ADVERTISEMENT

ನನ್ನೊಳಗಿನ ಸೈನಿಕ ಸದಾ ಜಾಗೃತ

ಸೇನಾನಿಯ ಸ್ವಗತ

ಬ್ರಿಗೇಡಿಯರ್ ಐ.ಎನ್.ರೈ
Published 28 ಆಗಸ್ಟ್ 2018, 19:28 IST
Last Updated 28 ಆಗಸ್ಟ್ 2018, 19:28 IST
ಬ್ರಿಗೇಡಿಯರ್‌ ಐ. ಎನ್‌. ರೈ
ಬ್ರಿಗೇಡಿಯರ್‌ ಐ. ಎನ್‌. ರೈ   

ಸೈನಿಕ ತರಬೇತಿ ಎನ್ನುವುದೇ ಒಂದು ವಿಶೇಷಾನುಭವದ ಸಂಕಲನ. ಐದು ದಿನಗಳ ಕಾಲ ಅಲ್ಲಿ ನಮ್ಮನ್ನು ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಲಾಗುತ್ತದೆ. ಇಲ್ಲೇನಿದ್ದರೂ ನಾವು, ನಮ್ಮ ಸಾಮರ್ಥ್ಯವೇ ಮಾನದಂಡ. ಶಿಫಾರಸ್ಸು ಮಾಡಲು ಯತ್ನಿಸಿದರೇ ಆತ ಹೊರಕ್ಕೇ!. ಗುಂಪಿನಲ್ಲಿ ಮಾತುಕತೆಗಳು, ಒಂದೊಂದು ತಂಡವಾಗಿ ವಿವಿಧ ರೀತಿಯ ದೈಹಿಕ, ಮಾನಸಿಕ ಹಾಗೂ ವೈದ್ಯಕೀಯ ಪರೀಕ್ಷೆಗಳು, ಹೀಗೆ ಎಲ್ಲವೂ ನಡೆಯುವ ಈ ತರಬೇತಿ ನಡೆಯುವ ಕ್ಯಾಂಪ್ ಒಂದು ಹೊಸ ಜಗತ್ತು-ಹೊಸ ವಾತಾವರಣ. ಈ ತರಬೇತಿ ಒಬ್ಬ ಸೈನಿಕನ ಅತ್ಯಂತ ಮಹತ್ವದ ಮೈಲಿಗಲ್ಲು. ಪ್ರತೀ ಸೈನಿಕನಿಗೂ ಬೇರೆಯವರ ಜೀವನದ ಜವಾಬ್ದಾರಿಯೂ ಇರುತ್ತದೆ.

1934ರಲ್ಲಿ ಫೀಲ್ಡ್ ಮಾರ್ಷಲ್ ಸರ್ ಫಿಲಿಪ್ ಚೆಟುವುಡಾ ಭಾರತೀಯ ಸೇನೆಯ ಕಮಾಂಡರ್ ಆಗಿದ್ದರು. ಅವರು ಆಗಲೇ ಸೈನ್ಯಕ್ಕೆ ಒಂದು ಗಟ್ಟಿಯಾದ ನೀತಿಸಂಹಿತೆಯನ್ನು ರಚಿಸಿದ್ದರು. ಅದರಂತೆ ದೇಶದ ರಕ್ಷಣೆಗೆ ಮೊದಲ ಆದ್ಯತೆ. ನಂತರ ನಿಮ್ಮ ಕೆಳಗಿನ ಸೈನಿಕರ ಜೀವ ಆದರೆ ನಿಮ್ಮ ರಕ್ಷಣೆಯ ಆದ್ಯತೆ ಕೊನೆಯಲ್ಲಿ ಬರುತ್ತದೆ. ಇದನ್ನೇ ಸೈನ್ಯದಲ್ಲಿ ಮೊದಲ ಪಾಠವಾಗಿ ಹೇಳಲಾಗುತ್ತದೆ ಮತ್ತು ನಾವದಕ್ಕೆ ಪ್ರತಿಜ್ಞಬದ್ಧರೂ ಆಗಿರುತ್ತೇವೆ.

ಚೆಟುವುಡಾ ಅವರ ನಂತರ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ನಮ್ಮ ಭಾರತೀಯರೇ ಪ್ರಮುಖ ‌ಹುದ್ದೆಗಳಲ್ಲಿ ಇರಬೇಕೆಂಬ ವಾದವನ್ನು ಅಂದಿನ ಹೋರಾಟಗಾರರು ಪ್ರತಿಪಾದಿಸಿದರು. ಮೊದಲ ಹಂತದ ತರಬೇತಿ ಆಗಿ ಹೊರಬಂದ ಸೈನಿಕರನ್ನು ಉದ್ದೇಶಿಸಿ ಮಾತಾಡಿದ ಚೆಟುವುಡಾ, ಈ ನೀತಿ ಸಂಹಿತೆಯನ್ನು ಪ್ರತಿಪಾದಿಸಿದರು. ಇದೇ ಇಂದಿಗೂ ನಮ್ಮ ಸಂಹಿತೆಯಾಗಿದೆ-ಅದನ್ನನುಸರಿಸುತ್ತೇವೆ.

ADVERTISEMENT

ಮುಂದೆ ಜಾನ್ ಎಫ್ ಕೆನಡಿ 1960ರ ನಂತರ ಇದೇ ನೀತಿ ಸಂಹಿತೆಯನ್ನುಪ್ರತಿಪಾದಿಸಿದರಾದರು. ಅವರ ಮನಸ್ಸಿನಲ್ಲಿ ಭಾರತದ ಸೇನೆ ಮಾದರಿ ಆಗಿದ್ದಿರಬಹುದ. ಅವರು ಈ ನೀತಿಯನ್ನು ಅಳವಡಿಸಿಕೊಳ್ಳವು ವೇಳೆಯಲ್ಲಿ ನಮ್ಮ ಸೇನೆಯ ಇದೇ ನಿಯಮ ಅನುಸರಿಸುತ್ತಿತ್ತು. ಭಾರತದ ಘನತೆ ಅಂತಹುದು.

ಸೈನಿಕನಾಗಿ ನನ್ನ ತರಬೇತಿ ಆರಂಭವಾಯಿತು. ಮೇಲಿನೆಲ್ಲಾ ವಿಚಾರಧಾರೆಗಳ ಭದ್ರ ತಳಹದಿಯಲ್ಲಿ ನಮ್ಮೊಳಗೆ ನಾಯಕತ್ವವನ್ನು ಬೆಳೆಸುವ ತರಬೇತಿ, ಒಂದು ರೀತಿಯಲ್ಲಿ ಏನೂ ಅಲ್ಲದ ನಮ್ಮನ್ನು ಒಂದು ರೂಪ ಕೊಡುವ ಶಿಕ್ಷಣವೇ ಎನ್ನಬಹುದು. ಮೊದಲು ಸೈನ್ಯ ತರಬೇತಿಗೆ ಸೇರುವ ಪ್ರತಿಯೊಬ್ಬನಿಗೂ ಒಂದೊಂದು ಸಂಖ್ಯೆಯನ್ನು ನೀಡಲಾಗುತ್ತದೆ. ಅದರಂತೆ ನನಗೆ ಸಿಕ್ಕಿದ ಸಂಖ್ಯೆ 6845. ಮುಂದೆ ನಂಜಪ್ಪ ರೈ ಎಂಬ ನಾನು ಕೇವಲ 6845 ಎಂಬ ಸಂಖ್ಯೆಯಿಂದಲೇ ಕರೆಸಿಕೊಳ್ಳಬೇಕಾಗುತ್ತದೆ. ಈ ನಂಬರ್ ಮೂಲಕವೇ ನಮ್ಮನ್ನು ಗುರುತಿಸಲಾಗುತ್ತದೆ. ಇದರೊಂದಿಗೆ ತರಬೇತಿ ನೀಡುವ ಒಂದೊಂದು ವಿಭಾಗವನ್ನೂ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಯುದ್ಧಗಳ ಹೆಸರಿನಿಂದ ಕರೆಯಲಾಗುತ್ತದೆ. ಉದಾಹರಣೆಗೆ ಕೊಹಿಮಾ, ನೌಶೇರಾ, ಮೇಯಿಕ್ತಿಲಾ, ರೆಝಾಂಗ್ಲಾ ಪಿಲ್ಲೋರಾ.....ಹೀಗೆ.... ತರಬೇತಿಯಲ್ಲಿರುವ ಪ್ರತೀ ತಂಡಕ್ಕೂ ಒಬ್ಬರು ಮೇಜರ್(ಕಮಾಂಡರ್)ಇದ್ದರೆ ತಲಾ 30ಜನರಿರುವ ಎರಡು ಪ್ಲಟೂನ್‍ಗಳಿರುತ್ತವೆ. ಇದರಲ್ಲೂ ಒಂದು ಪ್ಲಟೂನ್ ಅರ್ಧದಷ್ಟು ತರಬೇತಿ ಮುಗಿಸಿದ್ದರೆ, ಮತ್ತೊಂದು ಆಗಷ್ಟೇ ಅವರನ್ನು ಸೇರಿಕೊಳ್ಳುವ ಪ್ಲಟೂನ್ ಇರುತ್ತದೆ. ಪ್ರತೀ ಪ್ಲಟೂನ್‍ಗೂ ಓರ್ವ ವಿಶೇಷವಾಗಿ ಆಯ್ಕೆ ಗೊಂಡ ಯುವ ಕ್ಯಾಪ್ಟನ್ ಇರುತ್ತಾನೆ. ಎಲ್ಲರೂ ಕಮಾಂಡರ್ ಕೆಳಗೆ ಕೆಲಸ ಮಾಡುತ್ತಿರುತ್ತಾರೆ.

ತರಬೇತಿಯ ವಿಧಾನಗಳೂ ಅತ್ಯಂತ ಕ್ಲಿಷ್ಟಕರವೇ ಆಗಿರುತ್ತವೆ. ಇದು ಮುಖ್ಯವಾಗಿ ಯುದ್ಧ ನೀತಿಯನ್ನೊಳಗೋಂಡಿರುತ್ತದೆ.ದೈಹಿಕ ಚಲನೆ, ಶಸ್ತ್ರಾಸ್ತ್ರ ಸಹಿತ-ರಹಿತ ಯುದ್ಧ, ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳ ಬಳಕೆ, ಶೂಟಿಂಗ್, ಎಲ್ಲವನ್ನೂ ಒಳಗೊಂಡ ಸಮಗ್ರ ರಣನೀತಿ, ಇದರೊಂದಿಗೆ ಸೈನ್ಯಾಡಳಿತ, ಸೈನ್ಯದ ಇತಿಹಾಸ, ಇತಿಹಾಸದ ಯುದ್ಧಗಳು, ಅದರ ಮೂಲಕ ಕಲಿಯಬೇಕಾದ ಪಾಠಗಳು, ವಿಜ್ಞಾನ-ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ, ಎಲ್ಲಾ ಆಟೋಟಗಳು, ಅದರಲ್ಲಿ ನಮ್ಮ ಪರಿಣತಿ, ಮಾತಾಡುವುದು, ದೈಹಿಕ ಚಲನೆ, ಊಟದ ಹಾಲ್ ನಲ್ಲಿ ಇರಬೇಕಾಗುವ ರೀತಿ, ಟೇಬಲ್ ಮ್ಯಾನರ್ಸ್, ಉಡುಗೆ ತೊಡುಗೆ, ಮಹಿಳೆಯರನ್ನು ಗೌರವಿಸುವುದು...ಹೀಗೆ ಎಲ್ಲಾ ರೀತಿಯ ತರಬೇತಿಗಳೂ ನಡೆಯುತ್ತಿರುತ್ತವೆ.

ಈ ಮೂಲಕ ಒಂದು ರೀತಿಯ ಶಿಲ್ಪದಂತೆ ನಮ್ಮನ್ನು ತಯಾರಿಸುವ ಪ್ರಕ್ರಿಯೆ ಸೈನಿಕ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುತ್ತದೆ. ಪ್ರತೀ ಹಂತದಲ್ಲೂ ಪರೀಕ್ಷೆಗಳಿರುತ್ತವೆ. ಯಾವುದೇ ಹಂತದಲ್ಲಿ ಯಾರಲ್ಲಾದರೂ ಯಾವುದೇ ದೌರ್ಬಲ್ಯತೆ ಕಂಡು ಬಂದರೆ ಅವರಿಗೆ ಮತ್ತೆ ವಿಶೇಷ ತರಬೇತಿ ಇರುತ್ತಚೆ. ಮತ್ತೂ ಅವರು ಸುಧಾರಣೆ ಆಗದ ಸ್ಥಿತಿಯಲ್ಲಿದ್ದರೆ, ಅಂತವರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಅಥವಾ ಸೈನ್ಯದಲ್ಲಿ ಮುಂದುವರಿಕೆಗೆ ನಿರಾಕರಣೆಯೂ ಆಗುತ್ತದೆ. ಹೀಗೆ ತರಬೇತಿ ಮುಂದುವರಿದಂತೆ ಅದು ಕ್ಷಣ ಕ್ಷಣಕ್ಕೂ ಮತ್ತೆ ಮತ್ತೆ ಕಠಿಣವಾಗುತ್ತಾ ಸಾಗುತ್ತದೆ.

ಸೈನಿಕನಾದವನು ಓರ್ವ ಉತ್ತಮ ಕ್ರೀಡಾ ಪಟುವೂ ಆಗಿರಬೇಕಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಒಂದು ತುಕಡಿಯನ್ನು ಮುನ್ನಡೆಸುವಾಗ, ನಾಯಕನಾದವನನ್ನು ಸೈನಿಕರು ಗಮನಿಸುತ್ತಿರುತ್ತಾರೆ. ನಾಯಕನಾದವನೇ ವಿಫಲನಾದರೆ ಅವರನ್ನು ಮತ್ತೆ ನಿಯಂತ್ರಿಸುವುದೂ ಕಠಿಣವೇ.

ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳ ಉಪಯೋಗಿಸುವಿಕೆ, ಹೊಗೆಯಲ್ಲಿ, ತಂತಿಯ ಮೇಲಿನಿಂದ ಇಳಿಯುವುದು, ತೆವಳಿಕೊಂಡು ಯುದ್ಧ ಮಾಡುವುದು, ಸುರಂಗದೊಳಗೆ ಯುದ್ಧ, ಕಣಿವೆಗಳ ಮೇಲಿನಿಂದ ಹಾರುವುದು ಇಂತಹ ಕಠಿಣತಮ ತರಬೇತಿಯನ್ನು ನೀಡಲಾಗುತ್ತದೆ.

ಇದೆಲ್ಲದರ ಪ್ರತಿಫಲವೆಂಬಂತೆ ಪ್ರಾಮಾಣಿಕತೆ, ದೇಶ ನಿಷ್ಠೆ, ಮಹಿಳೆಯರೆಡೆಗಿನ ಗೌರವ, ಸುಸಂಸ್ಕಾರ...ಹೀಗೆ ಎಲ್ಲಾ ರೀತಿಯ ಪ್ರಬುದ್ಧತೆಗಳು ಮನೆ ಮಾಡುತ್ತವೆ.ತರಬೇತಿಯನ್ನು ಮುಗಿಸುವ ಹೊತ್ತಿಗೆ ಇಚ್ಲಂಪಾಡಿಯ ನಂಜಪ್ಪ ಯುದ್ಧಕ್ಕೆ ಸನ್ನದ್ಧನಾಗಿದ್ದ ಓರ್ವ ಸಮರ್ಥ ಸೈನಿಕನಾಗಿ ಬದಲಾಗಿದ್ದು.

ಇಂತಹ ಸಂದರ್ಭಗಳಲ್ಲಿ ನಮ್ಮ ಕಮಾಡರ್ ಗಳು ಘರ್ಜಿಸುತ್ತಿದ್ದ ಈ ಸಾಲುಗಳು ಈಗಲೂ ನನ್ನ ಕಿವಿಯಲ್ಲಿ ಮೊಳಗುತ್ತವೆ, “ ಜಿಸಿ, ಢರ್ನಾ ನಹೀ, ತುಮ್ ತಬ್ ತಕ್ ನಹೀ ಹಾರೇಗಾ, ಜಬ್ ತಕ್ ಪಾಕಿಸ್ಥಾನ್ ಕಾ ಫ್ಯಾಕ್ಟರಿ ಮೆ ಬನಾಯ ಗೋಲಿ ಮೆ ತೇರಾ ನಾಮ ನಹಿ ಲಿಖಾ ಹೋಗಾ”. ಓಹ್, ಈ ಸಾಲುಗಳು ಇಂದಿಗೂ ರೋಮಾಂಚನಕ್ಕೆ ಕಾರಣವಾಗುತ್ತವೆ. ಇದನ್ನೇ ಅಲ್ಲವೇ, ಇಡೀ ಗೀತೋಪದೇಶದಲ್ಲಿ ಶ್ರೀ ಕೃಷ್ಣ ಹೇಳಿದ್ದು ಎಂದು ಈಗ ನೆನಪಿಸಿಕೊಳ್ಳುತ್ತೇನೆ. ನೆನಪುಗಳೇ ಈಗ ನನ್ನ ಅಮೂಲ್ಯ ಆಸ್ತಿ.ಹೀಗೆ ಈ ತರದ ಎಲ್ಲಾ ಶಿಕ್ಷಣದ ನೆನಪುಗಳು ಈಗಲೂ ಇಂದು ನಿನ್ನೆ ನಡೆದ ಹಾಗಿದೆ. ನೆನೆದಾಗೆಲ್ಲಾ ನನ್ನೊಳಗೆ ಈಗಲೂ ಮತ್ತೆ ತರಬೇತಿಗೆ, ರಣ ರಂಗಕ್ಕೆ ಹೋಗಬೇಕೆಂಬ ಉತ್ಸಾಹ. ಸೈನಿಕನಾಗಿ ನಿವೃತ್ತನಾಗಿದ್ದರೂ, ನನ್ನೊಳಗಿನ ಸೈನಿಕ ಸದಾ ಜಾಗೃತನಾಗಿಯೇ ಇರುತ್ತಾನೆ-ಇದ್ದಾನೆ. ಇದು ಇಂತಹ ತರಬೇತಿಯ ಫಲ ವೆಂಬುದು ನನ್ನ ಅನಿಸಿಕೆ.
****

ಮುಂದಿನ ವಾರ :ಯುದ್ಧಕ್ಕೆ ಎದೆಯೊಡ್ಡುವ ಮೊದಲಿಗ ನಾನೇ ಆಗಬೇಕು

ನಿರೂಪಣೆ: ಅರೆಹೊಳೆ ಸದಾಶಿವ ರಾವ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.