ADVERTISEMENT

ಮನೆ ಕಟ್ಟಿಸಿಕೊಡೋರ ಕಷ್ಟ ಸುಖ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಮನೆ ಕಟ್ಟಿಸಿಕೊಡೋರ ಕಷ್ಟ ಸುಖ
ಮನೆ ಕಟ್ಟಿಸಿಕೊಡೋರ ಕಷ್ಟ ಸುಖ   

‌ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್ ಪ್ರಸ್ತಾಪಿಸಿರುವ ಕೊಡುಗೆಗಳನ್ನು ದೇಶವ್ಯಾಪಿ ಶ್ಲಾಘಿಸಲಾಗುತ್ತಿದೆ. ಆದರೆ ರಿಯಲ್ ಎಸ್ಟೇಟ್ ವಲಯದಲ್ಲಿ ಮಾತ್ರ ನಿರೀಕ್ಷೆ ಈಡೇರದ ನಿರಾಸೆ ಆವರಿಸಿದೆ. ಕೆಲ ಉದ್ಯಮಿಗಳಂತೂ ‘ತೀವ್ರ ನಿರಾಶೆ ಮೂಡಿಸಿದ ಬಜೆಟ್’ ಎಂದೇ ವ್ಯಾಖ್ಯಾನಿಸಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ ನೀಡದಿರುವುದು ಈ ಅಸಮಾಧಾನಕ್ಕೆ ಮುಖ್ಯ ಕಾರಣ.

ಈ ಬಾರಿಯ ಬಜೆಟ್‌ ಬಗ್ಗೆ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ರಿಯಲ್‌ ಎಸ್ಟೇಟ್ ಕ್ಷೇತ್ರಕ್ಕೂ ಉದ್ಯಮದ ಮಾನ್ಯತೆ ನೀಡಬೇಕು. ಇದರಿಂದ ಡೆವಲಪರ್‌ಗಳಿಗೆ ಕಡಿಮೆ ದರದಲ್ಲಿ ಬಂಡವಾಳ ಸಂಗ್ರಹಿಸಲು ಸಹಾಯವಾಗುವ ಜೊತೆಗೆ ಕಟ್ಟಡದ ದರಗಳು ಕಡಿಮೆಯಾಗಿ ಬೇಡಿಕೆ ಹೆಚ್ಚುತ್ತದೆ. ಕಳೆದ ವರ್ಷ ನಾನಾ ಕಾರಣಗಳಿಂದ ನೀರಸ ಪ್ರತಿಕ್ರಿಯೆ ತೋರಿದ್ದ ರಿಯಲ್‌ ಎಸ್ಟೇಟ್‌ ಕ್ಷೇತ್ರ ಮತ್ತೆ ಪುಟಿದೇಳಲು ಈ ಬಾರಿಯ ಕೇಂದ್ರ ಬಜೆಟ್‌ ನೆರವಾಗುತ್ತದೆ ನಂಬಲಾಗಿತ್ತು.

ಆದರೆ ಬಜೆಟ್‌ನಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಚರ್ಚೆಯಾಗಿಲ್ಲ. ಆದರೆ 2022 ರ ಹೊತ್ತಿಗೆ ಎಲ್ಲರಿಗೂ ವಸತಿ ನೀಡುವ ಸರ್ಕಾರದ ಗುರಿಗೆ ಅನುಗುಣವಾಗಿ ಬಜೆಟ್‌ನಲ್ಲಿ ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನಲ್ಲಿ ಕೈಗೆಟುಕುವ ದರದ ಮನೆಗಳಿಗೆ ಪೂರಕವಾಗಿ ವಸತಿ ನಿಧಿಯನ್ನು (ಅಫರ್ಡಬಲ್ ಹೌಸಿಂಗ್ ಫಂಡ್) ಸ್ಥಾಪಿಸಲು ಪ್ರಸ್ತಾಪಿಸಿರುವುದು ಬಿಲ್ಡರ್‌ಗಳಿಗೆ ಖುಷಿ ತಂದಿದೆ.

ADVERTISEMENT

‘ಬಜೆಟ್‌ನಲ್ಲಿ ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನಲ್ಲಿ ‘ಕೈಗೆಟುಕುವ ದರದ ಮನೆಗಳಿಗಾಗಿ ನಿಧಿ’ (ಅಫರ್ಡಬಲ್ ಹೌಸಿಂಗ್ ಫಂಡ್) ಸ್ಥಾಪಿಸುವ ಪ್ರಸ್ತಾವವನ್ನು ವಿತ್ತ ಸಚಿವರು ಮಾಡಿದ್ದಾರೆ. ಇದು ಪ್ರಧಾನಿ ನರೇಂದ್ರ ಅವರ ‘ಸರ್ವರಿಗೂ ವಸತಿ’ಯ ಗುರಿಯನ್ನೇ ಪ್ರತಿನಿಧಿಸುತ್ತದೆ. ರಿಯಾಲ್ಟಿ ವಲಯದ ಇತರ ಕ್ಷೇತ್ರಗಳತ್ತ ಸರ್ಕಾರ ಗಮನ ಹರಿಸಿಲ್ಲ ಎನ್ನುವುದು ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್‌ಗಳ ಅಧ್ಯಕ್ಷ ಅನುಜ್ ಪೂರಿ ಅವರ ಆಕ್ಷೇಪ.

‘ರಿಯಾಲ್ಟಿ ವಲಯದ ಯಾವುದೇ ಬೇಡಿಕೆಯತ್ತ ಬಜೆಟ್ ಗಮನ ನೀಡಿಲ್ಲ. ಮ್ಯಾಟ್, ಮೂಲ ಸೌಕರ್ಯ ಸ್ಥಾನಮಾನ, ವಿದೇಶಿ ಹೂಡಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ’ ಎಂಬುದು ಜೆಎಲ್‌ಎಲ್‌ ಇಂಡಿಯಾ ಕಂಪೆನಿಯ ರಾಷ್ಟ್ರೀಯ ಅಧ್ಯಕ್ಷ ರಮೇಶ್‌ ನಾಯಕ್ ಅಸಮಾಧಾನ.

‘ಬಜೆಟ್‌ನಲ್ಲಿ ರಿಯಾಲ್ಟಿ ವಲಯಕ್ಕೆ ಪೂರಕವಾದ ಹಲವು ಅಂಶಗಳೂ ಇವೆ’ ಎನ್ನುವುದು ಕ್ರೆಡಾಯ್ ಅಧ್ಯಕ್ಷ ಆದರ್ಶ್‌ ನರಹರಿ ಅವರ ಅಭಿಪ್ರಾಯ. ‘ಒಟ್ಟಾರೆ ಬಜೆಟ್ ದೇಶದ ಆರ್ಥಿಕ ಬೆಳವಣಿಗೆಯನ್ನು ಗುರಿಯಾರಿಸಿಕೊಂಡಿದೆ. ವರ್ಷಕ್ಕೆ ₹250 ಕೋಟಿ ವಹಿವಾಟು ನಡೆಸುವ ಕಂಪೆನಿಗಳಿಗೆ ಶೇ25ರಷ್ಟು ತೆರಿಗೆ ದರ, ಕೈಗೆಟುಕುವ ವಸತಿ ನಿರ್ಮಾಣಕ್ಕೆ ಪ್ರೇರಣೆ ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೆ ಉತ್ತಮ ಪರಿಣಾಮ ಬೀರಲಿವೆ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಆದರೆ ರಿಯಲ್ ಎಸ್ಟೇಟ್ ವಲಯದ ಬೇಡಿಕೆಗಳ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟ ಸ್ಪಂದನೆ ಇಲ್ಲ’ ಎನ್ನುವ ಆಕ್ಷೇಪದ ದನಿಯನ್ನೂ ಕೊನೆಗೆ ಸೇರಿಸುತ್ತಾರೆ.

ವೈಷ್ಣವಿ ಗ್ರೂಪ್‌ನ ಅಧ್ಯಕ್ಷ ಸಿ.ಎನ್. ಗೋವಿಂದರಾಜು, ‘ಬಜೆಟ್‌ನಲ್ಲಿ ರಿಯಾಲ್ಟಿ ಕ್ಷೇತ್ರದ ಬಗ್ಗೆ ಚರ್ಚೆಯೇ ನಡೆದಿಲ್ಲ. ಆಸ್ತಿ ಮಾರಾಟದ ಮೇಲಿನ ಜಿಎಸ್‌ಟಿಯನ್ನು ಪರಿಷ್ಕರಿಸುವ ಅಥವಾ ಕಡಿಮೆ ಮಾಡುವ ನಿರೀಕ್ಷೆ ಇತ್ತು. ಮುದ್ರಾಂಕ ಶುಲ್ಕವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುತ್ತಾರೆ ಎಂದುಕೊಂಡಿದ್ದೆವು. ಗೃಹಸಾಲಗಳಿಗೆ ₹2 ಲಕ್ಷದವರೆಗೆ ತೆರಿಗೆ ವಿನಾಯ್ತಿ, ಮೊದಲ ಮನೆ ಖರೀದಿ ಮಾಡಿದವರಿಗೆ ₹2 ಲಕ್ಷದವರೆಗೆ ತೆರಿಗೆ ಕಡಿತದ ನಿರೀಕ್ಷೆಯೂ ಇತ್ತು. ಸರ್ಕಾರ ಇತ್ತ ಗಮನ ಕೊಟ್ಟಿದ್ದರೆ ರಿಯಾಲ್ಟಿ ಕ್ಷೇತ್ರಕ್ಕೆ ಚೇತೋಹಾರಿ ಎನಿಸುತ್ತಿತ್ತು’ ಎಂದು ಪ್ರತಿಕ್ರಿಯಿಸಿದರು.

‘ಇದು ಸ್ಥಿರ ಬಜೆಟ್, ನಮಗೆ ಖುಷಿ ಆಗಿಲ್ಲ; ಹಾಗೆಂದು ಭ್ರಮನಿರಸನವೂ ಆಗಿಲ್ಲ’ ಎನ್ನುವುದು ಸಿಲ್ವರ್ ರಿಯಾಲ್ಟಿಯ ವ್ಯವಸ್ಥಾಪಕ ನಿರ್ದೇಶಕ ಫಾರೂಕ್ ಮೊಹಮದ್ ಅವರ ಪ್ರತಿಕ್ರಿಯೆ.

‘ಮೊದಲ ಬಾರಿ ಮನೆ ಖರೀದಿಸುವವರಿಗೆ ಹೆಚ್ಚುವರಿಯಾಗಿ ₹50 ಸಾವಿರ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಯಾವುದೇ ಗಾತ್ರ ಹಾಗೂ ಸ್ಥಳವನ್ನು ಪರಿಗಣಿಸಿದರೂ, ಖರೀದಿದಾರರು ಖರೀದಿಸುವ ಕಟ್ಟಡದ ಮೊತ್ತವೂ ₹50 ಲಕ್ಷಕ್ಕಿಂತ ಹೆಚ್ಚಿರಬಾರದು ಎಂಬ ನಿಯಮ ಇದೆ. ಆದರೆ ಮೆಟ್ರೊ ನಗರಗಳಲ್ಲಿ ಕಟ್ಟಡದ ಮೌಲ್ಯವೂ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿರುತ್ತದೆ. ಹೀಗಾಗಿ ಮೊದಲ ಬಾರಿಗೆ ಮನೆ ಖರೀದಿದಾರರಿಗೆ ಹೆಚ್ಚು ಲಾಭ ಸಿಗುವುದಿಲ್ಲ. ಸ್ಥಳ ಹಾಗೂ ಪ್ರದೇಶದ ಮೌಲ್ಯ ಆಧರಿಸಿ, ತೆರಿಗೆ ವಿನಾಯಿತಿ ನೀಡುವ ನಿರೀಕ್ಷೆ ಇತ್ತು. ಆದರೆ ಬಜೆಟ್ ಭಾಷಣದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪವಾಗಿಲ್ಲ. ರಿಯಲ್‌ ಎಸ್ಟೇಟ್‌ ಕ್ಷೇತ್ರದ ವಿಷಯದಲ್ಲಿ ಹೆಚ್ಚಿನ ಭರವಸೆಯನ್ನು ಬಜೆಟ್‌ ಮೂಡಿಸಿಲ್ಲ. ಹಾಗೆಂದು ಆಘಾತವನ್ನೂ ನೀಡಿಲ್ಲ. ಇದೊಂದು ರೀತಿ ಸ್ಥಿರ ಬಜೆಟ್‌’ ಎಂದು ಅವರು ವಿಶ್ಲೇಷಿಸುತ್ತಾರೆ.

ಇನ್ನಷ್ಟು ವಿನಾಯಿತಿ ಬೇಕಿತ್ತು
ಕೈಗೆಟಕುವ ಬೆಲೆಯ ಗೃಹ ನಿರ್ಮಾಣದ ಮೇಲೆ ಪ್ರಸಕ್ತ ಬಜೆಟ್‌ನಲ್ಲಿಯೂ ಪ್ರೋತ್ಸಾಹ ಸಿಕ್ಕಿದೆ. ಇದು ರಿಯಲ್‌ ಎಸ್ಟೇಟ್‌ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ನಲ್ಲಿ ಈ ಯೋಜನೆಗಾಗಿ ನಿಧಿ ಸ್ಥಾಪಿಸುವ ಹಣಕಾಸು ಸಚಿವರ ತೀರ್ಮಾನ ಸ್ವಾಗತಾರ್ಹ. ಅಲ್ಲದೆ, ರಸ್ತೆ ಮತ್ತು ರೈಲು ಸಂಪರ್ಕ ವ್ಯವಸ್ಥೆಯನ್ನು ಉನ್ನತೀಕರಿಸಲು ಆದ್ಯತೆ ನೀಡಿರುವುದು ಗೃಹ ನಿರ್ಮಾಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಬೆಳವಣಿಗೆ.

ಮೊದಲ ಬಾರಿ ಮನೆ ಖರೀದಿಸುವ ಗ್ರಾಹಕರಿಗೆ ಏನಾದರೂ ವಿನಾಯಿತಿಗಳನ್ನು ಪ್ರಕಟಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಹಾಗಾಗಿದ್ದಲ್ಲಿ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿತ್ತು ಹಾಗೂ ಪೂರೈಕೆಯಲ್ಲಿ ಸಮತೆ ಕಾಪಾಡಿಕೊಳ್ಳಲು ಸಹಾಯವಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನು ಉದ್ಯಮ ಎಂದು ಪರಿಗಣಿಸುವ ಅವಶ್ಯಕತೆ ಈಗ ಈ ಹಿಂದಿಗಿಂತಲೂ ಹೆಚ್ಚು ಇತ್ತು. ಹಾಗೆ ಮಾಡಿದ್ದಿದ್ದರೆ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತಿತ್ತು.
–ಅರುಣ್‌ ಎಂ.ಎನ್.
ಸ್ಥಾಪಕರು, ಕಾಸಾಗ್ರ್ಯಾಂಡ್‌ ಬಿಲ್ಡರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.