ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಬುಧವಾರ ಬೆಳಿಗ್ಗೆ ಲೋಕಸಭೆ ಕ್ಷೇತ್ರದ ಉಪಚುನಾವಣೆಯ ಮತದಾರರ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ಚಾಲನೆ ನೀಡುವ ಕ್ಷಣ. ಅವರ ಸುತ್ತ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿಂತಿದ್ದರು.
ಅಷ್ಟರಲ್ಲಿ ನಾಮಪತ್ರ ಪರಿಶೀಲನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಲ್ಲಿಗೆ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಬಂದರು. ಕಾರಿನಲ್ಲಿ ಕುಳಿತುಕೊಂಡೇ ಜನರನ್ನು ನೋಡಿದ್ದ ಅವರು, ಇಳಿದು ಬಂದ ಕೂಡಲೇ ಮತಯಾಚನೆ ಶೈಲಿಯಲ್ಲಿ ಎಲ್ಲರ ಕಡೆಗೆ ನಗೆ ಬೀರಿ ಕೈಮುಗಿದರು.
ಅವರ ಈ ಅಚಾನಕ್ ನಡೆಯನ್ನು ನಿರೀಕ್ಷಿಸಿರದಿದ್ದ ಸ್ವೀಪ್ ಸಮಿತಿ ಅಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಉಗ್ರಪ್ಪ ಅವರ ಬಳಿಗೆ ಬಂದು ‘ಸರ್ ಇದು ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ’ ಎಂದು ಪಿಸುಮಾತಿನಲ್ಲಿ ಹೇಳಿದರು.
ಕೂಡಲೇ ಎಚ್ಚೆತ್ತ ಉಗ್ರಪ್ಪ, ಹೌದಾ, ಗೊತ್ತಿರಲಿಲ್ಲ. ಜನರಿದ್ದರೆಂದು ಕೈ ಮುಗಿದೆ ಅಷ್ಟೇ’ ಎಂದು ಅಲ್ಲಿ ನಿಲ್ಲದೆ ಮುಂದೆ ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.