ಬ್ರಿಟಿಷರ ಕಾಲದಲ್ಲಿ ಬೆಂಗಳೂರಿಗೆ ಬಂದ ಯುರೋಪಿಯನ್ ವೈದ್ಯರು ಇಲ್ಲಿನ ನಾಟಿ ವೈದ್ಯರ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿದ್ದರು ಎಂದು ಸೂಚಿಸುವ ದಾಖಲೆಗಳು ಹಲವು ಇವೆ ಎಂದು ನಿಮ್ಹಾನ್ಸ್ನಲ್ಲಿ ಅಧ್ಯಯನ ಮಾಡುತ್ತಿರುವ ಡಾ. ರಾಧಿಕಾ ಹೇಳುತ್ತಾರೆ. ಯುರೋಪಿಯನ್ ಪದ್ಧತಿ ಇಲ್ಲಿಂದ ಹಲವು ವಿಷಯಗಳನ್ನು ಎರವಲು ಪಡೆಯಿತು ಎಂದು ಅವರು ಹೇಳುತ್ತಾರೆ.
ಪ್ರಪಂಚದ ಮೂಲೆ ಮೂಲೆಯಿಂದ ಬೆಂಗಳೂರಿನ ದೊಡ್ಡ ಆಸ್ಪತ್ರೆಗಳಿಗೆ ರೋಗಿಗಳು ಬಂದು ಚಿಕಿತ್ಸೆ ಪಡೆದು ಮರಳುತ್ತಾರೆ. ಇದನ್ನು ಕಾರ್ಪೊರೇಟ್ ಮಂದಿ ‘ಮೆಡಿಕಲ್ ಟೂರಿಸಂ’ ಎಂದು ಕರೆಯುತ್ತಾರೆ. ‘ಮೆಡಿಕಲ್ ಟೂರಿಸಂ’ ಭರದಿಂದ ನಡೆಯುತ್ತಿರುವ ಭಾರತೀಯ ನಗರಗಳ ಪೈಕಿ ಬೆಂಗಳೂರು ಅಗ್ರ ಪಂಕ್ತಿಯಲ್ಲಿದೆ. ಇಲ್ಲಿನ ಆಸ್ಪತ್ರೆಗಳು ಅಮೇರಿಕ, ಯೂರೋಪ್, ಆಫ್ರಿಕಾದಲ್ಲಿ ಮಾರ್ಕೆಟಿಂಗ್ ಮಾಡಿ ಬಿಸಿನೆಸ್ ಆಕರ್ಷಿಸುತ್ತಿವೆ. ಇತರ ದೇಶಗಳಿಗಿಂತ ಇಲ್ಲಿನ ಆಸ್ಪತ್ರೆಗಳಲ್ಲಿ ಖರ್ಚು ಕಡಿಮೆ. ನಮ್ಮ ವೈದ್ಯರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಹೆಸರಾಗಿದ್ದಾರೆ. ಇಂಥ ಕಾರ್ಪೊರೇಟ್ ಆಸ್ಪತ್ರೆಗಳ ಜೊತೆ ಜೊತೆಗೇ ಬೆಂಗಳೂರಿನಲ್ಲಿ ನಾಟಿ ವೈದ್ಯ ಪಧ್ಧತಿಗಳೂ ಉಳಿದುಕೊಂಡಿವೆ. ಇಂದಿಗೂ ನೂರಾರು ಜನರನ್ನು ಗುಣ ಪಡಿಸುತ್ತಿವೆ.
ಬ್ರಿಟಿಷರ ಕಾಲದಲ್ಲಿ ಬೆಂಗಳೂರಿಗೆ ಬಂದ ಯುರೋಪಿಯನ್ ವೈದ್ಯರು ಇಲ್ಲಿನ ನಾಟಿ ವೈದ್ಯರ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿದ್ದರು ಎಂದು ಸೂಚಿಸುವ ದಾಖಲೆಗಳು ಹಲವು ಇವೆ ಎಂದು ನಿಮ್ಹಾನ್ಸ್ನಲ್ಲಿ ಅಧ್ಯಯನ ಮಾಡುತ್ತಿರುವ ಡಾ. ರಾಧಿಕಾ ಹೇಳುತ್ತಾರೆ. ಯುರೋಪಿಯನ್ ಪದ್ಧತಿ ಇಲ್ಲಿಂದ ಹಲವು ವಿಷಯಗಳನ್ನು ಎರವಲು ಪಡೆಯಿತು ಎಂದು ಅವರು ಹೇಳುತ್ತಾರೆ.
ಕಾರ್ಪೊರೇಟ್ ಆಸ್ಪತ್ರೆಗಳು, ಅಲ್ಲಿನ ಟೆಸ್ಟ್, ಸ್ಕ್ಯಾನ್ ಬರೆಯುವ ಕಮಿಷನ್ ದಂಧೆ, ಇವೆಲ್ಲವನ್ನೂ ನೋಡಿದ ಹಲವರಿಗೆ ನಾಟಿ ವೈದ್ಯದಲ್ಲಿ ಮತ್ತೆ ಕುತೂಹಲ ಕೆರಳಿದೆ. ಕಳೆದ ಎರಡು ದಶಕದಿಂದ ಬೆಂಗಳೂರಿನ ನಾಟಿ ವೈದ್ಯರ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಎಷ್ಟೋ ಬಾರಿ ಜನರು ಅವರ ಬಗ್ಗೆ ಉತ್ಪ್ರೇಕ್ಷೆಯ, ಸ್ವಂತ ಪ್ರಮಾಣವಿಲ್ಲದ ಮಾತುಗಳನ್ನು ಆಡುತ್ತಿರುತ್ತಾರೆ. ಇಂಥವರು ಕ್ಯಾನ್ಸರ್ ಗುಣ ಮಾಡಿಬಿಟ್ಟರು, ಅಂಥವರು ಕೊಡುವ ಔಷಧಿ ತೆಗೆಂದುಕೊಂಡರೆ ಡಯಾಬಿಟಿಸ್ ಮಾಯವಾಗಿ ಹೋಗುತ್ತದೆ ಎಂದು ಜನ ಹೇಳುವುದನ್ನು ಕೇಳಿರುತ್ತೀರಿ. ಇಂಥ ವಿಷಯಗಳು ನಿಜವಾಗಿದ್ದರೆ ಆ ವೈದ್ಯರಿಗೆ ನೊಬೆಲ್ ಪ್ರಶಸ್ತಿ ಬಂದಿರುತ್ತಿತ್ತಲ್ಲವೇ ಎಂದು ನೀವು ಮನಸಿನಲ್ಲೇ ಅಂದುಕೊಂಡಿರುವ ಸಾಧ್ಯತೆಯೂ ಇದೆ!
ನಾಟಿ ವೈದ್ಯರಲ್ಲಿ ಯಾರು ಅಸಲಿ, ಯಾರು ನಕಲಿ ಎಂದು ಹೇಳುವುದು ದೊಡ್ಡ ಸವಾಲು. ತಮಿಳು ನಾಡಿನಿಂದ ಬೆಂಗಳೂರಿನಲ್ಲಿ ಪ್ರತ್ಯಕ್ಷವಾದ ಒಬ್ಬ ವೈದ್ಯ ಅದೇನೋ ಸೊಪ್ಪು ಮಾರುತ್ತಿದ್ದ. ತಾನೊಬ್ಬ ಹಕೀಮ (ಮುಸ್ಲಿಮರ ಯುನಾನಿ ಪದ್ಧತಿ ಪಾಲಿಸುವವನು) ಎಂದು ಹೇಳಿಕೊಳ್ಳುತ್ತಿದ್ದ. ಅವನು ಕೊಡುವ ಸೊಪ್ಪಿನಿಂದ ಬ್ಲಡ್ ಶುಗರ್ ಕಡಿಮೆ ಆಗುತ್ತದೆ ಎಂದು ಜಾಹೀರಾತು ಕೊಡುತ್ತಿದ್ದ. ಕಾನೂನಿನ ಪ್ರಕಾರ ವೈದ್ಯರು ಜಾಹೀರಾತು ಕೊಡುವುದು ನಿಷಿದ್ಧ. ಅದಿರಲಿ. ಅವನನ್ನು ಕಂಡವರಿಗೆ ನಿರಾಸೆ ಕಾದಿರುತ್ತಿತ್ತು. ಒಬ್ಬ ವೈದ್ಯನಿಗೆ ಇರಬೇಕಾದ ಯಾವ ಗುಣವೂ ಅವನಲ್ಲಿ ಇರಲಿಲ್ಲ. ಕಾಯುತ್ತಿದ್ದ ಒಬ್ಬೊಬ್ಬರನ್ನೇ ಕರೆದು ಸೊಪ್ಪಿನ ಪ್ಯಾಕೆಟ್ ಕೈಗಿಟ್ಟು, ದುಡ್ಡು ತೆಗೆದುಕೊಂಡು, ಮುಂದಿನವರು ಬರುವಂತೆ ಕಾಲಿಂಗ್ ಬೆಲ್ ಒತ್ತುತ್ತಿದ್ದ. ರೋಗಿಗಳಿಗೆ ಏನಾಗಿರಬಹುದು ಎಂದು ತಿಳಿದುಕೊಳ್ಳುವ ತಾಳ್ಮೆಯೇ ಇಲ್ಲದ ಅವನು ಅದೆಂಥ ವೈದ್ಯ ಎಂದು ಕಂಡ ಕ್ಷಣವೇ ರೋಗಿಗಳಿಗೆ ಬೇಸರವಾಗುತ್ತಿತ್ತು. ಆದರೂ ಅವನ ಔಷಧಿಯಲ್ಲಿ ಏನೋ ಪವಾಡ ಅಡಗಿರಬಹುದು ಎಂಬ ಆಶಾ ಭಾವನೆಯಿಂದ ಅವನ ಅಂಗಡಿಯಲ್ಲಿ ಜನ ನೆರೆದಿರುತ್ತಿದ್ದರು. ಒಂದೆರಡು ವರ್ಷದ ನಂತರ ಅವನು ಬೆಂಗಳೂರಿಗೆ ಬರುವುದು, ಸೊಪ್ಪು ಮಾರುವುದು ನಿಂತು ಹೊಯಿತು.
ಬೆಂಗಳೂರಿನಲ್ಲಿ ಆಸ್ತಮ ತೊಂದರೆ ಬಹಳ ಜನರಿಗಿದೆ. ಒಬ್ಬ ವೈದ್ಯ ಈ ಖಾಯಿಲೆಗೆ ಒಳ್ಳೆಯ ನಾಟಿ ಔಷಧಿ ಕೊಡುತ್ತಾನೆ ಎಂದು ಹೆಸರು ಮಾಡಿದ್ದ. ಗಿಡ ಮೂಲಿಕೆ ಅರೆದು ತಯಾರಿಸಿದಂತೆ ಕಾಣುತ್ತಿದ್ದ ಅವನ ಔಷಧಿ ಹಸಿರಾಗಿ, ಕಹಿಯಾಗಿರುತ್ತಿತ್ತು. ಕೆಲವರಿಗೆ ಅದನ್ನು ಕುಡಿದು ವೀಜಿಂಗ್ ಕಡಿಮೆಯಾಗುತ್ತಿತ್ತಂತೆ. ಕೆಲದಿನಗಳ ನಂತರ ಅದರಲ್ಲಿ ಸ್ಟಿರಾಯ್ದ್ಸ್ ಬೆರೆಸುತ್ತಿದ್ದ ಎಂದು ಗುಲ್ಲಾಯಿತು. ತೀರ ಅಗತ್ಯ ಬೀಳುವವರೆಗೂ ಅಲೋಪಥಿ ವೈದ್ಯರು ಸ್ಟಿರಾಯ್ದ್ಸ್ ಕೊಡುವುದಿಲ್ಲ. ಅದರಿಂದ ಅಡ್ಡ ಪರಿಣಾಮಗಳು ಹೆಚ್ಚು ಎಂದು ಹೆದರುತ್ತಾರೆ. ಇಂಥ ಅಪಾಯಕಾರಿ ಔಷಧಿಯನ್ನು ಸಲೀಸಾಗಿ ಬಂದಬಂದವರಿಗೆಲ್ಲ ಕೊಡುತ್ತಿದ್ದ ಆ ವೈದ್ಯನ ಸದ್ದು ನಿಧಾನವಾಗಿ ಅಡಗಿಹೋಯಿತು.
ಹೀಗೆಯೇ ಮತ್ತೊಬ್ಬ ವೈದ್ಯ ಬೆನ್ನಿನ ಮೇಲೆ ಅಲ್ಲಿ ಇಲ್ಲಿ ಒತ್ತಿ, ಸಿಂಗಪುರ ವಿಧಾನದಲ್ಲಿ ನೋವು ನಿವಾರಿಸುತ್ತೇನೆ ಎಂದು ಹೇಳಿಕೊಳ್ಳುತ್ತಾರೆ. ಬೆನ್ನು ನೋವಿನಿಂದ ನರಳುತ್ತಿದ್ದ ನಾನು ಬಲ್ಲ ಒಬ್ಬರು ಆ ವೈದ್ಯರ ಬಳಿ ಒಂದು ತಿಂಗಳು ತಪ್ಪದೆ ಹೋದರೂ ಏನೇ ಸುಧಾರಣೆ ಕಾಣಲಿಲ್ಲ. ಜೋಬು ಹಗುರವಾಗಿತ್ತು ಅಷ್ಟೇ.
ಇಂಥವರ ನಡುವೆ ಕೆಲವು ಅಸಲಿ ನಾಟಿ ವೈದ್ಯರು ತಲೆ ತಲೆಮಾರಿನಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇವರನ್ನು ಹುಡುಕಿ ಮಾತಾಡಿಸಿ ಅವರ ವೈದ್ಯಕೀಯದ ಬಗ್ಗೆ ತಿಳಿಯಲು ಪತ್ರಕರ್ತ- ಗೆಳೆಯ ಬಸು ಮೇಗಳಕೇರಿ ಕೆಲವು ದಿನ ಓಡಾಡಿ ಒಂದಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಮೂಳೆ ತೊಂದರೆಗಳಿಗೆ ಪುತ್ತೂರು ಕಟ್ಟು ಹಾಕುವ ಪದ್ಧತಿ ಬೆಂಗಳೂರಿನಲ್ಲಿ ಹಲವು ದಶಕದಿಂದ ಇದೆ. ಆಂಧ್ರ ಮೂಲದ ಪುತ್ತೂರು ವೈದ್ಯರು ಸೊಪ್ಪಿನ ಔಷಧಿಯನ್ನು ಹಚ್ಚಿ, ಫ್ರಾಕ್ಚರ್ಗಳನ್ನು ಗುಣಪಡಿಸುವುದಕ್ಕೆ ಖ್ಯಾತಿ ಪಡೆದಿದ್ದಾರೆ. ಈ ಕುಟುಂಬದವರ ಕ್ಲಿನಿಕ್ಗಳು ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಇವೆ.
ಕಾಯಂಗಡಿ ಪಾಪಣ್ಣ ಅನ್ನುವ ಪೈಲ್ವಾನ್ ಬಗ್ಗೆ ಈಚಿನ ಬೆಂಗಳೂರಿಗೆ ಅಷ್ಟು ಪರಿಚಯವಿಲ್ಲ. ಇವರು ಅಕ್ಕಿಪೇಟೆಯ ತವಕ್ಕಲ್ ಮಸ್ತಾನ್ ದರ್ಗಾದ ಹತ್ತಿರ ನಡೆಸುತ್ತಿದ್ದ ಚಿಕಿತ್ಸಾಲಯ ತುಂಬಾ ಹೆಸರು ಮಾಡಿತ್ತು. ೧೫೦ ವರ್ಷದ ಹಿಂದಿನ ಮಾತು. ಪಾಪಣ್ಣ ಕುಸ್ತಿ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ತೆಂಗಿನ ಕಾಯಿ ವ್ಯಪಾರವಿದ್ದಿದ್ದರಿಂದ ಅವರಿಗೆ ಕಾಯಂಗಡಿ ಪಾಪಣ್ಣ ಎಂದು ಹೆಸರು. ಪೈಲ್ವಾನರಿಂದ ಕೆಲವು ಮಾಲಿಶ್ ತಂತ್ರಗಳನ್ನು ಅವರು ಕಲಿತಿದ್ದರು. ನೋವಿಗೆ ಎಣ್ಣೆ ತಯಾರಿಸುವುದನ್ನೂ ಕರಗತ ಮಾಡಿಕೊಂಡಿದ್ದರು. ಈಗ ಅವರ ಕುಟುಂಬದ ಕೆಲವರು ಅವರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಕ್ಕಿಪೇಟೆಯಲ್ಲದೆ ವಿಶ್ವೇಶ್ವರಪುರ, ರಾಜಾಜಿನಗರದಲ್ಲಿ ಕೂಡ ಅವರ ಶಾಖೆಗಳು ಇವೆ. ಉಳುಕು, ನೋವು, ಫ್ರಾಕ್ಚರ್, ಸ್ಪಾಂಡಿಲೈಟಿಸ್, ಸ್ಲಿಪ್ಡಿಸ್ಕ್, ಸಯಾಟಿಕದಂತಹ ತೊಂದರೆಗಳಿಗೆ ಚಿಕಿತ್ಸೆ ನೀಡುತ್ತಾರೆ. ಕುಸ್ತಿಪಟುಗಳ ಈ ನಾಟಿ ವೈದ್ಯ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಇವರ ಶುಲ್ಕ ರೂ ೧೫೦ ರಿಂದ ರೂ ೫೦೦ ಆಗಿರುತ್ತದೆ. ಫೋನ್: ೨೨೮೭೫೧೫೬, ೯೮೪೫೪ ೨೮೭೧೯.
ಇಂಥದೇ ಸಮಸ್ಯೆಗಳಿಗೆ ನಾಣ್ಯವೊಂದನ್ನು ಬಳಸಿ ನಾಟಿ ವೈದ್ಯ ಮಾಡುವ ಒಂದು ಕುಟುಂಬ ನೆಲಮಂಗಲದ ಹತ್ತಿರ ಇದೆ. ಗಂಗಭೈರಯ್ಯ ಎಂಬ ಹಿರಿಯ ಬೆನ್ನಿಗೆ ಕಿವಿಯಿಟ್ಟು ತೊಂದರೆ ಏನಿರಬಹುದು ಎಂದು ಗುರುತಿಸುತ್ತಾರೆ. ನಂತರ ಕೈ ಕಾಲನ್ನು ಎಳೆದು, ಜಗ್ಗಿ, ಬೆನ್ನಿನ ಒಂದು ಜಾಗ ಗುರುತಿಸಿ ಅಲ್ಲಿ ಒಂದು ಕಾಯಿನ್ ಇತ್ತು ಪ್ಲಾಸ್ಟರ್ ಹಚ್ಚುತ್ತಾರೆ. ಆ ಕಾಯಿನ್ ಆಕ್ಯುಪ್ರೆಷರ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಅಧುನಿಕ ವೈದ್ಯರ ಓಹೆ. ತುಂಬಾ ದೂರದ ಊರುಗಳಿಂದ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಾರೆ. ಗಂಗಭೈರಯ್ಯ ಅವರ ಮಗ ಶಿವಣ್ಣ ಕೂಡ ಅಲ್ಲೇ ಹತ್ತಿರದಲ್ಲಿ ಕ್ಲಿನಿಕ್ ನಡೆಸಿಕೊಂಡಿದ್ದಾರೆ. ಬೆಂಗಳೂರಿಂದ ಮುಂಬೈಗೆ ಹೋಗುವ ಹೈವೇ ಮೇಲೆ ಒಂದರ್ಧ ಘಂಟೆ ಹೋದರೆ ಇವರ ಕ್ಲಿನಿಕ್ ಸಿಗುತ್ತದೆ. ಅವರ ಫೋನ್ ನಂಬರ್ ೯೪೪೮೨ ೬೬೮೫೯.
ಮರ್ಮ ಶೇಖರ್ ಎಂಬ ಮತ್ತೊಬ್ಬರು ಬಳೆಪೇಟೆಯಲ್ಲಿದ್ದಾರೆ. ಅವರಿಗೆ ಹೆಚ್ಚು ರೋಗಿಗಳನ್ನು ನೋಡಲು ಆಗುವುದಿಲ್ಲ. ‘ನನಗಿರುವುದು ಈ ಎರಡೇ ಬೆರಳು, ನಾನೇನು ಮಾಡಲಿ’ ಎನ್ನುತ್ತಾರೆ ಅವರು. ಅವರು ಯೋಗಿಯೋಬ್ಬರಿಂದ ಕಾಡಿಗೆ ಹೋಗಿ ವಿದ್ಯೆಯನ್ನು ಕಲಿತರಂತೆ. ಈಗ ಅವರಿಗೆ ೫೪ ವರ್ಷ. ತಾವು ಕಷ್ಟ ಪಟ್ಟು, ಗಡ್ಡೆ ಗೆಣಸು ತಿನ್ನುತ್ತಾ ಕಲಿತ ವಿದ್ಯೆಯನ್ನು ಯಾರಿಗೂ ಕಲಿಸಿಕೊಡಲಾಗಿಲ್ಲ ಎಂಬ ಕೊರಗು ಅವರಿಗೆ. ರಣರಂಗದಲ್ಲಿ ಗಾಯಗೊಂಡ ಯೋಧರನ್ನು ಬದುಕಿಸಿ ಅತಿ ಶೀಘ್ರವೇ ಅವರನ್ನು ಹೋರಾಡಲು ತಯಾರು ಮಾಡುತ್ತಿದ ಪದ್ಧತಿಯಂತೆ ಇದು. ರಂಗನಾಥಸ್ವಾಮಿ ದೇವಸ್ಥಾನದ ಹತ್ತಿರ ಇವರು ರೋಗಿಗಳನ್ನು ನೋಡುತ್ತಾರೆ. ತಮ್ಮ ಫೋನ್ ನಂಬರ್ ಕೊಡಲು ಹಿಂದೇಟು ಹಾಕುವ ಶೇಖರ್, ಹುಡುಕಿಕೊಂಡು ಹೋದವರನ್ನು ನೋಡದೆ ಹಿಂತಿರುಗಿಸುವುದಿಲ್ಲ. ಸಂಜೆ ಒಂದೆರಡು ಗಂಟೆ ಮಾತ್ರ ಶೇಖರ್ ರೋಗಿಗಳನ್ನು ನೋಡುತ್ತಾರೆ.
ಇಂಥ ವೈದ್ಯರಲ್ಲಿ ಹೋದವರಿಗೆಲ್ಲ ಗುಣ ಆಗುತ್ತದೆಯೇ? ಖಂಡಿತ ಇಲ್ಲ. ಆದರೆ ಆಧುನಿಕ ಕಾರ್ಪೊರೇಟ್ ಆಸ್ಪತ್ರೆಗಳ ಬಗ್ಗೆ ಈ ಪ್ರಶ್ನೆ ಕೇಳಿದರೆ, ಇದೇ ರೀತಿಯ ಉತ್ತರ ದೊರೆಯುತ್ತದೆ. ನಾಟಿ ವೈದ್ಯರ ಬಳಿ ಹೋಗುವಾಗ ಮೂಢ ಶ್ರದ್ಧೆ ಇಲ್ಲದೆ, ತೆರೆದ ಮನಸಿನಿಂದ ಹೋಗುವುದು ಕ್ಷೇಮ. ಇಷ್ಟರ ಮೇಲೆ ಒಳ್ಳೆ ವೈದ್ಯ, ಗುರು, ಸತಿ ಅಥವಾ ಪತಿ ಸಿಗುವುದು ಅದೃಷ್ಟದ ವಿಷಯ ಅಲ್ಲವೇ?
ಮ್ಯಾಂಡೊಲಿನ್ ಪ್ರಸಾದರ ಹೊಸ ಯೋಜನೆ
ಕನ್ನಡ ಸುಗಮ ಸಂಗೀತದ ಕೇಳುಗರಿಗೆ ಎನ್.ಎಸ್. ಪ್ರಸಾದ್ ಪರಿಚಯವಿಲ್ಲದೆ ಇರುವುದಿಲ್ಲ. ಮೈಸೂರು ಅನಂತಸ್ವಾಮಿ ಅವರ ಜೊತೆ ಹಲವು ವರ್ಷ ಇದ್ದ ಪ್ರಸಾದ್ ನಂತರ ಸಿ. ಅಶ್ವಥ್ ಅವರ ಕಾರ್ಯಕ್ರಮಗಳಿಗೆ ಮ್ಯಾಂಡೊಲಿನ್ ನುಡಿಸುತ್ತಿದ್ದರು. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತದ ಬಗ್ಗೆ ತುಂಬ ಪ್ಯಾಷನೇಟ್ ಆಗಿ ಮಾತಾಡುವ ಪ್ರಸಾದ್ ಮೂಲತಃ ಮೈಸೂರಿನವರು. ಸ್ವಲ್ಪ ಸಿಡುಕ ಎನಿಸಿಕೊಳ್ಳುವ ಪ್ರಸಾದ್ ಆತ್ಮೀಯರು ಬಲ್ಲಂತೆ ಸ್ನೇಹಜೀವಿ.
ಸುಮಾರು ಮೂರು ದಶಕದಿಂದ, ಅಂದರೆ ಸುಗಮಕ್ಕೆ ಪ್ರಾಮುಖ್ಯತೆ ಬಂದಾಗಿನಿಂದ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಿರಿಯ ಕಿರಿಯ ಕಲಾವಿದರ ಧ್ವನಿ ಮುದ್ರಿಕೆಗಳಿಗೆ ಮ್ಯಾಂಡೊಲಿನ್ ನುಡಿಸಿದ್ದಾರೆ. ಆಕಾಶವಾಣಿಗೆ ಭಾವಗೀತೆಗಳನ್ನು ರಾಗಸಂಯೋಜನೆ ಮಾಡಿಕೊಡುತ್ತಿದ್ದಾರೆ.
ಮ್ಯಾಂಡೊಲಿನ್ ಇಟಲಿ ದೇಶದ ವಾದ್ಯ. ಅದನ್ನು ಭಾರತೀಯ ಸಂಗೀತದಲ್ಲಿ ಸಿನಿಮಾ ಸಂಗೀತಗಾರರು ಹೆಚ್ಚಾಗಿ ಬಳಸಿಕೊಂಡಿದ್ದಾರೆ. ತೆಳು ದನಿಯ, ತುಂಡು ಸ್ವರಗಳನ್ನು ಹೊಮ್ಮಿಸುವ ಮ್ಯಾಂಡೊಲಿನ್ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪಿಟೀಲಿನಷ್ಟು ಸಲೀಸಾಗಿ ಒದಗಿಬರುವುದಿಲ್ಲ. ಸಿತಾರ್, ಸರೋದ್, ವೀಣೆಯಲ್ಲಿ ನುಡಿದಂತೆ ಮ್ಯಾಂಡೊಲಿನ್ನಲ್ಲಿ ಮೀಂಡ್, ಗಮಕ ನುಡಿಯುವುದಿಲ್ಲ. ಇಂಥ ಮಿತಿಗಳಿದ್ದರೂ ಮ್ಯಾಂಡೊಲಿನ್ನನ್ನು ನಮ್ಮ ಶಾಸ್ತ್ರೀಯ ಸಂಗೀತಕ್ಕೆ ಪಳಗಿಸಿಕೊಂದವರು ಹಲವರಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಯು. ಶ್ರೀನಿವಾಸ್ ಹೆಸರು ಪ್ರಸಿದ್ಧ. ನಿಸಾರ್ ಅಹಮದ್, ಸಜ್ಜದ್ ಹುಸ್ಸೈನ್‌ರಂಥವರು ಮ್ಯಾಂಡೊಲಿನ್ನಲ್ಲಿ ಹಿಂದುಸ್ತಾನಿ ರಾಗದಾರಿ ಸಂಗೀತವನ್ನು ಲೀಲಾಜಾಲವಾಗಿ ನುಡಿಸಿದ್ದಾರೆ.
ಇವರಂಥ ಸಂಗೀತದ ಮಹಾನ್ ಕಲಾವಿದರ ಬಗ್ಗೆ ಅಧ್ಯಯನ ಮಾಡ ಹೋರಟ ಪ್ರಸಾದ್ ಹಲವು ಸ್ವಾರಸ್ಯದ ವಿಷಯಗಳನ್ನು ಹೆಕ್ಕಿ ತಂದಿದ್ದಾರೆ. ಈ ಉದಾಹರಣೆ ನೋಡಿ. ವೈರಂ ಎಂಬ ಮ್ಯಾಂಡೊಲಿನ್ ಕಲಾವಿದ ಮದರಾಸಿನ ಸ್ಟುಡಿಯೋಗಳಲ್ಲಿ ತುಂಬ ಬೇಡಿಕೆಯಲ್ಲಿದ್ದರಂತೆ. ಈತ ಮ್ಯಾಂಡೊಲಿನ್ ಹಿಡಿದು ಒಂದು ಚಿತ್ರಕ್ಕೆ ಬೇಕಾದ ಎಲ್ಲ ಸೌಂಡ್ ಎಫೆಕ್ಟ್ಗಳನ್ನು (ಉದಾಹರಣೆಗೆ, ಮಳೆ, ಗುಡುಗಿನ ಶಬ್ದ) ಅದರಿಂದ ಹೊಮ್ಮಿಸಿ, ಜೊತೆಗೆ ಒಂದಷ್ಟು ಹಿನ್ನೆಲೆ ಸಂಗೀತದ ಕೆಲಸವನ್ನೂ ಮುಗಿಸಿಬಿಡುತ್ತಿದ್ದರಂತೆ.
ಪ್ರಸಾದ್ ಹೆಚ್ಚಾಗಿ ಸೆಷನ್ಸ್ ಸಂಗೀತಗಾರರಾಗಿ, ಸುಗಮ ಸಂಗೀತದ ಪಕ್ಕವಾದ್ಯಗಾರರಾಗಿ ಕೆಲಸ ಮಾಡಿದ್ದಾರೆ. ಈಚಿನ ವರ್ಷಗಳಲ್ಲಿ ಕೆಲವು ಸ್ವತಂತ್ರ ಆಲ್ಬಮ್ಗಳನ್ನು ಹೊರತಂದಿದ್ದಾರೆ. ಸ್ಟುಡಿಯೋ ಸೆಷನ್ಸ್ ಕ್ಷೇತ್ರದ ಸವಾಲುಗಳು ಶಾಸ್ತ್ರೀಯ ಸಂಗೀತದ ಸವಾಲುಗಳಿಗಿಂತ ಭಿನ್ನ. ಮನೋಧರ್ಮಕ್ಕಿಂತ ಕರಾರುವಕ್ಕಾದ ಸ್ವರಗಳನ್ನು ಇತರ ವಾದ್ಯಗಾರರೊಂದಿಗೆ ನುಡಿಸುವ ಶಿಸ್ತನ್ನು ಸ್ಟುಡಿಯೋ ಸೆಷನ್ಸ್ ಸಂಗೀತಗಾರರು ಬೆಳೆಸಿಕೊಂಡಿರುತ್ತಾರೆ. ಚಿನ್ನಾರಿಮುತ್ತದಂಥ ಚಿತ್ರಗಳಿಗೆ ಪ್ರಸಾದ್ ವಾದ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಕಸುಬಿನಲ್ಲಿ ಅಡಗಿರುವ ತಾಂತ್ರಿಕ ವಿಷಯಗಳು ಶಾಸ್ತ್ರೀಯ ಸಂಗೇತಗಾರಿಗೆ ಅಷ್ಟಾಗಿ ಪರಿಚಯವಿರುವುದಿಲ್ಲ. ಸಂಗೀತದ ಆಸ್ವಾದನೆಯ ಜೊತೆಜೊತೆಗೆ ಇಂಥಹ ತಾಂತ್ರಿಕ ಅಂಶಗಳನ್ನು ಕೂಡ ಪ್ರಸಾದ್ ಶಿಷ್ಯರಿಗೆ ಹೇಳಿಕೊಡುತ್ತಿದ್ದಾರೆ.
ಸುಗಮ ಸಂಗೀತ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಪ್ರಸಾದ್ ಬನಶಂಕರಿಯಲ್ಲಿ ತಮ್ಮದೇ ಸಂಗೀತದ ಶಾಲೆ ನಡೆಸುತ್ತಿದ್ದಾರೆ. ರಾಗಶ್ರೀ ಎಂಬ ಹೆಸರಿನ ಶಾಲೆ ಈಗ ಅಕಾಡೆಮಿ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಮ್ಯಾಂಡೊಲಿನ್ ಇತಿಹಾಸವನ್ನು ಸಂಗ್ರಹಿಸಿ ಒಂದು ಪುಟ್ಟ ಪ್ರದರ್ಶನವನ್ನು ಸೆಪ್ಟೆಂಬರ್ ೬ಕ್ಕೆ ಈ ಸಂಸ್ಥೆ ಏರ್ಪಡಿಸಿದೆ.
ಹನುಮಂತ ನಗರದ ಕೆ.ಎಚ್. ಕಾಲಾಸೌಧದಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಆಕರ್ಷಣೆಯೆಂದರೆ ಕೊಲ್ಕತ್ತಾದಿಂದ ಬರುವ ಮ್ಯಾಂಡೊಲಿನ್ ವಾದಕ ಸ್ನೇಹಶಿಶ್ ಮುಜುಂದಾರ್ ಅವರ ಸಂಗೀತ ಪ್ರದರ್ಶನ ಸಂಜೆ ೫ಕ್ಕೆ ಉದ್ಘಾಟನೆಯಾಗುತ್ತದೆ. ಸಂಗೀತ ಕಛೇರಿ ಶುರುವಾಗುವುದು ೬ಕ್ಕೆ.
ರಾಗಶ್ರೀ ಸಂಸ್ಥೆಯ ಫೋನ್: 94482 70533, 2679 3533.
ಕಾಂಗ್ರೆಸ್ ವಕ್ತಾರನ ಒತ್ತಾಸೆ
ಪತ್ರಕರ್ತರಿಗೆ ಲೈಸನ್ಸ್ ಕೊಡುವ ಕ್ರಮ ಇದ್ದರೆ ಒಳ್ಳೆಯದು ಎಂದು ಮನೀಶ್ ತಿವಾರಿ ಮೊನ್ನೆ ಹೇಳಿದ್ದಾರೆ. ಹಗರಣಗಳಿಂದ ತತ್ತರಿಸುತ್ತಿರುವ ಅವರ ಸರ್ಕಾರ ಹೀಗೆ ಯೋಚಿಸುತ್ತಿರುವುದರ ಹಿಂದೆ ಏನಿರಬಹುದು? ಎಲ್ಲೆಡೆ ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ಆದರೆ ಲೈಸನ್ಸ್ ಅಂತ ಬಾಯಿ ತಪ್ಪಿ ಹೇಳಿದ್ದಾರೆ, ಪಾಪ. ತಿವಾರಿ ಮನಸ್ಸಿನಲ್ಲಿ ಇರುವುದು ಏನೆಂದೇನೆಂದರೆ: ಪತ್ರಕರ್ತರಿಗೆ ಸೈಲೆನ್ಸ್ ಇದ್ದರೆ ಒಳ್ಳೆಯದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.