ADVERTISEMENT

ಒಣಪ್ರತಿಷ್ಠೆಗಾಗಿ ವಿಶ್ವವಿದ್ಯಾಲಯ ಸ್ಥಾಪನೆ ಬೇಡ

ಎಂ.ನಾಗರಾಜ
Published 13 ಜುಲೈ 2014, 19:30 IST
Last Updated 13 ಜುಲೈ 2014, 19:30 IST
ಜಾನಪದ ವಿಶ್ವವಿದ್ಯಾಲಯದಲ್ಲಿ ತರಗತಿಗಳು ನಡೆಯುತ್ತಿರುವ ಶೆಡ್‌ (ಸಂಗ್ರಹ ಚಿತ್ರ)
ಜಾನಪದ ವಿಶ್ವವಿದ್ಯಾಲಯದಲ್ಲಿ ತರಗತಿಗಳು ನಡೆಯುತ್ತಿರುವ ಶೆಡ್‌ (ಸಂಗ್ರಹ ಚಿತ್ರ)   

ಕೇಂ‌ದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ‌ಸರ್ಕಾರವು ವಿಶ್ವವಿದ್ಯಾ­ಲಯ­ಗಳಿಗೆ ರೇಟಿಂಗ್ ವ್ಯವಸ್ಥೆ ಜಾರಿ ಮಾಡುವ ಉತ್ಸಾಹ­ದಲ್ಲಿದೆ. ಈ ಸಂಬಂಧ ಬೆಂಗ­ಳೂ­ರಿನಲ್ಲಿ ಇತ್ತೀಚೆಗೆ ಶಿಕ್ಷಣ ತಜ್ಞರು, ವಿವಿಧ ವಿಶ್ವ­ವಿದ್ಯಾ­­ಲಯಗಳ ಕುಲಪತಿಗಳು ಮತ್ತು ವಿವಿಧ ಕಾಲೇಜು­ಗಳ ಪ್ರಾಂಶುಪಾಲರ ಸಭೆ ನಡೆಸಿ ಸಾಧ್ಯವಾದಷ್ಟು ಬೇಗ ಈ ವ್ಯವಸ್ಥೆ ಜಾರಿ ಮಾಡಬೇಕು ಎಂಬ ತವಕದಲ್ಲಿದೆ.

ಸರ್ಕಾರ ನಾನಾ ಕಾರಣಗಳಿಂದಾಗಿ ರಾಜ್ಯದ ವಿವಿಧೆಡೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ. ಉತ್ತರ ಕರ್ನಾಟಕದ ಯಾದಗಿರಿ, ಕೊಪ್ಪಳ, ಗದಗ, ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತು­ಪಡಿ­ಸಿದರೆ ಉಳಿದೆಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಒಂದು, ಗರಿಷ್ಠ ಮೂರು ವಿಶ್ವ­ವಿದ್ಯಾ­ಲಯ­ಗಳನ್ನು ತೆರೆ­ದಿದೆ. ಇದಕ್ಕೆ ಮೂಲ ಕಾರಣ ಜ್ಞಾನ ಆಯೋ­ಗದ ಶಿಫಾರಸು. ಹೆಚ್ಚು ಜನರಿಗೆ ಉನ್ನತ ಶಿಕ್ಷಣ ನೀಡಲು ಅನುಕೂಲವಾಗಲಿ ಎಂಬ ಉದ್ದೇಶ­ದಿಂದ ಜ್ಞಾನ ಆಯೋಗ ಹೆಚ್ಚು ವಿಶ್ವ­ವಿದ್ಯಾ­ಲಯ­ಗಳನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು. ಆದರೆ ಸರ್ಕಾರ ರಾಜಕೀಯ ಲಾಭಕ್ಕಾಗಿ, ಮತ ಬ್ಯಾಂಕ್‌ ಸೃಷ್ಟಿಗಾಗಿ ಇದನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಗಳೂ ಇವೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ಮೂರು ವರ್ಷಗಳ ಹಿಂದೆ ತಲೆ ಎತ್ತಿದ ವಿಶ್ವದ ಪ್ರಥಮ ಜಾನಪದ ವಿಶ್ವವಿದ್ಯಾಲಯದ ಪರಿಸ್ಥಿತಿಯನ್ನು ನೋಡಿದರೆ ಪರಿಶಿಷ್ಟ ಜಾತಿ, ಪಂಗಡ ಮತ್ತು ತಳ ಸಮು­ದಾಯ­ದವರನ್ನು ತನ್ನತ್ತ ಸೆಳೆದು­ಕೊಳ್ಳುವ ಹುನ್ನಾರ ಎದ್ದು ಕಾಣುತ್ತದೆ. ಹೊಸ ವಿಶ್ವ­ವಿದ್ಯಾಲಯದ ಅಭಿವೃದ್ಧಿಗೆ, ಮೂಲ ಸೌಕರ್ಯ ಕಲ್ಪಿ­ಸುವುದಕ್ಕೆ ಕಾಲಕಾಲಕ್ಕೆ ತಕ್ಕಷ್ಟು ಹಣವನ್ನು ಒದ­ಗಿಸದೆ ವಿಶ್ವವಿದ್ಯಾಲಯ ಕಟ್ಟುವುದಾದರೂ ಹೇಗೆ ಎಂಬ ಕಡೆಗೆ ಉನ್ನತ ಶಿಕ್ಷಣ ಇಲಾಖೆ ಗಮನವನ್ನೇ ಹರಿಸಿಲ್ಲ. ಇದಕ್ಕೆ ಈ ವಿಶ್ವವಿದ್ಯಾ­ಲಯದ ತರಗತಿಗಳು ಈಗಲೂ ಶೆಡ್‌ನಲ್ಲಿ ನಡೆಯುತ್ತಿರುವುದೇ ಸಾಕ್ಷಿ.

ವಿಶ್ವವಿದ್ಯಾಲಯಕ್ಕೆ ಒಂದೇ ಕಡೆ ಜಮೀನು ಒದಗಿಸಲೂ ಆಗದೇ, ಶಿಗ್ಗಾವಿ ತಾಲ್ಲೂಕಿನಲ್ಲಿ ಜಾಗ ಲಭ್ಯವಿರುವ ಕಡೆಯೆಲ್ಲಾ ಒಟ್ಟು ಮಾಡಿ 160 ಎಕರೆ ಭೂಮಿ ಕರುಣಿಸಿದೆ. ಆದರೆ ಮೂರು– ನಾಲ್ಕು ಕಡೆ ದೊರೆತಿರುವ ಜಾಗ­ವನ್ನು ರಕ್ಷಿಸಿಕೊಳ್ಳಲು ಬೇಲಿ ಹಾಕಲೂ ಹಣ ಕೊಟ್ಟಿಲ್ಲ! ಇನ್ನು ಅತ್ಯವಶ್ಯಕವಾದ ಕಟ್ಟಡಗಳ ನಿರ್ಮಾ­ಣಕ್ಕೆ ಗಮನ ಕೊಡುತ್ತದೆಯೇ? ವರ್ಷಕ್ಕೆ ₨ 1–2 ಕೋಟಿ ಒದಗಿಸಿದರೆ ಮೂಲ­ಸೌಕರ್ಯ ಕಲ್ಪಿಸುವುದಾದರೂ ಯಾವ ಕಾಲಕ್ಕೆ? ಯಾವುದೇ ವಿಶ್ವವಿದ್ಯಾಲಯಗಳಿಗೆ ಆಗಲಿ ಮೊದಲ 3–4 ವರ್ಷ ಹೆಚ್ಚು ಅನು­ದಾನವನ್ನು ಒದಗಿಸುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ನಿಗದಿತ ಸಂಖ್ಯೆಯ ಅಧ್ಯಾ­ಪಕರು, ಅಗತ್ಯ ಮೂಲಸೌಕರ್ಯ ಎಲ್ಲ­ವನ್ನೂ ಕಲ್ಪಿಸಬೇಕು. ಇಲ್ಲವಾದಲ್ಲಿ ಹೆಚ್ಚು ವಿದ್ಯಾರ್ಥಿ­ಗಳನ್ನು ಉನ್ನತ ಶಿಕ್ಷಣದತ್ತ ಆಕ­ರ್ಷಿಸಲು ಸಾಧ್ಯವಾಗುವುದಿಲ್ಲ. ಮೂರು ವರ್ಷದಿಂದ ತರಗತಿಗಳು ಶೆಡ್‌ನಲ್ಲಿ ನಡೆಯು­ತ್ತಿವೆ ಎಂದರೆ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡ­ಬೇಕು ಎಂದು ಬಯಸುವುದಾದರೂ ಹೇಗೆ? ಈ ವಿಶ್ವವಿದ್ಯಾಲಯವನ್ನು ನೋಡಿದ ಯಾವುದೇ ಸಮಿತಿ ಅಥವಾ ಸರ್ಕಾರ ನಿಗದಿಪಡಿಸುವ ಖಾಸಗಿ ಸಂಸ್ಥೆ ಇದಕ್ಕೆ ಯಾವ ರೇಟಿಂಗ್‌ ನೀಡಬಹುದು? ಆ ರೇಟಿಂಗ್‌ ನೋಡಿದ ಮೇಲೆ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಹೇಗಿರುತ್ತದೆ ಎಂಬ ಅಂಶಗಳತ್ತ ಸರ್ಕಾರ ಆಲೋಚಿಸಬೇಕು.

ಈ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಇರುವ ಕಟ್ಟಡ ಪ್ರವಾಸೋದ್ಯಮ ಇಲಾಖೆಗೆ ಸೇರಿದೆ. ಆದರೆ, ಈ ಕಟ್ಟಡವನ್ನು ಒಳಗೊಂಡ ಜಾಗವನ್ನು ಸರ್ಕಾರ ವಿಶ್ವವಿದ್ಯಾಲಯಕ್ಕೆ ಕೊಟ್ಟಿದೆ. ಜಮೀನು ಹಸ್ತಾಂತರಕ್ಕೆ ಮೊದಲೇ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ್ದ ಈ ಕಟ್ಟಡವನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸು­ವಂತಹ ಸಣ್ಣ ಕೆಲಸವೂ ಸರ್ಕಾರದಿಂದ ಆಗಿಲ್ಲದಿ­ ರುವುದು ಅಚ್ಚರಿಯ ಸಂಗತಿ. ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಎರಡಕ್ಕೂ ಒಬ್ಬರೇ ಸಚಿವರಿರುವುದರಿಂದ ಅವರು ಮನಸ್ಸು ಮಾಡಿ­ದ್ದರೆ ಈ ವೇಳೆಗೆ ಕನಿಷ್ಠ ಈ ಸಮಸ್ಯೆಯನ್ನಾದರೂ ಬಗೆಹರಿಸಬಹುದಿತ್ತು. ಆರ್‌.ವಿ.­ದೇಶಪಾಂಡೆ­ಯವರು ಈ ಎರಡೂ ಖಾತೆಗೆ ಸಚಿವರಾಗಿ  ವರ್ಷ ಕಳೆದಿದ್ದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಆಡಳಿತ ಕಚೇರಿಗೂ ಸ್ವಂತ ಕಟ್ಟಡ­ವಿಲ್ಲದ ಜಾನಪದ ವಿಶ್ವವಿದ್ಯಾಲಯಕ್ಕೆ ಉನ್ನತ ರೇಟಿಂಗ್‌ ನಿರೀಕ್ಷಿಸಲು ಸಾಧ್ಯವೇ ?

ಒಂದಿಷ್ಟು ಅಭಿವೃದ್ಧಿ ಕೆಲಸಗಳಾಗಿದ್ದಿದ್ದರೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ (ಯುಜಿಸಿ) ಅನುದಾನ ದೊರೆಯುತ್ತಿತ್ತು. ಆದರೆ ಈಗಷ್ಟೇ 3–4 ಕಟ್ಟಡಗಳು ಭಾರಿ ಪ್ರಯಾ­ಸ­ದಿಂದ ಮೇಲೇಳುತ್ತಿವೆ. ಈ ಸ್ಥಿತಿಯಲ್ಲಿ­ರುವ ಜಾನಪದ ವಿಶ್ವವಿದ್ಯಾಲಯಕ್ಕೆ ಈಗಲೇ ಯುಜಿಸಿಯ ನೆರವು ಪಡೆಯಲೂ ಸಾಧ್ಯ­ವಾಗು­ವುದಿಲ್ಲ. ಏಕೆಂದರೆ ಯುಜಿಸಿ ನಿಗದಿ­ಪಡಿಸಿ­ರುವಷ್ಟು ಬೋಧಕ ವೃಂದದಲ್ಲಿ ಅರ್ಧವೂ ಇಲ್ಲಿ ಇಲ್ಲ; ಸ್ವಂತ ಕಟ್ಟಡ ಮೊದಲೇ ಇಲ್ಲ; 10,000 ಪುಸ್ತಕಗಳಿರುವ ಗ್ರಂಥಾಲ­ಯವೂ ಇಲ್ಲ. ಇದಕ್ಕೆ ಯಾರನ್ನು ದೂರಬೇಕು?
ತಾನು ನಿಗದಿಪಡಿಸಿದ ನಿಯಮಗಳನ್ನು ಪಾಲಿಸುವುದರ ಜತೆಗೆ ಮೂರು ವರ್ಷ ಪೂರೈಸಿ­ರುವ ವಿಶ್ವವಿದ್ಯಾಲಯಗಳಿಗೆ ಯುಜಿಸಿ ಸಾಕಷ್ಟು ಹಣ­ಕಾಸು ಒದಗಿಸುತ್ತದೆ. ಜಾನಪದ ವಿವಿ­ಯನ್ನು ಸರ್ಕಾರ ಈವರೆಗೆ ಸರಿಯಾಗಿ ಅಭಿವೃದ್ಧಿ­ಪಡಿಸಿದ್ದರೆ ಮುಂದೆ ಯುಜಿಸಿಯಿಂದ ಬರುವ ಆರ್ಥಿಕ ನೆರವು ಬಳಸಿಕೊಂಡು ಉತ್ತಮ­ಪಡಿ­ಸಲು ಸಾಧ್ಯವಿತ್ತು. ಆದರೆ ಸರ್ಕಾರಕ್ಕೆ ಇದರಿಂದ ಏನೂ ಲಾಭವಿಲ್ಲವಲ್ಲ! ಹಾಗಾಗೀ ಅದಕ್ಕೆ ಕಾಳಜಿಯಾಗಲಿ ಅಥವಾ ಬದ್ಧತೆಯನ್ನಾಗಲಿ ತೋರುತ್ತಿಲ್ಲ. 2012ರಲ್ಲಿ ಸಂಪುಟ ಸಭೆ ಒಪ್ಪಿಗೆ ನೀಡಿದ್ದರೂ ₨ 20.37 ಕೋಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲದಿರುವುದೇ ಇದಕ್ಕೆ ಸಾಕ್ಷಿ.

ಕುಲಪತಿಗಳಿಗೆ ವಿಶ್ವವಿದ್ಯಾಲಯಗಳ ಕಟ್ಟಡ ಕಟ್ಟಿಸುವ ಜವಾಬ್ದಾರಿ ವಹಿಸುವುದು ಸುತರಾಂ ಸರಿಯಿಲ್ಲ. ಶೈಕ್ಷಣಿಕವಾಗಿ ವಿಶ್ವವಿದ್ಯಾಲಯ ಕಟ್ಟುವತ್ತ ನಿಗಾ ವಹಿಸುವ ಹೊಣೆಗಾರಿಕೆ ಅವರದು. ಅಲ್ಲಿ ಹೆಚ್ಚು ಹೆಚ್ಚು ಸಂಶೋಧನೆ­ಗಳು ನಡೆಯಬೇಕು. ಶೈಕ್ಷಣಿಕ ಗುಣಮಟ್ಟ ಕಾಪಾಡಿ­ಕೊಳ್ಳಬೇಕು. ಈಗಿನ ವ್ಯವಸ್ಥೆಯಲ್ಲಿ ಈ ಅಂಶಗಳನ್ನು ಕಾಣುವುದು ಕಷ್ಟವಾಗುತ್ತಿದೆ. ವಿಶ್ವ­ವಿದ್ಯಾಲಯದ ಘನತೆ ಕಾಪಾಡುವ ಉದ್ದೇಶ­ದಿಂದ ಶೈಕ್ಷಣಿಕ ಗುಣಮಟ್ಟದ ಕಾಪಾಡಿ­ಕೊಳ್ಳುವುದರ ಜತೆಗೆ ಕುಲಪತಿಗಳು ಒಂದು ರೀತಿಯಲ್ಲಿ ಬಿಲ್ಡರ್‌ಗಳಂತೆಯೂ ಕಾರ್ಯ­ನಿರ್ವಹಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದರೆ ತಪ್ಪಾಗಲಾರದು.

ಹಿಂದೆ ಕೇಂದ್ರ ಸರ್ಕಾರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಕ್ಕೆ ಒತ್ತು ನೀಡಿದ್ದಂತೆಯೇ ಈಗ ಉನ್ನತ ಶಿಕ್ಷಣಕ್ಕೂ ನೀಡುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆ­ಯಬೇಕು ಎಂಬ ಉದ್ದೇಶದಿಂದ ‘ರಾಷ್ಟ್ರೀಯ ಉಚ್ಚತರ್‌ ಶಿಕ್ಷಾ ಅಭಿಯಾನ’ (ರೂಸಾ) ಆರಂಭಿಸಿದೆ.  ಈ ಯೋಜನೆಯಲ್ಲಿ ವಿಶ್ವ­ವಿದ್ಯಾ­ಲಯ­ಗಳಿಗೆ, ಕಾಲೇಜುಗಳಿಗೆ ಕೋಟ್ಯಂತರ ರೂಪಾಯಿ ನೆರವು ದೊರೆ­ಯುತ್ತದೆ. ಶೇ 65–35 ಅನುಪಾತದಲ್ಲಿ ಕೇಂದ್ರ–ರಾಜ್ಯ ಸರ್ಕಾರ­ಗ­ಳಿಂದ ಹಣ ಹರಿದುಬರುತ್ತದೆ. ಇದನ್ನು ಬಳಸಿ­ಕೊಂಡು ಶಿಕ್ಷಣದ ಗುಣಮಟ್ಟ­ವನ್ನು ಹೆಚ್ಚಿಸ­ಬೇಕು. ಇದರ ಜತೆಗೆ ಹೆಚ್ಚು ಮಂದಿ­ಯನ್ನು ಉನ್ನತ ಶಿಕ್ಷಣದ ವ್ಯಾಪ್ತಿಯೊಳಕ್ಕೆ ತರುವ ಕೆಲಸ­ವಾಗ­ಬೇಕು. ಇದು ವಿಶ್ವವಿದ್ಯಾಲಯಗಳ ಜವಾಬ್ದಾರಿ.

ರಾಜ್ಯಗಳಲ್ಲಿ ಉನ್ನತ ಶಿಕ್ಷಣ ಮಂಡಳಿಗಳಿವೆ (ಎಸ್‌ಎಚ್‌ಎಸ್‌ಸಿ). ಇವು ಒಂದು ರೀತಿ ವಿಶ್ವವಿದ್ಯಾಲಯಗಳ ಒಕ್ಕೂಟವಿದ್ದಂತೆ. ಶಿಕ್ಷಣದ ಗುಣಮಟ್ಟ, ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವೂ ಇಲ್ಲಿ ಆಗಬೇಕು. ಹಿಂದೆ ಇದ್ದ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯ ಅಂತರ ವಿಶ್ವವಿದ್ಯಾಲಯ­ಗಳ ಮಂಡಳಿ (ಐಯುಬಿ) ಅಷ್ಟು ಪರಿಣಾಮ­ಕಾರಿ ಆಗಿರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಎಲ್ಲ ವಿಶ್ವವಿದ್ಯಾಲಯ­ಗಳಲ್ಲೂ ನೇಮಕಾತಿ ವಿಚಾರದಲ್ಲಿ ಆರೋಪ­ಗಳು ವ್ಯಾಪಕವಾಗಿವೆ. ಇದನ್ನು ತಪ್ಪಿಸಲು ಪ್ರತ್ಯೇಕವಾದ ನೇಮಕಾತಿ ಮಂಡಳಿಯನ್ನು ರಚಿಸಬಹುದು. ಉನ್ನತ ಶಿಕ್ಷಣ ಮಂಡಳಿ ಇತ್ತ ಗಂಭೀರವಾಗಿ ಆಲೋಚಿಸಬೇಕು. ಇದನ್ನು ಬಿಟ್ಟು ಎಲ್ಲ ಕೆಲಸಗಳನ್ನು ಕುಲಪತಿಯವರ ತಲೆಗೆ ಏಕೆ ಕಟ್ಟಬೇಕು?

ಯಾವುದೇ ಸರ್ಕಾರವಾಗಲಿ ವಿದ್ಯಾರ್ಥಿಗಳ ಹಿತದೃಷ್ಟಿ, ಶೈಕ್ಷಣಿಕ ಬೆಳವಣಿಗೆ ಉದ್ದೇಶ­ವಿಟ್ಟು­ಕೊಂಡು ವಿಶ್ವವಿದ್ಯಾಲಯ ಸ್ಥಾಪಿಸ­ಬೇಕು. ಅದರಲ್ಲಿ ರಾಜಕೀಯ ದೃಷ್ಟಿಕೋನ ಇರ­ಬಾರದು. ತಮ್ಮ ಅವಧಿ­ಯಲ್ಲಿ ಈ ವಿಶ್ವವಿದ್ಯಾ­ಲಯ ಆಯಿತು ಎಂಬ ಒಣಪ್ರತಿಷ್ಠೆಯನ್ನು ರಾಜ­ಕಾರಣಿಗಳು ಬಿಡಬೇಕು. ನಿಜ ಅರ್ಥದಲ್ಲಿ ಸ್ವಾಯತ್ತತೆ ಸಾಧಿಸುವವರೆಗೆ ವಿಶ್ವವಿದ್ಯಾಲಯ­ಗಳ ಬೆನ್ನಿಗೆ ಸರ್ಕಾರ ನಿಲ್ಲಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.