ಮೈಸೂರು:‘ಯಾವುದೇ ಸಮಾರಂಭವಿರಲಿ, ವೇದಿಕೆಯ ಮೇಲೆ ಕೂತರೇನೆ ಲೀಡರ್... ವೇದಿಕೆಯ ಮುಂದೆ ಕುಳಿತರೆ ಲೀಡರ್ ಅನ್ನಿಸಿಕೊಳ್ಳುವುದಿಲ್ಲ. ಇದು ಕಾಂಗ್ರೆಸ್ ಪಕ್ಷದಲ್ಲಿರುವ ಅನೇಕರ ಮನಸ್ಥಿತಿ’. ಹೀಗೆಂದು ವಿಶ್ಲೇಷಿಸಿದವರು ನಗರದ ಒಬ್ಬ ಮಾಜಿ ಶಾಸಕರು.
ಶುಕ್ರವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಭೆಯೊಂದು ಏರ್ಪಾಡಾಗಿತ್ತು. ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದವರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿದ್ದರು. ಸಂಸದ, ಶಾಸಕರು, ಜಿಲ್ಲಾ– ನಗರ ಕಾಂಗ್ರೆಸ್ ಪದಾಧಿಕಾರಿಗಳೂ ಸೇರಿದಂತೆ 50ಕ್ಕೂ ಅಧಿಕ ನಾಯಕರು ವೇದಿಕೆಯ ಮೇಲಿದ್ದರು. ಸಭೆ ಆರಂಭವಾಗಿ ಒಂದು ಗಂಟೆಯ ನಂತರ ಬರುತ್ತಿದ್ದ ಅನೇಕರು ನೇರವಾಗಿ ವೇದಿಕೆ ಏರಿ ಬಿಡುತ್ತಿದ್ದರು. ಆದರೆ ಮೊದಲೇ ಅಲ್ಲಿ ಕುಳಿತಿದ್ದವರು ಇಂಥವರಿಗೆ ಕುರ್ಚಿ ಬಿಟ್ಟು ಕೊಡುತ್ತಿರಲಿಲ್ಲ. ಕೆಲವರು ಹಿಂದೆ ಇದ್ದ ಖಾಲಿ ಕುರ್ಚಿಯನ್ನು ಮುಂದೆ ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದರು. ಕುರ್ಚಿ ಸಿಗದೆ ನಿಂತವರೇ ಹೆಚ್ಚು. ದಿನೇಶ್ ಗುಂಡೂರಾವ್ ಮಾತನಾಡಲು ಶುರು ಮಾಡಿದಾಗಲಂತು ಅವರ ಹಿಂದೆ ಅನೇಕರು ನಿಂತಿದ್ದರು.
ಯಾಕೆ ಹೀಗೆ? ಎಂದು ಹಿರಿಯ ನಾಯಕರನ್ನು ಕೇಳಿದರೆ, ‘ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಲೀಡರ್. ಕಾರ್ಯಕರ್ತರಿಗಿಂತ ಲೀಡರ್‌ಗಳೇ ಹೆಚ್ಚು. ವೇದಿಕೆಯ ಕೆಳಗೆ ಕುಳಿತುಕೊಳ್ಳುವುದು ಅವಮಾನವೆಂದು ಭಾವಿಸಿದರೆ ಹೇಗೆ?’ ಎಂದು ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.