ADVERTISEMENT

ಹೆಣ್ಣಿನ ಸ್ವತಂತ್ರ ಕಾಮಬಯಕೆ

ಡಾ.ವಿನೋದ ಛೆಬ್ಬಿ
Published 20 ಏಪ್ರಿಲ್ 2019, 12:35 IST
Last Updated 20 ಏಪ್ರಿಲ್ 2019, 12:35 IST
   

ಹೆಣ್ಣು ಸ್ವತಂತ್ರ ಕಾಮಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮುಂಚೆ ತಾನೂ ಗಂಡಿನಂತೆ ಕಾಮಜೀವಿಯೆಂದು ಸಾರ್ವತ್ರಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಹೋರಾಟ ಮಾಡಬೇಕಾಗುತ್ತದೆ ಹಾಗೂ ಈ ಪ್ರಯತ್ನವು ಎಷ್ಟೋ ಸಲ ಗರ್ಭಧಾರಣೆಯ ಅಪಘಾತದಲ್ಲಿ ಕೊನೆಗೊಂಡು ಮೂಲ ಉದ್ದೇಶಕ್ಕೇ ಸಂಚಕಾರ ಬರುತ್ತದೆ ಎಂದು ಮಾತಾಡಿಕೊಳ್ಳುತ್ತಿದ್ದೆವು.

ಹೆಣ್ಣು ಸ್ವತಂತ್ರವಾಗಿ ಕಾಮಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಬಗೆ ಹೇಗೆ? ನನಗೆ ಗೊತ್ತಿರುವಂತೆ ಇದಕ್ಕೆ ಎರಡು ಆಯಾಮಗಳಿವೆ.

ಒಂದು: ಸ್ವಂತ ವ್ಯಕ್ತಿತ್ವವನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ತನ್ನಿಷ್ಟದಂತೆ ಕಾಮಪ್ರಜ್ಞೆಯನ್ನು ವೈಯಕ್ತಿಕವಾಗಿ ಬೆಳೆಸಿಕೊಳ್ಳುವುದು. ಇದು ನಮ್ಮ ಬದುಕಿನ ಯಾವುದೇ ಗುರಿಯನ್ನು (ಉದಾ. ಲೇಖಕಿ, ಪಾಕಪ್ರವೀಣೆ, ಆರ್ಥಿಕ ತಜ್ಞೆ) ಇಟ್ಟುಕೊಂಡು ಅದನ್ನು ಸಾಧಿಸುವತ್ತ ಸ್ವಾಯತ್ತತೆಯಿಂದ ಮಾಡುವ ನಿರಂತರ ಯತ್ನದಂತೆ. ಇದರಲ್ಲಿ ಏನೇನು ಒಳಗೊಳ್ಳುತ್ತವೆ? ಕಾಮಕ್ಕೆ ಸಂಬಂಧಪಟ್ಟ ಯಾವುದೇ ಶಾರೀರಿಕ ಸಂವೇದನೆಗೆ ಗಮನ ಕೊಡುವುದನ್ನು ಹಿಡಿದು, ಅದನ್ನು ಅಭಿವ್ಯಕ್ತಿಗೊಳಿಸುವ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು. ತನ್ನ ಕಾಮಾಂಗಗಳು ತನಗಾಗಿ ಇವೆಯೆಂದು ಅರಿತುಕೊಳ್ಳುತ್ತ ಅವುಗಳ ಮೇಲೆ ಸ್ವಾಮ್ಯ-ಬಾಂಧವ್ಯ ಸಾಧಿಸುತ್ತ ಬೆಳೆಸುವುದು, ಅವುಗಳನ್ನು ಉದ್ದೇಶಪೂರ್ವಕ ಸ್ಪರ್ಶಿಸಿಕೊಂಡು ಸುಖಪಡುವುದು, ಕಾಮದ ಬಗೆಗೆ ಅಂತರಂಗದಲ್ಲಿ ಆಗುವ ತುಮುಲಕ್ಕೆ ಒಪ್ಪಿಸಿಕೊಳ್ಳುತ್ತ ಸ್ವಗತ ಸಂಭಾಷಣೆ ನಡೆಸುವುದು, ನಂಬಿಕಸ್ಥ ಹಿರಿಯರೊಂದಿಗೆ ಚರ್ಚಿಸುತ್ತ ಹೆಣ್ಣಿನ ಲೈಂಗಿಕತೆಯ ಬಗೆಗಿರುವ ಮೌಲ್ಯಗಳನ್ನೂ ನಂಬಿಕೆಗಳನ್ನೂ ಪ್ರಶ್ನಿಸುವುದು, ಸಮವಯಸ್ಕರೊಡನೆ ಹಂಚಿಕೊಳ್ಳುವುದು, ಲೈಂಗಿಕ ಸಾಹಿತ್ಯ ಓದುವುದು, ಹೆಣ್ಣಿನ ಕಾಮದ ಬಗೆಗೆ ಸಾಹಿತ್ಯ ರಚಿಸುತ್ತ ಸ್ವಂತ ಕಲ್ಪನೆಗಳನ್ನು ಕತೆ-ಕವನಗಳಲ್ಲಿ ಹರಿಬಿಡುವುದು ಇತ್ಯಾದಿ. ಅದನ್ನು ಮುಂದೆ ಸಂಗಾತಿಯೊಂದಿಗೆ ಬಳಸಿಕೊಳ್ಳುವುದರ ಬಗೆಗೂ ಕಲ್ಪಿಸಿಕೊಳ್ಳಬಹುದು. ಇದರ ನಡುವೆ ತಾನು ಸಲಿಂಗಕಾಮಿ ಎನ್ನಿಸಿದರೆ ಅದನ್ನೂ ಸಹಜವೆಂದು ಒಪ್ಪಿಕೊಳ್ಳುತ್ತ ಅನ್ವೇಷಿಸುವುದು ಇದರಲ್ಲಿ ಸೇರುತ್ತದೆ.

ADVERTISEMENT

ಎರಡು: ತನ್ನ ಕಾಮಪ್ರಜ್ಞೆಯನ್ನು ಸಂಬಂಧದೊಳಗೆ ಹುಡುಕಿಕೊಳ್ಳುವುದು. ಇದಕ್ಕೆ ಸಂಗಾತಿಯ ಸಹಯೋಗ ಕಟ್ಟಿಕೊಳ್ಳುವುದು. ಈ ಹಂತದಲ್ಲಿ ಸಂಬಂಧದ ದೀರ್ಘಕಾಲೀನತೆಯ ಬಗೆಗೆ ಯೋಚಿಸಬೇಕಾಗಿಲ್ಲ. ಹಾಗೊಂದು ವೇಳೆ ಯೋಚಿಸಿದರೂ ಸಂಗಾತಿಯನ್ನು ಮೆಚ್ಚಿಸಲು ತನ್ನ ಕಾಮಪ್ರಜ್ಞೆಯಲ್ಲಿ ಮಾರ್ಪಾಟು ಮಾಡಿಕೊಳ್ಳುವುದು ಖಂಡಿತವಾಗಿಯೂ ಬೇಡ. ಉದಾಹರಣೆಗೆ, ಕಾಮದ ಮಾತೆತ್ತಿದಾಗ ಸಂಗಾತಿ ನಿರ್ಲಕ್ಷಿಸಿದರೆ ಅಲ್ಲಿಗೇ ನಿಲ್ಲಿಸಬಾರದು; ಬದಲಾಗಿ ಸಂಗಾತಿಯ ಇಂಗಿತವನ್ನು ಪ್ರಶ್ನಿಸಿ ಸ್ಪಷ್ಟಪಡಿಸಿಕೊಳ್ಳಬೇಕು. ತನ್ನ ಕಾಮಪ್ರಜ್ಞೆಯನ್ನು ಜಾಗೃತಗೊಳಿಸುವ ಉದ್ದೇಶವು ಇನ್ನೊಬ್ಬರೊಡನೆ ಸುಖ ಹಂಚಿಕೊಳ್ಳುವುದಕ್ಕಾಗಿಯೇ ವಿನಾ ಅವರನ್ನು ಮೆಚ್ಚಿಸಲಿಕ್ಕಾಗಿ ಅಲ್ಲ ಎನ್ನುವ ನಿಲುವು ಬೆಳೆಸಿಕೊಳ್ಳುವುದು ಇದರ ತಿರುಳು. ಇದು ಸಾಮಾನ್ಯವಾಗಿ ಹೇಗೆ ನಡೆಯುತ್ತದೆ, ಹಾಗೂ ಪರಿಣಾಮಕಾರಿ ಆಗಬೇಕಾದರೆ ಹೇಗೆ ನಡೆಸಬೇಕು ಎನ್ನುವುದನ್ನು ದೃಷ್ಟಾಂತಗಳ ಮೂಲಕ ವಿವರಿಸುತ್ತೇನೆ.

ಇವರಿಬ್ಬರೂ ಪರಸ್ಪರ ಪರಿಚಯ ಆಗಿದ್ದಾರೆ. ಸಂಬಂಧ ಗಾಢವಾದ ನಂತರ ಗಂಡು ಯೋನಿಯ ಸಂಪರ್ಕಕ್ಕೆ ಹಾತೊರೆಯುತ್ತಾನೆ. ಅದಕ್ಕೆ ಹೆಣ್ಣು ಕಾರಣ ಕೊಡದೆ ನಿರಾಕರಿಸಿದಾಗ (ಬಹುಶಃ ಮದುವೆ ಆಗಿಲ್ಲವೆಂದು) ಒಪ್ಪಿಕೊಳ್ಳುತ್ತಾನೆ. ನಿರಾಸೆಯಾದರೂ ತಡೆದುಕೊಳ್ಳುತ್ತ ಅವಳು ತಯಾರಾಗುವುದಕ್ಕೆ ಕಾಯುತ್ತಾನೆ. ಆಕೆ ಯೋನಿಯ ಬದಲು ಸಹಾಯಹಸ್ತ ನೀಡಿದರೆ ಸುಖಪಟ್ಟು ಧನ್ಯನಾಗುತ್ತಾನೆ. ಅದೇ ಮದುವೆಯಾಯಿತೋ, ಸಂಭೋಗವು ತನ್ನ ಹಕ್ಕೆಂದು ಮುಗಿಬೀಳುತ್ತಾನೆ. ಇಲ್ಲಿ ಮದುವೆಗೆ ಮುಂಚೆ ಕೂಡುವುದು ಕೂಡದು ಎನ್ನುವ, ಹಾಗೂ ಮದುವೆಯ ನಂತರ ಕೂಡಲೇಬೇಕು ಎನ್ನುವ ನೀತಿಗೆ ಜೋತುಬೀಳುವ ಗಂಡಿನ ಮನೋಭಾವವು ಹೆಣ್ಣು ಕಾಮಪ್ರಜ್ಞೆಗೆ ತೆರೆದುಕೊಳ್ಳುವುದಕ್ಕೆ ಅಡ್ಡಿಯಾಗುತ್ತವೆ. ಯಾಕೆಂದರೆ, ಸಾಕಷ್ಟು ಸಂದರ್ಭಗಳಲ್ಲಿ ಹೆಣ್ಣಿನ ಭಾವನೆಗಳನ್ನು ನಿರ್ಲಕ್ಷಿಸುವ ಚಿಕ್ಕ ವಿಷಯಗಳೂ ಕಾಮಪ್ರಜ್ಞೆಯ ಮೇಲೆ ಪ್ರಭಾವ ಬೀರುತ್ತವೆ. ಇಲ್ಲೊಂದು ಘಟನೆ ನೆನಪಾಗುತ್ತಿದೆ: ಔತಣಕೂಟಕ್ಕೆ ಹೋಗುವ ದಾರಿಯಲ್ಲಿ ಗಂಡನು ಹೆಂಡತಿಯು ಹಾಕಿಕೊಂಡ ಉಡುಪನ್ನು ಹೀಗಳೆದ. ಆದರೆ ಪಾರ್ಟಿಯಲ್ಲಿ ಎಲ್ಲರೂ ಈಕೆಯ ಉಡುಪನ್ನು ಮೆಚ್ಚಿದರು. ಮನೆ ಸೇರಿ ಮಲಗುವಾಗ ಗಂಡ ಕಾಮಕೂಟ ಬಯಸಿದ. ಆಕೆ ಒಪ್ಪಲಿಲ್ಲ. ‘ನೀನೆಷ್ಟು ಆಕರ್ಷಕಳಾಗಿ ಕಾಣುತ್ತೀಯಾ ಎಂದರೆ ನಿನ್ನನ್ನು ಬಿಡಲು ಮನಸ್ಸಾಗುತ್ತಿಲ್ಲ’ ಎಂದು ಮೈಮೇಲೆ ಬರಲು ನೋಡಿದ. ಆಕೆ ಅವನನ್ನು ದೂರತಳ್ಳಿ ಹೇಳಿದಳು: ‘ಪಾರ್ಟಿಯಲ್ಲಿ ಜನ ನನ್ನನ್ನು ಮೆಚ್ಚಿದ್ದು ನನ್ನೊಡನೆ ಸುಖಪಡಲು ಅಲ್ಲ. ನೀನಾದರೋ ನನ್ನೊಡನೆ ಸುಖಪಡಲು ಮಾತ್ರ ಮೆಚ್ಚುಗೆ ತೋರಿಸುತ್ತಿದ್ದೀಯಾ!’ ಪಾರ್ಟಿಯಲ್ಲಿ ತನ್ನನ್ನು ಮೆಚ್ಚಿದ ಗಂಡಸನ್ನು ನೆನೆಸಿಕೊಳ್ಳುತ್ತ ಒಬ್ಬಳೇ ಸುಖಪಟ್ಟಳೇ ಹೊರತು ತಾನು ಗಳಿಸಿಕೊಂಡ ಸುಖದ ಅರ್ಹತೆಯನ್ನು ತನ್ನನ್ನು ಹೀಗಳೆದ ವ್ಯಕ್ತಿಯೊಡನೆ ಹಂಚಿಕೊಳ್ಳಲು ಇಷ್ಟಪಡಲಿಲ್ಲ.

ಇಲ್ಲೇನು ಕಾಣುತ್ತದೆ? ಹೆಣ್ಣು ಕಾಮಪ್ರಜ್ಞೆಗೆ ತೆರೆದುಕೊಳ್ಳಬೇಕಾದರೆ ದಾಂಪತ್ಯದ ಕರ್ತವ್ಯಕ್ಕೆ ಪೂರಕವಾದ ನೀತಿಯನ್ನು ಪಾಲಿಸುವುದರ ಬದಲು ತನಗೆ ಹಿತವೆನಿಸುವ ನೀತಿಯನ್ನು ರಚಿಸಿಕೊಳ್ಳಬೇಕು. ಇಲ್ಲೊಬ್ಬಳು ತನ್ನ ಕಾಮಪ್ರಜ್ಞೆಗೆ ಸೂಕ್ತ ಸ್ಪಂದನೆ ಸಿಗುವ ತನಕ ಗಂಡನನ್ನು ಸೇರಲು ಇಷ್ಟಡುವುದಿಲ್ಲ ಎಂದು ಹೇಳಿದ್ದಾಳೆ. ಅವಸರವಾದರೆ ಆತ ಇತರ ಹೆಣ್ಣಿನೊಡನೆ ತೀರಿಸಿಕೊಳ್ಳಬಹುದು ಎಂದಿದ್ದಾಳೆ. ಒಂದು ವೇಳೆ ಅವನು ಅದನ್ನೇ ಮಾಡಿದರೆ ಎಂದಾಗ ನಕ್ಕು ಹೇಳುತ್ತಾಳೆ: ‘ಬೇಕೆಂದೇ ಹಾಗೆ ಹೇಳಿದ್ದೇನೆ. ಅದೇ ಅವನ ಸತ್ವಪರೀಕ್ಷೆ. ಒಂದು ವೇಳೆ ನಾನು ಅಂದಿದ್ದನ್ನು ಒಪ್ಪಿಗೆಯೆಂದು ತಿಳಿದು ಹೊರಸಂಪರ್ಕ ಮಾಡಿದರೆ ನನ್ನ ಕಾಮಪ್ರಜ್ಞೆಗೆ ಎಷ್ಟು ಬೆಲೆಕೊಡುತ್ತಾನೆ ಎಂಬುದು ಗೊತ್ತಾಗುತ್ತದೆ!’ ಯಾವುದೇ ಸಂಬಂಧದಲ್ಲಿ ಹೆಣ್ಣು ತೃಪ್ತಿ ಪಡೆಯಬೇಕಾದರೆ ತನ್ನ ಅನಿಸಿಕೆಗಳಿಗೆ ಬೆಲೆಕೊಡಲು ಗಂಡಿಗೆ ಸವಾಲು ಹಾಕಲೇಬೇಕಾಗುತ್ತದೆ– - ಮದುವೆ ಆಗಲಿ, ಆಗದಿರಲಿ.

ಇಲ್ಲಿ ಬಸಿರಿನ ಬಗೆಗೆ ಒಂದು ಮಾತು: ಅಪೇಕ್ಷೆಗೆ ತಕ್ಕಂತೆ ಕಾಮತೃಪ್ತಿ ಸಿಗದಿರುವಾಗ ಅನೇಕ ಹೆಂಗಸರು ಮಗುವನ್ನು ಮಾಡಿಕೊಂಡಾದರೂ ತೃಪ್ತಿ ಪಡೆಯಲು ಹೊರಡುತ್ತಾರೆ. ವಾಸ್ತವವೇನೆಂದರೆ, ಕಾಮತೃಪ್ತಿ ಹಾಗೂ ಮಾತೃವಾತ್ಸಲ್ಯ ಎರಡೂ ಬೇರೆಯಾಗಿವೆ. ಹಾಗಾಗಿ ಒಂದರ ಕೊರತೆಯನ್ನು ಇನ್ನೊಂದರಿಂದ ಭರ್ತಿಮಾಡಲಿಕ್ಕೆ ಆಗುವುದಿಲ್ಲ. ಕಾಮತೃಪ್ತಿಯನ್ನು ಸ್ಥಿರವಾಗಿ ಪಡೆದುಕೊಳ್ಳಬಲ್ಲೆ ಎಂದು ಮನವರಿಕೆ ಆಗುವ ತನಕ ಸಂಬಂಧವನ್ನು ಅಲ್ಲೇ ತಡೆಯಬೇಕು. ಇದು ಅರ್ಥವಾಗಲು ಈ ದೃಷ್ಟಾಂತ: ಇವರಿಬ್ಬರೂ ಭಾವನಾತ್ಮಕವಾಗಿ ಸಾಕಷ್ಟು ಹತ್ತಿರವಾಗಿದ್ದಾರೆ. ಈಕೆ ನಿಧಾನವಾಗಿ ತನ್ನ ಕಾಮದ ಬಯಕೆಗಳ ಬಗೆಗೆ ಗೆಳತಿಯರೊಂದಿಗೆ ಮಾತಾಡಿಕೊಳ್ಳುವುದನ್ನು ಅವನೊಂದಿಗೆ ಬಿಚ್ಚುಮನಸ್ಸಿನಿಂದ ಹಂಚಿಕೊಳ್ಳುತ್ತಾಳೆ. ಅವನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಿದ್ದಾನೆ. ಐದು ವರ್ಷಗಳ ನಂತರ ಒಮ್ಮಿಂದೊಮ್ಮೆಲೇ ಅವನನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾಳೆ. ಯಾಕೆ? ಅವರಿಬ್ಬರೂ ಸುಮಾರು ಸಲ ತಬ್ಬಿಕೊಂಡು ಮುಖಕ್ಕೆ ಮುಖ ತಾಗಿಸಿದ್ದರೂ ಆತ ತುಟಿಗೆ ತುಟಿ ಸೇರಿಸಿಲ್ಲ. ಅವನ ತಬ್ಬುಗೆಯಲ್ಲಿ ತಡಕಾಟ, ಹುಡುಕಾಟ ಕಾಣುವುದಿಲ್ಲ. ಹಾಗಾಗಿ ತನಗೆ ಬೇಕಾದುದು ಸಿಗಲಾರದೆಂದು ತಿಂಗಳುಗಟ್ಟಲೆ ಖಿನ್ನತೆಗೆ ಶರಣಾಗಿಯೂ ಅವನಿಂದ ದೂರವಾಗಿದ್ದಾಳೆ. ತಾಯಿ ಕೇಳಿದರೆ ಹೇಳುತ್ತಾಳೆ: ‘ಅವನ ಒಳ್ಳೆಯ ಗುಣಗಳಿಗೆ ಒಪ್ಪಿ ಮದುವೆಯಾಗಿ ನನ್ನ ಕಾಮನೆಗಳನ್ನು ಕಳೆದುಕೊಂಡು ನರಳುವುದರ ಬದಲು ನನ್ನ ಕಾಮನೆಗಳನ್ನು ಉಳಿಸಿಕೊಳ್ಳುತ್ತ ಅವನನ್ನು ಕಳೆದುಕೊಳ್ಳುವುದೇ ಸರಿ.’ ಕಾಮಪ್ರಜ್ಞೆ ಅರಳಲಿಲ್ಲವೆಂಬ ಕಾರಣದಿಂದ ಭದ್ರವಾದ ಬಾಂಧವ್ಯವನ್ನು ಮುರಿದುಕೊಳ್ಳುವ ಪ್ರಸಂಗ ಬಂದರೆ ಸಂಕೋಚ, ಕೀಳರಿಮೆ ಅಥವಾ ತಪ್ಪಿತಸ್ಥಭಾವ ಬೇಡ. ದುಃಖವಾದರೂ ಸಹಜವೆಂದು ಸ್ವೀಕರಿಸುವುದೇ ಹಿತ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.