ಈಚಿನ ವರ್ಷಗಳಲ್ಲಿ ಹೆಸರು ಮಾಡಿರುವ ಬಹುಪಾಲು ರಂಗಕರ್ಮಿಗಳು ಹೆಗ್ಗೋಡಿನ ನೀನಾಸಂ, ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಹೋಗಿ ನಾಟಕಕಲೆ ಕಲಿತುಬಂದಿದ್ದಾರೆ. ಇಂಥ ವೃತ್ತಿಪರರ ಜೊತೆಜೊತೆಗೇ ಸಂಚಯದಂಥ ರಂಗ ತಂಡಗಳು ಸಕ್ರಿಯವಾಗಿವೆ.
ಸಂಚಯ ಎಂಬ ತಂಡದ ಬಗ್ಗೆ ಬೆಂಗಳೂರಿನ ದಕ್ಷಿಣ ಭಾಗದ ನಾಟಕ ಪ್ರೇಮಿಗಳಿಗೆ ಗೊತ್ತಿರುತ್ತದೆ. ಈ ಆತ್ಮೀಯ ಬಳಗ ೨೫ನೆಯ ವರ್ಷಕ್ಕೆ ಕಾಲಿಟ್ಟಿದೆ. ಸದ್ದು ಗದ್ದಲವಿಲ್ಲದೆ ಸುಮಾರು ೪೫ ನಾಟಕಗಳನ್ನು ಆಡಿರುವ ಸಂಚಯ ಮುಂದಿನ ವಾರ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ಬೆಂಗಳೂರಿನ ರಂಗಭೂಮಿಗೆ ಇಂಥ ಸಂಸ್ಥೆಗಳಿಂದ ಆಗುವ ಉಪಕಾರವನ್ನು ಅಕಾಡೆಮಿಕ್ ಅಧ್ಯಯನಗಳು ಹೆಚ್ಚು ಗಮನಿಸಿರುವುದಿಲ್ಲ. ಈ ತಂಡದ ಸದಸ್ಯರು ಯಾರೂ ಪೂರ್ಣಾವಧಿ ರಂಗಕರ್ಮಿಗಳಲ್ಲ. ಆದರೂ ನಾಟಕ ಆಡುತ್ತಾ ೨೫ ವರ್ಷ ಜೊತೆಯಾಗಿ ಕಳೆದಿದ್ದಾರೆ, ಸಂತೋಷ ಪಟ್ಟಿದ್ದಾರೆ. ನಾಟಕ ಆಡಿಸುವ ಹೊಣೆ ಹೊತ್ತು, ಅದರಲ್ಲಿ ಸಾರ್ಥಕ್ಯ ಕಂಡುಕೊಂಡಿದ್ದಾರೆ. ಎಷ್ಟೇ ಕಷ್ಟ ಆದರೂ ವರ್ಷಕ್ಕೆ ಎರಡು ಮೂರು ಪ್ರೊಡಕ್ಷನ್ ಮಾಡುತ್ತಾ ಬಂದಿದ್ದಾರೆ. ಇಂಥ ಐದಾರು ತಂಡಗಳು ಬೆಂಗಳೂರಿನಲ್ಲಿ ರಂಗ ಚಟುವಟಿಕೆಯಲ್ಲಿ ತೊಡಗಿವೆ.
ಈ ಪ್ರದೇಶದ ಶಾಲೆ ಕಾಲೇಜುಗಳಲ್ಲಿ ಕನ್ನಡ ನಾಟಕ ಆಡಿಸುವುದು ಒಂದು ಸಂಪ್ರದಾಯ. ನ್ಯಾಷನಲ್ ಕಾಲೇಜ್ ಪ್ರತಿ ವರ್ಷ ಅಂತರ-ತರಗತಿ ನಾಟಕ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ರಂಗ ಹವ್ಯಾಸ ಬೆಳೆಸುತ್ತದೆ. ಆ ದೊಡ್ಡ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಡಾ. ಎಚ್. ನರಸಿಂಹಯ್ಯನವರು ನಾಟಕ ತಂಡಗಳನ್ನು ಪ್ರೋತ್ಸಾಹಿಸುತ್ತಿದ್ದರು. ತಾಲೀಮು ಮಾಡುವುದಕ್ಕೆ ಸ್ಥಳಾವಕಾಶ ಮಾಡಿ ಕೊಡುತ್ತಿದ್ದರು. ಹಾಗೆಯೇ ಎನ್ಎಂಕೆಆರ್‌ವಿ ಕಾಲೇಜ್ ಪ್ರಿನ್ಸಿಪಾಲರಾದ ಚಿ.ನ. ಮಂಗಳ ಕೂಡ. ಸಿಂಹ, ಶ್ರೀನಾಥ್, ವಿಷ್ಣುವರ್ಧನ, ರಮೇಶ್ ಥರದ ಹಲವು ನಾಟಕ, ಸಿನಿಮಾ ನಟರು ನ್ಯಾಷನಲ್ ಕಾಲೇಜಿನ ರಂಗ ಸಂಸ್ಕೃತಿಯಿಂದ ಬೆಳೆದು ಬಂದವರು.
ಈಚಿನ ವರ್ಷಗಳಲ್ಲಿ ಹೆಸರು ಮಾಡಿರುವ ಬಹುಪಾಲು ರಂಗಕರ್ಮಿಗಳು ಹೆಗ್ಗೋಡಿನ ನೀನಾಸಂ, ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಹೋಗಿ ನಾಟಕಕಲೆ ಕಲಿತುಬಂದಿದ್ದಾರೆ. ಇಂಥ ವೃತ್ತಿಪರರ ಜೊತೆಜೊತೆಗೇ ಸಂಚಯದಂಥ ರಂಗ ತಂಡಗಳು ಸಕ್ರಿಯವಾಗಿವೆ. ಕುವೆಂಪು, ಕಾರಂತ, ಬೇಂದ್ರೆಯವರಿಂದ ಹಿಡಿದು ಹಲವು ಕನ್ನಡ ಸಾರಸ್ವತ ಲೋಕದ ದಿಗ್ಗಜರ ಕೃತಿಗಳನ್ನು ಸಂಚಯ ರಂಗಕ್ಕೆ ತಂದಿದೆ. ಹವ್ಯಾಸಿ ಎನಿಸಿಕೊಳ್ಳುವ ತಂಡವಾಗಿದ್ದೂ ಸಂಚಯ ವೃತ್ತಿಪರ ನಿರ್ದೇಶಕರನ್ನು ಕರೆತಂದು ನಾಟಕಗಳನ್ನು ಆಡಿಸಿದೆ. ಸಿಜಿಕೆ, ಆರ್. ನಾಗೇಶ್, ಸುರೇಶ ಆನಗಳ್ಳಿ, ಕೃಷ್ಣಮೂರ್ತಿ ಕವತ್ತಾರ್, ಇಕ್ಬಾಲ್ ಅಹಮದ್ ಮೊದಲ್ಗೊಂಡು ಹಲವು ವೃತ್ತಿಪರರನ್ನು ಕರೆಸಿ ನಾಟಕ ಆಡಿಸಿದೆ.
ನಾನು ಕಂಡಂತೆ, ಈ ೨೫ ವರ್ಷದಲ್ಲಿ ಸಂಚಯ ಒಂದು ಕುಟುಂಬದಂತೆ ಸಾಗಿ ಬಂದಿದೆ. ಗಣೇಶ್ ಶೆಣೈ, ಕೀರ್ತಿ ಭಾನು, ಬಿ.ಸಿ. ರಾಮಕೃಷ್ಣ, ಚಿತ್ರಶೇಖರ್ ಮೊದಲಾದ ಸದಸ್ಯರು ರಂಗದ ಕೆಲಸ ಮಾಡುವಷ್ಟೇ ಕಾಳಜಿಯಿಂದ ರಂಗಮಂದಿರದ ಹೊರಗಿನ ಮಾನವ ಸಂಬಂಧಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರ ಮುಂದಾಳತ್ವದಲ್ಲಿ ಸಂಚಯ ನಾಟಕವಲ್ಲದೆ ಸುಗಮ ಸಂಗೀತ ಕಾರ್ಯಕ್ರಮಗಳನ್ನೂ ನೀಡಿದೆ. ಹಿರಿಯ ಕಿರಿಯ ಸಾಹಿತಿ ಕಲಾವಿದರಿಗೆ ನೆರವಾಗಿದೆ.
ಸಂಚಯ ಉದಯವಾಗುವ ಕಾಲಕ್ಕೆ ಬೆಂಬಲ ಸಿಕ್ಕಿದ್ದು ಜಯನಗರದ ಎಂಇಎಸ್ ಪ್ರೌಢ ಶಾಲೆಯಲ್ಲಿ. ತಂಡವನ್ನು ಹುಟ್ಟು ಹಾಕಿದವರು ಅಲ್ಲಿ ಶಿಕ್ಷಕರಾಗಿದ್ದ ಜಿ.ಎಸ್. ರಾಮರಾಯರು. ನಾಟಕ, ಸಂಗೀತದಲ್ಲಿ ವಿಶೇಷ ಆಸಕ್ತಿ ಇದ್ದ ಅವರು ತಮ್ಮ ಶಿಷ್ಯ ವೃಂದವನ್ನು ಒಟ್ಟುಗೂಡಿಸಿ ಪ್ರಾರಂಭಿಸಿದ ಸಂಸ್ಥೆಯನ್ನು ೧೯೮೮ರಲ್ಲಿ ಉದ್ಘಾಟನೆ ಮಾಡಿದವರು ಮೇಕಪ್ ನಾಣಿ. ತಂಡದ ಸುಮಾರು ಸದಸ್ಯರು ಆ ಶಾಲೆಯಲ್ಲಿ ಓದಿದವರು.
ಈ ೨೫ ವರ್ಷದಲ್ಲಿ ಹವ್ಯಾಸಿ ತಂಡಗಳು ಎದುರಿಸಿದ ಎಲ್ಲ ಸವಾಲುಗಳನ್ನು ಸಂಚಯ ಎದುರಿಸಿದೆ. ಟಿವಿ ವಾಹಿನಿಗಳು ಹೆಚ್ಚಾದಂತೆ ಸಂಜೆ ಮನೆಯಿಂದ ಹೊರಗೆ ಬಂದು ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು.
ಅಂದು ಲವಲವಿಕೆಯಿಂದ ಓಡಾಡುತ್ತಿದ್ದ ಹಲವರು ಇಂದು ತಮ್ಮದೇ ವ್ಯಾಪಾರ ಉದ್ಯಮಗಳನ್ನು ನಡೆಸುತ್ತಾ ಬಿಡುವಿಲ್ಲದಂತೆ ಆಗಿದ್ದಾರೆ. ಎರಡು ದಶಕದ ಹಿಂದೆ ಫ್ಯಾಕ್ಟರಿ, ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ ನಟನಟಿಯರು ಸಂಜೆ ವೇಳೆಯನ್ನು ತಾಲೀಮಿಗೆ ಮೀಸಲಿಡುತ್ತಿದ್ದರು. ಐಟಿ ವಲಯ ಬೆಳೆದಂತೆ ಆರು ಗಂಟೆಗೆ ಮನೆ ಸೇರಿ ನಾಟಕದ ತಾಲೀಮಿಗೆ ಹೋಗುವವರು ವಿರಳವಾದರು.
ಗಣೇಶ್ ಹೇಳುವಂತೆ, ಈಗ ಅದೆಲ್ಲ ಮತ್ತೆ ಬದಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ವಲಯದ ಕನ್ನಡಿಗರು ನಾಟಕ ನೋಡಲು ಶನಿವಾರ, ಭಾನುವಾರ ಕಡ್ಡಾಯವಾಗಿ ಬರುತ್ತಾರೆ. ತಂಡದ ಹೊಸ ಸದಸ್ಯರು ಚುರುಕಾಗಿ ಓಡಾಡುತ್ತಾರೆ. ಬೆಳಗಿನ ಹೊತ್ತು ಹೂ ಮಾರುವ ಒಬ್ಬ ಸದಸ್ಯ ತುಂಬ ಶ್ರದ್ಧೆಯಿಂದ ರಂಗದ ಕೆಲಸ ಮಾಡುತ್ತಾನೆ. ಬೇರೆಡೆ ಕೆಲಸ ಮಾಡಿಕೊಂಡೇ ಇರಬೇಕಾದ ಅನಿವಾರ್ಯ ಇದ್ದರೂ, ಸರ್ಕಾರದಿಂದ ಯಾವುದೇ ಅನುದಾನ ಇಲ್ಲದಿದ್ದರೂ, ಸಂಚಯದ ಸದಸ್ಯರು ನಾಟಕ ಆಡುವುದನ್ನು ಕೈಬಿಡುವುದಿಲ್ಲ. ಗೀಳು ಅನ್ನಿ, ಹುಚ್ಚು ಅನ್ನಿ, ಮಧ್ಯಮ ವರ್ಗದ ಕಷ್ಟ ಕಾರ್ಪಣ್ಯದ ನಡುವೆಯೂ ನಾಟಕ ಆಡುವ ಸಂಚಯದಂಥ ತಂಡಗಳು ಸದ್ದು ಗದ್ದಲವಿಲ್ಲದೆ ಅಭಿರುಚಿ ಬೆಳೆಸುತ್ತಿರುತ್ತವೆ, ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡುತ್ತಿರುತ್ತವೆ. ಸಂಚಯ ರಜತ ವರ್ಷಕ್ಕೆ ಕಾಲಿಡುತ್ತಿರುವುದು ತಂಡವನ್ನು ಬಲ್ಲ ಎಲ್ಲರಿಗೂ ಹೆಮ್ಮೆ, ಸಂತಸ ತರುವ ವಿಷಯ.
ಸಂಚಯ ಬೆಳ್ಳಿ ಹಬ್ಬದ ಸಲುವಾಗಿ ಅಕ್ಟೋಬರ್ ೧೦ರಿಂದ ಮೂರು ದಿವಸದ ಕಾರ್ಯಕ್ರಮವನ್ನು ರಂಗ ಶಂಕರದಲ್ಲಿ ಹಮ್ಮಿಕೊಂಡಿದೆ.
ಲಂಚ್ ಬಾಕ್ಸ್ ಎಂಬ ಇರ್ಫಾನ್ ಖಾನ್ ಸಿನಿಮಾ
ನಾನು ಈ ವಾರ ನೋಡಿದ ಪಿಕ್ಚರ್ ಲಂಚ್ ಬಾಕ್ಸ್. ಈ ಹಿಂದಿ ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದ ಪ್ರತಿನಿಧಿಯಾಗುತ್ತದೆ ಎಂದು ಮಾತಾಡುತ್ತಿದ್ದರು. ಹಾಗಾಗಲಿಲ್ಲ. ಆದರೂ ಇದು ಒಳ್ಳೆಯ ಚಿತ್ರವೇ.
ಇರ್ಫಾನ್ ಖಾನ್ ಇದರ ಮುಖ್ಯ ಪಾತ್ರಧಾರಿ. ಇನ್ನೆರಡು ಮುಖ್ಯ ಪಾತ್ರ ಮಾಡಿರುವವರು ಇರ್ಫಾನ್ನಷ್ಟು ಪ್ರಸಿದ್ಧರಲ್ಲದ ನಿಮ್ರತ್ ಕೌರ್ ಮತ್ತು ನವಾಜುದ್ದೀನ್ ಸಿದ್ದಿಕಿ. ಅದಲು ಬದಲಾಗುವ ಟಿಫನ್ ಡಬ್ಬದಿಂದ ಬೆಳೆಯುವ ಒಂದು ಸಂಬಂಧ ಹೇಗೆ ಬೆಳೆಯುತ್ತದೆ ಎಂದು ತೋರಿಸುವ ಸರಳ ಚಿತ್ರ ಇದು.
ರಿಟೈರ್ಮೆಂಟ್ ವಯಸಿನ ಇರ್ಫಾನ್ ಪಾತ್ರ ಸಾಜನ್ ಫರ್ನಾಂಡಿಸ್ ಮತ್ತು ಸುಮಾರು ಮೂವತ್ತು ವರ್ಷದ ಬೇಸರದ ಮದುವೆಯಲ್ಲಿ ಸೆರೆಯಾಗಿರುವ ಇಳಾ ನಡುವೆ ಪತ್ರವ್ಯವಹಾರ ಸ್ನೇಹಕ್ಕೆ ತಿರುಗಿ ನಂತರ ಪ್ರೇಮಾಂಕುರವಾಗುವ ಸೂಚನೆ ತೋರಿ ಕೊನೆಗೊಳ್ಳುತ್ತದೆ. ಅವರ ಸಂಬಂಧ ‘ದಿ ಡೆತ್ ಆಫ್ ಇವಾನ್ ಇಲ್ಯಿಚ್’ ಎಂಬ ಟಾಲ್ಸ್ಟಾಯ್ ಕಥೆಯಲ್ಲಿನ ಒಂದು ಸಂಬಂಧವನ್ನು ನೆನಪಿಸಿತು.
ಕುರೋಸಾವಾ ಆ ಕಥೆ ಆಧರಿಸಿ ಮಾಡಿರುವ ಚಿತ್ರ ಇಕುರು. ಕುರೋಸಾವಾನ ಮಟ್ಟದ ಚಿತ್ರವಲ್ಲವಾದರೂ ಲಂಚ್ ಬಾಕ್ಸ್ ಚೆನ್ನಾಗಿದೆ. ಮೂರು ಮುಖ್ಯ ನಟರೂ ಪೈಪೋಟಿಗೆ ಬಿದ್ದಂತೆ ಸೂಕ್ಷ್ಮವಾಗಿ ನಟಿಸಿದ್ದಾರೆ. ಸಾಧ್ಯವಾದರೆ ಈ ಚಿತ್ರ ನೋಡಿ.
ಗೋವಿಂದೇಗೌಡರ ಬಗ್ಗೆ ಒಂದು ಪುಸ್ತಕ
ರಾಜಕಾರಿಣಿಗಳ ಬಗ್ಗೆ ಹಗುರವಾಗಿ ಮಾತಾಡುವ ಈ ಕಾಲದಲ್ಲಿ ಕೆಲವೇ ಕೆಲವು ನಾಯಕರ ಬಗ್ಗೆ ಎಲ್ಲರೂ ಗೌರವ ತೋರುತ್ತಾರೆ. ಅಂಥ ಗೌರವಕ್ಕೆ ಪಾತ್ರರಾದವರ ಪೈಕಿ ಪ್ರಮುಖರು ಎಚ್.ಜಿ. ಗೋವಿಂದೇಗೌಡರು. ಈಗ ಅವರಿಗೆ ೮೭ ವರ್ಷ. ಶಿಕ್ಷಣ ಮಂತ್ರಿಗಳಾಗಿದ್ದಾಗ ಅವರು ಮಾಡಿದ ಒಳ್ಳೆಯ ಕೆಲಸವನ್ನು ಇಂದಿಗೂ ಜನ ಸ್ಮರಿಸುತ್ತಾರೆ. ಮುನ್ನುಡಿ ಬರೆದಿರುವ ಯು.ಆರ್. ಅನಂತ ಮೂರ್ತಿಯವರೂ ಅದರ ಪ್ರಸ್ತಾಪ ಮಾಡಿದ್ದಾರೆ.
ಗುಲ್ಬರ್ಗ ಜಿಲ್ಲೆಯಲ್ಲಿ ಶಿಕ್ಷಕರಾಗಿರುವ ಗಿರೀಶ ಜಕಾಪುರೆ ಬರೆದಿರುವ ‘ಮಲೆನಾಡ ಗಾಂಧಿ’ ಗೋವಿಂದೇಗೌಡರ ಬಗ್ಗೆ ಒಂದಷ್ಟು ಮಾಹಿತಿಯನ್ನು ಒಟ್ಟುಗೂಡಿಸಿದೆ. ಬೆಂಗಳೂರಿನ ಅಭಿನವ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ ₨೧೫೦.
ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಗೋವಿಂದೇ ಗೌಡರ ಊರಿಗೆ ಹೋಗಿ ಬಂದ ಅಭಿನವ ರವಿ, ನಾಗತಿಹಳ್ಳಿ ರಮೇಶ್ ಮತ್ತು ಇತರ ಗೆಳೆಯರ ಉತ್ಸಾಹದ ಮಾತುಗಳನ್ನು ಕೇಳಿ ಈ ಪುಟ್ಟ ಟಿಪ್ಪಣಿ ಬರೆಯುತ್ತಿರುವೆ. ಹನ್ನೊಂದು ಗಂಟೆಗೆ ಸರಿಯಾಗಿ ಸುತ್ತಮುತ್ತಲಿನ ಎಸ್ಟೇಟ್ಗಳಿಂದ ಬಂದು ನೆರೆದ ಜನರು ಕ್ಯೂ ನಿಂತು ಪುಸ್ತಕ ಕೊಂಡರಂತೆ. ದುಡ್ಡು ಕೊಟ್ಟು, ಸಾಲಾಗಿ ನಿಂತು ಪುಸ್ತಕ ಕೊಳ್ಳುವ ಮಲೆನಾಡಿನ ಜನರನ್ನು ಬೆಂಗಳೂರಿಂದ ಹೋಗಿದ್ದವರು ಬೆರಗಿನ ಧ್ವನಿಯಲ್ಲಿ ಕೊಂಡಾಡುತ್ತಿದ್ದರು. ಇದು ಖಂಡಿತ ಪುಸ್ತಕ ಪ್ರೀತಿಯಿರಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ಗೋವಿಂದೇಗೌಡರ ಮೇಲಿನ ಪ್ರೀತಿ ಇರಬಹುದೇ?
ರಾಹುಲ್ ಮತ್ತು ಲಾಲೂ ಪಟ್ಟ ಪಾಡು
ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸಿಕೊಳ್ಳಲು ಡ್ರಾಫ್ಟ್ ಮಾಡಿದ ಕಾಯಿದೆಯನ್ನು ನಾನ್ಸೆನ್ಸ್ ಎಂದು ರಾಹುಲ್ ಗಾಂಧಿ ತಳ್ಳಿ ಹಾಕಿದ ನಂತರ ‘ಹಾಗೆಲ್ಲ ಮಾತಾಡಬಾರದು’ ಎಂದು ಸೋನಿಯಾ ಗಾಂಧಿ ಬುದ್ಧಿವಾದ ಹೇಳಿದರಂತೆ. ಮಾರನೆಯ ದಿನ ‘ಅಮ್ಮ ಬೈದರು’ ಎಂದು ರಾಹುಲ್ ವರದಿಗಾರರಿಗೆ ಹೇಳಿಕೊಂಡರು. ಅದೇ ಹೊತ್ತಿಗೆ ಲಾಲು ಪ್ರಸಾದ್ ಯಾದವ್ ಮೇವು (ಇಂಗ್ಲಿಷಲ್ಲಿ ‘ಫಾಡರ್’) ಹಗರಣದಲ್ಲಿ ತಪ್ಪಿತಸ್ಥರೆಂದು ತೀರ್ಪಾಗಿ ಜೈಲ್ ಸೇರಿದರು. ಅದಕ್ಕೆ ರಮೇಶ್ ಶ್ರೀವತ್ಸ ಎಂಬುವರು ಟ್ವೀಟ್ ಮಾಡಿದ್ದರು: ‘ರಾಹುಲ್ಗೆ ಮದರ್ ಪ್ರಾಬ್ಲಮ್ಮು, ಲಾಲೂಗೆ ಫಾಡರ್ ಪ್ರಾಬ್ಲಮ್ಮು!’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.