‘ಮದುವೆ–ಪ್ರೀತಿ ಎಂಬ ಬಂಧ ಎನ್ನುವುದು ಇಂದು ಬಂದು ನಾಳೆ ಹೋಗುವುದಲ್ಲ. ಅದು ಸದಾ ನಮ್ಮೊಳಗೆ ಹಸಿರಾಗಿರುವ ಸಮಧುರ ಬಾಂಧವ್ಯ. ಈ ಬಾಂಧವ್ಯದ ಕೊಂಡಿ ಬಿಗಿಯಾಗಬೇಕು ಎಂದರೆ ನಂಬಿಕೆಯೆಂಬ ಕೀಲಿ ಕೈಯನ್ನು ಸದಾಜೋಪಾನವಾಗಿಟ್ಟುಕೊಳ್ಳಬೇಕು. ಎರಡು ಜೀವಗಳು ಒಂದಾಗಲು ತಾಳಿ ಎಂಬುದು ಸಂಪ್ರದಾಯದ ಭಾಗ. ಆದರೆ ಮದುವೆ ಎಂದರೆ ಬದುಕು, ಹೊಂದಾಣಿಕೆ ಹಾಗೂ ಎರಡು ಜೀವಗಳ ನಡುವಿನ ಬಂಧನ. ಮದುವೆಯ ಮಧುರ ಬಾಂಧವ್ಯವನ್ನು ಸದಾ ಖುಷಿಯಾಗಿರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎನ್ನುತ್ತಾರೆ’ ಸಾಪ್ಟ್‌ವೇರ್ ಉದ್ಯೋಗಿ ನಿತಿನ್ ಕುಮಾರ್.
‘ಮದುವೆ ಎಂದರೆ ಪಂಜರದ ಗೂಡಿನಲ್ಲಿ ಬಂಧಿಸಿದಂತೆ ಎಂಬುದು ಅನೇಕರ ಯುವಜನರ ಅಭಿಪ್ರಾಯ. ಮದುವೆಯಾದ ಕೂಡಲೇ ಸ್ವೇಚ್ಛೆ ಮಾಯವಾಗುತ್ತದೆ. ಇಷ್ಟ ಬಂದ ಕಡೆ ಹೋಗಲು ಸಾಧ್ಯವಿಲ್ಲ, ಇಷ್ಟ ಬಂದ ಬಟ್ಟೆ ಧರಿಸಲು ಸಾಧ್ಯವಿಲ್ಲ. ಪತಿ ಅಥವಾ ಪತ್ನಿಗೆ ಇಷ್ಟವಿಲ್ಲದೇ ಒಂದೇ ಒಂದು ಹೆಜ್ಜೆ ಇರಿಸುವುದು ಕಷ್ಟ ಎನ್ನುವುದು ಮಿಲೇನಿಯಲ್ ಯುವಕ–ಯುವತಿಯರ ಅಳಲು. ಆದರೆ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಭಾವನೆಗಳನ್ನು ಗೌರವಿಸುವುದನ್ನು ಕಲಿತರೆ ಮದುವೆಯ ನಂತರ ಜೀವನ ಸುಗಮ’ ಎನ್ನುತ್ತಾರೆ ಗೃಹಿಣಿ ಪ್ರತಿಮಾ.
ಭಾವನೆಗಳನ್ನು ಗೌರವಿಸಿ
ಗಂಡ–ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. ಇಬ್ಬರಿಗೂ ಅವರದ್ದೇ ಆದ ಭಾವನೆಗಳಿರುತ್ತವೆ ಎಂಬುದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬರ ಭಾವನೆಗಳನ್ನು ಒಬ್ಬರು ಗೌರವಿಸುವ ಮೂಲಕ ಮಧುರಬಾಂಧವ್ಯಕ್ಕೆನಾಂದಿ ಹಾಡಬೇಕು. ಆಗ ಇಬ್ಬರ ನಡುವೆ ಪ್ರೀತಿ ಹಾಗೂ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳುತ್ತದೆ. ಪ್ರೀತಿಯ ಭಾವನೆಗೂ ಹಾಗೂ ಪ್ರೀತಿಯಿಂದ ಬದುಕುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಪ್ರೀತಿಯ ಭಾವನೆ ಇಬ್ಬರಲ್ಲೂ ಇದ್ದರೆ ಆಗ ನೀವು ಆ ಭಾವನೆಯನ್ನು ಒಪ್ಪಿಕೊಳ್ಳಬಹುದು. ಜೊತೆಗೆ ನಿಮ್ಮ ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಲು ಸಾಧ್ಯವಾಗುತ್ತದೆ ಎನ್ನುವುದು ಪ್ರತಿಮಾ ಅಭಿಪ್ರಾಯ.
ಸಂಶಯದ ಗೂಡಾಗದಿರಲಿ ಸಂಬಂಧ
‘ಪ್ರತಿ ಸಂಬಂಧವೂ ಭಿನ್ನವಾಗಿರುತ್ತದೆ. ಅನೇಕ ಕಾರಣಗಳಿಂದ ಜೀವಗಳೆರಡು ಒಂದಾಗಿರುತ್ತವೆ. ಯಾವುದೇ ಸಂಬಂಧವಾಗಲಿ ಭದ್ರವಾಗಬೇಕು ಎಂದರೆ ಸಂಬಂಧದ ಗುರಿಯನ್ನು ಇಬ್ಬರೂ ಅರಿತುಕೊಳ್ಳಬೇಕು ಹಾಗೂ ಎಲ್ಲವನ್ನೂ ಹಂಚಿಕೊಳ್ಳಬೇಕು. ತಮ್ಮ ಭವಿಷ್ಯದ ದಾರಿ ಹೇಗೆ ಸಾಗಬೇಕು ಎಂಬುದರ ಬಗ್ಗೆ ಪತಿ–ಪತ್ನಿ ಇಬ್ಬರು ಅಚಲವಾದ ನಿರ್ಧಾರ ಹೊಂದಿರಬೇಕು. ನಿಮ್ಮ ಬಗ್ಗೆ ನಿಮಗೆ ಮಾತ್ರ ತಿಳಿದಿರುವ ಎಲ್ಲಾ ವಿಷಯಗಳನ್ನು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಇಬ್ಬರೂ ಸಮಾನ ಗುರಿ ಇರಿಸಿಕೊಂಡು ಮುಂದೆ ಸಾಗಿದರೆ ಸಂಬಂಧ ಹಾಲು–ಜೇನಿನಂತಾಗುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ಕಳೆದ ಫೆಬ್ರುವರಿಯಲ್ಲಿ ಮದುವೆಯಾದ ನಿಶ್ಚಲ ಹಾಗೂ ಅರುಣ್ ದಂಪತಿ.
ಭಿನ್ನಾಭಿಪ್ರಾಯಗಳಿಗೆ ಹೆದರಿದಿರಿ
ಕೆಲವು ದಂಪತಿಗಳು ತಮ್ಮ ಮನಸ್ಸಿಗೆ ಇಷ್ಟವಾಗದ ವಿಷಯಗಳನ್ನು ಹಿಂದೆ ಮುಂದೆ ಯೋಚಿಸದೇ ಮನಸ್ಸಿಗೆ ನೋವಾಗುವ ರೀತಿ ಹೇಳಿ ಬಿಡುತ್ತಾರೆ. ಆಗ ಇಬ್ಬರ ನಡುವೆ ಜಗಳವಾಗುವುದು ಸಾಮಾನ್ಯ. ಇದರಿಂದ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳಬಹುದು. ಆದರೆ ಒಂದು ಉತ್ತಮ ಬಾಂಧವ್ಯ ವೃದ್ಧಿಯಾಗಲು ಜಗಳ ಹಾಗೂ ಸಂಘರ್ಷಗಳಿಲ್ಲದೇ ಸಾಧ್ಯವಾಗುವುದಿಲ್ಲ. ಆದರೆ ಅದೇ ವಿಷಯವನ್ನು ಪ್ರತಿಕಾರದವರೆಗೂ ಕಂಡು ಹೋಗದೇ ಭಿನ್ನಾಭಿಪ್ರಾಯಗಳನ್ನು ನಿಮ್ಮನಿಮ್ಮಲ್ಲೇ ಸರಿಪಡಿಸಿಕೊಳ್ಳುವುದು ಉತ್ತಮ. ಅವಮಾನ, ಕೀಳಾಗಿ ನೋಡುವುದು ಹಾಗೂ ಒತ್ತಾಯ ಮಾಡುವುದು ಮಾಡದೇ ಅವರ ಮಾತುಗಳಿಗೂ ಬೆಲೆ ಕೊಡಿ ಎನ್ನುವುದು ನಿತಿನ್ ಅಭಿಪ್ರಾಯ.
ಮುಕ್ತವಾಗಿ ಹಾಗೂ ಪ್ರಾಮಾಣಿಕವಾಗಿ ಮಾತನಾಡಿ
ಯಾವುದೇ ಸಂಬಂಧವಾಗಲಿ ಉತ್ತಮ ಸಂವಹನ ತುಂಬಾ ಮುಖ್ಯ. ಸಂಗಾತಿಗಳಿಬ್ಬರಿಗೂ ದಾಂಪತ್ಯದಲ್ಲಿ ತಮಗೇನು ಬೇಕು ಎಂಬುದು ತಿಳಿದಿರಬೇಕು. ತಮ್ಮ ಮನಸ್ಸಿನ ಬಯಕೆಗಳನ್ನು ಮುಕ್ತವಾಗಿ ಮಾತನಾಡಿಕೊಳ್ಳಬೇಕು. ತಮ್ಮ ಬಯಕೆ, ಭಯ ಹಾಗೂ ಆಸೆಗಳನ್ನು ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಹಂಚಿಕೊಳ್ಳಬೇಕು. ಇದರಿಂದ ನಂಬಿಕೆ ಗಟ್ಟಿಗೊಳ್ಳುತ್ತದೆ ಹಾಗೂ ಇಬ್ಬರ ನಡುವೆ ಬಾಂಧವ್ಯ ವೃದ್ಧಿಯಾಗುತ್ತದೆ ಎನ್ನುವುದು ಅರುಣ್ ಅಭಿಪ್ರಾಯ.
ಹವ್ಯಾಸ ಹಾಗೂ ಇತರ ಸಂಬಂಧ ಜೀವಂತವಾಗಿರಲಿ
ಮದುವೆಗೂ ಮೊದಲಿನ ಹವ್ಯಾಸ, ಸ್ನೇಹಿತರು ಹಾಗೂ ಸಂಬಂಧಿಕರನ್ನು ಭೇಟಿ ಮಾಡುವುದನ್ನು ನಂತರವೂ ಮುಂದುವರಿಸಿ. ಯಾವುದೇ ಸಿನಿಮಾ, ಶಾಪಿಂಗ್ ಅಥವಾ ಹೊರಗಡೆ ಹೋಗುವ ಸದಾ ಸಂಗಾತಿ ಜೊತೆಗಿರಬೇಕು ಎಂದು ಬಯಸಬೇಡಿ. ಜೊತೆಗೆ ಅವರು ಇರಲೇಬೇಕು ಎಂದು ಒತ್ತಡ ಹಾಕಬೇಡಿ. ಆಗಾಗ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಹೊರಗಡೆ ಹೋಗಿ. ಜೊತೆಗೆ ನಿಮ್ಮ ಹವ್ಯಾಸ ಹಾಗೂ ಆಸಕ್ತಿಯನ್ನು ಮುಂದುವರಿಸಿ. ಇದರಿಂದ ನಿಮಗೂ ಬೇಸರವಾಗುವುದಿಲ್ಲ. ಸಂಬಂಧವೂ ಚೆನ್ನಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.