ಮಾನವನ ಐಷಾರಾಮಿ ಆಸೆಗಳಲ್ಲಿ ಮಹಡಿ ಮನೆಯಲ್ಲಿ ವಾಸಿಸುವುದೂ ಒಂದು. ಆದರೆ ಹೆಚ್ಚಿನ ನಗರ ವಾಸಿಗಳಿಗಂತೂ ಮಹಡಿ ಮನೆಯಲ್ಲಿ ಬದುಕುವುದು ಅನಿವಾರ್ಯವೇ ಅಗಿದೆ. ತಾನೊಂದು ಪುಟ್ಟ ಮನೆ ಕಟ್ಟಬೇಕು ಅಂದುಕೊಳ್ಳುವವರಿಗೂ ಸ್ವಲ್ಪ ವಿಶಾಲವಾದ ಹಾಲ್ ಹಾಗೂ ವಿಶಾಲವಾದ ರೂಮ್ ಬೇಕೆಂಬ ಆಸೆಯೆ ಜೊತೆಗೆ ರೂಮ್‌ಗೋ ಇಲ್ಲಾ ಹಾಲ್‌ಗೋ ಜೊತೆಗೊಂದು ಬಾಲ್ಕನಿ ಬೇಕೆಂಬ ಅತೀ ಆಸೆ ಇರೋದು ಸಾಮಾನ್ಯವೆ! ಕೆಲವು ಮನೆಗಳಲ್ಲಂತೂ ೩ ರೂಮ್ ಇದ್ದರೆ ಆ ಮೂರೂ ರೂಮ್ ಗಳಿಗೂ ಮೂರು ಬಾಲ್ಕನಿಗಳು.
ಆದರೆ ಆ ಚಿಕ್ಕ ಚಿಕ್ಕ ಬಾಲ್ಕನಿಗಳಲ್ಲಿ ಮನುಷ್ಯರ ಸುಳಿವೇ ಇಲ್ಲಾ! ಕಾರಣ ಸರಿಯಾದ ಆಲೋಚನೆ ಇಲ್ಲದೆ ಕಟ್ಟಿಸಿದ ಬಾಲ್ಕನಿಗಳು. ಅಂದರೆ ಕೇವಲ ನಾಮಾಕಾವಸ್ತೆ ಬಾಲ್ಕನಿಗಳು ಅವೆಲ್ಲಾ. ಮಹಡಿ ಮನೆಯ ನಾಲ್ಕು ಗೋಡೆಯ ಒಳಗೆ ದಿನವಿಡೀ ಕಳೆಯಲಾರದ ಮನುಷ್ಯನಿಗೆ ಬಾಲ್ಕನಿ ಅನಿವಾರ್ಯ. ಹಾಗಂತ ಬಳಸಲು ಯೋಗ್ಯವಲ್ಲದ ಚಿಕ್ಕ ಪುಟ್ಟ ಬಾಲ್ಕನಿಗಳನ್ನು ನಿರ್ಮಿಸಿದ್ದಲ್ಲಿ ಉಪಯೋಗವಾದರೂ ಏನು?
ಶಾಲಾ ದಿನಗಳ ಪಾಠದಲ್ಲಿ ಒಂದು ಕತೆ ಹೀಗಿತ್ತು; ಒಬ್ಬಾತ ಟೋಪಿ ಹೊಲಿಸಲು ಒಂದು ತುಂಡು ಬಟ್ಟೆಯನ್ನು ಟೈಲರ್‌ಗೆ ಕೊಟ್ಟಿರುತ್ತಾನೆ. ಅದೂ ಇದೂ ಮಾತಾಡಿ ಟೈಲರ್ ಎರಡು ದಿನಬಿಟ್ಟು ಟೋಪಿ ಹೊಲಿದು ಕೊಡುತ್ತೇನೆಂದು ಹೇಳಿದ ಮೇಲೆ ಹೊರಟ ಆತ ಮತ್ತೆ ನಿಂತು ಇದರಲ್ಲಿ ಎರಡು ಟೋಪಿ ಆಗಬಹುದೇ ಎಂದು ಕೇಳುತ್ತಾನೆ. ಆಗ ಟೈಲರ್ ‘ಆಯಿತು ಎರಡು ಟೋಪಿ ಹೊಲಿದು ಕೊಡುತ್ತೇನೆ’ ಎಂದು ಒಪ್ಪಿಕೊಳ್ಳುತ್ತಾನೆ. ಅಷ್ಟಕ್ಕೆ ತೃಪ್ತನಾಗದ ಈತ ಮೂರು ಟೋಪಿ, ನಾಲ್ಕು ಟೋಪಿ ಎನ್ನುತ್ತಾ ಕೊನೆಗೆ ಐದು ಟೋಪಿ ಹೊಲಿದು ಕೊಡಲು ಹೇಳುತ್ತಾನೆ!
ಎರಡು ದಿನ ಬಿಟ್ಟು ಈತ ಬಂದಾಗ ಟೈಲರ್ ಚಿಕ್ಕ ಚಿಕ್ಕ ಐದು ಟೋಪಿಗಳನ್ನು ತನ್ನ ಐದು ಬೆರಳಿಗೆ ಹಾಕಿ ತೊರಿಸುತ್ತಾನೆ. ಇದನ್ನು ನೋಡಿ ಕುಪಿತಗೊಂಡ ಈತ, ತನ್ನ ತುಂಡು ಬಟ್ಟೆಯನ್ನು ವಾಪಸ್ ಕೊಡು ಎಂದು ಕೇಳುತ್ತಿದ್ದರೆ, ಟೈಲರ್ ತನ್ನ ಕೂಲಿ ಕೊಡು ಎಂದು ದುಂಬಾಲು ಬೀಳುತ್ತಾನೆ. ಕೊನೆಗೆ ಈ ಪ್ರಕರಣ ನ್ಯಾಯಾಲಯಕ್ಕೂ ಹೋಗಿ ಇಬ್ಬರಿಗೂ ತಕ್ಕ ಶಾಸ್ತಿ ಆಗುತ್ತದೆ!
ಒಂದು ಟೋಪಿಗೆ ಮಾತ್ರ ಸಾಕಾಗುವಷ್ಟು ತುಂಡು ಬಟ್ಟೆಯನ್ನು ಇಟ್ಟುಕೊಂಡು ಐದು ಟೋಪಿಗೆ ಆಸೆಪಟ್ಟಿದ್ದು ಈತನದ್ದು ಮೊದಲ ತಪ್ಪು. ಹಾಗೆಯೇ, ಗೊತ್ತಿದ್ದೂ ಗೊತ್ತಿದ್ದು, ಹೆಚ್ಚಿನ ಕೂಲಿಯ ಆಸೆಗೆ ಉಪಯೋಗಕ್ಕೆ ಬಾರದ ಐದು ಟೋಪಿಗಳನ್ನು ಹೊಲಿದು ಕೊಡಲು ಒಪ್ಪಿದ ಟೈಲರ್‌ನದು ಇನ್ನೂ ದೊಡ್ಡ ತಪ್ಪು. ಟೈಲರ್ ತಾನು ಈ ತುಂಡು ಬಟ್ಟೆಯಿಂದ ಚಿಕ್ಕ ಚಿಕ್ಕ ಟೋಪಿಗಳನ್ನು ಮಾತ್ರ ಹೊಲಿಯಬಹುದು ಎಂಬ ಒಂದೇ ಒಂದು ಮಾತು ಹೇಳಿದ್ದರು ಈತ ಹಾಗೆ ಅತಿ ಅಸೆಗೆ ಬೀಳುತ್ತಿರಲಿಲ್ಲ. ನಮ್ಮ ನಗರದ ಬಾಲ್ಕನಿ ವಿಷಯಗಳಲ್ಲೂ ಆಗುತ್ತಿರುವುದು ಹೀಗೆ.
ಬಾಲ್ಕನಿಯ ವಿನ್ಯಾಸದಲ್ಲಿ ಮುಖ್ಯವಾಗಿ ಅದರ ವಿಸ್ತೀರ್ಣ. ಅಂದರೆ ಕನಿಷ್ಠ ನಮ್ಮ ಅವಶ್ಯಕತೆಗೆ ಸಾಕಾಗುವಷ್ಟು ಸ್ಥಳಾವಕಾಶ ಇರಲೇಬೇಕು. ಹಾಗೆ ನಿರೀಕ್ಷಿತ ಬಾಲ್ಕನಿಗೆ ಸಾಕಾಗುವಷ್ಟು ಸ್ಥಳಾವಕಾಶ ಇಲ್ಲದಿದ್ದಲ್ಲಿ, ಅಂತಹ ಜಾಗದಲ್ಲಿ ಬಾಲ್ಕನಿಯ ಆಸೆಯನ್ನು ಕೈಬಿಡುವುದೇ ಹೆಚ್ಚಿನ ಸಂದರ್ಭಗಳಲ್ಲಿ ಸೂಕ್ತವಾದ ತೀರ್ಮಾನವಾಗುತ್ತದೆ.
ಆ ಜಾಗದಲ್ಲಿ ಮನೆಯ ಹಾಲ್ ಅಥವಾ ರೂಮ್‌ಗೆ ಹೆಚ್ಚಿನ ಜಾಗ ಹೊಂದಿಸಬಹುದು. ಅಲ್ಲದೆ, ಉಪಯೋಗಕ್ಕೆ ಬಾರದ ಬಾಲ್ಕನಿಯಿಂದಾಗುವ ಅನವಶ್ಯಕ ಖರ್ಚಿನ ಉಳಿತಾಯವೂ ಆಗುತ್ತದೆ. ಹಾಗೆಂದು ಮನೆಯ ಎಲಿವೇಶನ್‌ಗೆ ಬಾಲ್ಕನಿ ಅನಿವಾರ್ಯ ಎನ್ನಿಸಿದ್ದ ಪಕ್ಷದಲ್ಲಿ ಅದನ್ನು ಕೈಬಿಡಲಾಗದು. ಕೆಲವು ಸಂದರ್ಭಗಳಲ್ಲಿ ಬಾಲ್ಕನಿಯಿಂದಲೇ ಮನೆಯು ಒಂದು ಸುಂದರ ರೂಪವನ್ನು ತಾಳುವುದು.
ನಾಗೇಶ ರಾಯರಿಗೆ ತಾವು ಹಲವು ವರ್ಷಗಳಿಂದ ಕೂಡಿಟ್ಟ ಪುಸ್ತಕಗಳನ್ನು ನಿವೃತ್ತರಾದ ನಂತರ ಒಂದೊಂದಾಗಿ ಓದುವ ಯೊಜನೆಯೇನೊ ಇತ್ತು. ಆದರೆ ಮಕ್ಕಳು ಮೊಮ್ಮಕ್ಕಳಿಂದ ತುಂಬಿದ ಸಂತಸದ ಮನೆ. ಓದುವುದಕ್ಕೆಂದೇ ಪ್ರತ್ಯೇಕ ರೀಡಿಂಗ್ ರೂಮ್ ಇರಲಿಲ್ಲಾ. ಇಷ್ಟು ವರ್ಷದಿಂದ ಮುಂದೂಡಿದ ಓದುವ ತಮ್ಮ ಆಸೆಯನ್ನು ಮತ್ತೆ ಮೊಮ್ಮಕ್ಕಳು ದೊಡ್ಡವರಾಗುವ ತನಕ ಮುಂದೂಡುವುದಂತೂ ಸಾಧ್ಯವಿರಲಿಲ್ಲಾ.
ನಾಗೇಶ ರಾಯರ ಅದೃಷ್ಟ ಅನ್ನುವ ಹಾಗೆ ಅವರ ಅಪಾರ್ಟ್‌ಮೆಂಟ್‌ನ ಹಿಂಭಾಗದಲ್ಲಿ ವಿಶಾಲವಾದ ಬಾಲ್ಕನಿ ಇತ್ತು. ಅದೀಗ ನಿತ್ಯ ಓದುವ ಜಾಗವಾಗಿ ಉಪಯೋಗವಾಗುತ್ತಿದೆ. ಬಾಲ್ಕನಿ ಇರುವುದು ಮನೆಯ ಹಿಂಭಾಗವಾದ್ದರಿಂದ ಸುರಕ್ಷತೆಯ ಯೋಚನೆ ಎನಿಸಿರಲಿಲ್ಲಾ.
ಹಾಗಾಗಿ ಈಗ ಬಾಲ್ಕನಿಯ ಮೂಲೆಯಲ್ಲೇ ಒಂದು ಬೀರು ಸ್ಥಾಪಿಸಿ ಮನೆಯಲ್ಲಿರುವ ಎಲ್ಲಾ ಪುಸ್ತಕಗಳನ್ನು ಅಲ್ಲಿಗೆ ವರ್ಗಾಯಿಸಿ ಇಟ್ಟಿದ್ದರು. ಹಾಗಾಗಿ ಇತ್ತೀಚೆಗೆ ನಾಗೇಶ ರಾಯರನ್ನು ಹುಡುಕಿ ಬರುವ ಸಮಾನ ಮನಸ್ಕ ಮಿತ್ರರು ನೇರವಾಗಿ ಅವರ ಬಾಲ್ಕನಿಗೇ ಬರುವುದು, ಅಲ್ಲೇ ಕೂತು ಗಂಟೆಗಟ್ಟಲೆ ಹರಟುವುದು ಸಾಮಾನ್ಯವಾಗಿದೆ. ಬಾಲ್ಕನಿಯೆ ಅವರ ಸ್ನೆಹಿತರಿಗೆ ಒಂದು ಅಡ್ಡಾ ಆಗಿದೆ!
ಆದರೆ ಬಾಲ್ಕನಿಯ ಜಾಗವನ್ನು ಅರ್ಥಪೂರ್ಣವಾಗಿ ಉಪಯೋಗಿ ಸುತ್ತಾ ಇರುವವರ ಸಂಖ್ಯೆ ತುಂಬಾನೆ ಕಡಿಮೆ. ನಮ್ಮ ಅಭಿರುಚಿ ಅಥವಾ ಅಗತ್ಯಕ್ಕೆ ತಕ್ಕುದಾಗಿ ನಮ್ಮ ಬಾಲ್ಕನಿ ಇದ್ದಲ್ಲಿ ಅದು ಖಂಡಿತಾ ಉಪಯೋಗವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.
ಬಾಲ್ಕನಿಯ ವಿಸ್ತಾರ ಮಾತ್ರವಲ್ಲದೆ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಬಾಲ್ಕನಿಗೆ ಪ್ರೈವೆಸಿ ಕೂಡಾ ಮುಖ್ಯವಾಗಿ ಬೇಕಾಗುತ್ತದೆ. ಕೆಲವರು ತಮ್ಮ ಬಾಲ್ಕನಿಯನ್ನೇ ಗಾಜಿನಿಂದ ಮುಚ್ಚಿ ನಿಶ್ಶಬ್ದ ಆವರಣವಾಗಿ ಪರಿವರ್ತಿಸಿ ಕೊಂಡು ಯೋಗ ಧ್ಯಾನ ಮಾಡಲು ಸಾಧ್ಯ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಬಾಲ್ಕನಿಯ ಉಪಯೋಗ ಹಲವು ವಿಧದಲ್ಲಿರುತ್ತದೆ. ಕೆಲವರು ಬಟ್ಟೆ ಒಣಗಿಸಲು ಉಪಯೋಗಿಸಿದರೆ ಇನ್ನು ಕೆಲವರು ಉಯ್ಯಾಲೆ ಆಡಲು, ಹೂವಿನ ಇಲ್ಲಾ ತುಳಸಿ ಮುಂತಾದ ಗಿಡಗಳನ್ನು ಬೆಳೆಸಲು ಬಳಸುವುದಿದೆ.
ಅಲ್ಲದೇ ಮಹಾನಗರಗಳಲ್ಲಿ ದೊಡ್ಡ ಬಾಲ್ಕನಿಗಳಲ್ಲಿ ಮನೆಗೆ ಸಾಕಾಗುವಷ್ಟು ತರಕಾರಿ ಸೊಪ್ಪು ಬೆಳೆಯುವವರು ನಮ್ಮ ಮಧ್ಯೆಯೂ ಇದ್ದಾರೆ ಅನ್ನುವುದು ಸಂತಸದ ವಿಚಾರ!
ಮನೆ ಮದ್ದಿಗೆ ಅವಶ್ಯವಾಗಿ ಬೇಕಾಗುವ ಔಷಧಿ ಗಿಡಗಳನ್ನು ಬೆಳೆಸಿದ ಸ್ವಾವಲಂಬಿಗಳು ಕೆಲವರು ಸಿಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.