ADVERTISEMENT

ಗುರುವ ಕೊರಗ ಕರಾವಳಿಯ ನಿಜ ಮಾದರಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ಗುರುವ ಕೊರಗ
ಗುರುವ ಕೊರಗ   

ನಿರೂಪಣೆ: ಕೋಡಿಬೆಟ್ಟು ರಾಜಲಕ್ಷ್ಮಿ, ಗಣೇಶ್‌ ಬಾರ್ಕೂರು

ನಮ್ಮನ್ನು ಯಾರೂ ಮುಟ್ಟಬಾರದು ಅಂತ ಹಿಂದೆ ಹೇಳುತ್ತಿದ್ದರು. ಮುಟ್ಟಿದರೆ ಬೆಚ್ಚಿ ಬಿದ್ದ ಹಾಗೆ ದೂರ ಹೋಗಿ, ಸ್ನಾನ ಮಾಡುತ್ತಿದ್ದರು. ಈಗ ಎಲ್ಲರೂ ಎಲ್ಲರನ್ನೂ ಮುಟ್ಟುತ್ತಾರೆ. ಮುಟ್ಟಿದರೆ ಏನೂ ಆಗುವುದಿಲ್ಲ. ಅದು ಸುಮ್ಮನೇ ಮನುಷ್ಯನ ಸಂಕಲ್ಪ (ಸಂಕಲಪ್ಪು)ದಲ್ಲಿರುವುದು. ಬೇಕಾದರೆ ನೋಡಿ, ಯಾರನ್ನಾದರೂ ಮುಟ್ಟಿದರೆ ಕಲೆಯಾಗುತ್ತದೆಯೇ?

ಮೊನ್ನೆ ನಮ್ಮೂರ ದೇವಸ್ಥಾನದ ಹೊರಗೆ ನಿಂತು ಕೈ ಮುಗಿಯುತ್ತಿದ್ದೆ. ಅಲ್ಲಿನ ಶೆಟ್ಟರು ನನ್ನನ್ನು ‘ದೇವಸ್ಥಾನದೊಳಗೆ ಬಾರ ಗುರುವ’ ಅಂತ ಕರೆದರು. ಅಷ್ಟಮಂಗಲ ಪ್ರಶ್ನೆಗೆ ಅಂತ ಒಬ್ರು ಭಟ್ರು ಬಂದಿದ್ದರು. ಅವರೂ ನನ್ನನ್ನು ಒಳಗೆ ಕರೆದರು. ನಾನು ಒಳಗೆ ಹೋಗಲೇ ಇಲ್ಲ. ‘ನನಗೆ ಇಲ್ಲಿಯೇ ದೇವರು ಕಾಣಿಸುತ್ತಿದ್ದಾರೆ’ ಅಂತ ಹೇಳಿ ಕೈ ಮುಗಿದೆ. ಭಟ್ರಿಗೆ ಸನ್ಮಾನದ ಸಂದರ್ಭದಲ್ಲಿ ಹಾಕಿದ್ದ ಶಾಲನ್ನು ನನಗೆ ಹೊದೆಸಿ, ಹಣವನ್ನು ಕೈಗಿತ್ತು ಹೋದರು. ಹಾಗಂತ ನಾನು ದೇವಸ್ಥಾನಕ್ಕೆ ಹೋಗಿಯೇ ಇಲ್ಲವೆಂದಲ್ಲ. ಧರ್ಮಸ್ಥಳ, ಕಟೀಲು, ಮೂಲ್ಕಿ ದೇವಸ್ಥಾನಕ್ಕೆ ಹೋಗಿದ್ದೇನೆ.

ADVERTISEMENT

ನಮ್ಮಲ್ಲಿ ಮದುವೆ ದಿಬ್ಬಣ ಹೊರಡುವಾಗ ‘ಗುರಿಕಾರ‍್ರು’ ದೈವಕ್ಕೆ ಪ್ರಾರ್ಥನೆ ಮಾಡುವುದನ್ನು ಕೇಳಿದ್ದೇನೆ. ‘ಅಂಗಳಕ್ಕೆ ಬೆನ್ನು ತೋರಿ ಹೋಗುವ ನಮ್ಮನ್ನು ಮತ್ತೆ ಅಂಗಳಕ್ಕೆ ಹೊಟ್ಟೆ ತೋರಿ ಬರುವಂತೆ ಮಾಡುವ ಜವಾಬ್ದಾರಿ ನಿಂದು ದೈವವೇ’ ಎಂದು ಅವರು ಹೇಳುವ ಸಾಲು ನೆನಪಿದೆ. ಹಿಂದೆಲ್ಲ ನಮ್ಮಲ್ಲಿ ತುಳಸಿಕಟ್ಟೆಯೂ ಇರಲಿಲ್ಲ. ಈಗ ತುಳಸಿಕಟ್ಟೆ ಮಾಡಿದ್ದೇವೆ. ಶನಿವಾರ ಅದಕ್ಕೊಂದು ಚೊಂಬು ನೀರು ಹಾಕುತ್ತೇನೆ. ಮತ್ತೆ ದೇವರೆಂದರೆ ‘ಕಾಪಾಡುವವರು’ ಎಂದಷ್ಟೆ ಗೊತ್ತು. ಎಲ್ಲಿ ನಿಂತರೂ ಕಾಣಿಸುತ್ತಾರೆ ಅವರು.

ಚಿಕ್ಕಂದಿನಲ್ಲಿ, ಯೌವನದ ದಿನಗಳಲ್ಲಿ ನಾನು ಹೆಚ್ಚು ತಿರುಗಾಟ ಮಾಡಿದ್ದಿಲ್ಲ. ನಾವು ಶೆಟ್ಟರ ಮನೆಯಲ್ಲಿ ಒಕ್ಕಲುತನಕ್ಕೆ ಇದ್ದದ್ದು. ಬಹಳ ವರ್ಷ ಧಣಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಅವರೂ ನನ್ನ ಮುಟ್ಟುತ್ತಿರಲಿಲ್ಲ. ಹಾಗಂತ ನನಗೆ ಎಂದೂ ಹೊಡೆದಿಲ್ಲ. ನಾನು ಇಷ್ಟೆತ್ತರ ಬಹಳ ಸಮರ್ಥವಾಗಿದ್ದೆ. ಧಣಿಗಳ ಮನೆಯ ಏಳು ಒಕ್ಕಲಿನ ಕುಟುಂಬದವರನ್ನು ಸುಧಾರಿಸುತ್ತಿದ್ದೆ.

ಕೆಲಸದಲ್ಲಿ ಇರುವ ಖುಷಿ ಮತ್ಯಾವುದರಲ್ಲಿ ಉಂಟು? ನೆಟ್ಟಿಗೆ ಮುನ್ನ ಗದ್ದೆಯ ಬದುಗಳನ್ನು ಕೆತ್ತಿ, ಮತ್ತೆ ಅದಕ್ಕೆ ಮಣ್ಣು ಮೆತ್ತುವ ಕೆಲಸ ಪ್ರತಿ ಸಾರಿಯೂ ನಡೆಯಬೇಕಲ್ಲ. ನಾನು ಭತ್ತದ ಹೊಟ್ಟನ್ನು ಗದ್ದೆಯಂಚಿಗೆ ಚೆಲ್ಲಿಬಿಡುತ್ತಿದ್ದೆ. ಅದು ಭೂಮಿಯ ಮಣ್ಣು ಮತ್ತು ಮೆತ್ತಿದ ಮಣ್ಣಿನ ನಡುವೆ ಸೇರಿಕೊಳ್ಳುತ್ತಿತ್ತು. ಹಾಗಾಗಿ ಮುಂದಿನ ಬೆಳೆಯಲ್ಲಿ ನಾನೇ ಮಣ್ಣೆಳೆಯುವಾಗ ಅದು ದೋಸೆಯಂತೆ ಹಾರೆಗೆ ಚೆನ್ನಾಗಿ ಸಿಕ್ಕುತ್ತಿತ್ತು. ಸರಸರನೆ ಕೆಲಸ ಮುಗಿಯುವಾಗ ಖುಷಿಯಾಗುತ್ತಿತ್ತು. ಕೆಲಸದ ಆ ದಿನಗಳು ಭಾರೀ ಚೆನ್ನಾಗಿದ್ದವು. ಆದರೂ ಆ ದಿನಗಳಲ್ಲಿ ಶೆಟ್ಟರ ಮನೆಯ ಮಕ್ಕಳು ಶಾಲೆಗೆ ಹೋಗುವಾಗ ನನಗೂ ಆಸೆಯಾಗುತ್ತಿತ್ತು. ‘ನಾನೂ ಶಾಲೆಗೆ ಹೋಗುತ್ತೇನೆ’ ಅಂತ ಶೆಟ್ಟರ ಹತ್ತಿರ ಧೈರ್ಯಮಾಡಿ ಹೇಳಿದ್ದೆ. ಅವರು ಪ್ರೀತಿಯಿಂದಲೇ ತಿಳಿಹೇಳಿದ್ದು ನೆನಪಿದೆ. ‘ನೋಡು ಗುರುವ, ನೀನು ಶಾಲೆಗೆ ಹೋದರೆ ಹಟ್ಟಿ ತುಂಬ ಇರುವ ದನಕರುಗಳನ್ನು ಯಾರು ನೋಡಿಕೊಳ್ಳುವುದು. ಈ ಕೆಲಸವೆಲ್ಲ ಬೇರೆಯವರಿಂದ ನಿಭಾಯಿಸಲಿಕ್ಕೆ ಸಾಧ್ಯವಾ? ನಿನ್ನನ್ನು ಶಾಲೆಗೆ ಕಳಿಸಿದರೆ ನಾನು ಈ ಕೆಲಸ ಎಲ್ಲ ಹೇಗೆ ಸುಧಾರಿಸಲಿ?’

ಪ್ರಾಯಕಾಲದಲ್ಲಿ ನಮ್ಮದೇ ಆದ ‘ಕೊಟ್ಟ’ (ಮನೆ) ಕಟ್ಟಿಕೊಳ್ಳಬೇಕು ಅಂತ ಆಸೆ ಆಗುತ್ತದೆ. ಎಷ್ಟೇ ಕೆಲಸ ಮಾಡಿದರೂ ಕೇಳಿದರೂ ಧಣಿಗಳು ನನಗೆ ಜಾಗ ಕೊಡುವ ಮನಸ್ಸು ಮಾಡಲೇ ಇಲ್ಲ. ಒಕ್ಕಲಿಗೆ ಇರುವುದು ಎಂದರೆ ಅವರ ಜಾಗದೊಳಗೇ ಕೆಲಸ ಮಾಡುವುದು. ಬೇರೆಲ್ಲೂ ಹೋಗಲಿಕ್ಕಿಲ್ಲ. ಈಗ ಅದಕ್ಕೆ ಜೀತ ಅಂತ ಹೇಳುತ್ತಾರೆ. ಸಂಜೆಗೆ ಒಂದು ಸೇರು ಅಕ್ಕಿ ಕೊಡುತ್ತಿದ್ದರು. ನಾನು ಧಣಿಗಳ ಬಳಿ ಜಾಗ ಕೇಳಿ ಕೇಳಿ ಬೇಜಾರಾಗಿ ಒಂದಿನ ತುಸು ದೂರದ ಸರ್ಕಾರ ಜಾಗದಲ್ಲಿ ಎರಡು ಹಲಸಿನ ಗಿಡಗಳನ್ನು ನೆಟ್ಟು ಬಂದೆ. ಮದುವೆಯಾಗಿ ಕೆಲಸಮಯದಲ್ಲಿ ಯಾವುದೋ ಮನಸ್ತಾಪದ ಸಂದರ್ಭದಲ್ಲಿ ಧಣಿಗಳ ಜಾಗದಿಂದ ಹೊರಬಂದು, ಅದೇ ಎರಡು ಹಲಸಿನ ಮರದ ಬಳಿ ಕೊಟ್ಟ ಕಟ್ಟಿಕೊಂಡೆ. ಹೊರಬಂದ ಮೇಲೆ ಬೇರೆ ಕಡೆಯೂ ಕೆಲಸಕ್ಕೆ ಹೋಗಬಹುದಲ್ಲವಾ...

ನಮ್ಮ ಜನಾಂಗದಲ್ಲಿ ಹೊಟ್ಟೆಗಿಲ್ಲದೆ ನೀರು ಕುಡಿದು ದಿನ ಕಳೆದವರೂ ಇದ್ದಾರೆ. ದೇವರ ದಯೆಯಿಂದ ನನಗೆ ಹಾಗೆಂದೂ ಆಗಲಿಲ್ಲ. ಚಿಕ್ಕಂದಿನಲ್ಲಿ ಧಣಿಗಳ ಮನೆಯಲ್ಲಿ ಅವರ ಅಕ್ಕ ಹಿರಿಯ ಹೆಂಗಸೊಬ್ಬರು ಇದ್ದರು. ಅವರು ಬಟ್ಟಲು ತುಂಬ ತಂಗಳನ್ನ ಮತ್ತು ಮೀನು ಕೊಡುತ್ತಿದ್ದರು. ಸತ್ತ ಎಮ್ಮೆ, ದನವನ್ನು ತಂದು ನಾವು ಹಂಚಿಕೊಳ್ಳುತ್ತಿದ್ದೆವು. ಮತ್ತೂ ಉಳಿದರೆ ಮಳೆಗಾಲಕ್ಕೆ ಎತ್ತಿಡುತ್ತಿದ್ದೆವು. ಮಾಂಸವನ್ನು ಚೆನ್ನಾಗಿ ಒಣಗಿಸಿ, ಅದನ್ನು ಮಣ್ಣಿನ ಪಾತ್ರೆಯಲ್ಲಿ ತುಂಬಿಸಿ, ಗೆರಟೆ ಮುಚ್ಚಿ ಅದರ ಸುತ್ತ ಸೆಗಣಿ ಲೇಪಿಸುತ್ತಿದ್ದೆವು. ಸೆಗಣಿಯು ಒಣಗಿದ ಬಳಿಕ ಪಾತ್ರೆಯನ್ನು ಅಡುಗೆ ಮನೆಯಲ್ಲಿ ನೇತು ಹಾಕುತ್ತಿದ್ದೆವು. ಭೀಕರ ಮಳೆಗಾಲದಲ್ಲಿ ಎಲ್ಲಿಯೂ ಆಹಾರ ಸಿಗದೇ ಇದ್ದಾಗ ಪಾತ್ರೆಯನ್ನು ಇಳಿಸುತ್ತಿದ್ದೆವು. ಆದರೆ ಧಣಿಗಳ ಮನೆಯಲ್ಲಿ ಅಥವಾ ಊರಿನ ಯಾರದೇ ಮನೆಯಲ್ಲಿ ಅವರ ಪ್ರೀತಿಯ ದನ ಸತ್ತರೆ ನಮಗೆ ಕೊಡುತ್ತಿರಲಿಲ್ಲ. ಅದನ್ನು ಅಕ್ಕರೆಯಿಂದ ದಫನು ಮಾಡುತ್ತಿದ್ದರು. ಜಬ್ಬು ಜಡ್ಕ್‌ ಹಿಡಿದ ದನ– ಎಮ್ಮೆ ಕೋಣ ಸತ್ತರೆ ಮಾತ್ರ ಕೊಡುತ್ತಿದ್ದರು. ನನಗೆ ನಿಜವಾಗಿಯೂ ಆಮೆ ಮತ್ತು ದನದ ಮಾಂಸ ಇಷ್ಟವೆನಿಸುತ್ತಿತ್ತು.‌

ಯಾರಾದರೂ ಡೋಲು ಮಾಡಲು ಹೇಳಿದರೆ ನಮಗೊಂದು ಕೆಲಸ ಸಿಕ್ಕಿದ ಹಾಗೆ. ದನದ ಅಥವಾ ಎತ್ತಿನ ಚರ್ಮವನ್ನು ಗೂಟಗಳಿಗೆ ಬಿಗಿದು ಒಣಗಿಸುತ್ತಿದ್ದೆವು. ಒಂದು ದನದ ಚರ್ಮ ಒಣಗಲು ಸುಮಾರು 50 ಗೂಟಗಳನ್ನು ಬಡಿದು ಕಟ್ಟಬೇಕಾಗುತ್ತದೆ. ಅತ್ತಲಿಂದ ಹೊನ್ನೆ ಮರದ ಕಾಂಡವನ್ನು ಟೊಳ್ಳು ಮಾಡಿ, ಬಟ್ಟೆಯಂತಹ ಈ ಚರ್ಮವನ್ನು ಅದರ ಸುತ್ತ ಬಿಗಿಯಬೇಕು. ಹಿಂದೆಲ್ಲ ಚರ್ಮವನ್ನು ಸೀಳಿ ಮಾಡಿದ ಹಗ್ಗವನ್ನೇ ಬಳಸಿ ಬಿಗಿಯುತ್ತಿದ್ದೆವು. ಈಗ ಸಂಗೀಸು ಬಳಸ್ತೇವೆ. ಎಡ ಭಾಗಕ್ಕೆ ಎಮ್ಮೆ ಕರುವಿನ ಚರ್ಮವಾದರೆ ಒಳ್ಳೆಯ ಶಬ್ದ ಬರುತ್ತದೆ. ಬಲ ಬದಿಯದ್ದಕ್ಕೆ ದೊಡ್ಡ ದನದ ಅಥವಾ ಎಮ್ಮೆಯ ಚರ್ಮ ಬಳಸಬಹುದು. ದಪ್ಪವಾದ ಚರ್ಮವನ್ನು ಉಜ್ಜಿ ನಯ ಮಾಡಿದರೂ ಒಳ್ಳೆಯ ಶಬ್ದ ಬರುತ್ತದೆ. ನಾನು ಮಾಡಿದ ಡೋಲಿನ ಶಬ್ದವನ್ನು ಕಂಬಳವೊಂದರಲ್ಲಿ ಕೇಳಿದ ಶೆಟ್ಟರೊಬ್ಬರು ಹುಡುಕಿಕೊಂಡು ಬಂದಿದ್ದರು. ‘ಭಾರೀ ಒಳ್ಳೆಯ ಶಬ್ದ ಬರುವ ಡೋಲು ಮಾಡಿದ್ದಿ. ಅಂತದ್ದೇ ನಮಗೂ ಒಂದು ಬೇಕು’ ಎಂದಿದ್ದರು. ನಾನು ಸಮಾರು 50 ಡೋಲು ಮಾಡಿರಬಹುದೇನೋ. ಯಾರು ಲೆಕ್ಕವಿಟ್ಟವರು. ಇತ್ತೀಚೆಗಿನ ವರ್ಷಗಳಲ್ಲೇ 15 ಡೋಲು ಮಾಡಿದ ನೆಂಪುಂಟು.

ಡೋಲು ಬಾರಿಸುವುದು ನನಗೆ ಖುಷಿಯ ಸಂಗತಿಯೇ. ಆದರೆ ಈಗ ಕೊಳಲು ಊದುವುದಕ್ಕೆ ಆಗುವುದಿಲ್ಲ. ಕೆಲವು ಹಲ್ಲುಗಳು ಮುರಿದು ಬಿದ್ದಿವೆ. ಕೊಳಲು ತುಟಿಗಿಟ್ಟುಕೊಂಡು ಎರಡು ಬೆರಳು ಮುಚ್ಚಿ, ಮತ್ತೆರಡು ಬೆರಳು ತೆರೆದು ನುಡಿಸುವಾಗ ಲಾಯಕ್ಕೆನಿಸುತ್ತದೆ. ಎಲ್ಲವೂ ಮರೆತ ಹಾಗೆ ಅನಿಸುತ್ತದೆ. ಚಿಕ್ಕಂದಿನಲ್ಲಿ ಕಾಡಿನ ಹಕ್ಕಿಗಳನ್ನು ಅನುಕರಿಸಿ ನುಡಿಸಿದ್ದಿದೆ. ಕಾಡಿನ ಧ್ವನಿಗಳು, ಹುಲಿಯ ವಾಸನೆ, ನಾಯಿ ಬೆಕ್ಕುಗಳು ಎಲ್ಲೋ ಮಲಗಿದ ವಾಸನೆಯ, ಪೊದೆಗಳಲ್ಲಿ ಅಡಗಿದ ಪ್ರಾಣಿಯ ಅಜನೆಗೆ ತಕ್ಕಂತೆ ಹೆಜ್ಜೆ ಇಡಬೇಕಾದ ಎಚ್ಚರ, ದೂರದಿಂದ ಕೇಳುವ ಸದ್ದನ್ನು ಕೇಳಿ ಕಾಡನ್ನು ಅಂದಾಜು ಮಾಡುವುದು... ಎಲ್ಲ ನೆಂಪಾಗುತ್ತದೆ ನನಗೆ. ನಮ್ಮ ಭಾಷೆ ಗೊತ್ತಿರುವವರೇ ಈಗ ಕಡಿಮೆಯಾಗಿದ್ದಾರೆ. ನೆಂಪುಗಳನ್ನು ಹಂಚಿಕೊಳ್ಳುವುದು ಯಾರ ಬಳಿ.

ನೆಂಪುಗಳು ಆಗಾಗ ಕೈ ಕೊಡುತ್ತವೆ. ಬಾಲ್ಯದಲ್ಲಿ ಹಲಸಿನ ಮರದಿಂದ ದೊಪ್ಪನೆ ಬಿದ್ದ ನೆಂಪೊಂದು ಉಳಿದಿದೆ. ಬೀಳುವಾಗ ನೆಲಕ್ಕೆ ಊರಿದ್ದರಿಂದ ಬಲಗೈ ಮುರಿದಿತ್ತು. ನಾಟಿ ವೈದ್ಯರಾದ ನಲಿಕೆ ಜನಾಂಗದ ಹಿರಿಯರೊಬ್ಬರು ಮದ್ದು ಕೊಟ್ಟಿದ್ದರು. ಕೈಗೆ ಬಿದಿರಿನ ಸಲಕೆಗಳನ್ನು ಕಟ್ಟಿ ಚೆನ್ನಾಗಿ ಬಿಗಿದಿದ್ದರು. ಅದರ ನೋವು ತಾಳಲಾರದೆ ನಾನು ಅದನ್ನು ತುಸು ಸಡಿಲ ಮಾಡಿಬಿಟ್ಟೆ. ಹಾಗಾಗಿ ಈ ಬಲಗೈ ತುಸುವೇ ಓರೆಯಾಗಿಬಿಟ್ಟಿದೆ.

ಕಾಡಿನೊಳೆಗೆ ಮನಸೋ ಇಚ್ಛೆ ಸುತ್ತಾಟ, ಇಬ್ಬರು ತಮ್ಮಂದಿರು, ಒಬ್ಬಳು ತಂಗಿಯೊಡನೆ ಮನಸ್ಸು ತೃಪ್ತಿಯಾಗುವವರೆಗೆ ಆಟ, ಹಣ್ಣು ಕಾಯಿಗಳನ್ನು ಕೊಯ್ದು ತಿಂದಿದ್ದು- ಎಲ್ಲವೂ ಸ್ಪಷ್ಟ ನೆನಪಿದೆ. ಹಾಂ. ನಾನು ಮದುವೆಗೆ ಹೆಣ್ಣು ಹುಡುಕುತ್ತಾ ನಡೆದುಕೊಂಡೇ ಅಲೆವೂರು ಎಂಬಲ್ಲಿಗೆ ಹೋದದ್ದು ನೆಂಪಿದೆ. ಅವಳ ಹೆಸರು ಕರ್ಗಿ. 15 ದಿನ ಕಳೆದು ಮದುವೆಯಾಯಿತು. ನಮ್ಮ ಸಂಪ್ರದಾಯದಲ್ಲಿ ಮದುವೆ ನಡೆಯುವುದು ತೆಂಗಿನ ಮರದ ಬುಡದಲ್ಲಿ. ಹೆಣ್ಣು ಗಂಡಿನ ಕೈ ಮೇಲೆ ಕೈ ಇಟ್ಟು ಅಪ್ಪ ಮತ್ತು ಅಮ್ಮ ಧಾರೆ ಎರೆಯುವುದು ಕ್ರಮ. ಈ ಧಾರೆನೀರು ಎಲೆಯೊಂದರ ಮೇಲೆ ಹರಿದು ಅದು ತೆಂಗಿನ ಮರದ ಬುಡವನ್ನು ಸೇರಬೇಕು. ಅದಾಗಿ ಬಂದು ಕುಳಿತಾಗ ಹಿರಿಯರು ಸೇಸೆ ಹಾಕುತ್ತಿದ್ದರು. ಮದುವೆಗೆ ತರಕಾರಿ ಊಟವಷ್ಟೆ. ಈಗಿನ ಹಾಗೆ ಪಾಯಸ ಮಾಡುವ ಕ್ರಮ ಆಗ ಇರಲಿಲ್ಲ.

ಧಾರೆ ಎರೆಸಿಕೊಂಡು ನನ್ನ ಕೊರತಿಯಾಗಿ ಬಂದ ಕರ್ಗಿ ಐವರು ಮಕ್ಕಳನ್ನು ಕೊಟ್ಟಳು. ಮೊದಲ ಇಬ್ಬರು ಗಂಡುಮಕ್ಕಳು ಚಿಕ್ಕಂದಿನಲ್ಲಿಯೇ ಕಾಯಿಲೆಗೆ ತುತ್ತಾದರು. ಊರಲ್ಲಿ ಡಾಕ್ಟರೇ ಇರಲಿಲ್ಲ. ನಾಟಿ ವೈದ್ಯರೂ ಇರಲಿಲ್ಲ. ಇರುವ ಮೂವರು ಹೆಣ್ಮಕ್ಕಳು ಸಂಸಾರ ಮಾಡಿಕೊಂಡಿದ್ದಾರೆ. ಆದರೆ ಕರ್ಗಿಯೂ ಬೇಗನೆ ಹೊರಟುಹೋದಳು. ಅವಳಿಗೆ ಉಬ್ಬಸ ರೋಗ ಬಂದಿತ್ತು. ಔಷಧಿ ಮಾಡಿದರೂ ಅದೇನೂ ವಾಸಿ ಆಗಲಿಲ್ಲ. ನಮ್ಮದು ಅಳಿಯಕಟ್ಟು. ಹೆಣ್ಣುಹುಟ್ಟಿದರೆ ಸಂತಾನ ವೃದ್ಧಿ ಆದ ಹಾಗೆ. ಹಾಗಾಗಿ ಕೆಲವು ವರ್ಷಗಳ ಬಳಿಕ ಕರ್ಗಿಯ ಮನೆಯವರೇ ಮುಂದೆ ನಿಂತು ನನಗೆ ಮತ್ತೊಂದು ಮದುವೆ ಮಾಡಿಸಿದರು. ಹಾಗೆ ನನ್ನ ಕೊಟ್ಟಕ್ಕೆ ಬಂದ ತುಕ್ರಿಗೆ ಮಕ್ಕಳಾಗಲಿಲ್ಲ. ಅವಳು ತೀರಿಕೊಂಡು ಮೂರು ವರ್ಷವಾಯಿತು. ನನ್ನ ಮೂವರು ಹೆಣ್ಮಕ್ಕಳು ಸಂಸಾರವಂದಿಗರಾಗಿ ಚೆನ್ನಾಗಿದ್ದಾರೆ. ಅದೇ ಖುಷಿ.

ಹಾಂ. ನಮ್ಮಲ್ಲಿ ಹೆಣವನ್ನು ದಫನ ಮಾಡುವುದು. ದಫನ ಮಾಡಿ 45 ದಿನಗಳ ಬಳಿಕವೇ ತಿಥಿಯ ಕ್ರಮ ಮಾಡುವುದು. ಮನುಷ್ಯನ ಎದೆಗೂಡಿನ ಮಾಂಸವು ಮಣ್ಣಲ್ಲಿ ಮಣ್ಣಾಗಲು 45 ದಿನಗಳು ಬೇಕಂತ ಹಿರಿಯರು ನಂಬಿದ್ದಾರೆ. ನನ್ನ ಅಮ್ಮ ತೀರಿಕೊಂಡಾಗ ದಫನ ಮಾಡಲು ಧಣಿಗಳು ಒಪ್ಪಲಿಲ್ಲ. ಹಾಗಾಗಿ ದಹನ ಮಾಡಿದೆವು. ಅಮ್ಮ ದಂಟೆ ಊರಿಕೊಂಡು ಆಚೀಚೆ ಹೋಗುತ್ತಿದ್ದದ್ದು ಈಗಲೂ ನೆನಪುಂಟು ನನಗೆ.

ನನಗೆ ನೂರು ವರ್ಷ ದಾಟಿತಾ? ನನ್ನೊಡನೆ ಇದ್ದವರು ಹಾಗೆ ಹೇಳುತ್ತಾರೆ. ನನ್ನ ಸಮಕಾಲೀನರ ವಯಸ್ಸಿಗೆ ಹೋಲಿಕೆ ಮಾಡಿ ಈ ಲೆಕ್ಕ ಹೇಳುತ್ತಾರೆ. ಆಗಿರಬಹುದೇನೋ!

ಸ್ವಾತಂತ್ರ್ಯ ಬಂದದ್ದು ಗೊತ್ತಾ ಅಂತ ಹಲವರು ಪ್ರಶ್ನೆ ಮಾಡುತ್ತಾರೆ. ಅದೆಲ್ಲಾ ಗೊತ್ತಿಲ್ಲ. ಈ ಸಾರಿ ‘ಬಿಸು’ವಿನಂದು (‘ಅಂಬೇಡ್ಕರ್‌ ಜಯಂತಿ’ಯಂದು) ನನಗೊಂದು ಸನ್ಮಾನವಿದೆ. ಈಗ್ಗೆ ಸುಮಾರು 15 ಸನ್ಮಾನ ಮಾಡಿದ್ದಾರೆ. ದೇವರು ಏನೇನೋ ನಡೆಸುತ್ತಾ ಇದ್ದಾನೆ.

ಚಿತ್ರಗಳು: ಶ್ರೀಲತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.