿಕ್ ಲೈಟ್ ಇನ್‍ಫ್ಯಾಂಟರಿ ರೆಜಿಮೆಂಟ್‍ಗೆ ದ್ವಿತೀಯ ಲೆಫ್ಟಿನೆಂಟ್ ಆಗಿ ನೇಮಕಗೊಂಡೆ. ಹೀಗೆ ಆರಂಭವಾಯ್ತು ನನ್ನ ಸೈನ್ಯದ ಜೀವನ.
ಮುಂದಿನ ವಾರ : ನನ್ನೊಳಗಿನ ಸೈನಿಕ ಸದಾ ಜಾಗೃತ
(ನಿರೂಪಣೆ: ಅರೆಹೊಳೆ ಸದಾಶಿವ ರಾವ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.