ಬೆಂಗಳೂರು:ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ... ಇದು ಚಾಲಕ– ನಿರ್ವಾಹಕರರಿಗೆ ಪಾಳಿ ಬದಲಾವಣೆಯ ಬಗ್ಗೆ ವಿಶೇಷ ಸೂಚನೆ ನೀಡಬೇಕಾದ ಸಂದರ್ಭದಲ್ಲಿ ಬಿಎಂಟಿಸಿ ಮೇಲ್ವಿಚಾರಣಾ ಅಧಿಕಾರಿಗಳಿಗೆ ಕೇಳಿ
ಬರುವ ಧ್ವನಿ ಸಂದೇಶ.
‘ಚಾಲಕರು ಮೊಬೈಲ್ ಬಳಸಬಾರದು. ನಿರ್ವಾಹಕರು ಕರ್ತವ್ಯದ ವೇಳೆಯಲ್ಲಿ ಮೊಬೈಲ್ ಬಳಸಬಾರದು’ ಎಂದು ಸಂಸ್ಥೆಯವರು ಹೊರಡಿಸಿದ್ದ ಆದೇಶವನ್ನೇ ಮುಂದಿಟ್ಟುಕೊಂಡು ಬಿಎಂಟಿಸಿಯ ಹಲವಾರು ಸಿಬ್ಬಂದಿ ಫೋನನ್ನು ನಿರಂತರ ಸ್ವಿಚ್ ಆಫ್ ಮಾಡಿಡುತ್ತಿದ್ದಾರೆ.
ಫೋನ್ ನಿಷೇಧದ ಸೂಚನೆ ಕೊಟ್ಟ ನಂತರ ಸಿಗ್ನಲ್‌ನಲ್ಲಿ ಬಸ್ ನಿಂತಾಗಲೂ ಫೋನ್ ನೋಡುವ, ಟಿಕೆಟ್ ಕೊಡುವುದನ್ನು ಬಿಟ್ಟು ವಾಟ್ಸ್‌ಆ್ಯಪ್ ನೋಡುವ, ಬಸ್ ಚಾಲಕ ಹಾಗೂ ನಿರ್ವಾಹಕರ ಚಾಳಿಗೆ ಬ್ರೇಕ್ ಬಿದ್ದಿದೆ. ಆದರೆ, ಯಾವುದೋ ಮೂಲೆಯಲ್ಲಿದ್ದಾಗ ಪಾಳಿ ಬದಲಾವಣೆಯ ಸಿಬ್ಬಂದಿ ಬರುತ್ತಾನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಅಸಾಧ್ಯವಾಗಿದೆ.
‘ಆಗಾಗ ಚಕ್ಕರ್ ಹೊಡೆಯುವ ಡ್ರೈವರ್‌ಗಳು ಹಿಂದೆಲ್ಲ ತಮ್ಮ ಗೈರಿನ ಬಗ್ಗೆ ಫೋನ್ ಮೂಲಕ ಹೇಳುತ್ತಿದ್ದರು. ಈಗ ಅದೂ ಇಲ್ಲ. ಮೇಲಧಿಕಾರಿಗಳಿಗೆ ಹೇಳೋಣ ಎಂದರೆ ಅವರು ನಮ್ಮನ್ನೇ ಪ್ರಶ್ನಿಸುತ್ತಾರೆ. ಇರೋರನ್ನೇ ಅಡ್ಜಸ್ಟ್ ಮಾಡಿಕೊಂಡು ಹೋಗ್ರಪ್ಪಾ ಅಂತ ಸಂಭಾಳಿಸಬೇಕಾಗಿದೆ’ ಎಂದು ಡಿಪೋ ವ್ಯವಸ್ಥಾಪಕರೊಬ್ಬರು ಫಜೀತಿ ತೋಡಿಕೊಂಡರು.
‘ಓಹೋ ಹೀಗೂ ನೆಪ ಹೇಳ್ಬಹುದಾ? ಕಂಡಕ್ಟರ್ ಬಳಿ ಮೊಬೈಲ್ ಇರುತ್ತದೆ. ಇಲ್ಲಾಂದ್ರೆ ಪ್ರಯಾಣಿಕರನ್ನು ಕೇಳಿದ್ರೆ ಕೊಡುತ್ತಾರೆ. ಮತ್ತೇನು? ಮೊಬೈಲ್ ಇಲ್ಲದ ಕಾಲದಲ್ಲಿ ಬಸ್ ಓಡಿಸ್ತಿರಲಿಲ್ವಾ’ ಎಂದು ದುರುಗುಟ್ಟಿದರು ಬಿಎಂಟಿಸಿಯ ಹಿರಿಯ ಅಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.