ADVERTISEMENT

ಬಿಎಸ್‌ಎನ್‌ಎಲ್‌ ಅಡವಿಟ್ಟಿದ್ದೀರಾ?

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 20:10 IST
Last Updated 24 ನವೆಂಬರ್ 2018, 20:10 IST

ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರೆ ‘ಬಿಎಸ್‌ಎನ್‌ಎಲ್‌ ಹರಿಕಥೆ’ ನಡೆಯುವುದು ಖಾತ್ರಿ. ಮೊನ್ನೆ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲೂ ಇದು ಮುಂದುವರಿಯಿತು.

‘ಹೈವೆಯಲ್ಲಿ ನಾನು ಹೊರಟರೆ ಬಿಎಸ್‌ಎನ್‌ಎಲ್‌ ಸಿಗ್ನಲ್‌ ಸಿಗಲ್ಲ. ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗ ಸಂಪರ್ಕ
ಕಡಿತಗೊಳ್ಳುತ್ತದೆ. ಇದು ನಮ್ಮ ಸರ್ಕಾರದ ಕಂಪನಿ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಏರ್‌ಟೆಲ್‌, ರಿಲಯನ್ಸ್‌
ನಂತಹ ಖಾಸಗಿ ಕಂಪನಿಗಳಿಗೆ ಬಿಎಸ್‌ಎನ್‌ಎಲ್‌ ಅಡವಿಟ್ಟಿದ್ದೀರಾ’ ಎಂದು ಸಂಸದರು ರೇಗಾಡಿದರು. ‘ನಮ್ಮ (ಬಿಜೆಪಿ) ಸರ್ಕಾರದಿಂದ ಲೋಪವಾಗಿದ್ದರೆ ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳತ್ತ ನೋಡಿ ಸಣ್ಣಗೆ ಕಣ್ಣು ಮಿಟುಕಿಸಿದರು.

ಈ ‘ಹರಿಕಥೆ’ಯನ್ನು ಆಗಾಗ ಕೇಳಿ ಅನುಭವವಿದ್ದ ಅಧಿಕಾರಿಗಳು, ‘ಟವರ್‌ ವ್ಯಾಪ್ತಿಯಲ್ಲಿ ಒಂದೇ ಬಾರಿ 350ಕ್ಕಿಂತಲೂ ಹೆಚ್ಚಿನ ಜನ ಕರೆ ಮಾಡಿದಾಗ ಟ್ರಾಫಿಕ್‌ ಜಾಮ್‌ ಆಗಿ ಕಾಲ್‌ ಡ್ರಾಪ್‌ ಆಗುತ್ತದೆ’ ಎಂದು ಸಮಜಾಯಿಷಿ ಕೊಟ್ಟರು.

ADVERTISEMENT

ಇದರಿಂದಲೂ ತೃಪ್ತರಾಗ ಸಂಸದರು, ‘ಒಂದು ಲಕ್ಷ ಸಿಮ್‌ ಕೊಡಬೇಕಾದ ಕಡೆ ಐದು ಲಕ್ಷ ಸಿಮ್‌ಗಳನ್ನು ವಿತರಿಸುತ್ತೀರಿ. ಹೆಚ್ಚಿನ ಟವರ್‌ ಹಾಕುವಂತೆ ಇಲಾಖೆಯ ಸಚಿವರಿಗೆ ಮನವಿ ಕೊಟ್ಟು ಕೊಟ್ಟು ನನಗೂ ಸಾಕಾಗಿಹೋಗಿದೆ. ನಿಮ್ಮದು ವರ್ಸ್ಟ್‌ ಸರ್ವಿಸ್‌’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿದ ಅಂಕಿ– ಅಂಶಗಳು ತಾಳೆ
ಯಾಗಲಿಲ್ಲ. ‘ಬಿಎಸ್‌ಎನ್‌ಎಲ್‌ ಅಧಿಕಾರಿಗಳು ನೀಡುವ ಮಾಹಿತಿ ಬಗ್ಗೆ ನನಗೆ ನಂಬಿಕೆಯೇ ಇಲ್ಲ. ಅವರೇ ಸುಳ್ಳು ಹೇಳುತ್ತಿರಬೇಕು’ ಎಂದು ಸಂಸದರು ರಾಗ ಎಳೆದಾಗ, ಸಭೆ ನಗೆಗಡಲಿನಲ್ಲಿ ತೇಲಿತು.

ವಿನಾಯಕ ಭಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.