ವಿಜಯಪುರ: ‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕ್ ತಿಂಗಳಾಗೈತಿ. ಅಷ್ಟರಲ್ಲೇ ಪತ್ರಿಕೆಯವರು ತಮಗೆ ತೋಚಿದಂತೆ ಬರೆಯಲಾರಂಭಿಸಿದ್ದಾರೆ. ನಾಲ್ಕ್ ತಿಂಗಳಲ್ಲಿ ನಗರದ ಎಲ್ಲ ಸಮಸ್ಯೆ ಬಗೆಹರಿಸಲು ನಾ ಜಾದೂಗಾರನಲ್ಲ. ಇಲ್ಲಿ ಜಾದೂನು ನಡೆಯಲ್ಲ..!’
‘ನನ್ನ ಅವಧಿ ಇನ್ನೂ ನಾಲ್ಕು ವರ್ಷ ಎಂಟ್ ತಿಂಗಳೈತಿ. ಅಷ್ಟರೊಳಗೆ ನಗರದ ಚಿತ್ರಣವನ್ನೇ ಬದಲಿಸುವ ಉಮೇದು ನನ್ನದಿದೆ. ಸಾಕಷ್ಟು ಯೋಜನೆ ರೂಪಿಸಿಕೊಂಡಿರುವೆ. ಅವು ಅನುಷ್ಠಾನಕ್ಕೆ ಬಾರದಿದ್ದರೆ; ಆಗ ಬರ್ಕೊಳ್ಳಿ. ಈಗಲೇ ಬರೆದ್ರೇ ಹೆಂಗೆ..!’
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಈಚೆಗೆ ನಗರದಲ್ಲಿ ನಡೆದ ನಾಡದೇವಿ ಉತ್ಸವದ ಧಾರ್ಮಿಕ ಸಮಾರಂಭದಲ್ಲಿ ಪರೋಕ್ಷವಾಗಿ ಪತ್ರಕರ್ತ ಸಮೂಹಕ್ಕೆ ತಮ್ಮ ಮೊನಚು ಮಾತುಗಳಿಂದಲೇ ತಿವಿದ ಪರಿಯಿದು.
‘ಇಲ್ಲಿಂದ ಇಲ್ಲಿ ತನ್ಕ ಸಿಮೆಂಟ್ ರಸ್ತೆಯಾಗಲಿ ಎನ್ನುತ್ತಿದ್ದಂತೆ ರಸ್ತೆ ನಿರ್ಮಾಣಗೊಳ್ಳಲ್ಲ. ನಂಗೂ ಒಂದಿಷ್ಟ್ ಸಮಯ ಕೊಡ್ರಿ. ಎಲ್ಲವನ್ನೂ ಬರೋಬ್ಬರಿ ಸರಿ ಮಾಡ್ತೇನೆ’ ಎನ್ನುತ್ತಿದ್ದಂತೆ ನೆರೆದಿದ್ದ ಸಭಿಕರಿಂದ ಚಪ್ಪಾಳೆಯ ಸುರಿಮಳೆ.
‘ಈಗ ನೀವು ನಮ್ಮನ್ನು ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದೀರಿ. ಆದರೆ ಇದು ಸಹ ಅಸಾಧ್ಯ. ಈ ಹಿಂದೆ ಅಧಿಕಾರಿಗಳು ಮಾಡಿದ ಎಡವಟ್ಟು. ಇದನ್ನು ಸರಿಪಡಿಸಬೇಕು ಎಂದ್ರೆ ನೀವೆಲ್ಲಾ 2026ರವರೆಗೂ ತಾಳ್ಮೆಯಿಂದ ಕಾಯಿರಿ. ಆಮೇಲೆ ನಿಮ್ಮನ್ನು ಸೇರಿಸಿಕೊಳ್ತೀವಿ’ ಎಂದು ಯತ್ನಾಳ ಹೇಳುತ್ತಿದ್ದಂತೆ; ಸಭಿಕರು ‘ಇನ್ನೂ ಎಂಟ್ ವರ್ಷ ಕಾಯ್ಬೇಕಾ’ ಎಂದು ಗೊಣಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.