ADVERTISEMENT

ಹೆಣ್ಣಿನ ಕಾಮಪ್ರಜ್ಞೆ ಜಾಗೃತಿ ಯಾವಾಗ?

ಡಾ.ವಿನೋದ ಛೆಬ್ಬಿ
Published 20 ಏಪ್ರಿಲ್ 2019, 12:38 IST
Last Updated 20 ಏಪ್ರಿಲ್ 2019, 12:38 IST
ವಿನೋದ ಛೆಬ್ಬಿ
ವಿನೋದ ಛೆಬ್ಬಿ   

ಹೋದಸಲ ಕ್ಲಿಟರಸಿ ಬಗೆಗೆ ಹೇಳುತ್ತ, ಭಗಾಂಕುರದದ ಬಗೆಗಿನ ಅರಿವು ಮೂಡಿಸುವ ಜಗದ ಸಂದೇಶವೊಂದನ್ನು ಹಂಚಿಕೊಂಡೆ. ಈಸಲ ಹೆಣ್ಣು ತನ್ನ ಕಾಮಪ್ರಜ್ಞೆಯನ್ನು ಕಂಡುಕೊಳ್ಳುವುದರ ಬಗೆಗೆ ಚರ್ಚಿಸೋಣ. ಇದಕ್ಕೊಂದು ದೃಷ್ಟಾಂತ:

ಬಹಳ ವರ್ಷಗಳ ಹಿಂದೆ ಮಹಿಳೆಯೊಬ್ಬಳ ಮನೆಗೆ ಹೋಗಿದ್ದೆ. ಆಕೆಯ ಎರಡು ವರ್ಷದ ಮಗಳು ಕುರ್ಚಿಯ ಮೇಲೆ ಕುಳಿತಿದ್ದವಳು, ನಾನು ನೋಡುತ್ತಿರುವಂತೆ ತೊಡೆ ಅಗಲಿಸಿ ಚಡ್ಡಿಯೊಳಗೆ ಕೈಹಾಕಿ ಜನನಾಂಗವನ್ನು ಮುಟ್ಟಿಕೊಳ್ಳಲು ಶುರುಮಾಡಿದಳು. ಇದನ್ನು ಕಂಡ ಮಹಿಳೆ ಎಷ್ಟು ಜೋರಾಗಿ ಗದರಿಸಿದಳು ಎಂದರೆ, ಮಗು ಬೆಚ್ಚಿಬಿದ್ದು ಕೈತೆಗೆದು ಅಳುತ್ತ ಹೊರಟುಹೋಯಿತು. ನಂತರ ಇವಳು ನನ್ನತ್ತ ತಿರುಗಿ, ‘ಸ್ಸಾರಿ, ಇವಳಿಗೆ ಜನರೆದುರು ಹೇಗೆ ನಡೆದುಕೊಳ್ಳಬೇಕು ಎಂದೇ ಗೊತ್ತಾಗುವುದಿಲ್ಲ!’ ಎಂದು ತಪ್ಪಿತಸ್ಥ ನಗೆ ಬೀರಿದಳು. ಜನರೆದುರು ಮಗುವನ್ನು ಗದರಿಸಿದ್ದು ಒಳ್ಳೆಯ ನಡವಳಿಕೆಯೋ ಹೇಗೆ ಎಂಬುದನ್ನು ಆಕೆ ಯೋಚಿಸಿದಂತೆ ಕಾಣಲಿಲ್ಲ.

ಇಲ್ಲೇನು ನಡೆಯಿತು? ಜನನಾಂಗಗಳನ್ನು ಕುತೂಹಲದಿಂದ ಅನ್ವೇಷಿಸುವ ಮಗುವು, ‘ಈ ಸುಖ ಬಿಟ್ಟುಬಿಡು!’ ಎನ್ನುವ ತಾಯಿಯ ಕಟ್ಟಪ್ಪಣೆಯನ್ನು ಅನುಸರಿಸಿ ನಿಲ್ಲಿಸಿತೇನೋ ಸರಿ. ಅದರೊಡನೆ ಇನ್ನೊಂದು ವಿಶೇಷವೂ ನಡೆಯಿತು. ಮಗುವು ಅಲ್ಲಿರದೆ ಅಳುತ್ತ ಎದ್ದುಹೋಯಿತು. ಅಂದರೆ ತಾಯಿಯ, ‘ನೀನು ನನಗೆ ಬೇಡ!’ ಎಂಬ ತಿರಸ್ಕಾರದ ಸಂದೇಶದಿಂದ ಮಗುವು ಅನಾಥ ಭಾವ ಹೊಂದಿ ದೂರವಾಯಿತು. ಇಲ್ಲಿ ಮಗುವು ಸುಖವನ್ನು ಬಿಟ್ಟುಕೊಟ್ಟಿದ್ದಲ್ಲದೆ ತಾಯಿಯಿಂದ ದೂರೀಕರಣಕ್ಕೆ ನಿರ್ಧರಿಸಿದ್ದನ್ನು ಗಮನಿಸಿ. ಮನಶಾಸ್ತ್ರದ ಪ್ರಕಾರ, ಎರಡು ವರ್ಷದ ಮಕ್ಕಳು ಇನ್ನೂ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗಾಗಿ ತಾಯಿಯಿಂದ (ಅಥವಾ ಯಾವುದೇ ಹಿರಿಯರಿಂದ) ತಿರಸ್ಕೃತವಾದಾಗ ಅಳುತ್ತ, ಪುನರ್ಜೋಡಣೆಯ ಆಶಯದಿಂದ ಅಲ್ಲೇ ಇರುತ್ತಾರೆ. ತಾಯಿ ಅಂಥದ್ದರಲ್ಲಿ ಈ ಮಗು ದೂರವಾದಳೆಂದರೆ ಗದರಿಕೆಯ ಪ್ರಭಾವ ಎಳೆಯ ಮನಸ್ಸಿನ ಮೇಲೆ ಏನಾಗಿರಬಹುದು? ನಂಟು ಬಯಸಿ ತಿರಸ್ಕರಿಸಲ್ಪಟ್ಟು ನಿರಾಶೆ ಹೊಂದುವ ನೋವಿಗಿಂತ ಒಂಟಿತನದ ನೋವೇ ವಾಸಿಯೆಂದು ಅನ್ನಿಸಿರಬಹುದು. ಇದು ಆಕೆಯ ಕಾಮಪ್ರಜ್ಞೆ ಹಾಗೂ ನಂಟಿನ ಮೇಲಾದ ಆಘಾತ. ಇದನ್ನು ಸಿದ್ಧಪಡಿಸಲೋ ಎಂಬಂತೆ ಇಪ್ಪತ್ತು ವರ್ಷಗಳ ತರುವಾಯ ಅದೇ ಮಗುವು ದೊಡ್ಡವಳಾಗಿ ಮನೋಲೈಂಗಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ನನ್ನನ್ನು ಭೇಟಿಯಾದಳು!

ADVERTISEMENT

ಎಲ್ಲರೂ ಹುಟ್ಟಿನಿಂದ ಲೈಂಗಿಕ ವ್ಯಕ್ತಿಗಳೇ ಆಗಿರುತ್ತಾರೆ. ಚಿಕ್ಕವರಿರುವಾಗ (ಪ್ರಬುದ್ಧರಂತೆ ಸಂಗಾತಿಯ ಜೊತೆಗೆ ಕಾಮಸುಖವನ್ನು ಹಂಚಿಕೊಳ್ಳುವ ಕಲ್ಪನೆ ಬರದಿದ್ದರೂ) ಜನನಾಂಗದ ಬಗೆಗಿನ ಕುತೂಹಲ, ಸ್ಪರ್ಶಿಸುವ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತವೆ. ಆದರೆ ಬೆಳವಣಿಗೆಯ ಹಂತದಲ್ಲಿ ಹಿರಿಯರಿಂದ ಬಂದ ಕಟ್ಟಪ್ಪಣೆಗಳು, ಹೇಳಿಕೊಟ್ಟ ಸಂದೇಶಗಳು ಇವೆಯಲ್ಲ, ಅವೇ ವಯಸ್ಕರ ಸಹಜ ಲೈಂಗಿಕ ಅಭಿವ್ಯಕ್ತಿಗೆ ಅಡ್ಡಿಯಾಗುತ್ತವೆ. ಅವಿಲ್ಲದಿದ್ದರೆ ಯಾರಾದರೂ ಸರಿ, ಆರೋಗ್ಯಕರ ಕಾಮಪ್ರಜ್ಞೆ ಬೆಳೆಸಿಕೊಳ್ಳಬಹುದು! ಹಲವು ವರ್ಷಗಳ ಹಿಂದೆ ‘ಸುಖೀಭವ’ದಲ್ಲಿ ಓದುಗರೊಬ್ಬರು ಮುಂದಿಟ್ಟ ಸಮಸ್ಯೆ ನೆನಪಾಗುತ್ತದೆ. ಅವರ ಐದು ವರ್ಷದ ಪೋರಿ ಹೊದಿಕೆಯೊಳಗೆ ತನ್ನ ಜನನಾಂಗವನ್ನು ತೀವ್ರವಾಗಿ ಸ್ಪರ್ಶಿಸಿಕೊಳ್ಳುತ್ತಾಳಂತೆ; ನಂತರ ಏದುಸಿರಿನಿಂದ ಬೆವರುತ್ತ ಮುಸುಕು ತೆಗೆಯುತ್ತಾಳಂತೆ. ಇದಕ್ಕೆ ಅಡ್ಡಿ ತಂದರೆ ಕಿರುಚಿ ಪ್ರತಿಭಟಿಸುತ್ತಾಳಂತೆ. ಇದೇನು ರೋಗವೋ ಎಂದು ಗಾಬರಿಯಾದವರಿಗೆ ಭರವಸೆ ಕೊಟ್ಟಿದ್ದೆ. ಆಕೆ ಹಸ್ತಮೈಥುನ ಮಾಡಿಕೊಂಡು ಸಹಜವಾದ ಕಾಮತೃಪ್ತಿ ಕಂಡುಕೊಳ್ಳುತ್ತಿದ್ದಾಳೆ, ಹಾಗಾಗಿ ಅಡ್ಡಿಬರಕೂಡದು ಎಂದಿದ್ದೆ. ಈಗ ಆ ಪೋರಿ ಪ್ರಬುದ್ಧಳಾಗಿ ತನ್ನ ಕಾಮಪ್ರಜ್ಞೆಯನ್ನು ಆರೋಗ್ಯಕರವಾಗಿ ಬೆಳೆಸಿಕೊಂಡಿದ್ದಾಳೆ ಎಂದುಕೊಂಡಿದ್ದೇನೆ.

ಹಿರಿಯರು ಹೇರುವ ನಿಷೇಧಗಳಲ್ಲಿ ಲೈಂಗಿಕ ಅಭಿವ್ಯಕ್ತಿಯು ಖಾಸಗಿಯಾಗಿರಲಿ ಎನ್ನುವುದಕ್ಕಿಂತ ಲೈಂಗಿಕ ಅಭಿವ್ಯಕ್ತಿಯೇ ಅಸಹ್ಯಕರ ಎನ್ನುವ ಅಭಿಪ್ರಾಯ ಇರುವುದು ದುರಂತ. ಇದರಿಂದ ಲೈಂಗಿಕತೆಯ ಬಗೆಗಿನ ನಿಗೂಢತೆ ಹಾಗೆಯೇ ಉಳಿದು, ಕಾಮುಕತೆಯನ್ನು ಸಹಜವಾಗಿ ಒಪ್ಪಿಕೊಳ್ಳುವುದೇ ಹೆಣ್ಣಿಗೆ ದುಸ್ಸಾಧ್ಯ ಆಗಿಬಿಡುತ್ತದೆ.

ಕಾಮಪ್ರಜ್ಞೆಯ ಅಭಿವ್ಯಕ್ತಿಗೆ ಸಂಬಂಧಪಟ್ಟ ನಿಷೇಧಗಳ ಜೊತೆಗೆ ಇನ್ನೊಂದು ಪಿಡುಗು ಎಂದರೆ ದೈಹಿಕ ಅವಹೇಳನ (body shaming). ಹೆಣ್ಣಿನ ಶರೀರದ ಬಗೆಗೆ ಹರಡುವ ದುರಭಿಪ್ರಾಯಗಳು ಸಾರ್ವಕಾಲಿಕವೂ ಸಾಂಕ್ರಾಮಿಕವೂ ಆಗಿವೆ– ಇವು ಗಂಡಿನ ಬಗೆಗೂ ಇವೆಯಾದರೂ ಪುರುಷ ಪ್ರಧಾನ ವ್ಯವಸ್ಥೆಯ ಕಾರಣದಿಂದ ಅಷ್ಟಾಗಿ ಬಾಧಿಸುವುದಿಲ್ಲ. ಮೈಕಟ್ಟು, ಮೈಬಣ್ಣ, ಸ್ತನಗಳ ಗಾತ್ರ ಇತ್ಯಾದಿಗಳ ಬಗೆಗಿನ ಇತರರ ಪೂರ್ವಗ್ರಹದ ಮಾತುಗಳು ಹೆಣ್ಣನ್ನು ಅಧೀರಳನ್ನಾಗಿ ಮಾಡುತ್ತವೆ. ಉದಾ. ಹೆಣ್ಣೊಬ್ಬಳು, ‘ನೀನು ದಪ್ಪಗಿದ್ದೀಯಾ, ಅದಕ್ಕೇ ಮದುವೆ ಕಷ್ಟ’ ಎಂಬ ಜನಧೋರಣೆಯನ್ನು ಎದುರಿಸುತ್ತಿದ್ದಾಳೆ ಎಂದುಕೊಳ್ಳಿ. ಫಲಶ್ರುತಿ ಏನಾಗುತ್ತದೆ? ಮದುವೆಗೆ ಮುಂಚೆ ನಿಷೇಧವಾದ ಕಾಮದ ಅಭಿವ್ಯಕ್ತಿಯು ಮದುವೆಯ ನಂತರವೂ ನಿಷೇಧವಾಗುತ್ತದೆ! ಅದರಲ್ಲಂತೂ ಶರೀರವನ್ನು ಅವಮಾನಿಸಿ (ನಿನ್ನ ಸ್ತನಗಳು ಚಿಕ್ಕವು, ಅದಕ್ಕೇ ನನಗೆ ತೃಪ್ತಿ ಸಿಗುತ್ತಿಲ್ಲ) ಆತ್ಮವಿಶ್ವಾಸ ಕುಗ್ಗಿಸುವ ಗಂಡ ಸಿಕ್ಕರೆ ತನ್ನ ಕಾಮುಕತೆಯ ಅರ್ಹತೆಯನ್ನೇ ಪ್ರಶ್ನಿಸಿಕೊಳ್ಳುವ ಹಾಗಾಗುತ್ತದೆ. ಹಾಗಾಗಿ ಗಂಡಿಗೆ ಆಕರ್ಷಕಳಾಗಿ ಕಾಣಲು ನಾನಾ ರೀತಿ ಹೆಣಗುವುದು ಹೆಣ್ಣಿನ ಕಾಮುಕತೆಗೆ ಅಂಟಿದ ಶಾಪವಾಗುತ್ತದೆ.

ಪರಿಹಾರವೇನು? ಹೆಣ್ಣು ತನ್ನ ಕಾಮುಕತೆಯನ್ನು ಮನಪೂರ್ತಿ ಅನುಭವಿಸಲು ಏನು ಮಾಡಬೇಕು? ಇದಕ್ಕೊಂದೇ ಉಪಾಯವಿದೆ. ಇನ್ನೊಬ್ಬರಿಂದ (ಭಾವನಾತ್ಮಕವಾಗಿ) ಪ್ರತ್ಯೇಕಗೊಂಡು ತನ್ನತನದೊಂದಿಗೆ ತನ್ನ ಕಾಮಪ್ರಜ್ಞೆಯನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ‘ಹೀಗೆಯೇ ಬದುಕುವುದು ನನ್ನ ಹಣೆಬರಹ’ ಎಂದು ಒಪ್ಪಿಕೊಳ್ಳುವುದರ ಬದಲು ‘ಹೀಗಿದ್ದರೂ ನಾನು ಹೇಗೆ ಬದುಕಬಲ್ಲೆ?’ ಎಂದು ಯೋಚಿಸಬೇಕಾಗುತ್ತದೆ. ತನ್ನ ಸುಖ ತನ್ನೊಳಗಿನದು, ಹಾಗಾಗಿ ತನ್ನ ಅಂತರಂಗವನ್ನು ಸಂಪರ್ಕಿಸಿ ಅನುಭವ ಪಡೆಯಬೇಕಾಗುತ್ತದೆ. ಇದಕ್ಕಾಗಿ ಕೆಲವು ಸ್ವಗತಗಳನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ. ‘ನನ್ನ ಶರೀರವು ಹೇಗೇ ಇರಲಿ, ನಾನೊಂದು ಕಾಮಜೀವಿ. ನನಗೂ ಕಾಮದ ಬದುಕಿನ ಹಕ್ಕಿದೆ. ಅದನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದು ನನ್ನ ಕೈಯಲ್ಲಿದೆ’ ಇತ್ಯಾದಿ. ಸಮಸ್ಯೆ ಏನೆಂದರೆ, ಹೀಗೆನ್ನಲು ಅನೇಕರಿಗೆ ಆತ್ಮವಿಶ್ವಾಸದ ಕೊರತೆ ಅಡ್ಡಿಬರುತ್ತದೆ! ಮುಂದೇನು?

ಆತ್ಮವಿಶ್ವಾಸದ ಕೊರತೆ ಇದ್ದರೂ ಹೆಣ್ಣು ಧನಾತ್ಮಕವಾಗಿ ಬದುಕಲು ಸಾಧ್ಯವೆಂದು ಲೇಖಕಿ ಶಾನನ್ ‌ಯ್ಯಾಶ್ಲೀ ಹೇಳುತ್ತಾಳೆ. ಶರೀರವು ಸರಿ ಇಲ್ಲವೆಂದು ಕಡಿಮೆ ಆತ್ಮವಿಶ್ವಾಸ ಇದ್ದರೂ ಕಾಮಸುಖವನ್ನು ಸವಿಯಬಹುದು ಎನ್ನುತ್ತಾಳೆ. ತನ್ನ ಶರೀರವು ಹೆಚ್ಚಿನವರಂತೆ ಇಲ್ಲವೆನ್ನುವುದು ವಾಸ್ತವವಾದರೂ ತನ್ನನ್ನು ‘ಕಡಿಮೆ ಮನುಷ್ಯಳು’ ಎಂದು ಕಡೆಗಣಿಸಲು ಆಸ್ಪದ ಕೊಡಬಾರದು ಎಂದು ಎಚ್ಚರಿಸುತ್ತಾಳೆ.

ಹೆಣ್ಣು ಕಾಮಪ್ರಜ್ಞೆಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕೆ ಇನ್ನೊಂದು ಫಲಶ್ರುತಿಯೂ ಇದೆ. ಕಾಮಸುಖ ಪಡೆಯುವುದರಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಹಾಗಾಗಿ ಸುಖವು ಬದ್ಧಸಂಬಂಧದಲ್ಲೇ ಸಿಗಲಿ, ಆಕಸ್ಮಿಕವಾಗಿ ಆದರೂ ಸಿಗಲಿ, ಅಥವಾ ಹಸ್ತಮೈಥುನವಾದರೂ ಸರಿ- ಆತ್ಮವಿಶ್ವಾಸ ಹುಟ್ಟುವುದಕ್ಕೆ ಕಾಯದೆ ತೆರೆದುಕೊಳ್ಳಬೇಕು ಎಂದು ಯ್ಯಾಶ್ಲೀ ಹೇಳುತ್ತಾಳೆ. ಹಸ್ತಮೈಥುನಕ್ಕೆ ಅಂಟಿರುವ ಮಡಿವಂತಿಕೆಯನ್ನು ತೊಡೆದುಹಾಕಿ. ಯಥೇಷ್ಟ ಸುಖ ಅನುಭವಿಸಿ. ಅದು ನಿಮ್ಮ ಶರೀರವನ್ನು ಗೌರವಿಸುವ ರೀತಿ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.