ಆಸ್ಪತ್ರೆಗಳ ‘ಜೀವ’ ಉಳಿಸುವುದು ಹೇಗೆ? ಎಂಬ ವಿಷಯಸೂಚಿಯಡಿ ಪ್ರಕಟವಾದ ಲೇಖನಗಳ (ಅಂತರಾಳ, ನ. 5) ಹಿನ್ನೆಲೆಯಲ್ಲಿ, ನನ್ನ ಜೀವನದಲ್ಲಿ ಹಾಗೂ ಸುತ್ತಮುತ್ತ ನಡೆದ ಕೆಲ ಘಟನೆಗಳನ್ನು ವಿವರಿಸುತ್ತೇನೆ.
ಘಟನೆ 1. ಇತ್ತೀಚೆಗೆ ನನ್ನ ಪತ್ನಿಗೆ ಕತ್ತಿನಲ್ಲಿ ಒಂದು ಗಂಟು ಆಗಿದ್ದರಿಂದ ಪರೀಕ್ಷೆಗೆಂದು ಬೆಂಗಳೂರಿನ ಖ್ಯಾತ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದೆ. ಅವಳನ್ನು ಹಿರಿಯ ತಜ್ಞ ವೈದ್ಯರು ಪರೀಕ್ಷಿಸಿದ ನಂತರ ಸಹಾಯಕ ವೈದ್ಯರು ಸಿ.ಟಿ. ಸ್ಕ್ಯಾನ್, ಎಕ್ಸ್‌ರೇ, ಇ.ಸಿ.ಜಿ, ಎಕೋ, ರಕ್ತಪರೀಕ್ಷೆ (ಕೇವಲ ಕೆಲ ತಿಂಗಳ ಹಿಂದೆ ಅದೇ ಕಾರಣಕ್ಕಾಗಿ ರಕ್ತಪರೀಕ್ಷೆ ಮಾಡಿಸಿ ವರದಿ ತಂದಿದ್ದರೂ) ಮತ್ತು ಅರಿವಳಿಕೆ ಪರೀಕ್ಷೆ ಮಾಡಿಸಿ ವರದಿ ತರಬೇಕೆಂದು ಸೂಚಿಸಿದರು.
ಸಿ.ಟಿ. ಸ್ಕ್ಯಾನ್ ಮಾಡಿಸುವಾಗ ಎಕ್ಸ್‌ರೇ ಯಾಕೆಂದು, ಎಕೋ ಮಾಡಿಸುವಾಗ ಇ.ಸಿ.ಜಿ. ಯಾಕೆಂದು, ಇನ್ನೂ ಸರ್ಜರಿ ಮಾಡಬೇಕೇ ಬೇಡವೇ ಎಂದು ನಿರ್ಧಾರವಾಗಿಲ್ಲದಿರುವಾಗ ಅರಿವಳಿಕೆ ಪರೀಕ್ಷೆ ಯಾಕೆಂದು ಮನಸ್ಸು ಕೇಳಿದರೂ, ವೈದ್ಯರ ಮಾತನ್ನು ಮೀರದಂತೆ ಸುಮಾರು ₹ 20 ಸಾವಿರ ತೆತ್ತು ಎಲ್ಲಾ ಪರೀಕ್ಷೆಗಳನ್ನು ಮಾಡಿಸಿದೆ. ತಮಾಷೆಯೆಂದರೆ ಅರಿವಳಿಕೆ ಪರೀಕ್ಷೆ ಮಾಡಿಸಲು ತೆರಳಿದಾಗ ಅದೇ ಆಸ್ಪತ್ರೆಯ ವೈದ್ಯರು, ‘ಎಕೋ ಪರೀಕ್ಷೆ ಯಾಕೆ ಮಾಡಿಸಿದಿರಿ’ ಎಂದು ಕೇಳಿದರು. ಅದಕ್ಕೆ ನಾನು, ‘ವೈದ್ಯರು ಸೂಚಿಸಿದುದರಿಂದ ಮಾಡಿಸಿದೆ’ ಎಂದು ತಿಳಿಸಿದಾಗ ಸುಮ್ಮನಾದರು.
ಘಟನೆ 2. ಹಳ್ಳಿಯ ಬಂಧುವೊಬ್ಬರು ಎದೆ ನೋವೆಂದು ಪಕ್ಕದ ಜಿಲ್ಲಾ ಕೇಂದ್ರದ ತಜ್ಞ ವೈದ್ಯರಲ್ಲಿ ತೋರಿಸಲಾಗಿ, ಅವರು ಎಲ್ಲಾ ಪರೀಕ್ಷೆಗಳನ್ನು ಮಾಡಿಸಿ ಏನೂ ತೊಂದರೆ ಇಲ್ಲವೆಂದೂ, ಕೇವಲ ಗ್ಯಾಸ್ಟ್ರಿಕ್ ತೊಂದರೆ ಎಂದೂ ಕೆಲವು ಮಾತ್ರೆಗಳನ್ನು ನೀಡಿದ್ದರು. ಆದರೂ ಸಮಾಧಾನವಾಗದ ಬಂಧುಗಳು ನಗರಕ್ಕೆ ಬಂದಿದ್ದರು. ಅವರನ್ನು ನಗರದ ಇನ್ನೊಬ್ಬ ತಜ್ಞ ವೈದ್ಯರ ಬಳಿ ಕರೆದುಕೊಂಡು ಹೋದಾಗ ಅವರು ಮತ್ತೊಮ್ಮೆ ಎಲ್ಲಾ ಪರೀಕ್ಷೆಗಳನ್ನು ಅವರ ನರ್ಸಿಂಗ್ ಹೋಂನಲ್ಲಿ ಮಾಡಿಸಲು ಹೇಳಿದರು.
ಆದರೆ ನಾನು ನನಗೆ ಪರಿಚಯವಿದ್ದ ಇನ್ನೊಂದು ಡಯಾಗ್ನಾಸ್ಟಿಕ್ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿ (ಪುನಃ ಎಲ್ಲಾ ನಾರ್ಮಲ್ ಎಂದು ವರದಿ ಬಂತು) ವರದಿಗಳನ್ನು ವೈದ್ಯರ ಬಳಿ ತೆಗೆದುಕೊಂಡು ಹೋದಾಗ, ಆ ವೈದ್ಯರು ‘ಈ ಆಸ್ಪತ್ರೆಯಲ್ಲಿ ಯಾಕೆ ಮಾಡಿಸಲಿಲ್ಲ? ಬೇರೆ ಕೇಂದ್ರದ ವರದಿಗಳನ್ನು ನಂಬಲು ಆಗುವುದಿಲ್ಲ. ಹದಿನೈದು ದಿನ ಬಿಟ್ಟು ಇನ್ನೊಮ್ಮೆ ಬಂದು ಇಲ್ಲಿಯೇ ಪರೀಕ್ಷೆ ಮಾಡಿಸಿ ವರದಿ ತೋರಿಸಿ’ ಎಂದು ಸೂಚಿಸಿ, ಕೆಲ ವಿಟಮಿನ್ ಮಾತ್ರೆಗಳನ್ನು ಬರೆದು ಸಾಗಹಾಕಿದರು. ನಾನು ನನ್ನ ಬಂಧುಗಳಿಗೆ ‘ಮತ್ತೊಮ್ಮೆ ತೋರಿಸುವ ಅಗತ್ಯವಿಲ್ಲ. ಏನೂ ಆಗಿಲ್ಲ’ ಎಂದು ಧೈರ್ಯ ತುಂಬಿ ಕಳುಹಿಸಿದೆ.
ಮೇಲಿನ ಘಟನೆಗಳನ್ನು ನೋಡಿದಾಗ ವೈದ್ಯರ ಮೇಲಿನ ವಿಶ್ವಾಸವೇ ಹೋದಂತಾಗುತ್ತದೆ. ನಿಜ, ಇತ್ತೀಚೆಗೆ ವೈದ್ಯರ ಶುಲ್ಕದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ ಹೆಚ್ಚು ಜನರಿಗೆ ವೈದ್ಯರ ತಜ್ಞತೆ ಬಗ್ಗೆಯಾಗಲೀ, ಶುಲ್ಕದ ಬಗ್ಗೆಯಾಗಲೀ ತಕರಾರು ಇಲ್ಲ. ಅವರ ತಕರಾರು ಹೆಚ್ಚಾಗಿ ಇರುವುದು ರೋಗಿಗಳನ್ನು ಅನವಶ್ಯಕ ಪರೀಕ್ಷೆಗೊಳಪಡಿಸುವ ಬಗ್ಗೆ.
ಇತ್ತೀಚೆಗೆ ನನ್ನ ಸಹೋದರ ಓಡುವಾಗ ಕಾಲು ಉಳುಕಿದಂತಾಗಿ ಮೂಳೆ ತಜ್ಞರ ಬಳಿ ಹೋದಾಗ, ಎಂ.ಆರ್.ಐ. ಸ್ಕ್ಯಾನ್ ಮಾಡಿಸುವಂತೆ ಅವರು ಸೂಚಿಸಿದರು. ಸುಮಾರು ₹ 7 ಸಾವಿರ ತೆತ್ತು ಎಂ.ಆರ್.ಐ. ಸ್ಕ್ಯಾನ್ ಮಾಡಿಸಿ, ವರದಿಯನ್ನು ತೆಗೆದುಕೊಂಡು ವೈದ್ಯರ ಬಳಿ ಹೋದಾಗ, ಕೇವಲ ಕೆಲವೇ ಸೆಕೆಂಡುಗಳಷ್ಟು ಕಾಲ ಅದನ್ನು ನೋಡಿ ‘ತುಂಬಾ ಏನೂ ತೊಂದರೆ ಇಲ್ಲ. ಕೆಲವು ದಿನ ಕ್ರೇಪ್ ಬ್ಯಾಂಡೇಜ್ ಹಾಕಿರಿ’ ಎಂದು ತಿಳಿಸಿದರು. ನಂತರ ಅದರಂತೆ ಕಾಲು ಸರಿಯಾಯಿತು.
ನನ್ನ ಸಹೋದರನ ದುಃಖ ಏನೆಂದರೆ, ಅಷ್ಟೊಂದು ದುಡ್ಡು ಕೊಟ್ಟಿದ್ದಕ್ಕಾದರೂ ವೈದ್ಯರು ಇನ್ನೂ ಹೆಚ್ಚು ಹೊತ್ತು ಸ್ಕ್ಯಾನ್ ವರದಿ ನೋಡಬೇಕಿತ್ತು ಎಂದು! ಪ್ರಾಯಶಃ ವೈದ್ಯರು ಸ್ವಲ್ಪ ಆಸ್ಥೆ ವಹಿಸಿ ಪರೀಕ್ಷಿಸಿದ್ದರೆ ಅಥವಾ ಕೇವಲ ಎಕ್ಸ್‌ರೇ ಮಾಡಿಸಿದ್ದಿದ್ದರೆ ಗೊತ್ತಾಗುತ್ತಿತ್ತೇನೊ. ಆದರೆ ಮೊದಲ ಬಾರಿಗೇ ದುಬಾರಿ ಎಂ.ಆರ್.ಐ. ಸ್ಕ್ಯಾನ್ ಮಾಡಿಸಿದ್ದರು.
ಹಾಗೆಂದು ಇದು ಸಾರಾಸಗಟಾಗಿ ಎಲ್ಲಾ ವೈದ್ಯರ ವಿರುದ್ಧದ ದೂರಲ್ಲ. ಕೇವಲ ಕೆಲವು ವೈದ್ಯರಿಂದ ಇಡೀ ವೈದ್ಯ ಸಮುದಾಯವನ್ನು ಪ್ರಶ್ನೆ ಮಾಡುವಂತಾಗಿದೆ.
ಈಗ್ಗೆ ಕೆಲವು ವರ್ಷಗಳ ಹಿಂದೆ ನಾನು ಶಿವಮೊಗ್ಗದಲ್ಲಿ ವಿದ್ಯಾರ್ಥಿಯಾಗಿ ಹಾಸ್ಟೆಲ್‌ನಲ್ಲಿ ಇದ್ದಾಗ, ಕಾರಣಾಂತರದಿಂದ ಕಾಲಿನ ಬೆರಳಿಗೆ ಏಟು ಮಾಡಿಕೊಂಡು ಅಲ್ಲಿನ ಒಬ್ಬ ಖ್ಯಾತ ಮೂಳೆ ತಜ್ಞರಲ್ಲಿ ಹೋದೆ. ಅವರು ನಿಧಾನವಾಗಿ ಪರೀಕ್ಷಿಸಿ, ಎಕ್ಸ್‌ರೇ ಕೂಡ ಮಾಡಿಸದೆ, ಕೆಲವು ದಿನ ಕ್ರೇಪ್ ಬ್ಯಾಂಡೇಜ್ ಧರಿಸುವಂತೆ ತಿಳಿಸಿ, ವಿದ್ಯಾರ್ಥಿ ಎಂಬ ಕಾರಣಕ್ಕೆ ಕಡಿಮೆ ಶುಲ್ಕ ಪಡೆದು ಕಳುಹಿಸಿದ್ದರು.
ಹಲವು ವೈದ್ಯರು ತಮ್ಮ ಸಲಹಾ ಶುಲ್ಕದ ಜೊತೆಗೆ ಡಯಾಗ್ನಾಸ್ಟಿಕ್ ಲ್ಯಾಬ್‌ನಿಂದ ಕಮಿಷನ್, ಔಷಧದ ಕಮಿಷನ್ ಪಡೆಯುವುದು ಇಂದು ಗುಟ್ಟಾಗೇನೂ ಉಳಿದಿಲ್ಲ. ಹಾಗೆಂದು ಅದು ಕಾನೂನಿಗೆ ವಿರುದ್ಧವಾದುದೂ ಅಲ್ಲ. ಈ ರೀತಿ ವೈದ್ಯರು ಅನವಶ್ಯಕ ಪರೀಕ್ಷೆಗಳನ್ನು ಮಾಡಿಸುವ ಮತ್ತು ಅನವಶ್ಯಕವಾಗಿ ಪ್ರೊಟೀನ್ ಪುಡಿ ಮತ್ತು ವಿಟಮಿನ್ ಮಾತ್ರೆಗಳನ್ನು ರೋಗಿಗಳಿಗೆ ಬರೆದುಕೊಡುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಕೇಳಿದಾಗ ಅವರು ‘ಇದು ಕಾನೂನಿನ ವಿಷಯವಲ್ಲ. ಆದರೆ ನೈತಿಕತೆಯ ವಿಷಯ. ಯಾಕೆಂದರೆ ಯಾವುದೇ ವೈದ್ಯರಿಗೆ ಇಂತಹುದೇ ಪರೀಕ್ಷೆ ಮಾಡಿಸಿ. ಇದೇ, ಇಂತಿಷ್ಟೇ ಔಷಧ ನೀಡಿ ಎಂದು ತಿಳಿಸುವ ಯಾವುದೇ ಕಾನೂನು ಇಲ್ಲ’ ಎಂದರು.
ನಿಜ, ತಮ್ಮ ಶುಲ್ಕ ಮತ್ತು ನೈತಿಕತೆಯ ಪ್ರಶ್ನೆ ಬಂದಾಗ ವೈದ್ಯರೆಲ್ಲರೂ ಕೇಳುವ ಪ್ರಶ್ನೆ ‘ಬೇರಾವುದೇ ವೃತ್ತಿಗೆ ಇರದ ನಿರ್ಬಂಧ ಮತ್ತು ನೈತಿಕತೆ ಕೇವಲ ವೈದ್ಯರಿಗೆ ಯಾಕೆ’ ಎಂದು. ‘ಎಲ್ಲಾ ವೃತ್ತಿಗಳೂ ವಾಣಿಜ್ಯೀಕರಣ ಗೊಂಡಿರುವಾಗ ವೈದ್ಯಕೀಯ ಕ್ಷೇತ್ರ ಮಾತ್ರ ಯಾಕಾಗಬಾರದು’ ಎಂದು. ‘ಅಂತರಾಳ’ದ ಲೇಖನವೊಂದರಲ್ಲಿ ವೈದ್ಯರೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಚಿಕಿತ್ಸೆಯನ್ನು ಹೋಟೆಲ್ ತಿಂಡಿಗೆ ಹೋಲಿಸಿ ‘₹ 5ಕ್ಕೂ ಇಡ್ಲಿ ಸಿಗುತ್ತೆ, ₹ 50ಕ್ಕೂ ಸಿಗುತ್ತೆ ಮತ್ತು ₹ 500ಕ್ಕೂ ಸಿಗುತ್ತೆ. ರೋಗಿ ಯಾವ ಇಡ್ಲಿಯನ್ನಾದರೂ ತಿನ್ನಬಹುದು’ ಎಂದು ಹೇಳಿದ್ದಾರೆ.
ಹೋಟೆಲ್ ತಿಂಡಿಯನ್ನಾದರೆ ವ್ಯಕ್ತಿ ತನ್ನ ಆಸಕ್ತಿ, ಜೇಬಿನ ಶಕ್ತಿಗನುಗುಣವಾಗಿ ತನಗಿಷ್ಟ ಬಂದ ಹೋಟೆಲ್‌ನಲ್ಲಿ ತಿನ್ನಬಹುದು. ಅಲ್ಲಿ ಯಾವುದೇ ಒತ್ತಡವಾಗಲಿ ಅನಿವಾರ್ಯತೆಯಾಗಲಿ ಇರುವುದಿಲ್ಲ. ಆದರೆ ರೋಗಿಯ ಸ್ಥಿತಿ ಹಾಗಲ್ಲ. ಅವನೇ ಗ್ರಾಹಕನಾಗಿ ಅವನೇ ಹಣ ಕಟ್ಟಿದರೂ ಅವನಿಗೇನು ಬೇಕೋ (ತಿನ್ನಬೇಕೋ?) ಅದನ್ನು ವೈದ್ಯರೇ ನಿರ್ಧರಿಸುತ್ತಾರೆ. ಆದರೆ ಇಲ್ಲಿನ ಮೂಲಭೂತ ಪ್ರಶ್ನೆ ತಿಂಡಿಯ ದರವಲ್ಲ, ಅನಿವಾರ್ಯವಾಗಿ ₹ 500ರ ಇಡ್ಲಿ ತಿನ್ನಬೇಕೆಂದು ಕಷ್ಟಪಟ್ಟು ಹಣ ಹೊಂದಿಸಿಕೊಂಡು ಹೋದಾಗ, ಅವಶ್ಯಕತೆ ಇಲ್ಲದ ₹ 1 ಸಾವಿರದ ಪೂರಿಯನ್ನೋ ಅಥವಾ ₹ 2 ಸಾವಿರದ ಮಸಾಲೆ ದೋಸೆಯನ್ನೋ ತಿನ್ನುವಂತೆ ಮಾಡಿದರೆ ಹೇಗೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.