ಹೆಣ್ಣು ಕಾಮಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಹಾದಿಯಲ್ಲಿ ಕುಟುಂಬದ ಹಿತಚಿಂತನೆಯ ಬದಲು ತನಗೆ ಹಿತವೆನಿಸುವ ನೀತಿಯನ್ನು ರಚಿಸಿಕೊಳ್ಳಬೇಕು, ಹಾಗೂ ಕಾಮಪ್ರಜ್ಞೆಯ ಅಭಿವ್ಯಕ್ತಿಗೆ ಅವಕಾಶ ಸಿಗದಿದ್ದರೆ ಭದ್ರ ಬಾಂಧವ್ಯವನ್ನು ಮುರಿದುಕೊಳ್ಳಲೂ ತಯಾರಾಗಬೇಕು ಎಂದು ಹೇಳುತ್ತಿದ್ದೆ. ಈ ಸಲ ಹೆಣ್ಣಿಗೆ ಸಂಬಂಧಪಟ್ಟ ಇನ್ನೊಂದು ಬಹುಸೂಕ್ಷ್ಮ ವಿಷಯಕ್ಕೆ ಹೋಗೋಣ. ಹೆಣ್ಣು ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಆಕೆಯ ಕಾಮಪ್ರಜ್ಞೆಯ ಗತಿ ಏನಾಗುತ್ತದೆ, ಹಾಗೂ ಅದನ್ನು ಮರುಪಡೆಯುವುದು ಹೇಗೆಂದು ನೋಡೋಣ.
ಹೆಣ್ಣಿನ ಹೆಮ್ಮೆ ಹಾಗೂ ದುರಂತ ಎಂದರೆ ಆಕೆ ಯೋನಿಯನ್ನು ಹೊಂದಿರುವುದು. ಯಾವುದೇ ದೌರ್ಜನ್ಯವಾದಾಗ ಹೆಣ್ಣಿನ ಶರೀರವು ಕದನಭೂಮಿ ಆಗುತ್ತದೆ. ಎನ್ನುವ ಮಾತಿದೆ. ಹಾಗೆಂದು ದೌರ್ಜನ್ಯ ನಡೆಯಬೇಕಾದರೆ ಯುದ್ಧವೇ ಬೇಕೆಂದಿಲ್ಲ. ಗಂಡಿನ ಪಾರಮ್ಯವನ್ನು ಮೆರೆಸುವ ಯಾವುದೇ ತಾರತಮ್ಯ ಅಥವಾ ಹೆಚ್ಚುಗಾರಿಕೆ ಇದ್ದರೆ ಸಾಕು! ಹೆಣ್ಣಿನ ಮೇಲೆ ದೌರ್ಜನ್ಯವು ಸಾಮಾನ್ಯವಾಗಿ ಕುಟುಂಬದ ಹಾಗೂ ದಾಂಪತ್ಯದ ನೆರಳಲ್ಲೇ ಹೆಚ್ಚಾಗಿ ನಡೆಯುತ್ತದೆ. ಅಷ್ಟೇ ಅಲ್ಲ, ಬದ್ಧ ಸಂಬಂಧಗಳಲ್ಲಿ ಕರ್ತವ್ಯ, ಜವಾಬ್ದಾರಿ, ರಕ್ಷಣೆ ಮುಂತಾದ ಎಲ್ಲರೂ ಒಪ್ಪುವ ಮಾದರಿಯಲ್ಲೇ ಬಹುಸೂಕ್ಷ್ಮವಾಗಿ ನಡೆಯುತ್ತದೆ. ಉದಾಹರಣೆಗಾಗಿ, ಹೆಣ್ಣು ಆಕರ್ಷಕ ಉಡುಪು ಧರಿಸಿ ‘ದೇಹಪ್ರದರ್ಶನ’ ಮಾಡುವುದರ ಬಗೆಗೆ ನಿಷೇಧ ಹೇರುವುದು ಒಂದು ರೀತಿಯ ದೌರ್ಜನ್ಯವಾದರೆ, ಆ ನಿಷೇಧವನ್ನು ಪಾಲಿಸಿದ ಹೆಣ್ಣು ಮದುವೆಯ ನಂತರ ಕಾಮಕೂಟದಲ್ಲಿ ಗಂಡಿಗೆ ಪೂರ್ತಿ ತೆರೆದುಕೊಳ್ಳಬೇಕು ಎಂದು ನಿರೀಕ್ಷಿಸುವುದು ಇನ್ನೊಂದು ರೀತಿಯ ದೌರ್ಜನ್ಯ. ಹಾಗೆಯೇ, ಒಲ್ಲದ ಹೆಂಡತಿಯನ್ನು ಹಕ್ಕಿನ ಹೆಸರಿನಲ್ಲಿ ಸಂಭೋಗಕ್ಕೆ ಒತ್ತಾಯಿಸುವುದು, ಮೊಮ್ಮಗು ಬೇಕೆಂದು ಮನವೊಪ್ಪದ ಸೊಸೆ/ಮಗಳನ್ನು ಯೋನಿಪರೀಕ್ಷೆಗೆ ಒಳಪಡಿಸುವುದು, ಕಾಮಾಕಾಂಕ್ಷೆ ಇಲ್ಲದಿದ್ದರೂ ಕೇವಲ ಕರ್ತವ್ಯ ಅಥವಾ ಕೌಟುಂಬಿಕ ಭದ್ರತೆಯ ಕಾರಣದಿಂದ ಮೈ ಒಪ್ಪಿಸಿಕೊಳ್ಳುವಂತೆ ಬಲವಂತ ಮಾಡುವುದು – ಇವೆಲ್ಲ ದೌರ್ಜನ್ಯದ ವಿವಿಧ ಮುಖಗಳು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಹೆಣ್ಣಿನ ಅನುಭವ ಏನು? ಅದನ್ನು ಅರ್ಥಮಾಡಿಕೊಳ್ಳಲು ಹೀಗೆ ಕಲ್ಪಿಸಿಕೊಳ್ಳಿ: ನಿಮ್ಮ ಮೇಲೆ ಮೂವರು ದುಷ್ಟರು ಆಕ್ರಮಣ ಮಾಡಲು ಉಧ್ಯುಕ್ತರಾಗಿದ್ದಾರೆ. ತಪ್ಪಿಸಿಕೊಳ್ಳಲು ಏನು ಮಾಡುತ್ತೀರಿ? ಒಂದೋ ಹತ್ತಿರ ಇರುವವರ ನೆರವಿನಿಂದ, ಅದಾಗದಿದ್ದರೆ ಪಲಾಯನ, ಅದೂ ಆಗದಿದ್ದರೆ ಹೋರಾಟ ಮಾಡುತ್ತೀರಿ. ಇದಾವುದೂ ಸಾಧ್ಯವಾಗದೆ ಇರುವಾಗ? ಆಕ್ರಮಣವನ್ನು ಅನುಭವಿಸಲೇಬೇಕು ಎಂದು ಅಂತರ್ಬೋಧೆಯಾದಾಗ ಹೋರಾಟ ನಿಲ್ಲಿಸುತ್ತೀರಿ. ಶರೀರದ ಮೇಲೆ ನಡೆಯುವ ಆಘಾತವನ್ನು ನಡೆಯಲು ಬಿಟ್ಟುಕೊಟ್ಟು ‘ಈ ಶರೀರ ನನ್ನದಲ್ಲ!’ ಎಂದು ಅದರಿಂದ ಮನಸ್ಸನ್ನು ಕಳಚಿಕೊಳ್ಳುತ್ತೀರಿ - ಇದಕ್ಕೆ ಎಚ್ಚರ/ಜ್ಞಾನ ತಪ್ಪುವುದು, ಮೂರ್ಛೆ ಹೋಗುವುದು ಇತ್ಯಾದಿ ಹೆಸರಿದೆ.
ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ಮನಸ್ಸು ಹೀಗೆಯೇ ಕೆಲಸ ಮಾಡುತ್ತದೆ. ಗಾಸಿಸಿದ ಭಗ್ನವಾದ ಶರೀರವನ್ನು ಒಪ್ಪಿಕೊಳ್ಳುವುದು ಆಘಾತಕರ ಸಂಗತಿ. ಹಾಗಾಗಿ ಘಟನೆ ನಡೆದೇ ಇಲ್ಲವೆಂದು ನಂಬಲು ಮನಸ್ಸು ಬಯಸುತ್ತದೆ. ಆದರೆ ದೇಹದ ಮೇಲೆ ಆಕ್ರಮಣದ ಗುರುತು ಇರುತ್ತದಲ್ಲವೆ? ಅದಕ್ಕಾಗಿ ಶರೀರವು ತನ್ನದೆಂದು ಗುರುತಿಸಲು ನಿರಾಕರಿಸುತ್ತದೆ. ಪರಿಣಾಮವಾಗಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ತನು–ಮನಗಳ ನಡುವಿನ ಸಂಬಂಧವನ್ನು ಕಡಿದುಕೊಳ್ಳುತ್ತಾಳೆ. ಶರೀರದಿಂದ ಬರುವ ನೋವಿನ ಸಂವೇದನೆಗಳ ಜೊತೆಗೆ ಸುಖದ ಸಂವೇದನೆಗಳನ್ನೂ ಹತ್ತಿಕ್ಕುತ್ತಾಳೆ. ತನ್ನ ಮೈ ಅಗ್ಗ, ಕೊಳಕು, ಅಪವಿತ್ರ ಇತ್ಯಾದಿ ಅಂದುಕೊಂಡು ತುಚ್ಛೀಕರಿಸುತ್ತಾಳೆ. ತನಗೂ ಸುಖಪಡುವ ಅರ್ಹತೆಯಿದೆ, ಹಕ್ಕಿದೆ ಎಂಬ ಪರಿಕಲ್ಪನೆಯನ್ನೇ ಒಪ್ಪುವುದಿಲ್ಲ. ಶರೀರವನ್ನೇ ದೂರವಿಟ್ಟವಳಿಗೆ ಕಾಮಪ್ರಜ್ಞೆ ಬರುವುದಾದರೂ ಹೇಗೆ?
ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಕಾಮಪ್ರಜ್ಞೆಯನ್ನು ಮರುಪಡೆಯಲು ಸಾಧ್ಯವೆ? ಖಂಡಿತವಾಗಿಯೂ ಸಾಧ್ಯವಿದೆ. ಅದಕ್ಕೊಂದು ದೃಷ್ಟಾಂತ:
ಸಂಪ್ರದಾಯಸ್ಥ ಕುಟುಂಬದ ಇವಳನ್ನು ಮನೆಯಲ್ಲಿರುವ ಸೋದರಮಾವನಿಗೆ ಕೊಡುವುದೆಂದು ಮುಂಚೆಯೇ ಮಾತಾಗಿತ್ತು. ಇವಳು ಹದಿನೈದರಲ್ಲಿ ಇರುವಾಗ ಮೂವತ್ತರ ಅವನು ಅತ್ಯಾಚಾರ ಶುರುಮಾಡಿದ. ಇದು ಹಿರಿಯರ ಕಣ್ಣಿಗೆ ಬಿದ್ದರೂ, ನಾಳೆ ಇಬ್ಬರೂ ಮದುವೆ ಆಗುವವರೇ ಎಂದು ಇವಳ ದೂರನ್ನು ಅಲಕ್ಷಿಸುತ್ತಿದ್ದರು. ಇಪ್ಪತ್ತಕ್ಕೆ ಮದುವೆಯ ಹೆಸರಿನಲ್ಲಿ ಅತ್ಯಾಚಾರಕ್ಕೆ ಅಧಿಕೃತ ಮುದ್ರೆ ಬಿತ್ತು. ವಿಕೃತ ಮನಸ್ಸಿನ ಗಂಡ ಹಿಂದಿನಿಂದ ಭೋಗಿಸುತ್ತಿದ್ದುದರಿಂದ ಹಾಸಿಗೆ ರಕ್ತ ಆಗುತ್ತಿತ್ತು. ಈ ಶರೀರ ತನ್ನದಲ್ಲ ಎಂದುಕೊಂಡಿದ್ದು, ನಂತರ ಬಚ್ಚಲಿಗೆ ಹೋಗಿ ತೊಳೆದುಕೊಳ್ಳುತ್ತಿದ್ದಳು. ಅಂಥದ್ದರಲ್ಲೂ ಆಕೆ ಓದಿ ತಜ್ಞಳಾಗಿ ತನ್ನ ಬೆಲೆಯನ್ನು ಕಂಡುಕೊಂಡಳು. ಆಗ ಪರಿಚಯವಾಗಿದ್ದು ಹತ್ತು ವರ್ಷ ಚಿಕ್ಕವನಾದ ಸಹೋದ್ಯೋಗಿ. ಮೊದಮೊದಲು ವಾತ್ಸಲ್ಯದಿಂದ ನೋಡುತ್ತಿದ್ದವಳು ಪ್ರೇಮ- ಗೌರವ ತೋರಿಸುವ ಅವನಿಗೆ ಮಾರುಹೋದಳು. ಆಕೆ ಕತೆಯನ್ನು ಹೇಳುತ್ತ, ಆತ ಕೇಳುತ್ತ ಇಬ್ಬರೂ ಹತ್ತಿರವಾದರು. ಇವಳು ಪ್ರಣಯಗೀತೆಯನ್ನು ಬರೆದು ಓದುವಾಗ ಅವನು ಹಿಂದೀ ಚಿತ್ರಗೀತೆಗಳನ್ನು ಭಾವಪೂರ್ಣವಾಗಿ ಹಾಡಿ ಹೃದಯ ತಣಿಸುತ್ತಿದ್ದ. ಒಂದುಸಲ ಈಕೆ, ‘ತುಟಿಗೆ ತುಟಿ ಬೆಸೆದು ಬೀಗ ಜಡಿಯೋಣ’ ಎಂದು ಬರೆದಾಗ ಇವನೊಳಗೇನೋ ಸ್ಫುರಿಸಿತು. ಅವಳಿಗೇನೋ ಕೊಡಲು ನಿರ್ಧರಿಸಿ, ತನ್ನೊಳಗಿನದನ್ನು ಮುಟ್ಟಲು ಕೇಳಿದ. ಆಕೆಗೆ ರೋಚಕ ಎನ್ನಿಸಿತು. ಮುಟ್ಟುವುದೇನು, ಅವನನ್ನು ತನ್ನೊಳಗೆ ಬರಮಾಡಿಕೊಂಡಳು. ಅನಿರ್ವಚನೀಯ ಸುಖ ಅನುಭವಿಸಿದಳು.
ಇದೆಲ್ಲ ಹೇಗೆ ಸಾಧ್ಯವಾಯಿತು? ಅವಳನ್ನು ಒಬ್ಬ ಗಾಸಿ ಮಾಡಿದ, ಇನ್ನೊಬ್ಬ ವಾಸಿ ಮಾಡಿದ. ಪರಸ್ಪರ ನಂಬಿಕೆಯುಳ್ಳ ನಿಕಟ ಬಾಂಧವ್ಯದಲ್ಲಿ ನಡೆದದ್ದನ್ನು ಅವಳ ಬಾಯಿಯಿಂದಲೇ ಕೇಳಿ: ‘ಇಷ್ಟುದಿನ ನನ್ನ ಶರೀರವು ಮನದ ವಿರುದ್ಧ ಅನಧಿಕೃತ ಪ್ರವೇಶದಿಂದ ಗಾಸಿಯಾಗುತ್ತಿತ್ತು. ಆದರೆ ಇವನು ನನ್ನನ್ನು ತನ್ನ ಮನದೊಳಗೆ ಬರಮಾಡಿಕೊಂಡ. ಹಾಗೆಯೇ ಶರೀರದ ಮನಸ್ಸನ್ನೂ ತಟ್ಟಿದ’. ಅಸ್ತಿತ್ವ ಅಂದರೇನು? ಇನ್ನೊಬ್ಬರ ಮನದೊಳಗೆ ಇರುವುದು. ತಾನು ಇನ್ನೊಬ್ಬನ ಮನದಲ್ಲಿ ಬದುಕಿರುವುದು ಖಚಿತವಾದಾಗ ಬದುಕುವುದರಲ್ಲಿ ಅರ್ಥಕಂಡಳು. ಬಿಟ್ಟುಕೊಟ್ಟ ಶರೀರದ ಸಂಪರ್ಕವನ್ನು ಕೈಗೆತ್ತಿಕೊಂಡಳು. ಸತ್ತುಹೋದ ಸಂವೇದನೆಗಳಿಗೆ ಮರುಜೀವ ಕೊಟ್ಟು ಕಾಮಪ್ರಜ್ಞೆಗೆ ಚೈತನ್ಯ ತುಂಬಿದಳು.
ಇಂಥ ದೊಡ್ಡ ದಿಟ್ಟ ಹೆಜ್ಜೆ ಎಲ್ಲರಿಗೂ ಕಷ್ಟಸಾಧ್ಯ. ಸಾಮಾನ್ಯವಾಗಿ ಹೆಣ್ಣಿಗೆ ಏನೇನು ಆಯ್ಕೆಗಳಿವೆ?
ದೌರ್ಜನ್ಯಕ್ಕೆ ತುತ್ತಾದ ಹೆಣ್ಣು ತನ್ನ ಹತ್ತಿರದ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುತ್ತಾರೆ ಎಂಬ ಆಶಯ ಇಟ್ಟುಕೊಳ್ಳದೆ ತಾನು ನಂಬುವ ಒಬ್ಬಿಬ್ಬರೊಂದಿಗೆ ಹಂಚಿಕೊಳ್ಳಬಹುದು (ಉದಾ: ತಾಯಿ, ಅಕ್ಕ). ಆತ್ಮೀಯ ಸ್ನೇಹಿತ ವರ್ಗವಂತೂ ಸರಿಯೆ. ನಂತರ ತನ್ನ ಕಾಮಪ್ರಜ್ಞೆಯನ್ನು ಕಂಡುಕೊಳ್ಳುವ ಹಾದಿಯಲ್ಲಿ ಅರ್ಥಮಾಡಿಕೊಂಡು ಸ್ನೇಹಪರ ನಂಬಿಕಸ್ಥ ಗಂಡಿನೊಂದಿಗೆ ನಿಷ್ಕಾಮ ನಿರ್ಲೈಂಗಿಕ ಬಾಂಧವ್ಯ ಕಟ್ಟಿಕೊಳ್ಳಲು ನೋಡಬಹುದು. (ಎಚ್ಚರಿಕೆ: ಇದನ್ನು ಸರಿಪಡಿಸಿಕೊಂಡು ಆರೋಗ್ಯಕರ ಮನಸ್ಥಿತಿಯನ್ನು ತಂದುಕೊಳ್ಳದ ಹೊರತು ಮದುವೆ ಆಗುವುದು ಸ್ವಲ್ಪವೂ ಉಚಿತವಲ್ಲ-. ಅದರಿಂದ ಅನಾಹುತವೇ ಆಗಬಹುದು.) ಅತ್ಯಂತ ಸೂಕ್ತ ಪರಿಹಾರ ಎಂದರೆ ಮನೋಲೈಂಗಿಕ ಚಿಕಿತ್ಸೆ ಪಡೆಯುವುದು. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಆಘಾತಕ್ಕೆ ಒಳಗಾಗಿ ಬದುಕಿ ಬಂದವರಿಗೆ ತಮ್ಮ ಶರೀರದ ಮೇಲೆ ಮರುಹಕ್ಕು ಪಡೆದುಕೊಳ್ಳಲು ತನು–-ಮನ -ಚೈತನ್ಯಗಳನ್ನು ಸಮರಸಗೊಳಿಸುವ ಚಿಕಿತ್ಸೆಯಿದೆ!
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.