ಮೆಕ್ಯಾನಿಕ್ ಅಂಗಡಿಯಲ್ಲಿ ನಿಮಗೆ ಬೇಕಾದ ಬಿಡಿ ಭಾಗಗಳನ್ನು ಕಡಿಮೆ ಬೆಲೆಗೆ ತಂದು ಕೊಡುವ ಭರವಸೆ ಕೊಟ್ಟರೆ ಸ್ವಲ್ಪ ಹುಷಾರಾಗಿರಿ. ನಿಮ್ಮ ವಾಹನಕ್ಕೆ ಕಳ್ಳ ಮಾಲು ಅಳವಡಿಸುವುದಲ್ಲದೆ, ಆ ಹುಡುಗರು ಏನೇನು ಅನಾಹುತ ಮಾಡಿಕೊಳ್ಳುತ್ತಾರೋ ಯಾರಿಗೆ ಗೊತ್ತು.
ಗೆಳೆಯ ವಿನೀತ್ ಭಟ್ ಅವರಿಗಾದ ಅನುಭವ ಇದು. ಅವರು ವಾಸವಿರುವುದು ಕನಕಪುರ ರಸ್ತೆ ಬದಿಯ ೨೦ ಎಕರೆ ವಿಸ್ತಾರದ ಒಂದು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ. ಅಲ್ಲಿ ಪಾರ್ಕ್ ಮಾಡಿದ್ದ ಅವರ ಜೆನ್ ಕಾರಿನ ಹಿಂದಿನ ಗಾಜನ್ನು ಯಾರೋ ಒಡೆದು ಹಾಕಿದ್ದರು.
ಅಲಾರ್ಮ್ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಹೊರಗೆ ಹೋಗಿದ್ದ ವಿನೀತ್ ಆ ಸಮಯಕ್ಕೆ ಬಂದರು. ಅವರು ವಕೀಲರು. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಚುರುಕಾಗಿ ಯೋಚಿಸುವವರು. ಕಾರ್ ಕದಿಯಲು ಯಾರೋ ಹೊಂಚು ಹಾಕಿದ್ದಾರೆ ಎನ್ನುವ ತೀರ್ಮಾನಕ್ಕೆ ಬಂದರು. ಕಳ್ಳ ಅಲ್ಲೇ ಎಲ್ಲೋ ಅಡಗಿರಬಹುದೆಂದು ಊಹಿಸಿ ಕೂಡಲೇ ಸೆಕ್ಯುರಿಟಿ ಆಫೀಸರ್‌ಗೆ ಫೋನ್ ಮಾಡಿದರು. ಅಲ್ಲಿ ಕೆಲಸ ಮಾಡುವ ಸುಮಾರು ೫೦ ಗಾರ್ಡ್‌ಗಳನ್ನು ಕರೆಸಿ, ಗೇಟ್ ಮುಚ್ಚಿಸಿ, ಒಳಬಂದವರೆಲ್ಲರ ವಿಷಯ ವಿಚಾರಿಸತೊಡಗಿದರು. ಲಾಗ್ ಪುಸ್ತಕ ತೆಗೆಸಿ ಕಣ್ಣು ಹಾಯಿಸಿದರು.
ಇದನ್ನೆಲ್ಲ ಯಾವುದೋ ಮೂಲೆಯಿಂದ ನೋಡುತ್ತಿದ್ದ ಕಳ್ಳ ತನ್ನ ಮಾರುತಿ ೮೦೦ ಕಾರ್ ಸ್ಟಾರ್ಟ್ ಮಾಡಿಕೊಂಡು ಗೇಟ್‌ನತ್ತ ಹೊರಟ. ಕಾವಲುಗಾರರು ಚಿಲಕ ಹಾಕಿರಲಿಲ್ಲ. ರಭಸದಿಂದ ನುಗ್ಗಿ, ಡಿಕ್ಕಿ ಹೊಡೆದು, ಗೇಟ್ ತೆರೆದುಕೊಳ್ಳುತ್ತಿದಂತೆ ತಪ್ಪಿಸಿಕೊಂಡು ಹೋದ. (ಚಿಲಕ ಗಟ್ಟಿಯಾಗಿ ಹಾಕಿದ್ದಿದ್ದರೆ ಪರಾರಿಯಾಗುತ್ತಿದ್ದವನ ಪ್ರಾಣ ಹೋಗುವ ಸಂಭವ ಕೂಡ ಇತ್ತು).
ಕಾವಲುಗಾರರಲ್ಲಿ ಒಬ್ಬ ಆಗಂತುಕ ಯಾರು ಎಂದು ಗುರುತು ಹಿಡಿದ. ಸರ್ವಿಸ್ ಮಾಡಲು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗೆ ಗುತ್ತಿಗೆಯಾಗಿರುವ ಸಂಸ್ಥೆಯ ಕೆಲಸಗಾರ ಅವನು. ಫೋಟೊ ಪತ್ತೆ ಹಚ್ಚಿ ಅವನನ್ನು ಬೆಳಗಾಗುವುದರೊಳಗೆ ಹಿಡಿದರು. ನೋಡಿದರೆ ಅವನು ೧೯ ವರ್ಷದ ಹುಡುಗ. ಥಳಿಸಲು ತಯಾರಾಗಿದ್ದ ಪೊಲೀಸರನ್ನು ವಿನೀತ್ ತಡೆದು ಕಾನೂನಿನ ಪ್ರಕಾರ ಕೇಸ್ ಹಾಕಿಸಿದರು.
ಹುಡುಗ ಕಾರ್ ಕದಿಯಲು ಬಂದಿದ್ದ ಎಂದು ಎಲ್ಲರ ಶಂಕೆ. ಹುಡುಗ ಹೇಳುವುದು ತಾನು ಸ್ಟೀರಿಯೊ ಕದಿಯಲು ಬಂದಿದ್ದೆ ಎಂದು.
ಹುಡುಗನ ತಂದೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕಿರುವ ಮುಗ್ಧ. ಆತನಿಗೆ ಈ ಪ್ರಕರಣ ನೋವು ತಂದಿದೆ. ಮಗನನ್ನು ಏನು ಬೇಕಾದರೂ ಮಾಡಿ ದಾರಿಗೆ ತನ್ನಿ ಎಂದು ಪೊಲೀಸರಿಗೆ ಹೇಳುತ್ತಿದ್ದಾರೆ. ಮೆಕ್ಯಾನಿಕ್ ವರ್ಕ್‌ಶಾಪ್‌ಗಳಲ್ಲಿ ಯಾರಾದರೂ ಗಿರಾಕಿ ಇಂತಿಂಥ ಬಿಡಿ ಭಾಗ ಬೇಕು ಎಂದು ಕೇಳಿದರೆ, ‘ಒಂದು ವಾರ ಇರಿ’ ಎಂದು ಹೇಳಿ, ಅಂಥ ಭಾಗಗಳನ್ನು ಕದ್ದುಕೊಂಡು ಬಂದು ಅಳವಡಿಸಿಬಿಡುತ್ತಾರಂತೆ. ಅಗತ್ಯ ನೋಡಿಕೊಂಡು ಕಳ್ಳತನ ಮಾಡುವ ಹುಡುಗರಿಗೆ ಭಂಡ ಧೈರ್ಯ.
ಈ ಥರದ ಕಳ್ಳತನ ಒಂದು ಕಡೆಯಾದರೆ, ಇನ್ನೊಂದು ಕಡೆ ವ್ಯವಸ್ಥಿತ ವಾಹನ ಕಳ್ಳತನ ನಡೆಯುತ್ತಿರುತ್ತದೆ. ಸಹೋದ್ಯೋಗಿ ಚೇತನ ಬೆಳಗೆರೆ ಒಂದು ಕುಟುಂಬದ ಬಗ್ಗೆ ಹೇಳುತ್ತಿದ್ದರು. ಕಳ್ಳತನದಲ್ಲಿ ಪಳಗಿದ ಆ ಕುಟುಂಬದ ಹಿರಿಯರು ಕಿರಿಯರಿಗೆ ಶಿಸ್ತುಬದ್ಧವಾಗಿ ತರಬೇತಿ ಕೊಡುತ್ತಿದ್ದರಂತೆ. ಬೈಕ್ ಬೀಗ ಹೇಗೆ ಒಡೆಯಬೇಕು, ಪೊಲೀಸರನ್ನು ಕಂಡಾಗ ಹೇಗೆ ಅವಿತುಕೊಳ್ಳಬೇಕು, ಸಿಕ್ಕಿ ಬಿದ್ದಾಗ ಹೇಗೆ ನಟಿಸಬೇಕು... ಇಂಥ ವಿಷಯಗಳಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ಕ್ಲಾಸ್ ನಡೆಯುತ್ತಿತ್ತಂತೆ!
ಮೆಕ್ಯಾನಿಕ್ ಅಂಗಡಿಯಲ್ಲಿ ನಿಮಗೆ ಬೇಕಾದ ಬಿಡಿ ಭಾಗಗಳನ್ನು ಕಡಿಮೆ ಬೆಲೆಗೆ ತಂದು ಕೊಡುವ ಭರವಸೆ ಕೊಟ್ಟರೆ ಸ್ವಲ್ಪ ಹುಷಾರಾಗಿರಿ. ನಿಮ್ಮ ವಾಹನಕ್ಕೆ ಕಳ್ಳ ಮಾಲು ಅಳವಡಿಸುವುದಲ್ಲದೆ, ಆ ಹುಡುಗರು ಏನೇನು ಅನಾಹುತ ಮಾಡಿಕೊಳ್ಳುತ್ತಾರೋ ಯಾರಿಗೆ ಗೊತ್ತು.
ಗಿಫ್ಟ್ ಕೊಳ್ಳುವ ತರಾತುರಿ
ಹಬ್ಬದ ಸೀಸನ್ ಶುರುವಾಗಿದೆ. ಸೆಪ್ಟೆಂಬರ್-, ಅಕ್ಟೋಬರ್, ಅಂದರೆ ಗಣೇಶ ಹಬ್ಬದಿಂದ ಶುರುವಾಗುವ ಈ ಸೀಸನ್ ಮುಗಿಯುವುದು ಡಿಸೆಂಬರ್ ಕೊನೆಯ ಹೊತ್ತಿಗೆ. ದಸರಾ, ದೀಪಾವಳಿಯಂತೂ ವ್ಯಾಪಾರಸ್ಥರಿಗೆ ಕೈತೆರವಿಲ್ಲದ ಸಮಯ. ಪಾಶ್ಚಾತ್ಯರು ಕ್ರಿಸ್ಮಸ್ ಮತ್ತು ನ್ಯೂ ಇಯರ್ ಸಮಯಕ್ಕೆ ವಿಪರೀತ ಶಾಪಿಂಗ್ ಮಾಡುತ್ತಾರಂತೆ. ನಮ್ಮ ದೇಶದಲ್ಲಿ ಶಾಪಿಂಗ್ ಹುಚ್ಚು ಹಿಡಿಯುವುದು ದಸರಾ- ದೀಪಾವಳಿ ಸಮಯಕ್ಕೆ!
ಈ ಸೀಸನ್ನಲ್ಲಿ ಉತ್ತರ ಭಾರತೀಯರು ಗೋಡಂಬಿ ದ್ರಾಕ್ಷಿ ಉಡುಗೊರೆ ಒಬ್ಬರಿಗೊಬ್ಬರು ಕೊಟ್ಟುಕೊಳ್ಳುವುದು ಸಾಮಾನ್ಯ. ‘ಗಿಫ್ಟಿಂಗ್’ ಸಂಸ್ಕೃತಿಯನ್ನು ಮಾರ್ಕೆಟಿಂಗ್ ಜನ ತುಂಬ ಉತ್ಸಾಹದಿಂದ ಬೆಂಬಲಿಸುತ್ತಾರೆ. (ಅಕ್ಷಯ ತದಿಗೆ ಹೋಗಿ ಅಕ್ಷಯ ತೃತೀಯ ಆಗಿ ಹೇಗೆ ಎಲ್ಲೆಲ್ಲೂ ಚಿನ್ನದ ವ್ಯಾಪಾರ ವೃದ್ಧಿ ಆಗಿದೆ ಎಂದು ನೀವು ಗಮನಿಸಿರಬಹುದು). ರಜ ಇರುವುದರಿಂದ ಊರಿಂದೂರಿಗೆ ಪ್ರಯಾಣ ಬೆಳೆಸಿ, ಬಂಧು ಬಳಗ ಕಂಡು, ಉಡುಗೊರೆ ಹಂಚಿಕೊಳ್ಳುವ ಈ ಎರಡು- ಮೂರು ತಿಂಗಳಲ್ಲಿ ಒಂದು ಪ್ರಶ್ನೆ ಹಲವರನ್ನು ಕಾಡುತ್ತದೆ.
ನೆಂಟರಿಗೆ, ಸ್ನೇಹಿತರಿಗೆ, ಆತ್ಮೀಯರಿಗೆ ಏನು ಗಿಫ್ಟ್ ಕೊಡುವುದು? ಹೊಸ ಉಡುಪುಗಳನ್ನು ಉಡುಗೊರೆಯಾಗಿ ಕೊಡುವುದು ಸರ್ವೇ ಸಾಮಾನ್ಯ. ಪಂಚೆ, ಮಗುಟ, ಕಣ ಕೊಡುವುದು ಮೊದಲು ವಾಡಿಕೆಯಾಗಿತ್ತು. ಈಗ ಶರ್ಟ್, ಸೀರೆ, ಮತ್ತು ಇತರ ವಸ್ತ್ರಗಳನ್ನು ಉಡುಗೊರೆಯಾಗಿ ಕೊಡುವುದು ಹೆಚ್ಚಾಗಿದೆ. ಆದರೆ ಹೀಗೆ ವಸ್ತ್ರ ಕೊಡುವುದು, ಪಡೆಯುವುದು ಒಂದು ರೂಟೀನ್ ಆಗಿಬಿಟ್ಟಿದೆ. ಎಷ್ಟೋ ಜನರಿಗೆ ಉಡುಗೊರೆಯ ಅನುಭವವೇ ಅರ್ಥ ಕಳೆದುಕೊಂಡುಬಿಟ್ಟಿದೆ.
ಉಡುಗೊರೆ ಕೊಡುವುದು ತುಸು ಕಷ್ಟದ ವಿಚಾರ. ಅಂಗಡಿಗೆ ಹೋಗಿ ಉಡುಗೊರೆ ಕೊಳ್ಳುವುದಕ್ಕೆ ಮೊದಲು ನಮ್ಮಲ್ಲಿ ಸಾಕಷ್ಟು ಹಣವಿರಬೇಕು. ಯಾರಿಗೆ ಎಂಥ ಉಡುಗೊರೆ ಇಷ್ಟವಾಗುತ್ತದೆ ಎಂದು ಯೋಚಿಸಬೇಕು. ದೊಡ್ಡವರಿಗೆ ಖುಷಿ ಕೊಡುವ ಉಡುಗೊರೆಗಳು ಮಕ್ಕಳಿಗೆ ಇಷ್ಟವಾಗದೇ ಹೋಗಬಹುದು. ನೀವು ಆಯ್ಕೆ ಮಾಡಿದ ವಸ್ತ್ರದ ಬಣ್ಣ ಗಿಫ್ಟ್ ಪಡೆದವರಿಗೆ ಇಷ್ಟವಾಗದಿದ್ದರೆ ನಿಮ್ಮ ಶ್ರಮ, ದುಡ್ಡೆಲ್ಲ ವ್ಯರ್ಥವಾಗಿಹೋಗುತ್ತದೆ. ತುಂಬ ದುಬಾರಿ ಉಡುಗೊರೆ ಕೊಟ್ಟರೆ ಪಡೆದವರಿಗೆ ಇರುಸು ಮುರುಸಾಗುವ ಸಾಧ್ಯತೆ ಇದೆ. ‘ನಾವು ಕೊಡಬೇಕಾಗಿ ಬಂದಾಗ ಎಲ್ಲಿಗೆ ಹೋಗೋಣ?’ ಎಂದು ಭಾರೀ ಮೊತ್ತದ ಗಿಫ್ಟ್ ಪಡೆದವರು ಹೇಳುವುದು ಸಹಜ.
ಅಂಗಡಿಗೆ ಹೋಗಿ ಶಾಪಿಂಗ್ ಮಾಡುವುದು ಸಂಭ್ರಮದ ವಿಷಯ ಅನ್ನುವುದು ನಿಜ. ಆದರೆ ಈ ಒಂದು ವಾರದಿಂದ ನನ್ನ ಇನ್‌ಬಾಕ್ಸ್ ತುಂಬಾ ಇಂಟರ್‌ನೆಟ್ ಅಂಗಡಿಗಳಿಂದ ಬಂದ ಮೇಲ್ ತುಂಬಿಕೊಂಡಿದೆ. ಬೆಂಗಳೂರು, ಗುರಗಾಂವ್ ನಗರಗಳಿಂದ ಕಾರ್ಯ ನಿರ್ವಹಿಸುವ ಹಲವು ಆನ್‌ಲೈನ್ ಅಂಗಡಿಗಳು ತಮ್ಮ ಸರಕುಗಳನ್ನು ಜೋರಾಗಿ ಪ್ರಮೋಟ್ ಮಾಡುತ್ತಾ ಇವೆ. ಸ್ನ್ಯಾಪ್ ಡೀಲ್, ಫ್ಲಿಪ್ ಕಾರ್ಟ್, ಜಬೋಂಗ್, ಮಿನ್ತ್ರ, ಜನ್ಜಾರ್, ಫ್ಲಿಪ್ ಕಾರ್ಟ್, ಪೆಪ್ಪರ್ ಫ್ರೈ ರೀತಿಯ ಅಂತರ್ಜಾಲ ಅಂಗಡಿಗಳನ್ನು ಶೋಧಿಸಿದ ನನಗೆ ಕಣ್ಣಿಗೆ ಬಿದ್ದ ಕೆಲವು ಐಟಂಗಳು ಗಿಫ್ಟ್ ಮಾಡಲು ಚೆನ್ನಾಗಿರುತ್ತವೆ ಎನಿಸಿತು.
ದುಂಡಗಿನ ಎಲೆಕ್ಟ್ರಿಕ್ ಕೆಟಲ್‌ಗಳು, ಸ್ಟೈಲಿಶ್ ಎಲ್ಇಡಿ ದೀಪಗಳು, ಪುಟ್ಟ ಸ್ಟೂಲ್ ಮತ್ತು ಬೀನ್ ಬ್ಯಾಗ್ ಥರದ ಫರ್ನಿಚರ್, ಕೊಡೆಗಳು... ಹೀಗೆ ಹಲವು ಪದಾರ್ಥಗಳು ತಮ್ಮ ಚೆಲುವಾದ ವಿನ್ಯಾಸದಿಂದ ಕಣ್ಸೆಳೆಯುತ್ತವೆ. ಪುಸ್ತಕಗಳ ಮೇಲೂ ಎಷ್ಟೋ ಅಂಗಡಿಗಳು ಡಿಸ್ಕೌಂಟ್ ಕೊಡುತ್ತಿವೆ. ಗಿಫ್ಟ್ ಮಾಡುವ ಮೂಡಲ್ಲಿದ್ದರೆ ಮತ್ತು ಚಿನ್ನ -ಬೆಳ್ಳಿ ಕೊಡುವವರ ಪೈಕಿ ನೀವು ಅಲ್ಲದಿದ್ದರೆ, ಇಂಟರ್‌ನೆಟ್ ತಾಣಗಳಲ್ಲೂ ಸ್ವಲ್ಪ ಕಣ್ಣು ಹಾಯಿಸಿ!
ಕನ್ನಡದ ಹಳೆಯ ಚಿತ್ರ ರತ್ನಗಳು ಡಿವಿಡಿಯಲ್ಲಿ
ಟೋಟಲ್ ಕನ್ನಡ ಎಂಬ ಸಂಸ್ಥೆ ಹೊಸ ತಲೆಮಾರಿಗೆ ಪರಿಚಯವಿರದ ಹಳೆಯ ಕನ್ನಡ ಚಿತ್ರಗಳ ಡಿವಿಡಿಗಳನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ಪಟ್ಟಿಯಲ್ಲಿರುವ ಚಿತ್ರಗಳು ‘ಕಲಾತ್ಮಕ’ ಎಂಬ ಹಣೆಪಟ್ಟಿ ಹೊಂದಿರುವಂಥವು. ಇವು ಕೈಗೆ ಸಿಗುವುದು ಕಷ್ಟವಾಗಿತ್ತು. ಆದರೆ ಮೊನ್ನೆ ಒಂದು ಅಂಗಡಿಯಲ್ಲಿ ನನ್ನ ಕಣ್ಣಿಗೆ ಹಲವು ಹಳೆಯ ಚಿತ್ರಗಳು ಬಿದ್ದವು. ಪಟ್ಟಾಭಿರಾಮ ರೆಡ್ಡಿ ಅವರ ಸಂಸ್ಕಾರ (೧೯೭೦), ಪಿ.ಲಂಕೇಶರ ಪಲ್ಲವಿ (೧೯೭೭) ಯಂಥಹ ಚಿತ್ರಗಳು ಆ ಕಾಲಕ್ಕೆ ರಾಷ್ಟ್ರ ಪ್ರಶಸ್ತಿ ಗೆದ್ದು, ಚಿತ್ರಮಂದಿರಗಳಲ್ಲೂ ಒಂದಷ್ಟು ದಿನ ಓಡಿ, ಕನ್ನಡ ಪ್ರೇಕ್ಷಕರು ಹೊಸ ಅಲೆಯ ಸಿನಿಮಾ ಸ್ವೀಕರಿಸುವ ಮುಕ್ತ ಮನಸ್ಸಿನವರು ಎನ್ನುವ ಮಾತಿಗೆ ಕಾರಣವಾಗಿದ್ದವು. (ಈ ವಾತಾವರಣವನ್ನು ಮೆಚ್ಚಿ ಮಣಿರತ್ನಂ ತಮ್ಮ ಮೊದಲ ಚಿತ್ರವನ್ನು ೧೯೮೩ರಲ್ಲಿ ಕನ್ನಡದಲ್ಲಿಯೇ ಮಾಡಿದರು).
ಇಂಥ ಚಿತ್ರಗಳನ್ನು ಇಂದಿನ ಯುವ ಪ್ರೇಕ್ಷಕರು ನೋಡಲು ಅವಕಾಶವಿರಲಿಲ್ಲ. ಕಡಿಮೆ ಖರ್ಚಿನಲ್ಲಿ, ಕೈಗೆಟುಕಿದ ಸೌಕರ್ಯದಲ್ಲಿ ಪೂರೈಸಿದ ಈ ಚಿತ್ರಗಳು ಎತ್ತಿದ ಪ್ರಶ್ನೆಗಳು, ಚರ್ಚೆ ಮಾಡಿದ ಐಡಿಯಾಗಳು ಪ್ರೇಕ್ಷಕರಿಗೆ ಹೊಸದಾಗಿ, ಫ್ರೆಶ್ ಆಗಿ ಕಂಡವು. (ಇಟಲಿಯ ಪ್ರಖ್ಯಾತ ನಿರ್ದೇಶಕ ಫೆಲ್ಲಿನಿ ‘ಲವ್ ಇನ್ ದಿ ಸಿಟಿ’ ಎಂಬ ಚಿತ್ರವನ್ನು ಅದು ಮರ್ಲಿನ್ ಮನ್ರೋ ಮಾದರಿಯ ಗ್ಲಾಮರಸ್ ಹಾಲಿವುಡ್ ಚಿತ್ರವಲ್ಲ ಎಂದು ಹೇಳುತ್ತಲೇ ಪ್ರಾರಂಭಿಸುತ್ತಾರೆ.
ಹಾಗೆಯೇ ಲಂಕೇಶ್ ಕೂಡ ತಮ್ಮ ‘ಪಲ್ಲವಿ’ ಚಿತ್ರ ಮುಂಬೈನ ಧರ್ಮೇಂದ್ರ- ಅಮಿತಾಭ್ ಬಚ್ಚನ್ ಚಿತ್ರಕ್ಕಿಂತ ಭಿನ್ನ ಎಂದು ಘೋಷಿಸಿಯೇ ಮುನ್ನಡೆಸುತ್ತಾರೆ). ಟೋಟಲ್ ಕನ್ನಡ ಸಂಸ್ಥೆಯ ಉತ್ಸಾಹದಿಂದ ಇಂಥ ಕೆಲವು ಚಿತ್ರಗಳು ಮೊದಲ ಬಾರಿಗೆ ಡಿವಿಡಿಯಲ್ಲಿ ಸಿಗುತ್ತಿವೆ.
ಅಪರೂಪ ಎನಿಸುವ, ಮಸಾಲೆಯಿಂದ ದೂರವಿರುವ, ಕೆಲವು ಹೊಸ ಚಿತ್ರಗಳನ್ನು ಕೂಡ ಟೋಟಲ್ ಕನ್ನಡ ಬಿಡುಗಡೆ ಮಾಡಿದೆ. ಇದೇ ಸಂಸ್ಥೆ ಬಿಡುಗಡೆ ಮಾಡಿರುವ ಸುಷ್ಮಾ ವೀರಪ್ಪ ನಿರ್ದೇಶನದ ಚಿತ್ರ ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ ಚೆನ್ನಾಗಿದೆ. ಆ ನಟ ಹೇಗೆ ಆಟೊ ಚಾಲಕರನ್ನು ಹುರಿದುಂಬಿಸಿದ ಎಂದು ಹೇಳುವ ನೆಪದಲ್ಲಿ ಚಾಲಕರ ಸಮುದಾಯದ ಕಥೆಯನ್ನು ಸ್ವಾರಸ್ಯವಾಗಿ ಹೇಳಿದ್ದಾರೆ. ಟೋಟಲ್ ಕನ್ನಡ ಬಿಡುಗಡೆ ಮಾಡಿರುವ ಪ್ರತಿ ಡಿವಿಡಿ ಬೆಲೆ ₨೯೯.
ಸಂತರ ರಾಜಕೀಯ ಆಸಕ್ತಿ
ಬಾಬಾ ರಾಮದೇವ್ ಮೊದಲ್ಗೊಂಡು ಎಷ್ಟೋ ಸಾಧು ಸಂತರು ಮುಂದಿನ ವರ್ಷದ ಲೋಕ ಸಭಾ ಚುನಾವಣೆಯಲ್ಲಿ ದೊಡ್ಡ ಪಾತ್ರವಹಿಸುತ್ತಾರಂತೆ. ತಮ್ಮದೇ ಒಂದು ಪಕ್ಷ ಶುರು ಮಾಡಿಕೊಂಡು ‘ಓಂ ಆದ್ಮಿ ಪಾರ್ಟಿ’ ಎಂದು ಹೆಸರಿಟ್ಟುಕೊಳ್ಳಬಹುದು, ಅಲ್ಲವೇ?
–ಎಸ್.ಆರ್.ರಾಮಕೃಷ್ಣ
srramakrishna@gmail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.