ADVERTISEMENT

ಮನೆ ಕಟ್ಟುವ ಮೊದಲು ಅವಳ ಮಾತು ಕೇಳಿ

ಅಭಿಲಾಷ ಬಿ.ಸಿ.
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST

ಹಿಂದೆಲ್ಲಾ ಮನೆಕಟ್ಟುವಾಗ ಪುರುಷರ ಮಾತು, ತೀರ್ಮಾನಗಳೇ ಅಂತಿಮವಾಗಿದ್ದವು. ಮಹಿಳೆಯರಿಗೆ ಮನೆಯ ಯೋಜನೆ ರೂಪಿಸುವಲ್ಲಿ ಅವಕಾಶಗಳಿರಲಿಲ್ಲ. ಮಹಿಳೆಯರ ಹೆಸರು ಮನೆ ಎದುರಿನ ನಾಮಫಲಕಕ್ಕೆ ಸೀಮಿತವಾಗಿತ್ತು. ಉಳಿದಂತೆ ಮನೆಯ ನೋಂದಣಿಯಿಂದ ಯೋಜನೆವರೆಗೆ ಎಲ್ಲ ತೀರ್ಮಾನಗಳಲ್ಲೂ ಪುರುಷರದ್ದೇ ಕಾರುಬಾರು.

ಆದರೆ ಈಗ ಈ ಪ್ರವೃತ್ತಿಯಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಮನೆಕಟ್ಟುವ ಪ್ರಕ್ರಿಯೆಯಲ್ಲಿ ಮನದನ್ನೆಯ ಮಾತೂ ಮುನ್ನೆಲೆಗೆ ಬರುತ್ತಿದೆ. ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕಾರರು ಮಹಿಳೆಯರ ಮಾತುಗಳಿಗೆ ಕಿವಿಗೊಡುತ್ತಿದ್ದಾರೆ. ಅವರ ಅಭಿಪ್ರಾಯಗಳ ಆಧರಿಸಿಯೇ ಮನೆಯನ್ನು ವಿನ್ಯಾಸ ಮಾಡುತ್ತಿದ್ದಾರೆ.

ಮನೆಯಲ್ಲಿ ಪುರುಷರಿಗೆ ಹೋಲಿಸಿದರೆ, ಮಹಿಳೆಯರೇ ಹೆಚ್ಚು ಸಮಯ ಇರುವುದರಿಂದಾಗಿ ಅವರ ಬೇಡಿಕೆಗಳಿಗೆ ತಕ್ಕಂತೆ ಮನೆಯನ್ನು ವಿನ್ಯಾಸ ಮಾಡಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಡುಗೆಮನೆ ಹಾಗೂ ಸ್ಟೋರ್‌ ರೂಂಗಳ ವಿನ್ಯಾಸದಲ್ಲಿ ಮಹಿಳೆಯರ ಅಭಿಪ್ರಾಯಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಮನೆ ಎನ್ನುವುದು ಭಾವನಾತ್ಮಕ ಬೆಸುಗೆಯೂ ಹೌದು. ಕೇವಲ ಪುರುಷರ ನಿರ್ಧಾರಗಳಿಗೆ ಕಟ್ಟುಬಿದ್ದು ಮನೆಕಟ್ಟುವುದು ಅಸಾಧ್ಯ ಎನ್ನುವುದು ಬಹುತೇಕರ ಅಂಬೋಣ.

ADVERTISEMENT

‘ನಿತ್ಯ ಕೆಲಸಕ್ಕೆ ತೆರಳುವ ಮಹಿಳೆಯರು ಬೆಳಿಗ್ಗೆ ಬೇಗ ಅಡುಗೆ ಸೇರಿದಂತೆ ವಿವಿಧ ಕೆಲಸಗಳನ್ನು ಪೂರೈಸಲು ಅನುವಾಗುವಂತೆ ಅಡುಗೆಮನೆಯ ವಿನ್ಯಾಸವನ್ನು ಬಯಸುತ್ತಾರೆ. ಅಡುಗೆಮನೆಯ ಡಿಶ್‌ವಾಶ್‌ಗಳು ಎಲ್ಲಿರಬೇಕು, ಪಾತ್ರೆ ಸ್ಟ್ಯಾಂಡ್‌ ಎಲ್ಲಿರಬೇಕು ಎಂಬ ಸಣ್ಣ ವಿಷಯಗಳಿಂದ ಹಿಡಿದು ಎಷ್ಟು ಹಣಕ್ಕೆ ಮನೆಯನ್ನು ಪೂರ್ಣಗೊಳಿಸಬೇಕು ಎಂಬ ವಿಷಯದವರೆಗೂ ಪ್ರತಿ ಹಂತದಲ್ಲಿಯೂ ಮಹಿಳೆ ಪಾತ್ರ ಗಮನಾರ್ಹವಾಗಿದೆ’ ಎನ್ನುತ್ತಾರೆ ಒಳಾಂಗಣ ವಿನ್ಯಾಸಕಿ ಅಂಕಿತಾ.

‘ಮಹಿಳೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದು ಅಡುಗೆ ಮನೆಯಲ್ಲಿಯೇ. ಕೆಲವರಿಗೆ ಅಡುಗೆಮನೆ ಎನ್ನುವುದು ಪ್ರೀತಿಯನ್ನು ಬಡಿಸುವ ಪಾಕಶಾಲೆ, ಮತ್ತೆ ಕೆಲವರಿಗೆ ಕೈರುಚಿಗಳನ್ನು ಪ್ರಯೋಗಿಸುವ ಪ್ರಯೋಗಶಾಲೆ. ಇಂಥ ಸ್ಥಳ ಮಹಿಳೆಯರ ಆಸಕ್ತಿಗೆ ಪೂರಕವಾಗಿರಬೇಡವೇ? ಇದೇ ಕಾರಣಕ್ಕೆ ನಾನು ಅಡುಗೆಮನೆಯ ವಿನ್ಯಾಸ ಮತ್ತು ಮನೆ ನಿರ್ಮಾಣದ ಪ್ಲಾನಿಂಗ್ ಮಾಡಿಕೊಡುವಾಗ ಮಹಿಳೆಯರ ಮಾತನ್ನೇ ಹೆಚ್ಚು ಆಲಿಸುತ್ತೇನೆ’ ಎನ್ನುತ್ತಾರೆ ವಾಸ್ತುಶಿಲ್ಪಿ ನತಾಶ.

**

ಮನೆಗಳು ಮಹಿಳಾ ಸ್ನೇಹಿಯಾಗಿರಬೇಕೆಂದು ಅನೇಕರು ಬಯಸುತ್ತಾರೆ. ಇಂಥವರಿಗಾಗಿ ನತಾಶ ಕೊಡುವ ಸಲಹೆಗಳಿವು.

* ಅಡುಗೆಮನೆ ವಿನ್ಯಾಸದ ತೀರ್ಮಾನ ಮಹಿಳೆಯರಿಗೆ ಇರಲಿ. ಕೆಲಸಕ್ಕೆ ಹೋಗುವ ಮಹಿಳೆಯರಾದರೆ, ಅಡುಗೆಮನೆಯ ಪಕ್ಕದಲ್ಲಿಯೇ ಸ್ಟೋರ್ ರೂಂ ಬಯಸುತ್ತಾರೆ.

* ಹೆಚ್ಚಿನ ಮಹಿಳೆಯರು ಅಡುಗೆಮನೆ ವಿಶಾಲವಾಗಿರಬೇಕೆಂದು ಬಯಸುತ್ತಾರೆ. ಎಲ್ಲ ಅಡುಗೆ ಸಾಮಗ್ರಿಗಳು ಕೈಗೆಟುಕುವಂತೆ ಇರಬೇಕು ಎಂದು ಆಶಿಸುತ್ತಾರೆ. ವಿನ್ಯಾಸವನ್ನು ಮೆಚ್ಚಿಕೊಳ್ಳುತ್ತಾರೆ. ‌ಅಡುಗೆಮನೆ ವಿಶಾಲವಾಗಿದ್ದರೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಸುಲಭ ಎನ್ನುವುದು ಹಲವರ ಅಭಿಪ್ರಾಯ.

* ಪ್ರತ್ಯೇಕ ಸ್ಟೋರ್ ರೂಂ ಪರಿಕಲ್ಪನೆಯೂ ಕ್ರಮೇಣ ಕಡಿಮೆಯಾಗುತ್ತಿದೆ. ಅಡುಗೆಮನೆಗಳ ಗಾತ್ರ ದೊಡ್ಡದಾಗುತ್ತಿದೆ, ತೆರೆದ ಅಡುಗೆಮನೆಗಳನ್ನು (ಓಪನ್ ಕಿಚನ್) ಹಲವರು ಇಷ್ಟಪಡುತ್ತಿದ್ದಾರೆ. ಹೀಗಾಗಿ ಅಡುಗೆಮನೆಗಳಲ್ಲಿಯೇ ಅಗತ್ಯ ಸಾಮಗ್ರಿ ಇರಿಸಿಕೊಳ್ಳಲು ಮಹಿಳೆಯರು ಇಷ್ಟಪಡುತ್ತಿದ್ದಾರೆ.

* ಅಡುಗೆಮನೆಯಲ್ಲಿ ಕಿಚನ್ ಕ್ಯಾಬಿನೆಟ್‌ಗಳು ಅಗತ್ಯ ಸಂಖ್ಯೆಯಲ್ಲಿ ಇರಬೇಕು ಎಂದು ಮಹಿಳೆಯರು ಬಯಸುತ್ತಿದ್ದಾರೆ. ಈಚೆಗೆ ಪ್ರತಿಷ್ಠಿತ ಡೆವಲಪರ್‌ಗಳು ಕಿಚನ್ ಕ್ಯಾಬಿನೆಟ್‌ ಕಡೆಗೆ ಗಮನ ಕೊಡುತ್ತಿದ್ದಾರೆ.

* ಮಹಿಳೆ ಸಹಜ ಬೆಳಕನ್ನು ಹೆಚ್ಚು ಇಷ್ಟಪಡುತ್ತಾಳೆ. ಮಕ್ಕಳು ಅಂಬೆಗಾಲಿಟ್ಟು ಓಡಾಡುವಷ್ಟಾದರೂ ಸ್ಥಳಾವಕಾಶ ಇರಬೇಕು ಎನ್ನುವ ಆಸೆ ಅವಳದು.

* ಈಚಿನ ಯುವತಿಯರಲ್ಲಿ ಸೌಂದರ್ಯಪ್ರಜ್ಞೆ ಹೆಚ್ಚು. ಮನೆಯಲ್ಲಿಯೂ ಸೌಂದರ್ಯ ಸಾಧನಗಳು ಹಾಗೂ ವರ್ಧಕಗಳ ಬಳಕೆಗೆ ಪೂರಕವಾದ ವಾತಾವರಣ ಇರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿಯೇ ಮನೆ ಕಟ್ಟುವ ಹಂತದಲ್ಲಿಯೇ ಡ್ರೆಸಿಂಗ್ ಟೇಬಲ್‌ ಇಂಥ ಸ್ಥಳದಲ್ಲಿ, ಹೀಗೆಯೇ ಇರಬೇಕು ಎಂದು ಬೇಡಿಕೆ ಮುಂದಿಡುತ್ತಾರೆ.

* ಮನೆಯ ಯಾವುದೇ ಗೋಡೆಗಳನ್ನು ಖಾಲಿ ಬಿಡಲು ಮಹಿಳೆಯರು ಇಷ್ಟಪಡುವುದಿಲ್ಲ. ಪ್ರತಿ ಗೋಡೆಯಲ್ಲಿಯೂ ವಾಲ್‌ರೂಫ್‌ ನಿರ್ಮಿಸುವುದು ಉಳಿತು. ಇದರಿಂದಾಗಿ ಬಟ್ಟೆ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿಡಲು ಸಹಕಾರಿಯಾಗುತ್ತದೆ. ವಾಲ್ ಪೇಂಟಿಂಗ್‌ಗಳು ಮಹಿಳೆಯರ ಮನೆ ಮನವನ್ನು ಗೆದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.