ವಿಜಯಪುರ: ‘ಒಬ್ಬೊಬ್ರು ಒಂದೊಂದು ಹೇಳ್ತೀರಲ್ಲೋ. ಇದಕ್ಕ ಎಷ್ಟ್ ಖರ್ಚಾಗಿದೆ ಅಂತಾ ಖರೆ ಹೇಳ್ರೋ...!’
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ಗುರುವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಧುನಿಕ ವ್ಯಾಯಾಮ ಶಾಲೆಯನ್ನು (ಜಿಮ್) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ‘ಈ ವ್ಯಾಯಾಮಶಾಲೆ ನಿರ್ಮಾಣಕ್ಕೆ ಎಷ್ಟು ಖರ್ಚಾಗಿದೆ’ ಎಂದು ಅಧಿಕಾರಿಗಳನ್ನು ಕೇಳಿದಾಗ, ಒಬ್ಬೊಬ್ಬರು ಒಂದೊಂದು ಉತ್ತರ ನೀಡುತ್ತಿದ್ದಂತೆ; ತಬ್ಬಿಬ್ಬಾದ ಸಚಿವರು ಮೇಲಿನಂತೆ ಉದ್ಗರಿಸಿದರು.
ಜಿಮ್‌ನ ಟೇಪ್ ಕತ್ತರಿಸಿಸುವುದಕ್ಕೂ ಮುನ್ನ ಮನಗೂಳಿ ಅವರು ‘ಎಷ್ಟು ಖರ್ಚಾಗಿದೆ’ ಎಂದು ಅಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ₹ 7 ಲಕ್ಷ ಎಂದರೇ, ಇನ್ನೊಬ್ಬರು ₹ 5 ಲಕ್ಷ ಎಂದರು. ಮತ್ತೊಬ್ಬರು ₹ 10 ಲಕ್ಷ ಎಂದರು. ಮೂವರು ಅಧಿಕಾರಿಗಳು ಕೊಟ್ಟ ಉತ್ತರದಿಂದ ತಬ್ಬಿಬ್ಬಾದ ಮನಗೂಳಿ, ‘ಖರೆ ಹೇಳ್ರೋ’ ಎನ್ನುತ್ತಿದ್ದಂತೆ, ಸಚಿವರ ಸುತ್ತ ಇದ್ದವರು ನಗೆಗಡಲಲ್ಲಿ ತೇಲಿದರು.
ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ, ‘ಇದಕ್ಕೆ ₹ 10 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಇನ್ನಷ್ಟು ಉಪಕರಣ ಖರೀದಿಸಿದರೆ ಸರಿಯಾಗಲಿದೆ’ ಎಂದು ಸ್ಪಷ್ಟನೆ ನೀಡಿದ ಬಳಿಕ ಸಚಿವರು ಟೇಪ್ ಕತ್ತರಿಸಿದರು. ಜಿಮ್‌ನೊಳಗೆ ತೆರಳಿ, ಉಪಕರಣವೊಂದರ ಮೇಲೆ ಕುಳಿತು ಭಾರ ಎಳೆಯುವ ಸಾಹಸ ಪ್ರದರ್ಶನದ ಪೋಸು ನೀಡುತ್ತಿದ್ದಂತೆ ನೆರೆದಿದ್ದವರೆಲ್ಲಾ ಹುಬ್ಬೇರಿಸಿದರು. ಎಂಬತ್ಮೂರರ ಹರೆಯದ ಸಚಿವರನ್ನು ನೋಡಿ... ಎಂದು ನಕ್ಕರು.
ಡಿ.ಬಿ.ನಾಗರಾಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.