ರಿಷಬ್ ಶೆಟ್ಟಿ ನಿರ್ದೇಶನ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ ಹಾಡುಗಳೆಲ್ಲವೂ ಮುದ ನೀಡುವವುಗಳೇ. ಈ ಚಿತ್ರದಲ್ಲಿನ 'ಹೇ ಹೂ ಆರ್ ಯೂ' ಎಂಬ ಹಾಡು 'ಶಾಂತಿ ಕ್ರಾಂತಿ' ಚಿತ್ರದ ಒಂದು ಹಾಡಿನ ಕಾಪಿರೈಟ್ ಉಲ್ಲಂಘಿಸಿದೆ ಎಂದು ಲಹರಿ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿದ್ದರೂ, ಈ ವಾದವನ್ನು ಕಿರಿಕ್ ತಂಡ ಅಲ್ಲಗೆಳೆದಿತ್ತು.
ಆ ವಿಷಯ ಬಿಟ್ಹಾಕಿ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಾಗದದ ದೋಣಿಯಲ್ಲಿ ಎಂದು ಆರಂಭವಾಗುವ ಹಾಡೊಂದಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ ಈ ಹಾಡನ್ನು ಹಾಡಿದ್ದು ವಾಸುಕಿ ವೈಭವ್. ಆದರೆ ಈ ಹಾಡಿನ ಸಂಗೀತ 'ದ ಬಾಂಬೆ ರೋಯಲ್' ಆಲ್ಬಂನ ಸಂಗೀತವನ್ನು ಹೋಲುತ್ತದೆ.
The Bombay Royale - The River ಎಂಬ ವಿಡಿಯೊದಲ್ಲಿನ ಸಂಗೀತ ಗಮನಿಸಿದರೆ, ಕಿರಿಕ್ ಪಾರ್ಟಿಯ 'ಕಾಗದದ ದೋಣಿಯಲ್ಲಿ' ಹಾಡಿನ ಸಂಗೀತಕ್ಕಿರುವ ಸಾಮ್ಯತೆ ಸ್ಪಷ್ಟವಾಗುತ್ತದೆ.
ಚಿತ್ರ : ಕಿರಿಕ್ ಪಾರ್ಟಿ
ಹಾಡು: ಕಾಗದದ ದೋಣಿಯಲ್ಲಿ
ಗಾಯಕರು: ವಾಸುಕಿ ವೈಭವ್
ಸಂಗೀತ ನಿರ್ದೇಶನ: ಬಿ. ಅಜನೀಶ್ ಲೋಕನಾಥ್
ಸಾಮ್ಯತೆ: ದ ಬಾಂಬೆ ರಾಯಲ್
[related]
ದೃಶ್ಯವೂ ನಕಲು?
ಕಿರಿಕ್ ಪಾರ್ಟಿ ಚಿತ್ರದಲ್ಲಿ ಕೆಲವೊಂದು ದೃಶ್ಯಗಳು ಮಲಯಾಳಂ ಚಿತ್ರ 'ಪ್ರೇಮಂ' ದೃಶ್ಯವನ್ನು ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಕಿರಿಕ್ ಪಾರ್ಟಿಯಲ್ಲಿನ ಒಂದು ದೃಶ್ಯವಂತೂ ಬಾಲಿವುಡ್ ಚಿತ್ರವೊಂದರ ದೃಶ್ಯವನ್ನು ಹೋಲುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.
1985ರಲ್ಲಿ ತೆರೆಕಂಡ ಸನ್ನಿ ಡಿಯೋಲ್ ನಟನೆಯ ಅರ್ಜುನ್ ಚಿತ್ರದಲ್ಲಿ 'ಮಮ್ಮಯ್ಯ ಕೆರೊ ಕೆರೊ ಕೆರೊ ಮಾಮಾ' ಎಂಬ ಹಾಡು ಶುರುವಾಗುವ ಮುನ್ನ ಬರುವ ದೃಶ್ಯದಲ್ಲಿ ಸನ್ನಿ ಡಿಯೋಲ್ ಮತ್ತು ಆತನ ಗೆಳೆಯರು ಸ್ಟೇಡಿಯಂನಲ್ಲಿ ಕುಳಿತು ಚಿಟಿಕೆ ಹೊಡಿಯುತ್ತಿರುತ್ತಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿಯೂ ಇದೇ ದೃಶ್ಯವನ್ನು ಹೋಲುವ ದೃಶ್ಯವನ್ನು ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.